ಮಂಗಳವಾರ, ಮೇ 18, 2021
30 °C

‘ನಿರ್ನೋಟೀಕರಣ’: ಮುಗಿಯದ ರಾಮಾಯಣ?

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

‘ನಿರ್ನೋಟೀಕರಣ’: ಮುಗಿಯದ ರಾಮಾಯಣ?

ಮೊನ್ನೆ ಪತ್ರಿಕೆಗಳಲ್ಲಿ ಪ್ರಕಟವಾದ ವೆನೆಜುವೆಲಾದ ಫೋಟೊ ಒಂದನ್ನು ನೀವು ನೋಡಿರಬಹುದು. ಜನ ಸೂಪರ್ ಮಾರ್ಕೆಟ್ಟೊಂದಕ್ಕೆ ನುಗ್ಗಿ ತಮ್ಮ ಕೈಲಾದಷ್ಟು ಸಾಮಾನುಗಳನ್ನು ಹಿಡಿದುಕೊಂಡು ವಿಕಟನಗೆ ಬೀರುತ್ತಾ ಬರುತ್ತಿದ್ದರು. ಅದರ ಹಿಂದಿನ ದಿನವಷ್ಟೇ ವೆನೆಜುವೆಲಾದ ಜನ ರಸ್ತೆತಡೆ ಚಳವಳಿ ನಡೆಸಿದ ಫೋಟೊಗಳು ಪ್ರಕಟವಾಗಿದ್ದವು.

ಇಂಡಿಯಾದ ಸುಪ್ರೀಂ ಕೋರ್ಟು ನಮ್ಮಲ್ಲಿ ಡಿಮಾನಿಟೈಸೇಷನ್ ಅಥವಾ ‘ನಿರ್ನೋಟೀಕರಣ’ ಆದ ಕೆಲವೇ ದಿನಗಳಲ್ಲಿ ಹೊಡೆದಾಟ, ಬಡಿದಾಟಗಳಾದಾವು ಎಂದು ಎಚ್ಚರಿಸಿತ್ತು. ಆ ಮಾತು ವೆನೆಜುವೆಲಾದಲ್ಲಿ ನಿಜವಾದಂತಿದೆ. ವೆನೆಜುವೆಲಾ ದಕ್ಷಿಣ ಅಮೆರಿಕಾದಲ್ಲಿರುವ ಪುಟ್ಟ ದೇಶ. ಆ ದೇಶದ ಅಧ್ಯಕ್ಷ ನಿಕೋಲಾಸ್ ಮಾದುರೋ ಇದ್ದಕ್ಕಿದ್ದಂತೆ ಹಳೆಯ ನೂರರ ನೋಟು ರದ್ದುಪಡಿಸಲು ತೀರ್ಮಾನಿಸಿದರು. ಇಂಡಿಯಾದಂತೆ ಅಲ್ಲೂ ಬ್ಯಾಂಕುಗಳ ಎದುರು ‘ಕ್ಯೂ ರಾಜ್ಯ’ ಶುರುವಾಯಿತು. ಹಳೆಯ ನೋಟು ಕೊಟ್ಟು ಹೊಸ ನೋಟು ಪಡೆಯಲು ಕ್ಯೂ ನಿಂತವರಿಗೆ ಹೊಸ ನೋಟಿನ ಬದಲು ವೋಚರ್ ಕೊಡುವುದು ಶುರುವಾಯಿತು. ಜನ ಸಿಟ್ಟಿಗೆದ್ದರು. ಅಧ್ಯಕ್ಷರಿಗೆ ಬಿಕ್ಕಟ್ಟಿನ ಬಿಸಿ ತಗುಲಿತು. ಎಲ್ಲ ದೇಶಗಳ ಅಧಿಕಾರಸ್ಥರಿಗೂ ಇನ್ನೊಂದು ದೇಶದ ಮೇಲೆ ಸುಳ್ಳು ಹೇಳಿ ಬಚಾವಾಗುವುದು ಸುಲಭ ತಾನೆ? ‘ಹೊಸ ನೋಟುಗಳನ್ನು ಹೊತ್ತು ತರುತ್ತಿದ್ದ ನಾಲ್ಕು ವಿಮಾನಗಳು ಅಂತರರಾಷ್ಟ್ರೀಯ ಪಿತೂರಿಯಿಂದಾಗಿ ಬರುವುದು ತಡವಾಗಿದೆ’ ಎಂದು ವೆನೆಜುವೆಲಾದ ಅಧ್ಯಕ್ಷರು ಹೇಳಿದರು. ಅವು ಯಾವ ವಿಮಾನಗಳು? ಎಲ್ಲಿಂದ ಬರುತ್ತಿದ್ದವು? ಅವನ್ನು ತಡೆಯಲು ಪಿತೂರಿ ಮಾಡಿದ ದೇಶಗಳಾವುವು? ಇವೆಲ್ಲ ‘ರಾಷ್ಟ್ರೀಯ ರಹಸ್ಯ’ಗಳಂತೆ! ಆದರೆ ಅಲ್ಲಿನ ದಿಟ್ಟ ಜನ ಇಂಥ ಸರ್ಕಾರಿ ಸುಳ್ಳುಗಳಿಗೆ ಮರುಳಾಗುವವರಲ್ಲ. ಜನರ ಕೋಪ ಕಂಡು ‘ಈಗ ಇರುವ ನೋಟುಗಳೇ ಜನವರಿ ಎರಡನೆಯ ತಾರೀಕಿನವರೆಗೂ ಮುಂದುವರಿಯುತ್ತವೆ’ ಎಂದು ಅಧ್ಯಕ್ಷರು ಘೋಷಿಸಿದ್ದಾರೆ. ಅವನ್ನು ಬ್ಯಾಂಕಿಗೆ ವಾಪಸ್ ಕಟ್ಟಿರುವ ಜನ ಈಗ ಆ ನೋಟುಗಳನ್ನು ತೆಗೆದುಕೊಳ್ಳಲು ಮತ್ತೆ ಕ್ಯೂ ನಿಂತಾಗ, ಆ ಕೋಪ ಎತ್ತ ತಿರುಗುತ್ತದೆಂದು ಹೇಳುವುದು ಕಷ್ಟ.

ಇದನ್ನೆಲ್ಲ ನೋಡುತ್ತಿದ್ದಾಗ, ಇಂಡಿಯಾದಲ್ಲಿ ‘ನಿರ್ನೋಟೀಕರಣ’ ತಂದಿರುವ ಭಯಾನಕ ಗೊಂದಲಕ್ಕೆ ಜನ ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆಂದು ಸರಿಯಾಗಿ ಗ್ರಹಿಸುವ ಕೆಲಸ ನಡೆಯುತ್ತಿಲ್ಲ ಎನ್ನಿಸಿತು. ಇಡೀ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡ ಸರ್ಕಾರಿ ಅರ್ಥಶಾಸ್ತ್ರಜ್ಞರು, ಕಳೆದ ಸಲ ಬಿಜೆಪಿಗೆ ಮತ ಹಾಕಿದ್ದರಿಂದಾಗಿಯೇ ಈ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿರುವವರು ಈಗ ದನಿ, ತಲೆ ತಗ್ಗಿಸಲೇಬೇಕಾಗಿದೆ. ಈಗ ಗೋಡೆಯ ಮೇಲಿನ ಬರಹ ಅವರಿಗೂ ಕಾಣತೊಡಗಿದೆ. ‘ನಿರ್ನೋಟೀಕರಣ’ದ ನಿರ್ಲಜ್ಜ ಸಮರ್ಥನೆ ಎಲ್ಲಿಗೆ ಮುಟ್ಟಿತ್ತೆಂದರೆ, ಜಗತ್ತಿನ ಶ್ರೇಷ್ಠ ಅರ್ಥಶಾಸ್ತ್ರಜ್ಞರಾದ ಹಾಗೂ ನೊಬೆಲ್ ಪ್ರಶಸ್ತಿ ವಿಜೇತರಾದ ಅಮರ್ತ್ಯಸೇನ್ ಹಾಗೂ ಪಾಲ್ ಕ್ರುಗ್ ಮನ್ ಈ ಕುರಿತು ಹೇಳಿದ ವಸ್ತುನಿಷ್ಠ ಮಾತುಗಳನ್ನೂ ಈ ವಾಚಾಳಿಗಳು ಅಬ್ಬರದಲ್ಲಿ ಅಡಗಿಸಲೆತ್ನಿಸಿದ್ದರು.

ಕೆಲವು ದಿನಗಳ ಕೆಳಗೆ ಅಮರ್ತ್ಯ ಸೇನ್ ಹೇಳಿದರು: ‘ನಿರ್ನೋಟೀಕರಣ ಒಂದು ಆರ್ಥಿಕ ವ್ಯವಸ್ಥೆಯ ಬಗೆಗೆ ಜನರ ನಂಬಿಕೆಯನ್ನೇ ನಾಶ ಮಾಡುತ್ತದೆ. ‘ನಾನು ಈ ಪ್ರಾಮಿಸರಿ ನೋಟಿಗೆ ಇಂತಿಷ್ಟು ಹಣ ಕೊಡುವೆನೆಂದು ಪ್ರಾಮಿಸ್ ಮಾಡಿದ್ದೆ; ಆದರೆ ಈಗ ಸರ್ವಾಧಿಕಾರ ಚಲಾಯಿಸಿ, ನಾನು ವಚನ ಪಾಲಿಸುವುದಿಲ್ಲ’ ಎಂದಾಕ್ಷಣ ಜನರ ನಂಬಿಕೆಯ ಬೇರಿಗೇ ಕೊಡಲಿ ಪೆಟ್ಟು ಬೀಳುತ್ತದೆ. ಅತಿಮೌಲ್ಯದ ನೋಟುಗಳು ಆಧುನಿಕ ಆರ್ಥಿಕತೆಗೆ ಒಳ್ಳೆಯದಲ್ಲ’ ಎನ್ನುವ ಪಾಲ್ ಕ್ರುಗ್ ಮನ್, ‘ಅತಿಮೌಲ್ಯದ ನೋಟುಗಳನ್ನು ವಾಪಸ್ ತೆಗೆದುಕೊಂಡ ಇಂಡಿಯಾದಲ್ಲಿ ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ನೋಟನ್ನು ಚಲಾವಣೆಗೆ ತರಲಾಯಿತು. ಇದು ಸರಿಯಾದ ಫಲ ಕೊಡುವುದಿಲ್ಲ’ ಎನ್ನುತ್ತಾರೆ.  ಜಗತ್ತಿನ ಆರ್ಥಿಕ ಚಲನೆಯನ್ನು ಹತ್ತಿರದಿಂದ ಅಧ್ಯಯನ ಮಾಡುತ್ತಿರುವ ಪಾಲ್ ಕ್ರುಗ್ ಮನ್ ಪ್ರಕಾರ ‘ಈ ಡಿಮಾನಿಟೈಸೇಷನ್ ಕಸರತ್ತು ಮೊದಲು ಎಲ್ಲಿತ್ತೋ ಮತ್ತೆ ಅಲ್ಲಿಗೇ ಬಂದು ನಿಲ್ಲುತ್ತದೆ. ಅಂದರೆ ಲೆಕ್ಕಕ್ಕೆಸಿಗದ ಹಣವನ್ನು ಕೂಡಿಡಲು ಜನ ಇನ್ನಿತರ ಮಾರ್ಗಗಳನ್ನು, ಇನ್ನಷ್ಟು ನಾಜೂಕಾದ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾರೆ.’

ಇದೆಲ್ಲದರ ನಡುವೆ, ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ಹೇಳಿದಂತೆ ‘ಪ್ರಾಮಾಣಿಕ ಜನರನ್ನು ಕಳ್ಳರಂತೆ ನೋಡುವ ಈ ಧೋರಣೆ’ ಜನರನ್ನು ನಿಜವಾದ ಆತಂಕಕ್ಕೀಡು ಮಾಡುತ್ತದೆ. ಈ ಅಂಕಣ ಬರೆಯುವ ದಿನ, ಸರ್ಕಾರ ಹಳೆಯ ನೋಟುಗಳನ್ನು ಜಮಾ ಮಾಡಲು ಡಿಸೆಂಬರ್ ಕೊನೆಯವರೆಗೆ ನೀಡಿದ್ದ ಗಡುವಿನಲ್ಲೂ ಚೌಕಾಶಿ ಮಾಡಿ, ‘ಐದು ಸಾವಿರಕ್ಕಿಂತ ಹೆಚ್ಚು ಹಣ ಕಟ್ಟುವಂತಿಲ್ಲ; ಕಟ್ಟಿದರೆ ಸಮಜಾಯಿಷಿ ನೀಡಬೇಕು’ ಎಂಬ ನಿಯಮ ತಂದಿದೆ. ಬ್ಯಾಂಕ್ ನೌಕರರಿಗೆ ತನಿಖಾಧಿಕಾರಿಯ ಹಕ್ಕು ಕೊಡುವ ಈ ಕ್ರಮ ಕುರಿತು ಈಗಾಗಲೇ ಪ್ರಶ್ನೆಗಳೆದ್ದಿವೆ. ಇವೆಲ್ಲ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದರೆ ಅಚ್ಚರಿಯಲ್ಲ.

‘ನಿರ್ನೋಟೀಕರಣ’ದ ಕಾಲದಲ್ಲಿ ಮತ್ತೆಮತ್ತೆ ಬದಲಾಗಿರುವ ನಿಯಮಗಳಿಂದಾಗಿ, ಬ್ಯಾಂಕಿನಲ್ಲಿರುವ ತಮ್ಮ ಹಣವನ್ನು ತಾವೇ ತೆಗೆದುಕೊಳ್ಳಲು ನೂರೆಂಟು ನಿಯಮಾವಳಿಗಳು ಅಡ್ಡಿ ಬರಬಹುದು ಎಂಬ ಆತಂಕದಲ್ಲಿ ಜನ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ನಂಬಿಕೆ ಕಳಕೊಂಡರೆ ಅಚ್ಚರಿ ಇಲ್ಲ. 1990ಕ್ಕಿಂತ ಹಿಂದಿನಿಂದಲೂ ಸಣ್ಣಪುಟ್ಟ ಉದ್ಯೋಗ, ನೌಕರಿ, ವ್ಯಾಪಾರ ಇತ್ಯಾದಿಗಳನ್ನು ಮಾಡುತ್ತಾ ಬಂದ ತಲೆಮಾರು ಅಷ್ಟಿಷ್ಟು ಕೂಡಿಟ್ಟು, ಮಕ್ಕಳನ್ನು ಓದಿಸಿ, ಇಳಿವಯಸ್ಸಿನ ಹೊತ್ತಿಗೆ ಒಂದು ಮನೆ ಕಟ್ಟಿಕೊಂಡು ನೆಮ್ಮದಿ ಕಾಣಲೆತ್ನಿಸಿದ್ದು ಎಲ್ಲರಿಗೂ ಗೊತ್ತಿದೆ. ಸಾಲವೆಂದರೆ ಹೆದರುವ ಈ ಜನ ಸಾಲ ಮಾಡುವ ಬದಲು ಉಳಿಕೆ ಮಾಡಿ, ಖರ್ಚು ಮಾಡುತ್ತಿದ್ದರು.

ಕಳೆದ ಇಪ್ಪತ್ತು ವರ್ಷಗಳಲ್ಲಿ ‘ಅದೆಲ್ಲ ಹಳೆಯ ಮಾಡೆಲ್. ಇರುವುದನ್ನೆಲ್ಲ ಹೂಡಿಕೆ ಮಾಡಿ ಲಾಭ ಪಡೆಯಿರಿ’ ಎಂಬ ಪ್ರಚೋದನೆ ಶುರುವಾಯಿತು. ಅದಕ್ಕೆ ಬಲಿಯಾಗಿ ಹಣ ಕಳಕೊಂಡವರ ಕತೆಯೂ ಎಲ್ಲರಿಗೂ ಗೊತ್ತಿದೆ. ನಾವೆಲ್ಲ ನೋಡಿರುವಂತೆ ಜಾಗತೀಕರಣದ ನವ ಆರ್ಥಿಕತೆ ಕೆಲವು ವರ್ಗಗಳಿಗೆ ಹೆಚ್ಚು ಹಣ ಹರಿಯುವಂತೆ ಮಾಡಿತು; ಆದರೆ ತಮ್ಮ ಜೀವನಮಟ್ಟವನ್ನು ಇದ್ದಕ್ಕಿದ್ದಂತೆ ಮೇಲೇರಿಸಿಕೊಂಡು, ಹಣವನ್ನು ಶರವೇಗದಲ್ಲಿ ಖರ್ಚು ಮಾಡಲು ಪ್ರಚೋದಿಸಿತು; ಅವರ ಕೈಗೆ ಬಂದ ಹಣವೆಲ್ಲ ಮತ್ತೆ ಮಾರುಕಟ್ಟೆಗೆ ಹರಿಯುವಂತೆ ಮಾಡಲಾಯಿತು. ಆದರೆ ಆ ಸಂಭ್ರಮ ಮುಗಿದು, ‘ಹೈರ್ ಆಂಡ್ ಫೈರ್’ ಉದ್ಯೋಗಗಳಿಂದ ಹೊರಬಿದ್ದ ಹುಡುಗ, ಹುಡುಗಿಯರು ತಮ್ಮಲ್ಲಿದ್ದುದನ್ನೆಲ್ಲ ಮಾರಿ ಮಾಯವಾಗುವುದನ್ನೂ ನೋಡತೊಡಗಿದೆವು. ಅವರಲ್ಲನೇಕರಿಗೆ ತಮ್ಮ ಅಪ್ಪ, ಅಮ್ಮಂದಿರು ಹೊಟ್ಟೆಬಟ್ಟೆ ಕಟ್ಟಿ, ನಾಳೆಗೆ ಉಳಿಸಿ, ಕೊನೆಗಾಲದಲ್ಲಿ ಯಾರನ್ನೂ ಬೇಡದೆ ಬದುಕುವ ಮಾದರಿಯಲ್ಲಿದ್ದ ಘನತೆ ಗೋಚರಿಸಲೇ ಇಲ್ಲ. ಈಗ ತಮ್ಮ ಉದ್ಯೋಗಗಳು ಅಸ್ಥಿರವಾಗಿರುವ ಕಾಲದಲ್ಲಿ ಅವರಲ್ಲನೇಕರು ಈ ‘ನಿರ್ನೋಟೀಕರಣ’ ಆರ್ಥಿಕತೆಗೆ ಹೊಸ ಚೈತನ್ಯ ತರುತ್ತದೆ ಎಂದು ಮುಗ್ಧವಾಗಿ ನಂಬಿರಬಹುದು; ಅದಕ್ಕೇ ತಮ್ಮ ಬಿಡುವಿನ ವೇಳೆಯಲ್ಲಿ ಉಚಿತ ಜಾಲತಾಣಗಳಲ್ಲಿ ‘ನಿರ್ನೋಟೀಕರಣ’ದ ಪರವಾಗಿ ಅನುಚಿತ ವಾದಗಳನ್ನು ಪ್ರಕಟಿಸುತ್ತಿರಬಹುದು.

ಆದರೆ ವಾಸ್ತವವಾಗಿ ಎಲ್ಲರನ್ನೂ ವಿಚಿತ್ರ ಆತಂಕ ಮುತ್ತಿದೆ. ಇನ್ನುಮುಂದೆ ಪ್ರಾಮಾಣಿಕರು ತೆರಿಗೆ ಕಟ್ಟಿ ಉಳಿದ ಹಣವನ್ನು ಬ್ಯಾಂಕಿನಲ್ಲಿಡದೆ, ತಮ್ಮಲ್ಲೇ ಇರಿಸಿಕೊಳ್ಳುವ ಸಾಧ್ಯತೆ ಎದ್ದು ಕಾಣುತ್ತಿದೆ. ‘ಕೇಂದ್ರ ನೇರ ತೆರಿಗೆ ಬೋರ್ಡ್’ನ ಮಾಜಿ ಅಧ್ಯಕ್ಷರು ಹೇಳಿದಂತೆ, ‘ಎರಡೂವರೆ ಲಕ್ಷಕ್ಕಿಂತ ಹೆಚ್ಚು ಹಣ ಉಳಿಸಿದ ಪ್ರಾಮಾಣಿಕ ಜನರು ಆತಂಕದಲ್ಲಿದ್ದಾರೆ.’ ಜೊತೆಗೆ, ಕ್ರೆಡಿಟ್-ಡೆಬಿಟ್ ಕಾರ್ಡುಗಳನ್ನು ಎಲ್ಲ ವರ್ಗಗಳೂ ಬಳಸುತ್ತವೆಂದು ಹೇಳಲಾಗದು. ತಾವು ಖರ್ಚು ಮಾಡುವ ಎಲ್ಲ ಹಣವನ್ನೂ ಅಧಿಕೃತ ದಾಖಲೆಯಾಗಿರಿಸುವ ಕಾರ್ಡುಗಳ ಮೂಲಕವೇ ಖರ್ಚು ಮಾಡುವುದನ್ನು ಬಹುತೇಕರು ಒಪ್ಪಲಾರರು. ಒಮ್ಮೆ ಕೈ ಬಿಗಿ ಹಿಡಿದು ಖರ್ಚು ಮಾಡುವ ಜನ ನಾಳೆಗೆ ಉಳಿಸಿಕೊಳ್ಳುವ ಚಿಂತೆಯಲ್ಲಿರುತ್ತಾರೆ; ನಾಳೆ ಹಣ ಬರಲಿದೆ, ನೋಡಿಕೊಳ್ಳೋಣ ಎಂಬ ನಿಶ್ಚಿಂತೆಯಿಂದ ಇರಲಾರರು. ಈಗಾಗಲೇ ಹೋಟೆಲು, ಬಾರುಗಳಲ್ಲಿ ಸಣ್ಣಪುಟ್ಟ ಟಿಪ್ಸ್ ಪಡೆಯುತ್ತಿದ್ದ ಹುಡುಗರು ಗಿರಾಕಿಗಳ ಈ ಕೈ ಹಿಡಿತದ ಬಿಸಿ ಅನುಭವಿಸುತ್ತಿದ್ದರೆ, ಮಾಲೀಕರು ವ್ಯಾಪಾರ ಕಳೆದುಕೊಂಡ ಸಂಕಷ್ಟದಲ್ಲಿದ್ದಾರೆ. ಕಳೆದ ತಿಂಗಳು ರಾಜಾರೋಷವಾಗಿ ಕ್ರೆಡಿಟ್ ಕಾರ್ಡ್ ಉಜ್ಜಿದವರು ಈ ತಿಂಗಳು ಬಿಲ್ ಬಂದ ನಂತರ ಇಕ್ಕಟ್ಟಿನ ಜೀವನಕ್ರಮವನ್ನು ಅಳವಡಿಸಿಕೊಳ್ಳತೊಡಗಿದ್ದಾರೆ. ಅದೆಲ್ಲಕ್ಕಿಂತ ಮುಖ್ಯವಾಗಿ ಮಿತ್ರರೊಬ್ಬರು ಹೇಳಿದಂತೆ, ಭ್ರಷ್ಟಾಚಾರಕ್ಕೆ ಯಾವುದೇ ಕಡಿವಾಣವಿಲ್ಲದ ನಮ್ಮ ದುಷ್ಟ ವ್ಯವಸ್ಥೆಯಲ್ಲಿ ಇನ್ನು ಮುಂದೆ ಕಾನೂನುಪಾಲಕರ ಲಂಚದ ಪ್ರಮಾಣವೂ ಏರುತ್ತಾ ಹೋಗುತ್ತದೆ; ಇದರ ಬಿಸಿಯನ್ನು ಸಾಮಾನ್ಯ ಜನರಾಗಲೇ ಅನುಭವಿಸಲಾರಂಭಿಸಿದ್ದಾರೆ.

ಇಂಥ ಕಾಲದಲ್ಲಿ ‘ನಿಮ್ಮ ಬಿಸಿನೆಸ್‌ಗೆ ಹೊಡೆತ ಬಿದ್ದಿರಲಿಕ್ಕಿಲ್ಲ ಅಲ್ಲವೇ?’ ಎಂದು ಹೇರ್ ಕಟ್ ಮಾಡುವ ಮಿತ್ರನನ್ನು ಕೇಳಿದೆ. ‘ಎಲ್ಲಿ ಸಾರ್? ನಮ್ಮ ಬಿಸಿನೆಸ್ಸೂ ಡಲ್ಲೂ’ ಎಂದ. ‘ಅಂದರೆ, ಇಬ್ಬರು ದಿನವಿಡೀ ಕೆಲಸ ಮಾಡುವ ನಿನ್ನ ಸಲೂನಿನಲ್ಲಿ ತಿಂಗಳಿಗೆ ನಲವತ್ತು ಸಾವಿರ ಸಂಪಾದನೆ ಎಂದಿಟ್ಟುಕೊಂಡರೆ, ಅದು ಮೂವತ್ತಕ್ಕೆ ಇಳಿದಿದೆಯೆ?’ ಎಂದೆ. ‘ಇನ್ನೂ ಕೆಳಗಿಳಿದಿದೆ’ ಎಂದ. ‘ಯಾಕೆ?’ ಎಂದೆ. ‘ಊರಿಗೆ ಜನ ಹೋಗೋದು-ಬರೋದು ಕಡಿಮೆಯಾದ ಹಾಗೆಲ್ಲ ನಮಗೂ ಹೊಡೆತ ಬೀಳುತ್ತೆ’ ಎಂದ. ಅವನ ಕಣ್ಣೆದುರಿಗೇ ನೂರಾರು ಕಟ್ಟಡ ಕಾರ್ಮಿಕರು ಬೆಂಗಳೂರು ಬಿಟ್ಟು ಹೋಗಿದ್ದರು. ಕ್ಷೌರಿಕರಿಗೇ ಇರುವ ವಿಶಿಷ್ಟ ಗುಣದಿಂದಾಗಿ ಜನ ತಮ್ಮ ಕ್ಷೌರಿಕರನ್ನು ಬದಲಾಯಿಸುವುದು ಕಡಿಮೆ. ಆ ಗುಣದಿಂದಾಗಿ ಅವನು ಸಂಪಾದಿಸಿದ್ದ ಹೊಸ ಗಿರಾಕಿಗಳಾದ ಕಟ್ಟಡ ಕಾರ್ಮಿಕರು ಊರು ಬಿಟ್ಟು ಹೋಗಿದ್ದರು. ಈ ಅಂಕಣ ಬರೆಯುವ ದಿನ ಕಾಂಗ್ರೆಸ್ಸಿನ ಅಜಯ್ ಮಾಕನ್ ದೆಹಲಿಯಲ್ಲಿ 48.63 ಲಕ್ಷ ಕಾರ್ಮಿಕರು ವಾಪಸ್ ವಲಸೆ ಹೋಗಿದ್ದಾರೆಂಬ ಅಂಕಿಅಂಶ ನೀಡಿದ್ದಾರೆ. ತಮ್ಮ ಊರುಗಳಲ್ಲಿ ಜೀವನೋಪಾಯವಿಲ್ಲದೆ, ಮಡದಿ ಮಕ್ಕಳನ್ನು ಕಟ್ಟಿಕೊಂಡು ನಗರಗಳಲ್ಲಿ ಹೇಗೋ ಬದುಕುತ್ತಿದ್ದ ಕಾರ್ಮಿಕರು, ಕಟ್ಟಡ ಕಾರ್ಮಿಕರು ಊರಿಗೆ ಹೋಗಿ ಏನು ಮಾಡುತ್ತಾರೆ ಎಂಬ ಒಂದೇ ಅಂಶವನ್ನು ಆಳವಾಗಿ, ಪ್ರಾಮಾಣಿಕವಾಗಿ ಗಮನಿಸಿದರೂ ಸಾಕು, ‘ನಿರ್ನೋಟೀಕರಣ’ದ ಮಾರಕ ಹೊಡೆತ ಎಲ್ಲಿಗೆ, ಯಾರಿಗೆ ಬಿದ್ದಿದೆ ಎಂಬುದು ಗೊತ್ತಾಗುತ್ತದೆ. ಯಾವುದೇ ಬಿಕ್ಕಟ್ಟನ್ನು ಬಡವರ ದೃಷ್ಟಿಯಿಂದ ನೋಡತೊಡಗಿದಾಗ, ಇಡೀ ಹೊರೆ ಯಾರಿಗೆ ಬೀಳುತ್ತದೆ ಎಂಬುದು ಮುಕ್ತವಾಗಿ ಯೋಚಿಸುವವರಿಗೆಲ್ಲ ಹೊಳೆಯುತ್ತದೆ.

‘ನಿರ್ನೋಟೀಕರಣ’ದ ನವ ಜಾನಪದ!: ಹೊಸ 2000 ರೂಪಾಯಿ ನೋಟನ್ನೇ ಜನ ‘ನಿರ್ನೋಟೀಕರಣ’ ಮಾಡಿರುವ ತಮಾಷೆ ಕುರಿತು ಲೇಖಕರೊಬ್ಬರು ಬರೆದಿದ್ದಾರೆ. ದೆಹಲಿಯಲ್ಲಿ ವರ್ತಕನೊಬ್ಬ ತಮ್ಮ ಸಹಾಯಕನಿಗೆ ವಾರದ ಸಂಬಳ ಕೊಡಲು 2000 ರೂಪಾಯಿಯ ನೋಟು ಕೊಟ್ಟರೆ, ಅವನು ‘100 ರೂಪಾಯಿ ನೋಟುಗಳನ್ನೇ ಕೊಡಿ, ಇದು ಮಾತ್ರ ಬೇಡ’ ಎಂದು ಹಟ ಹಿಡಿದನಂತೆ. ಅಷ್ಟು ದೂರ ಯಾಕೆ, ಇಲ್ಲೇ ಕರ್ನಾಟಕದಲ್ಲೇ ‘ಹಳೆಯ ಐನೂರು ನೋಟೇ ಕೊಡಿ, ಹೊಸ 2000ದ ನೋಟು ಬೇಡ’ ಎಂದು ಸಣ್ಣ ವರ್ತಕರು ಹೇಳುತ್ತಿದ್ದುದನ್ನು ನೋಡಿದ್ದೇವೆ. ಅನೇಕರು ಹೊಸ 2000ದ ನೋಟೇ ‘ಪ್ಲಾಸ್ಟಿಕ್ ಮನಿ’ ಎಂದು ತಿಳಿದಿರುವಂತಿದೆ! ಈ ನಡುವೆ ಶಿವಮೊಗ್ಗೆಯಲ್ಲಿ ಸೊಪ್ಪು ಮಾರುವ ಹೆಂಗಸೊಬ್ಬಳು ಹೊಸ ನೋಟನ್ನು ತನ್ನ ರೂಢಿಯಂತೆ ರವಿಕೆಯೊಳಗೆ ಬಟ್ಟೆ ಸುತ್ತಿ ಇಟ್ಟುಕೊಂಡ ತಕ್ಷಣ, ಪಕ್ಕದವಳು ಎಚ್ಚರಿಸಿದಳು: ‘ಅಯ್ಯೋ! ಅಲ್ಲೆಲ್ಲ ಇಟ್ಕೋಬ್ಯಾಡ ತಾಯಿ! ಆ ನೋಟು ಫೋಟೋ ತಗುದು ಅದೆಲ್ಲೆಲ್ಲಿಗೋ ಕಳಿಸುತ್ತಂತೆ!’

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.