ಶುಕ್ರವಾರ, ಮಾರ್ಚ್ 5, 2021
21 °C

‘ಪ್ರಜಾಪ್ರಭುತ್ವ ಹಬ್ಬ'ದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪ್ರಜಾಪ್ರಭುತ್ವ ಹಬ್ಬ'ದ ಸಂಭ್ರಮ

ನಿನ್ನೆ (ಜ. 25) ರಾಷ್ಟ್ರೀಯ ಮತದಾರರ ದಿನವನ್ನು (ಎನ್‌ವಿಡಿ) ಆಚರಿಸಿದ್ದೇವೆ. 2011ರಿಂದ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಈ ಬಾರಿಯದು ಆರನೇ ರಾಷ್ಟ್ರೀಯ ಮತದಾರರ ದಿನಾಚರಣೆ. 18 ತುಂಬಿ ಮತದಾನದ ಅರ್ಹತೆ ಪಡೆದ ಹೊಸ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿ ಪಡೆಯಲು ಅನುವು ಮಾಡಿಕೊಡುವ ದಿನ ಇದು. ಮತದಾರರ ಫೋಟೊ ಗುರುತಿನ ಚೀಟಿಯನ್ನು (Electors Photo Identity Cards - EPIC) ಯುವ ಮತದಾರರಿಗೆ ಸಮಾರಂಭಗಳಲ್ಲಿ ವಿತರಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದು ಈ ದಿನದ ವಿಶೇಷ.‘ಮತದಾತ ಮಹೋತ್ಸವ’ ಎಂಬ ಈ ದಿನಾಚರಣೆಗೆ ಪ್ರೇರಕರಾದ ಚುನಾವಣಾ ಆಯೋಗದ ನಿವೃತ್ತ ಮುಖ್ಯ ಚುನಾವಣಾ ಆಯುಕ್ತ  (ಸಿಇಸಿ) ಎಸ್.ವೈ. ಖುರೇಷಿ ಅವರು ಈ ದಿನವನ್ನು ‘ಪ್ರಜಾಪ್ರಭುತ್ವದ ಹಬ್ಬ’ ಎಂದು ಬಣ್ಣಿಸುತ್ತಾರೆ. ಮತದಾರರ ನೊಂದಾವಣೆಯನ್ನು ಮಾಮೂಲು ಕಾರ್ಯಚಟುವಟಿಕೆಯಾಗಿ  ಚುನಾವಣಾ ಆಯೋಗ ಮೊದಲಿನಿಂದಲೂ ನಡೆಸಿಕೊಂಡು ಬರುತ್ತಲೇ ಇದೆ. ಆದರೆ ಈ ಕಾರ್ಯಕ್ಕೆ ದಿನವೊಂದನ್ನು ನಿಗದಿಪಡಿಸಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ (Systematic Voter’s Education and Electoral Participation (SVEEP) programme) ಚಾಲನೆ ನೀಡಿದ್ದು  ಮುಖ್ಯವಾದದ್ದು.ಮತದಾರರ ದಿನ  ಆಚರಿಸುವುದನ್ನು  ಆರಂಭಿಸಿದ ನಾಲ್ಕು ವರ್ಷಗಳ ನಂತರ 2014ರ ಲೋಕಸಭೆ ಚುನಾವಣೆಯಲ್ಲಿ 2009ರ ಚುನಾವಣೆಯಲ್ಲಿ ಇದ್ದದ್ದಕ್ಕಿಂತ ಸುಮಾರು 12 ಕೋಟಿ ಹೊಸ ಮತದಾರರು ಸೇರ್ಪಡೆಯಾಗಿದ್ದರು ಎಂಬುದು ಮಹತ್ವದ ಬೆಳವಣಿಗೆ. ಏಕೆಂದರೆ ಕಡಿಮೆ ಪ್ರಮಾಣದ ಮತದಾನ ಎಂಬುದು ಪ್ರಜಾಪ್ರಭುತ್ವದ ಅಣಕ. ಮತದಾನದಲ್ಲಿ ಹೆಚ್ಚಿನ ಜನರ ಪಾಲ್ಗೊಳ್ಳುವಿಕೆ ಇಲ್ಲದಿದ್ದಲ್ಲಿ ಪ್ರಜಾಪ್ರಭುತ್ವಕ್ಕೆ ಹೆಚ್ಚು ಅರ್ಥವಿರುವುದಿಲ್ಲ.2010ರ ನಂತರದ  ಎಲ್ಲಾ ಚುನಾವಣೆಗಳೂ ದಾಖಲೆ ಸಂಖ್ಯೆಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ದಾಖಲಿಸುತ್ತಿವೆ ಎಂಬುದು ಸಮಾಧಾನಕರ. ಅದರಲ್ಲೂ 2014ರ ಚುನಾವಣೆ, ಆರು ದಶಕಗಳ ದಾಖಲೆ ಮುರಿದು ಶೇ 66.4 ರಷ್ಟು ಪ್ರಮಾಣದ ಮತದಾನ ದಾಖಲಿಸಿತು. ಕೆಲವು ರಾಜ್ಯಗಳಲ್ಲಿ ಮತದಾನ ಪ್ರಮಾಣ  ಶೇ 80 ದಾಟಿತು. ಅರ್ಧದಷ್ಟು ರಾಜ್ಯಗಳಲ್ಲಿ ಮಹಿಳಾ ಮತದಾರರು ಪುರುಷ ಮತದಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರೆಂಬುದೂ ಮುಖ್ಯ. ಹೀಗಾಗಿ ಮಹಿಳಾ ಮತದಾರರನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡು ಚುನಾವಣೆ ಭರವಸೆಗಳನ್ನು ನೀಡುವುದು ರಾಜಕೀಯ ಪಕ್ಷಗಳಿಗೆ ಮುಖ್ಯವಾಗುತ್ತಿದೆ ಎಂಬುದು ಹೊಸ ಬೆಳವಣಿಗೆ.ಇತ್ತೀಚೆಗೆ ನಡೆದ ಬಿಹಾರದ ವಿಧಾನಸಭಾ ಚುನಾವಣೆಯನ್ನೇ ಗಮನಿಸಿ. ಮತ ಬ್ಯಾಂಕ್ ಆಗಿ ಮಹಿಳೆಯರು ಉದಯವಾಗಿರುವ ಲಕ್ಷಣಗಳು ಈ ಚುನಾವಣೆಯಲ್ಲಿ ಗೋಚರವಾಗುತ್ತವೆ. ಬಿಹಾರದಲ್ಲಿ ಪ್ರತಿ ಚುನಾವಣೆಯಲ್ಲೂ ಮಹಿಳೆಯರ ಪಾತ್ರ ಹೆಚ್ಚಾಗುತ್ತಿದೆ. ಅದು ಬದಲಾಗುತ್ತಿರುವ ವಾಸ್ತವಗಳಿಗೆ ದ್ಯೋತಕ. 2000ದ ಬಿಹಾರ ವಿಧಾನಸಭಾ ಚುನಾವಣೆ ವೇಳೆ ಪುರುಷ ಹಾಗೂ ಮಹಿಳಾ ಮತದಾನದ ಮಧ್ಯದ ಅಂತರ ಶೇ 16.3ರಷ್ಟಿತ್ತು. ಅದೇ ಮೊದಲ ಬಾರಿಗೆ ಕಡಿಮೆಯಾದ ಅಂತರ ಅದು. ಆ ಅಂತರ ಇನ್ನೂ ತಗ್ಗುತ್ತಾ 2010ರ ಬಿಹಾರ ವಿಧಾನಸಭೆ ಹಾಗೂ 2014ರ ಲೋಕಸಭೆ ಚುನಾವಣೆಗಳಲ್ಲಿ ಪುರುಷರಿಗಿಂತ ಮಹಿಳೆಯರ ಮತದಾನ ಪ್ರಮಾಣ ಹೆಚ್ಚಾಗಿತ್ತು. ಇದೇ ಪ್ರವೃತ್ತಿ ನಂತರವೂ ಮುಂದುವರಿದು ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ಪ್ರತಿಫಲಿಸಿತು.ಹೀಗಾಗಿಯೇ, ಮಹಿಳೆಯರ ಮತಶಕ್ತಿಯನ್ನು ಗ್ರಹಿಸಿದ್ದ ನಿತೀಶ್ ಕುಮಾರ್ ಅವರು ಚುನಾವಣಾ ಪ್ರಚಾರ ಸಭೆಗಳಲ್ಲಿ ಮಹಿಳಾ ಮತದಾರರನ್ನು ಓಲೈಸುತ್ತಿದ್ದ ಪರಿಗೆ ಈ ಮಾತುಗಳು ಉದಾಹರಣೆ: ‘ತಾಯಂದಿರೆ ಮತ್ತು ಸೋದರಿಯರೆ, ಚುನಾವಣಾ ದಿನದಂದು ಮನೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೊರಬನ್ನಿ. ಅಂದು ನೀವು ಮಾಡಬೇಕಾದ ಮೊದಲ ಕೆಲಸ ಮತದಾನ ಎಂಬುದನ್ನು ಮರೆಯದಿರಿ. ಅಂದು ಅಡುಗೆ ಕೆಲಸ ನಿಧಾನವಾದರೂ ಪರವಾಗಿಲ್ಲ.  ಮತದಾನ ಮಾಡಿ ಬಂದರಷ್ಟೇ ಕುಟುಂಬದ ಪುರುಷರಿಗೆ ರುಚಿಕಟ್ಟಾದ ಊಟ ನೀಡಿ. ಮತದಾನ ಮಾಡಿರದಿದ್ದಲ್ಲಿ, ಒಂದೇ ಹೊತ್ತಿನ ಊಟ ನೀಡಿ. ಇನ್ನೊಂದು ಹೊತ್ತು ಪ್ರಾಯಶ್ಚಿತ್ತಕ್ಕಾಗಿ ಉಪವಾಸವಿರುವಂತೆ ಮಾಡಿ’.ಲಘು ಧಾಟಿಯ ಈ ಮಾತುಗಳು ಮತದಾರರನ್ನು  ತಲುಪದೇ ಇರುವುದು ಸಾಧ್ಯವೇ ಇರಲಿಲ್ಲ. ಹೀಗಾಗಿ ಶೇ 60ರಷ್ಟು ಮಹಿಳೆಯರು ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದರು. ಇದು ನಿತೀಶರ  ಗೆಲುವಿಗೆ ಸಹಕಾರಿಯೂ ಆಯಿತು. ಇದಕ್ಕೆ ತದ್ವಿರುದ್ಧವಾಗಿ  ಪುರುಷ ಮತದಾನ ಪ್ರಮಾಣ ಶೇ 54 ರಷ್ಟಿತ್ತು ಅಷ್ಟೆ. ಚುನಾವಣೆ ಪ್ರಚಾರದ ವೇಳೆ ಮಹಿಳೆಯರಿಗೆ ನೀಡಿದ್ದ ಪಾನ ನಿಷೇಧ ಹಾಗೂ ಸರ್ಕಾರದ ಎಲ್ಲಾ ವರ್ಗದ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 35ರಷ್ಟು ಮೀಸಲು ನೀಡುವ ಭರವಸೆಯ ಅನುಷ್ಠಾನಕ್ಕೆ ಬಿಹಾರದಲ್ಲಿ ಅಧಿಕಾರ ಸೂತ್ರ ಹಿಡಿದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಈಗ ಮುಂದಾಗಿದೆ. ಎಂದರೆ ಬಿಹಾರದ ಚುನಾವಣಾ ಫಲಿತಾಂಶ, ತನ್ನನ್ನು ತಾನು ಪ್ರತಿಪಾದಿಸಿಕೊಳ್ಳುವ ಮಹಿಳಾ ಮತದಾರಳನ್ನು ಮುನ್ನೆಲೆಗೆ ತಂದಂತಾಗಿದೆ. ಆಕೆಯ ರಾಜಕೀಯ ಆಯ್ಕೆಗಳು ಪುರುಷರ ಆಯ್ಕೆಯನ್ನು ಅವಲಂಬಿಸಬೇಕಾಗಿಲ್ಲ ಎಂಬಂತಹ ವಾಸ್ತವವೂ ಇಲ್ಲಿ ಬಯಲಾಗಿದೆ.ಮಹಿಳೆಯರ ಮತ ಪಡೆದುಕೊಳ್ಳಲು ಮಹಿಳಾ ಕೇಂದ್ರಿತ ಘೋಷಣೆಗಳು ಹೊಸದೇನಲ್ಲ. 2011ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಹಿಳಾ ಮತದಾರರನ್ನೇ ಗುರಿಯಾಗಿಸಿಕೊಂಡು 7000 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರೈಂಡರ್, ಮಿಕ್ಸರ್, ವಾಷಿಂಗ್ ಮೆಷಿನ್, ಸೀರೆ ಇತ್ಯಾದಿ ಉಡುಗೊರೆಗಳನ್ನು ಜಯಲಲಿತಾ ನೇತೃತ್ವದ ಎಐಎಡಿಎಂಕೆ ಘೋಷಿಸಿದ್ದನ್ನು ಮರೆಯುವಂತಿಲ್ಲ. ಆದರೆ ಮಹಿಳೆಯರಿಗೆ ನಿಜವಾದ ಶಕ್ತಿ ತುಂಬುವ ಸಾಂಸ್ಥಿಕ ಬದಲಾವಣೆಗಳಿಗೆ ಇವು ನಾಂದಿಯಾಗುವಂತಹದ್ದಲ್ಲ.ಬಿಹಾರದಲ್ಲಿ ಚುನಾವಣಾ ಪ್ರಚಾರದ ವೇಳೆ ಪಟ್ನಾದಲ್ಲಿ ನಿತೀಶ್ ಕುಮಾರ್ ಮಾತನಾಡುತ್ತಿದ್ದಾಗ ಮದ್ಯದ ಸುಲಭ ಲಭ್ಯತೆಯ ಬಗ್ಗೆ ಮಹಿಳೆಯರು ಗಮನ ಸೆಳೆದಿದ್ದರು. ಇದು  ಮನೆಯ ಶಾಂತಿ ಹಾಗೂ ಆರ್ಥಿಕತೆ ಹಾಳು ಮಾಡುತ್ತಿದೆ ಎಂದು ದೂರಿದ್ದರು. ಆಗ, ಪಾನ ನಿಷೇಧ ಜಾರಿಗೊಳಿಸುವುದಾಗಿ ಮಹಿಳೆಯರಿಗೆ ಭರವಸೆ ನೀಡಿದ ನಿತೀಶ್ ಈಗ ಅದನ್ನು ಜಾರಿಗೊಳಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಮಹಿಳೆಯರಿಗೆ ನೀಡಿದ ಈ ಭರವಸೆಯೂ ನಿತೀಶ್ ಗೆಲುವಿಗೆ ಸಹಕಾರಿಯಾಯಿತು ಎನ್ನುತ್ತವೆ ವಿಶ್ಲೇಷಣೆಗಳು. ಈರುಳ್ಳಿ ಬೆಲೆ ಹೆಚ್ಚಳದಿಂದಾಗಿ  ಮಹಿಳಾ ಮತದಾರರ ಕೆಂಗಣ್ಣಿಗೆ ಗುರಿಯಾಗಿ 1998ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿತ್ತು. ನಂತರ ಈಗ ಬಿಹಾರ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಸೋಲು ಮಹಿಳಾ ಆಯ್ಕೆಯ ಕಥನವನ್ನು ನಿರೂಪಿಸುತ್ತದೆ.ಇದೇ ರೀತಿ, ಕಳೆದ ದಶಕಗಳಲ್ಲಿ ಆಂಧ್ರಪ್ರದೇಶದಲ್ಲಿ ಪಾನ ನಿಷೇಧದ ವಿಚಾರದಲ್ಲಿ ಎನ್.ಟಿ. ರಾಮರಾವ್ ಅವರಿಗೆ ಮಹಿಳೆಯರು ಮತ ಹಾಕಿದ್ದರು. ಉತ್ತರ ಪ್ರದೇಶದಲ್ಲಿ 90ರ ದಶಕದ ಆರಂಭದಲ್ಲಿ ರಾಮ ಮಂದಿರಕ್ಕಾಗಿ  ಮಹಿಳೆಯರು ಮತ ಹಾಕಿದ್ದರು. ಮಹಿಳೆಯರಿಂದ ಹೆಚ್ಚಿನ ಮತದಾನ ಎಂದರೆ ಅದು ತನ್ನತ್ತ ವಾಲಿದ ಅಲೆ ಎಂದು ರಾಜಕೀಯ ಪಕ್ಷಗಳು ಪ್ರತಿಪಾದಿಸಿಕೊಳ್ಳುವ ಪ್ರವೃತ್ತಿಯೂ ಇದೆ. ಮತದಾನದ ಹಕ್ಕು ಚಲಾಯಿಸುವುದು ರಾಜಕೀಯದಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆಗೆ ಮೂಲಭೂತವಾದದ್ದು. 1960ರ ದಶಕದಲ್ಲಿ ಮಹಿಳಾ ಮತದಾರರ ಪ್ರಮಾಣ 1,000 ಪುರುಷರಿಗೆ 715 ಇತ್ತು. ಇದು 2000 ದಶಕದಲ್ಲಿ 883ಕ್ಕೆ ಏರಿಕೆಯಾಗಿದೆ ಎಂಬುದು ಮುಖ್ಯ ಬೆಳವಣಿಗೆ. ಸಾಂವಿಧಾನಿಕ ಹಕ್ಕನ್ನು ಸ್ವಯಂಪ್ರೇರಿತವಾಗಿ ಚಲಾಯಿಸುವುದು ಮಹಿಳಾ ಸಶಕ್ತೀಕರಣಕ್ಕೆ ದ್ಯೋತಕ.ರಾಜಾಡಳಿತವಿದ್ದ ತಿರುವಾಂಕೂರು ಕೊಚ್ಚಿ ಸಂಸ್ಥಾನ, 1920ರಲ್ಲಿ ಮಹಿಳೆಯರಿಗೆ ಭಾರತದಲ್ಲಿ ಮೊದಲ ಬಾರಿಗೆ ಮತದಾನದ ಹಕ್ಕು ನೀಡಿತ್ತು. ನಂತರ 1921ರಲ್ಲಿ ಮದ್ರಾಸ್ ಹಾಗೂ ಬಾಂಬೆಯಲ್ಲೂ ಇದು ಜಾರಿಯಾಯಿತು. ಇತರ ರಾಜ್ಯಗಳೂ ಇದನ್ನು ಅನುಸರಿಸಿದವು. ಆದರೆ ಮತದಾನದ ಹಕ್ಕು ಸೀಮಿತವಾಗಿತ್ತು. ಪತ್ನಿ ಸ್ಥಾನ ಇದ್ದಲ್ಲಿ, ಆಸ್ತಿ ಹಾಗೂ ಶಿಕ್ಷಣದಂತಹ ಅರ್ಹತೆ ಇದ್ದಲ್ಲಿ ಮಾತ್ರ ಮಹಿಳೆಯರು ಮತ ಹಾಕಬಹುದಾಗಿತ್ತು. 1935ರ ಭಾರತ ಸರ್ಕಾರದ ಕಾಯಿದೆ, ಮತದಾನ ಮಾಡಬಹುದಾದ ಮಹಿಳೆಯರ ಸಂಖ್ಯೆ ಹೆಚ್ಚಿಸಿತು.ನಂತರ ಮಹಿಳೆಯರು ಶಾಸನಸಭೆ ಸದಸ್ಯರೂ ಆದರು. 1926ರಲ್ಲಿ ನಡೆದ ಚುನಾವಣೆಗಳಲ್ಲಿ, ಮದ್ರಾಸ್‌ನ ವಿಧಾನ ಪರಿಷತ್ ಚುನಾವಣೆಗೆ ಕಮಲಾದೇವಿ ಚಟ್ಟೋಪಾಧ್ಯಾಯ ಮಂಗಳೂರಿನಿಂದ  ಸ್ಪರ್ಧಿಸಿದ್ದರು. ಆದರೆ ಕಡಿಮೆ ಅಂತರದಲ್ಲಿ ಸೋಲುಂಡಿದ್ದರು. ಡಾ.ಮುತ್ತುಲಕ್ಷ್ಮಿ ರೆಡ್ಡಿ ಅವರು 1927ರಲ್ಲಿ ಮದ್ರಾಸ್‌ನಲ್ಲಿ ಶಾಸನಸಭೆ ಸದಸ್ಯರಾದ ಮೊದಲ ಮಹಿಳೆ. ಹೀಗಿದ್ದೂ ಸಾರ್ವತ್ರಿಕ ಮತದಾನದ ಹಕ್ಕು ಪಡೆದುಕೊಳ್ಳಲು ಸ್ವಾತಂತ್ರ್ಯ ಬರುವವರೆಗೆ ಭಾರತೀಯ ಮಹಿಳೆಯರು ಕಾಯಬೇಕಾಯಿತು ಎಂಬುದನ್ನು ಮರೆಯುವಂತಿಲ್ಲ.ಬಿಹಾರದಲ್ಲಿ ಲಿಂಗಾನುಪಾತ ಕಡಿಮೆ ಇದೆ. ಸಾಕ್ಷರತೆಯಲ್ಲಿ ಮಹಿಳೆಯರು ಹಿಂದಿದ್ದಾರೆ. ಊಳಿಗಮಾನ್ಯ, ರಾಜಕೀಯಕರಣಗೊಂಡ ಸಮಾಜ ಅದು. ಹೀಗಿದ್ದೂ ಮತದಾನದಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಪ್ರಮಾಣ ಹೆಚ್ಚಾಗಿದ್ದಲ್ಲಿ ಅದು ಇತ್ತೀಚಿನ ವರ್ಷಗಳಲ್ಲಿ ಸಾಧ್ಯವಾಗಿರುವ  ಸಕಾರಾತ್ಮಕತೆಗೆ ದ್ಯೋತಕ. ಬಿಹಾರದಲ್ಲಿ ನಿತೀಶ್‌ರ 10 ವರ್ಷದ ಆಡಳಿತದಲ್ಲಿ  ಮಹಿಳೆಯರ ಬದುಕು ಕಂಡ ಬದಲಾವಣೆ ಮಹತ್ತರವಾದದ್ದು. ‘ಮಹಿಳಾ ಸ್ನೇಹಿ’ ಮುಖ್ಯಮಂತ್ರಿ ಎಂಬ ಅಭಿದಾನ ಅವರಿಗೆ ದಕ್ಕಿದೆ. ಶಾಲಾ ಬಾಲಕಿಯರಿಗೆ ಬೈಸಿಕಲ್ ಹಾಗೂ ಸ್ಯಾನಿಟರಿ ನ್ಯಾಪ್‌ಕಿನ್ ವಿತರಿಸುವ ಮೂಲಕ ಹೆಣ್ಣು ಮಕ್ಕಳ ಕಾಳಜಿಗಳಿಗೆ ಬಿಹಾರ ಸರ್ಕಾರ ದನಿಯಾಗಿ ಮೇಲ್ಪಂಕ್ತಿ ಹಾಕಿಕೊಟ್ಟಿತು.ಹಾಗೆಯೇ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಶೇ 50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲು ನೀಡಿದ ಮೊದಲ ರಾಜ್ಯ ಬಿಹಾರ. ಮಹಿಳಾ ಅಭಿವೃದ್ಧಿಗೆ ಕೇಂದ್ರೀಕೃತ ಗಮನ ನೀಡಿದ್ದು ಮುಖ್ಯ. ಬಿಹಾರದ ಪೊಲೀಸ್ ವ್ಯವಸ್ಥೆಯಲ್ಲಿ ಈಗಾಗಲೇ ಮಹಿಳೆಯರಿಗೆ ಶೇ 35ರಷ್ಟು ಮೀಸಲು ಇದೆ. ಜನಪ್ರಿಯ ಯೋಜನೆಗಳನ್ನು ಘೋಷಿಸುವುದಕ್ಕಿಂತ ಹೆಚ್ಚಾಗಿ ಮಹಿಳೆಯರನ್ನು ಸಬಲರಾಗಿಸಲು ಸಾಂಸ್ಥಿಕ ವ್ಯವಸ್ಥೆಗಳನ್ನು ಸೃಷ್ಟಿಸಿದ್ದು ಮುಖ್ಯವಾದದ್ದು. ಬಾಲಕಿಯರಿಗೆ ಬೈಸಿಕಲ್ ವಿತರಣೆ ಹಾಗೂ ಮಹಿಳೆಯರಿಗೆ ಮೀಸಲು ಉಪಕ್ರಮಗಳನ್ನು ಈಗ ಅನೇಕ ರಾಜ್ಯಗಳಲ್ಲೂ ಆರಂಭಿಸಲಾಗಿದೆ. ಸಾಮಾಜಿಕ ಬದಲಾವಣೆಯಲ್ಲಿ ಮಹಿಳೆಯರನ್ನು ಸಬಲರಾಗಿಸುವ ರಾಜಕೀಯ ದೃಷ್ಟಿಕೋನದಲ್ಲಿ ನಿತೀಶ್ ಇರಿಸಿದ ನಂಬಿಕೆ ಇಲ್ಲಿ ಮುಖ್ಯ.ಹೀಗಿದ್ದೂ 2010ರಲ್ಲಿ ನಿತೀಶ್ ಕುಮಾರ್‌ರತ್ತ ಮೃದು ಧೋರಣೆ ತೋರಿದ್ದ ಮಹಿಳಾ ಮತದಾರರು 2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯತ್ತ  ಒಲವು ತೋರಿದ್ದರು ಎಂಬುದನ್ನು ಅಲ್ಲಗಳೆಯಲಾಗದು. ಬಿಹಾರದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕುವುದು ಮುಂದುವರಿದುಕೊಂಡು ಬಂದಿದೆ. ಆದರೆ ಇದು ಬಿಹಾರದಲ್ಲಿ ಮಾತ್ರ ಕಂಡು ಬರುತ್ತಿರುವ ಅಲೆಯಲ್ಲ. ಭಾರತದ ಇತರ ಕೆಲವು ರಾಜ್ಯಗಳಲ್ಲೂ ಈ ಪ್ರವೃತ್ತಿ ಕಂಡು ಬರುತ್ತಿದೆ. ಈ ಪ್ರಕ್ರಿಯೆ ಬಗ್ಗೆ ಆಳವಾದ ಅಧ್ಯಯನ ಅಗತ್ಯ. ಆದರೆ ಬಿಹಾರದಲ್ಲಿ ಮಹಿಳಾ ಅಂಶ ಅಥವಾ ಮಹಿಳಾ ಮತಬ್ಯಾಂಕ್ ಎಂಬುದೇನೂ ಇಲ್ಲ ಎನ್ನುವ ವಾದಗಳೂ ಇವೆ. ಪುರುಷರಂತೆಯೇ ಅವರೂ ಜಾತಿ, ಸಮುದಾಯ, ವರ್ಗ ಇತ್ಯಾದಿ ಅಂಶಗಳನ್ನಾಧರಿಸಿಯೇ ಮತ ಹಾಕುತ್ತಾರೆ ಎಂದು ವಾದಿಸಲಾಗುತ್ತದೆ. ಆದರೆ ಯಾದವ, ಕುರ್ಮಿ, ಭೂಮಿಹಾರ ರೀತಿ ಒಂದು ಸಣ್ಣ ವರ್ಗವಾಗಿ ‘ಮಹಿಳಾ ಮತ’ ಎಂಬುದೂ  ಉದಯವಾಗಿದೆ ಎಂಬುದು ಈಚಿನ ವಿಶ್ಲೇಷಣೆ.ಇದೇನೇ ಇರಲಿ, ಮಹಿಳೆಯರ ರಾಜಕೀಯ ಕ್ರಿಯೆಗಳು ಪುರುಷನ ರಾಜಕೀಯ ಆಕಾಂಕ್ಷೆಗಳಿಗೆ ನೀರೆರೆಯುವುದಕ್ಕಷ್ಟೇ ಸೀಮಿತವಾಗಬಾರದು. ಕುಟುಂಬ ರಾಜಕಾರಣಗಳಿಗೆ ದಾಳವಾಗಿಯಷ್ಟೇ ಬಳಕೆಯಾಗಬಾರದು ಎಂಬುದು ಮುಖ್ಯ. ಮತದಾರರಾಗಿ ಹಕ್ಕುಗಳನ್ನು ಚಲಾಯಿಸುವಲ್ಲಿ ಮಹಿಳೆಯರು ಒಂದಷ್ಟು ಮುನ್ನಡೆ ಸಾಧಿಸಿದ್ದಾರೆ ನಿಜ. ಆದರೆ ನಿರ್ಧಾರ ಕೈಗೊಳ್ಳುವ  ಅತ್ಯುನ್ನತ  ಸ್ಥಾನಗಳಲ್ಲಿ ರಾಜಕೀಯ ಅಧಿಕಾರ ಮಹಿಳೆಗೆ ಹೆಚ್ಚಿನ ಮಟ್ಟದಲ್ಲಿ ಲಭ್ಯವಾಗಬೇಕು.  ಪ್ರಜಾಪ್ರಭುತ್ವ ಗಟ್ಟಿಯಾಗಲು ಹಾಗೂ ಯಶಸ್ವಿಯಾಗಲು ಇದು ಅಗತ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.