ಮಂಗಳವಾರ, ಡಿಸೆಂಬರ್ 10, 2019
26 °C

‘ರಾಷ್ಟ್ರವಾದಿ’ ಅತ್ಯಾಚಾರವೊಂದರ ಹಿಂದೆ ಮುಂದೆ

ಡಿ. ಉಮಾಪತಿ
Published:
Updated:
‘ರಾಷ್ಟ್ರವಾದಿ’ ಅತ್ಯಾಚಾರವೊಂದರ ಹಿಂದೆ ಮುಂದೆ

ಅಸಹಾಯಕ ಹಸುಳೆಗಳ ಮೇಲಿನ ಬಲಾತ್ಕಾರದ ಘಟನೆಗಳು ಈ ದೇಶದಲ್ಲಿ ಅನೂಚಾನ ವಿದ್ಯಮಾನಗಳು. ಸರಿಯಾಗಿ ಐದು ವರ್ಷಗಳ ಹಿಂದೆ ದೆಹಲಿಯಲ್ಲಿ ಜರುಗಿದ್ದ ವಿಕೃತ ಪೈಶಾಚಿಕ ಪಿಪಾಸೆಯ ಬಲಿಪಶು ಆಗಿದ್ದು ಐದು ವರ್ಷದ ಹಸುಳೆ. ಮೂರು ಮೇಣದ ಬತ್ತಿಗಳು ಮತ್ತು ಹೇರ್ ಆಯಿಲ್ ಶೀಷೆಯನ್ನು ಮಗುವಿನ ಜನನಾಂಗಕ್ಕೆ ತುರುಕಿದ್ದ ವಿಕೃತ ಕಾಮಿ. ಮುಖವೆಲ್ಲ ಗೀರು ಗಾಯಗಳು. ಕುತ್ತಿಗೆ ಮೇಲೆ ಬ್ಲೇಡು ಗೀರುಗಳು, ಬಾತುಕೊಂಡ ತುಟಿಗಳು. ಕೊಲ್ಲಲೆಂದು ಕುತ್ತಿಗೆ ಹಿಸುಕಿದ್ದ ಪಿಪಾಸು.ಮೂರ್ಛೆ ಹೋಗಿದ್ದ ಮಗುವನ್ನು ಸತ್ತಿದೆಯೆಂದೇ ತಿಳಿದು ರಾತ್ರೋ ರಾತ್ರಿ ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಅರೆಜೀವವಾಗಿದ್ದ ಎಳೆಯ ಜೀವ. ತನ್ನ ಜೊತೆ ನಡೆದದ್ದೇನು ಎಂದೂ ಅರಿಯದ ಅಮಾಯಕ ಹೆಣ್ಣುಮಗುವಿಗೆ ಬೀಗ ಜಡಿದ ಬಾಗಿಲುಗಳ ಹಿಂದಿನ ನರಕದಲ್ಲಿ ನಲವತ್ತು ತಾಸುಗಳ ಯಾತನೆ. ವಿಕೃತ ಕ್ರೌರ್ಯಕ್ಕೆ ವೈದ್ಯರೇ ಬೆಚ್ಚಿ ಬಿದ್ದಿದ್ದರು. ಗುದದ್ವಾರದ ತನಕ ಹರಿದ ಯೋನಿ ಭಿತ್ತಿಯ ದುರಸ್ತಿಗೆ ಹಲವು ಶಸ್ತ್ರಚಿಕಿತ್ಸೆಗಳು ನಡೆದವು. ಅದೇ ಹೊತ್ತಿನಲ್ಲಿ ಮಧ್ಯಪ್ರದೇಶದ ಸಿವೋನಿಯಲ್ಲಿ ನಾಲ್ಕು ವರ್ಷದ ಮತ್ತೊಂದು ಹಸುಳೆ ಲೈಂಗಿಕ ಕ್ರೌರ್ಯಕ್ಕೆ ಬಲಿಯಾಗಿ ಸಾವು ಬದುಕುಗಳ ನಡುವೆ ಜೀಕುತ್ತಿತ್ತು. ಜನನಾಂಗ ಮತ್ತು ಗುದದ್ವಾರದ ನಡುವೆ ಅಂತರವೇ ಇಲ್ಲದಂತೆ ಸೀಳಲಾಗಿತ್ತು ಆ ಮಗುವನ್ನು. ಇಂತಹ ಹೇಯ ಕೃತ್ಯಗಳು ಎಲ್ಲ ಪಕ್ಷಗಳ ಸರ್ಕಾರಗಳಲ್ಲೂ ನಡೆಯುತ್ತವೆ. ಜಾತಿ ಧರ್ಮಗಳ ಭೇದ ಭಾವ ಇಲ್ಲದೆ ಜರುಗುತ್ತವೆ.

ಹಸುಗೂಸುಗಳಾದರೇನು, ಎಳೆ ಬಾಲೆಯಾದರೂ ಏನಂತೆ, ಬಲಾತ್ಕಾರದ ಭಯಾನಕತೆ ಕಾಲ ಕಾಲಕ್ಕೆ ಹೊಸ ಪಾತಾಳ ಮುಟ್ಟುವುದು ಮನುಷ್ಯನ ಮಿತಿಯಿಲ್ಲದ ಕ್ರೌರ್ಯಕ್ಕೆ

ಹಿಡಿದ ಕನ್ನಡಿ. ಆದರೆ ಜಮ್ಮುವಿನ ಕಠುವಾ ಕ್ರೌರ್ಯ ಹಲವು ಕಾರಣಗಳಿಂದಾಗಿ ಮೇಲ್ಕಂಡ ಪ್ರಕರಣಗಳಿಗಿಂತ ಭಿನ್ನ.

ಕಠುವಾ ಬೀಭತ್ಸದ ಹಿಂದೆ ಜನಾಂಗೀಯ ‘ಶುದ್ಧಿ’ಯ ಉದ್ದೇಶವಿದೆ. ಕುರಿಗಾಹಿ ಬಕ್ರೆವಾಲಾ ಮುಸ್ಲಿಂ ಅಲೆಮಾರಿ ಸಮುದಾಯವನ್ನು ಜಮ್ಮುವಿಗೆ ಮರಳಿ ಬಾರದಂತೆ ಹೊರಗಟ್ಟುವ ದ್ವೇಷವಿದೆ. ಪಾತಕದ ಮೇಲೆ ಪರದೆ ಎಳೆಯಲು ತ್ರಿವರ್ಣ ಧ್ವಜವನ್ನು ಪಟಪಟಿಸಲಾಯಿತು. ‘ಭಾರತ ಮಾತಾ ಕೀ ಜೈ’ ಘೋಷಣೆ ಕೂಗಲಾಯಿತು. ದೇಶದ ಪರವಾಗಿ ಮಾಡಲಾದ ಬಲಾತ್ಕಾರವಿದು. ಅರ್ಥಾತ್ ‘ರಾಷ್ಟ್ರವಾದಿ’ ಬಲಾತ್ಕಾರ. ಎಂಟು ವರ್ಷದ ಹೆಣ್ಣುಮಗು ಮುಸ್ಲಿಂ ಜನಾಂಗದಲ್ಲಿ ಹುಟ್ಟಿದ ಕಾರಣಕ್ಕೆ ಆದ ಬಲಾತ್ಕಾರ. ಈ ಬಲಾತ್ಕಾರದಲ್ಲಿ ದೈಹಿಕವಾಗಿ ಭಾಗಿಯಾದವರು ಕೆಲವೇ ಮಂದಿ. ಆದರೆ ಮಾನಸಿಕವಾಗಿ ಭಾಗಿಯಾದವರು ಲಕ್ಷಾಂತರ ಮಂದಿ. ಬಲಾತ್ಕಾರಿಗಳನ್ನು ರಕ್ಷಿಸಲು ಧರ್ಮ ಮತ್ತು ದೇಶಭಕ್ತಿಯನ್ನು ಬಳಸುತ್ತಿರುವವರೂ ಈ ಬಲಾತ್ಕಾರದಲ್ಲಿ ಭಾಗಿಗಳು.

ಜಮ್ಮು- ಕಾಶ್ಮೀರ ಕ್ರೈಂ ಬ್ರ್ಯಾಂಚ್ ಆಪಾದನಾ ಪಟ್ಟಿ ಸಲ್ಲಿಸಲು ಅಡ್ಡಿ ಮಾಡಿ ಬಲಾತ್ಕಾರಿಗಳನ್ನು ರಕ್ಷಿಸಲು ಮುಂದಾದವರಲ್ಲಿ ಬಿಜೆಪಿಯ ಹಿಂದೂ ಏಕತಾ ವೇದಿಕೆ ಇತ್ತು, ಕಾಂಗ್ರೆಸ್ ಬೆಂಬಲಿಗರೂ ಇದ್ದರು. ಗುಜರಾತಿನ 2002ರ ಕೋಮು ದಂಗೆಗಳಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಡೆದ ಕೊಲೆ, ಸುಲಿಗೆ, ಬಲಾತ್ಕಾರಗಳ ಮೇಲೆ ಪರದೆ ಎಳೆಯಲು ಆ ರಾಜ್ಯದ ಅಂದಿನ ಮುಖ್ಯಮಂತ್ರಿ ಕೂಡ ಗೌರವಯಾತ್ರೆ ನಡೆಸಿದ್ದರು. ಉತ್ತರಪ್ರದೇಶದ ದಾದ್ರಿಯ ಅಖ್ಲಾಕ್ ಅಹ್ಮದ್‌ರನ್ನು ಜಜ್ಜಿ ಕೊಂದವರಲ್ಲಿ ಒಬ್ಬನ ಮೃತದೇಹಕ್ಕೆ ತ್ರಿವರ್ಣಧ್ವಜ ಹೊದಿಸಲಾಗಿತ್ತು. ಪೆಹಲೂಖಾನ್‌ನ ಹಂತಕರನ್ನು ಭಗತ್ ಸಿಂಗ್ ಎಂದು ಕರೆಯಲಾಯಿತು. ಕಠುವಾ ಪ್ರಕರಣ ಕೂಡ ದೀರ್ಘ ಧಾರಾವಾಹಿಯೊಂದರ ಕೊಂಡಿ. ಜೈಶ್ರೀರಾಮ್ ಘೋಷಣೆಯು ಕಾನೂನು ಮತ್ತು ಸಂವಿಧಾನಕ್ಕಿಂತ ಹೆಚ್ಚು ಎಂಬ ವಾತಾವರಣ ಸೃಷ್ಟಿಸಲಾಗಿದೆ. ಕಾನೂನು ಸುವ್ಯವಸ್ಥೆಯನ್ನು ಧ್ವಸ್ತಗೊಳಿಸಲು ಈ ಘೋಷಣೆಯ ಬಳಕೆ ಆಗುತ್ತಿದೆಯಾದರೆ, ಎಲ್ಲರಿಗೂ ನ್ಯಾಯ ಒದಗಿಸುವ ಸಮಾನತೆ ಸಾರುವ ಕನಸನ್ನು ತೋರಿಸುವ ರಾಮರಾಜ್ಯದ ಗತಿಯೇನು?

ಜನವರಿ ಹತ್ತರಂದು ಕಾಣೆಯಾದ ಬಾಲಕಿಯ ವಿರೂಪಗೊಳಿಸಿದ ದೇಹ ಜನವರಿ ಹದಿನೇಳರಂದು ರಸನಾ ಗ್ರಾಮದ ದೇವಾಲಯವೊಂದರ ಬಳಿ ಪತ್ತೆಯಾಯಿತು. ತನಿಖೆಯ ನಂತರ ಮೊನ್ನೆ ಚಾರ್ಜ್ ಶೀಟ್ ಸಲ್ಲಿಸಲು ಹೊರಟಿದ್ದ ಪೊಲೀಸರನ್ನು ವಕೀಲರ ಗುಂಪು ತಡೆಯಿತು. ಜಮ್ಮುವಿನ ಹಿಂದೂ ಆಪಾದಿತರನ್ನು ಮುಸ್ಲಿಂ ಕಾಶ್ಮೀರದ ಪೊಲೀಸರು ಮಟ್ಟ ಹಾಕಲು ಹೊರಟಿದ್ದಾರೆ ಎಂಬುದು ಈ ಗುಂಪಿನ ತಕರಾರು. ರಾಜ್ಯ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರದ ಇಬ್ಬರು ಬಿಜೆಪಿ ಮಂತ್ರಿಗಳೂ ಈ ಪ್ರತಿಭಟನೆಗೆ ದನಿಗೂಡಿಸಿದರು. ಈ ಪ್ರಕರಣದ ತನಿಖೆಯನ್ನು ನಡೆಸಿದ ಉನ್ನತ ಪೊಲೀಸ್ ಅಧಿಕಾರಿ ರಮೇಶ್ ಜಾಲ ಅವರ ಕರ್ತವ್ಯನಿಷ್ಠೆ, ಪ್ರತಿಭೆ ಪ್ರಶ್ನಾತೀತ. ಮುಸ್ಲಿಂ ಉಗ್ರವಾದಿಗಳ ದಾಳಿಗಳಿಗೆ ತುತ್ತಾಗಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು.

ಅಪಹರಿಸಿ ಹಸಿವಿಗೆ ಕೆಡವಿದ ಬಾಲೆಗೆ ಮತ್ತು ಬರಿಸುವ ಔಷಧಿ ಬಾರಿ ಬಾರಿಗೆ ನೀಡಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ದೂರದ ಮೇರಠ್‌ನಲ್ಲಿದ್ದ ಮತ್ತೊಬ್ಬ ಆಪಾದಿತನನ್ನು ಪಿಪಾಸೆ ತೀರಿಸಿಕೊಳ್ಳುವಂತೆ ಕರೆಯಲಾಗಿದೆ. ತಲೆಯನ್ನು ಕಲ್ಲಿನಿಂದ ಜಜ್ಜಿ, ಇನ್ನೂ ಸತ್ತಿಲ್ಲವೆಂದು ಗೊತ್ತಾದಾಗ ಮತ್ತೊಂದು ಸುತ್ತಿನ ಸಾಮೂಹಿಕ ಅತ್ಯಾಚಾರ ನಡೆದಿದೆ. ದೇಹವನ್ನು ಎಡತೊಡೆಯ ಮೇಲೆ ಅಡ್ಡವಾಗಿ ಮಲಗಿಸಿ ಬೆನ್ನು ಮೂಳೆ ಮುರಿದು ಕೊಲ್ಲುವ ಪ್ರಯತ್ನ ನಡೆದಿದೆ. ಕೊಂದ ನಂತರ ಸಾಕ್ಷ್ಯಗಳನ್ನು ಅಳಿಸಲು ದೇಹವನ್ನು, ಬಟ್ಟೆಗಳನ್ನು ಸ್ವಚ್ಛ ಮಾಡಲಾಗಿದೆ.

ಮಗುವಿನ ಚರ್ಮ ವಿದ್ಯುತ್ ಆಘಾತ ತಗುಲಿದಂತೆ ಸುಟ್ಟಿತ್ತು. ಮೈದಡವಿದರೆ ಮುರಿದ ಪಕ್ಕೆ ಮೂಳೆಗಳು ಅನುಭವಕ್ಕೆ ಸಿಗುತ್ತಿದ್ದವು. ಮಗುವಿನ ಮೃತದೇಹವನ್ನು ಹೂಳಲು ಬಿಡಲಿಲ್ಲ. ಏಳು ಕಿ.ಮೀ. ದೂರ ಒಯ್ಯಬೇಕಾಯಿತು. ‘ನಮ್ಮ ಮನೆಗಳನ್ನು ನೆಲಸಮ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಮಗಳ ಸಮಾಧಿಯನ್ನು ಅಳಿಸಿ ಹಾಕದಿದ್ದರೆ ಸಾಕು’ ಎನ್ನುತ್ತಾಳೆ ಸಾಕು ತಾಯಿ.

ಬಕ್ರೆವಾಲಾ ಅಲೆಮಾರಿಗಳನ್ನು ಓಡಿಸಲು ಅವರ ಕರುಳ ಕುಡಿಯ ಮೇಲೆ ಜರುಗಿದ ಬರ್ಬರ ಅತ್ಯಾಚಾರ ಕೃತ್ಯದ ಮೇಲೆ ಹಿಂದೂ ಏಕತಾ ಮಂಚ್ ಮತ್ತು ಭಾರತ ಬಚಾವೊ ರಥಯಾತ್ರ ಸಂಘಟನೆಗಳು ಮೊಹರು ಒತ್ತಿವೆ. ಧರ್ಮ ಮತ್ತು ಮಾನವೀಯತೆಯಲ್ಲಿ ಧರ್ಮವನ್ನೇ ಆರಿಸಿಕೊಂಡಿವೆ. ಕೋಮು ಉನ್ಮಾದದಲ್ಲಿ ಮುಳುಗಿ ಸಾಮುದಾಯಿಕ ಆತ್ಮಸಾಕ್ಷಿಯನ್ನು ಅಳಿಸಿ ಹಾಕುವ ಬಹುದೊಡ್ಡ ಬೆಲೆಯನ್ನು ತೆತ್ತಿವೆ.

ಮೂರು ವರ್ಷಗಳ ಹಿಂದೆ ತಮಗೆ ದೊರೆತ ಜನಾದೇಶವನ್ನು ಜಮ್ಮು ಮತ್ತು ಕಾಶ್ಮೀರವನ್ನು ಬೆಸೆಯಲು ಹೂಡುವುದಾಗಿ ಸಾರಿದ್ದವು ಪಿಡಿಪಿ ಮತ್ತು ಬಿಜೆಪಿ. ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವದಷ್ಟು ರಾಜಕೀಯ ದೂರದಲ್ಲಿದ್ದ ಎರಡೂ ಪಕ್ಷಗಳು ಉತ್ತಮ ಆಡಳಿತ ನೀಡಲು ಒಂದಾಗಿರುವುದಾಗಿ ಹೇಳಿದ್ದವು. ಇದೀಗ ಹಿಂದೂ ಜಮ್ಮು ಮತ್ತು ಮುಸ್ಲಿಂ ಕಾಶ್ಮೀರದ ನಡುವಣ ಕಂದಕ ಹಿಂದೆಂದಿಗಿಂತ ಹಿರಿದಾಗಿದೆ. ಈ ಅಂತರವನ್ನು ಕಠುವಾ ಬಲಾತ್ಕಾರ- ಹತ್ಯೆಯ ಪ್ರಕರಣ ಬಯಲಿಗೆಳೆದಿದೆ.

ಕುರಿಗಾಹಿ ಅಲೆಮಾರಿ ಮುಸ್ಲಿಮರು ಮತ್ತು ಸ್ಥಳೀಯ ಹಿಂದೂಗಳ ನಡುವಣ ಮನಸ್ತಾಪ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಲೇ ನಡೆದಿದೆ. ಎರಡೂ ಸಮುದಾಯಗಳು ಪೊಲೀಸ್ ಠಾಣೆಗಳ ಮೆಟ್ಟಿಲು ಹತ್ತಿವೆ. ‘ಹಿಂದೂಗಳಿಗೆ ಸೇರಿದ ಜಮೀನಿಗೆ ನಮ್ಮ ಆಡು, ಕುರಿ, ಕುದುರೆಗಳು ಸುಳಿದರೆ ಹರಿತ ಕತ್ತಿಗಳಿಂದ ಅವುಗಳನ್ನು ಇರಿಯಲಾಗುತ್ತದೆ. ಪ್ರಾಣಿಗಳಿಗೆ ಹಿಂದೂ ಭೂಮಿ, ಮುಸ್ಲಿಂ ಭೂಮಿ ಎಂಬ ಫರಕು ತಿಳಿಯುತ್ತದೇನು’ ಎನ್ನುತ್ತಾನೆ ಬಾಲಕಿಯ ಅಜ್ಜ. ‘ಬಾಲಕಿಯ ಹತ್ಯೆಯ ನಂತರ ಬಕ್ರೆವಾಲಾಗಳು ಪಾಕಿಸ್ತಾನಿ ಪರ ಘೋಷಣೆ ಕೂಗುತ್ತ ನಮ್ಮ ಮನೆಗಳ ಗೇಟುಗಳ ಮೇಲೆ ಕಬ್ಬಿಣದ ಸರಳುಗಳನ್ನು ಬಡಿದು ಗದ್ದಲ ಎಬ್ಬಿಸಿ ಬೆದರಿಸುತ್ತಾರೆ’ ಎನ್ನುತ್ತಾರೆ ಮುಖ್ಯ ಆಪಾದಿತ ಸಾಂಝೀರಾಮ್ ಪುತ್ರಿ.

ಅಸ್ಸಾಮಿನ ನೌಗಾಂವ್‌ನಲ್ಲಿ ಹಿಂದೂ ಬಾಲಕಿಯ ಮೇಲೆ ಇಂತಹುದೇ ದೌರ್ಜನ್ಯ ನಡೆದಾಗ ಯಾಕೆ ಖಂಡಿಸಲಿಲ್ಲ ಎಂಬ ಪ್ರಶ್ನೆಯನ್ನು ಬಿಜೆಪಿ ಮತ್ತು ಪರಿವಾರ ಕೇಳಿದೆ. ಅಲ್ಲಿ ಅಪರಾಧಿಯ ಪರವಾಗಿ ಅಪರಾಧಿಯ ಧರ್ಮಕ್ಕೆ ಸೇರಿದವರು ಮೆರವಣಿಗೆ ಪ್ರದರ್ಶನ ನಡೆಸಲಿಲ್ಲ. ಪ್ರಥಮ ವರ್ತಮಾನ ವರದಿಯನ್ನು ದಾಖಲಿಸುವ ಪೊಲೀಸರ ಪ್ರಯತ್ನವನ್ನು ನಿಲ್ಲಿಸಲಿಲ್ಲ. ರಾಜ್ಯದ ಪೊಲೀಸರ ಮೇಲೆ ನಂಬಿಕೆಯಿಲ್ಲವೆಂದು ಸಿಬಿಐಗೆ ಒಪ್ಪಿಸುವಂತೆ ಹಟ ಹಿಡಿಯಲಿಲ್ಲ.

ಉತ್ತರಪ್ರದೇಶದ ಉನ್ನಾವ್ ಪ್ರಕರಣದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಪ್ರಭುತ್ವವು, ಹಂತಕರು- ಅತ್ಯಾಚಾರಿಗಳನ್ನು ಕೈಬಿಟ್ಟು ಬಲಿಪಶುವನ್ನು ತುಳಿಯುತ್ತಲಿದೆ. ಕಾಯ್ದೆ ಕಾನೂನು ರೂಪಿಸುವ ಶಾಸಕರು ಅವುಗಳನ್ನು ಮುರಿದು ಮೆರೆಯುತ್ತಿದ್ದರೆ, ಸರ್ಕಾರ ತನ್ನ ಸಂವಿಧಾನಾತ್ಮಕ ಜವಾಬ್ದಾರಿಯನ್ನು ಗಾಳಿಗೆ ತೂರಿದೆ. ಬೇಟಿ ಬಚಾವೊ, ಬೇಟಿ ಪಢಾವೊ ಘೋಷಣೆಯನ್ನು ‘ಬೇಟಿ ಕೋ ಡರಾವೊ, ಬೇಟಿ ಕೊ ಮಾರೊ, ಉಸ್ಕೇ ಊಪರ್ ಅತ್ಯಾಚಾರ್ ಕರೊ, ಲೇಕಿನ್ ವಿಧಾಯಕ್ ಕೋ ಬಚಾವೊ’ ಎಂದು ಬದಲಾಯಿಸಲಾಗಿದೆ. ಆರೋಪಿ ಶಾಸಕನನ್ನು ಬಂಧಿಸುವ ಬದಲು ದೂರು ನೀಡಿದವರನ್ನು ಯಾಕೆ ಬಂಧಿಸುತ್ತಿದ್ದೀರಿ ಎಂಬ ಅಲಹಾಬಾದ್ ಹೈಕೋರ್ಟ್ ಪ್ರಶ್ನೆಗೆ ಯೋಗಿ ನೇತೃತ್ವದ ಸರ್ಕಾರದ ಬಳಿ ಉತ್ತರ ಇಲ್ಲ.

ಉನ್ನಾವ್ ಅತ್ಯಾಚಾರ ಪ್ರಕರಣದ ನಡುವೆಯೇ ಮುಖ್ಯಮಂತ್ರಿ ಆದಿತ್ಯನಾಥ ಅವರು ಸ್ವಾಮಿ ಚಿನ್ಮಯಾನಂದ ಎಂಬ ಕೇಂದ್ರದ ಮಾಜಿ ಸಚಿವರೊಬ್ಬರ ಮೇಲಿನ ಅತ್ಯಾಚಾರದ ಮೊಕದ್ದಮೆಯನ್ನು ವಾಪಸು ಪಡೆದು ಧನ್ಯರಾದರು. 2014ರ ಲೋಕಸಭಾ ಚುನಾವಣೆ ಮತ್ತು 2017ರ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಭದ್ರತೆ ಒದಗಿಸುವ (ಬಹೂ ಬೇಟಿ ಕೀ ಇಜ್ಜತ್) ವಿಷಯವನ್ನು ಬಿಜೆಪಿ ಪ್ರಮುಖ ಆಗಿಸಿತ್ತು. ಯೋಗಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹೆಣ್ಣುಮಕ್ಕಳನ್ನು ಛೇಡಿಸುವ ಪೋಲಿಗಳನ್ನು ಮಟ್ಟ ಹಾಕಲು ಪೊಲೀಸರ ‘ರೋಮಿಯೊ ನಿಗ್ರಹ ದಳ’ಗಳನ್ನು ರಚಿಸಲಾಗಿತ್ತು. ಆದರೆ ಅದೇ ಬಿಜೆಪಿಯ ಪ್ರಭಾವಿ ಶಾಸಕ, ಅವನ ಸೋದರ, ಅವನ ಬಾಡಿಗೆ ಬಂಟರು ನಡೆಸುವ ಸಾಮೂಹಿಕ ಅತ್ಯಾಚಾರದಿಂದ ಅಸಹಾಯಕ ಅಪ್ರಾಪ್ತ ಯುವತಿಯನ್ನು ಕಾಪಾಡುವುದಿಲ್ಲ. ಹತ್ತು ತಿಂಗಳು ಕಂಬ ಕಂಬ ಸುತ್ತಿದ ನಂತರ ಮೊನ್ನೆ ಮೊನ್ನೆ ಎಫ್.ಐ.ಆರ್. ದಾಖಲಿಸಲಾಗುತ್ತದೆ, ಸತಾಯಿಸಲಾಗುತ್ತದೆ. ಕುಲದೀಪ್ ಸಿಂಗ್ ಸೆಂಗರ್ ಎಂಬ ಠಾಕೂರ್ ಜನಾಂಗದ ಈ ಶಾಸಕನ ದೌರ್ಜನ್ಯದ ವಿರುದ್ಧ ದನಿಯೆತ್ತುವ ಆಕೆಯ ತಂದೆಯನ್ನು ಬಡಿದು ಕೊಲ್ಲಲಾಗುತ್ತದೆ. ನ್ಯಾಯ ಒದಗಿಸಬೇಕಾದ ಯೋಗಿ ಆದಿತ್ಯನಾಥ ಮೌನಕ್ಕೆ ಶರಣಾಗುತ್ತಾರೆ. ಮುಖ್ಯಮಂತ್ರಿ ನಿವಾಸದ ಮುಂದೆ ಸುಟ್ಟುಕೊಂಡು ಸಾಯುವುದಾಗಿ ಬೆದರಿಕೆ ಹಾಕುವ ಯುವತಿಯನ್ನು ಬಂಧಿಸಿದಾಗ ಇಡೀ ಕರ್ಮಕಾಂಡ ಬಯಲಿಗೆ ಬೀಳುತ್ತದೆ. ಯೋಗಿ ಮೌನ ಮುರಿಯುವುದಿಲ್ಲ. ಕಠುವಾ ಮತ್ತು ಉನ್ನಾವ್‌ನ ಎರಡೂ ಘಟನೆಗಳ ಕುರಿತು ಪ್ರಧಾನಿಯವರೂ ಎಂದಿನಂತೆ ದೀರ್ಘ ಮೌನ ತಳೆಯುತ್ತಾರೆ. ಅಲಹಾಬಾದ್ ನ್ಯಾಯಾಲಯ ಕಟಕಿದ ನಂತರ, ನೀರು ಮೂಗಿನತನಕ ಬಂದಾಗ ಬಾಯಿ ತೆರೆಯುತ್ತಾರೆ. ‘ಮೌನಮೋಹನ ಸಿಂಗ್’ ಎಂದು ಹೀಯಾಳಿಸಿದ್ದ ಮೋದಿಯವರು ‘ಮೌನಮೋದಿ ಬಾಬಾ’ ಆಗಿದ್ದಾದರೂ ಎಂತು?

ಕುಲದೀಪ್ ಸಿಂಗ್ ಸೆಂಗರ್ ಎಂಬ ಈ ಶಾಸಕ ಉನ್ನಾವ್ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಚುನಾವಣೆಗೆ ನಿಂತು ಗೆದ್ದಿರುವ ತೋಳ್ಬಲ, ಹಣಬಲದ ‘ಬಾಹುಬಲಿ’. ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಬಹುಜನ ಸಮಾಜ ಪಕ್ಷಗಳಿಗೆ ಮಣ್ಣು ಹೊತ್ತ ನಂತರ ಬಿಜೆಪಿ ಸೇವಾನಿರತ. ಹತ್ತು ಹಲವು ಪೊಲೀಸ್ ಕೇಸುಗಳ ಪದಕಗಳನ್ನು ಎದೆಯ ಮೇಲೆ ಧರಿಸಿರುವ ಧೀರ. ‘ಪಾರ್ಟಿ ವಿತ್ ಎ ಡಿಫರೆನ್ಸ್’ ಎಂದು ಎದೆ ತಟ್ಟಿಕೊಳ್ಳುವ ಪಕ್ಷ ಇಂತಹ ಧೀರನನ್ನು ಸೇರಿಸಿಕೊಂಡದ್ದೂ ಅಲ್ಲದೆ, ಲಜ್ಜೆಗೆಟ್ಟು ರಕ್ಷಿಸುವ ರಹಸ್ಯವಾದರೂ ಏನು?

‘ಕಿಸೀ ಕೇ ಭೀ ಜೀವನ್ ಸೇ ಖಿಲವಾಡ್ ಕರ್ನೇವಾಲೋಂ ಕಾ ಜೀವನ್ ಹಮ್ ಖರಾಬ್ ಕರ್ ದೇಂಗೇ’ ಎಂದು ಮುಖ್ಯಮಂತ್ರಿ ಯೋಗಿ ಕಳೆದ ಜನವರಿಯಲ್ಲಿ ಬಹಿರಂಗ ಸಭೆಯೊಂದರಲ್ಲಿ ಗರ್ಜಿಸಿದ್ದರು. ‘ಯಾರದೇ ಬದುಕಿನ ಜೊತೆ ಆಟ ಆಡುವ ದುಷ್ಟರ ಬದುಕನ್ನು ಹಾಳು ಮಾಡಲಾಗುವುದು’ ಎಂಬುದು ಅವರ ಮಾತಿನ ಅರ್ಥ.

ಪ್ರತಿಕ್ರಿಯಿಸಿ (+)