ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2015ರಲ್ಲಿ ಸರಿಯಿದ್ದ ಇವಿಎಂ ಈಗ ಹಾಳಾಯಿತೇ?!

Last Updated 18 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ ನಂತರ ಎಲೆಕ್ಟ್ರಾನಿಕ್‌ ಮತ ಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆ ಬಗ್ಗೆ ಸೋನಿಯಾ ಗಾಂಧಿ, ಮಾಯಾವತಿ, ಅರವಿಂದ ಕೇಜ್ರಿವಾಲ್ ಸೇರಿದಂತೆ ಕೆಲವು ರಾಜಕೀಯ ಮುಖಂಡರು ಸೃಷ್ಟಿಸಿರುವ ವಿವಾದ ಈ ಯಂತ್ರಗಳು ನಿಜಕ್ಕೂ ಸುರಕ್ಷಿತವೇ, ಅವುಗಳಲ್ಲಿ ಸಂಗ್ರಹವಾಗುವ ಮಾಹಿತಿಯನ್ನು ಬದಲಾಯಿಸಲು ಆಗದೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಅನುಮಾನಗಳು, ದೂಷಣೆಗಳು ಹೊಸತೇನೂ ಅಲ್ಲ. ಇವಿಎಂಗಳ ಕುರಿತು ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ಪ್ರಶ್ನೆಗಳನ್ನು ಎತ್ತಿವೆ. ಆದರೆ ಈಚಿನ ವರ್ಷಗಳಲ್ಲಿ ಆದ ಕೆಲವು ಮಹತ್ವದ ಬೆಳವಣಿಗೆಗಳು ಇವಿಎಂಗಳನ್ನು ವಿರೋಧಿಸುವವರ ವಾದಗಳನ್ನು ದುರ್ಬಲಗೊಳಿಸಿವೆ.

ಇವಿಎಂಗಳ ವಿಶ್ವಾಸಾರ್ಹತೆ ಹಾಗೂ ಕಾರ್ಯಕ್ಷಮತೆಗೆ ಗಂಭೀರ ಸವಾಲು ಎದುರಾಗದಂತೆ ಅವುಗಳನ್ನು ರಾಷ್ಟ್ರೀಯ ಚುನಾವಣೆಗಳಲ್ಲಿ ಹಲವು ಬಾರಿ ಬಳಸಿರುವುದು; ಇವಿಎಂಗಳ ಬಳಕೆ ಆರಂಭವಾದ ನಂತರ ಮತಗಟ್ಟೆ ವಶಪಡಿಸಿಕೊಳ್ಳುವ ಪ್ರವೃತ್ತಿ ಅಂತ್ಯವಾಗಿದ್ದು; ಮತಪತ್ರಗಳ ಬಳಕೆಯನ್ನು ಪುನರಾರಂಭಿಸಬೇಕು ಎಂಬ ವಾದವನ್ನು ನ್ಯಾಯಾಂಗ ಬೆಂಬಲಿಸದೆ, ಇವಿಎಂ ಕುರಿತ ವಿವಾದಗಳಿಗೆ ಅಂತ್ಯ ಹಾಡಲು ಮತ ದೃಢೀಕರಣ ರಸೀದಿ ಯಂತ್ರ (ವಿವಿಪಿಎಟಿ) ಬಳಕೆಗೆ ಒತ್ತು ನೀಡಿದ್ದು; ರಾಷ್ಟ್ರೀಯ ಚುನಾವಣೆಯಲ್ಲಿ ವಿವಿಪಿಎಟಿ ಯಂತ್ರಗಳ ಬಳಕೆಯನ್ನು ಆದಷ್ಟು ಬೇಗ ಜಾರಿಗೆ ತರಲು ಚುನಾವಣಾ ಆಯೋಗ ಬದ್ಧವಾಗಿರುವುದು; ಇವಿಎಂಗಳ ಕಾರ್ಯಕ್ಷಮತೆ ವಿಚಾರದಲ್ಲಿ ರಾಜಕೀಯ ಪಕ್ಷಗಳಲ್ಲಿ ಒಮ್ಮತ ಇಲ್ಲದಿರುವುದು ಈ ಬೆಳವಣಿಗೆಗಳಲ್ಲಿ ಕೆಲವು.

ಇವಿಎಂಗಳಿಗೆ ಸಂಬಂಧಿಸಿದ ಗಂಭೀರ ವಿಚಾರಗಳನ್ನು ಪರಿಶೀಲಿಸುವ ಮೊದಲು, 2015ರ ಫೆಬ್ರುವರಿಯಲ್ಲಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆದ ನಂತರ ಇವಿಎಂಗಳ ಬಳಕೆ ಬಗ್ಗೆ ಗದ್ದಲ ಏಕೆ ಉಂಟಾಗಲಿಲ್ಲ ಎಂಬುದನ್ನು ಕೂಡ ಗಮನಿಸಬೇಕು. ಆ ಚುನಾವಣೆಯಲ್ಲಿ ಕೇಜ್ರಿವಾಲ್ ಅವರ ಆಮ್‌ ಆದ್ಮಿ ಪಕ್ಷವು 70ರಲ್ಲಿ 67 ಕ್ಷೇತ್ರಗಳನ್ನು ಗೆದ್ದುಕೊಂಡಿತು. ಇನ್ನುಳಿದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಕೇಜ್ರಿವಾಲ್ ಅವರ ಪಕ್ಷ ಶೇಕಡ 54.34ರಷ್ಟು ಮತಗಳನ್ನು ಪಡೆದು, ಶೇಕಡ 95.71ರಷ್ಟು ಸ್ಥಾನಗಳನ್ನು ಗೆದ್ದುಕೊಂಡಿತು. ಆದರೆ ಬಿಜೆಪಿಯು ಶೇಕಡ 32.19ರಷ್ಟು ಮತಗಳನ್ನು ಪಡೆದೂ ಶೇಕಡ 4ರಷ್ಟು ಸ್ಥಾನಗಳನ್ನು ಮಾತ್ರ ಪಡೆಯಿತು. ಮತ ಗಳಿಕೆ ಪ್ರಮಾಣ ಹಾಗೂ ಸ್ಥಾನ ಗಳಿಕೆ ನಡುವೆ ಸಂಬಂಧ ಇಲ್ಲ ಎಂಬುದನ್ನು ಇದು ತೋರಿಸಿತು. ಈ ಫಲಿತಾಂಶದ ನಂತರ ಇವಿಎಂಗಳ ಬಗ್ಗೆ ಪ್ರತಿಭಟನೆ ನಡೆಯಬೇಕಿತ್ತು. ಏಕೆಂದರೆ, ಇಂತಹ ಏಕಮುಖ ಫಲಿತಾಂಶಗಳು ಬರುವುದು ತೀರಾ ಕಡಿಮೆ. ವಿಚಿತ್ರವೆಂದರೆ, ಆ ಸಂದರ್ಭದಲ್ಲಿ ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನಿಸುವವರು ಯಾರೂ ಇರಲಿಲ್ಲ! 2015ರ ದೆಹಲಿ ಚುನಾವಣೆಯಲ್ಲಿ ಯಾವ ಸಮಸ್ಯೆಯೂ ಇರಲಿಲ್ಲ ಎಂದು ಭಾವಿಸಿದ್ದವರು 2017ರ ಉತ್ತರಪ್ರದೇಶ ಚುನಾವಣೆ ವಿಚಾರದಲ್ಲಿ ಮಂಡಿಸುವ ವಾದ ದುರ್ಬಲವಾಗಿ ಕಾಣುತ್ತದೆ.

ಇವಿಎಂ ವಿಚಾರದಲ್ಲಿ ರಾಜಕೀಯ ಪಕ್ಷಗಳ ನಡುವೆ ವಿಭಿನ್ನ ಅಭಿಪ್ರಾಯ ಇರುವುದು ಇನ್ನೊಂದು ಸಂಗತಿ. ರಾಷ್ಟ್ರಪತಿಯವರನ್ನು ಈಚೆಗೆ ಭೇಟಿ ಮಾಡಿದ ನಿಯೋಗದ ನೇತೃತ್ವ ವಹಿಸಿದ್ದ ಸೋನಿಯಾ ಗಾಂಧಿ, ಇವಿಎಂಗಳ ಬಳಕೆ ವಿರೋಧಿಸಿ ಮನವಿ ಸಲ್ಲಿಸಿದರು. ಆದರೆ, ಅವರದೇ ಪಕ್ಷಕ್ಕೆ ಸೇರಿರುವ, ಪಂಜಾಬ್ ಮುಖ್ಯಮಂತ್ರಿ ಇವಿಎಂಗಳನ್ನು ಪ್ರಶಂಸಿಸಿದ್ದಾರೆ. ‘ಇವಿಎಂಗಳಲ್ಲಿ ಸಂಗ್ರಹವಾಗುವ ಮಾಹಿತಿ ಬದಲಿಸಬಹುದು ಎಂದಾಗಿದ್ದರೆ, ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುತ್ತಿರಲಿಲ್ಲ’ ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವಿಎಂಗಳ ಬಗ್ಗೆ ತಮಗೆ ತಕರಾರು ಇಲ್ಲ ಎಂದು ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಗಳಲ್ಲಿ ತಮ್ಮ ಪಕ್ಷ ಗೆಲುವು ಸಾಧಿಸಿದ ನಂತರ ಹೇಳಿದ್ದಾರೆ. ಈ ಯಂತ್ರಗಳ ಬಗ್ಗೆ ವಿವಾದ ಸೃಷ್ಟಿಸುವ ಅಗತ್ಯ ಇಲ್ಲ ಎಂಬ ಅಭಿಪ್ರಾಯವನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರೂ ವ್ಯಕ್ತಪಡಿಸಿದ್ದಾರೆ.

ಚುನಾವಣೆಗಳಲ್ಲಿ ವ್ಯಾಪಕವಾಗಿದ್ದ ಮತಗಟ್ಟೆ ವಶಪಡಿಸಿಕೊಳ್ಳುವ ವಿದ್ಯಮಾನಗಳು, ಮತಪತ್ರಗಳನ್ನು ಹಾಳುಮಾಡುವುದು ಮತ್ತು ಹಿಂಸಾಚಾರವನ್ನು ಗಮನಿಸಿದ ಚುನಾವಣಾ ಆಯೋಗವು ಮತದಾನ ಪ್ರಕ್ರಿಯೆಯನ್ನು ಇನ್ನಷ್ಟು ಪರಿಣಾಮಕಾರಿ ಆಗಿಸಲು ಇವಿಎಂಗಳನ್ನು ಬಳಸುವ ಆಲೋಚನೆಯನ್ನು 1980ರಲ್ಲೇ ಮಾಡಿತ್ತು. ಕೇಂದ್ರ ಚುನಾವಣಾ ಆಯೋಗವು ಈ ಕ್ರಾಂತಿಕಾರಿ ಕ್ರಮದ ಬಗ್ಗೆ ಮೊದಲು ಆಲೋಚನೆ ಮಾಡಿದ್ದು ಎಸ್.ಎಲ್. ಶಕ್ದರ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗ, ಕೆ. ಗಣೇಶನ್ ಅವರು ಆಯೋಗದ ಕಾರ್ಯದರ್ಶಿ ಆಗಿದ್ದಾಗ. ಇವರಿಬ್ಬರೂ 1992ರಲ್ಲಿ ಕೇರಳದ ಪರೂರ್‌ ವಿಧಾನಸಭಾ ಕ್ಷೇತ್ರದ ಕೆಲವು ಮತಗಟ್ಟೆಗಳಲ್ಲಿ ಇವಿಎಂಗಳನ್ನು ಬಳಸಿದರು. ಆದರೆ, ಮತಯಂತ್ರಗಳ ಬಳಕೆಗೆ ಅನುವು ಮಾಡಿಕೊಡುವಂತೆ ಕಾನೂನು ತಿದ್ದುಪಡಿ ಮಾಡಿದ್ದು 1989ರ ಮಾರ್ಚ್‌ನಲ್ಲಿ.

ಇವಿಎಂಗಳಲ್ಲಿ ಸಂಗ್ರಹವಾಗುವ ದಾಖಲೆಗಳನ್ನು ತಿರುಚಬಹುದು ಎಂಬ ಆರೋಪಗಳ ಹಾಗೂ ವಿವಾದಗಳ ನಂತರ ಚುನಾವಣಾ ಆಯೋಗವು, ವಿವಿಪಿಎಟಿ ಬಳಕೆಗೆ 2010ರಲ್ಲಿ ತಾತ್ವಿಕ ಒಪ್ಪಿಗೆ ನೀಡಿತು. ವಿವಿಪಿಎಟಿ ಯಂತ್ರವು ಮತದಾರ ಯಾವ ಅಭ್ಯರ್ಥಿಗೆ ಮತ ಚಲಾಯಿಸಿದ್ದಾನೋ ಆ ಅಭ್ಯರ್ಥಿಯ ಪಕ್ಷ ಹಾಗೂ ಅದರ ಚಿಹ್ನೆ ಇರುವ ರಸೀದಿಯೊಂದನ್ನು ನೀಡುತ್ತದೆ. ಮತದಾರ ಚಲಾಯಿಸಿದ ಮತ ಕೂಡ ಯಂತ್ರದಲ್ಲಿ ದಾಖಲಾಗಿರುತ್ತದೆ. ಯಂತ್ರವು ನೀಡುವ ರಸೀದಿಯನ್ನು ಮತದಾರ ಏಳು ಸೆಕೆಂಡ್‌ಗಳವರೆಗೆ ನೋಡಬಹುದು. ತಾನು ಚಲಾಯಿಸಿದ ಮತ ತನ್ನಿಷ್ಟದ ಅಭ್ಯರ್ಥಿಗೇ ಹೋಗಿದೆಯೇ ಎಂಬುದನ್ನು ಆತ ಆಗ ನೋಡಿಕೊಳ್ಳಬಹುದು. ಮತ ಎಣಿಕೆ ವೇಳೆ ವಿವಾದ ಉಂಟಾದರೆ, ಮತಗಳನ್ನು ತಾಳೆ ಮಾಡುವ ಅವಕಾಶವನ್ನೂ ವಿವಿಪಿಎಟಿ ವ್ಯವಸ್ಥೆ ಕಲ್ಪಿಸುತ್ತದೆ.

ಇವಿಎಂಗಳ ಬಳಕೆಯನ್ನು ಪ್ರಶ್ನಿಸಿ ಹಲವು ಹೈಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಸಲಾಗಿದೆ, ಈಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ಕೂಡ ಇದನ್ನು ಪ್ರಶ್ನಿಸಲಾಗಿತ್ತು. ಆದರೆ ಇವಿಎಂಗಳಲ್ಲಿ ಸಂಗ್ರಹವಾಗುವ ದಾಖಲೆಗಳನ್ನು ಬದಲಾಯಿಸಬಹುದು ಎಂಬ ವಾದಗಳನ್ನು ನ್ಯಾಯಾಲಯಗಳು ಒಪ್ಪಿಲ್ಲ. ಬದಲಿಗೆ, ಹಲವು ಹೈಕೋರ್ಟ್‌ಗಳು ಇವಿಎಂ ಬಳಕೆಯನ್ನು ಪ್ರಶಂಸಿಸಿವೆ. ನ್ಯಾಯಾಲಯಗಳು ಹೇಳಿರುವ ಕೆಲವು ಮಾತುಗಳನ್ನು ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಉದಾಹರಣೆಗೆ ಕರ್ನಾಟಕ ಹೈಕೋರ್ಟ್‌ ಹೀಗೆ ಹೇಳಿದೆ: ‘ಇವಿಎಂಗಳನ್ನು ಅಭಿವೃದ್ಧಿಪಡಿಸಿರುವುದು ನಿಜಕ್ಕೂ ಮಹಾನ್ ಸಾಧನೆ ಎಂಬುದರಲ್ಲಿ ಅನುಮಾನ ಇಲ್ಲ. ಇದು ದೇಶದ ಹೆಮ್ಮೆಯೂ ಹೌದು’. ಈ ಯಂತ್ರಗಳಲ್ಲಿನ ಮಾಹಿತಿ ಬದಲಿಸಬಹುದು ಎಂಬ ವಾದವನ್ನು ಮದ್ರಾಸ್ ಹೈಕೋರ್ಟ್‌ ತಳ್ಳಿಹಾಕಿದೆ. ಇವಿಎಂಗಳನ್ನು ವೈಯಕ್ತಿಕ ಕೆಲಸಗಳಿಗೆ ಬಳಸುವ ಕಂಪ್ಯೂಟರ್‌ಗಳ ಜೊತೆ ಹೋಲಿಸಲು ಸಾಧ್ಯವಿಲ್ಲ ಎಂದು ಅದು ಹೇಳಿದೆ. ಕಂಪ್ಯೂಟರ್‌ ಹಾಗೂ ಇವಿಎಂಗಳ ಪ್ರೋಗ್ರಾಮಿಂಗ್ ನಡುವೆ ಸಾಮ್ಯತೆ ಇಲ್ಲ.

ಎಲ್ಲ ಬಗೆಯ ಅನುಮಾನಗಳಿಗೆ ಅಂತ್ಯ ಹಾಡಲು ವಿವಿಪಿಎಟಿ ವ್ಯವಸ್ಥೆ ಅಭಿವೃದ್ಧಿಪಡಿಸುವ ವಿಚಾರವಾಗಿ ರಾಜಕೀಯ ಪಕ್ಷಗಳ ಜೊತೆ ಸಮಾಲೋಚನೆ ನಡೆಸುವಂತೆ ಆಯೋಗಕ್ಕೆ ದೆಹಲಿ ಹೈಕೋರ್ಟ್‌ ಸೂಚಿಸಿದೆ.

ವಿವಿಪಿಎಟಿ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌, ಆಯೋಗಕ್ಕೆ ಆದೇಶಿಸಿದೆ. ಇದಕ್ಕೆ ಬೇಕಿರುವ ಹಣ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ವಿವಿಪಿಎಟಿ ವ್ಯವಸ್ಥೆ ಜಾರಿಗೆ ತರಲು ಆಯೋಗ ಉತ್ಸುಕವಾಗಿದೆ. ಈ ಉದ್ದೇಶಕ್ಕಾಗಿ
₹ 3,174 ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರವನ್ನು ಕೋರಿದೆ. ಹಣ ಬಿಡುಗಡೆ ಮಾಡಿದ 30 ತಿಂಗಳಲ್ಲಿ ಅಗತ್ಯ ಸಂಖ್ಯೆಯ ವಿವಿಪಿಎಟಿ ಯಂತ್ರಗಳನ್ನು ತಯಾರು ಮಾಡಬಹುದು ಎಂದು ಆಯೋಗ ಸುಪ್ರೀಂ ಕೋರ್ಟ್‌ಗೆ ಈಚೆಗೆ ತಿಳಿಸಿದೆ.

ಇವಿಎಂಗಳಲ್ಲಿ ಸಂಗ್ರಹವಾಗುವ ಮಾಹಿತಿ ಬದಲಿಸಲು ಆಗದು ಎಂದು ಆಯೋಗ ಮತ್ತೆ ಹೇಳಿದೆ. ಹಾಗೆಯೇ, ಸುಪ್ರೀಂ ಕೋರ್ಟ್‌ ಸೂಚನೆ ಆಧರಿಸಿ ಮತ ದೃಢೀಕರಣ ರಸೀದಿ ಯಂತ್ರ ಅಳವಡಿಕೆಗೆ ಹೆಜ್ಜೆ ಇರಿಸಿದೆ. ಈ ವರ್ಷದ ಫೆಬ್ರುವರಿ– ಮಾರ್ಚ್‌ನಲ್ಲಿ ಐದು ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಗಳ ಕೊನೆಯ ಹಂತದಲ್ಲಿ ಆಯೋಗವು 52 ಸಾವಿರ ವಿವಿಪಿಎಟಿ ಯಂತ್ರಗಳನ್ನು ಬಳಸಿತ್ತು. ಗೋವಾದ ಎಲ್ಲ ನಲವತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಪಿಎಟಿ ಬಳಸಲಾಗಿದೆ.
ನ್ಯಾಯಾಂಗ ನೀಡಿರುವ ಆದೇಶಗಳು ಹಾಗೂ ಇವಿಎಂಗಳು ವಿಶ್ವಾಸಾರ್ಹ ಎಂಬುದನ್ನು ಖಚಿತಪಡಿಸಲಿರುವ ವಿವಿಪಿಎಟಿ ಯಂತ್ರಗಳ ಬಳಕೆಗೆ ಆಯೋಗ ಮುಂದಡಿ ಇಟ್ಟಿರುವ ಕಾರಣ ಇವಿಎಂಗಳ ವಿರುದ್ಧದ ವಾದ ಕೊನೆಗೊಳ್ಳಬೇಕು. ಮತ ದೃಢೀಕರಣ ರಸೀದಿ ವ್ಯವಸ್ಥೆಯು ಇನ್ನಷ್ಟು ಪಾರದರ್ಶಕತೆಗೆ ಕಾರಣವಾಗಲಿದೆ. ಮತ ಎಣಿಕೆ ವೇಳೆ ವಿವಾದ ಉಂಟಾದರೆ, ಮತಗಳನ್ನು ತಾಳೆ ಮಾಡಲು ನೆರವಾಗುತ್ತದೆ.

ಮತಪತ್ರಗಳು ಹಾಗೂ ಮತಗಟ್ಟೆಗಳನ್ನು ವಶಪಡಿಸಿಕೊಳ್ಳುತ್ತಿದ್ದ ಕಾಲಕ್ಕೆ ನಾವು ಮರಳುವುದು ಬೇಡ.

(editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT