ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2018ರ ಚುನಾವಣೆಯ ಸುತ್ತ ಒಂದಷ್ಟು

Last Updated 6 ನವೆಂಬರ್ 2016, 19:30 IST
ಅಕ್ಷರ ಗಾತ್ರ

ನವೆಂಬರ್ 13ಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಸರಿಯಾಗಿ ಮೂರೂವರೆ ವರ್ಷಗಳು ತುಂಬುತ್ತವೆ. ಅಂದರೆ 2018ರ ಮೇ ತಿಂಗಳಲ್ಲಿ ನಡೆಯಲಿರುವ ಮುಂದಿನ ಚುನಾವಣೆಗೆ ಇನ್ನು ಉಳಿದಿರುವುದು ಕೇವಲ ಒಂದೂವರೆ ವರ್ಷ ಮಾತ್ರ.

ಇನ್ನೊಂದು ರೀತಿಯಲ್ಲಿ ನೋಡಿದರೆ, ಸಾಧನೆಯ ದೃಷ್ಟಿಯಿಂದ ಸರ್ಕಾರದ ಆಯುಷ್ಯ ಮುಗಿದೇಹೋಯಿತು. ಹೀಗೆ ಹೇಳಲು ಕಾರಣ ಇಷ್ಟೇ. ಒಂದು ಸರ್ಕಾರದ ಅವಧಿಯ ಐದನೇ ವರ್ಷ ಅಥವಾ ಕೊನೆಯ ವರ್ಷ ಹೇಗಿದ್ದರೂ ಚುನಾವಣೆಯ ವರ್ಷ. ಆ ವರ್ಷ ಅಭಿವೃದ್ಧಿಯ ದೃಷ್ಟಿಯಿಂದ ದೊಡ್ಡದೇನನ್ನೂ ನಿರೀಕ್ಷಿಸುವ ಹಾಗಿಲ್ಲ. ಎಂದಿನಂತೆ ಅವರಿಗೆ ಅಷ್ಟು, ಇವರಿಗೆ ಇಷ್ಟು ಎಂದು ಏನೋ ಒಂದಷ್ಟು ಹಂಚುವ ಕೆಲಸ ಅಷ್ಟೇ ಮಾಡಲು ಸಾಧ್ಯ.

ಚಾಲ್ತಿಯಲ್ಲಿರುವ ನಾಲ್ಕನೆಯ ವರ್ಷದಲ್ಲಿ ಇನ್ನು ಆರು ತಿಂಗಳು ಉಳಿದಿವೆ. ಈ ಅವಧಿಯಲ್ಲೂ ಹೆಚ್ಚಿನದ್ದೇನೂ ನಿರೀಕ್ಷಿಸುವ ಹಾಗಿಲ್ಲ. ಯಾಕೆಂದರೆ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ದೊಡ್ಡ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಸಮಯ ಬೇಕು. ಒಂದು ವೇಳೆ ಅಂತಹ ಯೋಜನೆಗಳನ್ನೇನಾದರೂ ಸರ್ಕಾರ ಈ ಹಂತದಲ್ಲಿ ಮಾಡುವುದಕ್ಕೆ ಹೊರಟರೂ ಅದು ಕೇವಲ ಘೋಷಣೆಯಾಗುತ್ತದೆ. ಅವುಗಳ ಅನುಷ್ಠಾನದ ಕುರಿತು ಭರವಸೆ ಹುಟ್ಟಲು ಬೇಕಾದಷ್ಟು ಸಮಯ ಉಳಿದಿಲ್ಲ.

ಉಳಿದ ಅವಧಿಯಲ್ಲಿ ಸರ್ಕಾರಕ್ಕೆ ಸ್ಪಷ್ಟವಾಗಿ ಮಾಡಲು ಉಳಿದಿರುವುದು ಒಂದೇ. ಅದು ಮುಂದಿನ ವರ್ಷದ ಆರಂಭದಲ್ಲಿ ಈ ಸರ್ಕಾರ ಮಂಡಿಸಲಿರುವ ಕೊನೆಯ ಪೂರ್ಣ ಪ್ರಮಾಣದ ಬಜೆಟ್. ಆದರೆ ಅದನ್ನು ಬಳಸಿಕೊಂಡು  ರಾಜ್ಯದ ಅಭಿವೃದ್ಧಿಯ ಗತಿ ಬದಲಿಸುವ ಅಥವಾ  ಸಾರ್ವಜನಿಕ ಅಭಿಪ್ರಾಯವನ್ನು ದೊಡ್ಡ ರೀತಿಯಲ್ಲಿ ತನ್ನ ಪರವಾಗಿ ರೂಪಿಸಿಕೊಳ್ಳುವಂಥದೇನನ್ನಾದರೂ ಸರ್ಕಾರ ಮಾಡಲು ಸಾಧ್ಯ ಅಂತ ಅನ್ನಿಸುವುದಿಲ್ಲ. ಅದಕ್ಕೇ ಹೇಳಿದ್ದು,  ಸಾಧನೆಯ ದೃಷ್ಟಿಯಿಂದ  ಸರ್ಕಾರದ ಆಯುಷ್ಯ ಮುಗಿದಿದೆ. ಈ ಹಂತದಲ್ಲಿ ಮುಂದೇನು ಎಂದು ಕೇಳುವುದಷ್ಟೇ ಉಳಿದಿದೆ.

ಮುಂದಿನ ಚುನಾವಣೆಯ ಸೋಲುಗೆಲುವಿನ ಲೆಕ್ಕಾಚಾರ ದೊಡ್ಡ ಪ್ರಮಾಣದಲ್ಲಿ ಇನ್ನೂ ಪ್ರಾರಂಭವಾಗಿಲ್ಲ. ಇಷ್ಟು ಬೇಗ ಆ ಲೆಕ್ಕಾಚಾರ ನಡೆಸುವುದರಲ್ಲಿ ಅರ್ಥವೂ ಇಲ್ಲ. ಆದರೆ ಒಂದಂತೂ ಸ್ಪಷ್ಟವಿದೆ. ಕಾಂಗ್ರೆಸ್ ಸರ್ಕಾರ ತನ್ನ ಸಾಧನೆಯ ಬಗ್ಗೆ ಯಾವ ಕಲ್ಪನೆಗಳನ್ನಾದರೂ ಇರಿಸಿಕೊಂಡಿರಲಿ. ಅದು ಸಾಮಾಜಿಕ ಕ್ಷೇತ್ರಗಳಿಗೆ ನೀಡಿದ ಬರೋಬ್ಬರಿ ಕೊಡುಗೆಗಳ ಚುನಾವಣಾ ಪರಿಣಾಮಗಳ ಬಗ್ಗೆ ಎಂತಹ ರಮ್ಯ ನಿರೀಕ್ಷೆಗಳನ್ನಾದರೂ ಇಟ್ಟುಕೊಂಡಿರಲಿ.

ಸರ್ಕಾರದ ಸಾಧನೆಗಳು ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರುವಷ್ಟು ಅದರ ಪರವಾಗಿ ಜನಾಭಿಪ್ರಾಯ ಮೂಡಿಸಿವೆ ಎನ್ನುವ ಹಾಗಿಲ್ಲ. ಇನ್ನು ಬಿಜೆಪಿಯ ಕತೆಯೂ ಅಷ್ಟೇ. ಯಾವ ದೃಷ್ಟಿಯಿಂದ ನೋಡಿದರೂ ಅದು ತನ್ನ ಅಧಿಕಾರ ಅವಧಿಯ ಸಾಧನೆಗಳು ಕಾಂಗ್ರೆಸ್ ಸಾಧನೆಗಳಿಗಿಂತ ಮಿಗಿಲಾಗಿದ್ದವು ಎನ್ನುವ ಹಾಗಿಲ್ಲ.

ಈ ಸ್ಥಿತಿಯಲ್ಲಿ ಎರಡೂ ಪಕ್ಷಗಳೂ ಚುನಾವಣೆ ಎದುರಿಸಲು ಅರ್ಥಪೂರ್ಣವಾಗಿ ಮಾಡಬಹುದಾದ ಒಂದೇ ಒಂದು ಕೆಲಸ ಎಂದರೆ ಹಿಂದಿನದ್ದನ್ನು ಬಿಟ್ಟು ನಾಳೆಗಳ ಬಗ್ಗೆ ಮಾತನಾಡುವುದು. ಕರ್ನಾಟಕಕ್ಕೆ ತಮ್ಮ ಮುಂದಿನ ಯೋಚನೆ, ಯೋಜನೆಗಳೇನು ಎನ್ನುವುದರ ಬಗ್ಗೆ ಸ್ಪಷ್ಟವಾಗಿ ಜನರ ಮುಂದಿಡುವುದು. ಅಮೆರಿಕದಲ್ಲೀಗ ಚುನಾವಣೆ ನಡೆಯುತ್ತಿದೆ.

ಈ ಬಾರಿ ಅಲ್ಲಿನ ಚುನಾವಣಾ ಪ್ರಚಾರ ಅತ್ಯಂತ ನಿಕೃಷ್ಟ ಸ್ಥಿತಿ ತಲುಪಿ,  ಈರ್ವರು ಅಭ್ಯರ್ಥಿಗಳೂ ತೀರಾ ವೈಯಕ್ತಿಕ ಮಟ್ಟಕ್ಕಿಳಿದು ಪ್ರಚಾರ ನಡೆಸಿದರು, ವಿಭಜನೆಯ ರಾಜಕೀಯ ಮಾಡಿದರು ಎನ್ನುವ ಅಭಿಪ್ರಾಯವಿದೆ. ಆದರೆ ಇಷ್ಟೆಲ್ಲಾ ಆದರೂ ಆ ದೇಶದಲ್ಲಿ ಸುಮಾರು ಒಂದೂವರೆ ವರ್ಷದಿಂದ ನಡೆದ ಚುನಾವಣಾ ಸಂಬಂಧಿ ರಾಜಕೀಯ ಸಂವಹನವನ್ನು ನೋಡಿದರೆ ಸಿಗುವ ಚಿತ್ರಣವೇ ಬೇರೆ.

ಅಲ್ಲಿ ಅಧ್ಯಕ್ಷ ಸ್ಥಾನದ ಇಬ್ಬರು ಆಕಾಂಕ್ಷಿಗಳು ದೇಶದ ಮುಂದಿರುವ ಒಂದೊಂದು ಸವಾಲನ್ನು ಕೂಲಂಕಷವಾಗಿ ಅರ್ಥ ಮಾಡಿಕೊಂಡು ಜನರ ಮುಂದೆ ನಿಂತು ಮಾತನಾಡಬೇಕಾಯಿತು, ಪ್ರಶ್ನೆಗಳಿಗೆ ಉತ್ತರಿಸಬೇಕಾಯಿತು, ದೇಶಕ್ಕೆ ತಮ್ಮ ಕನಸೇನು, ಗುರಿಗಳೇನು ಎನ್ನುವುದನ್ನು ಸ್ಪಷ್ಟವಾಗಿ ಮತದಾರರಿಗೆ ತಲುಪಿಸಬೇಕಾಯಿತು. ಅದು ಅಮೆರಿಕ. ಇದು ಭಾರತ. ಅಲ್ಲಿಯದ್ದನ್ನೆಲ್ಲಾ ಇಲ್ಲಿ ನಿರೀಕ್ಷಿಸಬಾರದು ಎಂದು ಬೇಕಾದರೆ ಒಪ್ಪಿಕೊಳ್ಳೋಣ. ಆದರೆ ಅರ್ಥಪೂರ್ಣ ರಾಜಕೀಯ ಸಂವಹನವನ್ನು ಈಗ ನಾವು ಕಾಣುತ್ತಿರುವುದು ಅಮೆರಿಕನ್ ಚುನಾವಣೆಯಲ್ಲಿ ಮಾತ್ರವಲ್ಲ. ಭಾರತದಲ್ಲೂ ಒಂದು ಮಟ್ಟಿಗೆ ಪರಿಸ್ಥಿತಿ ಬದಲಾಗುತ್ತಿದೆ.

ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ಎರಡನೆಯ ಬಾರಿಗೆ, ಮೂರನೆಯ ಬಾರಿಗೆ, ಕೆಲವೊಮ್ಮೆ ನಾಲ್ಕನೆಯ ಬಾರಿಗೂ ಮರು ಆಯ್ಕೆಯಾಗುತ್ತಿದ್ದಾರೆ. ಅವರೆಲ್ಲ ಆಯಾ ರಾಜ್ಯದ ಜನರಲ್ಲಿ ಏನೋ ಭರವಸೆ ಮೂಡಿಸಿದ್ದಾರೆ. ಅವರ ಸಾಧನೆಗಳ ಬಗ್ಗೆ ಜನರಿಗೆ ನಂಬಿಕೆ ಬರುವಂತೆ ಏನೋ ಮಾಡಿದ್ದಾರೆ. ರಾಜ್ಯದ ಬಗ್ಗೆ ಅವರಿಗಿರುವ ಕನಸುಗಳನ್ನು ಜನರಿಗೆ ತಲುಪಿಸಿದ್ದಾರೆ. ಕರ್ನಾಟಕದಲ್ಲಿ ಪರಿಸ್ಥಿತಿ ತೀರಾ ಭಿನ್ನ. ರಾಜ್ಯ ಮುಖ್ಯಮಂತ್ರಿಗಳ ಮರು ಆಯ್ಕೆಯ ಇಂದಿನ ಸಂದರ್ಭದಲ್ಲೂ ಇಲ್ಲಿ ಅಧಿಕಾರಕ್ಕೆ ಬಂದ ಯಾರೂ ಮರು ಆಯ್ಕೆ ಬಿಡಿ, ಅವಧಿ ಪೂರೈಸುವುದರೊಳಗೆ ಜನರ ನಂಬಿಕೆ ಕಳೆದುಕೊಂಡು ಬಿಡುತ್ತಾರೆ. ಮುಂದೆಯೂ ಇದೇ ಸ್ಥಿತಿ ಮುಂದುವರಿಯುವ ಎಲ್ಲಾ ಸೂಚನೆಗಳಿವೆ. ಈವರೆಗಿನ ವಿದ್ಯಮಾನಗಳ ಬಗ್ಗೆ ಕಣ್ಣಾಯಿಸಿದರೆ ಸಾಕು, ಇದು ಸ್ಪಷ್ಟವಾಗುತ್ತದೆ..

ಕಾಂಗ್ರೆಸ್ ಸರ್ಕಾರವಾಗಲಿ, ಅದರ ಯಾರೊಬ್ಬ ಪ್ರತಿನಿಧಿಯಾಗಲಿ ಕರ್ನಾಟಕಕ್ಕೆ ಅವರ ಕನಸೇನು ಎಂದು ಯಾವತ್ತೂ ಆಡಿದ್ದಿಲ್ಲ, ಹೇಳಿದ್ದಿಲ್ಲ. ತಮ್ಮ ಆದ್ಯತೆಗಳೇನು, ಗುರಿಗಳೇನು ಎಂದು ಮಾನವರಿಕೆಯಾಗುವಂತೆ ಹೇಳಿದ್ದಿಲ್ಲ. ಮುಂದಿನ ಚುನಾವಣೆಯ ದೃಷ್ಟಿಯಿಂದ ಈಗಲೂ ಅವರು ಹಾಗೇನೂ ಹೇಳುತ್ತಿಲ್ಲ. ಒಂದು ವೇಳೆ ಹೇಳಿದ್ದರೂ ಅದರಲ್ಲಿ ಇರುವುದು ಕೇವಲ ಶಬ್ದಾಡ೦ಬರಗಳೇ  ಹೊರತು ಗಟ್ಟಿಯಾದ ಒಂದೇ ಒಂದು ಮಾತು ಇರುವುದಿಲ್ಲ.

ಇನ್ನೇನು ಅಧಿಕಾರಕ್ಕೆ ಬ೦ದೇ ಬಿಡುತ್ತೇವೆ ಎಂದು ಬೀಗುತ್ತಿರುವ ಬಿಜೆಪಿಯಾದರೂ ಇದನ್ನು ಹೇಳುತ್ತಿದೆಯೇ? ಕಳೆದ ಮೂರೂವರೆ ವರ್ಷಗಳಲ್ಲಿ ಸರ್ಕಾರದ ಒಂದೇ ಒಂದು ಅಭಿವೃದ್ಧಿ ನೀತಿಯ ಬಗ್ಗೆ ಬಿಜೆಪಿ ಗಟ್ಟಿಯಾಗಿ, ಸ್ಪಷ್ಟವಾಗಿ ಏನನ್ನೂ ಹೇಳಿದ್ದು ಕೇಳಿಸಲಿಲ್ಲ. ಹೇಳಿದ್ದರೂ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದದ್ದಿಲ್ಲ. ಬದಲಿಗೆ ಆ ಪಕ್ಷ ಮತ್ತೆ ಮತ್ತೆ ಸದ್ದು ಮಾಡುತ್ತಿರುವುದು ಸಾವುಗಳ ಸುತ್ತ. ಇನ್ನೊಂದು  ಹೆಣ ಎಲ್ಲಿ ಯಾವ ರೂಪದಲ್ಲಿ ಬೀಳಲಿದೆ ಮತ್ತು ಅದರ ಸುತ್ತ ಏನೇನು ಮಾತನಾಡಿ ಜನರ ಭಾವನೆಗಳನ್ನು ಕೆರಳಿಸಬಹುದು ಎಂದು ಹೊಂಚು ಹಾಕಿ ಕಾಯುವುದೇ ಅದರ ಚುನಾವಣಾ ತಂತ್ರದ ದೊಡ್ಡ ಭಾಗವಾಗಿರುವಂತೆ ಕಾಣುತ್ತದೆ.

ಪರಿಸ್ಥಿತಿ ಹೇಗಿದೆ ಎಂದರೆ, ನಾಳಿನ ಕರ್ನಾಟಕ ಹೇಗಿರಬೇಕು, ಅದಕ್ಕಾಗಿ ಏನು ಮಾಡಬೇಕು ಎನ್ನುವುದರ ಕುರಿತು ಎರಡೂ ಪಕ್ಷಗಳ ಯೋಚನೆ ಮತ್ತು ಯೋಜನೆ ಶೂನ್ಯ. ಆದರೆ ಏನೇನು ಮಾಡಬಾರದಾಗಿತ್ತೋ ಅವುಗಳನ್ನು ಮಾಡುವುದರಲ್ಲಿ ಎರಡೂ ಪಕ್ಷಗಳ ನಡುವೆ ಒಂದು ರೀತಿಯ ಅಪೂರ್ವ ಮತ್ತು ಅಗೋಚರ ಹೊಂದಾಣಿಕೆ, ಸಹಕಾರ ಮತ್ತು ಸಹಭಾಗಿತ್ವ ಎದ್ದು ಕಾಣುತ್ತದೆ. ಇದು ಹೇಗೆ ಎಂದು ತಿಳಿಯಬೇಕಾದರೆ ಕಾಂಗ್ರೆಸ್ ಸರ್ಕಾರ ಕೈಗೊಂಡ ಮೂರು ಪ್ರಮುಖ ಅಪ್ರಿಯ ನಿರ್ಧಾರಗಳಲ್ಲಿ ಬಿಜೆಪಿ ವಹಿಸಿದ ಪಾತ್ರವನ್ನು ಪರಿಶೀಲಿಸಬೇಕು.

ಲೋಕಾಯುಕ್ತವನ್ನು ವಿಭಜಿಸಿ ನಿಸ್ತೇಜಗೊಳಿಸಿದ್ದು ಕಾಂಗ್ರೆಸ್ ಸರ್ಕಾರ ಕೈಗೊಂಡ ಅತ್ಯಂತ ಅಪ್ರಿಯ ನಿರ್ಧಾರ. ಇದರ ಪರ–ವಿರೋಧ ಹಲವು ವಾದಗಳನ್ನು ಮಂಡಿಸಬಹುದು. ಕರ್ನಾಟಕ ಉಳಿದ ರಾಜ್ಯಗಳಿಗಿಂತ ಭಿನ್ನವಾಗಿ ಏನೂ ಮಾಡಿಲ್ಲ. ಎಲ್ಲಾ ಕಡೆ ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಬೇರೆ ಬೇರೆಯಾಗಿಯೇ ಇವೆ ಎಂದು ಸರ್ಕಾರವನ್ನು ಸಮರ್ಥಿಸಿಕೊಳ್ಳಬಹುದು. ಅಥವಾ ಒಂದು ಅತ್ಯಂತ ಶಕ್ತಿಯುತ ಲೋಕಾಯುಕ್ತ ಸಂಸ್ಥೆ ಪ್ರಜಾತಂತ್ರಕ್ಕೆ ಸರಿ ಹೊಂದುವುದಿಲ್ಲ ಎನ್ನಬಹುದು. ಈ ವಾದಗಳೆಲ್ಲಾ ಸರಿ. ಆದರೆ ಕಾಂಗ್ರೆಸ್ ಸರ್ಕಾರ ಲೋಕಾಯುಕ್ತವನ್ನು ಮುರಿದು ಕಟ್ಟಿದ್ದು ಇಂತಹ ಉದಾತ್ತ ಪ್ರಜಾತಾಂತ್ರಿಕ ಕಾರಣಕ್ಕಲ್ಲ. ಅಲ್ಲೇನೋ ಗಹನವಾದದ್ದು ಇತ್ತು ಎನ್ನುವುದನ್ನು ಯಾರಾದರೂ ಊಹಿಸಲು ಸಾಧ್ಯ.

ಏನೇ ಇರಲಿ, ಕಾಂಗ್ರೆಸ್ ಇದನ್ನು ಮಾಡಿತು ಮತ್ತು ಆ ಕಾರಣಕ್ಕೆ ದೊಡ್ಡ ಸಂಖ್ಯೆಯ ಜನರ ಕೋಪಕ್ಕೆ ತುತ್ತಾಯಿತು. ಅದರ ಪರಿಣಾಮವನ್ನು ಎದುರಿಸುವುದು ಅದು ಆ ಪಕ್ಷದ ಹಣೆಬರಹ. ಇಲ್ಲಿ ಮುಖ್ಯವಾಗಿರುವುದು ಬಿಜೆಪಿ ಈ ವಿಚಾರದಲ್ಲಿ ಹೇಗೆ ನಡೆದುಕೊಂಡಿತು ಎಂಬುದು. ಮೇಲ್ನೋಟಕ್ಕೆ  ಅದು ಸದನದ ಒಳಗೆ, ಹೊರಗೆ ಪ್ರತಿಭಟಿಸಿದಂತೆ ಮಾಡಿತು. ನಂತರ ‘ಸರ್ಕಾರದ ನಿರ್ಧಾರ, ನಾವೇನೂ ಮಾಡುವಂತಿಲ್ಲ’ ಎಂದು ಸುಮ್ಮನಾಯಿತು. ಆದರೆ ಒಂದು ವೇಳೆ ತಾನು ಏನಾದರೂ ಅಧಿಕಾರಕ್ಕೆ ಬಂದರೆ  ಲೋಕಾಯುಕ್ತವನ್ನು ಮತ್ತೆ ಮೊದಲ ಸ್ಥಿತಿಗೆ ತರುತ್ತೇನೆ ಎಂದು ಗಟ್ಟಿಯಾಗಿ, ಮನಃಪೂರ್ವಕವಾಗಿ ಹೇಳಿಲ್ಲ. ಬರಬರುತ್ತಾ ಆ ವಿಚಾರದ ಪ್ರಸ್ತಾಪವೇ ಇಲ್ಲ.

ಕಾಂಗ್ರೆಸ್ ಸರ್ಕಾರದ ಎರಡನೆಯ ಅಪ್ರಿಯ ನಿರ್ಧಾರ ಕರ್ನಾಟಕ ಲೋಕ ಸೇವಾ ಆಯೋಗವನ್ನು (ಕೆಪಿಎಸ್‌ಸಿ)  ಅಧೋಗತಿಗಿಳಿಸಿದ್ದು. ಇದರ ಕೊನೆಯ ಅಸ್ತ್ರವಾಗಿ ಎಲ್ಲ ವಿವಾದಗಳಿಂದ ಹೊರಗುಳಿದೂ ವಿವಾದಾಸ್ಪದರಾದ ವ್ಯಕ್ತಿಯೊಬ್ಬರನ್ನು ಆಯೋಗಕ್ಕೆ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಸರ್ಕಾರ ನೇಮಿಸಿತು. ಆ ಸಂಸ್ಥೆಯ ಬಗ್ಗೆ ಕಾಳಜಿ ಇರುವ ಎಲ್ಲರನ್ನೂ ಸರ್ಕಾರದ ನಿರ್ಧಾರ ಕಂಗೆಡಿಸಿತು. ಬಿಜೆಪಿ, ಆರಂಭದಲ್ಲಿ ಸ್ವಲ್ಪ ಹಾ, ಹೂ ಎಂದಿತು. ಕೊನೆಗೆ ತಮ್ಮದೇ ಪಕ್ಷ ನೇಮಿಸಿದ ರಾಜ್ಯಪಾಲರು ಆ ನೇಮಕಕ್ಕೆ ಸಹಿ ಮಾಡಿದಾಗ ನಿದ್ದೆ ಬಂದಂತೆ ನಟಿಸಿತು. ಈಗ ಕಾಂಗ್ರೆಸ್ ಸರ್ಕಾರದ ಇನ್ನೊಂದು ಅಪ್ರಿಯ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ. ಅದು ವಿಮಾನ ನಿಲ್ದಾಣ ರಸ್ತೆಯಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಮಾಡುವ ವಿಚಾರ. ಬಿಜೆಪಿ ಇದನ್ನು ವಿರೋಧಿಸುತ್ತಿದೆ. ಆದರೆ ಒಂದು ವೇಳೆ ಇನ್ನೂ ಒಂದೂವರೆ ವರ್ಷ ಈ ಯೋಜನೆಯ ಪ್ರಾರಂಭ ತಡವಾಗಿ ಬಿಟ್ಟು, ಆ ಮೇಲೆ ತಾನೇನಾದರೂ ಅಧಿಕಾರಕ್ಕೆ ಬಂದರೆ ಅದನ್ನು ನಿಲ್ಲಿಸುತ್ತೇವೆ ಎಂದು ಬಿಜೆಪಿ ಹೇಳುವುದಿಲ್ಲ.

ಒಂದು ರೀತಿಯಲ್ಲಿ ಈ ಮೂರು ನಿರ್ಧಾರಗಳೂ ಬಿಜೆಪಿ ಮತ್ತು ಕಾಂಗ್ರೆಸ್ಸಿನ ಜಂಟಿ ಯೋಜನೆಗಳು. ಲೋಕಾಯುಕ್ತ ಎಂಬ ಸಂಸ್ಥೆಯನ್ನು ನಾಶಗೊಳಿಸುವ  ಯೋಜನೆಗೆ ಬಿಜೆಪಿಯ ಕಾಲದಲ್ಲೇ ಅಡಿಪಾಯ ಹಾಕಲಾಗಿತ್ತು. ಬಿಜೆಪಿ ಅಧಿಕಾರದಲ್ಲಿದ್ದಾಗ ಆ ಪಕ್ಷದ ನಾಯಕರು ಅಂದಿನ ಲೋಕಾಯುಕ್ತರನ್ನು ಬೀದಿಬೀದಿಯಲ್ಲಿ ನಿಂತು ಜರೆಯುವ ಕೆಲಸ ಮಾಡಿದ್ದರು. ಆನಂತರ ಯಾವ ದೃಷ್ಟಿಯಿಂದ ನೋಡಿದರೂ ಆ ಹುದ್ದೆಗೆ ಅರ್ಹರಲ್ಲದ ಒಬ್ಬರನ್ನು ಎಲ್ಲರ ವಿರೋಧದ ನಡುವೆಯೇ ತಂದು ಅಲ್ಲಿ ಪ್ರತಿಷ್ಠಾಪಿಸಿದರು. ಬಿಜೆಪಿ ಆರಂಭಿಸಿದ ಯೋಜನೆಯನ್ನು ಕಾಂಗ್ರೆಸ್ ಮುಂದುವರಿಸಿ ಆ ಸಂಸ್ಥೆಯನ್ನು ಸಂಪೂರ್ಣ ವಿರೂಪಗೊಳಿಸಿತು. ಕರ್ನಾಟಕ ಲೋಕ ಸೇವಾ ಆಯೋಗದ ವಿಚಾರದಲ್ಲೂ ಅಷ್ಟೇ.

ಆ ಸಂಸ್ಥೆಗೆ ನೇಮಿಸಬಾರದವರನ್ನೆಲ್ಲ ನೇಮಿಸಿ ಅವರ ಮೂಲಕ ಮಾಡಬಾರದನ್ನೆಲ್ಲ ಮಾಡಿಸಿಕೊಳ್ಳುವ ಮೂಲಕ ಬಿಜೆಪಿ ಪ್ರಾರಂಭಿಸಿದ ಯಜ್ಞಕ್ಕೆ ಕಾಂಗ್ರೆಸ್ ತುಪ್ಪ ಸುರಿಯಿತು. ಈಗ ಕಾಂಗ್ರೆಸ್ ಕೆಪಿಎಸ್‌ಸಿಗೆ ಮಾಡಿದ ಮುಖ್ಯಸ್ಥರ ನೇಮಕ ಹೇಗಿದೆ ಎಂದರೆ ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ ಕೆಪಿಎಸ್‌ಸಿ ಮೂಲಕ ಆ ಪಕ್ಷ ಪರಮಾವಧಿ ಪ್ರಯೋಜನ ಪಡೆಯಬಹುದಾದಂತೆ ವೇದಿಕೆ ಸಿದ್ಧವಾಗಿದೆ. ಉಕ್ಕಿನ ಸೇತುವೆಯೂ ಹಾಗೆಯೆ. ಈ ಯೋಜನೆಯ ಬೀಜ ಬಿತ್ತಿದ್ದು ಬಿಜೆಪಿ. ವಾಸ್ತವದಲ್ಲಿ ಎಲ್ಲಾ ಬಿಜೆಪಿ ನಾಯಕರೂ ಅದನ್ನು ನಿಜಕ್ಕೂ ವಿರೋಧಿಸುತ್ತಿದ್ದಾರೆಯೇ  ಎನ್ನುವುದರ ಬಗ್ಗೆ ಈಗಲೂ ಸ್ಪಷ್ಟವಿಲ್ಲ. ಒಬ್ಬರಂತೂ ಜನರಿಗೆ ತಿಳಿಹೇಳಿದ ನಂತರ ಯೋಜನೆ ಮುಂದುವರಿಸಬಹುದು ಎನ್ನುವ ಅರ್ಥದಲ್ಲಿ ಮಾತನಾಡುತ್ತಿದ್ದಾರೆ.

ಕರ್ನಾಟಕದಲ್ಲಿ ನಾವೀಗ ಕಾಣುತ್ತಿರುವುದು ಕಾಂಗ್ರೆಸ್-ಬಿಜೆಪಿಗಳ ನಡುವಣ ಅಪೂರ್ವ ಜೋಡಾಟವನ್ನು. ಹಲವು ದೃಷ್ಟಿಯಲ್ಲಿ ಕಾಂಗ್ರೆಸ್ ಸರ್ಕಾರ ಬಿಜೆಪಿ ಆಡಳಿತವನ್ನು ಮುಂದುವರಿಸಿದೆ. ಕಾಂಗ್ರೆಸ್ ಮಾಡಿದ್ದನ್ನು ಮುಂದುವರಿಸುವ ಸೂಚನೆಗಳನ್ನು ಬಿಜೆಪಿ ನೀಡುತ್ತಿದೆ. ಸದ್ಯ ಕಾಂಗ್ರೆಸ್ಸಿಗೂ ಬಿಜೆಪಿಗೂ ಕರ್ನಾಟಕದಲ್ಲಿ ಏನಾದರೂ ವ್ಯತ್ಯಾಸ, ಭಿನ್ನಾಭಿಪ್ರಾಯ ಇದ್ದರೆ ಅದು ಟಿಪ್ಪು ಜಯಂತಿ ಆಚರಿಸಬೇಕೇ ಬೇಡವೇ ಎನ್ನುವಂತಹ ‘ಗಹನ’ವಾದ ವಿಚಾರಗಳಲ್ಲಿ ಮಾತ್ರ. ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷವಾದರೂ ಬರಲಿ ಕರ್ನಾಟಕದ ನಾಳೆಗಳು ಹೇಗಿರುತ್ತವೆ ಎಂದು ಊಹಿಸುವುದಕ್ಕೆ ಇಷ್ಟು ಸಾಲದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT