ಸೋಮವಾರ, ಮಾರ್ಚ್ 8, 2021
19 °C

300 ದಾಟಿದ ಹಂಸಲೇಖ

ಗಂಗಾಧರ ಮೊದಲಿಯಾರ್ Updated:

ಅಕ್ಷರ ಗಾತ್ರ : | |

300 ದಾಟಿದ ಹಂಸಲೇಖ

ಸಚಿನ್ ತೆಂಡೂಲ್ಕರ್ ಶತಕಗಳ ಶತಕ ಬಾರಿಸಿದಾಗ ಇನ್ನಿಲ್ಲದಂತೆ ಸುದ್ದಿಗಳು ಸಿಡಿದವು. ಕರ್ನಾಟಕದಲ್ಲೂ ಅಭಿಮಾನಿಗಳು ಕುಣಿದಾಡಿದರು. ಆದರೆ ನಮ್ಮ ಹಂಸಲೇಖ ಚಿತ್ರರಂಗದಲ್ಲಿ ಮೂರು ಶತಕ ಮುಗಿಸಿ ಮುನ್ನಡೆದಿರುವುದು ಸಂಭ್ರಮವೇ ಆಗಲಿಲ್ಲ.ಎರಡು ವಾರದ ಹಿಂದೆ ಬಿಡುಗಡೆಯಾದ `ನರಸಿಂಹ~ ಹಂಸಲೇಖ ಸಂಗೀತ ನಿರ್ದೇಶನದ 301ನೇ ಚಿತ್ರ. ಕನ್ನಡದಲ್ಲಿ ಯಾವ ಸಂಗೀತ ನಿರ್ದೇಶಕರಿಂದಲೂ ಈ ಸಾಧನೆ ಆಗಿಲ್ಲ. ಅದಕ್ಕಾಗಿ ಹಂಸಲೇಖ ಅವರನ್ನು ಅಭಿನಂದಿಸಲು ಇದು ಸಕಾಲ.`ನರಸಿಂಹ~ ಚಿತ್ರದ ಮೂಲಕ ಮೂರು ದಾಖಲೆಗಳು ಚಿತ್ರರಂಗದ ಇತಿಹಾಸದಲ್ಲಿ ಬೆಸೆದುಕೊಳ್ಳುತ್ತವೆ. ಹಂಸಲೇಖ ಅವರ 301ನೇ ಚಿತ್ರ ಎನ್ನುವುದು ಒಂದು ಅಂಶವಾದರೆ, ಅವರು ಚಿತ್ರರಂಗ ಪ್ರವೇಶಿಸಿ 25 ವರ್ಷವಾಯಿತು ಎನ್ನುವುದು ಮತ್ತೊಂದು ಅಂಶ.ಪ್ರೇಮಲೋಕದ ಮೂಲಕ (1987) ಪೂರ್ಣಪ್ರಮಾಣದ ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿ, ಚಿತ್ರರಂಗಕ್ಕೆ ಹೊಸ ಟ್ರೆಂಡ್ ಸೃಷ್ಟಿಸಿದ್ದು ಹಂಸಲೇಖ ವೈಶಿಷ್ಟ್ಯ.ರವಿಚಂದ್ರನ್ ಹಾಗೂ ಹಂಸಲೇಖ ಜೋಡಿ ಹನ್ನೆರೆಡು ವರ್ಷಗಳ ಕಾಲ ಸತತವಾಗಿ ಅವಿರತ ಶ್ರಮಿಸಿ ಕನ್ನಡ ಚಿತ್ರರಂಗಕ್ಕೆ ಯುವ ಸ್ಪರ್ಶವನ್ನು ತಂದಿತು. ಹಂಸಲೇಖ-ರವಿಚಂದ್ರನ್ ಇಬ್ಬರೂ ಸೇರಿ ಪ್ರೇಮಲೋಕದಲ್ಲಿ ಮೂಡಿಸಿದ ಟ್ರೆಂಡ್ ಕನ್ನಡ ಚಿತ್ರಗಳಲ್ಲಿ ಇನ್ನೂ ಮಾಸಿಲ್ಲ. 25 ವರ್ಷಗಳ ಹಿಂದೆ ತೆರೆಯ ಮೇಲೆ ನಾಯಕಿಯ ರಂಗಪ್ರವೇಶ ಹೇಗಿರಬೇಕು ಎನ್ನುವುದನ್ನು ತೋರಿಸಿದರು.

 

ಕಾಲೇಜು ಅಂದರೆ ಹೇಗಿರುತ್ತೆ ಅಂತ ಹೇಳಿದರು. ಹಂಸಲೇಖ ಎಂಥಾ ಪ್ರಭಾವ ಬೀರಿದರೆಂದರೆ ಸುಮಾರು 500 ಚಿತ್ರಗಳಲ್ಲಿ ಅವರ ಸಂಗೀತದ ಛಾಯೆ ಕಾಣುತ್ತದೆ. ರವಿಚಂದ್ರನ್ ಎಷ್ಟು ಪ್ರಭಾವ ಮೂಡಿಸಿದ್ದಾರೆ ಎಂದರೆ ಸುಮಾರು 600 ಚಿತ್ರಗಳಲ್ಲಿ ಪ್ರೇಮಲೋಕದ ಪ್ರೀತಿ/ಪ್ರೇಮ ಇಣುಕು ಹಾಕಿದೆ. ನಂತರದ ದಿನಗಳಲ್ಲಿ ಜೋಡಿ ಬೇರ್ಪಟ್ಟದ್ದು ಇತಿಹಾಸದ ಪುಟ ಸೇರಿಯಾಯಿತು.ಚಿತ್ರರಂಗ ಪ್ರವೇಶದ ಬೆಳ್ಳಿಹಬ್ಬ ಕಾಣುತ್ತಿರುವ ಹಂಸಲೇಖ, 301ನೇ ಚಿತ್ರದ ಮೂಲಕ ಮತ್ತೆ ರವಿಚಂದ್ರನ್ ಜೊತೆ ಸೇರಿದ್ದಾರೆ. ತಮ್ಮ ಕುಚುಕು ಕುಚುಕು ಸ್ನೇಹವನ್ನು ಮುಂದುವರೆಸಿರುವುದು ಚಿತ್ರರಂಗದ ಈ ವರ್ಷದ ಮಹತ್ವದ ಬೆಳವಣಿಗೆ.`ನರಸಿಂಹ~ದ ಹಾಡುಗಳನ್ನು ಕೇಳಿದಾಗ ಚಿತ್ರರಂಗ ಬದಲಾಗಿದ್ದರೂ ಅಂತಹ ಒಂದು ಯುವೋತ್ಸಾಹ ಹಂಸ-ರವಿ ಇಬ್ಬರಲ್ಲೂ ಇನ್ನೂ ಹಾಗೇ ಇದೆ ಎನಿಸುತ್ತದೆ. `ಸಿಮ್‌ಗಿಮ್ ಇಲ್ಲಾ... ಹೃದಯದ ಮೊಬೈಲ್ ಇದು...~ ಹಾಡಿನ ಮೂಲಕ ಅದೇ ತುಂಟಾಟದ ಹಂಸಲೇಖ ಕಾಣಿಸುತ್ತಾರೆ. ಆದರೆ ಜನ ಕೊಲವೆರಿಯಲ್ಲಿ ಮುಳುಗಿಹೋಗಿದ್ದಾರೆ.ಕಳೆದ ವರ್ಷ `ಪುಟ್ಟಕ್ಕನ ಹೈವೆ~ ಚಿತ್ರ ಬಿಡುಗಡೆಯಾದಾಗ ಚಲನಚಿತ್ರ ಮಾಹಿತಿಗಳನ್ನು ಕರಾರುವಾಕ್ಕಾಗಿ ಎಣಿಸಿಡುವ ಎಸ್. ಜಯಸಿಂಹ ಫೋನ್ ಮೂಲಕ ಸಂತೋಷದ ಒಂದು ಸಂಗತಿ ಇದೆ ಎಂದು ಹೇಳಿ, ಈ ಚಿತ್ರ ಹಂಸಲೇಖ ಸಂಗೀತ ನಿರ್ದೇಶನದ 300ನೇ ಚಿತ್ರ ಎಂದು ಉದ್ವೇಗದಿಂದ ಹೇಳಿದರು.

 

ನನಗೆ ಹೇಳಿದಂತೆಯೇ ಚಿತ್ರರಂಗದ ಗಣ್ಯರಿಗೂ ಫೋನ್‌ನಲ್ಲೇ ತಮ್ಮ ಸಂತೋಷವನ್ನು ಹಂಚಿದ್ದಾರೆ. ಅವರ ಉದ್ವೇಗಕ್ಕೆ ಯಾರೂ ಸ್ಪಂದಿಸಲಿಲ್ಲ ಎನ್ನುವುದು ಬೇರೆ ಮಾತು. ಕನ್ನಡದಲ್ಲಿ ರಾಜನ್-ನಾಗೇಂದ್ರ ಜೋಡಿ 188 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.

 

ಸತ್ಯಂ, ಎಂ. ರಂಗರಾವ್, ಉಪೇಂದ್ರಕುಮಾರ್, ಜಿ.ಕೆ. ವೆಂಕಟೇಶ್, ವಿ. ಮನೋಹರ್  ನೂರು ಚಿತ್ರ ದಾಟಿ ದಾಖಲೆ ಮಾಡಿದ್ದಾರೆ. ಆದರೆ 300 ದಾಟಿ ಮುಂದಕ್ಕೆ ಹೋದವರು ಕನ್ನಡದಲ್ಲಿ ಹಂಸಲೇಖ ಒಬ್ಬರೇ ಎನ್ನುವುದು ಅವರ ಸಂತಸಕ್ಕೆ ಕಾರಣವಾಗಿತ್ತು. ಚಿತ್ರರಂಗದವರು ಸ್ವಲ್ಪ ಕೇಳಿಸಿಕೊಂಡರೆ ಒಳ್ಳೆಯದು. ಆರ್. ನಾಗೇಂದ್ರರಾವ್ ಅವರಿಂದ ಆರಂಭವಾದ ಸಂಗೀತ ನಿರ್ದೇಶಕರ ಪಟ್ಟಿಯಲ್ಲಿ ಹಂಸಲೇಖ ಕನ್ನಡದ 130ನೆಯವರು ಎನ್ನುವ ಅಂಶವೂ ಅವರ ದಾಖಲೆಯಲ್ಲಿದೆ.ಕಲ್ಯಾಣ್‌ಜೀ ಆನಂದ್‌ಜೀ, ಲಕ್ಷ್ಮೀಕಾಂತ್ ಪ್ಯಾರೇಲಾಲ್ ಹಿಂದಿ ಚಿತ್ರರಂಗದಲ್ಲಿ ಈ ಸಾಧನೆ ಮಾಡಿದ್ದಾರೆ. ಇಳಯರಾಜ, ಶಂಕರ್‌ಗಣೇಶ್ ತಮಿಳು ಚಿತ್ರರಂಗದಲ್ಲಿ ಈ ದಾಖಲೆ ಬರೆದಿದ್ದಾರೆ. ಹಂಸಲೇಖ ಆ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.ಹಂಸಲೇಖ ನಿರ್ದೇಶಕರಾಗಬೇಕೆಂದು ಹಂಬಲಿಸಿದವರು. ಆದರೆ ಅವರ ಮನಸ್ಸಿನಲ್ಲಿ ಕುಳಿತಿದ್ದವನು ಒಬ್ಬ ಕವಿ. ಪ್ರೇಮಲೋಕಕ್ಕಿಂತ ಮುನ್ನವೇ ಅವರು `ತ್ರಿವೇಣಿ~ ಚಿತ್ರದಲ್ಲಿ ಭಗವಂತನಿಗೆ ಸವಾಲು ಹಾಕಿ ಗೆದ್ದವರು. 1981ರಲ್ಲಿ `ರಾಹು ಚಂದ್ರ~ ಮಾಡಿ ಸೋತವರು.1986ರಲ್ಲಿ ಬಿಡುಗಡೆಯಾದ `ಹೆಣ್ಣೇ ನಿನಗೇನು ಬಂಧನ~ ಹಂಸಲೇಖ ಸಂಗೀತ ನೀಡಿ ಬಿಡುಗಡೆಯಾದ ಮೊದಲ ಚಿತ್ರ. ಯಶಸ್ವಿಯಾಗಲಿಲ್ಲ. 1987ರಲ್ಲಿ ರವಿಚಂದ್ರನ್ ಜೊತೆ ಸೇರಿ `ಪ್ರೇಮ ಲೋಕ~ವನ್ನು ಕಟ್ಟಿದರು. ಹಂಸಲೇಖ ಯಾರು, ಅವರ ಸಾಮರ್ಥ್ಯ ಏನು ಎಂಬುದು ಚಿತ್ರರಂಗಕ್ಕೆ ಆಗ ಗೊತ್ತಾಯಿತು.ಅಂದು ಏರಿದ ಜನಪ್ರಿಯತೆಯ ಶಿಖರದಿಂದ ಹಂಸಲೇಖ ಇನ್ನೂ ಇಳಿದೇ ಇಲ್ಲ. ಅವರು ನಡೆದದ್ದೇ ವಿಭಿನ್ನ ಹಾದಿ. ಅವರದೇ ಒಂದು ವಲಯ. ಅವರೇ ಒಂದು ವಿಶ್ವವಿದ್ಯಾನಿಲಯ.ಸಚಿನ್ ತೆಂಡೂಲ್ಕರ್ ಆಟವನ್ನು ಕಳೆದ ಇಪ್ಪತ್ತ್ಮೂರು ವರ್ಷಗಳಿಂದ ನೋಡುತ್ತಾ ಬಂದವರು, ದೋನಿ, ವಿರಾಟ್, ಸೆಹ್ವಾಗ್ ಆಟದ ವೇಗದ ಮುಂದೆ ಸಚಿನ್ ಆಟವನ್ನು ಮಂದಗತಿಯ ಆಟ ಎನ್ನುತ್ತಾರೆ. ಸಚಿನ್ ಆರಂಭದ ಕಾಲಕ್ಕೂ, ಇಂದಿನ ಅತಿವೇಗಿ ರನ್‌ಗಳಿಕೆ ಕಾಲಕ್ಕೂ ಬಹಳ ವ್ಯತ್ಯಾಸವಿದೆ.

 

ಪ್ರೇಕ್ಷಕರ ಮನೋಗತಿಯಲ್ಲಿ ಆದ ಬದಲಾವಣೆ ಇದು. ಆದರೆ ಹಂಸಲೇಖ ಕಳೆದ 25 ವರ್ಷಗಳಿಂದ ಪ್ರೇಕ್ಷಕರ ಮನೋಗತಿಯ ಚುಂಗು ಹಿಡಿದೇ ಬಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಅವರು ಪ್ರಯೋಗಗಳ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದಾರೆ.

 

ಯೋಗರಾಜಭಟ್, ಸೂರಿ, ಗುರುಕಿರಣ್, ಹರಿಕೃಷ್ಣ ಮೊದಲಾದವರೆಲ್ಲಾ ಎಲ್ಲಿ ಎಡವುತ್ತಾರೆ ಎನ್ನುವ ಕರಾರುವಾಕ್ ನಿರ್ಣಯವನ್ನು ಕೊಡುವ ಪ್ರಬುದ್ಧತೆಯನ್ನು ಹಂಸಲೇಖ ಗಳಿಸಿರುವುದು ಈ ಅನುಭವದಿಂದಲೇ.ಪ್ರೇಮಲೋಕದಲ್ಲಿ ಸಂಭಾಷಣಾ ರೂಪದಲ್ಲಿ, ನಾಟಕೀಯ ನಿರೂಪಣೆಯಲ್ಲಿ ಹಾಡುಗಳನ್ನು ಬರೆದಾಗ ಕನ್ನಡಿಗರಿಗೆ ಅದೊಂದು ಥ್ರಿಲ್ ಎನಿಸಿತು. `ಗ್ರೀಸ್-2~ ಚಿತ್ರದ ನೆರಳಾದರೂ ಒಂದು ಪ್ರಯೋಗವಾಗಿ ಮನರಂಜನೆ ನೀಡಿತು.ರವಿಚಂದ್ರನ್ ಅವರ ಬಹುತೇಕ ಚಿತ್ರಗಳು ರೀಮೇಕ್ ಆಗಿದ್ದವು. ರಾಮಾಚಾರಿಯ ಹಾಡುಗಳಾಗಿರಬಹುದು, `ರಣಧೀರ~ದ ಹಾಡುಗಳಾಗಿರಬಹುದು, ಕತೆಯ ಟ್ರ್ಯಾಕ್ ಮೂಲಕ್ಕೆ ಮೊರೆ ಹೋದರೆ, ಹಾಡುಗಳು ಸ್ವಂತಿಕೆಯಿಂದಲೇ ಮೆರೆಯುತ್ತಿದ್ದವು. ಹೀಗಾಗಿ ರವಿಚಂದ್ರನ್-ಹಂಸಲೇಖ ಜೋಡಿ 12 ವರ್ಷ ಯಶಸ್ವಿ ಜೋಡಿಯೇ ಆಗಿ ಮೆರೆಯಿತು.ರವಿಚಂದ್ರನ್ ಅವರ 24 ಚಿತ್ರಗಳಿಗೆ ಹಂಸಲೇಖ ಸಂಗೀತ ನೀಡಿದ್ದಾರೆ. ಇಬ್ಬರೂ ಎರಡು ವಲಯಗಳಲ್ಲಿ ಪ್ರಾವೀಣ್ಯತೆ ಪಡೆದವರೇ. ಹೀಗಾಗಿ, ಚಿತ್ರಕ್ಕೆ ಒಂದು ಗಾಂಭೀರ್ಯ ವಿರುತ್ತಿತ್ತು. ಕನ್ನಡ ಚಿತ್ರರಂಗದಲ್ಲಿ ಪ್ರತಿಭೆಗಳಿಗೆ ಬರವಿಲ್ಲ. ಆದರೆ ಇಂತಹ ಪ್ರತಿಭೆಗಳೆಲ್ಲಾ ಒಂದೆಡೆ ಸೇರುವುದಿಲ್ಲ ಎನ್ನುವುದೇ ಸಮಸ್ಯೆಯ ಮೂಲ.ಸೇರಿದರೂ ಅವರವರು ಪ್ರತ್ಯೇಕವಾಗಿ ಕೆಲಸ ಮಾಡಿ ಹೋಗುತ್ತಾರೆ. ಪ್ರೇಮಲೋಕದಲ್ಲಿ ಕಂಡ ಟೀಂ ವರ್ಕ್ ಆನಂತರದ ದಿನಗಳಲ್ಲಿ ಕಡಿಮೆಯಾಗಲಾರಂಭಿಸಿತು. ಮುಂಗಾರಿನ ಮಳೆ ಸಮಯದಲ್ಲೂ ಹೀಗೇ ಆಯಿತು. ಮನೋಮೂರ್ತಿ, ಕಾಯ್ಕಿಣಿ, ಯೋಗರಾಜಭಟ್ಟರು ಆರಂಭದ ಚಿಂತನೆಯನ್ನು ನಂತರದ ಚಿತ್ರಗಳಲ್ಲಿ ಯಾಂತ್ರಿಕ ಮಾಡಿದರು. ಹೀಗಾಗಿ ಪ್ರತಿಷ್ಠೆ ಎನ್ನುವುದು ಸಿನಿಮಾ ಸೌಂದರ್ಯವನ್ನು ಹಾಳುಮಾಡಲಾರಂಭಿಸಿತು.ಹಂಸಲೇಖ ಅವರು ಜಾನಪದ ಖಜಾನೆಯಿಂದ ಪದಗಳನ್ನು ಹೆಕ್ಕಿ ತೆಗೆಯುತ್ತಿರುವುದು ಒಂದು ವಿಶೇಷ ಶೈಲಿಯೆಂದೇ ನಾನು ಭಾವಿಸಿದ್ದೇನೆ. ಅವರು ಸಂಗೀತ-ಸಾಹಿತ್ಯ ನೀಡಿದ ಬಹುತೇಕ ಚಿತ್ರಗಳಲ್ಲಿ ದೇಸಿ ಸ್ಪರ್ಶವಿದೆ. ಹೆಸರಾಂತ ನಾಯಕರ ನಾಯಕತ್ವವಿರುವ ಚಿತ್ರಗಳಿಗೆ ಸಂಗೀತ ನೀಡುವಾಗ ಹಂಸಲೇಖ ಲೇಖನಿ ಬಿಗಿಯಾಗಿರುತ್ತದೆ.ಹೊಸಬರು, ಹೆಸರು ಮಾಡದ ನಾಯಕರ ಚಿತ್ರಗಳಿಗೆ ಸಂಗೀತ ನೀಡುವಾಗ, ಹಾಡುಗಳನ್ನು ಬರೆಯುವಾಗ ಹಂಸಲೇಖ ಅವರು ಹಂಸದಂತೆ ವಿಹರಿಸುತ್ತಾರೆ. ಅವರ ದೇಸಿ ಶೈಲಿ ಮೇರೆ ಮೀರಿ ಹರಿಯುತ್ತದೆ. ಅಲ್ಲಿ ಹಂಸಲೇಖ ಗೆಲ್ಲುತ್ತಾರೆ.`ಕೂರಕ್ ಕುಕ್ರಳ್ಳಿ ಕೆರೆ~ ಹಾಡನ್ನೇ ನೋಡಿ. ದೊಡ್ಡ ಬ್ಯಾನರಿನ ಚಿತ್ರಗಳಲ್ಲಿ ಹಂಸಲೇಖ ಅವರಿಗೆ ಸ್ವಾತಂತ್ರ್ಯ ಕಡಿಮೆಯೋನೋ ಅನ್ನಿಸುತ್ತದೆ. `ಚಂದಕ್ಕಿಂತ ಚಂದ ನೀನೇ ಸುಂದರ...~, `ಯಾರಿಟ್ಟರೀ ಚುಕ್ಕಿ..~, `ಪ್ರೀತ್ಸೆ ಪ್ರೀತ್ಸೆ...~, `ಹಳ್ಳಿಮೇಷ್ಟ್ರೇ... ಹಳ್ಳಿ ಮೇಷ್ಟ್ರೇ..~, `ಕಾಯಿ ಕಾಯಿ ನುಗ್ಗೇಕಾಯಿ...~, `ಎಳೆ ಹೊಂಬಿಸಲೇ...~ ಒಂದೊಂದು ಹಾಡೂ ಹಂಸಲೇಖ ಅವರ ಸಂಗೀತ, ಸಾಹಿತ್ಯ ಎರಡನ್ನೂ ಚಪ್ಪರಿಸುವಂತೆ ಮಾಡುತ್ತದೆ.

 

ಹಿಂದಿಯಲ್ಲಿ `ದಿಲ್ಸೆ~ ಸಾಧ್ಯವಾಗುವುದಾದರೆ ಕನ್ನಡದಲ್ಲಿ `ಪ್ರೀತ್ಸೆ~ ಏಕಾಗಬಾರದು? ರಾಜಕುಮಾರ್ ಅವರಿಗೆ `ಹುಟ್ಟಿದರೇ ಕನ್ನಡನಾಡಲ್ ಹುಟ್ಟಬೇಕು~ ಮೂಲಕ ಅವರ ಇಡೀ ಚಿತ್ರರಂಗದ, ಕನ್ನಡನಾಡಿನ ಒಡನಾಟದ ಸಾಂಗತ್ಯವನ್ನು ಒದಗಿಸಿಕೊಟ್ಟರು. ಶಿವರಾಜ್‌ಕುಮಾರ್‌ಗೆ `ಗಾಜನೂರಿನ ಗಂಡು ಕಾಣಮ್ಮ...~ ಎನ್ನುವ ಮೂಲಕ ರಾಜ್ ಕುಟುಂಬದ ಸಂಪರ್ಕ ಕೊಟ್ಟರು.ಕುಕ್ಕರಹಳ್ಳಿ ಕೆರೆ, ಮೈಸೂರಿನ ಪ್ರವಾಸಿ ತಾಣಗಳನ್ನು ಪಟ್ಟಿ ಕೊಡುವ ಮೂಲಕ ಮೈಸೂರು ಮೂಲದವರು ಎನ್ನುವುದನ್ನು ಹೇಳಿದರು. ಸಿನಿಮಾ ಹೆಸರುಗಳನ್ನೇ ಸೇರಿಸಿ ಒಂದು ಹಾಡು ಮಾಡಿ ಥ್ರಿಲ್ ಕೊಟ್ಟರು. ಪ್ರತಿಯೊಂದರಲ್ಲೂ ಪ್ರೇಕ್ಷಕನಿಗೆ ಸನಿಹವಾಗುವ ಶುದ್ಧ ಜನಪದ ಶೈಲಿಯನ್ನು ಹಂಸಲೇಖ ಚಿತ್ರಗೀತೆಗಳ ಮೂಲಕ ನೀಡಿದ್ದು ಸಿನಿಮಾ ಸಾಧ್ಯತೆಯನ್ನು ವಿಸ್ತರಿಸುವ ಕಲೆಯೇ ಹೌದು.`ನರಸಿಂಹ~ ಚಿತ್ರದ ಮುಹೂರ್ತ ನಡೆದಾಗ  ಈ ಜೋಡಿ ಚಿತ್ರರಂಗದಲ್ಲಿ ಮೊದಲಿನ ಥ್ರಿಲ್ ತರುತ್ತದೆಯೇ ಎಂಬ ಅನುಮಾನ ನನಗೂ ಇತ್ತು. ಇಬ್ಬರೂ ಸೇರಿದರೆ ಪ್ರಳಯ ಆಗುತ್ತೆ ಎಂದು ಚಿತ್ರರಂಗವೇನೂ ಕಾದು ಕುಳಿತಿಲ್ಲ ಎಂದೂ ನಾನು ಇದೇ ಕಾಲಂನಲ್ಲಿ ಬರೆದಿದ್ದೆ.ಆದರೆ ಹಂಸಲೇಖ ಅದೇ ಖದರು ಉಳಿಸಿಕೊಂಡಿರುವುದನ್ನು ಕಂಡು ಖುಷಿಯಾಗುತ್ತದೆ. ಆದರೆ ಪ್ರೇಕ್ಷಕರು, ರೆಹಮಾನ್, ಹರಿಕೃಷ್ಣ, ಹ್ಯಾರೀಸ್... ಕೊಲವೆರಿ, ಪ್ಯಾರ್... ಹೀಗೆ ನಾದದ ಅಲೆಯಲ್ಲಿ ತೇಲಿಹೋಗಿರುವುದರಿಂದ ಅಭಿರುಚಿಗಳೆಲ್ಲಾ ಹರಿದು ಚದುರಿಹೋಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.