ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ಕ್ಯಾಮೆರಾಗಳ ಫೋನ್

Last Updated 25 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಫೋನ್‌ಗಳಿಗೆ ಎಲ್ಲ ನಮೂನೆಯ ವಿಶೇಷಣಗಳನ್ನು ತುಂಬಿಸುತ್ತಲೇ ಹೋದರು ಎಲ್ಲ ತಯಾರಕರು. ಇತ್ತೀಚೆಗಂತೂ ಎಲ್ಲ ಫೋನ್ ತಯಾರಕರೂ ಅವರ ಫೋನಿನ ಬಗ್ಗೆ ಮಾತನಾಡುವುದು ಬಿಟ್ಟು ಅದರಲ್ಲಿರುವ ಕ್ಯಾಮೆರಾ ಬಗ್ಗೆ ಮಾತನಾಡುತ್ತಿದ್ದಾರೆ. ಒಂದು ಇದ್ದ ಕ್ಯಾಮೆರಾ, ಎರಡಾಗಿ, ಮೂರಾಗಿ ಈಗ ನಾಲ್ಕಾಗಿದೆ.

ನಾಲ್ಕು ಕ್ಯಾಮೆರಾಗಳಿರುವ ಪ್ರಪಂಚದ ಮೊತ್ತಮೊದಲ ಸ್ಮಾರ್ಟ್‌ಫೋನನ್ನು ತಯಾರಿಸಿದ್ದೇವೆ ಎಂದು ಹೋನರ್ (Honor) ಕಂಪನಿ ಹೇಳಿಕೊಂಡಿದೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ನಾಲ್ಕು ಕ್ಯಾಮೆರಾಗಳಿರುವ ಹೋನರ್ 9ಐ ಪ್ರೊ (Honor 9i) ಎಂಬ ಸ್ಮಾರ್ಟ್‌ಫೋನನ್ನು.

ಸ್ಮಾರ್ಟ್‌ಫೋನ್‌ಗಳ ಪರದೆಗೂ ದೇಹಕ್ಕೂ ಇರುವ ಅನುಪಾತ ಹೆಚ್ಚಿದ್ದಷ್ಟೂ ದೊಡ್ಡ ಪರದೆ ನಮಗೆ ಲಭ್ಯವಾಗುತ್ತದೆ. ಪರದೆಯ ಕೆಳಗೆ ಮತ್ತು ಮೇಲೆ ಸ್ವಲ್ಪ ಜಾಗ ಇಡಲೇ ಬೇಕು. ಯಾಕೆಂದರೆ ಮೇಲ್ಭಾಗ ದಲ್ಲಿ ಸ್ವಂತೀ ಕ್ಯಾಮೆರಾ ಹಾಗೂ ಕೆಳಗಡೆ ಬಟನ್‌ಗಳು ಇರುತ್ತವೆ. ಸುತ್ತ ಸ್ವಲ್ಪ ಖಾಲಿ ಜಾಗ ಇರಲೇಬೇಕು. ಇದಕ್ಕೆ bezel ಎನ್ನುತ್ತಾರೆ.

ಇತ್ತೀಚೆಗೆ ಈ ಜಾಗವನ್ನು ಆದಷ್ಟು ಕಡಿಮೆ ಮಾಡಿದ ಫೋನ್‌ಗಳು ಮಾರುಕಟ್ಟೆಗೆ ಬರುತ್ತಿವೆ. ಅವುಗಳಿಗೆ bezelless ಎನ್ನುತ್ತಾರೆ. ಈ ಹೋನರ್ 9ಐ ಆ ನಮೂನೆಯ ಫೋನ್. ಈ ಫೋನಿನ ಗಾತ್ರ ಇತರೆ 5.5 ಇಂಚು ಪರದೆಯ ಫೋನ್‌ಗಳ ಗಾತ್ರದಷ್ಟೇ ಇದೆಯಾದರೂ ಇದರ ಪರದೆಯ ಗಾತ್ರ ಮಾತ್ರ 5.9 ಇಂಚು ಇದೆ. ಅಂದರೆ ಇದರ ಪರದೆಗೂ ದೇಹಕ್ಕೂ ಇರುವ ಅನುಪಾತ ಉತ್ತಮವಾಗಿದೆ. ದೇಹ ನಯವಾಗಿದೆ.

ಕೈಯಿಂದ ಬೀಳುವ ಭಯವಿದೆ. ಆದುದರಿಂದ ಒಂದು ಅಧಿಕ ಪ್ಲಾಸ್ಟಿಕ್ ಕವಚವನ್ನೂ ನೀಡಿದ್ದಾರೆ. ಹಿಂಭಾಗದ ಮಧ್ಯಭಾಗದಲ್ಲಿ ಎರಡು ಕ್ಯಾಮೆರಾಗಳಿವೆ. ಅದರ ಮೇಲ್ಭಾಗದಲ್ಲಿ ಫ್ಲಾಶ್ ಮತ್ತು ಕೆಳಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇವೆ.

ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮತ್ತು ಯುಎಸ್‌ಬಿ ಕಿಂಡಿಗಳಿವೆ. ಇದು ಯುಎಸ್‌ಬಿ-ಸಿ ಅಲ್ಲ. ಎಡಭಾಗದಲ್ಲಿ ಚಿಕ್ಕ ಪಿನ್ ತೂರಿಸಿದಾಗ ಹೊರಬರುವ ಟ್ರೇ ಇದೆ. ಇದನ್ನು ಒಂದು ನ್ಯಾನೋಸಿಮ್ ಮತ್ತು ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಅಥವಾ ಎರಡು ನ್ಯಾನೋ ಸಿಮ್ ಹಾಕಲು ಬಳಸಲಾಗುತ್ತದೆ. ಯುಎಸ್‌ಬಿ ಓಟಿಜಿ ಸವಲತ್ತು ಇದೆ. ಇದನ್ನು ಕೈಯಲ್ಲಿ ಹಿಡಿದಾಗ ಒಂದು ಉತ್ತಮ ಮೇಲ್ದರ್ಜೆಯ ಫೋನನ್ನು ಹಿಡಿದ ಭಾವನೆ ಬರುತ್ತದೆ.

ಇದರಲ್ಲಿ ಎರಡು ಪ್ರಾಥಮಿಕ ಕ್ಯಾಮೆರಾ ಹಾಗೂ ಎರಡು ಸ್ವಂತೀ ಕ್ಯಾಮೆರಾಗಳಿವೆ. ಒಂದು ಕ್ಯಾಮೆರಾ ಹತ್ತಿರದ ವಸ್ತುವನ್ನು ನಿಖರವಾಗಿ ಫೋಕಸ್ ಮಾಡುವಾಗ ಇನ್ನೊಂದು ಕ್ಯಾಮೆರಾ ಅದರ ಹಿನ್ನೆಲೆಯನ್ನು ಫೋಕಸ್ ಮಾಡುತ್ತದೆ. ಹೋನರ್ 8 ಪ್ರೋ ದಲ್ಲಿದ್ದಂತೆ ಈ ಫೋನಿನ ಕ್ಯಾಮೆರಾ ಕಿರುತಂತ್ರಾಂಶದಲ್ಲೂ (ಆ್ಯಪ್) ಒಂದು ವಿಶೇಷ ಸವಲತ್ತಿದೆ. ಅದು ವೈಡ್ ಅಪೆರ್ಚರ್ (ಅಗಲ ಕವಾಟ). ಅದನ್ನು ಬಳಸಿ ಫೋಟೊ ತೆಗೆದರೆ ನಂತರ ಫೋಟೊದ ಬೇರೆ ಬೇರೆ ಜಾಗಗಳ ಮೇಲೆ ಬೆರಳಿಟ್ಟು ಆಯಾ ಜಾಗಕ್ಕೆ ಫೋಕಸ್ ಮಾಡಬಹುದು. ಅಂದರೆ ನಿಮಗೆ ವ್ಯಕ್ತಿ ಮಾತ್ರ ಬೇಕಿದ್ದರೆ ಹಿನ್ನೆಲೆಯನ್ನು ಮಸುಕಾಗಿಸಬಹುದು ಮತ್ತು ಅಗತ್ಯವಿದ್ದಾಗ ಹಿನ್ನೆಲೆಯನ್ನು ಸ್ಪಷ್ಟಮಾಡಬಹುದು.

ಕ್ಯಾಮೆರಾದ ಕಿರುತಂತ್ರಾಂಶದಲ್ಲಿ ಮ್ಯಾನ್ಯುವಲ್ ಮೋಡ್ ಆಯ್ಕೆ ಕೂಡ ಇದೆ. ಬಹುತೇಕ ಸಂದರ್ಭಗಳಲ್ಲಿ ಫೋಟೊಗಳು ಚೆನ್ನಾಗಿ ಮೂಡಿಬರುತ್ತವೆ. ಆದರೆ ಬಣ್ಣಗಳನ್ನು ಸ್ವಲ್ಪ ಜಾಸ್ತಿಯೇ ಗಾಢವಾಗಿ ಮೂಡಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಫೋಕಸ್ ಮಾಡುವಾಗ ಫೋಟೊ ತೆಗೆಯಬೇಕಾದ ವಸ್ತುವಿನ ಬದಲು ಇನ್ನೆಲ್ಲೋ ಫೋಕಸ್ ಮಾಡುತ್ತದೆ.

ಸ್ವಂತೀ ತೆಗೆಯುವಾಗ ಮುಖವನ್ನು ಸುಂದರವಾಗಿ ಮಾಡಿಕೊಡುತ್ತದೆ. ಮುಖಕ್ಕೆ ಯಾವುದೋ ಸೌಂದರ್ಯವರ್ಧಕ ಹಚ್ಚಿದ್ದಾರೆ ಎಂಬ ಭಾವನೆ ಬರುವಂತೆ ಫೋಟೊ ಮೂಡಿ ಬರುತ್ತದೆ! ಹೀಗೆ ಮಾಡುವುದು ಬೇಡ ಎಂದಾದಲ್ಲಿ ಸ್ವಲ್ಪ ಹುಡುಕಾಡಿ ಆಯ್ಕೆಯನ್ನು ಬದಲಾಯಿಸಬೇಕು.

ಇದರಲ್ಲಿರುವುದು 5.9 ಇಂಚು ಗಾತ್ರದ 1080 x 2160 ಪಿಕ್ಸೆಲ್ ರೆಸೊಲೂಶನ್‌ನ ಪರದೆ. ಇದರ ಗುಣಮಟ್ಟ ಚೆನ್ನಾಗಿದೆ. ಫೋನಿನ ಕೆಲಸದ ವೇಗ ಪರವಾಗಿಲ್ಲ. ಅಂಟುಟು ಬೆಂಚ್‌ಮಾರ್ಕ್‌ 61223 ಇದೆ. ಅಂದರೆ ಮಧ್ಯಮ ವೇಗ ಎಂದು ತೀರ್ಮಾನಿಸಬಹುದು. ವಿಡಿಯೊ ವೀಕ್ಷಣೆ, ಸಾಮಾನ್ಯ ಆಟ ಆಡುವುದು ಎಲ್ಲ ಉತ್ತಮ. ಅಧಿಕ ಶಕ್ತಿ ಬೇಡುವ ಮೂರು ಆಯಾಮದ ಆಟಗಳನ್ನು ಕೂಡ ತೃಪ್ತಿದಾಯಕವಾಗಿ ಆಡಬಹುದು.

ಹೈಡೆಫಿನಿಶನ್ ಸಹಿತ ಬಹುತೇಕ ಎಲ್ಲ ವಿಡಿಯೊಗಳ ವೀಕ್ಷಣೆ ಚೆನ್ನಾಗಿದೆ. 4k ವಿಡಿಯೊ ಕೆಲವು ಕಿರುತಂತ್ರಾಂಶಗಳಲ್ಲಿ ಮಾತ್ರ ಪ್ಲೇ ಆಗುತ್ತದೆ. ಇದರ ಆಡಿಯೊ ಇಂಜಿನ್ ಪರವಾಗಿಲ್ಲ. ಇಯರ್‌ಫೋನ್ ನೀಡಿದ್ದಾರೆ. ಆದರೆ ಅದರ ಗುಣಮಟ್ಟ ಉತ್ತಮವಾಗಿಲ್ಲ.

ನಿಮ್ಮದೇ ಉತ್ತಮ ಇಯರ್‌ಫೋನ್ ಜೋಡಿಸಿದರೆ ಒಂದು ಮಟ್ಟಿಗೆ ತೃಪ್ತಿದಾಯಕ ಸಂಗೀತ ಆಲಿಸ ಬಹುದು. ಹೋನರ್ 8 ಪ್ರೊ ಫೋನಿನ ಬಗ್ಗೆ ಒಂದು ಪ್ರಮುಖ ದೂರು ಎಂದರೆ ಫೋನ್ ಬಿಸಿಯಾಗುವುದು ಆಗಿತ್ತು. ಇದು ಅಷ್ಟು ಬಿಸಿಯಾಗುವುದಿಲ್ಲ. ಅಷ್ಟರ ಮಟ್ಟಿಗೆ ಇದು ಉತ್ತಮ.

ಬ್ಯಾಟರಿ ಬಾಳಿಕೆ ಪರವಾಗಿಲ್ಲ. ಹೋನರ್ 8 ಪ್ರೊ ಗಿಂತ ಉತ್ತಮ. ನಾಲ್ಕು ಕ್ಯಾಮೆರಾ ಎಂಬ ಹೆಗ್ಗಳಿಕೆ ಪ್ರಚಾರ ಮಾಡಿದಷ್ಟೇನೂ ಇಲ್ಲ. ಪೂರ್ತಿ ಪರದೆಯ ಬಳಕೆ ಉತ್ತಮ. ನೀಡುವ ಹಣಕ್ಕೆ ಒಂದು ಮಟ್ಟಿಗೆ ತೃಪ್ತಿ ನೀಡುವ ಫೋನ್ ಎನ್ನಬಹುದು.

*

ವಾರದ ಆ್ಯಪ್‌(app); ಮೊಬೈಲ್‌ನಲ್ಲೇ ಪ್ರೋಗ್ರಾಮಿಂಗ್‌ ಕಲಿಯಿರಿ
ನಿಮಗೆ ಪ್ರೋಗ್ರಾಮಿಂಗ್‌ ಕಲಿಯುವ ಆಸೆ ಇದೆಯೇ? ಅಥವಾ ಈಗಾಗಲೇ ಅಲ್ಪ ಸ್ವಲ್ಪ ಪ್ರಾರಂಭಿಸಿದ್ದೀರಾ? ಪ್ರೋಗ್ರಾಮಿಂಗ್‌ ಕಲಿಯಲು ನಿಮ್ಮಲ್ಲಿ ಗಣಕ ಅಥವಾ ಲ್ಯಾಪ್‌ಟಾಪ್ ಇಲ್ಲ, ಕೇವಲ ಆ್ಯಂಡ್ರಾಯ್ಡ್ ಫೋನ್ ಇದೆಯೇ? ಹಾಗಿದ್ದಲ್ಲಿ ನಿಮ್ಮಂಥವರಿಗಾಗಿ ಆ್ಯಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲೇ ಪ್ರೋಗ್ರಾಮಿಂಗ್ ಕಲಿಯಲು ಸಹಾಯ ಮಾಡುವ ಕಿರುತಂತ್ರಾಂಶ (ಆ್ಯಪ್) ಬಂದಿದೆ. ಅದನ್ನು ಪಡೆಯಲು ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ Dcoder, Mobile Compiler IDE ಎಂದು ಹುಡುಕಬೇಕು ಅಥವಾ http://bit.ly/gadgetloka300 ಜಾಲತಾಣಕ್ಕೆ ಭೇಟಿ ನೀಡಬೇಕು. ಸಿ, ಸಿ++, ಜಾವಾ, ಪರ್ಲ್, ಪೈಥಾನ್, ರುಬಿ, ಎಚ್‌ಟಿಎಂಎಲ್, ಇತ್ಯಾದಿ ಬಹುತೇಕ ಪ್ರೋಗ್ರಾಮಿಂಗ್‌ ಭಾಷೆಗಳು ಇದರಲ್ಲಿವೆ. ನೀವು ತಯಾರಿಸಿದ ಪ್ರೋಗ್ರಾಮ್ ಅನ್ನು ಸಂಗ್ರಹಿಸಿಡಲೂಬಹುದು.

*
ಗ್ಯಾಜೆಟ್‌ ಸಲಹೆ
ತಿಮ್ಮಯ್ಯ ಅವರ ಪ್ರಶ್ನೆ: ನಿಮ್ಮ ವಿಮರ್ಶೆ ಓದಿ ನಾನು ರೆಡ್‌ಮಿ ನೋಟ್ 4 ಕೊಂಡುಕೊಳ್ಳೋಣ ಅಂದುಕೊಂಡಿದ್ದೇನೆ. ಅದನ್ನು ಎಲ್ಲಿ ಕೊಂಡುಕೊಳ್ಳುವುದು?

ಉ: mi.com ಅಥವಾ www.flipkart.com ಜಾಲತಾಣಗಳ ಮೂಲಕ ಕೊಳ್ಳಬಹುದು. ಕೆಲವು ಅಂಗಡಿಗಳಲ್ಲೂ ದೊರೆಯುತ್ತದೆ.

*


ಗ್ಯಾಜೆಟ್‌ ಸುದ್ದಿ: ಸೋನಿ ಪ್ರತಿಸ್ಪಂದನಾತ್ಮಕ ಪ್ರೊಜೆಕ್ಟರ್  
ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಚಿರಪರಿಚಿತವಾಗಿರುವ ಸೋನಿ ಕಂಪೆನಿ ಒಂದು ಹೊಸ ಪ್ರೊಜೆಕ್ಟರ್ ತಯಾರಿಸಿದೆ. ಇದು ಮಾಮೂಲಿ ಪ್ರೊಜೆಕ್ಟರ್ ಅಲ್ಲ. ಇದು ಮೂಡಿಸುವ ಚಿತ್ರಗಳು ಪ್ರತಿಸ್ಪಂದನಾತ್ಮಕವಾಗಿರುತ್ತವೆ (interactive). ಉದಾಹರಣೆಗೆ ಗೋಡೆಯ ಮೇಲೆ ಮೂಡಿ ಬಂದ ಚಿತ್ರದ ಮೇಲೆ ನೀವು ಬೆರಳಿಟ್ಟರೆ ಅದು ಯಾವುದೋ ಕೆಲಸ ಮಾಡಬಹುದು ಅಥವಾ ಲೆಕ್ಕ ಮಾಡಬಹುದು. ಮೇಜಿನ ಮೇಲೆ ಆಟದ ಚಿತ್ರ ಮೂಡಿಸಿ ಆ ಚಿತ್ರದ ಮೇಲೆ ಬೆರಳಿಟ್ಟು ನೀವು ಮಕ್ಕಳ ಜೊತೆ ಆಟ ಆಡಬಹುದು.

ಮೇಜಿನ ಮೇಲೆ ಒಂದು ಬದಿಯಲ್ಲಿ ಸುಮ್ಮನೆ ಕುಳಿತ ಈ ಪ್ರೊಜೆಕ್ಟರ್ ಮುಂದೆ ನೀವು ನಡೆದು ಬಂದರೆ ನೀವು ಮನೆಗೆ ಬಂದಿದ್ದೀರಿ ಎಂದು ಅದಕ್ಕೆ ಗೊತ್ತಾಗಿ ಅದು ಎಚ್ಚರಗೊಂಡು ಗೋಡೆಯ ಮೇಲೆ ನಿಮಗೆ ಅತೀ ಅಗತ್ಯ ಮಾಹಿತಿಗಳನ್ನು ಮೂಡಿಸುತ್ತದೆ. ಈ ಮಾಹಿತಿ ಸದ್ಯದ ಹವಾಮಾನ, ನಿಮ್ಮ ಇಂದಿನ ದಿನಚರಿ, ಇಮೇಲ್, ಸಂದೇಶ, ಇತ್ಯಾದಿಗಳಿರಬಹುದು. ಈ ಪ್ರೊಜೆಕ್ಟರ್ ಆ್ಯಂಡ್ರಾಯ್ಡ್‌ ಕಾರ್ಯಾಚರಣ ವ್ಯವಸ್ಥೆಯನ್ನು ಒಳಗೊಂಡಿದೆ. ಇದರ ಬೆಲೆ ಸುಮಾರು ₹1,10,000.

ಗ್ಯಾಜೆಟ್‌ ತರ್ಲೆ: ಬಾಯ್‌ಫ್ರೆಂಡ್‌ನ ಕರ್ತವ್ಯ ತನ್ನ ಗರ್ಲ್‌ಫ್ರೆಂಡ್‌ಗೆ ಇಷ್ಟವಾಗುವ ಗ್ಯಾಜೆಟ್ ಉಡುಗೊರೆ ಕೊಡುವುದು. ಗರ್ಲ್‌ಫ್ರೆಂಡ್‌ನ ಕರ್ತವ್ಯ ಆತ ನೀಡಿದ ಉಡುಗೊರೆ ತನಗೆ ಇಷ್ಟವಾಗದಿದ್ದರೂ ಅದು ಚೆನ್ನಾಗಿದೆ ಎಂದು ಹೇಳುವುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT