ನಡೆಯಲ್ಲಿ ಇಲ್ಲದ ಬೋಧನೆ

7

ನಡೆಯಲ್ಲಿ ಇಲ್ಲದ ಬೋಧನೆ

ಗುರುರಾಜ ಕರಜಗಿ
Published:
Updated:

ಬಹಳ ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿರುವಾಗ ಬೋಧಿಸತ್ವ ಒಂದು ದಟ್ಟವಾದ ಕಾಡಿನಲ್ಲಿ ಪಕ್ಷಿಯೋನಿಯಲ್ಲಿ ಜನಿಸಿದ್ದ. ಅವನು ಬೆಳೆಯುತ್ತಿದ್ದಂತೆ ಬಹು ದೊಡ್ಡ ಮತ್ತು ಶಕ್ತಿಶಾಲಿಯಾದ ಪಕ್ಷಿಯಾದ. ಉಳಿದ ಪಕ್ಷಿಗಳು ಅವನನ್ನು ನಾಯಕನೆಂದು ಒಪ್ಪಿಕೊಂಡವು.

ಇಂಥ ಕಾಡಿನಲ್ಲಿರುವುದಕ್ಕಿಂತ ಹಿಮಾಲಯದ ವಿಸ್ತಾರದಲ್ಲಿ ಬಾಳಬೇಕು ಎಂಬ ಇಚ್ಛೆಯಿಂದ ಐದುನೂರು ಪಕ್ಷಿಗಳನ್ನು ಜೊತೆಗೆ ಕರೆದುಕೊಂಡು ಹಿಮಾಲಯಕ್ಕೆ ಹೋದ. ಅಲ್ಲಿ ಪರ್ವತದ ಶಿಖರಗಳಲ್ಲಿ ಹಾರಾಡುತ್ತ ಸಂತೋಷವಾಗಿದ್ದ. ಪರ್ವತಗಳಲ್ಲಿ ಅಲ್ಲಲ್ಲಿ ಪುಟ್ಟ ಹಳ್ಳಿಗಳು ಮತ್ತು ಕೆಲವು ದೊಡ್ಡ ಊರುಗಳೂ ಇದ್ದವು. ಹೀಗಾಗಿ ಪಕ್ಷಿಗಳಿಗೆ ಮರದ ಹಣ್ಣು ಹಂಪಲುಗಳಲ್ಲದೇ ಬೇಕಾದಷ್ಟು ಕಾಳುಗಳೂ ದೊರೆಯುತ್ತಿದ್ದವು. ಹಳ್ಳ ಮತ್ತು ದೊಡ್ಡ ಊರುಗಳನ್ನು ಜೋಡಿಸಲು ಒಂದು ರಾಜಮಾರ್ಗವಿತ್ತು.

ಈ ಸಮಯದಲ್ಲಿ ಮತ್ತೊಂದು ದೊಡ್ಡ ಪಕ್ಷಿ ಈ ಬೋಧಿಸತ್ವನ ಪಕ್ಷಿಗಳ ಗುಂಪಿನ ಹತ್ತಿರವೇ ಬಂದು ವಾಸವಾಯಿತು. ಅದು ಬಲು ಚತುರವಾದ ಪಕ್ಷಿ. ಉಳಿದ ಹಕ್ಕಿಗಳೊಂದಿಗೆ ಹಾರಲು ಬರದೇ ಒಂದೇ ಎಲ್ಲಿಯೋ ಹೋಗಿಬಿಡುತ್ತಿತ್ತು. ಅದು ಸಾಮಾನ್ಯವಾಗಿ ರಾಜಮಾರ್ಗದ ಪಕ್ಕದಲ್ಲೇ ಬಿದ್ದಿರುತ್ತಿತ್ತು. ಅಲ್ಲಿ ಕಾಳುಗಳನ್ನು ಹೇರಿಕೊಂಡು ಹೋಗುತ್ತಿದ್ದ ಬಂಡಿಗಳಿಂದ ಸಾಕಷ್ಟು ಕಾಳುಗಳು ಹೊರಗೆ ಬೀಳುತ್ತಿದ್ದವು. ಹೀಗಾಗಿ ಈ ಪಕ್ಷಿಗೆ ಅನಾಯಾಸವಾಗಿ ಹೊಟ್ಟೆ ತುಂಬ ಕಾಳು ಸಿಗುತ್ತಿತ್ತು.

ಒಂದು ಬಾರಿ ಬೋಧಿಸತ್ವನ ಗುಂಪಿನ ಪಕ್ಷಿಯೊಂದು ಈ ಚತುರ ಪಕ್ಷಿಯನ್ನು ಮಾತನಾಡಿಸಿ ಅದು ಆಹಾರಕ್ಕಾಗಿ ಎಲ್ಲಿ ಹೋಗುತ್ತದೆ ಮತ್ತು ತಮ್ಮ ಜೊತೆಗೆ ಏಕೆ ಬರುವುದಿಲ್ಲ ಎಂದು ವಿಚಾರಿಸಿತು. ಆಗ ಚತುರ ಪಕ್ಷಿಗೆ ಆತಂಕವಾಯಿತು. ಉಳಿದ ಪಕ್ಷಿಗಳೂ ರಾಜಮಾರ್ಗಕ್ಕೆ ಬಂದು ಬಿಟ್ಟರೆ ತನಗೆ ದೊರೆಯುವ ಕಾಳು ಕಡಿಮೆಯಾಗುತ್ತವೆಯೆಂದು ಯೋಚಿಸಿ ಹೇಳಿತು. ‘ನಾನು ತಿನ್ನುವುದೇ ತುಂಬ ಕಡಿಮೆ. ಆದ್ದರಿಂದ ಅಲ್ಲಲ್ಲಿ ಹಾರಾಡಿ ಒಂದೆರಡು ಹಣ್ಣು ತಿಂದು ಬರುತ್ತೇನೆ. ಆದರೆ ನೀವೆಲ್ಲ ತುಂಬ ಎಚ್ಚರವಾಗಿರಬೇಕು. ನಿನ್ನ ಜೊತೆಗಾರರಿಗೂ ಹೇಳು. ತಪ್ಪಿಕೂಡ ರಾಜಮಾರ್ಗದ ಕಡೆಗೆ ಹೋಗುವುದು ಬೇಡ. ಅದು ತುಂಬ ಅಪಾಯಕಾರಿಯಾದದ್ದು. ಅಲ್ಲಿ ಆನೆ, ಕುದುರೆ, ರಥಗಳು ಮತ್ತು ಹರಿತವಾದ ಕೊಂಬುಗಳುಳ್ಳ ಎತ್ತುಗಳ ಬಂಡಿಗಳು ಸಾಲುಸಾಲಾಗಿ ಬರುತ್ತವೆ. ಅವು ಎಷ್ಟು ವೇಗವಾಗಿ ಬರುತ್ತವೆಂದರೆ ಹಕ್ಕಿಗಳಿಗೆ ಹಾರಲೂ ಸಾಧ್ಯವಿಲ್ಲ. ಅನೇಕ ಹಕ್ಕಿಗಳು ಅಲ್ಲಿ ಪ್ರಾಣ ಕಳೆದುಕೊಂಡಿದ್ದನ್ನು ನಾನೇ ಕಂಡಿದ್ದೇನೆ’. ಈ ಪಕ್ಷಿ ಸಾಧ್ಯವಾದಾಗಲೆಲ್ಲ ಉಪದೇಶ ನೀಡುತ್ತಿದ್ದುದರಿಂದ ಉಳಿದ ಪಕ್ಷಿಗಳು ಅದನ್ನು ಅನುಶಾಸಿಕಾ ಎಂದು ಕರೆಯತೊಡಗಿದವು. ಅದರ ಉಪದೇಶದಂತೆ ಯಾವ ಪಕ್ಷಿಯೂ ರಾಜಮಾರ್ಗದ ಕಡೆಗೆ ಹೋಗಲಿಲ್ಲ.

ಒಂದು ದಿನ ಅನುಶಾಸಿಕಾ ಪಕ್ಷಿ ಎಂದಿನಂತೆ ರಾಜಮಾರ್ಗದಲ್ಲಿ ಕಾಳುಗಳನ್ನು ಆರಿಸಲು ಹೋಯಿತು. ಕೆಲವೊಂದು ಕಾಳುಗಳನ್ನು ತಿಂದು ತಿರುಗಿ ನೋಡುವಾಗ ಬಂದು ಬಂಡಿ ವೇಗವಾಗಿ ಬರುವುದು ಕಂಡಿತು. ಇನ್ನೂ ನಾಲ್ಕಾರು ಕಾಳುಗಳನ್ನು ಬಾಯಿಗೆ ಹಾಕಿಕೊಳ್ಳುವ ಆಸೆ. ಗಾಡಿ ಬರುವುದರಲ್ಲಿ ತಿಂದುಬಿಡಬೇಕು ಎನ್ನುವಷ್ಟರಲ್ಲಿ ಗಾಡಿ ಹತ್ತಿರವೇ ಬಂದು ಅದರ ಚಕ್ರದಡಿ ಪಕ್ಷಿ ಸಿಕ್ಕು ಅಪ್ಪಚ್ಚಿಯಾಗಿ ಹೋಯಿತು. ಉಳಿದ ಪಕ್ಷಿಗಳು ಇದನ್ನು ಕಾಣದೇ ಹುಡುಕಾಡುತ್ತ ರಾಜಮಾರ್ಗಕ್ಕೆ ಬಂದಾಗ ಸತ್ತುಬಿದ್ದ ಅನುಶಾಸಿಕಾ ಕಂಡಿತು. ಅವುಗಳಿಗೆ ಆಶ್ಚರ್ಯವಾಯಿತು. ಅಲ್ಲಿಗೆ ಹೋಗಲೇ ಬೇಡಿ ಎಂದು ಉಪದೇಶಿಸುತ್ತಿದ್ದ ಪಕ್ಷಿ ತಾನೇ ಅಲ್ಲಿಗೆ ಹೋಗಿ ಸತ್ತಿತಲ್ಲ ಎಂದು.

ಬುದ್ಧ ಹೇಳಿದ, ‘ಇಂಥ ಜನರಿಂದ ತುಂಬ ಹುಷಾರಾಗಿರಬೇಕು. ಬೋಧಿಸುವವರು ಮೊದಲು ತಮ್ಮ ಬೋಧನೆಯಂತೆ ನಡೆಯಬೇಕು. ನಡೆಯಲಾಗದಿದ್ದರೆ ಮತ್ತೊಬ್ಬರಿಗೆ ಬೋಧಿಸಬಾರದು. ಬೋಧಿಸುವುದು ಒಂದು, ನಡೆಯುವುದು ಮತ್ತೊಂದರಂತೆ ಇರುವವರು ಸಮಾಜದ್ರೋಹಿಗಳು’.

ಬರಹ ಇಷ್ಟವಾಯಿತೆ?

 • 20

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !