ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯತ್ನದ ಫಲ

Last Updated 24 ಡಿಸೆಂಬರ್ 2018, 4:58 IST
ಅಕ್ಷರ ಗಾತ್ರ

ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯವಾಳುತ್ತಿದ್ದಾಗ ಬೋಧಿಸತ್ವ ಉದೀಚ್ಯ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿದ್ದ. ಪ್ರಾಪ್ತವಯಸ್ಕನಾದ ಮೇಲೆ ಋಷಿಗಳ ಮಾರ್ಗದರ್ಶನದಲ್ಲಿ ಪಬ್ಬಜಿತನಾಗಿ ಧ್ಯಾನಮಾಡುತ್ತ ಐದುನೂರು ಋಷಿಗಳ ಜೊತೆಯಲ್ಲಿ ಹಿಮಾಲಯದ ತಪ್ಪಲು ಪ್ರದೇಶದಲ್ಲಿ ವಾಸಮಾಡುತ್ತಿದ್ದ.

ಒಂದು ವರ್ಷ ನಿಯತಕಾಲದಲ್ಲಿ ಮಳೆಯಾಗಲಿಲ್ಲ. ಹಿಂದಿನ ಬೇಸಿಗೆಯಲ್ಲಿ ಕಾಡಿನಲ್ಲಿಯ ಕೆರೆಗಳೆಲ್ಲ ಬತ್ತಿ ಹೋಗಿದ್ದವು. ಸುತ್ತ ಎಲ್ಲಿಯೂ ನೀರು ಸಿಗದಿದ್ದುದರಿಂದ ಅರಣ್ಯದ ಪಶು-ಪಕ್ಷಿಗಳು ಕಂಗಾಲಾಗಿದ್ದವು. ಕೆಲವು ನಾಜೂಕಾದ ಪಕ್ಷಿಗಳು ಸತ್ತು ಹೋಗುತ್ತಿದ್ದವು. ಅದಲ್ಲದೇ ತಪಸ್ಸು ಮಾಡುತ್ತಿದ್ದ ಋಷಿಗಳಿಗೂ ಹಣ್ಣು ಹಂಪಲುಗಳ, ನೀರಿನ ಅವಶ್ಯಕತೆ ತುಂಬಾ ಆಗುತ್ತಿತ್ತು.

ಆಗ ಬೋಧಿಸತ್ವ ತನ್ನ ಧ್ಯಾನವನ್ನು ಬಿಟ್ಟು ಆಶ್ರಮದ ಹೊರಗೆ ಬಂದ. ಒಬ್ಬನೇ ಪರಿಶ್ರಮದಿಂದ ಹಗಲು ರಾತ್ರಿ ನೆಲವನ್ನು ಅಗೆದು, ಅಗೆದು ಬಾವಿಯನ್ನು ತೆಗೆದ. ಸಾಕಷ್ಟು ನೀರು ದೊರಕಿತು. ಮತ್ತೆ ಹತ್ತಿರವಿದ್ದ ಚಪ್ಪಡಿಗಳನ್ನು ಸರಿಯಾಗಿ ಜೋಡಿಸಿ ಒಂದು ದೊಡ್ಡದಾದ ದೋಣಿಯನ್ನು ನಿರ್ಮಿಸಿದ. ಸತತವಾಗಿ ಬಾವಿಯಿಂದ ನೀರನ್ನು ಎಳೆದು, ಎಳೆದು ದೋಣಿಯನ್ನು ನೀರಿನಿಂದ ತುಂಬಿಸಿದ. ಆಗ ಎಂಥ ಬದಲಾವಣೆ ಬಂತು ಗೊತ್ತೇ? ಕಾಡಿನಲ್ಲಿಯ ಪಕ್ಷಿಗಳು ಹಾರಿ ಬಂದು ನೀರು ಕುಡಿದವು. ಪಕ್ಷಿಗಳನ್ನು ಹಿಂಬಾಲಿಸಿ ಪ್ರಾಣಿಗಳು ಬರತೊಡಗಿದವು! ಬೋಧಿಸತ್ವನಿಗೆ ತುಂಬ ಸಂತೋಷವಾಯಿತು. ಆದರೆ ಅವನಿಗೆ ಆಶ್ರಮಕ್ಕೆ ಹೋಗಿ ಧ್ಯಾನಮಾಡುವುದು ಅಸಾಧ್ಯವಾಯಿತು. ಯಾಕೆಂದರೆ ಪ್ರಾಣಿ ಪಕ್ಷಿಗಳ ಸಂಖ್ಯೆ ಹೆಚ್ಚಿದಂತೆ ಆತ ಮತ್ತಷ್ಟು ಪರಿಶ್ರಮದಿಂದ ಬಾವಿಯ ನೀರನ್ನು ಸೇದಿ ದೋಣಿಯನ್ನು ತುಂಬಿಸಬೇಕಿತ್ತು. ಈ ಕೆಲಸದಲ್ಲಿ ಆತ ಆಶ್ರಮವಾಸಿಗಳಿಗೆ ಹಣ್ಣುಗಳನ್ನು ಕಾಡಿನಿಂದ ತಂದು ಕೊಡುವುದೂ ಆಗಲಿಲ್ಲ.

ಪ್ರಾಣಿ-ಪಕ್ಷಿಗಳಿಗೆ ಮನುಷ್ಯರ ಭಾಷೆ ತಿಳಿಯದಿದ್ದರೂ ಭಾವನೆಗಳು ತಿಳಿಯುವುದಿಲ್ಲವೇ? ಅವು ಚಿಂತಿಸಿದವು. ಈ ಪುಣ್ಯಾತ್ಮ ನಮಗೋಸ್ಕರ ನೀರಿನ ವ್ಯವಸ್ಥೆ ಮಾಡಿದ್ದಾನೆ. ಅವನಿಗೆ ಊಟ ಮಾಡಲು ಸಮಯ ದೊರೆಯದೆ ನಿರಾಹಾರಿಯಾಗಿದ್ದಾನೆ. ಅವನಿಗೆ ನಾವು ಪ್ರತಿಯಾಗಿ ಉಪಕಾರ ಮಾಡಬೇಡವೇ? ಹೀಗೆ ಯೋಚಿಸಿ ಪ್ರತಿಯೊಂದು ಪ್ರಾಣಿ ಹಾಗೂ ಪಕ್ಷಿ ನೀರು ಕುಡಿಯಲು ಬರುವಾಗ ತನ್ನ ಶಕ್ತಿಗೆ ಅನುಸಾರವಾಗಿ ರುಚಿರುಚಿಯಾದ, ಮಾವು, ತೆಂಗು, ನೇರಳೆ, ಹಲಸು, ಬಾಳೆಹಣ್ಣುಗಳನ್ನು ತಂದು ಹಾಕುತ್ತಿದ್ದವು. ಅವನಿಗಾಗಿ ತರುತ್ತಿದ್ದ ಹಣ್ಣುಗಳೇ ಎರಡೆರಡು ಗಾಡಿಗಳಷ್ಟಾಗುತ್ತಿತ್ತು. ಅದು ಐದುನೂರು ಋಷಿಗಳಿಗೆ ಸಾಕಾಗಿ ಉಳಿಯುತ್ತಿತ್ತು.

ಈ ಕಥೆಯನ್ನು ಹೇಳಿ ಬುದ್ಧ ಈ ರೀತಿ ಪ್ರತಿಕ್ರಿಯಿಸುತ್ತಾನೆ, ‘ತನ್ನ ಸುತ್ತ ಮುತ್ತಲಿನ ಜನರ, ಪಶು ಪಕ್ಷಿಗಳ ದುಃಖವನ್ನು ದೂರಮಾಡುವುದು ಧ್ಯಾನಕ್ಕಿಂತ ದೊಡ್ಡದು. ಒಬ್ಬ ಮನುಷ್ಯನ ಪರಿಶ್ರಮ ಅಷ್ಟೊಂದು ಋಷಿಗಳ, ಪಶು-ಪಕ್ಷಿಗಳ ಬದುಕಿನ ರಕ್ಷಣೆಗೆ ಕಾರಣವಾಯಿತು. ಆದ್ದರಿಂದ ಮನುಷ್ಯ ಅವಶ್ಯಕವಾಗಿ ಪರಿಶ್ರಮದಿಂದ ಪ್ರಯತ್ನ ಮಾಡಬೇಕು. ಪಂಡಿತರೂ ಕೇವಲ ಜ್ಞಾನವೆಂದು ದೈಹಿಕ ಶ್ರಮದಿಂದ ವಿಮುಖರಾಗಬಾರದು. ಫಲ ಎಂದಿಗೂ ಪ್ರಯತ್ನದಿಂದಲೇ ದೊರೆಯುವಂಥದ್ದು’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT