ಶುಕ್ರವಾರ, ಮಾರ್ಚ್ 5, 2021
24 °C

ಚಾಮುಂಡಿ ಬೆಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 ಚಾಮುಂಡಿಬೆಟ್ಟಕ್ಕೆ ಆ ಹೆಸರು ಅದರ ಮೂಲದೇವತೆಯಾದ ಚಾಮುಂಡೇಶ್ವರಿಯಿಂದ ಬಂದಿದ್ದರೂ, ಆ ಬೆಟ್ಟದ ಮೂಲ ಹೆಸರು ಮಹಾಬಲಗಿರಿ. ಈ ಸ್ಥಳವನ್ನು ಸುಮಾರು ಹತ್ತನೆಯ ಶತಮಾನದ ಕಾಲಕ್ಕಾಗಲೇ ಪುಣ್ಯಕ್ಷೇತ್ರವೆಂದು ಪರಿಗಣಿಸಲಾಗಿತ್ತು. ಇದಕ್ಕೆ ಮಬ್ಬೆಲದ ತೀರ್ಥ, ಮಾರ್ಬಲತೀರ್ಥ, ಮಾರ್ಬಳತೀರ್ಥ, ಮಹಾಬಲತೀರ್ಥ ಮೊದಲಾದ ಹೆಸರುಗಳಿದ್ದವು. ಚಾಮುಂಡಿ ದೇವಾಲಯದ ಎಡಕ್ಕೆ ಕೆಲವೇ ಮೀಟರುಗಳ ಅಂತರದಲ್ಲಿ ಇಲ್ಲಿನ ಮೂಲದೈವವಾದ ಮಹಾಬಲೇಶ್ವರನ ದೇವಾಲಯವಿದೆ. ಮಹಾಬಲೇಶ್ವರನ ಗುಡಿಯ ಹಿಂಭಾಗದಲ್ಲಿ ವಿಜಯನಾರಾಯಣನ ದೇವಾಲಯವಿದೆ.

ಬೆಟ್ಟದ ಮೇಲಿನ ಚಾಮುಂಡೇಶ್ವರಿಯ ದೇವಸ್ಥಾನದ ಮೂಲಭಾಗವು ಸುಮಾರು ಹನ್ನೆರಡನೆಯ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಿಸಲ್ಪಟ್ಟದ್ದು. ಆನಂತರ ವಿಜಯನಗರ ಮತ್ತು ಮೈಸೂರು ಅರಸರ ಕಾಲದಲ್ಲಿ ದೇವಸ್ಥಾನವು ಹಲವು ಬದಲಾವಣೆಗಳನ್ನು ಕಂಡಿತು; ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ದೇವಸ್ಥಾನದ ಈಗಿರುವ ಸ್ವರೂಪ ಪಡೆಯಿತು. ಹೀಗೆ ಮೈಸೂರರಸರ ಕಾಲದಲ್ಲಿ ಅವರ ಕುಲದೇವಿಯಾದ ಚಾಮುಂಡೇಶ್ವರಿಗೆ ಪ್ರಾಮುಖ್ಯ ಹೆಚ್ಚುತ್ತಿದ್ದಂತೆ, ಆಕೆಯ ಆಲಯವೂ ವಿಸ್ತಾರಗೊಂಡು ನಿಧಾನವಾಗಿ ಮಹಾಬಲನ ಪ್ರಾಮುಖ್ಯ ಇಳಿಮುಖಗೊಂಡಿರಬೇಕು.

ಚಾಮುಂಡಿಬೆಟ್ಟದ ಸುಮಾರು ಅರ್ಧ ಎತ್ತರದಲ್ಲಿ ಸುಂದರವಾದ ಕರಿಕಲ್ಲಿನ ನಂದಿವಿಗ್ರಹವು ಬೆಟ್ಟದ ಪ್ರಮುಖ ಪ್ರವಾಸೀ ಆಕರ್ಷಣೆಗಳಲ್ಲೊಂದು; ಇದನ್ನು ಕಟ್ಟಿಸಿದ್ದು ದೊಡ್ಡ ದೇವರಾಜ ಒಡೆಯರು. ಸರಳ ಸುಂದರವಾದ ಕಿರುಗೆಜ್ಜೆ ಗಂಟೆಗಳ ಕುಸುರಿ ಅಲಂಕಾರವನ್ನು ಹೊಂದಿದ ಇದು ಸುಮಾರು ಹದಿನಾರು ಅಡಿ ಎತ್ತರ ಮತ್ತು ಇಪ್ಪತ್ತೈದು ಅಡಿ ಉದ್ದವಿದೆ. ಬೆಟ್ಟದ ಮೇಲೆ ಸುಂದರವಾದ ಒಂದು ಮಹಿಷಾಸುರನ ವಿಗ್ರಹವಿದೆ. ಬಲಗೈಯಲ್ಲಿ ಹಾವನ್ನೂ ಎಡಗೈಯಲ್ಲಿ ಖಡ್ಗವನ್ನೂ ಹಿಡಿದ ಬಿರಿದ ಕಣ್ಣುಗಳ ಮಹಿಷಾಸುರನ ವಿಗ್ರಹ ಸಹ ಬೆಟ್ಟದ ಪ್ರಮುಖ ಪ್ರವಾಸೀ ಆಕರ್ಷಣೆ. ಈ ವಿಗ್ರಹವೂ ದೊಡ್ಡ ದೇವರಾಜ ವೊಡೆಯರ ಕಾಲದಲ್ಲೇ ನಿರ್ಮಿಸಲ್ಪಟ್ಟದ್ದು.

ಚಾಮುಂಡಿಯು ಪಾರ್ವತಿಯ ಅವತಾರಗಳಲ್ಲೊಂದು. ಅಶ್ವಯುಜಶುಕ್ಲಪಕ್ಷದ ನವರಾತ್ರಿಯ ಸಮಯವು ದೇವಿಯ ವಿವಿಧ ರೂಪಗಳ ಆರಾಧನೆಗೆ ಮೀಸಲಾಗಿದೆ. ವಿಜಯನಗರದ ಕಾಲದಲ್ಲಿ ಬಹುವೈಭವದಿಂದ ನಡೆಯುತ್ತಿದ್ದ ಉತ್ಸವವನ್ನು ಆ ಸಾಮ್ರಾಜ್ಯದ ಸಾಂಸ್ಕೃತಿಕ ಉತ್ತರಾಧಿಕಾರಿಗಳೆನಿಸಿದ ಮೈಸೂರರಸರು ಮುಂದುವರಿಸಿಕೊಂಡು ಬಂದರು. ದಸರಾ ಉತ್ಸವದ ಕೊನೆಯ ದಿನವಾದ ವಿಜಯ ದಶಮಿಯು ಕೆಟ್ಟದ್ದರ ಮೇಲೆ ಸಾತ್ವಿಕತೆಯ ವಿಜಯವನ್ನು ಸಂಕೇತಿಸುತ್ತದೆ. ಮಾರ್ಕಂಡೇಯಪುರಾಣ, ದೇವೀಭಾಗವತ ಮೊದಲಾದ ಹಲವು ಪುರಾಣಗಳು ಚಾಮುಂಡಿಯ ಕಥೆಯನ್ನು ಚಿತ್ರಿಸುತ್ತವೆ. ದೇವತೆಗಳಿಗೆ, ಶಿಷ್ಟರಿಗೆ ಕಂಟಕನಾಗಿದ್ದ ಮಹಿಷಾಸುರನ ಸಂಹಾರಕ್ಕಾಗಿ ಸಕಲದೇವತೆಗಳ ತೇಜಸ್ಸಿನ ಸಾರವನ್ನೊಳಗೊಂಡು ಆದಿಶಕ್ತಿಯು ಅವತರಿಸುತ್ತಾಳೆ. ಚಂಡಮುಂಡರೆಂಬ ದೈತ್ಯರನ್ನು ವಧಿಸಿ ಚಾಮುಂಡಿಯಾಗುತ್ತಾಳೆ, ಮಹಿಷನನ್ನು ವಧಿಸಿ ಮಹಿಷಾಸುರಮರ್ದಿನಿಯಾಗುತ್ತಾಳೆ.

ಜನದಪರಂಪರೆಯಲ್ಲಿ ಬರುವ ಚಾಮುಂಡಿಯ ವೃತ್ತಾಂತ ವರ್ಣರಂಜಿತವಾಗಿದೆ. ಉಜ್ಜಯಿನಿಯ ಬಿಜ್ಜಳರಾಜನಿಗೆ ವೀರರಲ್ಲಿ ವೀರರಾದ ಏಳು ಹೆಣ್ಣುಮಕ್ಕಳು. ಅವರು ಕಾರಣಾಂತರದಿಂದ ಜಗಳವಾಡಿಕೊಂಡು ಅರಮನೆ ಬಿಟ್ಟು ದಕ್ಷಿಣದೇಶಕ್ಕೆ ಬಂದು ಬೇರೆಬೇರೆಡೆ ನೆಲೆಸುತ್ತಾರೆ. ಅವರಲ್ಲಿ ಹಿರಿಯಳಾದ ಉರಿಮಸಣಿ ಪಿರಿಯಾಪಟ್ಟಣದಲ್ಲಿ ನೆಲೆಸುತ್ತಾಳೆ. ಕೊನೆಯವಳಾದ ಚಾಮುಂಡಿ ನೆಲೆಸಲು ಸ್ಥಳ ಹುಡುಕುತ್ತಿದ್ದಾಗ ಮಹಿಷಮಂಡಲವೆಂಬ ಸುಂದರವಾದ ಪ್ರದೇಶ ಅವಳ ಗಮನಕ್ಕೆ ಬರುತ್ತದೆ. ಆದರೆ ಅಲ್ಲಿನ ರಕ್ಕಸದೊರೆಯಾದ ಮಹಿಷಾಸುರನು ಅವಳನ್ನು ಎದುರಿಸಿ ನಿಲ್ಲುತ್ತಾನೆ. ಈತನೊಡನೆ ಸೆಣೆಸುವಾಗ, ರಕ್ಕಸನ ಮೈಯಿಂದ ಉದುರಿದ ಒಂದೊಂದು ಹನಿ ರಕ್ತಕ್ಕೂ ನೂರಾರು ಮಂದಿ ರಕ್ಕಸರು ಹುಟ್ಟಿಕೊಳ್ಳುತ್ತಾ, ಯುದ್ಧ ವಿಷಮವಾಗುತ್ತದೆ. ಆಗ ಉಂಟಾದ ಕ್ರೋಧದಿಂದ ಚಾಮುಂಡಿಯ ಮೈಬಿಸಿಯೇರಿ ಬೆವರಲು ಆರಂಭಿಸುತ್ತಾಳೆ. ಆ ಬೆವರು ನೆಲಕ್ಕೆ ಸೋಕಿದಾಗ ಅದರಿಂದ ಉರಿಮಾರಿ ಹುಟ್ಟುತ್ತಾಳೆ. ಮಹಿಷನ ಮೈಯಿಂದ ರಕ್ತ ಹರಿಯುತ್ತಿದ್ದಂತೆಯೇ ಅದನ್ನು ನೆಲಮುಟ್ಟಲು ಬಿಡದೇ ತನ್ನ ಉರಿನಾಲಿಗೆಯಿಂದ ನೆಕ್ಕುತ್ತಾ ಸಾಗುತ್ತಾಳೆ ಉರಿಮಾರಿ. ಹೀಗೆ ಅವಳ ಸಹಾಯದಿಂದ ಚಾಮುಂಡಿಯು ಮಹಿಷಾಸುರನನ್ನು ಮುಗಿಸುತ್ತಾಳೆ. ಆನಂತರ ಈ ಉರಿಮಾರಿ ಅಲ್ಲೇ ಚಾಮುಂಡಿಬೆಟ್ಟದ ಪಕ್ಕದ ಉತ್ತನೂರಿನಲ್ಲಿ ನೆಲೆಸಿ ಉತ್ತನಹಳ್ಳಿ ಮಾರಮ್ಮನೆಂದು ಪ್ರಸಿದ್ಧಳಾಗುತ್ತಾಳೆ. ಈಕೆಗೆ ಜ್ವಾಲಾಮಾಲಿನಿ/ಜ್ವಾಲಾತ್ರಿಪುರಸುಂದರಿ ಎಂಬ ಹೆಸರೂ ಇದೆ. ಮಹಿಷಮಂಡಲವನ್ನು ವಶಪಡಿಸಿಕೊಂಡ ಚಾಮುಂಡಿ, ಮಹಾಬಲಗಿರಿಯಲ್ಲಿ ನೆಲೆಸುತ್ತಾಳೆ. ಹಾಗೆಯೇ ನಂಜುಂಡ-ಚಾಮುಂಡಿಯರ ಪ್ರಣಯವೂ, ಇದರಿಂದ ಕುಪಿತನಾದ ಚಾಮುಂಡಿಯ ಅಣ್ಣನಾದ ಮಲೆಮಾದೇಶ್ವರನ ವಿರಕ್ತಿಯ ಕಥೆಯೂ ಸ್ವಾರಸ್ಯಕರವಾಗಿದೆ.

ಮೈಸೂರಿಗೆ ಆ ಪ್ರಾಂತ್ಯದ ಪುರಾತನ ದೊರೆಯಾದ ಮಹಿಷನ ಕಾರಣದಿಂದ ಮಹಿಷಮಂಡಲ ಎಂಬ ಹೆಸರಿದ್ದು ಅದೇ ಕ್ರಮೇಣ ಮಹಿಷ > ಮಾಯ್ಸ + ಊರು = ಮೈಸೂರು ಎಂದಾಗಿರಬಹುದು. ಅಶೋಕನ ಕಾಲದಲ್ಲಿ ಮಹಾದೇವನೆಂಬ ಥೇರವಾದಿಯನ್ನು ದಮ್ಮಪ್ರಚಾರಕ್ಕಾಗಿ ಮಹಿಷಮಂಡಲದ ಕಡೆಗೆ ಕಳುಹಿಸಿದ್ದಾಗಿ ಉಲ್ಲೇಖಗಳಿವೆ. ಆದರೆ ಮಹಿಷಮಂಡಲವು ಯಾವಾಗಿನಿಂದ ’ಮಹಿಷೂರು’ ಆಯಿತೆಂಬುದು ಸ್ಪಷ್ಟವಿಲ್ಲ. ಈಗಿನ ಮೈಸೂರು ಪ್ರಾಂತ್ಯಕ್ಕೆ ಮಹಿಷಮಂಡಲವೆಂಬ ಹೆಸರು ಬಹುಕಾಲದಿಂದ ಇದೆ.

ಚಾಮುಂಡಿ, ಮೈಸೂರು, ಮೈಸೂರರಸರು ಕನ್ನಡನಾಡಿನ ಸಾಂಸ್ಕೃತಿಕ ಐತಿಹಾಸಿಕ ಜೀವನದಲ್ಲಿ ಬಹುಮುಖ್ಯ ಗುರುತುಗಳು. 

ಚಾಮುಂಡಿ ಬೆಟ್ಟವು ಮೈಸೂರು ಅರಮನೆ/ಕೇಂದ್ರ ಬಸ್ ನಿಲ್ದಾಣದಿಂದ ಸುಮಾರು ಹನ್ನೆರಡು ಕಿಲೋಮೀಟರು ದೂರದಲ್ಲಿದ್ದು ಬಸ್ ವ್ಯವಸ್ಥೆಯಿದೆ. ಸಮುದ್ರಮಟ್ಟದಿಂದ ಸುಮಾರು ಸಾವಿರ ಮೀಟರು ಎತ್ತರವಿರುವ ಈ ಬೆಟ್ಟವು ಪುರಾಣಪ್ರಸಿದ್ಧವಾದುದು, ಇತಿಹಾಸಪ್ರಸಿದ್ಧವಾದುದು - ಮೈಸೂರಿನ ನಗರದೇವತೆಯಾದ ಚಾಮುಂಡೇಶ್ವರಿ ಇಲ್ಲಿ ನೆಲೆಸಿದ್ದಾಳೆ. ಚಂಡಮುಂಡರನ್ನು ಕೊಂದದ್ದರಿಂದ ಆಕೆ ಚಾಮುಂಡಿ. ಮಹಿಷಾಸುರನನ್ನು ಕೊಂದುದರಿಂದ ಮಹಿಷಮರ್ದಿನಿ. ಈಕೆ ಮೈಸೂರರಸರ ಕುಲದೇವಿ, ಮತ್ತು ಅದೇ ಕಾರಣಕ್ಕೆ ಮೈಸೂರು ರಾಜ್ಯದ ನಾಡದೇವಿ ಕೂಡ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.