ಗಾರ್ದಭ ಗಾನ!

7

ಗಾರ್ದಭ ಗಾನ!

Published:
Updated:
Prajavani

ಪಾಕಿಸ್ತಾನವು ಚೀನಾಕ್ಕೆ ಕತ್ತೆಗಳನ್ನು ರಫ್ತು ಮಾಡಲಿದೆ ಎಂದು ವರದಿಯಾಗಿದೆ. ವಿಶ್ವದ ದೊಡ್ಡಣ್ಣನಿಗೆ ಸಡ್ಡು ಹೊಡೆದಿರುವ ಕಪ್ಪೆ, ಹಾವು ತಿನ್ನುವವರ ದೇಶಕ್ಕೆ ತಾವು ರಫ್ತಾಗುತ್ತಿರುವುದಕ್ಕೆ ಪಾಕ್‌ ಕತ್ತೆಗಳೆಲ್ಲ ಹೆಮ್ಮೆಯಿಂದ ಬೀಗಿರಬಹುದು. ಸಾಲದ ಸುಳಿಗೆ ಸಿಲುಕಿರುವ ದೇಶದ ಪ್ರಜೆಗಳಂತೂ, ದೇಶಿ ಕತ್ತೆಗಿರುವ ಸೌಭಾಗ್ಯ ತಮಗಿಲ್ಲವಲ್ಲ ಎಂದೂ ಹಲುಬಿಯಾರು. ಸಾಲದಿಂದ ಪಾರಾಗಲು ಪಾಕ್‌ ಪುಢಾರಿಗಳು ಕತ್ತೆಗಳನ್ನು ರಫ್ತು ಮಾಡಿ ಹಣ ಗಳಿಸುವ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದು ಕೆಲವರ ಕುಹಕ ಇದ್ದೀತು. ಅತಿಹೆಚ್ಚು ಕತ್ತೆಗಳು ಇರುವ ವಿಶ್ವದ ಮೂರನೇ ಅತಿದೊಡ್ಡ ದೇಶದ ಸರಕಿಗೆ ರಫ್ತು ಮೌಲ್ಯ ದೊರೆತಿದೆ. ನಿಮ್ಮಲ್ಲಿ ಕತ್ತೆಗಳು ಎಷ್ಟಿವೆ ಎನ್ನುವ ಲೆಕ್ಕವೂ ಇಲ್ವಲ್ಲ ಎಂದೇ ಹಲವರು ತಿರುಗೇಟು ನೀಡಿರಲಿಕ್ಕೂ ಸಾಕು. ಕತ್ತೆಗಳ ಸಂಖ್ಯೆ ಗೊತ್ತಿದ್ದರೆ, ಮಧ್ಯಂತರ ಬಜೆಟ್‌ ನಲ್ಲಿ ಅಷ್ಟಿಷ್ಟು ಪರಿಹಾರನಾದ್ರೂ ಸಿಗುತ್ತಿತ್ತಲ್ಲ ಎಂಬುದು ನಮ್ಮ ಕತ್ತೆಗಳ ವಾದವೂ ಇದ್ದೀತು.

‘ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ’ ಎಂದು ಇನ್ನು ಮುಂದೆ ಯಾರಾದರೂ ಹೀಯಾಳಿಸಲು ಮುಂದಾದರೆ, ಕತ್ತೆಗಳು ಹಿಂದೆ ಮುಂದೆ ನೋಡದೆ ಝಾಡಿಸಿ ಒದೆಯಬಹುದು. ‘ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ’– ಗಾದೆ ಮಾತನ್ನು ಈಗ ‘ಕತ್ತೆಗೊಂದು ಕಾಲ’ ಎಂದೂ ವಿಸ್ತರಿಸಬಹುದು. ಈಶಾನ್ಯದ ರಾಜ್ಯಗಳಲ್ಲಿ ಪೌರತ್ವ (ತಿದ್ದುಪಡಿ) ಮಸೂದೆಗೆ ವಿರೋಧ ವ್ಯಕ್ತವಾದಂತೆ, ಆಮದು ಕತ್ತೆಗಳಿಗೆ ಚೀನಿ ಪೌರತ್ವ ನೀಡುವುದರ ವಿರುದ್ಧ ಅಲ್ಲಿನ ಕತ್ತೆಗಳೆಲ್ಲ ಮುಷ್ಕರ ಹೂಡಿ ಹ್ಞೂಂಕರಿಸಿದರೆ, ಬಿಕ್ಕಟ್ಟು ಶಮನಕ್ಕೆ ಚೀನಾದ ಷಿ, ಭಾರತದ ಷಾನ (ಬಿಜೆಪಿಯ ಚಾಣಕ್ಯ) ಸಲಹೆ ಕೇಳಲೂಬಹುದು. 

ಭಾರತದಲ್ಲಿ ಕಂಡುಬಂದಿರುವಂತೆ, ಚೀನಾದಲ್ಲೂ ತಮಗೆ ನಿರುದ್ಯೋಗ ಸಮಸ್ಯೆ ಕಾಡಬಹುದು ಎನ್ನುವುದು ಸ್ಥಳೀಯ ಕತ್ತೆಗಳ ಆತಂಕ ಇದ್ದೀತು. ಟ್ರೇಲರ್‌ ಈಗಷ್ಟೇ ಬಿಡುಗಡೆಯಾಗಿದೆ. ಪಿಕ್ಚರ್‌ ಅಭಿ ಭಿ ಬಾಕಿ ಹೈ ಎನ್ನುವಂತೆ, ‘ನೋ ಮೋರ್‌ ಜಾಬ್‌’ನ ನಮೋ ಪಡೆ ಮತ್ತೆ ಅಧಿಕಾರಕ್ಕೆ ಬಂದರೆ ತಮಗೂ ಶುಕ್ರದೆಸೆ ಖುಲಾಯಿಸಬಹುದು ಎನ್ನುವುದು ಗಾರ್ದಭಗಳ ಹೊಸ ಗಾನ ಇದ್ದೀತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !