ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಥಗಳ ಪರಿಧಿ ಮತ್ತು ತಪ್ಪು ಗ್ರಹಿಕೆ

ವಾಗ್ವಾದಕ್ಕೆ ಮುಕ್ತ ಅವಕಾಶವಿದ್ದ ನೆಲವಿಂದು ಹುಸಿ ಭಾವುಕತೆಯಿಂದ ಟೊಳ್ಳಾಗುತ್ತಿದೆಯೇ?
Last Updated 4 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಈ ತಿಂಗಳ 2ರ ಮುಂಜಾನೆ ಚಿಂತಕ, ಹೋರಾಟಗಾರ ಆನಂದ್ ತೇಲ್ತುಂಬ್ಡೆಯವರ ಬಂಧನ ಪ್ರಹಸನ ನಡೆಯಿತು. ಸಂಜೆ ಸೆಷನ್ಸ್ ಕೋರ್ಟ್ ಆದೇಶದ ಮೇರೆಗೆ ಅವರ ಬಿಡುಗಡೆಯೂ ಆಯಿತು. ತಮ್ಮ ವಿರುದ್ಧದ ಎಫ್‌ಐಆರ್‌ ರದ್ದುಪಡಿಸುವಂತೆ ತೇಲ್ತುಂಬ್ಡೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದರೂ ಫೆಬ್ರುವರಿ 11ರವರೆಗೆ ಬಂಧಿಸದಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶ ಈ ಬಾರಿ ಅವರನ್ನು ಸರಳುಗಳಿಂದ ಹೊರತಂದಿದೆ. ಆದರೆ, ಅವರು ನಿಗದಿತ ಅವಧಿಯೊಳಗೆ ಜಾಮೀನು ಪಡೆಯಬಲ್ಲರೇ? ಇಲ್ಲದಿದ್ದರೆ ಅವರೂ ಸೆರೆಮನೆ ಸೇರಬೇಕಾಗುತ್ತದೆಯೇ? ಗೊತ್ತಿಲ್ಲ.

ಇಷ್ಟಕ್ಕೂ ಆನಂದ್ ತೇಲ್ತುಂಬ್ಡೆ ಯಾರು? ಸಮಾಜಕ್ಕೆ ಅವರ ಕೊಡುಗೆ ಏನು? ಈ ಬಂಧನ ಪ್ರಕರಣ ಏಕೆ ಅಪಾಯಕಾರಿ? ಜಾಗತಿಕ ಮಟ್ಟದ ಬುದ್ಧಿಜೀವಿಗಳೇಕೆ ಇದನ್ನು ವಿರೋಧಿಸಿ ಪ್ರತಿಕ್ರಿಯಿಸಿದ್ದಾರೆ? ಅವರ ಬಂಧನಕ್ಕೆ ತಡೆ ತರುವಂತೆ ವಿಶ್ವಸಂಸ್ಥೆಯ ಹಸ್ತಕ್ಷೇಪವನ್ನೇಕೆ ಬಯಸುತ್ತಿದ್ದಾರೆ?– ಈ ಪ್ರಶ್ನೆಗಳಿಗೆ ಉತ್ತರ ತಿಳಿದಿರುವುದು ಕೆಲವೇ ಸಾವಿರ ಮಂದಿಗೆ ಮತ್ತು ಈ ಮಂದಿ ಸಹಜವಾಗಿಯೇ ಆತಂಕಗೊಂಡಿದ್ದಾರೆ.

ಇದೇ ವೇಳೆ, ತೇಲ್ತುಂಬ್ಡೆ ಯಾರೆಂದೇ ಗೊತ್ತಿಲ್ಲದ, ಈ ಬಂಧನ ಪ್ರಕರಣದ ಹಿನ್ನೆಲೆಯಲ್ಲಿ ಅವರನ್ನೊಬ್ಬ ‘ನಗರ ನಕ್ಸಲ್’ ಎಂದು ಭಾವಿಸಿರುವ ಲಕ್ಷಾಂತರ ಜನ ಈ ದೇಶದಲ್ಲಿದ್ದಾರೆ. ಭೀಮಾ ಕೋರೆಗಾಂವ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣ ಏನು ಎಂಬುದು ಅವರಿಗೆ ಗೊತ್ತಿಲ್ಲ. ಬುದ್ಧಿಜೀವಿಗಳೆಂದರೆ ಯಾರು? ಅವರ ಆಲೋಚನಾಕ್ರಮ ಹೇಗಿರುತ್ತದೆ ಎಂಬುದೂ ಗೊತ್ತಿಲ್ಲ. ಅವರಿಗೆ ಹೇಳಲಾಗಿರುವುದು ಇಷ್ಟೇ– ‘ಒಂದಷ್ಟು ನಗರ ನಕ್ಸಲರು ಈ ದೇಶವನ್ನು ‘ಉಡಾಯಿಸಲು’ ಹೊರಟಿದ್ದಾರೆ ಮತ್ತು ಮೋದಿಯವರನ್ನು ಕೊಲ್ಲಲು ಹವಣಿಸುತ್ತಿದ್ದಾರೆ. ಅವರಲ್ಲಿ ಆನಂದ್ ತೇಲ್ತುಂಬ್ಡೆ ಕೂಡ ಒಬ್ಬರು!’ ಈ ನಂಬಿಸಲಾದ ಸುದ್ದಿಯ ಹಿನ್ನೆಲೆಯಲ್ಲಿ ಜನಸಾಮಾನ್ಯರ ಪ್ರತಿಕ್ರಿಯೆ ಹೊರಹೊಮ್ಮಿದೆ. ಅವರ ಅಜ್ಞಾನಕ್ಕೆ ಸಾಕ್ಷಿ ಎಂಬಂತೆ, ಈ ಮಂದಿ ದಲಿತ ಚಿಂತಕ– ಅಂಬೇಡ್ಕರ್‌ವಾದಿ ಆನಂದ್ ತೇಲ್ತುಂಬ್ಡೆಯವರನ್ನೂ ‘ಕಮ್ಯುನಿಸ್ಟ್’ (ಕಮ್ಮಿನಿಷ್ಠ) ಎಂದು ಕರೆದಿದ್ದಾರೆ!

ಸಾಮಾಜಿಕ ಜಾಲತಾಣಗಳಲ್ಲಿ ತೇಲ್ತುಂಬ್ಡೆ ಬಂಧನದ ಹಿನ್ನೆಲೆಯಲ್ಲಿ ಬಂದ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಗಾಬರಿಯಾಗುತ್ತದೆ. ರಾಜಕಾರಣವನ್ನೇ ಅರಿಯದ, ಹಿಂದುತ್ವದ ಕಾರಣಕ್ಕೆ ಪಕ್ಷವೊಂದಕ್ಕೆ ನಿಷ್ಠರಾಗಿರುವ ಯುವಜನರು ತೇಲ್ತುಂಬ್ಡೆ ಬಂಧನವನ್ನು ‘ಕಮ್ಮಿನಿಷ್ಠ ದೇಶದ್ರೋಹಿಗೆ ಸರಿಯಾದ ಪಾಠ’ ಎಂದು ಕರೆದಿದ್ದಾರೆ. ಬಿಡುಗಡೆಯ ಸುದ್ದಿ ಹರಡುತ್ತಿದ್ದಂತೆಯೇ, ‘ಅಂಬೇಡ್ಕರ್‌ ಬರೆದ ಕಾನೂನಿನ ಹಣೆಬರಹವಿಷ್ಟೇ’ ಎಂದು ಜರೆದಿದ್ದಾರೆ!ಮೊನ್ನೆ ನಡೆದ ಬಂಧನವೇ ಅಕ್ರಮ. ಪೊಲೀಸ್ ಇಲಾಖೆಗೆ ಅಷ್ಟುಮಾತ್ರದ ಕಾನೂನು ತಿಳಿದಿಲ್ಲವೆಂದರೆ ನಂಬಲು ಕಷ್ಟ.

ನಂತರದ ಬೆಳವಣಿಗೆ ಏನಾದರೂ ಆಗಿರಲಿ, ಈ ಕ್ರಮದಿಂದ ಒಂದು ದೊಡ್ಡ ಸಮೂಹ ‘ನಮ್ಮ ಪ್ರಧಾನಿ, ದೇಶದ್ರೋಹಿಗಳನ್ನು ಬಂಧಿಸಲು ಕಾನೂನನ್ನೂ ಮೀರಬಲ್ಲರು’ ಎಂದು ಸಂಭ್ರಮಿಸಿದ್ದು ಸುಳ್ಳಲ್ಲ. ‘ಈ ಬಂಧನ ಪ್ರಕರಣದ ಹಿಂದೆ ಕೇಂದ್ರದ ಹುನ್ನಾರವಿದೆ’ ಅಂದರೆ; ‘ಮಹಾರಾಷ್ಟ್ರ ಪೊಲೀಸರಿಗೂ ಮೋದಿಗೂ ಸಂಬಂಧವಿಲ್ಲ’ ಅನ್ನುವ ಜನರೇ, ಬಂಧಿಸಿದ ‘ಎದೆಗಾರಿಕೆ’ಗೆ ಮೋದಿಯನ್ನು ಅಭಿನಂದಿಸುತ್ತಿದ್ದಾರೆ. ಈ ವಿಚಿತ್ರವನ್ನು ನೀವು ಗಮನಿಸಬೇಕು!

ಕಾನೂನಿಗೆ ಬಲಪಂಥೀಯ ಅಪರಾಧಗಳು, ಎಡಪಂಥೀಯ ಅಪರಾಧಗಳು ಎಂಬ ಭೇದಭಾವವಿಲ್ಲ. ಆದರೆ ಜನಸಾಮಾನ್ಯರು ಈ ಪ್ರಕರಣವನ್ನು ತಪ್ಪಾಗಿ ಗ್ರಹಿಸಿ, ತಪ್ಪು ಚಿಂತನೆಯ ಜನರನ್ನೇ ಮತ್ತಷ್ಟು ಬಲವಾಗಿ ಆತುಕೊಳ್ಳುವುದು ದುರಂತ. ಜನಸಾಮಾನ್ಯರಿಗೆ ದೇಶದ್ರೋಹ ಎಂದರೇನು ಎಂಬುದನ್ನು ಅರ್ಥಮಾಡಿಸುವಲ್ಲಿ ಸೋಲಾಗಿರುವುದೇ ಇದಕ್ಕೆ ಕಾರಣ. ಗಡಿಗಳ, ಸೇನೆಯ, ಹಿಂದುತ್ವದ ಹಾಗೂ ಪ್ರಭುತ್ವದ ವಿರುದ್ಧ ಮಾತಾಡುವುದು ದೇಶದ್ರೋಹವೆಂದು ನಂಬಿಸಲಾಗಿದೆ. ಆದರೆ, ‘ದೇಶ ಅಂದರೆ ಮನುಷ್ಯರು’. ಭೂಕಬಳಿಕೆ, ಅತ್ಯಾಚಾರ, ತಾರತಮ್ಯ, ಅಸ್ಪೃಶ್ಯತೆ, ದಬ್ಬಾಳಿಕೆ, ಮಾನವ ಕಳ್ಳಸಾಗಾಣಿಕೆ... ಸಿದ್ಧಾಂತಗಳ ಜೊತೆ ಗುರುತಿಸಿ ಕೊಂಡವರು ಈ ಯಾವುದನ್ನೇ ಮಾಡಿದರೂ ಅದು ಕೇವಲ ಅಪರಾಧವಾಗಿ ಉಳಿಯುವುದಿಲ್ಲ; ಜನದ್ರೋಹವಾಗುತ್ತದೆ. ಜನದ್ರೋಹಕ್ಕಿಂತ ದೊಡ್ಡ ದೇಶದ್ರೋಹವಿದೆಯೇ? ಅಂಥವರ ಬೆಂಬಲಕ್ಕೆ ನಿಲ್ಲುವುದು ಕೂಡ ದೇಶದ್ರೋಹವೇ ಅಲ್ಲವೆ? ದೇಶದೊಳಗೆ, ಸಮುದಾಯವೊಂದರ ಅಸ್ಮಿತೆಗಾಗಿ ಪ್ರಭುತ್ವದ ವಿರುದ್ಧ ಸಶಸ್ತ್ರ ಬಂಡಾಯಕ್ಕೆ ಕುಮ್ಮಕ್ಕು ನೀಡಿದರೆ ದೇಶದ್ರೋಹವೆನ್ನುತ್ತಾರೆ. ಆಗಲಿ, ಈ ಅಭಿಪ್ರಾಯವನ್ನು ಗೌರವಿಸೋಣ. ಹೀಗೆ ಕುಮ್ಮಕ್ಕು ನೀಡುವ ವ್ಯಕ್ತಿಗಳ ಚಿಂತನೆಯನ್ನು ದೇಶದ್ರೋಹಿ ಸಿದ್ಧಾಂತವೆಂದು ಬಿಂಬಿಸಿ ಜನಸಾಮಾನ್ಯರಲ್ಲಿ ದ್ವೇಷ ಹುಟ್ಟುಹಾಕಲಾಗಿದೆ.

ಅದೇ ವೇಳೆ, ಬಿಜೆಪಿ ಜೊತೆ ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಸಂಬಂಧವಿರಿಸಿಕೊಂಡ ಕೆಲವು ಹಿಂದುತ್ವವಾದಿ ಸಂಘಟನೆಗಳ ಜನರೇ ಪಾಕಿಸ್ತಾನಿ ಗುಪ್ತಚರ ಇಲಾಖೆಗೆ ಮಾಹಿತಿ ಸೋರಿಕೆ ಮಾಡಿದ್ದರಲ್ಲ? ಅವರನ್ನು, ಅವರ ಸಂಘಟನೆಗಳನ್ನು, ಅವರು ಸಮರ್ಥಿಸುವ ಪಕ್ಷಗಳನ್ನೇಕೆ ದೇಶದ್ರೋಹಿ ಎನ್ನುವುದಿಲ್ಲ? ಭೀಮಾ ಕೋರೆಗಾಂವ್ ಹಿಂಸಾಚಾರ ದೇಶದ್ರೋಹಿಗಳ ಹಿಂಸಾಚಾರವಾದರೆ, ಮುಜಫ್ಫರ್ ನಗರದಲ್ಲಿ ನಡೆದಿದ್ದು ದೇಶಪ್ರೇಮಿಗಳ ಶಕ್ತಿಪ್ರದರ್ಶನವೇ?ಸಾಂವಿಧಾನಿಕವಾಗಿ ಜಾತ್ಯತೀತ ರಾಷ್ಟ್ರವಾಗಿರುವ ಭಾರತವನ್ನು ‘ಸಂಪೂರ್ಣ ಹಿಂದೂರಾಷ್ಟ್ರ’ವಾಗಿಸುವ ಕರೆ ಕೊಡುವುದು, ಈ ನಿಟ್ಟಿನಲ್ಲಿ ‘ಮುಸ್ಲಿಮರ ನಾಮಾವಶೇಷ’ ಮಾಡುವಂತೆ ಪ್ರಚೋದಿಸುವುದು ದೇಶದ್ರೋಹ ಅಲ್ಲವೇಕೆ?

ಜನಸಾಮಾನ್ಯರ ಪಾಲಿಗೆ ಫ್ಯಾಸಿಸ್ಟರನ್ನು ಬೆಂಬಲಿಸುವವರ ಜನದ್ರೋಹವು ದೇಶದ್ರೋಹವಾಗಿ ಕಾಣುವುದೇಇಲ್ಲ. ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸಿ, ಪರಿಸರ ಹಾಳುಗೆಡವಿ, ಅಕ್ರಮ ಗಣಿಗಾರಿಕೆ ನಡೆಸುವಂಥವರು ದೇಶದ್ರೋಹಿಗಳೆನಿಸುವುದಿಲ್ಲ. ಆದರೆ, ಆ ಮೂಲ ನಿವಾಸಿಗಳ ಬದುಕಿನ ಹಕ್ಕಿಗಾಗಿ ಪ್ರಭುತ್ವಕ್ಕೆ ಸವಾಲೆಸೆಯುವವರು ಖಳರಂತೆ ಕಾಣುತ್ತಾರೆ. ಕೋಟಿಗಟ್ಟಲೆ ತೆರಿಗೆ ವಂಚಿಸಿ, ವಿನಾಯಿತಿ ಪಡೆಯುವ ಉದ್ಯಮಿಗಳು ದೇಶದ್ರೋಹಿಗಳಲ್ಲ. ತಳಮಟ್ಟದಲ್ಲಿ ಕೆಲಸ ಮಾಡಲು ನಿಧಿ ಸಂಗ್ರಹಿಸುವ ಎನ್‌ಜಿಒ ಪ್ರತಿನಿಧಿಗಳು ಮೋಸಗಾರರಂತೆ ಕಾಣುತ್ತಾರೆ. ಇಲ್ಲಿ ಕೂಡ ಸಂಘ ಪರಿವಾರ ದೇಣಿಗೆ ಎತ್ತುವುದಾಗಲೀ ಎನ್‌ಆರ್‌ಐ– ವಿದೇಶಿ ದಾನಿಗಳಿಂದ ನಿಧಿ ಸಂಗ್ರಹಿಸುವುದಾಗಲೀ ಅವರಿಗೆ ಸಮಸ್ಯೆಯಾಗಿ ತೋರುವುದಿಲ್ಲ. ಎಡ ವಿಚಾರಧಾರೆಯ ಸಂಸ್ಥೆಗಳು ಸಂಗ್ರಹಿಸುವ ನಿಧಿಗೆ ಮಾತ್ರ ‘ಮಿಷನರಿಗಳ ಹಣ’ ಎಂದು ಪಟ್ಟಿ ಹಚ್ಚುತ್ತಾರೆ.

ಮಕ್ಕಳ ಹಕ್ಕುಗಳಿಗಾಗಿ ಹೋರಾಡುವ ಚಿಂತಕರು ಪ್ರತಿನಿಧಿಸುವ ಎಡ ವಿಚಾರಧಾರೆಯನ್ನು ದೇಶದ್ರೋಹಿ ಎಂದು ಕರೆಯುವ ಜನಕ್ಕೆ, ಈಶಾನ್ಯ ರಾಜ್ಯಗಳಲ್ಲಿ ‘ಬೇಬಿ ಲಿಫ್ಟಿಂಗ್’ ನಡೆಸುವ ಬಲ ವಿಚಾರಧಾರೆ ಜನದ್ರೋಹಿ ಅನಿಸುವುದಿಲ್ಲ! ತೇಲ್ತುಂಬ್ಡೆ ಬಂಧನಕ್ಕೆ ಬಂದ ಪ್ರತಿಕ್ರಿಯೆಗಳ ಹಿಂದೆ ಈ ಎಲ್ಲ ಚಿಂತನೆಯ ಪ್ರಭಾವವಿದೆ. ವಾಗ್ವಾದಕ್ಕೆ, ವೈಚಾರಿಕತೆಗೆ ಮುಕ್ತ ಅವಕಾಶ ನೀಡಿದ್ದ ನೆಲವಿಂದು ಹುಸಿ ಭಾವುಕತೆ ಮತ್ತು ಮೂರ್ಖತನದಿಂದ ಟೊಳ್ಳಾಗುತ್ತಾ ಸಾಗಿರು ವುದಕ್ಕೆ, ದುರದೃಷ್ಟವಶಾತ್ ನಾವು ಸಾಕ್ಷಿಯಾಗುತ್ತಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT