ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನಿಸುವುದು ನಕಾರಾತ್ಮಕ ಧೋರಣೆಯೇ?

ಪ್ರಶ್ನಿಸುವ ಮನೋಭಾವ ಕಳೆದುಕೊಂಡರೆ ಪ್ರಜಾಪ್ರಭುತ್ವ ವಿನಾಶದ ಹಾದಿ ಹಿಡಿಯುತ್ತದೆ
Last Updated 1 ಮಾರ್ಚ್ 2019, 20:16 IST
ಅಕ್ಷರ ಗಾತ್ರ

ಸರ್ಕಾರಕ್ಕೆ ಸ್ವಂತ ಶಕ್ತಿ ಇರುವುದಿಲ್ಲ. ಅದು ತಾನಾಳುವ ಪ್ರಜೆಗಳ ಬೆಂಬಲದಿಂದಷ್ಟೇ ಜೀವಿಸಬಲ್ಲ ಒಂದು ಪರೋಪಜೀವಿಯಾಗಿದೆ. ಅಲ್ಲದೆ, ತನ್ನ ಸಿದ್ಧಾಂತದ ಪ್ರವರ್ಧನೆಗೆ ಜನರ ನಂಬಿಕೆಗಳನ್ನು ತನ್ನಿಚ್ಛೆಯಂತೆ ಬಳಸುತ್ತದೆ, ಮನಬಂದಂತೆ ವ್ಯಾಖ್ಯಾನಿಸುತ್ತದೆ. ಇದು, ಒಂದು ದೇಶದ ಅಥವಾ ಒಂದು ಪಕ್ಷದ ಸರ್ಕಾರದ ಕತೆಯಲ್ಲ, ಎಲ್ಲ ಸರ್ಕಾರಗಳ ಮೂಲ ಲಕ್ಷಣವೇ ಇದಾಗಿರಬಹುದೇನೋ! ಪ್ರಧಾನಿ ನರೇಂದ್ರ ಮೋದಿಯವರು ಮೊನ್ನೆ ರಾಷ್ಟ್ರೀಯತೆಗೆ ನೀಡಿದ ವಿಚಿತ್ರ ವ್ಯಾಖ್ಯಾನ ಇದಕ್ಕೆ ಜ್ವಲಂತ ನಿದರ್ಶನವಾಗಿದೆ.

ಕಳೆದ ತಿಂಗಳು 15ರಂದು ಮೋದಿಯವರು ದೆಹಲಿ-ವಾರಾಣಸಿ ನಡುವಿನ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಹೀಗೆ ಚಾಲನೆಗೊಂಡ ಕೆಲವೇ ಗಂಟೆಗಳಲ್ಲಿ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಹಳಿಗಳ ಮಧ್ಯೆ ಅಚಾನಕ್ಕಾಗಿ ನಿಂತು ದಟ್ಟವಾದಹೊಗೆ ಹೊರಸೂಸಲಾರಂಭಿಸಿತು. ಪ್ರಾಣಾಪಾಯದಿಂದ ತಲ್ಲಣಿಸುತ್ತಿದ್ದ ಪ್ರಯಾಣಿಕರನ್ನು ಮತ್ತೊಂದು ರೈಲಿನಲ್ಲಿ ಹೇಗೋ ಸುರಕ್ಷಿತ ಜಾಗಕ್ಕೆ ಸಾಗಿಸಲಾಯಿತಾದರೂ ಈ ತಾಂತ್ರಿಕ ವೈಫಲ್ಯಕ್ಕೆ ಟೀಕೆಗಳು ವ್ಯಕ್ತವಾದವು. ಆಗ ಪ್ರಧಾನಿ ‘ನಮ್ಮನ್ನು ಟೀಕಿಸುವವರೆಲ್ಲರೂ ನಕಾರಾತ್ಮಕ ಮನಃಸ್ಥಿತಿಯವರು, ಆಕ್ಷೇಪಿಸುವ ಮೂಲಕ ನಮ್ಮ ಎಂಜಿನಿಯರುಗಳಿಗೆ ಅವಮಾನ ಮಾಡಲಾಗಿದೆ. ರೈಲ್ವೆ ವೈಫಲ್ಯದ ವಿರುದ್ಧ ಸೊಲ್ಲೆತ್ತುವುದು ಅಕ್ಷಮ್ಯ ಅಪರಾಧ’ ಎಂಬರ್ಥದ ಮಾತುಗಳನ್ನಾಡಿದರು.

ತೆರಿಗೆದಾರರು ಸರ್ಕಾರದ ಬೇಜವಾಬ್ದಾರಿತನವನ್ನು, ಎಂಜಿನಿಯರುಗಳ ವೈಫಲ್ಯವನ್ನು ಖಂಡಿಸುವುದು ತಪ್ಪೇ? ಶ್ರೀಸಾಮಾನ್ಯ ರೈಲು ಪ್ರಯಾಣದ ಸುರಕ್ಷತೆ ಬಗ್ಗೆ ಆತಂಕಗೊಂಡು ಟೀಕಿಸಿದರೆ ಅದು ಕ್ಷಮಿಸಲಾಗದಂತಹ ಅಪರಾಧವೇ? ದೇಶದ್ರೋಹದ ಕೆಲಸವೇ? ರಾಜಕಾರಣಿಗಳು ಪ್ರಜೆಗಳಲ್ಲಿ ಬದ್ಧತೆ ಅಪೇಕ್ಷಿಸುವ ಮುನ್ನಪ್ರಜೆಗಳಿಗೆ ಭದ್ರತೆಯನ್ನು ಖಾತರಿಪಡಿಸಬೇಕಾಗುತ್ತದೆ. ರಾಷ್ಟ್ರೀಯ ಭದ್ರತೆಒಂದು ಭಾವನಾತ್ಮಕ ವಿಷಯವಲ್ಲ. ಅದೊಂದು ರಾಜತಾಂತ್ರಿಕ ವಿಚಾರ. ಆದರೆ ಇಂದು ಭದ್ರತೆಯ ವಿಷಯವೂ ಭಾವನಾತ್ಮಕ ವಿಷಯದಂತೆ ಬಿಂಬಿತವಾಗುತ್ತಿದೆ. ರಾಷ್ಟ್ರೀಯ ಭದ್ರತೆಯು ನಮ್ಮ ಗಡಿಭಾಗ, ನಮ್ಮ ಆರ್ಥಿಕತೆ ಮತ್ತು ನಮ್ಮ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಒಂದು ಕಾರ್ಯ ಯೋಜನೆಯಾಗಿದೆ. ಈ ಕಾರ್ಯ ಯೋಜನೆಗಳನ್ನು ನಮ್ಮ ಸೇನಾಪಡೆ, ಆರ್‌ಬಿಐ ಮತ್ತು ನ್ಯಾಯಾಂಗ– ಕಾರ್ಯಾಂಗ– ಶಾಸಕಾಂಗಗಳಂಥ ಸಂಸ್ಥೆಗಳು ನಿರ್ವಹಿಸುತ್ತವೆ. ಸರಳವಾಗಿ ಹೇಳುವುದಾದರೆ ರಾಷ್ಟ್ರೀಯ ಭದ್ರತೆ ಎಂಬುದು ಮೇಲೆ ಹೆಸರಿಸಲಾದ ಸಂಸ್ಥೆಗಳು ಸ್ವತಂತ್ರವಾಗಿ, ನಿಷ್ಪಕ್ಷಪಾತವಾಗಿ ನಿಭಾಯಿಸಬೇಕಾದ ಹೊಣೆಗಾರಿಕೆಯಾಗಿದೆ.

ಆದರೆ, ರಾಷ್ಟ್ರೀಯ ಬದ್ಧತೆ ಅಥವಾ ದೇಶಭಕ್ತಿ ಎಂಬುದು ಈ ವ್ಯಾಪ್ತಿಯೊಳಗೆ ಬರುವುದಿಲ್ಲ. ಅದು ನಾವು ನಮ್ಮ ಮನದಾಳದಲ್ಲಿ ಪೋಷಿಸಿಕೊಂಡಿರುವ ಪವಿತ್ರ ಭಾವನೆಯಾಗಿದೆ. ಆ ಭಾವನೆಯನ್ನು ಕಾರ್ಯರೂಪಕ್ಕೆ ತರುವುದು ಪ್ರಜಾಧರ್ಮವಾಗಿದೆ. ತೆರಿಗೆ ಪಾವತಿಯ ಮೂಲಕ, ಮಾಹಿತಿಯನ್ನು ಪಾರದರ್ಶಕಗೊಳಿಸುವ ಮೂಲಕ, ದೇಶದ ಗೌರವವನ್ನು ಎತ್ತಿಹಿಡಿಯಬಲ್ಲ ಮೌಲ್ಯಗಳನ್ನು ಪಾಲಿಸುವ ಮೂಲಕ ನಾವು ಆ ಧರ್ಮವನ್ನು ಪಾಲಿಸಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾದಾಗಲೆಲ್ಲ ಆಳುವ ವರ್ಗವನ್ನು ನಿರ್ದಾಕ್ಷಿಣ್ಯವಾಗಿ ಪ್ರಶ್ನಿಸಿದಾಗ ಮಾತ್ರ ರಾಷ್ಟ್ರೀಯ ಬದ್ಧತೆ ಅಥವಾ ದೇಶಭಕ್ತಿ ಜೀವಂತವಾಗಿ ಉಳಿಯಬಲ್ಲುದು.

ಇಲ್ಲಿ ‘ಹಾಗಿದ್ದರೆ ಸರ್ಕಾರದ ಪಾತ್ರವೇನು’ ಎಂಬ ಪ್ರಶ್ನೆ ಮೂಡದೇ ಇರುವುದಿಲ್ಲ. ದೇಶದ ಭದ್ರತೆಯನ್ನು ಖಾತರಿಪಡಿಸುವ ಸಂಸ್ಥೆಗಳಿಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಪೂರೈಸುವುದು ಹಾಗೂ ದೇಶದ ಬಗ್ಗೆ ಬದ್ಧತೆಯುಳ್ಳ ಪ್ರಜೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ ಎನ್ನಬಹುದಾಗಿದೆ.

ಈ ಕರ್ತವ್ಯವನ್ನು ನೆರವೇರಿಸುವಲ್ಲಿ ಸರ್ಕಾರ ವಿಫಲವಾದಾಗ ದೇಶದ ಭದ್ರತೆ ಅಪಾಯದಲ್ಲಿ ಸಿಲುಕುತ್ತದೆ, ಪ್ರಜೆಗಳ ಆಶೋತ್ತರಗಳು ಹಳ್ಳ ಹಿಡಿಯುತ್ತವೆ. ಇಂತಹುದೊಂದು ವೈಫಲ್ಯ ಅಂಗೈ ಮೇಲಿನ ಹುಣ್ಣಿನಂತೆ ಕಾಣಿಸುತ್ತಿರುವಾಗ ಆಳುವ ವರ್ಗದವರು ಸ್ವಲ್ಪವಾದರೂ ಸಂವೇದನಾಶೀಲತೆಯಿಂದ ವರ್ತಿಸಬೇಕಾಗುತ್ತದೆ. ವಿರೋಧ ಪಕ್ಷದವರ ಆಕ್ಷೇಪಣೆ, ಅಸಮಾಧಾನಗಳು ವಾಸ್ತವದಲ್ಲಿ ಆಳುವ ಪಕ್ಷಕ್ಕೆ ಸರಿದಾರಿ ತೋರಿಸುವ ದಿಕ್ಸೂಚಿಯಾಗಿವೆ. ಪ್ರಶ್ನಿಸುವ ಧೋರಣೆಯನ್ನು ಕಳೆದುಕೊಂಡ ಪ್ರಜಾಪ್ರಭುತ್ವ ವಿನಾಶದ ಹಾದಿ ಹಿಡಿಯುತ್ತದೆ. ಹಾಗಾಗಿ ನಮ್ಮನ್ನು ಆಳುವವರು ತಮ್ಮನ್ನು ಪ್ರಶ್ನಿಸುವವರನ್ನೆಲ್ಲ ನಕಾರಾತ್ಮಕ ಮನಃಸ್ಥಿತಿಯವರು ಎಂದು ತೀರ್ಮಾನಿಸುವುದು ತಪ್ಪಾಗುತ್ತದೆ. ಹಾಗೆ ತೀರ್ಮಾನಿಸುವವರಿಗೆ ನಮ್ಮ ಪರಂಪರೆಯ ಮೂಲ ಸ್ವರೂಪದ ಪರಿಚಯವೇ ಇರಲಾರದೆನಿಸುತ್ತದೆ.

ಗೀತೋಪನಿಷತ್ತುಗಳ ಕಾಲದಿಂದಲೂ ನಮ್ಮ ಪರಂಪರೆಯು ಪ್ರಶ್ನಿಸುವ, ವಾಗ್ವಾದ ನಡೆಸುವ ಮೂಲಕವೇ ಬೆಳೆದು ಬಂದಿದೆ. ನಮ್ಮ ಪರಂಪರೆಯ ಈ ಮೂಲ ಲಕ್ಷಣದಿಂದಾಗಿಯೇ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಧರಿಸಬಲ್ಲ ಚೈತನ್ಯ ಪ್ರಾಪ್ತವಾಗಿದೆ. ಪ್ರಶ್ನಿಸುವುದನ್ನೇ ನಕಾರಾತ್ಮಕ ಧೋರಣೆ ಎನ್ನುವುದಾದಲ್ಲಿ ಜನಕ, ನಚಿಕೇತ, ಬುದ್ಧ, ಅಲ್ಲಮ ಮುಂತಾದವರನ್ನೂ ನಕಾರಾತ್ಮಕ ಮನಃಸ್ಥಿತಿಯವರು ಎಂದು ತೀರ್ಮಾನಿಸಬೇಕಾಗುತ್ತದೆ.

ಎಲ್ಲಕ್ಕಿಂತ ಆತಂಕದ ಸಂಗತಿಯೆಂದರೆ, ಭಯೋತ್ಪಾದನೆಗೆ ದೇಶಭಕ್ತಿಯ ಕೊರತೆಯೇ ಕಾರಣವೆಂದು ವಾದಿಸುವ ಪ್ರವೃತ್ತಿ ಇಂದು ಆಳುವ ವರ್ಗದಲ್ಲಿ ಕಾಣಿಸುತ್ತಿದೆ. ಭಯೋತ್ಪಾದನೆಯ ಸಮಸ್ಯೆಯನ್ನು ಮಿಲಿಟರಿ, ಗುಪ್ತಚರ ಇಲಾಖೆಯ ಕಾರ್ಯಾಚರಣೆಗಳ ಮೂಲಕ, ಸೂಕ್ತ ವಿದೇಶಾಂಗ ನೀತಿಯ ಮೂಲಕ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚಿಸುವ ಮೂಲಕ ಬಗೆಹರಿಸಿಕೊಳ್ಳಬೇಕಾಗಿದೆ. ದೇಶದೊಳಗಿನ ಅಸಹಿಷ್ಣುತೆಯನ್ನು ಮತ್ತು ದೇಶದ ಹೊರಗಿನ ಭಯೋತ್ಪಾದನೆಯನ್ನು ಒಂದೇ ಎಂಬಂತೆ ಬಿಂಬಿಸಿ ದೇಶಭಕ್ತಿಯ ಕೊರತೆಯೇ ಭಯೋತ್ಪಾದನೆಗೆ ಕಾರಣವೆಂದು ವಾದಿಸಿದರೆ ಅದರಿಂದ ಸರ್ಕಾರದ ವೈಫಲ್ಯ ಮುಚ್ಚಿಹೋಗುವುದಿಲ್ಲ, ಬದಲಾಗಿ ನಮ್ಮ ಮಿಲಿಟರಿ ಶಕ್ತಿಗೆ ನಾವೇ ಅವಮಾನಿಸಿದಂತಾಗುತ್ತದೆ.

ಕೆಲವು ರಾಜಕಾರಣಿಗಳು ಭಾವಿಸಿರುವಂತೆ ಪ್ರಶ್ನಿಸುವುದರಿಂದ ದೇಶಭಕ್ತಿಗೆ ಹಾನಿಯಾಗುವುದಿಲ್ಲ. ನಮ್ಮ ದೇಶದಲ್ಲಂತೂ (ಮಂಗಲ್ ಪಾಂಡೆ, ತಾಂತ್ಯಾ ಟೋಪಿಯಿಂದ ಹಿಡಿದು ಗಾಂಧಿ, ಬೋಸ್‍ವರೆಗೆ) ದೇಶಭಕ್ತಿಯೆಂಬುದು ಆಳುವ ವರ್ಗವನ್ನು ಪ್ರಶ್ನಿಸುತ್ತಲೇ ವಿಕಾಸವಾಗುತ್ತಾ ಬಂದಿದೆ. ವಿಪರ್ಯಾಸವೆಂದರೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ, ಅದರಲ್ಲೂ ಪ್ರಸಕ್ತ ಕಾಲಘಟ್ಟದಲ್ಲಿ, ಆಳುವ ವರ್ಗವನ್ನು ಪ್ರಶ್ನಿಸಿದರೆ ಅದನ್ನು ದೇಶದ್ರೋಹವೆಂಬಂತೆ ಮತ್ತು ಅವರಿಗೆ ಜಯಕಾರ ಹಾಕುವುದನ್ನು ದೇಶಭಕ್ತಿ ಎಂಬಂತೆ ಬಿಂಬಿಸಲಾಗುತ್ತಿದೆ.

ದೇಶಭಕ್ತಿಯಂತಹ ಮೌಲ್ಯಗಳನ್ನು ಸರ್ಕಾರ ತಾನೇ ಗುತ್ತಿಗೆ ವಹಿಸಿಕೊಂಡಾಗ ನಾಡಿನಲ್ಲಿ ದೇಶಭಕ್ತಿ ಜಾಗೃತವಾಗುವುದಿಲ್ಲ. ಬದಲಾಗಿ ಆಳುವ ಪಕ್ಷದ ಐಡಿಯಾಲಜಿಯ ಪ್ರವರ್ಧನೆ ಆಗುತ್ತದೆ ಅಷ್ಟೇ. ನಮ್ಮ ರಾಜಕಾರಣಿಗಳು ಕಾಶ್ಮೀರದ ಸಮಸ್ಯೆಯ ನೆವದಲ್ಲಿ ದೇಶದ ಪ್ರಜೆಗಳನ್ನು ಇಬ್ಭಾಗಗೊಳಿಸಿದ್ದಾರೆ. ಅಖಂಡ ಭಾರತದ ಕನಸು ಕಾಣುವವರು ವಿಭಜನೆ ನೀತಿಯನ್ನು ಅನುಸರಿಸಲು ಹೋಗಬಾರದು, ಬದಲಿಗೆ ಏಕತೆಯ ಮಾದರಿಯನ್ನು ಮುಂದಿಡಬೇಕು.

ದೇಶಭಕ್ತಿ ಎಂಬುದು ಎಲ್ಲ ಕಾಲಕ್ಕೂ ಆಳುವವರ ವಿರುದ್ಧದ ಒಂದು ಬಂಡಾಯವಾಗಿದೆ. ಜಾತಿವಾದ, ಕೋಮುವಾದಗಳಿಂದಲೇ ಉಸಿರಾಡುತ್ತಿರುವ ಇಂದಿನ ರಾಜಕೀಯ ಪಕ್ಷಗಳು ದೇಶಭಕ್ತಿಯಂತಹ ಬಂಡಾಯದ ಗುತ್ತಿಗೆಯನ್ನು ತಾವೇ ವಹಿಸಿಕೊಂಡಂತೆ ವರ್ತಿಸಿದರೆ ದೇಶಭಕ್ತಿಯೆಂಬುದು ಅರ್ಥ ಕಳೆದುಕೊಳ್ಳುತ್ತದೆ.

ಲೇಖಕ: ಸಹಾಯಕ ಪ್ರಾಧ್ಯಾಪಕ,ಜ್ಯೋತಿನಿವಾಸ್‌ ಕಾಲೇಜ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT