ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

65 ವರ್ಷಗಳ ನಂತರವೂ ತಪ್ಪದ ಅಂಧಕಾರ

Last Updated 15 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಹದಿನೈದು ದಿನಗಳ ಕಾಲ ಕ್ರೀಡಾಲೋಕದಲ್ಲಿನ ವಿದ್ಯಮಾನಗಳೇ ವಿಶ್ವದಾದ್ಯಂತ ಸಾಕಷ್ಟು ಸುದ್ದಿ ಮಾಡಿ ಗಮನ ಸೆಳೆದವು. ಲಂಡನ್‌ನಲ್ಲಿ ನಡೆದ   ಒಲಿಂಪಿಕ್ ಕ್ರೀಡಾಕೂಟದ ಘಟನಾವಳಿಗಳೇ ಬಹುತೇಕ ಎಲ್ಲ ದಿನ ಪತ್ರಿಕೆಗಳ ಮುಖಪುಟ ಅಲಂಕರಿಸಿದ್ದವು.
 
ಈ ಸದ್ದುಗದ್ದಲದ ಮಧ್ಯದಲ್ಲಿಯೇ ಭಾರತದಲ್ಲಿನ ವಿದ್ಯುತ್ ಸಮಸ್ಯೆಯೂ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಮುಖವಾಗಿಯೇ ಗಮನ ಸೆಳೆಯಿತು. ಜಾಗತಿಕ ಕೈಗಾರಿಕೆ ಮತ್ತು ಉದ್ದಿಮೆ ಸಮುದಾಯಕ್ಕೂ ಭಾರತದಲ್ಲಿನ ವಿದ್ಯುತ್ ಸಮಸ್ಯೆಯ ತೀವ್ರತೆ ಗಮನಕ್ಕೆ ಬರುವಂತಾಯಿತು.

ಜುಲೈ 30 ಮತ್ತು 31ರಂದು ಉತ್ತರ ಮತ್ತು ಈಶಾನ್ಯ ಭಾರತದಲ್ಲಿನ ವಿದ್ಯುತ್ ವಿತರಣಾ ಜಾಲವು ಕುಸಿತಗೊಂಡು ಅಂದಾಜು 60 ಕೋಟಿಗಳಷ್ಟು ಜನರು ತೀವ್ರ ಬವಣೆ ಅನುಭವಿಸುವಂತಾಯಿತು. ಇದೇ ಕಾರಣಕ್ಕೆ  ನಾನು ಇಲ್ಲಿ ದೇಶದ ವಿದ್ಯುತ್ ಉತ್ಪಾದನಾ ವಲಯದ ವಾಸ್ತವ ಚಿತ್ರಣ ಚರ್ಚಿಸಲು ಉದ್ದೇಶಿಸಿರುವೆ.

ಈ ನಾಚಿಕೆಗೇಡಿನ ಸಂಗತಿಯು  (ವಿದ್ಯುತ್ ವೈಫಲ್ಯ) ಹಲವಾರು ಪ್ರಶ್ನೆಗಳಿಗೂ ಎಡೆಮಾಡಿಕೊಟ್ಟಿದೆ. ಎಲ್ಲಕ್ಕೂ ಮುಖ್ಯವಾಗಿ,  ಮೂಲ ಸೌಕರ್ಯ ಒದಗಿಸುವಲ್ಲಿ ಕೇಂದ್ರ ಸರ್ಕಾರದ ಸಾಮರ್ಥ್ಯದ ಬಗ್ಗೆಯೇ ಸಂದೇಹಕ್ಕೆ ಎಡೆ ಮಾಡಿಕೊಡುತ್ತದೆ.
ವಿದ್ಯುತ್ ವೈಫಲ್ಯದ ಅರ್ಥವಾಗದ ತಾಂತ್ರಿಕ ವಿವರಣೆ  ಅಥವಾ ಸಮರ್ಥನೆಯಲ್ಲಿ ಜನರಿಗೆ ಯಾವುದೇ ಆಸಕ್ತಿ ಇರುವುದಿಲ್ಲ.

ವಿದ್ಯುತ್ ಲಭ್ಯತೆಯಷ್ಟೇ ಅವರಿಗೆ ಆಸಕ್ತಿದಾಯಕ ಸಂಗತಿ ಎನ್ನುವುದನ್ನು ಯಾರೊಬ್ಬರೂ ಮರೆಯಬಾರದು. ಎಲ್ಲ ಋತುಗಳಲ್ಲಿ ವಿದ್ಯುತ್‌ಗೆ ಪೂರೈಕೆಗಿಂತ ಹೆಚ್ಚಿನ ಬೇಡಿಕೆ ಇದ್ದೇ ಇರುತ್ತದೆ. ಈ ಅಂತರವನ್ನು ದಕ್ಷತೆಯಿಂದ ನಿರ್ವಹಿಸುವಲ್ಲಿನ ವೈಫಲ್ಯವೇ ಬಿಕ್ಕಟ್ಟಿಗೆ  ಮೂಲ ಕಾರಣವಾಗಿರುತ್ತದೆ.

ಯಾವುದೇ ದೇಶವೊಂದರ ಆರ್ಥಿಕ ಚಟುವಟಿಕೆಗಳಿಗೆ ವಿದ್ಯುತ್ ಲಭ್ಯತೆಯು ಅತಿ ಅವಶ್ಯಕವಾಗಿರುತ್ತದೆ. ದಿನದ 24 ಗಂಟೆಗಳ ಕಾಲ ವಿದ್ಯುತ್ ಅಬಾಧಿತವಾಗಿ ಪೂರೈಕೆ ಆಗುತ್ತಿದ್ದರೆ ಮಾತ್ರ ಅರ್ಥ ವ್ಯವಸ್ಥೆ ಸರಿಯಾದ ಹಳಿ ಮೇಲೆ ಚಲಿಸುತ್ತಿರುತ್ತದೆ.

ಸರಕುಗಳ ಉತ್ಪಾದನೆಗೆ ಅಗತ್ಯವಾದ ಕಚ್ಚಾ ಸರಕುಗಳು, ಮಾನವ ಶಕ್ತಿ, ಬಂಡವಾಳ, ಭಾರಿ ಯಂತ್ರೋಪಕರಣಗಳನ್ನೂ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದು. ಕೊರತೆ ಬಿದ್ದಾಗ ಬಳಸಲೆಂದು ಕೆಲ ಕಚ್ಚಾ ಸರಕನ್ನು ಸಂಗ್ರಹಿಸಿಯೂ ಇಡಬಹುದು.

ಆದರೆ, ವಿದ್ಯುತ್ ಮಾತ್ರ ಸರಾಗವಾಗಿ ಹರಿಯುತ್ತಲೇ ಇರಬೇಕಾಗುತ್ತದೆ. ವಿದ್ಯುತ್ ಪೂರೈಕೆ ಅಡಚಣೆ ಎದುರಾದಾಗ ಜನರೇಟರ್‌ನಂತಹ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಿದೆ.

ಗುಣಮಟ್ಟ, ವೆಚ್ಚ ಮತ್ತಿತರ ಅನುಕೂಲತೆಗೆ ಹೋಲಿಸಿದರೆ ವಿದ್ಯುತ್ ವಿತರಣಾ ಜಾಲಗಳ  (ಗ್ರಿಡ್) ಮೂಲಕ ಲಭ್ಯವಾಗುವ ವಿದ್ಯುತ್ ಯಾವುದೂ ಸರಿಸಾಟಿಯಾಗಲಾರದು. ಹೀಗಾಗಿ ಗ್ರಿಡ್ ಮೂಲಕ ಪೂರೈಕೆಯಾಗುವ ವಿದ್ಯುತ್‌ನ ಸಮರ್ಪಕ ನಿರ್ವಹಣೆಯು ಹೆಚ್ಚು ಮಹತ್ವದ್ದು ಆಗಿರುತ್ತದೆ.

ವಿದ್ಯುತ್ ಸಮಸ್ಯೆಗೆ ದೀರ್ಘಾವಧಿಯಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದೇ ಸೂಕ್ತ ಪರಿಹಾರವಾಗಿರುತ್ತದೆ. ಆದರೆ, ಇದನ್ನು ಹೇಳಿದಷ್ಟು ಸುಲಭವಾಗಿ ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ದೇಶದಲ್ಲಿನ ಅನೇಕ ವಿದ್ಯುತ್ ಉತ್ಪಾದನಾ ಘಟಕಗಳು ಹಲವಾರು ಕಾರಣಗಳಿಗೆ ನೆನೆಗುದಿಗೆ ಬಿದ್ದಿವೆ.
 
ಸರ್ಕಾರವೇ ಇಲ್ಲಿ ಖಳನಾಯಕನ ಪಾತ್ರ ನಿರ್ವಹಿಸುತ್ತಿದೆ. ಭಾರಿ ಪ್ರಮಾಣದ ಬಂಡವಾಳವು ಬಳಕೆಯಾಗದೆ ವ್ಯರ್ಥವಾಗಿ ಉಳಿದಿದ್ದರೆ, ಇನ್ನೊಂದೆಡೆ ಸಾಮರ್ಥ್ಯ ಹೆಚ್ಚಳ ವೆಚ್ಚವು ಹೆಚ್ಚುತ್ತಲೇ ಸಾಗಿದೆ.

ಖಾಸಗಿ ವಲಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿಸುವ ಸರ್ಕಾರದ ಆಲೋಚನೆಯೂ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ವಿದ್ಯುತ್ ಉತ್ಪಾದನೆಯಲ್ಲಿ ಭಾಗಿಯಾಗಲು ಖಾಸಗಿ ರಂಗವು ಆರಂಭದಲ್ಲಿ ಸಾಕಷ್ಟು ಉತ್ಸಾಹ ತೋರಿಸಿದರೂ, ನಂತರದ ದಿನಗಳಲ್ಲಿ ಅದೇ ಆಸಕ್ತಿ ಮುಂದುವರೆಯಲಿಲ್ಲ.

ಸರ್ಕಾರದ ಅನಿಶ್ಚಿತ ನೀತಿ ನಿಯಮಗಳು, ವಿಳಂಬ ನಿರ್ಧಾರ ಮುಂತಾದವು ಪ್ರಮುಖ ಅಡಚಣೆಗಳಾಗಿವೆ. ಒಂದು ಕಾಲಕ್ಕೆ ಪ್ರಮುಖ ಕೈಗಾರಿಕಾ ಸಮೂಹಗಳು ವಿದ್ಯುತ್ ಉತ್ಪಾದನಾ ರಂಗದಲ್ಲಿ ತೀವ್ರ ಆಸಕ್ತಿ ತಳೆದಿದ್ದರೂ ಆನಂತರ ಹಿಂದೆ ಸರಿದಿವೆ. ಇದಕ್ಕೆ ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಮುಖ್ಯ ಕಾರಣ.

ವಿದ್ಯುತ್ ಅನಿವಾರ್ಯತೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನದಟ್ಟಾದರೆ ಮಾತ್ರ ಹಲವಾರು ವಿದ್ಯುತ್ ಉತ್ಪಾದನಾ ಯೋಜನೆಗಳು ತ್ವರಿತವಾಗಿ ಕಾರ್ಯರೂಪಕ್ಕೆ ಬಂದು ಪೂರೈಕೆ  ಮತ್ತು ಬೇಡಿಕೆ ಮಧ್ಯದ ಅಂತರವನ್ನು ಗಮನಾರ್ಹವಾಗಿ ತಗ್ಗಿಸಲು ಸಾಧ್ಯ. ವಿದ್ಯುತ್ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು  ಸರ್ಕಾರ ದೃಢ ನಿರ್ಧಾರ ಕೈಗೊಂಡು ಯೋಜನಾಬದ್ಧವಾಗಿ ಹುರುಪಿನಿಂದ ಕಾರ್ಯಪ್ರವೃತ್ತರಾಗಬೇಕಾಗಿದೆ.

ಸದ್ಯಕ್ಕೆ ದೇಶದಲ್ಲಿ ಉತ್ಪಾದನೆಯಾಗುವ 1,90,000 ಮೆಗಾವಾಟ್‌ನಷ್ಟು ವಿದ್ಯುತ್‌ನಿಂದ ಒಟ್ಟು ಬೇಡಿಕೆಯಲ್ಲಿ ಶೇ 10ರಷ್ಟು ಮಾತ್ರ ಕೊರತೆ ಕಂಡು ಬರುತ್ತದೆ. ದೇಶದ ಸರಾಸರಿ ಶೇ 7ರಷ್ಟು ಆರ್ಥಿಕ ವೃದ್ಧಿ ದರಕ್ಕೆ ಹೋಲಿಸಿದರೆ ಮುಂಬರುವ ದಿನಗಳಲ್ಲಿ ಈ ಅಂತರ ಇನ್ನಷ್ಟು ಹೆಚ್ಚಲಿದೆ.

ದೇಶದ ಶೇ 20ರಷ್ಟು ಜನರು ಈಗಲೂ ವಿದ್ಯುತ್ ಲಭ್ಯತೆ ಇಲ್ಲದೇ ದಿನ ದೂಡುತ್ತಿದ್ದಾರೆ ಎನ್ನುವ ಅಂದಾಜಿದೆ. ಈ   ಪ್ರಮಾಣದ ಜನಸಂಖ್ಯೆಗೆ ಗ್ರಿಡ್‌ನಿಂದಲೇ ವಿದ್ಯುತ್ ಪೂರೈಸುವ ಆಲೋಚನೆಯೂ ಸರ್ಕಾರಕ್ಕೆ ಇದೆ.

ದೇಶದ ತಲಾ ವಿದ್ಯುತ್ ಬಳಕೆಯು ಇಡೀ ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇದೆ. ಜನರ ವರಮಾನ ಮಟ್ಟ ಹೆಚ್ಚುತ್ತಿದ್ದಂತೆ ಬಳಕೆ ಪ್ರಮಾಣವೂ ಹೆಚ್ಚುತ್ತಿದೆ. ಭವಿಷ್ಯದಲ್ಲಿ ವಿದ್ಯುತ್ ಬಳಕೆ ಅಥವಾ ಬೇಡಿಕೆ ಕಡಿಮೆಯಾಗುವುದಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ.

ನಮ್ಮಲ್ಲಿ  ಅಪಾರ ಪ್ರಮಾಣದ ಕಲ್ಲಿದ್ದಲಿನ ನಿಕ್ಷೇಪಗಳಿವೆ. ದೇಶದ ಹಲವು ಭಾಗಗಳಲ್ಲಿ ಜಲ ವಿದ್ಯುತ್ ಉತ್ಪಾದನೆಗೂ ವಿಪುಲ ಅವಕಾಶಗಳು ಇವೆ.  ಸಾಕಷ್ಟು ಉದ್ದ ಇರುವ ದೇಶದ ಕರಾವಳಿ ತೀರ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗಾಳಿ ವಿದ್ಯುತ್ ಉತ್ಪಾದನೆ ಮಾಡಲೂ ಸಾಧ್ಯ ಇದೆ. ಅನೇಕ ಅಭಿವೃದ್ಧಿಶೀಲ ದೇಶಗಳು ಭಾರತದ ವಿರುದ್ಧದ ಕೆಲ ನಿರ್ಬಂಧಗಳನ್ನು ಸಡಿಲಿಸಿದ ನಂತರ ಅಣುಶಕ್ತಿ ಉತ್ಪಾದನೆ  ಹೆಚ್ಚಿಸಲು ಸಾಧ್ಯವಾಗಿದೆ.

ಸೌರಶಕ್ತಿ ಉತ್ಪಾದನೆಯು ದುಬಾರಿಯಾದರೂ ಭರವಸೆದಾಯಕವಾಗಿದೆ. ಈ ಎಲ್ಲ ಪೂರಕ ಪರಿಸ್ಥಿತಿಯ ಹೊರತಾಗಿಯೂ, ಅಸಂಖ್ಯ ಭಾರತೀಯರು ವಿದ್ಯುತ್ ಪೂರೈಕೆಯ ಮೂಲ ಸೌಕರ್ಯದಿಂದ ವಂಚಿತರಾಗಿರುವುದು ನಿಜಕ್ಕೂ ದುರ್ದೈವದ ಸಂಗತಿ.

ಇಂತಹ ತೀವ್ರ ನಿರಾಶೆಯ ಪರಿಸ್ಥಿತಿಯಲ್ಲಿ ಸುರಂಗದ ಕೊನೆಯಲ್ಲಿ ಬೆಳಕು ಕಾಣಿಸುವುದೇ ಎನ್ನುವ  ಪ್ರಶ್ನೆಗೆ `ಹೌದು, ಸಾಧ್ಯವಿದೆ~ ಎಂದೇ ಖಚಿತವಾಗಿ ಉತ್ತರಿಸಬೇಕಾಗುತ್ತದೆ. ಈ ಒಗಟಿನಲ್ಲಿ ಬಂಡವಾಳ ಹೂಡಿಕೆ ಮತ್ತು ಸರ್ಕಾರದ ನೀತಿ ನಿಯಮಗಳು ಪರಸ್ಪರ ತಳಕು ಹಾಕಿಕೊಂಡಿವೆ.

ವಿದ್ಯುತ್ ಉತ್ಪಾದನೆ ಪ್ರಮುಖ ಭಾಗವಾಗಿರುವ, ಮೂಲ ಸೌಕರ್ಯ ರಂಗದಲ್ಲಿ ಸದ್ಯಕ್ಕೆ ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 1ರಿಂದ 2ರಷ್ಟು  ವೆಚ್ಚ ಮಾಡುವ ಮೊತ್ತವನ್ನು ಶೇ 10ಕ್ಕೆ ಹೆಚ್ಚಿಸಬೇಕು ಎಂದು ಕೆಲ ಆರ್ಥಿಕ ಪರಿಣತರು ಅಭಿಪ್ರಾಯ ಪಡುತ್ತಾರೆ. ಇದಕ್ಕೆ ಪೂರಕವಾಗಿ ಸರ್ಕಾರಗಳ ನೀತಿ ನಿಯಮಗಳೂ ಬದಲಾಗಬೇಕಾಗಿವೆ.

ಇತ್ತೀಚಿಗೆ ಸಂಭವಿಸಿದ ರಾಷ್ಟ್ರೀಯ ವಿದ್ಯುತ್ ವಿತರಣಾ ಜಾಲಗಳ ವೈಫಲ್ಯವು ಸರ್ಕಾರವನ್ನು ನಿದ್ದೆಯಿಂದ ಬಡಿದೆಬ್ಬಿಸಿರಬೇಕು. ವೃಥಾ ಕಾಲಹರಣ ಮಾಡುತ್ತಿರುವ ಸರ್ಕಾರವು ವಿದ್ಯುತ್ ಉತ್ಪಾದನೆಯ ಎಲ್ಲ ಯೋಜನೆಗಳ ಬಗ್ಗೆ ಪುನರ್ ಚಿಂತನೆಗೆ ಆಸ್ಪದ ಮಾಡಿಕೊಟ್ಟಿರಬಹುದು ಎಂದೂ  ನಾನು ಆಶಿಸುವೆ.

ವಿದ್ಯುತ್ ವಿತರಣೆ, ಬೆಲೆ, ಪರಿಸರದ ಮೇಲಾಗುವ ಪರಿಣಾಮ, ರಾಜಕೀಯವಾಗಿ ತುಂಬ ಸೂಕ್ಷ್ಮವಾಗಿರುವ ಸಬ್ಸಿಡಿ, ತೆರಿಗೆ ಮತ್ತು ಉತ್ತೇಜನಾ ಕ್ರಮಗಳ ಬಗ್ಗೆಯೂ ಸರ್ಕಾರ ಮರು ಚಿಂತನೆ ಮಾಡಬೇಕಾಗಿದೆ.

ಮೂಲ ಸೌಕರ್ಯ ರಂಗದಲ್ಲಿ ಖಾಸಗಿ ಪಾಲುದಾರಿಕೆಯು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬರಲು ಸರ್ಕಾರವು ಪೂರಕ ವಾತಾವರಣ ಕಲ್ಪಿಸಬೇಕಾಗಿದೆ. ಬಂಡವಾಳ ಹೂಡಿಕೆ ಉತ್ತೇಜಿಸಬೇಕಾಗಿದೆ. ಸರ್ಕಾರದ ಧೋರಣೆ ಮತ್ತು ನಿರ್ಧಾರಗಳು ಮಾತ್ರ ಅಪೇಕ್ಷಿತ ಬದಲಾವಣೆ ತರಲು ಸಾಧ್ಯ. ಇಷ್ಟೇ ಅಲ್ಲದೇ ಇನ್ನೂ ಅನೇಕ ಸಣ್ಣ ಪುಟ್ಟ ಸಂಗತಿಗಳತ್ತಲೂ ಸರ್ಕಾರ ಗಮನ ಹರಿಸುವ ಅಗತ್ಯ ಇದೆ.

ಸದ್ಯದ ವ್ಯವಸ್ಥೆ ಅದೆಷ್ಟರ ಮಟ್ಟಿಗೆ ಹಳೆಯದಾಗಿದೆ ಎಂದರೆ, ಯುದ್ಧೋಪಾದಿಯಲ್ಲಿ ಕಾರ್ಯಪ್ರವೃತ್ತವಾದರೆ ಮಾತ್ರ ಸುಧಾರಣೆಗಳು ಕಾಣಲು ಸಾಧ್ಯ.

ಇಡೀ ಉತ್ತರ ಮತ್ತು ಈಶಾನ್ಯ ಭಾರತದಲ್ಲಿ  ಜು 30 ಮತ್ತು 31ರಂದು  ಜನಜೀವನವು ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಸಂಸತ್ತಿನ ಮುಂಭಾಗದಲ್ಲೇ ಮೆಟ್ರೊ ರೈಲುಗಳು ಸಂಚಾರ ನಿಲ್ಲಿಸಿದ್ದವು. ಅನೇಕ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ರೋಗಿಗಳನ್ನು ಸೇರ್ಪಡೆ ಮಾಡಿಕೊಳ್ಳಲು ಹಿಂದೇಟು ಹಾಕಿದವು. ತುರ್ತು ಸೇವೆಗಳನ್ನೂ ಸ್ಥಗಿತಗೊಳಿಸಲಾಗಿತ್ತು. ಸಮೂಹ ಸಾರಿಗೆಯನ್ನೇ ನೆಚ್ಚಿಕೊಂಡ ಜನರು ಪರಿತಪಿಸುವಂತಾಯಿತು.
 
ಕಾಲ್ನಡಿಗೆಯಲ್ಲಿಯೇ ಮೈಲಿಗಟ್ಟಲೇ ದೂರ ಕ್ರಮಿಸಿ ಮನೆ -ಕಚೇರಿ ತಲುಪುವಂತಾಯಿತು. ಶಾಲಾ- ಕಾಲೇಜುಗಳನ್ನು ಮುಚ್ಚಲಾಗಿತ್ತು. ಪರೀಕ್ಷೆಗಳನ್ನೂ ಮುಂದೂಡಲಾಗಿತ್ತು. ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ದೇಶಕ್ಕೆ ಆದ ಆರ್ಥಿಕ ನಷ್ಟ ಎಣಿಕೆಗೆ ನಿಲುಕದು.

ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ಮತ್ತೆ ಬರಲಿಕ್ಕಿಲ್ಲ, ಕರಾಳ ದಿನಗಳು ಇತಿಹಾಸದ ಪುಟಗಳಲ್ಲಿಯೇ ದಾಖಲಾಗಲಿ ಎಂದೇ ನಾವೆಲ್ಲ ಆಶಿಸೋಣ. ಸ್ವಾತಂತ್ರ್ಯ ಸಿಕ್ಕ 65 ವರ್ಷಗಳ ನಂತರವೂ ಶೇ 20ರಷ್ಟು ಜನರು ಈಗಲೂ ಕತ್ತಲೆಯಲ್ಲಿಯೇ ದಿನ ದೂಡುತ್ತಿರುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲದಿರುವುದು ದುರದೃಷ್ಟಕರ. ಸದ್ಯದ ಮಟ್ಟಿಗೆ ಹೇಳುವುದಾರೆ ಅಂಧಕಾರವಂತೂ ಮುಂದುವರೆದಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT