ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

75 ದಾಟಿದ ಬಳಿಕ...

Last Updated 14 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸಾಯಿರಾಮನಿಗೆ ಆಗ ಕೇವಲ 19ರ ಹರೆಯ... ಮಾನವ ಜೀವನದಲ್ಲಿ ಎರಡು ಹಂತಗಳಿವೆ, ಬಾಲ್ಯ ಮತ್ತು ವೃದ್ಧಾಪ್ಯ. ಬಾಲ್ಯ ಅತ್ಯಂತ ನಿರ್ಣಾಯಕವಾದ ಹಂತ, ವೃದ್ಧಾಪ್ಯ ಅತಿ ಗಂಭೀರ ಹಂತ.  ಸೂರ್ಯ ಮತ್ತು ಚಂದ್ರಾ ದಂಪತಿಯನ್ನು ನಾನು ಕಳೆದ ಮೂರು ದಶಕಗಳಿಂದ ಬಲ್ಲೆ. ‘ಮೇಡ್‌ ಫಾರ್‌ ಈಚ್‌ ಅದರ್‌’ ಎಂಬ ವಾಕ್ಯವನ್ನೂ ಮೀರಿದ ಸಾಲುಗಳಿದ್ದರೆ ಅದು ಈ ಜೋಡಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಅವರ ಮೂಲಕ ನಾನು ‘ದಾಂಪತ್ಯ ಗೀತ’ದ ಅರ್ಥ ಕಲಿತುಕೊಂಡೆ. ಅವರ ಸಾಂಗತ್ಯ 60 ವರ್ಷ ದಾಟಿತ್ತು. ಅವರದು ಹಿರಿಯರು ನಿಶ್ಚಯಪಡಿಸಿದ ವಿವಾಹ.

ಸರ್ಕಾರಿ ಉದ್ಯೋಗದಲ್ಲಿದ್ದ ಸೂರ್ಯ ಈಗ ಬೆಸ್ಕಾಂ ಎಂದು ನಾಮಕರಣಗೊಂಡಿರುವ ಆಗಿನ ಮೈಸೂರು ವಿದ್ಯುತ್‌ ಇಲಾಖೆಯಲ್ಲಿದ್ದರು. ಅವರು ಈ ಸರ್ಕಾರಿ ಇಲಾಖೆಯೊಳಗಿನ ಬದಲಾವಣೆಗಳು– ಅಂದರೆ, ಕೆಇಬಿ, ಕರ್ನಾಟಕ ವಿದ್ಯುಚ್ಛಕ್ತಿ ನಿಗಮ ನಿಯಮಿತ ಇತ್ಯಾದಿಗಳ ಬಗ್ಗೆ ಪಟಪಟನೆ ವಿವರಿಸುವಷ್ಟು ಚಾಣಾಕ್ಷರಾಗಿದ್ದರು. ಇಲಾಖೆಯ ಈ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ನನಗೆ ನೀಡಿದ ಮಾಹಿತಿಗಳನ್ನು ಸಂಗ್ರಹಿಸಿಟ್ಟಿದ್ದರೆ ಭವಿಷ್ಯದ ಪೀಳಿಗೆಗೆ ಅನುಕೂಲಕರವಾಗುತ್ತಿತ್ತು.

ತಮ್ಮ ಬಾಲ್ಯದ ದಿನಗಳತ್ತ ಹೊರಳಿದಾಗ ಸೂರ್ಯ ಅವರ ಕಣ್ಣುಗಳು ಹೊಳೆಯುತ್ತಿದ್ದವು. ತಮ್ಮ ಪೋಷಕರ ನಾಲ್ವರು ಮಕ್ಕಳಲ್ಲಿ ಅವರು ಮೊದಲನೆಯವರು. ಅವರ ಕೂಡು ಕುಟುಂಬದಲ್ಲಿ ಇದ್ದದ್ದು 17–18 ಮಂದಿ. ಪೋಷಕರು ಎಲ್ಲವನ್ನೂ ಹೇಗೆ ನಿಭಾಯಿಸಿ, ತಮ್ಮ ಮಕ್ಕಳನ್ನೂ ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗ ಗಿಟ್ಟಿಸುವವರೆಗೆ ಹೇಗೆ ವಿದ್ಯಾವಂತರಾಗಿ ಮಾಡಿದರು ಎನ್ನುವುದು ಅವರ ನೆನಪಿನ ಬುತ್ತಿಯಲ್ಲಿ ಮಾಸಲು ಮಾಸಲಾಗಿತ್ತು.
ಚಂದ್ರಾ ಪೊಲೀಸ್‌ ಅಧಿಕಾರಿಯೊಬ್ಬರ ಪುತ್ರಿ. ನಾನು ಮೊದಲ ಬಾರಿಗೆ ಅವರನ್ನು ಭೇಟಿ ಮಾಡಿದ್ದು ನನ್ನ ಸ್ನೇಹಿತೆ ಸುಶೀಲಾ ಮಲ್ಲೇಶ್‌ ಮುಖಾಂತರ.

ಬದುಕಿನೆಡೆಗಿನ ವ್ಯವಹಾರ್ಯತೆಯ ನಿಲುವು ನನ್ನನ್ನು ಅವರತ್ತ ಸಮ್ಮೋಹನಗೊಳಿಸಿದ್ದಲ್ಲದೆ ಕೂಡಲೇ ಅವರನ್ನು ಮೆಚ್ಚಿಕೊಂಡೆ. ಅವರೊಂದಿಗಿನ ನನ್ನ ಮೊದಲ ಭೇಟಿ ನಡೆದದ್ದು ಜಯನಗರ ಟೆಲಿಫೋನ್‌ ಎಕ್ಸ್‌ಚೇಂಜ್‌ ಸಮೀಪದ 494ನೇ ಸಂಖ್ಯೆಯ ಅವರ ಬಂಗಲೆಯಲ್ಲಿ. ಒಳಪ್ರವೇಶಿಸುತ್ತಿದ್ದಂತೆ ಶುಚಿಯಾದ ಮನೆ ಮತ್ತು ಅವರ ಮಗನ ಕಪ್ಪು ಬಿಳುಪಿನ ಫೋಟೊಗಳು ನಿಮ್ಮನ್ನು ಸ್ವಾಗತಿಸುತ್ತವೆ. ತಂದೆ–ತಾಯಿಯ ಚೆಲುವನ್ನು ವರ್ಗಾಯಿಸಿಕೊಂಡಂತೆ ಅವರ ಮಗನೂ ಸುಂದರ. ರುಚಿಯಾದ ಫಿಲ್ಟರ್ ಕಾಫಿ ಮತ್ತು ಮನೆಯಲ್ಲಿ ತಯಾರಿಸಿದ ಲಘು ತಿನಿಸುಗಳಿಂದ ಆಕೆ ಆದರಿಸುತ್ತಾರೆ. ಅಡುಗೆ ಅವರ ನೆಚ್ಚಿನ ಆಯ್ಕೆಯಲ್ಲ! ಮುಚ್ಚುಮರೆಯಿಲ್ಲದೆ ನೇರವಾಗಿ ಮಾತನಾಡುವ ಸ್ವಭಾವ ಅವರದು. ಜೊತೆಗೆ ಪತಿಯ ಮುದ್ದಿನ ಮಡದಿಯೂ ಹೌದು. ಆಕೆಯನ್ನು ಅವರು ಮಗುವಿನಿಂತೆ ನೋಡಿಕೊಳ್ಳುತ್ತಿದ್ದರು. ಪ್ರತಿವರ್ಷವೂ ದೇಶದೊಳಗಿನ ಮತ್ತು ದೇಶದ ಹೊರಗಿನ ವಿಶಿಷ್ಟ ತಾಣಗಳಿಗೆ ಸೂರ್ಯ ಅವರು ಪ್ರವಾಸ ಆಯೋಜಿಸುತ್ತಿದ್ದರು. ಕೆಲವೊಂದು ಸಂದರ್ಭಗಳಲ್ಲಿ ನಾನು ಅವರ ಮನೆಗೆ ಹೋಗಿದ್ದಾಗ ತಮ್ಮ ವಿದೇಶಿ ಪ್ರಯಾಣದ ಬಗ್ಗೆ ಸುದೀರ್ಘ ವಿವರ ನೀಡುತ್ತಿದ್ದರು.

‘ಡಾಕ್ಟರ್‌, ನೀವು ಯುರೋಪ್‌ ದೇಶಗಳ ಶೌಚಾಲಯಗಳನ್ನು ನೋಡಬೇಕು, ನಮ್ಮ ದೇವಸ್ಥಾನಗಳಿಗಿಂತಲೂ ಶುಚಿಯಾಗಿರುತ್ತವೆ’ ಎಂದು ಚಂದ್ರಾ ಹಲವು ಬಾರಿ ಹೇಳಿದ್ದರು. ಒಮ್ಮೆ ಪ್ಯಾರಿಸ್‌ ಪ್ರವಾಸದಲ್ಲಿ ಫ್ಲಶ್‌ ಮಾಡುವುದು ಹೇಗೆ ಎಂದು ತಿಳಿಯದೆ ಶೌಚಾಲಯದಲ್ಲಿ ಸಿಕ್ಕಿಕೊಂಡುಬಿಟ್ಟಿದ್ದರು! ತೀವ್ರ ಮುಜುಗರಕ್ಕೊಳಗಾಗಿದ್ದ ಅವರಿಗೆ ಏನು ಮಾಡುವುದು ಎಂದು ತೋಚಿರಲಿಲ್ಲ. ಕುಳಿತಲ್ಲಿಂದ ಎದ್ದ ಕೂಡಲೇ ಅದು ತಾನಾಗಿಯೇ ಫ್ಲಶ್‌ ಆಯಿತು. ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಖುಷಿಯಿಂದಲೇ ಬಾಗಿಲು ತೆರೆದು ಹೊರಬರುತ್ತಿದ್ದಂತೆ ಒಂದೇ ಒಂದು ಸದ್ದಿಲ್ಲದ ಉದ್ದನೆಯ ಕ್ಯೂ ಕಂಡಿತು. ಅವರ ಹೊರಬರುವಿಕೆಗಾಗಿ ಜನ ಕಾದು ನಿಂತಿದ್ದರು. ಫ್ಲಷಿಂಗ್‌ ತಂತ್ರಜ್ಞಾನವನ್ನು ಹುಡುಕುವುದರಲ್ಲೇ ಅವರು ಶೌಚಾಲಯದ ಪರಿಗಣಿತ ಸಮಯವನ್ನು ಕಳೆದಿದ್ದರು.

ಉನ್ನತ ಹುದ್ದೆಯಲ್ಲಿದ್ದ ಅವರಿಗೆ ಚಾಲಕನುಳ್ಳ ಪ್ರತ್ಯೇಕ ಸರ್ಕಾರಿ ಕಾರಿನ ಪ್ರಯಾಣ ಸೌಲಭ್ಯವಿತ್ತು. ನಿವೃತ್ತಿಯ ಬಳಿಕ ಆ ಸೌಲಭ್ಯ ಇಲ್ಲವಾಯಿತು. ತಮ್ಮದೇ ಸ್ವಂತ ವಾಹನ ಕೊಂಡಿದ್ದ ಈ ದಂಪತಿ ಬೆಂಗಳೂರಿನ ದಟ್ಟ ಟ್ರಾಫಿಕ್‌ನಲ್ಲಿ ಚಾಲನೆ ಮಾಡುವ ಕಷ್ಟ ಅನುಭವಿಸಿ ಕೊನೆಗೆ ಅದನ್ನು ಮಾರಿದರು.

ಮುಂಚೆ ವಾಸಿಸುತ್ತಿದ್ದ ಬೃಹತ್ ಮನೆಯ ನಿರ್ವಹಣೆ ಕಷ್ಟಕರವಾದ ಕಾರಣ ಅದನ್ನು ಸಹ ಮಾರಿದರು. ಲಾಭವಲ್ಲದಿದ್ದರೂ ಅಪಾರ್ಟ್‌ಮೆಂಟ್‌ ಒಂದನ್ನು ಕೊಳ್ಳಲು ಸಾಲುವಷ್ಟು ಆ ಹಣ ಸಾಕಾಗಿತ್ತು. ಹೀಗೆ 2000ರಲ್ಲಿ ಅವರ ಅಪಾರ್ಟ್‌ಮೆಂಟ್‌ ಬದುಕು ಪ್ರಾರಂಭವಾಯಿತು. ವೃದ್ಧ ದಂಪತಿಗೆ ಅಪಾರ್ಟ್‌ಮೆಂಟ್‌ಗಳು ಸುರಕ್ಷಿತ ಎಂಬ ಭಾವನೆ ನನ್ನದಾಗಿತ್ತು. ಆದರೆ ಅಲ್ಲಿಯೂ ಸೂರ್ಯ ಅವರು ದಿನಸಿ ಸಾಮಾನುಗಳು, ಮನೆಬಳಕೆ ಅಗತ್ಯ ವಸ್ತುಗಳು, ಬಿಲ್‌ಗಳ ಪಾವತಿ, ಬ್ಯಾಂಕ್‌ ಓಡಾಟ ಮುಂತಾದವುಗಳನ್ನು ಮಾಡಲೇಬೇಕಿತ್ತು. ಅಪಾರ್ಟ್‌ಮೆಂಟ್‌ನಲ್ಲಿ ಪಕ್ಕದಲ್ಲೇ  ವಾಸಿಸುತ್ತಿದ್ದ ಸಂಬಂಧಿಯೊಬ್ಬರು ನೆರವು ನೀಡುತ್ತಿದ್ದರೂ 83ರ ಈ ವೃದ್ಧರಿಗೆ ಕೆಲಸಗಳನ್ನು ನಿರ್ವಹಿಸುವುದು ತುಂಬಾ ಕಷ್ಟವಾಗಿತ್ತು.

2013ರ ಬೆಳಿಗ್ಗೆ. 89ರ ಪ್ರಾಯಕ್ಕೆ ಕಾಲಿಟ್ಟಿದ್ದ ಸೂರ್ಯ ಅವರು ಬಾತ್‌ರೂಮ್‌ನಲ್ಲಿ ಜಾರಿ ಬಿದ್ದು ಅವರ ಕಾಲುಗಳು ನಿಶ್ಚೇಷ್ಟಿತಗೊಂಡವು. ಅವುಗಳನ್ನು ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ಅವರಂತೆಯೇ ವೃದ್ಧರಾಗಿದ್ದ ಚಂದ್ರಾ ಅವರಿಗೆ ಸೂರ್ಯರನ್ನು ಎತ್ತುವ ಅಥವಾ ಸಹಾಯಕ್ಕಾಗಿ ಕರೆಯುವ ಶಕ್ತಿಯೂ ಇರಲಿಲ್ಲ. ಸಹಾಯಕ್ಕೆ ಬೇರೆಯವರು ಬರುವ ವೇಳೆಗಾಗಲೇ ಸಮಯ ಮೀರಿ ಹೋಗಿತ್ತು. ಸೂರ್ಯ ಅವರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಯಿತು. ಅದೃಷ್ಟವಷಾತ್‌ ಅವರು ಚೇತರಿಸಿಕೊಂಡರು. ಅದು ವೃದ್ಧಾಪ್ಯದ ಕಾರಣ ಎದುರಾಗುವ ದುರ್ಬಲ ಎಲುಬುಗಳ (ಆಸ್ಟಿಒಪರಿಸಿಸ್‌) ಪ್ರಕರಣ. ಪ್ರಿಯ ಓದುಗರೇ ನೆನಪಿಡಿ, 50 ವರ್ಷ ದಾಟಿದ ಬಳಿಕ ನೀವು ಕ್ಯಾಲ್ಸಿಯಂ ಮಾತ್ರೆಗಳನ್ನು ತೆಗೆದುಕೊಳ್ಳಲೇಬೇಕು.

ಸ್ವಾವಲಂಬನೆ ಆಕೆಯ ಮುಖ್ಯ ಶಕ್ತಿಯಾಗಿತ್ತು. ಆದರೆ ಆಕೆಯೀಗ ಪರಾವಲಂಬಿ. ಪತಿಗೆ ನೆರವು ನೀಡಲಾಗದಷ್ಟು ಅಸಹಾಯಕರು. ಕೊನೆಗೆ ಈ ದಂಪತಿ ತಮ್ಮ ಅಪಾರ್ಟ್‌ಮೆಂಟ್‌ ಅನ್ನೂ ಮಾರಾಟಮಾಡಲು ನಿರ್ಧರಿಸಿದರು. ಬಳಿಕ ಅವರು ತೆರಳಿದ್ದು ವೃದ್ಧಯೋಗಕ್ಷೇಮ ವಾರ್ಡ್‌ಗೆ. 2013ರ ಮಾರ್ಚ್‌ನಿಂದಲೂ ಅವರು ಅಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ.

ಈ ನಿರ್ಧಾರ ಏಕೆ? “ನಮ್ಮನ್ನು ೨೪*೭ ಆರೈಕೆ ಮಾಡಲು ಯಾರೂ ಇಲ್ಲ. ಅಲ್ಲದೆ ಈಗ ನನ್ನ ಪತಿ ಪರಾವಲಂಬಿ. ನನಗೆ ಬೇರೆ ಆಯ್ಕೆಯೇ ಇರಲಿಲ್ಲ" ಎಂದರು ಚಂದ್ರಾ ಆಂಟಿ.

೨೦೧೩ರ ನವೆಂಬರ್‌ನಲ್ಲಿ ಒಂದು ತಿಂಗಳಾವಧಿಯ ರಜೆ ತೆಗೆದುಕೊಂಡಿದ್ದೆ. ಬಹುಶಃ ನನ್ನ ನಿವೃತ್ತಿಯ ಮೊದಲಿನ ಅತಿ ದೀರ್ಘಾವಧಿ ರಜೆಯಿದು. ವಯೋವೃದ್ಧರನ್ನು, ಕಾಯಿಲೆ ಪೀಡಿತರನ್ನು ಭೇಟಿ ಮಾಡುವುದು ಮತ್ತು ಬಡ ಕುಟುಂಬಗಳ ಸದಸ್ಯರು ಹಾಗೂ ಸ್ನೇಹಿತರನ್ನು ಕಾಣುವುದು ನನ್ನ ರಜೆಯ ಉದ್ದೇಶವಾಗಿತ್ತು. ಹೀಗಾಗಿ ಚಂದ್ರಾ ಆಂಟಿಗೆ ಕರೆಮಾಡಿದೆ. ಅವರು ಬೆಳಿಗ್ಗೆ ೧೧.೩೦ಕ್ಕೆ ಭೇಟಿಯ ಸಮಯ ನೀಡಿದರು. ಕಾಲನಿಷ್ಠೆಯನ್ನು ಎಂದಿಗೂ ನಾನು ಪರಿಪಾಲನೆ ಮಾಡುವವಳಲ್ಲ. ‘ಸೇವಾ ಕ್ಷೇತ್ರ ಆಸ್ಪತ್ರೆ’ಯ ಮೂರನೇ ಮಹಡಿಯಲ್ಲಿದ್ದ ವೃದ್ಧಯೋಗಕ್ಷೇಮ ಕೊಠಡಿಯನ್ನು ಪ್ರವೇಶಿಸಿದೆ. ಅಲ್ಲಿ ಒಂದು ಹೆಚ್ಚುವರಿ ಕುರ್ಚಿಯನ್ನು ಇಡಲೂ ಜಾಗವಿರಲಿಲ್ಲ. ದೊಡ್ಡ ಮನೆಯಿಂದ ಅಪಾರ್ಟ್‌ಮೆಂಟ್‌ಗೆ, ಅಲ್ಲಿಂದ ಈ ೧೦*೧೦ರ ಟೇಬಲ್ ಒಂದರ ಮೂಲಕ ಪ್ರತ್ಯೇಕಗೊಳಿಸಿದ್ದ ಎರಡು ಮಂಚಗಳ ಕೋಣೆಗೆ ಅವರು ಬದಲಾದದ್ದು ನೋಡಿ ದಿಗಿಲಾಯಿತು. ನಾವು ಅಷ್ಟೆಲ್ಲಾ ಯೋಜನೆ ರೂಪಿಸಿ ಎರಡು ಹಾಸಿಗೆಯ ಆಕರ್ಷಕ ಬೆಡ್‌ರೂಮ್‌ಗಳನ್ನು ಕಟ್ಟಿಸುವುದು ಯಾತಕ್ಕಾಗಿ?

ದಿಗ್ಭ್ರಮೆಯಿಂದ ದಿಟ್ಟಿಸುತ್ತಲೇ ಕಣ್ಣೀರನ್ನು ಅದುಮಿಟ್ಟುಕೊಂಡು ಅವರ ಕ್ಷಮೆ ಕೇಳಿದೆ. ನಾನು ಕೊಂಡೊಯ್ದಿದ್ದ ಹಣ್ಣುಗಳನ್ನು ನೀಡಿದೆ. ಬಿಡುವಿನ ವೇಳೆಯಲ್ಲಿ ಪುಸ್ತಕಗಳು ಚಂದ್ರಾ ಆಂಟಿಯ ನೆಚ್ಚಿನ ಸಂಗಾತಿಗಳಾಗಿದ್ದರಿಂದ ತೆಗೆದುಕೊಂಡು ಹೋಗಿದ್ದ ಪುಸ್ತಕಗಳನ್ನು ನೀಡಿದೆ. ಅವರು ನನ್ನನ್ನು ತಮ್ಮ ಮಂಚ ತುದಿಗೆ ಕರೆದೊಯ್ದರು. ಅಲ್ಲಿ ಇಬ್ಬರಿಗೂ ತಮ್ಮ ವಸ್ತುಗಳನ್ನು ಇರಿಸಲು ಎರಡು ಪ್ರತ್ಯೇಕವಾದ ಪುಟ್ಟ ಕಪಾಟುಗಳಿದ್ದವು. ‘ಬೇಸರಪಟ್ಟುಕೊಳ್ಳಬೇಡ, ನನಗೆ ಇಲ್ಲಿ ಎರಡು ಪುಸ್ತಕಗಳನ್ನು ಮಾತ್ರ ಇರಿಸಲು ಜಾಗ ಇರುವುದು’ ಎಂದರು ಮೆಲ್ಲಗೆ.

ಅವರ ಅಚ್ಚುಮೆಚ್ಚಿನ ಕೆಎಸ್‌ಐಸಿ, ಕಂಚಿ ಸೀರೆಗಳು, ಚಿನ್ನ, ಬೆಳ್ಳಿ ಇತ್ಯಾದಿಗಳೆಲ್ಲಾ ಏನಾದವು? ‘ಕೆಲವನ್ನು ಮಾರಿದೆವು. ಹಲವನ್ನು ದಾನ ಮಾಡಿದೆವು. ಎರಡು ಬಾಗಿಲ ಒಂದು ಕಪಾಟು ಹಾಗೂ ೧೦*೧೦ರ ಈ ಕೋಣೆಯಲ್ಲಿರುವ ನಾನು ಅಂಥ ಐಹಿಕ ವಸ್ತುಗಳ ಮೋಹದಿಂದ ಕಳಚಿಕೊಳ್ಳುವುದನ್ನು ಕಲಿತಿದ್ದೇನೆ’ ಎಂದರು. ಆಧಾರಕ್ಕೆ ಉಕ್ಕಿನ ಸರಳುಗಳುಳ್ಳ ಗೇಣುದ್ದದ ಕೋಣೆಗೆ ಅಂಟಿಕೊಂಡಿದ್ದ ಶೌಚಾಲಯವನ್ನು ಆಸಕ್ತಿಯಿಂದಲೇ ತೋರಿಸಿದರು. ನನ್ನ ಕಣ್ಣು ನೀರಿನಿಂದ ತುಂಬಿಕೊಂಡಿತು, ಅದನ್ನು ಮುಚ್ಚಿಡಲು ಸಾಧ್ಯವಾಗಲಿಲ್ಲ. ‘ಈಗ ನೀನು ಹೊರಡಬೇಕು. ೧ ಗಂಟೆಗೆ ನಮಗೆ ಊಟ ಬರುತ್ತದೆ. ನೀನು ಇಲ್ಲಿಯೇ ಇದ್ದರೆ ಚಕ್ರಗಳುಳ್ಳ ಊಟದ ಟೇಬಲ್‌ ಅನ್ನು ಇರಿಸಲು ಅವರಿಗೆ ಜಾಗ ಸಾಲುವುದಿಲ್ಲ!’. ಆಗ ನನಗೆ ಅರ್ಥವಾಗಿದ್ದು ಅವರು ೧೧ ಗಂಟೆಗೆ ಬರಲು ಹೇಳಿದ್ದು ಏಕೆಂದು.

ಕೋಣೆಯಿಂದ ಹೊರಡುವಾಗ, ಆಕೆ ಡಿಲೆಕ್ಸ್, ಸ್ಪೆಷಲ್ ಮತ್ತು ಸಾಮಾನ್ಯ ವಾರ್ಡ್‌ಗಳಲ್ಲಿನ ವೃದ್ಧ ಪುರುಷ ಹಾಗೂ ಮಹಿಳೆಯರಿಗೆ ನೀಡಲಾಗುವ ಟ್ರೋಫಿಯನ್ನು ಹೆಮ್ಮೆಯಿಂದ ತೋರಿಸಿದರು. ಹಾಲು, ಕುಡಿಯುವ ನೀರು ಮುಂತಾದವುಗಳನ್ನು ಕುದಿಸಲು ಇದ್ದ ಜಾಗದ ಸೌಲಭ್ಯವನ್ನು ತೋರಿಸಿದರು. ಮೈಕ್ರೋವೇವ್ ಓವನ್‌ ಅನ್ನು ತೋರಿಸಿ ನಕ್ಕರು- ‘ನನಗೆ ಇದನ್ನು ಬಳಸುವುದು ಹೇಗೆಂದೇ ತಿಳಿದಿಲ್ಲ’. ನಾನು ಕಲಿಸಲು ಮುಂದಾದಾಗ ಅವರು ನಿರಾಕರಿಸಿದರು. ಬೆಳಿಗ್ಗೆ ೬ ಗಂಟೆಗೆ ಶುರುವಾಗಿ ರಾತ್ರಿ ೧೦ಕ್ಕೆ ಮುಗಿಯುವ ಅವರ ದಿನಚರಿಯನ್ನು, ದೈನಂದಿನ ಮತ್ತು ವಾರದ ಊಟದ ಮೆನುಗಳನ್ನು ಬೇಗನೆ ವಿವರಿಸುವಷ್ಟು ಅವರು ಚುರುಕಾಗಿದ್ದರು. ಅವರ ಆಟಪಾಠಕ್ಕೆ ಒಳಾಂಗಣ ಕ್ರೀಡೆಗಳಿದ್ದವು ಮತ್ತು ಶಕ್ತ ವೃದ್ಧರಿಗೆ ಆಗಾಗ್ಗ ಪ್ರವಾಸಗಳನ್ನೂ ಏರ್ಪಡಿಸಲಾಗುತ್ತಿತ್ತು.

ಆ ಕಿರು ಸಮಯದಲ್ಲಿಯೇ ಅವರು ವೈದ್ಯರ ಔಷಧೀಯ ಸಲಹೆಗಳನ್ನು ತೋರಿಸಿದರು. ಅವರು ನೀಡಿರುವ ಔಷಧಗಳು ಸರಿಯಾಗಿವೆಯೇ ಎಂಬುದನ್ನು ನನ್ನಿಂದ ತಿಳಿದುಕೊಳ್ಳುವುದು ಅವರ ಉದ್ದೇಶವಾಗಿತ್ತು. ಒಮ್ಮೆ ನಕ್ಕು ‘ನಾನು ಶಿಶುವೈದ್ಯೆ’ ಎಂದೆ. ‘ವೃದ್ಧ ರೋಗಿಗಳೂ ಮಕ್ಕಳಂತೆಯೇ ಅಲ್ಲವೇ’ ಎಂದರು!
ಲಿಫ್ಟ್‌ವರೆಗೂ ಬಂದ ಅವರು ನೆಲಮಹಡಿ ತಲುಪಲು ‘೦’ ಒತ್ತಬೇಕು ಎಂದು ಹೇಳಿದರು. ಅವರ ಕಾಳಜಿ ವರ್ಣಿಸಲಸಾಧ್ಯ. ‘ಸಂಬಂಧಿಗಳು ಮತ್ತು ಸ್ನೇಹಿತರು ನಿಮ್ಮನ್ನು ನೋಡಲು ಬರುತ್ತಿರುತ್ತಾರೆಯೇ?’. ‘ಅವರನ್ನು ಯಾರು ಕರೆದುಕೊಂಡು ಬರುತ್ತಾರೆ?’ ತಕ್ಷಣವೇ ಅವರ ಉತ್ತರ ಬಂತು. ‘ಅಂಕಲ್‌ಗೆ ೯೦ ವರ್ಷವಾಗಿದ್ದರೆ, ನನಗೆ ೮೦ ಆಗಿದ್ದರೆ, ನಮ್ಮ ಬಂಧುಗಳು ಮತ್ತು ಗೆಳೆಯರೂ ಅದೇ ವಯಸ್ಕರಾಗಿರುತ್ತಾರೆ. ಅವರ ಬಿಜಿ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ನಮ್ಮನ್ನು ನೋಡಲು ಬರಲು ಸಮಯವಿದೆ ಎನಿಸುತ್ತದೆಯೆ?’.

ಅವರ ಏಕೈಕ ಮಗ– ಬಿ.ಇ. ಮೂರನೇ ವರ್ಷ ಓದುತ್ತಿದ್ದ ಸಾಯಿರಾಮ್ ೧೯ರ ಪ್ರಾಯದಲ್ಲಿದ್ದಾಗಲೇ ತೀವ್ರ ಅಪಘಾತಕ್ಕೆ ಒಳಗಾಗಿದ್ದು ನನಗೆ ಗೊತ್ತಿತ್ತು. ಅವರು ಆ ದುರ್ಘಟನೆಯ ದಿನವನ್ನು ನೆನಪಿಸಿಕೊಂಡರು. ಜಯನಗರ ಪೊಲೀಸ್ ಸ್ಟೇಷನ್ ಮುಂಭಾಗ ಬೆಳಿಗ್ಗೆ ೯ಕ್ಕೆ ಅಪಘಾತ ಸಂಭವಿಸಿದ್ದರೆ, ಆತನ ಅಂತ್ಯಸಂಸ್ಕಾರ ೧೦.೩೦ರ ಹೊತ್ತಿಗಾಗಲೇ ನಡೆದುಹೋಗಿತ್ತು. ಒಂದೂವರೆ ಗಂಟೆಯೊಳಗಾಗಿ ಅವರ ಆತ್ಮದ ಸಂಗಾತಿಯಂತಿದ್ದ ಮಗನ ದೇಹ ಜ್ವಾಲೆಗಳಡಿಯಲ್ಲಿ ಕಳೆದುಹೋಗಿತ್ತು.

ಒಂದು ವೇಳೆ ಸಾಯಿರಾಮ್ ಬದುಕಿದ್ದರೆ...
‘ನಿನಗೆ ನಾನು ತೋರಿಸಿದ ವಯೋವೃದ್ಧರು ನೆನಪಿದ್ದಾರೆಯೇ?’– ಅವರು ಮಾತು ಮುಂದುವರಿಸಿದರು, ‘ಎರಡು, ಮೂರು ಮತ್ತು ನಾಲ್ಕು ಮಕ್ಕಳನ್ನೂ ಹೊಂದಿದವರು ಇಲ್ಲಿದ್ದಾರೆ. ಆದರೂ ಅವರು ಇಲ್ಲಿದ್ದಾರೆ’. ‘ನನಗೆ ಉತ್ತರ ಸಿಕ್ಕಿತು!’.

‘ಆಶಾ, ಏಣಿ ಇರುವುದೇ ಬೀಳುವುದಕ್ಕೆ. ನಾವು ಒಂದೊಂದೇ ಮೆಟ್ಟಿಲನ್ನು ಏರುತ್ತಾ ಹೋಗಿದ್ದೇವೆ. ಪ್ರತಿ ಹಂತದಲ್ಲಿಯೂ ನಮ್ಮ ಐಹಿಕ ಸುಖದ ವಸ್ತುಗಳನ್ನು, ಸಂಬಂಧಿಗಳನ್ನು ಮತ್ತು ಸ್ನೇಹಿತರನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ. ಆದರೂ ನನಗಿನ್ನೂ ಗೊತ್ತಾಗುತ್ತಿಲ್ಲ, ಜನರು ಯಾಕೆ ಸಂಪತ್ತನ್ನು ಗುಡ್ಡೆ ಹಾಕುತ್ತಿದ್ದಾರೆ ಎಂದು. ನನಗೆ ಮನಸ್ಸಿನ ಶಾಂತಿ ಬೇಕೆ ಹೊರತು ಮನಸ್ಸಿನ ಚೂರುಗಳಲ್ಲ’. ನಾನು ಅಲ್ಲಿ ಸಾಯಿರಾಮ್‌ನ ಫೋಟೊ ನೋಡಲಿಲ್ಲ. ಅದನ್ನು ಕೇಳಲೂ ಇಲ್ಲ.

ನನಗೆ ಆಗಾಗ್ಗೆ ಅವರೊಂದಿಗೆ ಮಾತನಾಡಲು ಅವರ ದೂರವಾಣಿ ಸಂಖ್ಯೆ ಬೇಕಿತ್ತು. ಅವರು ಸ್ಥಿರ ದೂರವಾಣಿ ಸಂಖ್ಯೆ ನೀಡಿದರು. ‘ಮೊಬೈಲ್ ಫೋನ್ ಇಲ್ಲವೇ?’. ‘ನನ್ನ ಬಳಿ ಒಂದು ಇದೆ. ಆದರೆ ಅದು ರಿಂಗ್ ಆಗುವುದು ನನಗೆ ಕೇಳಿಸುವುದಿಲ್ಲ’.

ಸೂರ್ಯ ಅಂಕಲ್‌ಗೆ ಅಧಿಕ ರಕ್ತದೊತ್ತಡವಿದೆ. ಅವರಿಗೆ ನಡೆದಾಡಲು ಕಷ್ಟವಾಗುತ್ತದೆ. ಚಂದ್ರಾ ಆಂಟಿಗೆ ಶ್ರವಣ ಸಮಸ್ಯೆ. ಚಂದ್ರಾ ಆಂಟಿ ಅಂಕಲ್‌ಗೆ ನಡೆದಾಡಲು ನೆರವಾಗುವ ಕಾಲುಗಳಾಗಿದ್ದರೆ, ಸೂರ್ಯ ಅಂಕಲ್ ಅವರಿಗೆ ಕಿವಿಯಾಗಿದ್ದಾರೆ. ಅವರ ಪಾದಗಳನ್ನು ಸ್ಪರ್ಶಿಸಿದೆ. ‘ಆರೋಗ್ಯವಂತಳಾಗಿರು’ ಎಂಬ ಆಶೀರ್ವಾದವನ್ನಷ್ಟೇ ಅವರು ನನಗೆ ನೀಡಿದ್ದು.

ನಾವೆಲ್ಲರೂ ವಯಸ್ಸನ್ನು ಕ್ರಮಿಸಲೇಬೇಕು. ವಯಸ್ಸಾಗುವುದನ್ನು ತಡೆಯುವುದು ಅಸಾಧ್ಯ. ಅದಕ್ಕೆ ವೃದ್ಧಯೋಗಕ್ಷೇಮ ವಾರ್ಡ್‌ಗಳಷ್ಟೇ ಅಂತಿಮ ಉತ್ತರವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT