ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

80 ದಿನಗಳಲ್ಲಿ 150 ದಾಳಿ

Last Updated 27 ಜುಲೈ 2013, 19:59 IST
ಅಕ್ಷರ ಗಾತ್ರ

ಅಕ್ಟೋಬರ್ 20, 1980ರಂದು ನಾನು ಬೆಳಗಾವಿ ನಗರ ಹಾಗೂ ತಾಲ್ಲೂಕಿನ ವ್ಯಾಪ್ತಿಯ ಪೊಲೀಸ್ ಉಪ ವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡೆ. ಬೆಳಗಾವಿಯು ವಿಭಾಗೀಯ ಕೇಂದ್ರವಾಗಿರುವುದರಿಂದ ಅಲ್ಲಿ ಬಹಳಷ್ಟು ಆರ್ಥಿಕ ಚಟುವಟಿಕೆಗಳು ನಡೆಯುತ್ತಿದ್ದವು. ನಾನು ಅಧಿಕಾರ ವಹಿಸಿಕೊಂಡ ಹತ್ತು ದಿನಗಳಲ್ಲೇ ನವೆಂಬರ್ 1 ಬಂತು. ಅಲ್ಲಿ ಕನ್ನಡಿಗರು ಆ ದಿನವನ್ನು `ಕನ್ನಡ ರಾಜ್ಯೋತ್ಸವ' ಎಂದು ಆಚರಿಸುತ್ತಿದ್ದರು. ಮರಾಠಿ ಭಾಷಿಕರ ಪಾಲಿಗೆ ಅದು `ಕರಾಳ ದಿನ'. ಉಭಯ ಭಾಷಿಕರ ನಡುವೆ ಸೂಕ್ಷ್ಮ ಸಮಸ್ಯೆ ಇದ್ದಿದ್ದರಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕಿತ್ತು. ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಟಿ. ಮಡಿಯಾಳ್ ನೇತೃತ್ವದಲ್ಲಿ ನಾವು ಉತ್ತಮ ಬಂದೋಬಸ್ತ್ ವ್ಯವಸ್ಥೆ ಮಾಡಿದೆವು. ಆ ದಿನ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಮಡಿಯಾಳ್ ಶಿಸ್ತಿನ ವ್ಯಕ್ತಿ.

ಉನ್ನತ ಕರ್ತವ್ಯಪ್ರಜ್ಞೆ ಇರುವ ಅಧಿಕಾರಿಯಾಗಿದ್ದರು. ಅವರು ಬೆಳಿಗ್ಗೆ ಬಂದೋಬಸ್ತ್ ವ್ಯವಸ್ಥೆ ನಿಗಾ ಮಾಡಲು ಬಂದವರು ರಾತ್ರಿವರೆಗೆ ಸ್ವತಃ ಮುಂದೆ ನಿಂತು ಮಾರ್ಗದರ್ಶನ ನೀಡಿದರು. ಚಿಕ್ಕಪುಟ್ಟ ವಿಷಯವನ್ನೂ ಅವರು ವಿಶೇಷವಾಗಿ ಗಮನಿಸುತ್ತಿದ್ದರು. ಆ ದಿನ ಅವರು ವಹಿಸಿದ ಜಾಗ್ರತೆಯಿಂದಾಗಿ ಯಾವ ಅಹಿತಕರ ಘಟನೆಯೂ ನಡೆಯಲಿಲ್ಲ. ಮನಸ್ಸು ನಿರಾಳವಾಯಿತು.

ರೈತ ಚಳವಳಿ ಉತ್ತುಂಗದಲ್ಲಿದ್ದ ಕಾಲವದು. ನಾನು ಉಪ ವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ರೈತ ಸಂಘಟನೆಗಳ ಚಳವಳಿಯಿಂದ ಸಾಕಷ್ಟು ಅಹಿತಕರ ಘಟನೆಗಳು ನಡೆದಿದ್ದವು. ಆ ಸಂಘರ್ಷದಲ್ಲಿ ಅನೇಕ ಪೊಲೀಸರು ಗಾಯಗೊಂಡಿದ್ದರು. ಹಾಗೆ ಗಾಯಗೊಂಡ ಪೊಲೀಸರಿಗೆ ಸರ್ಕಾರ ಮೊದಲ ಬಾರಿಗೆ ಪರಿಹಾರ ಘೋಷಿಸಿತು. ಗಾಯದ ಸ್ವರೂಪಕ್ಕೆ ತಕ್ಕಂತೆ ಇಂತಿಷ್ಟು ಪರಿಹಾರ ಎಂದು ನಿಗದಿಪಡಿಸಲಾಗಿತ್ತು. ಪರಿಹಾರ ವಿತರಿಸಲು ಆಗಿನ ಡಿಜಿಪಿ ಜಿ.ವಿ. ರಾವ್ ಬಂದರು. ಅವರು ಉದಾತ್ತ ಸ್ವಭಾವದ, ನಿಸ್ಪೃಹ ಅಧಿಕಾರಿಯಾಗಿದ್ದರು. ಪರಿಹಾರ ವಿತರಣೆ ಕಾರ್ಯಕ್ರಮದ ಸಂದರ್ಭದಲ್ಲಿ ವಿಶೇಷ ಕವಾಯತು ಏರ್ಪಡಿಸಲಾಗಿತ್ತು. ಟಿ. ಮಡಿಯಾಳ್ ಅವರದ್ದೇ ಮೇಲ್ವಿಚಾರಣೆಯಲ್ಲಿ ಅದು ನಡೆಯಿತು. ಪ್ರತಿ ವಿಷಯದ ಕುರಿತು ಅವರಿಗೆ ಇನ್ನಿಲ್ಲದ ಆಸ್ಥೆ. ಕವಾಯತು ಮಾಡುವಾಗ ಪ್ರತಿ ನಿಮಿಷಕ್ಕೆ 120 ಹೆಜ್ಜೆಗಳನ್ನು ಹಾಕುವುದು ನಿಯಮ. ಅದರಲ್ಲಿ ಎರಡು ಮೂರು ಹೆಜ್ಜೆ ಹೆಚ್ಚು ಕಡಿಮೆಯಾದರೂ ಮಡಿಯಾಳ್ ಪೊಲೀಸರಿಗೆ ಮತ್ತೆ ತರಬೇತಿ ನೀಡುತ್ತಿದ್ದರು. ಅವರ ಕರ್ತವ್ಯಪ್ರಜ್ಞೆ ನನ್ನ ಮೇಲೆ ಬಹಳ ಪರಿಣಾಮ ಬೀರಿತು.

ಹೊಸದಾಗಿ ಕೆಲಸ ಪ್ರಾರಂಭಿಸಿದಾಗ ನನ್ನಲ್ಲಿ ತುಂಬು ಉತ್ಸಾಹವಿತ್ತು. ಅಕ್ರಮ ಪಿಸ್ತೂಲ್‌ಗಳು, ಜೂಜಾಟ, ಅಕ್ರಮವಾಗಿ ಓಡಾಡುತ್ತಿದ್ದ ಟ್ಯಾಕ್ಸಿಗಳು- ಇವುಗಳ ಮೇಲೆ ಪ್ರತಿದಿನ ಪ್ರಕರಣಗಳನ್ನು ದಾಖಲು ಮಾಡುತ್ತಿದ್ದೆ. ಮಟ್ಕಾ, ಬೆಳಗಾವಿ ಹೊರವಲಯದಲ್ಲಿ ನಡೆಯುತ್ತಿದ್ದ ಅಂದರ್ ಬಾಹರ್ ಜೂಜಾಟದ ತಾಣಗಳ ಮೇಲೆಯೂ ದಾಳಿ ನಡೆಸಿ, ಪ್ರಕರಣಗಳನ್ನು ದಾಖಲಿಸುತ್ತಿದ್ದೆ. ದಿನಕ್ಕೆ ಸರಾಸರಿ ಮೂರು ನಾಲ್ಕು ದಾಳಿ ನಡೆಸುತ್ತಿದ್ದ ನಾನು ಯಾರ ಮುಲಾಜಿಗೂ ಒಳಗಾಗಿರಲಿಲ್ಲ. ಉತ್ತಮ ಮಾಹಿತಿದಾರರ ಸಹಕಾರವೂ ನನಗೆ ಇತ್ತು.

ಬೆಳಗಾವಿಯಲ್ಲಿ ನಾನು ಇದ್ದದ್ದು ಬರೀ 80 ದಿನ. ಅಷ್ಟು ಅವಧಿಯಲ್ಲಿ 150ಕ್ಕೂ ಹೆಚ್ಚು ದಾಳಿ ನಡೆಸಿದ್ದೆ. ಮೋಟಾರು ವಾಹನ ಕಾಯ್ದೆ ಉಲ್ಲಂಘನೆ, ಜೂಜಾಟ, ಮಟ್ಕಾ ಇವುಗಳಿಗೆ ಸಂಬಂಧಿಸಿದಂತೆ ಠಾಣೆಗಳಲ್ಲಿ ದೂರು ದಾಖಲಿಸಿ, ಕೈಗೊಂಡ ಕ್ರಮಗಳು ಕೂಡ ಕಡಿಮೆಯೇನೂ ಇರಲಿಲ್ಲ. ಪೊಲೀಸ್ ಠಾಣೆಗಳ ತಪಾಸಣೆಯನ್ನೂ ನಾನು ಕಟ್ಟುನಿಟ್ಟಾಗಿ ಮಾಡುತ್ತಿದ್ದೆ. ಇದರಿಂದಾಗಿ ನನ್ನ ಕೈಕೆಳಗಿನ ಅಧಿಕಾರಿ, ಸಿಬ್ಬಂದಿವರ್ಗದವರಿಗೆ ಬಹಳಷ್ಟು ಕಸಿವಿಸಿಯಾಯಿತು. ಬಿಗಿಯಾದ ವಾತಾವರಣದಲ್ಲಿ ಕೆಲಸ ಮಾಡುವುದು ಅವರೆಲ್ಲರ ಪಾಲಿಗೆ ತೊಂದರೆಯಾಗಿ ಪರಿಣಮಿಸಿತು.

ಇಂಥ ಸಂದರ್ಭದಲ್ಲಿ ಮಧ್ಯರಾತ್ರಿಯ ನಂತರವೂ ಬೆಳಗಾವಿಯ ಸೋಷಿಯಲ್ ಕ್ಲಬ್‌ನಲ್ಲಿ ಇಸ್ಪೀಟ್ ಆಡುತ್ತಿದ್ದ ಪ್ರತಿಷ್ಠಿತರೊಬ್ಬರ ಪತ್ನಿ ನನ್ನ ಕಚೇರಿಗೆ ಬಂದು ಅಲವತ್ತುಕೊಂಡರು. ತಡರಾತ್ರಿಯಾದರೂ ಮನೆಗೆ ಬರದೆ ಕ್ಲಬ್‌ನಲ್ಲಿ ಇಸ್ಪೀಟ್ ಆಡುತ್ತಾ ಕೂರುತ್ತಿದ್ದ ಗಂಡನ ವರ್ತನೆಯಿಂದ ಅವರು ನೊಂದಿದ್ದರು. ಬೆಳಗಾವಿಯ ಹೆಸರಾಂತ ವೈದ್ಯರು, ವಕೀಲರು ಸೇರಿದಂತೆ ಪ್ರತಿಷ್ಠಿತರು ಕ್ಲಬ್‌ಗಳಲ್ಲಿ ಆಡುತ್ತಿದ್ದರು. ನಾನು ಅದನ್ನು ಲೆಕ್ಕಿಸದೆ, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಯವರ ಗಮನಕ್ಕೂ ತರದೆ ಇಸ್ಪೀಟ್ ಕ್ಲಬ್ ಮೇಲೆ ದಾಳಿ ಮಾಡಿ, ಪ್ರಕರಣ ದಾಖಲಿಸಿದೆ. ಅನೇಕ ಪ್ರತಿಷ್ಠಿತರನ್ನು ಬಂಧಿಸಿ, ಠಾಣೆಗೆ ಕರೆದೊಯ್ದು ಮರುದಿನ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದುಂಟು. ಇದರಿಂದ ನಗರದ ಪ್ರತಿಷ್ಠಿತ ವ್ಯಕ್ತಿಗಳ ಸಹಾನುಭೂತಿಯನ್ನು ಕಳೆದುಕೊಳ್ಳಬೇಕಾಯಿತು.

ಅದೇ ವರ್ಷ ಡಿಸೆಂಬರ್ 31ರ ರಾತ್ರಿ ಗಸ್ತಿನಲ್ಲಿದ್ದಾಗ ಒಂದು ಠಾಣೆಯಲ್ಲಿ ಒಬ್ಬ ಹೆಡ್‌ಕಾನ್‌ಸ್ಟೆಬಲ್ ಮಲಗ್ದ್ದಿದು ಕಂಡುಬಂದಿತು. ಅವರನ್ನು ಎಬ್ಬಿಸಿದೆ. `ಎಚ್ಚರವಿದ್ದು ಅಚ್ಚುಕಟ್ಟಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಕಟ್ಟುನಿಟ್ಟು ಕ್ರಮ ತೆಗೆದುಕೊಳ್ಳಬೇಕಾದೀತು' ಎಂದು ಎಚ್ಚರಿಕೆ ನೀಡಿದೆ. ಠಾಣಾ ದಿನಚರಿಯಲ್ಲಿಯೂ ಅವರು ಮಲಗಿದ್ದರೆಂಬುದನ್ನು ನಮೂದಿಸಿ ಬಂದೆ.

ಮರುದಿನ ಜನವರಿ 1, 1981. ಪೊಲೀಸ್ ಇಲಾಖೆ ಪರಂಪರೆಯ ಪ್ರಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆ ದಿನ ಶುಭಾಶಯ ಹೇಳಬೇಕು. ಮೊದಲಿನಿಂದಲೂ ಇದು ನಡೆದುಕೊಂಡು ಬಂದಿದೆ. ಕೆಲವು ಅಧಿಕಾರಿಗಳು ದಿನವೂ ನಾನು ಮಾಡುತ್ತಿದ್ದ ದಾಳಿಗಳಿಂದ, ಕಠಿಣ ಮೇಲ್ವಿಚಾರಣೆಯಿಂದ ಮುಜುಗರಕ್ಕೆ ಒಳಗಾಗಿದ್ದರು. ಅವರೆಲ್ಲಾ ಮೊದಲೇ ಅಭಿಪ್ರಾಯ ವಿನಿಮಯ ಮಾಡಿಕೊಂಡು, ಒಂದು ಉಪಾಯ ಹೂಡಿ ಬಂದಿದ್ದರು. ಜನವರಿ 1ರಂದು ಶುಭಾಶಯ ಹೇಳಲೆಂದು ನಾನು ಹೋದರೆ ಅಲ್ಲಿ ಒಂದು ಗುಲ್ಲು ಎದ್ದಿತ್ತು. ಹಿಂದಿನ ದಿನ ಹೆಡ್ ಕಾನ್‌ಸ್ಟೆಬಲ್‌ನನ್ನು ನಾನು ಅವಾಚ್ಯ ಶಬ್ದಗಳಿಂದ ನಿಂದಿಸಿದೆ ಎಂದು ಇಲ್ಲದ ಸುದ್ದಿ ಹಬ್ಬಿಸಿದ್ದರು. ಎರಡು ಮೂರು ಠಾಣೆಗಳಲ್ಲಿ ಕೆಲವು ಪೊಲೀಸರು ಗುಂಪು ಕಟ್ಟಿಕೊಂಡು ಪ್ರತಿಭಟನೆಯನ್ನೂ ವ್ಯಕ್ತಪಡಿಸಿದರು. ಇದು ಮೇಲಧಿಕಾರಿಗಳಿಗೂ ಗೊತ್ತಾಯಿತು. ಆಗ ಇದ್ದ ಒಟ್ಟಾರೆ ಪೊಲೀಸ್ ವ್ಯವಸ್ಥೆಗೆ ತೊಂದರೆ ಆಗುತ್ತದೆಂದು ಭಾವಿಸಿ ಒಂದು ತಿಂಗಳು ರಜೆ ಹೋಗುವಂತೆ ನನಗೆ ಸೂಚನೆ ಬಂದಿತು. ಇದರಿಂದ ಮನಸ್ಸಿಗೆ ನೋವಾಯಿತು. ಕೈಕೆಳಗಿನ ಹಲವಾರು ಅಧಿಕಾರಿಗಳು, ಸಿಬ್ಬಂದಿ, ಪ್ರತಿಷ್ಠಿತರ ವಿರೋಧ ಕಟ್ಟಿಕೊಂಡಿದ್ದ ನನಗೆ ಯಾವುದೇ ದಾರಿ ಕಾಣದಾಯಿತು. ಹಾಗಾಗಿ ಒಂದು ತಿಂಗಳು ರಜೆ ಹೋದೆ. ನಾನು ಮಾಡಿದ ಕೆಲಸ, ನಡೆದ ಘಟನೆಗಳನ್ನು ವಿವರಿಸಿ ಹಿರಿಯ ಅಧಿಕಾರಿಗಳಿಗೆ ವಿವರವಾದ ಪತ್ರ ಬರೆದೆ. ಡಿಜಿಪಿ ಜಿ.ವಿ. ರಾವ್ ಅವರು ನನ್ನ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ನನ್ನನ್ನು ಬೆಂಗಳೂರಿಗೆ ಕರೆಸಿ, `ನೀವು ಕಾನೂನು ಪ್ರಕಾರ ಕೆಲಸ ಮಾಡಲು ಯಾವುದೇ ಅಭ್ಯಂತರವಿಲ್ಲ. ಆದರೆ ಯಾವುದೇ ಕೆಲಸ ಮಾಡುವಾಗ ಸ್ವಲ್ಪ ವ್ಯವಹಾರಿಕವಾಗಿಯೂ ಯೋಚಿಸಬೇಕು' ಎಂದು ತಿಳಿಹೇಳಿದರು. ಅಷ್ಟು ಹೇಳಿದ ಮೇಲೆ ನನ್ನನ್ನು ತುಮಕೂರು ಜಿಲ್ಲೆಯ ತಿಪಟೂರು ಪೊಲೀಸ್ ವಿಭಾಗಕ್ಕೆ ವರ್ಗಾವಣೆ ಮಾಡಿದರು. ಆ ವರ್ಷದ ನನ್ನ ವಾರ್ಷಿಕ ರಹಸ್ಯ ವರದಿಯಲ್ಲಿ `ಕಾನ್ಷಿಎನ್ಷಸ್ (ನ್ಯಾಯನಿಷ್ಠ) ಅಧಿಕಾರಿ' ಎಂದು ಷರಾ ಬರೆದರು.

ಜನವರಿ 30, 1981ರಂದು ತಿಪಟೂರಿಗೆ ಬಂದು ಪೊಲೀಸ್ ಉಪ ವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡೆ. ಆ ಪೊಲೀಸ್ ವಿಭಾಗದಲ್ಲಿ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ- ಈ ನಾಲ್ಕು ತಾಲ್ಲೂಕುಗಳು ಸೇವಾ ವ್ಯಾಪ್ತಿಗೆ ಸೇರಿದ್ದವು.


ಮುಂದಿನ ವಾರ
ತಿಪಟೂರಿನ ಕಾರ್ಯಾನುಭವ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT