ಪ್ರಪಂಚಕ್ಕೊಂದು ಗೊತ್ತುಗುರಿ

7

ಪ್ರಪಂಚಕ್ಕೊಂದು ಗೊತ್ತುಗುರಿ

ಗುರುರಾಜ ಕರಜಗಿ
Published:
Updated:

ಪರಬೊಮ್ಮ ನೀ ಜಗವ ರಚಿಸಿದವನಾದೊಡದು |
ಬರಿಯಾಟವೋ ಕನಸೊ ನಿದ್ದೆ ಕಲವರವೋ? ||
ಮರುಳನವನಲ್ಲದೊಡೆ ನಿಯಮವೊಂದಿರಬೇಕು |
ಗುರಿಗೊತ್ತದೇನಿಹುದೋ? – ಮಂಕುತಿಮ್ಮ || 32 ||

ಪದ-ಅರ್ಥ: ಪರಬೊಮ್ಮ=ಭಗವಂತ, ರಚಿಸಿದವನಾದೊಡದು=ರಚಿಸಿದವನು+ಆದೊಡೆ+ಅದು, ಬರಿಯಾಟವೋ=ಬರಿ+ಆಟವೋ, ಕಲವರ=ನಿದ್ದೆಯಲ್ಲಿಯ ಬಡಬಡಿಕೆ, ಮರುಳನವನಲ್ಲದೊಡೆ=ಮರುಳನು+ಅವನು+ಅಲ್ಲದೊಡೆ, ಗುರಿಗೊತ್ತದೇನಿಹುದೋ=ಗುರಿ+ಗೊತ್ತು+ಅದೇನಿಹುದೋ.

ವಾಚ್ಯಾರ್ಥ: ಭಗವಂತ ಈ ಜಗತ್ತನ್ನು ನಿರ್ಮಿಸಿದ್ದೇ ಆದರೆ ಅದು ಕೇವಲ ಆಟವೋ, ಕನಸೋ ಅಥವಾ ಬಡಬಡಿಕೆಯೋ? ಅವನ ಬುದ್ಧಿ ಸರಿ ಇರುವುದಾದರೆ ಯಾವುದಾದರೂ ನಿಯಮವಿರಬೇಕು. ಆದರೆ ಈ ಪ್ರಪಂಚದ ಗುರಿ ಮತ್ತು ದಿಶೆ ಏನಿಹುದೋ?

ವಿವರಣೆ: ಪರಿಪೂರ್ಣನೂ, ಅನಂತನೂ, ಸರ್ವಶಕ್ತನೂ ಆದ ಭಗವಂತನೇ ಈ ಜಗತ್ತನ್ನು ಸೃಷ್ಟಿಸಿದ್ದಾನೆ ಎನ್ನುವುದಾದರೆ ಅದೂ ಪರಿಪೂರ್ಣವೂ, ವ್ಯವಸ್ಥಿತವೂ ಆಗಿರಬೇಕಿತ್ತಲ್ಲವೇ? ಆದರೆ ಅದನ್ನು ನೋಡಿದರೆ ಅದೊಂದು ಬರಿ ಕನಸಿನಂತೆ, ಬಡಬಡಿಕೆಯಂತೆ ಕಾಣುತ್ತದೆ. ಅವನು ಅಷ್ಟು ಬುದ್ಧಿವಂತನಾಗಿದ್ದರೆ ಜಗತ್ತಿನ ಚಾಲನೆಗೆ ಸ್ಪಷ್ಟ ನಿಮಯಗಳನ್ನು ಹಾಕಬೇಕಿತ್ತು. ಈ ಜಗತ್ತಿಗೆ ಒಂದು ಗುರಿ ಒಂದು ಮಾರ್ಗ ಇದೆಯೇ ಎಂಬ ಸಂಶಯ ಮೂಡುತ್ತದೆ. ಇದು ಸಾಮಾನ್ಯ ಮನುಷ್ಯರ ಮನದ ಸಂದೇಹ. ಆದರೆ ಡಿ.ವಿ.ಜಿ ಇದನ್ನು ಎತ್ತುವುದು ಸಂದೇಹ ಮತ್ತು ನಿರಾಸೆಗಳಿಂದಲ್ಲ. ಅಂತಹ ಪರಿಪೂರ್ಣನಾದ ದೇವರು ಹೀಗೆ ಅನಿಶ್ಚಿತವಾದ, ಸದಾ ಬದಲಾವಣೆಯನ್ನು ಹೊಂದುವ ಪ್ರಪಂಚವನ್ನು ಏಕೆ ಸೃಷ್ಟಿಸಿದ ಎಂಬುದರ ಜಿಜ್ಞಾಸೆಯನ್ನು ನಮ್ಮ ಮನದಲ್ಲಿ ಮೂಡಿಸುವುದಕ್ಕಾಗಿ.

ಎಲ್ಲ ರೀತಿಯಲ್ಲಿ ಪರಿಪೂರ್ಣನಾದ ದೇವರು ಈ ಜಗತ್ತನ್ನು ಯಾಕೆ ನಿರ್ಮಿಸಬೇಕಿತ್ತು? ಬ್ರಹ್ಮಸೂತ್ರದಲ್ಲಿ ಹೇಳುವಂತೆ.
‘ಲೋಕವತ್ತು ಲೀಲಾಕೈವಲ್ಯಮ್’

ಈ ಲೋಕವೇ ಅವನ ಲೀಲೆ ಮತ್ತು ಲೀಲೆಗೋಸ್ಕರವೇ ಸೃಷ್ಟಿಯಾದದ್ದು. ತೊಟ್ಟಿಲಲ್ಲಿ ಮಲಗಿರುವ ಮಗು ಏಕೆ ಕೈಕಾಲು ಅಲುಗಾಡಿಸುತ್ತದೆ? ಸುಮ್ಮನೆ ಮಲಗುವುದಕ್ಕೆ ಏನು ತೊಂದರೆ ಅದಕ್ಕೆ? ಅದು ಹಾಗೆ ಮಾಡುವುದು ಕೇವಲ ಲೀಲೆಗಾಗಿ. ಹೀಗೆ ಚಲಿಸುವುದು, ಆಟವಾಡುವುದು ಶಕ್ತಿಯ ಸ್ವಭಾವ. ಶಕ್ತಿ ಎಂದಿಗೂ ನಿಶ್ಚಲವಾಗಿ ಇರಲಾರದು. ಭಗವಂತನ ಶಕ್ತಿ ಅಪರಿಮಿತವಾದ್ದರಿಂದ ಅದು ಅನೇಕ ರೂಪಗಳಲ್ಲಿ ಅನೇಕ ಸ್ತರಗಳಲ್ಲಿ ಆಟವಾಡುತ್ತದೆ. ಅದು ಯಾವ ಮಟ್ಟದ ಆಟವೆಂದರೆ ನೋಟಕರಿಗೆ ಅದು ಕನಸೆಂಬಂತೆ, ಅವ್ಯವಸ್ಥೆಯಂತೆ ತೋರೀತು. ಆದರೆ ಸೂಕ್ಷ್ಮವಾಗಿ, ಸೂರ್ಯ, ಚಂದ್ರರ ಗತಿಗಳನ್ನು ಋತುಗಳ ನಿರ್ದಿಷ್ಟ ನಡೆಗಳನ್ನು ಕಂಡಾಗ ವ್ಯವಸ್ಥೆ ಕಾಣುತ್ತದೆ.

ಹಾಗಾದರೆ ಅಕಾರಣವಾದ ಘಟನೆಗಳು ಏಕಾಗುತ್ತವೆ? ಇದು ಮನುಷ್ಯರ ಕರ್ಮಫಲ. ಜಗತ್ತು ಒಂದು ಮಹಾಯಂತ್ರ. ಇಡೀ ವಿಶ್ವದ ಎಲ್ಲವೂ, ಎಲ್ಲರೂ ಅದರ ಚಕ್ರಗಳು, ಕೀಲುಗಳು, ಪಟ್ಟಿಗಳು, ಮೊಳೆಗಳು. ಇದರಲ್ಲಿ ಯಾವುದಾದರೂ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಯಂತ್ರದ ಕಾರ್ಯ ಯಡವಟ್ಟಾಗುತ್ತದೆ. ಮನುಷ್ಯ ಮಾಡಿದ್ದು ಯಂತ್ರಕ್ಕೂ ತಗಲುತ್ತದೆ. ಅವನು ನಿಸರ್ಗವನ್ನು ದುರುಪಯೋಗಪಡಿಸಿಕೊಂಡಷ್ಟೂ ಪ್ರಕೃತಿಯ ಏರುಪೇರು. ಆದ್ದರಿಂದ ಈ ಜಗತ್ತಿನ ಗೊತ್ತು ಗುರಿಗೆ ನಮ್ಮ ಆಸೆ, ಅಪೇಕ್ಷೆಗಳಿಗೆ, ದುರಾಸೆಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.

 

ಬರಹ ಇಷ್ಟವಾಯಿತೆ?

 • 16

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !