ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯೋತ್ಸವದಾಚೆಗಿನ ಕರ್ನಾಟಕ ಪ್ರಜ್ಞೆ...

ಪ್ರತಿಭಟನೆಯನ್ನೇ ಆಚರಣೆಯಾಗಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ರಾಜ್ಯಗಳು
Last Updated 30 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ದೇಶದ ಎಲ್ಲಾ ರಾಜ್ಯಗಳ ಸ್ವಾಯತ್ತತೆ ಮತ್ತು ಸ್ವಾಭಿಮಾನದ ಮೇಲೆ ಇನ್ನಿಲ್ಲ ಎಂಬಂತಹ ಪ್ರಹಾರಗಳು ನಡೆಯುತ್ತಿರುವ ಕಾಲದಲ್ಲಿ ಮತ್ತೆ ಕರ್ನಾಟಕ ರಾಜ್ಯೋತ್ಸವ ಬಂದಿದೆ. ರಾಜ್ಯಗಳು ಅಕ್ಷರಶಃ ತತ್ತರಿಸಿಹೋಗಿವೆ. ಕೆಲ ರಾಜ್ಯಗಳು ಕೇಂದ್ರ ಸರ್ಕಾರದ ಪಾಳೆಗಾರಿ ಪಾರುಪತ್ಯವನ್ನು ಪತ್ರ ಮುಖೇನ ಪ್ರತಿಭಟಿಸುತ್ತಿವೆ. ಇನ್ನು ಕೆಲವು ರಾಜ್ಯಗಳು ಅಂಗಲಾಚುತ್ತಿವೆ. ಮತ್ತೆ ಕೆಲವು ರಾಜ್ಯಗಳು (ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷದ ಆಧಿಪತ್ಯದಲ್ಲಿರುವ ರಾಜ್ಯಗಳು) ಸಾಮಂತರಂತೆ ದೈನೇಸಿಯಾಗಿ ತಲೆತಗ್ಗಿಸಿ ನಿಂತಿವೆ. ಕರ್ನಾಟಕವು ಮೂರನೆಯ ವರ್ಗಕ್ಕೆ ಸೇರಿದೆ. ಆದುದರಿಂದ, ಕರ್ನಾಟಕದಲ್ಲಿ ಆಳುವ ಸರ್ಕಾರಕ್ಕೆ ರಾಜ್ಯೋತ್ಸವ ಆಚರಿಸುವ ನೈತಿಕ ಹಕ್ಕು ಉಳಿದಿಲ್ಲ. ಜನರು, ಕರ್ನಾಟಕದ ಗತವೈಭವವನ್ನು ನೆನೆನೆನೆದು ಬೇಕಾದರೆ ರಾಜ್ಯೋತ್ಸವ ಆಚರಿಸಬಹುದು.

ವರ್ತಮಾನವನ್ನು ನೋಡಿದರೆ ಜನರು ನಡೆಸಬೇಕಾಗಿರುವುದು ಆಚರಣೆಯನ್ನಲ್ಲ. ಅವರು ಪ್ರತಿಭಟನೆ ನಡೆಸಬೇಕು. ಆದರೇನು ಮಾಡುವುದು? ಇಷ್ಟೆಲ್ಲಾ ಆಗಲು ಅಗತ್ಯವಿರುವ ‘ಕರ್ನಾಟಕಪ್ರಜ್ಞೆ’ಯನ್ನು ಸೃಷ್ಟಿಸಬಹುದಾದ, ಕರ್ನಾಟಕದ್ದೇ ಆದ ರಾಜಕೀಯ ಪಕ್ಷವೊಂದು ಇಲ್ಲಿ ಇನ್ನೂ ಹುಟ್ಟಿಲ್ಲ!

ಪರಿಸ್ಥಿತಿ ಹೀಗಿರುತ್ತಾ, ಈ ವರ್ಷ ರಾಜ್ಯೋತ್ಸವಕ್ಕೆ ನಾಡಗೀತೆಯನ್ನಷ್ಟೇ ಹಾಡಿದರೆ ಸಾಲದು. ಈ ಬಾರಿ ಸಂವಿಧಾನದ ಅಂದೊಂದು ವಾಕ್ಯವನ್ನು ಗಟ್ಟಿಸ್ವರದಲ್ಲಿ ಪಠಿಸಬೇಕು. ಎಷ್ಟು ಗಟ್ಟಿಯಾಗಿ ಎಂದರೆ ದೆಹಲಿಯ ಕಿವಿಗಳಿಗೆ ಕೇಳುವಷ್ಟು ಗಟ್ಟಿ; ‘ಸತ್ತಂತಿಹರನು ಬಡಿದೆಚ್ಚರಿಸಿ’ ನಾಡಪ್ರಜ್ಞೆಯೊಂದನ್ನು ಸೃಷ್ಟಿಸುವಷ್ಟು ಗಟ್ಟಿ. ಅದುವೇ ಸಂವಿಧಾನದ ಆ ಮೊದಲ ವಾಕ್ಯ: India, that is Bharat, shall be a Union of States. ‘ಇಂಡಿಯಾ ಅಂದರೆ ಭಾರತವು ರಾಜ್ಯಗಳ ಒಂದು ಒಕ್ಕೂಟವಾಗಿರಲಿದೆ’. ಅರ್ಥಾತ್, ಭಾರತ ಒಂದಲ್ಲ. ಭಾರತ ಮೂವತ್ತೇಳು (28 ರಾಜ್ಯಗಳು+ 9 ಕೇಂದ್ರಾಡಳಿತ ಪ್ರದೇಶಗಳು). ಭಾರತ ಮೂವತ್ತೇಳಾಗಿರುವುದಕ್ಕೆ ಭಾರತ ಒಂದು. ಇಲ್ಲಿ ರಾಜ್ಯಗಳಿರುವ ಕಾರಣಕ್ಕೆ ದೇಶ ಇದೆ. ದೇಶ ಇರುವ ಕಾರಣಕ್ಕೆ ಇಲ್ಲಿ ರಾಜ್ಯಗಳಿರುವುದಲ್ಲ. ಇದು ಸಾಂವಿಧಾನಿಕ ಸತ್ಯ. ಇದನ್ನು ದೆಹಲಿ ದೊರೆಗಳು ಅರ್ಥ ಮಾಡಿಕೊಳ್ಳಬೇಕು. ಅರ್ಥ ಮಾಡಿಕೊಳ್ಳದೇ ಹೋದಾಗ ಅದನ್ನು ಅವರಿಗೆ ಅರ್ಥ ಮಾಡಿಸಿಕೊಡುವಷ್ಟು ಕರ್ನಾಟಕಪ್ರಜ್ಞೆ ರಾಜ್ಯದ ಜನರಿಗೆ ಇರಬೇಕು. ಎರಡೂ ಇಲ್ಲದ ಸ್ಥಿತಿಯಲ್ಲಿ ಮತ್ತೊಂದು ರಾಜ್ಯೋತ್ಸವ!

ರಾಜ್ಯೋತ್ಸವವು ಕನ್ನಡ ಭಾಷಿಕ ಪ್ರದೇಶಗಳೆಲ್ಲಾ ಒಂದು ಆಡಳಿತ ವ್ಯವಸ್ಥೆಯಡಿ ಬಂದದ್ದರ ಭಾವನಾತ್ಮಕ ದ್ಯೋತಕ ಮಾತ್ರವಲ್ಲ. ಅದು, ಈ ದೇಶದಲ್ಲಿ ಇರುವುದು ದೇಶವ್ಯಾಪಿಯಾದ ಒಂದು ರಾಷ್ಟ್ರೀಯತೆ ಮಾತ್ರವಲ್ಲ, ಇಲ್ಲಿ ಬಹುವಿಧದ ರಾಷ್ಟ್ರೀಯತೆಗಳು ಇವೆ ಎನ್ನುವ ವಾಸ್ತವವನ್ನು ಕೊನೆಗೂ ದೇಶ ಒಪ್ಪಿಕೊಂಡ ದ್ಯೋತಕವೂ ಆಗಿದೆ. ಕರ್ನಾಟಕದ ಪ್ರಾದೇಶಿಕ ರಾಷ್ಟ್ರೀಯತೆಯು ಭಾರತೀಯ ರಾಷ್ಟ್ರೀಯತೆ ಯಷ್ಟೇ ಮಹತ್ವದ್ದು ಮತ್ತು ಅವೆರಡೂ ಪರಸ್ಪರ ಒಂದನ್ನೊಂದು ಪೋಷಿಸುತ್ತವೆಯೇ ವಿನಾ ವಿರೋಧಿಸು ವುದಿಲ್ಲ ಎನ್ನುವ ಸಾಂವಿಧಾನಿಕ ಸತ್ಯ ಸಾಕ್ಷಾತ್ಕಾರವಾದ ದಿನ ಅದು. ಪ್ರಾದೇಶಿಕ ರಾಷ್ಟ್ರೀಯತೆಯ ಆಧಾರದಲ್ಲಿ ರೂಪುಗೊಂಡ ರಾಜ್ಯಗಳನ್ನು ಬಲಗೊಳಿಸುವ ಮೂಲಕ ಮಾತ್ರ ದೇಶವನ್ನು ಬಲಗೊಳಿಸಲು ಸಾಧ್ಯವಿದೆ ಎನ್ನುವ ತತ್ವವೇ ಇದರ ಹಿನ್ನೆಲೆಯಲ್ಲಿ ಇರುವುದು. ಈಗ ನಡೆಯುತ್ತಿರುವುದು ಇದಕ್ಕೆ ತದ್ವಿರುದ್ಧದ ವಿದ್ಯಮಾನ ಗಳು. ದೇಶವನ್ನು ಬಲಗೊಳಿಸುವುದು ಎಂದರೆ ಕೇಂದ್ರ ವನ್ನು ಬಲಗೊಳಿಸುವುದು ಮತ್ತು ರಾಜ್ಯಗಳನ್ನು ಅಶಕ್ತಗೊಳಿಸುವುದು ಎನ್ನುವ ರೀತಿಯಲ್ಲಿ ಈಗ ಬೆಳವಣಿಗೆಗಳಾಗುತ್ತಿವೆ. ಹಾಗಾಗಿ ರಾಜ್ಯೋತ್ಸವ ಎಂದರೆ ಏನು ಉತ್ಸವ, ಯಾವ ಉತ್ಸಾಹ?

ಸ್ವಾತಂತ್ರ್ಯ ಚಳವಳಿಯುದ್ದಕ್ಕೂ ಆಡಳಿತ ವ್ಯವಸ್ಥೆಯಲ್ಲಿ ರಾಜ್ಯಗಳ ಪ್ರಾಬಲ್ಯವನ್ನೇ ಪ್ರತಿಪಾದಿಸಲಾಗಿತ್ತು. ಆದರೆ ದೇಶವಿಭಜನೆಯ ಹಿನ್ನೆಲೆಯಲ್ಲಿ ದೇಶವನ್ನು ಒಂದಾಗಿ ಉಳಿಸಿಕೊಳ್ಳುವ ತವಕ ಎಲ್ಲಾ ಆದ್ಯತೆಗಳನ್ನೂ ಮೀರಿತು. ಕೇಂದ್ರ ಹೆಚ್ಚು ಬಲಯುತವಾಗಿರಬೇಕು, ರಾಜ್ಯಗಳನ್ನು ಹಿಡಿದಿಟ್ಟುಕೊಳ್ಳುವಷ್ಟು ಪ್ರಾಬಲ್ಯ ಹೊಂದಿರಬೇಕು ಎನ್ನುವ ತತ್ವಕ್ಕೆ ಸಂವಿಧಾನ ನಿರ್ಮಾತೃಗಳು ಒತ್ತು ಕೊಟ್ಟರು. ಹೆಚ್ಚು ತೆರಿಗೆ ಮೂಲಗಳನ್ನು ಕೇಂದ್ರಕ್ಕೆ ನೀಡಿದರು. ಉದ್ದೇಶ ದೇಶವನ್ನು ಒಂದಾಗಿಟ್ಟುಕೊಳ್ಳುವುದಾಗಿತ್ತೇ ವಿನಾಕೇಂದ್ರದ ಮೇಲುಸ್ತುವಾರಿ ಸ್ಥಾಪಿಸುವುದಾಗಿರಲಿಲ್ಲ. ಹಾಗಾಗಿ, ಕೇಂದ್ರ ತನ್ನ ವರ ಮಾನವನ್ನು ರಾಜ್ಯಗಳ ಜತೆ ಹಂಚಿಕೊಳ್ಳುವ ವ್ಯವಸ್ಥೆ ಯೊಂದನ್ನು ಕೂಡಾ ಸಂವಿಧಾನವೇ ರೂಪಿಸಿತು. ನಂತರದ ವರ್ಷಗಳಲ್ಲಿ ರಾಜ್ಯಗಳು ಒಕ್ಕೂಟದಿಂದ ಹೊರಹೋಗುವ ಸಾಧ್ಯತೆ ಇಲ್ಲವಾದ ಸ್ಥಿತಿಯಲ್ಲಿ ಮತ್ತೆ ರಾಜ್ಯಗಳನ್ನು ಆರ್ಥಿಕವಾಗಿ ಸಬಲಗೊಳಿಸುವ ಕೆಲಸ ಆಗಬೇಕಿತ್ತು. ಆದರೆ ಆದದ್ದೇ ಬೇರೆ.

ಜಿಎಸ್‌ಟಿ ಎನ್ನುವ ಹೊಸ ತೆರಿಗೆ ವ್ಯವಸ್ಥೆ ತಂದು ರಾಜ್ಯಗಳ ಅಲ್ಪ ವರಮಾನ ಮೂಲಗಳನ್ನೂ ಕೇಂದ್ರ ಕಿತ್ತುಕೊಂಡಿತು. ನಷ್ಟವನ್ನು ತುಂಬಿಕೊಡುವುದಾಗಿ ಹೇಳಿ ವಂಚಿಸಿತು. ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ನೆರವಿಗಾಗಿ ಕಾಯುತ್ತಿದ್ದ ಕರ್ನಾಟಕದಂತಹ ರಾಜ್ಯಗಳು, ಸಾಂವಿಧಾನಿಕವಾಗಿ ಬರಬೇಕಾದ ತೆರಿಗೆಯ ಪಾಲೇ ಬಾರದೆ ಬೀದಿಗೆ ಬಿದ್ದಿವೆ. ರಾಜ್ಯಗಳೇ ಹೀಗೆ ಬೇಸ್ತು ಬಿದ್ದ ಕತೆ ಭಾರತಕ್ಕೆ ಹೊಸತು. ‘ನೀವು ಸಾಲ ಮಾಡಿ’ ಅಂತ ಕೇಂದ್ರವು ರಾಜ್ಯಗಳಿಗೆ ಸೂಚಿಸಿತ್ತು. ‘ಸಾಲ ಎತ್ತಿದರೆ ತೀರಿಸುವುದಕ್ಕೆ ನಮ್ಮ ಬಳಿ ಏನಿದೆ? ನೀವೇ ಸಾಲ ಎತ್ತಿ ನಮಗೆ ನೀಡಿ’ ಅಂತ ರಾಜ್ಯಗಳು ಗೋಗರೆಯುವ ಸ್ಥಿತಿ ಉಂಟಾಗಿತ್ತು. ಸಂವಿಧಾನವು ಜತನದಿಂದ ನಿರೂ ಪಿಸಿದ ವಿತ್ತೀಯ ಒಕ್ಕೂಟ (fiscal federalism) ಮುರಿದುಬಿದ್ದಿದೆ. ತೆರಿಗೆ ಸುಧಾರಣೆ ಬೇಡ ಅಂತ ಅಲ್ಲ. ಈ ನಂಬಿಕೆದ್ರೋಹ ಯಾಕೆ? ಒಕ್ಕೂಟ ವ್ಯವಸ್ಥೆಯನ್ನು ಹಾಳುಗೆಡವದೆ ಜಿಎಸ್‌ಟಿ ಅನುಷ್ಠಾನಕ್ಕೆ ತರಲಾಗುತ್ತಿರಲಿಲ್ಲವೇ? ಇದು, ಕರ್ನಾಟಕದಿಂದ ಆಯ್ಕೆಯಾಗಿರುವ ಆಳುವ ಪಕ್ಷದ ಸಂಸದರನ್ನು ರಾಜ್ಯೋತ್ಸವದಂದು ಸಾಲಾಗಿ ನಿಲ್ಲಿಸಿ ಕೇಳಬೇಕಾದ ಪ್ರಶ್ನೆ.

ಸಾಲದು ಎನ್ನುವುದಕ್ಕೆ ಹಿಂದಿಯ ಪಾರಮ್ಯವನ್ನು ದೇಶದಾದ್ಯಂತ ಮೆರೆಸಲು ವಿವಿಧ ರೀತಿಯ ಹುನ್ನಾರ ನಡೆದಿದೆ. ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿರುವ ಶಿಕ್ಷಣ, ಕೃಷಿ, ಕಾರ್ಮಿಕ ಹಿತಾಸಕ್ತಿಯಂಥ ವಿಷಯಗಳಲ್ಲಿ ರಾಜ್ಯಗಳ ಮೇಲೆ ನಿರ್ಧಾರಗಳ ಹೇರಿಕೆ ಒಂದೆಡೆ. ಇನ್ನೊಂದೆಡೆ, ರಾಜ್ಯ ಪಟ್ಟಿಯಲ್ಲಿರುವ ಕೃಷಿಭೂಮಿ ಮುಂತಾದ ವಿಷಯಗಳಲ್ಲಿ ಪರೋಕ್ಷ ಸವಾರಿ. ಸ್ವಾತಂತ್ರ್ಯ ಬಂದಾಗಿನಿಂದ ರಾಜ್ಯಗಳಿಂದ ಕರೆಸಿಕೊಂಡ ಐಎಎಸ್‌ ಮಂದಿಯ ಮೂಲಕ ಕೇಂದ್ರ ಸರ್ಕಾರ ಅಧಿಕಾರ ನಡೆಸುವ ವ್ಯವಸ್ಥೆ ಇತ್ತು. ವಿವಿಧ ರಾಜ್ಯ ವೃಂದದಿಂದ ಹೋದವರು ಕೇಂದ್ರದಲ್ಲಿ ಒಂದು ಮಟ್ಟಿಗೆ ಆಯಾ ರಾಜ್ಯಗಳ ಹಿತ ಕಾಯುವವರೂ ಆಗಿರುತ್ತಿದ್ದರು. ಈಗ ಐಎಎಸ್‌ ಅಧಿಕಾರಿಗಳನ್ನು ಬದಿಗಿರಿಸಿ ಕೇಂದ್ರದ ವಿವಿಧ ಇಲಾಖೆಗಳಿಗೆ ನೇರವಾಗಿ ತಜ್ಞರನ್ನು ನೇಮಿಸ ಲಾಗುತ್ತಿದೆ. ಇಂತಹ ಪರಿಣತರನ್ನು ಬಳಸಿಕೊಳ್ಳುವುದು ಅರ್ಥಪೂರ್ಣ ಎನ್ನಬಹುದಾದರೂ ಇದರಿಂದಾಗಿ ಕೇಂದ್ರದ ಮೇಲೆ ರಾಜ್ಯಗಳಿಗಿದ್ದ ಪ್ರಭಾವವೊಂದು ಸದ್ದಿಲ್ಲದೇ ಮರೆಯಾಗುತ್ತಿದೆ. ಎಲ್ಲವನ್ನೂ ಮೀರಿಸುವಂತೆ, ‘ಒಂದು ದೇಶ, ಒಂದು ಚುನಾವಣೆ’ ಎನ್ನುವ ಒಕ್ಕೂಟ ವ್ಯವಸ್ಥೆಗೆ ಮಾರಕಪ್ರಾಯವಾದ ಸರ್ಪಾಸ್ತ್ರವೊಂದನ್ನು ರಾಜ್ಯಗಳ ಮೇಲೆ ಹೂಡಲು ಕೇಂದ್ರವು ಕಾಯುತ್ತಿದೆ. ರಾಜ್ಯಗಳನ್ನು ಹೇಗೆಲ್ಲಾ ದಾರುಣ ಸ್ಥಿತಿಗೆ ತಳ್ಳಬಹುದೋ ಆ ಎಲ್ಲಾ ಸಾಧ್ಯತೆಗಳ ಎಗ್ಗಿಲ್ಲದ ಬಳಕೆಯನ್ನು ಸುಮ್ಮನೆ ನೋಡುತ್ತಾ ನಾವೀಗ ರಾಜ್ಯೋತ್ಸವಕ್ಕೆ ತೋರಣ ಕಟ್ಟಲು ಅಣಿಯಾಗುತ್ತಿದ್ದೇವೆ.

ತಾನಾಗಿ ಬೆಳೆಯದೆ ಇತರ ಪಕ್ಷಗಳನ್ನು ವಾಮ ಮಾರ್ಗಗಳ ಮೂಲಕ ದುರ್ಬಲಗೊಳಿಸಿ ತನ್ನ ಪ್ರಾಬಲ್ಯ ಸ್ಥಾಪಿಸುವುದು ಈಗ ಕೇಂದ್ರದಲ್ಲಿ ಆಳುತ್ತಿರುವ ಪಕ್ಷದ ರಾಜಕೀಯ ಧೋರಣೆ. ಇದನ್ನೇ ಕೇಂದ್ರ-ರಾಜ್ಯ ಸಂಬಂಧ ಗಳಿಗೂ ಅದು ಅಳವಡಿಸುತ್ತಿದೆ. ರಾಜ್ಯಗಳ ನರ ಕತ್ತರಿಸಿ ದೈತ್ಯ ಕೇಂದ್ರವನ್ನು ಕಟ್ಟುತ್ತಿದೆ. ಕೇಂದ್ರದ ಪ್ರಾಬಲ್ಯ ವನ್ನು ಸಂವಿಧಾನ ಸಂಸ್ಥಾಪಿಸಿದ್ದು ದೇಶವನ್ನು ಒಂದಾಗಿ ಉಳಿಸಲು. ಈಗ ಕೇಂದ್ರವು ರಾಜ್ಯಗಳನ್ನು ಬಗ್ಗುಬಡಿಯುತ್ತಿರುವುದು ‘ಒಂದು ದೇಶ ಒಂದು ರಾಷ್ಟ್ರೀಯತೆ’ ಎನ್ನುವ ನಂಬಿಕೆಯನ್ನು ಹೇರಲು. ಇದೊಂದು ಹುಚ್ಚು ಸಾಹಸ. ಈ ತತ್ವಕ್ಕೆ ಗಂಟುಬಿದ್ದಿದ್ದ ಸೋವಿಯತ್‌ ಒಕ್ಕೂಟದಂತಹ ಮಾದರಿಗಳು ನಿರ್ನಾಮವಾದ ದೃಷ್ಟಾಂತ ನಮ್ಮ ಕಣ್ಣ ಮುಂದಿದೆ. ರಾಜ್ಯಗಳು ರಾಜ್ಯಗಳದ್ದೇ ಆದ ರಾಜಕೀಯ ರೂಪಿಸುವುದರ ಮೂಲಕ ಮಾತ್ರ ಇಂತಹ ಹುಚ್ಚುತನಗಳಿಗೆ ಮದ್ದರೆಯಲು ಸಾಧ್ಯ. ಈಗಲಾದರೂ ಕರ್ನಾಟಕ ಪ್ರಜ್ಞೆಯೊಂದು ಜಾಗೃತಗೊಂಡು ಅದೊಂದು ರಾಜಕೀಯ ಶಕ್ತಿಯಾಗಿ ಬೆಳೆಯದೇ ಹೋದರೆ ಇನ್ಯಾವಾಗ ಅದು ಆಗುವುದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT