ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುರಣನ | ಭ್ರಷ್ಟಾಚಾರದ ಕಥನ ವಿನೂತನ ಜನಪದ

40 ಪರ್ಸೆಂಟ್ ಕಮಿಷನ್‌ನ ಸಂಖ್ಯಾಶಾಸ್ತ್ರೀಯ ಆಳ ಮತ್ತು ರಾಜಕೀಯ ಅಗಲ
Last Updated 24 ಅಕ್ಟೋಬರ್ 2022, 21:00 IST
ಅಕ್ಷರ ಗಾತ್ರ

ವಿಚಾರ ಅದೆಷ್ಟೇ ಗಂಭೀರವಾಗಿದ್ದರೂ ಅದು ಸಾರ್ವಜನಿಕ ಚರ್ಚೆಯಲ್ಲಿ ಬಹುಕಾಲ ಉಳಿದುಕೊಳ್ಳದ ಕಾಲಘಟ್ಟ ಇದು. ಅದರಲ್ಲೂ ಭ್ರಷ್ಟಾಚಾರದ ವಿಷಯ ಬಂದಾಗಲಂತೂ ಜನ ‘ಇದು ಮಾಮೂಲಿ ಬಿಡಿ’ ಎಂದು ಸಿನಿಕರಾಗುತ್ತಿದ್ದಾರೆ. ವರ್ತಮಾನದ ಸ್ಥಿತಿ ಹೀಗಿದ್ದರೂ ಕರ್ನಾಟಕ ಗುತ್ತಿಗೆದಾರರ ಸಂಘದವರುಬಹಿರಂಗಗೊಳಿಸಿದ 40 ಪರ್ಸೆಂಟ್ ಕಮಿಷನ್‌ನ ಕಥನ ಇದೀಗ ಹೆಚ್ಚು ಕಡಿಮೆ ಒಂದು ವರ್ಷವಾದರೂ ರಾಜ್ಯ ರಾಜಕೀಯ ಜನಪದದ (political lore) ಭಾಗವಾಗಿ ಉಳಿದಿದೆ!

‘40 ಪರ್ಸೆಂಟ್’ ಈಗ ರಾಜಕೀಯ ಕೆಸರೆರ ಚಾಟದ ವಸ್ತುವಷ್ಟೇ ಅಲ್ಲ, ಅದೀಗ ಜನರ ದೈನಂದಿನ ಮಾತುಕತೆಯ ವಸ್ತು. ಅದೇನೂ ಪಿಸುಮಾತಲ್ಲ. ಗಟ್ಟಿ ಧ್ವನಿ. ಜೋಕುಗಳು, ಮೀಮ್‌ಗಳು, ಕುಹಕಗಳು, ವ್ಯಂಗ್ಯಗಳು, ವ್ಯಂಗ್ಯಚಿತ್ರಗಳು, ತರಹೇವಾರಿ ಪೋಸ್ಟರ್ ಹೀಗೆ ವಿವಿಧ ಅಭಿವ್ಯಕ್ತಿ ಪರಿಕರಗಳ ಮೂಲಕ ಕತೆ ಕುಣಿದಾಡುತ್ತಿದೆ. ಇದನ್ನೆಲ್ಲಾ ಜನ ಮಾಡುತ್ತಿರುವುದು ಹಾಸ್ಯಕ್ಕಲ್ಲ, ಮನರಂಜನೆಗಲ್ಲ. ಜನ ತಮ್ಮ ಅಸಹಾಯಕತೆ ಯನ್ನೂ ಹತಾಶೆಯನ್ನೂ ಆಕ್ರೋಶವನ್ನೂ ಭ್ರಮನಿರಸನ ವನ್ನೂ ವ್ಯಕ್ತಪಡಿಸುವ ವಿಧಾನಗಳಿವು. ಒಂದು ರೀತಿಯ ಸಾಮೂಹಿಕ ಪ್ರತಿಭಟನೆ ಅನ್ನಿ. ಜನಸಾಮಾನ್ಯರ ಇಂತಹ ಪ್ರತಿಭಟನೆಯ ವಿಧಾನಗಳನ್ನು ಅಸಹಾಯಕರ ಅಸ್ತ್ರಗಳು (Weapons of the Weak) ಎಂದು ಜೇಮ್ಸ್ ಸ್ಕಾಟ್ ಎಂಬ ಮಾನವಶಾಸ್ತ್ರಜ್ಞ ಕರೆದದ್ದುಂಟು.

ಭ್ರಷ್ಟಾಚಾರ ಮಾಮೂಲು ಅಂತ ಜನ ಸ್ವೀಕರಿಸಿದ ಸ್ಥಿತಿಯಲ್ಲೂ ಈ ರೀತಿಯ ಪ್ರತಿರೋಧವೊಂದನ್ನುಕರ್ನಾಟಕದಲ್ಲಷ್ಟೇ ಅಲ್ಲ, ಇಡೀ ದೇಶದಲ್ಲಿ ‘40 ಪರ್ಸೆಂಟ್’ ಕಥನ ಸೃಷ್ಟಿಸಿದೆ. ಚೋರ ವಿದ್ಯೆಗೂ ನಲವತ್ತು ಎಂಬ ಸಂಖ್ಯೆಗೂ ಒಂದು ನಂಟು ‘ಅರೇಬಿಯನ್ ನೈಟ್ಸ್’ ಕತೆಯ ಆಲಿಬಾಬನ ಕಾಲದಿಂದಲೂ ಇರುವುದು ಕಾಕತಾಳೀಯ ಮಾತ್ರ.

ಹಾಗೆ ನೋಡಿದರೆ ಇಲ್ಲಿ ಪಠಿಸಬೇಕಿರುವ ಸಂಖ್ಯೆ ನಲವತ್ತಲ್ಲ. ಮುನ್ನೂರು. ಯಾಕೆ ಅಂತ ಕೇಳಿ. ಹೋದ ಚುನಾವಣೆಯ ಸಂದರ್ಭದಲ್ಲಿ (2018) ಬಿಜೆಪಿಯ ಪ್ರಚಾರಾರ್ಥವಾಗಿ ಕರ್ನಾಟಕಕ್ಕೆ ಬಂದಿದ್ದ ಪ್ರಧಾನಮಂತ್ರಿಯವರೇ ರಾಜ್ಯದಲ್ಲಿ ಆಗ ಶೇ 10 ಕಮಿಷನ್ ಅಥವಾ ಭ್ರಷ್ಟಾಚಾರ ಇದೆ ಎಂದು ಹೇಳಿದ್ದರು. ಅದನ್ನು ತರ್ಕಕ್ಕಾಗಿ ಸತ್ಯ ಅಂತಲೇ ಸ್ವೀಕರಿಸೋಣ. ಈಗ ಕರ್ನಾಟಕ ಗುತ್ತಿಗೆದಾರರ ಸಂಘದವರು ರಾಜ್ಯದಲ್ಲಿ ಶೇ 40 ಕಮಿಷನ್ ಅಥವಾ ಭ್ರಷ್ಟಾಚಾರ ಇದೆ ಅಂತ ಹೇಳುತ್ತಿದ್ದಾರೆ. ಪ್ರಧಾನಮಂತ್ರಿಯವರು ಆಗ ಮಾಡಿದ್ದ ಕಮಿಷನ್ ಆಪಾದನೆಯಲ್ಲಿ ಎಷ್ಟು ಸತ್ಯಾಂಶವಿತ್ತೋ ಅಷ್ಟೇ ಸತ್ಯಾಂಶವು ಗುತ್ತಿಗೆದಾರರು ಈಗ ನೀಡಿದ ದೂರಿನಲ್ಲೂ ಇದೆ ಅಂತ ಒಪ್ಪಲೇಬೇಕಾಗುತ್ತದೆ. ಅಂದರೆ ಹಿಂದೆ ಇದ್ದ 10 ಈಗ 40 ಆಗಿದೆ.

ನಮ್ಮ ಮುಂದಿರುವ ಪ್ರಶ್ನೆ ಹೀಗಿದೆ: ಹಿಂದೆ 10 ಇದ್ದದ್ದು ಈಗ 40ಕ್ಕೆ ಏರಿದೆ ಎಂದಾದರೆ ಶೇಕಡಾವಾರು ಎಷ್ಟು ಹೆಚ್ಚಳವಾಯಿತು? ಇದನ್ನು ಗಣಿತ ಸೂತ್ರದ ಪ್ರಕಾರ ಲೆಕ್ಕಹಾಕಲು 40 ಅನ್ನು 10ರಿಂದ ಕಳೆದು, ಬಂದ ಉತ್ತರವನ್ನು ಮತ್ತೆ 10ರಿಂದ ಬಾಗಿಸಿ ನೂರರಿಂದ ಗುಣಿಸಬೇಕು (40-10÷10 x 100). ಉತ್ತರ 300. ಅಂದರೆ, ಹೋದ ನಾಲ್ಕೂವರೆ ವರ್ಷಗಳಲ್ಲಿ, ಮೂರೂವರೆ ವರ್ಷಗಳ ಕಾಲ ಪ್ರಧಾನಮಂತ್ರಿ ಪ್ರತಿನಿಧಿಸುವ ಪಕ್ಷವೇ ಆಡಳಿತ ನಡೆಸುತ್ತಿರುವಾಗಲೇ ದಂಧೆಯಲ್ಲಿ ಆದ ಹೆಚ್ಚಳ ಶೇ 300ರಷ್ಟು! ಈಗ ಹೇಳಿ. ಈ ಚರ್ಚೆಯ ಕೇಂದ್ರದಲ್ಲಿ ಇರಬೇಕಿರುವ ಸಂಖ್ಯೆ ನಲವತ್ತೋ ಅಥವಾ ಮುನ್ನೂರೋ ಅಂತ. ‘ಆಗಲೂ ಇತ್ತು ಈಗಲೂ ಇದೆ’ ಎನ್ನುವ ಸಮಜಾಯಿಷಿಗೆ ಅರ್ಥವೇ ಇಲ್ಲ. ಇಲ್ಲಿ ಬೆಚ್ಚಿ ಬೀಳಿಸುವ ವಿಚಾರ ನಿಚ್ಚಳವಾದ ಹೆಚ್ಚಳ.

ಆಪಾದನೆಗಳಿಗೆಲ್ಲ ಪುರಾವೆ ಎಲ್ಲಿದೆ ಅಂತ ಮುಖ್ಯಮಂತ್ರಿ ಆದಿಯಾಗಿ ಆಡಳಿತ ಪಕ್ಷದ ವಕ್ತಾರರೆಲ್ಲಾ ಕೇಳುತ್ತಿದ್ದಾರೆ. ಹೌದು, ಪುರಾವೆ ಇಲ್ಲ. 2018ರ ‘ಹತ್ತು ಪರ್ಸೆಂಟ್’ ಆಪಾದನೆಗೆ ಪ್ರಧಾನಮಂತ್ರಿಯವರೂ ಪುರಾವೆ ಒದಗಿಸಿರಲಿಲ್ಲ. ಎಲ್ಲರಿಗೂ ತಿಳಿದಿರುವಂತೆ ಇಂತಹ ಚತುರಚೋರ ವ್ಯವಹಾರಗಳಿಗೆಲ್ಲಾ ಇರುವುದು ಎರಡೇ ಎರಡು ಸಾಕ್ಷಿಗಳು. ಮೊದಲನೆಯದ್ದು ಆತ್ಮಸಾಕ್ಷಿ. ಎರಡನೆಯದ್ದು ಪಂಚಭೂತಗಳ ಸಾಕ್ಷಿ. ಆತ್ಮಸಾಕ್ಷಿ ಎನ್ನುವುದು ಸತ್ತುಹೋಗಿರುವ ರಾಜಕೀಯ ಸಂಸ್ಕೃತಿಯಲ್ಲಿ ಪಂಚಭೂತಗಳ ಸಾಕ್ಷಿ ಕೆಲಸಕ್ಕೆ ಬರುವುದಿಲ್ಲ.

ಹಾಗಂತ ಸಾಕ್ಷ್ಯ ಇಲ್ಲವೇ ಇಲ್ಲ ಅಂತ ಅಲ್ಲ. ಬೇಕಾದಷ್ಟಿವೆ. ಅವುಗಳನ್ನು ಕಾಣುವ ಕಣ್ಣು ಬೇಕಷ್ಟೆ. ಬರೀ ನೋಡಿದರೆ ಸಾಲದು. ಕಾಣಬೇಕು. ನೋಡುವ ಕಣ್ಣುಗಳು ಮುಖದ ಮೇಲಿರುತ್ತವೆ. ಕಾಣುವ ಕಣ್ಣುಹೃದಯದಲ್ಲಿರುತ್ತದೆ. ಹಾಗಾಗಿಯೇ ಆಡಳಿತ ಪಕ್ಷದವರಿಗೆ ಕಾಣಸಿಗದ ಸಾಕ್ಷ್ಯ ಜನರಿಗೆ ದಿನನಿತ್ಯ ಕಾಣಸಿಗುತ್ತದೆ. ಗುಂಡಿಗಳ ಮಧ್ಯೆ ರಸ್ತೆಗಳನ್ನು ಹುಡುಕುತ್ತಾ ಅಪಘಾತಕ್ಕೀಡಾಗಿ ಅಮಾಯಕ ವಾಹನ ಸವಾರರು ಸಾಯುತ್ತಾರಲ್ಲ ಅವರ ಕುಟುಂಬವರ್ಗದವರ ಕಣ್ಣೀರಿನಲ್ಲಿ ಜನ ಸಾಕ್ಷ್ಯ ಕಾಣುತ್ತಾರೆ. ಸೋರುವ ಮಾಡಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳ ಅಸಹಾಯಕತೆಯಲ್ಲಿ ಜನ ಸಾಕ್ಷ್ಯ ಕಾಣುತ್ತಾರೆ. ಇನ್ನೂ ಕಟ್ಟುತ್ತಿರುವಾಗಲೇ ಕುಸಿದು ಬೀಳುತ್ತಿರುವ ಸೇತುವೆ- ಅಣೆಕಟ್ಟುಗಳಲ್ಲಿ ಜನ ಸಾಕ್ಷ್ಯ ಕಾಣುತ್ತಾರೆ. ಇನ್ನೂ ದಶಕ ಪೂರೈಸದ ಬೆಂಗಳೂರಿನ ಬೃಹತ್ ಮೇಲ್ಸೇತುವೆಗಳಲ್ಲಿ ಎದ್ದಿರುವ ಬಿರುಕುಗಳಲ್ಲಿ ಜನ ಸಾಕ್ಷ್ಯ ಕಾಣುತ್ತಾರೆ.

ಹೀಗೆ ‘40 ಪರ್ಸೆಂಟ್’ ಭ್ರಷ್ಟಾಚಾರದ ವಿಚಾರ ಒಂದು ಜನಪದ ನುಡಿಗಟ್ಟಾಗಿ ಜನರ ಬಾಯಲ್ಲಿ ಪುನರಾವರ್ತನೆಗೊಳ್ಳುತ್ತಿರುವ ವಿದ್ಯಮಾನದೆದುರು ಸರ್ಕಾರದ ಸಮಜಾಯಿಷಿಗಳು ಸೋಲುತ್ತಿವೆ. ಕಾಂಗ್ರೆಸ್ಸಿ ನವರು ಈ ವಿಷಯವನ್ನು ಕೈಗೆತ್ತಿಕೊಂಡು ‘ಪೇಸಿಎಂ’ ಎನ್ನುವ ಹೆಸರಿನಲ್ಲಿ ರೂಪಿಸಿದ ಆಂದೋಲನವನ್ನು ಬಿಜೆಪಿಯವರು ‘ಭೂತದ ಬಾಯಲ್ಲಿ ಭಗವದ್ಗೀತೆ’ ಅಂತ ಹಂಗಿಸಿ ಅದರ ಮೊನಚನ್ನು ಕಡಿಮೆಗೊಳಿಸಲುಪ್ರಯತ್ನಿಸಿದರು. ಬಿಜೆಪಿಯ ಪ್ರತಿಕ್ರಿಯೆಯಲ್ಲಿ ಎರಡು ರೀತಿಯ ವಿಶೇಷಗಳನ್ನು ಗಮನಿಸಬೇಕಿದೆ. ಮೊದಲನೆಯದ್ದು ಇಡೀ ‘ಪೇಸಿಎಂ’ ಕ್ಯಾಂಪೇನ್ ಇದೆಯಲ್ಲಾ ಅದರ ಸ್ವರೂಪ ಮತ್ತು ಮಟ್ಟ ಹೇಗಿತ್ತು ಎಂದರೆ, ಅದು ಬಿಜೆಪಿಯು ಯಾವತ್ತೂ ಎದುರಾಳಿಗಳ ಮೇಲೆ ಎಸಗುವ ಆಕ್ರಮಣದ ನಕಲಾಗಿತ್ತು. ತನ್ನ ತಂತ್ರ ತನಗೇ ತಿರುಮಂತ್ರವಾದಾಗ ಹೇಗಿರುತ್ತದೆ ಅಂತ ಬಿಜೆಪಿಯ ಅನುಭವಕ್ಕೆ ಬಂದ ಕ್ಷಣವದು.

ಅದೇನೇ ಇರಲಿ, ಕಾಂಗ್ರೆಸ್ ‘ಪೇಸಿಎಂ’ ಎಂದಾಗ ಬಿಜೆಪಿಯವರು ಅದನ್ನು ಭೂತದ ಬಾಯಲ್ಲಿ ಆ ಗೀತೆ ಈ ಗೀತೆ ಅಂತ ತೇಲಿಸಿಬಿಡಬಹುದು. ಜನ ಬೀದಿಯಲ್ಲಿ ನಿಂತು ದಿನನಿತ್ಯವೂ ‘40 ಪರ್ಸೆಂಟ್’ ಮಂತ್ರ ಪಠಿಸುತ್ತಿರು ವುದನ್ನು ಏನಂತ ಕರೆಯುವುದು? ಅದಕ್ಕೇನಾದರೂ ಸೂಕ್ತ ಹೋಲಿಕೆ ನೀಡಬೇಕಿದ್ದರೆ ತುಳುನಾಡಿನ ಮೂಲನಿವಾಸಿಗಳ ಆರಾಧನಾ ಸಂಪ್ರದಾಯದ ಕೇಂದ್ರ ದಲ್ಲಿರುವ ಭೂತಗಳು (ದೈವಗಳು) ಹಾಡುವ ಪಾಡ್ದನ ಹಾಡುಗಳನ್ನು ಉದಾಹರಿಸಬಹುದೋ ಏನೋ? ಯಾಕೆಂದರೆ, ಈ ಪಾಡ್ದನಗಳಲ್ಲಿ ಭೂತಗಳು ತಾವು ಮನುಷ್ಯರಾಗಿದ್ದಾಗ ಅನುಭವಿಸಿದ ಪಡಿಪಾಟಲುಗಳನ್ನು, ಉಂಡ ನೋವುಗಳನ್ನು, ಕಂಡ ಅನ್ಯಾಯ
ಗಳನ್ನು ಬಣ್ಣಿಸುತ್ತಿರುತ್ತವೆ. ಭೂತಗಳ ಈ ಪಾಡ್ದನಗಳು, ಅವುಗಳ ಮುಖದ ಕಡುಕೆಂಪು- ಹಳದಿಯ ಬಣ್ಣಗಳು, ಕಿವಿಗಡಚಿಕ್ಕುವ ಆರ್ಭಟ, ವೀರಾವೇಶದ ನಾಟ್ಯ ಎಲ್ಲವೂ ಒಟ್ಟಂದದಲ್ಲಿ ಜೇಮ್ಸ್ ಸ್ಕಾಟ್ ಹೇಳಿದ ‘ಅಸಹಾಯಕರ ಅಸ್ತ್ರ’ದ ಪರಿಕಲ್ಪನೆಯನ್ನೇ ಇನ್ನೊಂದು ರೀತಿಯಲ್ಲಿ ನೆನಪಿಸುತ್ತವೆ.

ಭ್ರಷ್ಟಾಚಾರದ ದೈತ್ಯ ಸ್ವರೂಪದ ಎದುರು ಅಸಹಾಯಕರಾದ ಜನ ಸಿಟ್ಟು, ಸೆಡವು, ಜೋಕು, ಪೋಸ್ಟರ್‌ಗಳ ಮೂಲಕ ತಮ್ಮ ಪ್ರತಿಭಟನೆ ದಾಖಲಿಸುತ್ತಿ ರುವಂತೆ ಅದು ಕೂಡಾ. ಆಧುನಿಕ ಮಾಧ್ಯಮಗಳು, ಅವುಗಳನ್ನು ನಿಯಂತ್ರಿಸುವ ಸರ್ಕಾರಗಳು, ಆಳುವ ಪಕ್ಷಗಳ ಅಡಿಯಾಳುಗಳು ರಂಗಿನಾಡಂಬರದಲ್ಲಿ-ಶಬ್ದಗಳಾಡಂಬರದಲ್ಲಿ ಸತ್ಯವನ್ನು ಮುಚ್ಚಿಡಲು
ಪ್ರಯತ್ನಿಸಬಹುದು. ಆದರೆ, ಸತ್ಯವು ಜನಸಾಮಾನ್ಯರಆಡುಮಾತುಗಳಲ್ಲಿ ಪದೇ ಪದೇ ಪುನರಾವರ್ತನೆಆಗುತ್ತಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT