ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುರಣನ: ಹೈಕಮಾಂಡ್ ಆಡಳಿತವೆಂದರೆ...

ಆ ಬೊಮ್ಮಾಯಿಯಿಂದ ಈ ಬೊಮ್ಮಾಯಿಯವರೆಗೆ ಕತೆ ಒಂದೇ, ಪಾತ್ರ ಬೇರೆ ಬೇರೆ
Last Updated 30 ಜುಲೈ 2021, 19:45 IST
ಅಕ್ಷರ ಗಾತ್ರ

ಹೊಸ ಮುಖ್ಯಮಂತ್ರಿಗೆ ಎಲ್ಲರೂ ಉಘೇಉಘೇ ಎನ್ನುತ್ತಿರುವ ಹೊತ್ತಿಗೆ ಕರ್ನಾಟಕದ ಜನ ತಿಳಿದುಕೊಳ್ಳಬೇಕಾದ ವಿಷಯ ಒಂದಿದೆ. ಅದೇನೆಂದರೆ, 32 ವರ್ಷಗಳ ಹಿಂದೆ ಆಗ ಮುಖ್ಯಮಂತ್ರಿಯಾಗಿದ್ದಜನತಾ ಪಕ್ಷದ ಎಸ್‌.ಆರ್‌.ಬೊಮ್ಮಾಯಿ ಅವರನ್ನು ಕಾಂಗ್ರೆಸ್‌ನ ದೆಹಲಿ ದರ್ಬಾರ್ ಪದಚ್ಯುತಗೊಳಿಸಿದ್ದು ಮತ್ತು ಬಸವರಾಜ ಬೊಮ್ಮಾಯಿ ‘ಎಂಬ ಹೆಸರಿನವರಾದ’ ಅವರ ಮಗನನ್ನು ಈಗಿನ ಬಿಜೆಪಿಯ ದೆಹಲಿ ದರ್ಬಾರ್ ಮುಖ್ಯಮಂತ್ರಿಯನ್ನಾಗಿ ಪ್ರತಿಷ್ಠಾಪಿಸಿದ್ದು ಒಂದೇ ಕತೆಯ ಎರಡು ಅಧ್ಯಾಯಗಳು.

ಅದೊಂದು ಸಾಂವಿಧಾನಿಕ ದುರಂತ ಕತೆ. ರಾಷ್ಟ್ರೀಯ ಪಕ್ಷಗಳ ಹೈಕಮಾಂಡ್‌ನವರು ಈ ದೇಶದ ಸ್ವಾತಂತ್ರ್ಯ, ಸಾರ್ವಭೌಮ ರಾಜ್ಯಗಳನ್ನು ತಮ್ಮ ಸಾಮಂತ ಪ್ರದೇಶಗಳು ಎಂಬಂತೆ ಪರಿಗಣಿಸಿ ಹಣಿಯುತ್ತಿರುವ ಕತೆ. ಆ ಬೊಮ್ಮಾಯಿಯ ಕಾಲದಿಂದ ಈ ಬೊಮ್ಮಾಯಿಯ ಕಾಲಕ್ಕೆ ಬದಲಾಗಿದ್ದು ಕತೆಯ ಸೂತ್ರ ಮತ್ತು ಪಾತ್ರಗಳು ಮಾತ್ರ. ಆಗ ನಡೆದದ್ದು ಕಾಂಗ್ರೆಸ್ ಶೈಲಿಯ ಒರಟೊರಟು ಪ್ರಹಾರ. ಇಂದು ನಡೆಯುತ್ತಿರುವುದು ಬಿಜೆಪಿ ಶೈಲಿಯ ಹೊನ್ನಶೂಲಕ್ಕೇರಿಸುವ ಚಮತ್ಕಾರ.

ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಚಾರಿತ್ರಿಕ ತೀರ್ಪು (1994), ಸಂವಿಧಾನದ 356ನೇ ವಿಧಿ ದುರ್ಬಳಕೆ ಮಾಡಿ ರಾಜ್ಯಗಳ ಮೇಲೆ ರಾಷ್ಟ್ರಪತಿ ಆಡಳಿತ ಹೇರುವುದರ ವಿರುದ್ಧ ನಿರ್ಬಂಧಗಳನ್ನು ವಿಧಿಸಿತು. ಆದರೆ ರಾಜ್ಯಗಳನ್ನು ಅಂಕೆಯಲ್ಲಿ ಇಟ್ಟುಕೊಳ್ಳಬೇಕೆಂಬ ದೆಹಲಿ ದರ್ಬಾರಿನವರ ಮಹತ್ವಾಕಾಂಕ್ಷೆ ಮುಂದುವರಿಯಿತು. ಹಾಗಾಗಿ ಈಗ ರಾಜ್ಯ ಸರ್ಕಾರಗಳನ್ನು ಮಣಿಸಿ- ಕುಣಿಸಲು, ರಾಷ್ಟ್ರ ಮಟ್ಟದಲ್ಲಿ ಆಡಳಿತ ನಡೆಸುವ ಪಕ್ಷಗಳು ಹೊಸ ತಂತ್ರಗಳನ್ನು ಬಳಸುತ್ತವೆ. ತೆರಿಗೆಯ ಪಾಲು ನೀಡದೇ ಇರುವುದು, ವಿಪತ್ತುಗಳಿಗೆ ಪರಿಹಾರ ನಿರಾಕರಿಸುವುದು, ರಾಜ್ಯ ನಾಯಕರ ವಿರುದ್ಧ ತನಿಖಾ ಸಂಸ್ಥೆಗಳನ್ನು ಛೂ ಬಿಡುವುದು ಇತ್ಯಾದಿಗಳೆಲ್ಲಾ ಈಗ ಯಥೇಚ್ಛವಾಗಿ ಬಳಕೆಯಾಗುತ್ತವೆ. ಇದು ಸಾಮಾನ್ಯವಾಗಿ ನಡೆಯುವುದು ವಿರೋಧ ಪಕ್ಷಗಳ ನೇತೃತ್ವದ ಸರ್ಕಾರ ಇರುವ ರಾಜ್ಯಗಳಲ್ಲಿ. ಒಂದೇ ಪಕ್ಷದ ಆಡಳಿತ ಇದ್ದಾಗಲೂ ಇವುಗಳಲ್ಲಿ ಕೆಲವು ನಡೆದವು ಎನ್ನುವುದು ಬೇರೆಯೇ ಕತೆ ಹೇಳುತ್ತದೆ.

ರಾಷ್ಟ್ರ ಮಟ್ಟದಲ್ಲಿ ಮತ್ತು ರಾಜ್ಯದಲ್ಲಿ ಒಂದೇ (ರಾಷ್ಟ್ರೀಯ) ಪಕ್ಷದ ನೇತೃತ್ವದ ಸರ್ಕಾರವಿದ್ದಾಗ ಹೈಕಮಾಂಡ್‌ನ ಆಣತಿಗೆ ತಕ್ಕಂತೆ ನಡೆದುಕೊಳ್ಳುವ ಮುಖ್ಯಮಂತ್ರಿಯೊಬ್ಬರನ್ನು ಪ್ರತಿಷ್ಠಾಪಿಸಿ ನಿಯಂತ್ರಣ ಸಾಧಿಸುವ ಹಳೆಯ ತಂತ್ರ ಈಗ ಇನ್ನೂ ವಿಕಸನಗೊಂಡು, ರಾಜ್ಯ ಸರ್ಕಾರಗಳನ್ನು ಒಕ್ಕೂಟ ಸರ್ಕಾರದ ಒಂದು ಇಲಾಖೆಯಂತೆ ನಡೆಸಿಕೊಳ್ಳುವ ಹೊಸ ವಿಧಾನವೊಂದು ಚಾಲ್ತಿಗೆ ಬರುತ್ತಿದೆ. ಇದಕ್ಕೆ ತಡೆಯೊಡ್ಡುವ ಸಾಮರ್ಥ್ಯವುಳ್ಳ ಮುಖ್ಯಮಂತ್ರಿಗಳನ್ನು ಯಾವುದೋ ನೆಪದಡಿ ಕಿತ್ತೊಗೆದು ಅಲ್ಲಿ ಹೈಕಮಾಂಡ್‌ನೆದುರು ‘ತಗ್ಗಿದ ತಲೆ, ಬಾಗಿದ ದೇಹ, ಮುಗಿದ ಕೈ’ ಎಂಬ ನೀತಿಯನ್ನು ಅಂಗೀಕರಿಸಿದ ಸಾಮಂತರನ್ನು ಪ್ರತಿಷ್ಠಾಪಿಸಲಾಗುತ್ತದೆ.

ಸೋಮಪ್ಪ ರಾಯಪ್ಪ ಬೊಮ್ಮಾಯಿ ಅವರು 356ನೇ ವಿಧಿಯ ದುರ್ಬಳಕೆಯ ಹಳೆಯ ವ್ಯವಸ್ಥೆಯ ಸಂತ್ರಸ್ತ. ಬಸವರಾಜ ಬೊಮ್ಮಾಯಿ, ರಾಜ್ಯಗಳನ್ನು ಹಣಿಯುವ ಹೊಸ ನೀತಿಯ ಫಲಾನುಭವಿ. ಎರಡೂ ಪ್ರಕರಣಗಳಲ್ಲಿ ರಾಜ್ಯದ ಸ್ವಾಭಿಮಾನದ ಪ್ರಶ್ನೆ ಇದೆ. ಇದನ್ನು ಅರ್ಥ ಮಾಡಿಕೊಳ್ಳಲು ರಾಜ್ಯದಲ್ಲಾದ ಬೆಳವಣಿಗೆಗಳನ್ನು ಕೂಲಂಕಷವಾಗಿ ನೋಡಬೇಕು.

ಸಾಮಾನ್ಯವಾಗಿ ಮುಖ್ಯಮಂತ್ರಿಗಳ ವಿರುದ್ಧ ಪಕ್ಷದ ಶಾಸಕರ ಭಿನ್ನಮತ ಭುಗಿಲೆದ್ದಾಗ, ಭ್ರಷ್ಟಾಚಾರಕ್ಕೆ ಸಂಬಂಧಿಸಿ ಪ್ರತಿಕೂಲ ತೀರ್ಪು ಬಂದಾಗ, ಹಾಲಿ ಮುಖ್ಯಮಂತ್ರಿಗಳು ಹೊಸ ಹುದ್ದೆ ವಹಿಸಿಕೊಂಡಾಗ ಹೈಕಮಾಂಡ್ ಮಧ್ಯಪ್ರವೇಶಿಸಿ ನಾಯಕತ್ವ ಬದಲಿಸುವುದಿದೆ. ಹೀಗೆ ಮುಖ್ಯಮಂತ್ರಿಯ ಬದಲಾವಣೆ ನಡೆದಾಗ ಅದರಲ್ಲಿ ಹೈಕಮಾಂಡ್ ಪಾತ್ರವಿದ್ದರೂ, ಶಾಸಕರ ಮೂಲಕ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಕೇವಲ ನಾಟಕವಾಗಿರುತ್ತಿದ್ದರೂ, ಅಲ್ಲಿ ರಾಜ್ಯದ ಸ್ವಾಯತ್ತತೆಯ ಮೇಲೆ ದೆಹಲಿಯಿಂದ ಪ್ರಹಾರ ನಡೆಯಿತು ಎನ್ನುವ ಆತಂಕಕ್ಕೆ ಅವಕಾಶ ಇರಲಿಲ್ಲ.

ಯಾವುದೇ ಕಾರಣ ಇಲ್ಲದ ಸ್ಥಿತಿಯಲ್ಲಿ ಮುಖ್ಯಮಂತ್ರಿಯೊಬ್ಬರನ್ನು ಹೈಕಮಾಂಡ್‌ ಪದಚ್ಯುತಗೊಳಿಸಿದ ಪ್ರಸಂಗ ಕರ್ನಾಟಕದ ಮಟ್ಟಿಗೆ ಎರಡು. ಮೊದಲನೆಯದ್ದು, 1990ರಲ್ಲಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು ಅಂದಿನ ಕಾಂಗ್ರೆಸ್ ಹೈಕಮಾಂಡ್ ಪದಚ್ಯುತಗೊಳಿಸಿದ ಘಟನೆ. ಎರಡನೆಯದ್ದು, ಏಕಚಕ್ರಾಧಿಪತ್ಯಕ್ಕೆ ಆಧುನಿಕ ಭಾಷ್ಯ ಬರೆಯಲು ಹೊರಟಿರುವ ಈಗಿನ ಬಿಜೆಪಿ ಹೈಕಮಾಂಡ್ ನಿರ್ದೇಶಿಸಿರುವ ಯಡಿಯೂರಪ್ಪನವರ ಅಧಿಕಾರಾವರೋಹಣದ ಪ್ರಸ್ತುತ ಪ್ರಸಂಗ. ವೀರೇಂದ್ರ ಪಾಟೀಲರ ಪದಚ್ಯುತಿಗೆ ಅನಾರೋಗ್ಯದ ನೆಪವಾದರೂ ಇತ್ತು. ಯಡಿಯೂರಪ್ಪನವರ ವಿಚಾರದಲ್ಲಿ ಕಾರಣ ಬಿಡಿ, ಅಧಿಕೃತವಾಗಿ ನೆವ ಹೇಳುವ ಅಗತ್ಯವೂ ಬಿಜೆಪಿಗೆ ಕಂಡುಬರಲಿಲ್ಲ ಎಂದರೆ ನಿಜ ಉದ್ದೇಶವನ್ನು ಬೇರೆಲ್ಲೋ ಹುಡುಕಬೇಕಾಗುತ್ತದೆ.

ಭ್ರಷ್ಟಾಚಾರವು ಈ ಬೆಳವಣಿಗೆಗೆ ಕಾರಣ ಎಂದು ಕೆಲವು ಪತ್ರಕರ್ತರು ಹೇಳುತ್ತಿದ್ದಾರೆ. ದೇಶದ ಭ್ರಷ್ಟಾತಿಭ್ರಷ್ಟರಿಗೆಲ್ಲಾ ಮಣೆಹಾಕಿ ಅವರ ಮೇಲಿನ ಕರಾಳ ಆಪಾದನೆಗಳ ಮೇಲೆ ಗರಿಗರಿ ಶ್ವೇತವಸ್ತ್ರ ಹೊದಿಸುತ್ತಿರುವ, ಚುನಾವಣೆ ಗೆಲ್ಲಲು ದೈತ್ಯ ಪ್ರಮಾಣದ ಹಣ ವ್ಯಯಿಸುವ ಪಕ್ಷವೊಂದು ಭ್ರಷ್ಟಾಚಾರದ ಕಾರಣಕ್ಕೆ ಮುಖ್ಯಮಂತ್ರಿಯನ್ನು ಬದಲಿಸಿತು ಎಂದು ನಂಬಲಾದೀತೇ? ಮುಖ್ಯಮಂತ್ರಿ ಬದಲಾದರೂ ಈಗಲೂ ರಾಜ್ಯದಲ್ಲಿ ಇರುವುದು ‘ಆಪರೇಷನ್ ಕಮಲ’ ಎಂಬ ಪರಮಭ್ರಷ್ಟ ತಂತ್ರ ಬಳಸಿ ಸರ್ಕಾರ ರಚನೆಯಾದ ಅರ್ಧ ಚುನಾಯಿತ- ಅರ್ಧ ಖರೀದಿತ ಸರ್ಕಾರ ತಾನೇ?

ಇನ್ನು, ವಯಸ್ಸಾಯಿತು ಎನ್ನುವ ಕಾರಣಕ್ಕೆ ಯಡಿಯೂರಪ್ಪನವರನ್ನು ಅಧಿಕಾರದ ನೇಪಥ್ಯಕ್ಕೆ ಸರಿಸಲಾಯಿತು ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಆಗುವ ಹೊತ್ತಿಗೇ ಅವರಿಗೆ ಬಿಜೆಪಿ ಹಾಕಿದ್ದ ವಯಸ್ಸಿನ ಗಡುವು ಮೀರಿತ್ತು. ಒಂದು ನಿಶ್ಚಿತ ಅವಧಿಗಷ್ಟೇ ಅವರಿಗೆ ಮುಖ್ಯಮಂತ್ರಿ ಸ್ಥಾನ ನಿಗದಿಯಾಗಿದ್ದರೆ ಅದನ್ನು ಪಕ್ಷದ ನಾಯಕರು ಮೊದಲೇ ಘೋಷಿಸದೇ ಇರುತ್ತಿರಲಿಲ್ಲ.

ಎಲ್ಲ ಸಮರ್ಥನೆಗಳೂ ಹೀಗೆ ಅಪ್ರಸ್ತುತ ಅನ್ನಿಸುವಾಗ ಅಲ್ಲಿ ಕಾಣಿಸುವುದು ಒಂದೇ ಕಾರಣ. ಅದು ರಾಜ್ಯಗಳೆಲ್ಲಾ ಪಕ್ಷದ ರಾಷ್ಟ್ರೀಯ ನಾಯಕರ ಸಂಪೂರ್ಣ ಅಂಕೆಯಲ್ಲಿ ಇರಬೇಕು ಎನ್ನುವ ಲೆಕ್ಕಾಚಾರ. ಒಬ್ಬ ಪ್ರಬಲ ಪ್ರಾದೇಶಿಕ ಅಥವಾ ರಾಜ್ಯ ಮಟ್ಟದ ನಾಯಕ ಮುಖ್ಯಮಂತ್ರಿಯಾಗಿದ್ದರೆ ಇದು ಸಾಧ್ಯವಾಗುವುದಿಲ್ಲ. ರಾಜ್ಯದ ರಾಜಕೀಯವನ್ನು ಮತ್ತು ಆಡಳಿತವನ್ನು ಹೀಗೆ ಪರೋಕ್ಷವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು ಎನ್ನುವ ಲೆಕ್ಕಾಚಾರ ಮುಂದಿನ ಚುನಾವಣೆಯ ದೃಷ್ಟಿಯಿಂದ ಇರಬಹುದು. ಭಿನ್ನ ಮಾದರಿಯಲ್ಲಿ ಪಕ್ಷವನ್ನು ಚುನಾವಣೆಗೆ ಅಣಿಗೊಳಿಸಬೇಕೆನ್ನುವ ದೃಷ್ಟಿಯಿಂದ, ಎಲ್ಲದಕ್ಕೂ ಸೈ ಎನ್ನುವ ಮುಖ್ಯಮಂತ್ರಿಯೊಬ್ಬ ಬಿಜೆಪಿಯ ದೆಹಲಿ ನಾಯಕರಿಗೆ ಅಗತ್ಯವಾಗಿ ಕಂಡಿರಬಹುದು.

ಅದೇನೇ ಇದ್ದರೂ ಪರಿಣಾಮ ಒಂದೇ. ಇದು ರಾಷ್ಟ್ರಪತಿ ಆಡಳಿತದ ಇನ್ನೊಂದು ರೂಪ. ‘ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ’ ಎನ್ನುವುದರ ಬದಲಿಗೆ ‘ರಾಜ್ಯದಲ್ಲಿ ಹೈಕಮಾಂಡ್ ಆಡಳಿತ’ ಎನ್ನಬಹುದಾದ ವಿದ್ಯಮಾನ. ಸಂವಿಧಾನ ಬದಲಾಯಿಸಬೇಕಿಲ್ಲ. ‘ಬೊಮ್ಮಾಯಿ ತೀರ್ಪನ್ನು’ ಉಲ್ಲಂಘಿಸಬೇಕಿಲ್ಲ. ವಿಧಿ 356ರ ಹಂಗೇ ಬೇಕಿಲ್ಲ. ಹಂಗಿನ ಅರಮನೆಯಲ್ಲಿರುವ ಮುಖ್ಯಮಂತ್ರಿಯೊಬ್ಬನನ್ನು ಒಂದು ರಾಜ್ಯದಲ್ಲಿ ಪ್ರತಿಷ್ಠಾಪಿಸಿದರೆ ಮುಗಿಯಿತು. ಅಲ್ಲಿಗೆ ರಾಜ್ಯ ಎನ್ನುವುದು ದೆಹಲಿ ನಾಯಕರ ಜಹಗೀರು ಎನ್ನುವ ಹಂತಕ್ಕೆ ಬಂದುಬಿಡುತ್ತದೆ.

ಯಡಿಯೂರಪ್ಪ ಇದ್ದಾಗಲೇ ಇಂತಹದ್ದೆಲ್ಲಾ ಒಂದು ಹಂತಕ್ಕೆ ಆಗುತ್ತಿತ್ತು. ಸರ್ಕಾರಕ್ಕೆ ಎರಡು ವರ್ಷ ತುಂಬಿದಾಗ ನೀಡಲಾದ ಜಾಹೀರಾತುಗಳನ್ನು ಗಮನಿಸಿ. ಎಲ್ಲ ಸಾಧನೆಗಳೂ ಕೇಂದ್ರ ನಾಯಕತ್ವದ ಪಾದಕ್ಕೆ ಸಮರ್ಪಣೆ ಎನ್ನುವ ಅರ್ಥದ ಒಕ್ಕಣೆಯೊಂದಿಗೆ ಅವು ಕಾಣಿಸಿದವು. ಇನ್ನು ಮುಂದೆ ಹೈಕಮಾಂಡ್‌ನ ಹಾದಿ ರಾಜ್ಯದಲ್ಲಿ ಇನ್ನೂ ಸಲೀಸಾದಾಗ, ಈ ಶರಣಾಗತಿಯು ರಾಜ್ಯದ ಸ್ವಾಯತ್ತತೆ ಎನ್ನುವುದನ್ನು ಎಲ್ಲಿಗೆ ಒಯ್ಯಬಹುದು ಎಂದು ನಾವೀಗ ಊಹಿಸಬಹುದು.

ಯಡಿಯೂರಪ್ಪ ಬಳಗದವರೊಬ್ಬರು ಹೊಸ ಮುಖ್ಯಮಂತ್ರಿಯಾಗಿದ್ದಾರೆ ಎನ್ನುವುದು ರಾಜ್ಯದಲ್ಲಿ ಹೈಕಮಾಂಡ್ ಆಡಳಿತಕ್ಕೆ ಸ್ವಲ್ಪ ತಡೆಯೊಡ್ಡಬಹುದೆನ್ನುವ ಆಶಾವಾದ ಅರ್ಥವಿಲ್ಲದ್ದು. ರಾಜ್ಯದ ಸ್ವಾಯತ್ತತೆ ಮತ್ತು ಸ್ವಾಭಿಮಾನದ ಮೇಲೆ ಆಗುತ್ತಿರುವ ಈ ಪರೋಕ್ಷ ಪ್ರಹಾರಗಳಿಗೆ ಸಾಂವಿಧಾನಿಕ ಪರಿಹಾರ ಇಲ್ಲ. ಕರ್ನಾಟಕದ ಜನ ರಾಷ್ಟ್ರೀಯ ಪಕ್ಷಗಳಿಗೆ ಒಲವು ತೋರುವಷ್ಟು ಕಾಲ, ದೆಹಲಿ ದರ್ಬಾರಿನ ವಿರುದ್ಧ ಸೆಣಸುವಷ್ಟು ಜನಬೆಂಬಲ ಇರುವ ನಾಯಕತ್ವ ಇಲ್ಲಿ ಬೆಳೆಯದೇ ಹೋದಷ್ಟು ಕಾಲ ಎಲ್ಲವೂ ಹೀಗೇ ಮುಂದುವರಿಯಲಿವೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT