...ಇವರು ಹೊಟ್ಟೆಗೇನ್ ತಿನ್ತಾರೆ!

7

...ಇವರು ಹೊಟ್ಟೆಗೇನ್ ತಿನ್ತಾರೆ!

Published:
Updated:

ಬಡತನವನ್ನೇ ಹಾಸಿ ಹೊದ್ದು ಮಲಗುತ್ತಿರುವ ಪೌರ ಕಾರ್ಮಿಕರಿಗೆ ಆರು ತಿಂಗಳು ವೇತನವನ್ನು ನಿಲ್ಲಿಸಿದರೆ ಅವರ ಕುಟುಂಬದ ಸ್ಥಿತಿ ಏನಾದೀತು ಎಂದು ಯೋಚಿಸುವಷ್ಟು ಬುದ್ಧಿಯೂ ನಮ್ಮ ಅಧಿಕಾರಿಗಳಿಗೆ ಇಲ್ಲ ಎಂದರೆ ಅವರನ್ನು ಏನೆಂದು ಕರೆಯಬೇಕು? ಪೌರ ಕಾರ್ಮಿಕರ ವೇತನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದಾಗ ಏನೇನೋ ಸಬೂಬುಗಳು ಹೊರಬರುತ್ತಿವೆ. ಹೊಲಸನ್ನು ಬಳಿಯುವ, ಮಲ, ಮೂತ್ರ ಬಾಚುವ ಪೌರ ಕಾರ್ಮಿಕರ ಹಣವನ್ನೂ ತಿನ್ನುವ ಈ ಮಹಾಶಯರಿಗೆ ಏನಂತ ಕರೆಯಬೇಕು?

ಯಾರಾದರೂ ಕೆಟ್ಟ ಕೆಲಸ ಮಾಡಿದರೆ ಅಥವಾ ಯಾರಿಗಾದರೂ ಅನ್ಯಾಯ ಮಾಡಿದರೆ ನಮ್ಮಲ್ಲಿ ‘ಹೊಟ್ಟೆಗೇನ್ ತಿನ್ತೀಯಾ? ಎಂದು ಬೈತಾರೆ. ಈಗ ನಾವೂ ಕೂಡ ರಾಜ್ಯ ಸರ್ಕಾರ, ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಅಧಿಕಾರಿಗಳು ಹಾಗೂ ಸದಸ್ಯರನ್ನು ಹೀಗೆಯೇ ಕೇಳಬೇಕಾಗಿದೆ. ಅಷ್ಟೇ ಅಲ್ಲ ನಾವೂ ಕೂಡ ಈ ಪ್ರಶ್ನೆ ಕೇಳಿಕೊಳ್ಳಬೇಕಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿ ಎಂದು ಗುರುತಿಸಲಾಗುವ ಹಾಗೂ ನಗರದ ನಮ್ಮ ಬದುಕಿನಲ್ಲಿ ಅತ್ಯಂತ ಮಹತ್ವದ ವ್ಯಕ್ತಿಯೂ ಆಗಿರುವ ಪೌರ ಕಾರ್ಮಿಕನೊಬ್ಬ ಆರು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೌರ ಕಾರ್ಮಿಕನೊಬ್ಬ ಸಂಬಳ ಬಾರದೇ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯವಸ್ಥೆ ಇದ್ದರೆ ಅದನ್ನು ಹೊಟ್ಟೆಗೆ ಅನ್ನ ತಿನ್ನುವವರು ರೂಪಿಸಿದ ವ್ಯವಸ್ಥೆ ಎಂದು ಕರೆಯಲು ಸಾಧ್ಯವೇ ಇಲ್ಲ.

ನಮ್ಮ ನಗರವನ್ನು ಸ್ವಚ್ಛವಾಗಿಡುವ, ನಮ್ಮ ಎಂಜಲನ್ನು ಬಾಚುವ, ನಮ್ಮ ಮಲ, ಮೂತ್ರದಿಂದ ತುಂಬಿರುವ ಗುಂಡಿಗಳನ್ನು ಸ್ವಚ್ಛ ಮಾಡುವ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಾಗ ನಾವು ಇದರ ಜವಾಬ್ದಾರಿಯನ್ನು ಕೇವಲ ರಾಜ್ಯ ಸರ್ಕಾರ, ಬಿಬಿಎಂಪಿ ಅಧಿಕಾರಿಗಳ ಮೇಲೆ ಹೊರಿಸಿ ಕೈ ತೊಳೆದುಕೊಳ್ಳುವಂತಿಲ್ಲ. ನಮ್ಮ ಆರೋಗ್ಯಕ್ಕಾಗಿ ತನ್ನ ಆರೋಗ್ಯವನ್ನು ಕೆಡಿಸಿಕೊಂಡು ಸದಾ ಸಾವಿನ ಭಯದಲ್ಲಿಯೇ ಕೆಲಸ ಮಾಡುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಾಗಲೂ ನಮ್ಮ ಕಣ್ಣಿನಲ್ಲಿ ಒಂದು ಹನಿ ನೀರು ಬಾರದಿದ್ದರೆ, ನಮ್ಮ ಹೃದಯದಲ್ಲಿ ಈ ವ್ಯವಸ್ಥೆಯ ಬಗ್ಗೆ ಆಕ್ರೋಶದ ಬುಗ್ಗೆ ಏಳದಿದ್ದರೆ ಹೇಗೆ? ಪೌರ ಕಾರ್ಮಿಕ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ ಎಂಬ ಆರೋಪವೂ ಇದೆ. ಇದರ ವಿರುದ್ಧ ಹೋರಾಟ ಮಾಡುವ ಮನಸ್ಸು ನಮಗೇಕೆ ಬರುವುದಿಲ್ಲ? ನಮ್ಮ ಸಮಾಜದ ಭಾಗವೇ ಆಗಿರುವ ಈ ಸಮುದಾಯಕ್ಕೆ ಮೋಸವಾದಾಗ, ಅನ್ಯಾಯವಾದಾಗ ಸಾಮೂಹಿಕವಾಗಿ ನಮ್ಮ ಹೃದಯ ಮಿಡಿಯುವುದಿಲ್ಲ ಯಾಕೆ? ನಿಜವಾಗಿ ನಮ್ಮಲ್ಲಿ ಮನುಷ್ಯತ್ವ ಎನ್ನುವುದು ಇದ್ದರೆ ಒಬ್ಬ ರೈತ ಅಥವಾ ಪೌರ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡರೆ ಇಡೀ ಸಮಾಜ ಸೂತಕ ಆಚರಿಸಬೇಕು.

ನಮ್ಮ ದೇಶದಲ್ಲಿ ಅಥವಾ ನಮ್ಮ ರಾಜ್ಯದಲ್ಲಿ ಯಾವುದೇ ಶಾಸಕರಿಗೆ, ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಸಂಬಳ ವಿಳಂಬವಾದ ಉದಾಹರಣೆಯೇ ಇಲ್ಲ. ಆದರೆ ಪೌರ ಕಾರ್ಮಿಕರ ಸಂಬಳ ಮಾತ್ರ ಸಮಯಕ್ಕೆ ಸರಿಯಾಗಿ ಆಗುವುದಿಲ್ಲ. ಕೊಡುವ ಒಂದಿಷ್ಟು ಪುಡಿಗಾಸನ್ನೂ ನಾವು ಅವರಿಗೆ ಸೂಕ್ತ ಸಮಯದಲ್ಲಿ ನೀಡುವುದಿಲ್ಲ. ‘ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರಿಗೆ ಸಂಬಂಧಿಸಿದಂತೆ ಹೊಸ ವ್ಯವಸ್ಥೆ ಜಾರಿಗೊಳಿಸುತ್ತಿದ್ದೇವೆ. ಪೌರ ಕಾರ್ಮಿಕರ ಭವಿಷ್ಯನಿಧಿ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ವಿಮಾ ಪಾಲಿಸಿ ಸಂಖ್ಯೆ ತಾಳೆಯಾಗುತ್ತಿಲ್ಲ. ಅದಕ್ಕಾಗಿ ವೇತನ ಪಾವತಿ ವಿಳಂಬವಾಯಿತು’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ. ಇಂತಹ ಸಮಸ್ಯೆಗಳು ಕೆಳ ಹಂತದ ನೌಕರರಿಗೆ ಮಾತ್ರ ಯಾಕೆ ಕಾಡುತ್ತವೆ? ಈ ವ್ಯವಸ್ಥೆಯನ್ನೆಲ್ಲಾ ಮಾಡಲು ಎಷ್ಟು ದಿನ ಬೇಕು? ಕೆಳ ಹಂತದ ನೌಕರರಿಗೆ ತೊಂದರೆಯಾದಾಗ ಅದನ್ನು ಶೀಘ್ರ ಪರಿಹರಿಸಬೇಕು ಎಂಬ ಭಾವನೆ ನಮ್ಮ ಮೇಲಧಿಕಾರಿಗಳಲ್ಲಿ ಬರುವುದಕ್ಕೆ ಏನೇನು ಮಾಡಬೇಕು? ಇಲ್ಲಿ ಇನ್ನೊಂದು ವಿಷಯ ಇದೆ. ಪೌರ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ನಂತರ ಬಿಬಿಎಂಪಿ ₹ 27 ಕೋಟಿ ಬಿಡುಗಡೆ ಮಾಡಿದೆ. ಈಗ ಎಲ್ಲ ತೊಂದರೆಗಳೂ ನಿವಾರಣೆಯಾದವೇ?

ಬಡತನವನ್ನೇ ಹಾಸಿ ಹೊದ್ದು ಮಲಗುತ್ತಿರುವ, ಅಕ್ಷರ ಲೋಕದಲ್ಲಿ ಇನ್ನೂ ಕಣ್ಣು ಬಿಡದೇ ಇರುವ ಪೌರ ಕಾರ್ಮಿಕರಿಗೆ ಆರು ತಿಂಗಳು ವೇತನವನ್ನು ನಿಲ್ಲಿಸಿದರೆ ಅವರ  ಕುಟುಂಬದ ಸ್ಥಿತಿ ಏನಾದೀತು ಎಂದು ಯೋಚಿಸುವಷ್ಟು ಬುದ್ಧಿಯೂ ನಮ್ಮ ಅಧಿಕಾರಿಗಳಿಗೆ ಇಲ್ಲ ಎಂದರೆ ಅವರನ್ನು ಏನೆಂದು ಕರೆಯಬೇಕು?

ಪೌರಕಾರ್ಮಿಕ ಎಸ್. ಸುಬ್ರಮಣಿ, ವೇತನ ವಿಳಂಬದ ಕಾರಣಕ್ಕೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 20 ವರ್ಷದಿಂದಲೂ ಗುತ್ತಿಗೆದಾರರ ಬಳಿ ಕೆಲಸ ಮಾಡುತ್ತಿದ್ದ ಸುಬ್ರಮಣಿಗೆ ಕಳೆದ ಜನವರಿಯಲ್ಲಿ ಕೆಲಸ ಕಾಯಂ ಆಗಿತ್ತು. ಡಿಸೆಂಬರ್ ತಿಂಗಳವರೆಗೂ ಅವರ ಸಂಬಳ ಕೇವಲ ₹ 5000 ಇತ್ತು. ಜನವರಿಯಿಂದ ಅದು ₹ 17,700ಕ್ಕೆ ಏರುತ್ತದೆ ಎಂದು ಅವರು ಕನಸನ್ನೂ ಕಂಡಿದ್ದರು. ಆದರೆ ಜನವರಿಯಿಂದ ಅವರಿಗೆ ವೇತನ ಬರಲೇ ಇಲ್ಲ. ಅವರ ಪತ್ನಿ ಕವಿತಾ ಬಿಬಿಎಂಪಿ ಕಚೇರಿಗೆ ಹೋಗಿ ‘ಒಂದು ತಿಂಗಳ ವೇತನವನ್ನಾದರೂ ಕೊಡಿ’ ಎಂದು ಅಧಿಕಾರಿಗಳ ಮುಂದೆ ಗೋಗರೆದರೂ ಅವರ ಹೃದಯ ಕರಗಲೇ ಇಲ್ಲ. ‘ಮೊದಲು ನಿನ್ನ ಗಂಡನನ್ನು ಕೆಲಸಕ್ಕೆ ಕಳುಹಿಸು’ ಎಂದು ಆಕೆಯನ್ನು ಹೊರಕ್ಕೆ ದಬ್ಬಲಾಗಿತ್ತು.

ಪೌರ ಕಾರ್ಮಿಕರ ಉದ್ಯೋಗ ಅತ್ಯಂತ ಕಷ್ಟದ್ದು. ಜೊತೆಗೆ ಜೀವನದ ಬಗ್ಗೆ ಯಾವುದೇ ಭರವಸೆಯನ್ನು ಇಟ್ಟುಕೊಳ್ಳುವ ಉದ್ಯೋಗ ಅಲ್ಲ ಅಥವಾ ಅಂತಹ ಸ್ಥಿತಿಯನ್ನು ನಾವು ಸೃಷ್ಟಿಸಿದ್ದೇವೆ. ಇಡೀ ಬೆಂಗಳೂರಿನ ಜನರು ಮತ್ತು ಪ್ರಾಣಿಗಳು ಸೃಷ್ಟಿಸುವ ಹೊಲಸು, ಮಲ, ಮೂತ್ರ, ಕಸ ಎಲ್ಲವನ್ನೂ ಅವರು ಬಾಚಬೇಕು. ಚರಂಡಿಗಳನ್ನು ಸ್ವಚ್ಛ ಮಾಡಬೇಕು. ಮ್ಯಾನ್ ಹೋಲ್ ಗಳಲ್ಲಿ ಇಳಿದು ಕಟ್ಟಿಕೊಂಡ ಹೊಲಸನ್ನು ತೆಗೆಯಬೇಕು. ಒಳಚರಂಡಿ ಇಲ್ಲದ ಬಡಾವಣೆಗಳಲ್ಲಿ ಶೌಚಗುಂಡಿಗಳನ್ನೂ ಅವರೇ ಸ್ವಚ್ಛ ಮಾಡಬೇಕು. ನಮ್ಮ ನಗರ ಇಷ್ಟಾದರೂ ಚೊಕ್ಕವಾಗಿದೆ, ನಾವು ಒಂದಿಷ್ಟು ಉಸಿರಾಡುವಂತೆ ಇದೆ ಎಂದರೆ ಅದಕ್ಕೆ ಮುಖ್ಯ ಕಾರಣ ಪೌರ ಕಾರ್ಮಿಕರು. ಅವರನ್ನೂ ನಾವು ಸರಿಯಾಗಿ ನಡೆಸಿಕೊಳ್ಳುವುದಿಲ್ಲ ಎಂದರೆ ಹೇಗೆ? ಅವರಿಗೆ ಅಗತ್ಯ ಸೌಲಭ್ಯ ನೀಡಿದ್ದೇವಾ? ಗಮ್ ಬೂಟು, ಕೈಗವಸು ಎಷ್ಟು ಪೌರ ಕಾರ್ಮಿಕರಿಗೆ ನೀಡಿದ್ದೇವೆ? ಒಳಚರಂಡಿ ಮತ್ತು ಶೌಚ ಗುಂಡಿಗಳಲ್ಲಿ ಕಾರ್ಮಿಕರನ್ನು ಇಳಿಸಬಾರದು ಎಂಬ ಕಾನೂನು ಇದ್ದರೂ ಮ್ಯಾನ್ ಹೋಲ್ ಗಳಿಗೆ ಇಳಿದ ಕಾರ್ಮಿಕರು ಸಾಯುವ ಘಟನೆಗಳು ಪದೇ ಪದೇ ಯಾಕೆ ನಡೆಯುತ್ತವೆ?

ಈ ಮೊದಲು ಗುತ್ತಿಗೆ ಪದ್ಧತಿ ಇತ್ತು. ಆಗ ಬೆಂಗಳೂರಿನಲ್ಲಿ 44 ಸಾವಿರ ಪೌರ ಕಾರ್ಮಿಕರು ಇದ್ದಾರೆ ಎಂದು ಗುತ್ತಿಗೆದಾರರು ಲೆಕ್ಕ ಕೊಡುತ್ತಿದ್ದರು. ಅವರೆಲ್ಲರ ಹೆಸರಿನಲ್ಲಿಯೂ ಬಿಬಿಎಂಪಿ ವೇತನ ಬಿಡುಗಡೆ ಮಾಡುತ್ತಿತ್ತು. ಆಗ ಸರಿಯಾದ ಸಮಯದಲ್ಲಿಯೇ ವೇತನ ಬಿಡುಗಡೆಯಾಗುತ್ತಿತ್ತು. ಆದರೆ ವ್ಯವಸ್ಥೆ ಬದಲಾಗಿ ಗುತ್ತಿಗೆ ಪದ್ಧತಿ ತಪ್ಪಿದ ನಂತರ 18,330 ಪೌರ ಕಾರ್ಮಿಕರಿದ್ದಾರೆ. ಅವರಿಗೆ ವೇತನ ಸರಿಯಾಗಿ ಸಿಗುತ್ತಿಲ್ಲ. ಇದು ನಮ್ಮ ವ್ಯವಸ್ಥೆ. ಗುತ್ತಿಗೆದಾರರು ಪೌರ ಕಾರ್ಮಿಕರ ಹೆಸರಿನಲ್ಲಿ ಇ.ಎಸ್.ಐ, ಪಿಎಫ್ ಹಣವನ್ನೂ ಬಿಬಿಎಂಪಿಯಿಂದ ಪಡೆದುಕೊಳ್ಳುತ್ತಿದ್ದರು. ಆದರೆ ಅದನ್ನು ಕಟ್ಟುತ್ತಿರಲಿಲ್ಲ. ನಿಗದಿಯಾದ ವೇತನವನ್ನೂ ನೀಡುತ್ತಿರಲಿಲ್ಲ. ಇದೆಲ್ಲ ಅಧಿಕಾರಿಗಳಿಗೆ ಗೊತ್ತಿರಲಿಲ್ಲ ಎಂದಲ್ಲ. ಆದರೂ ಗುತ್ತಿಗೆದಾರರಿಗೆ ಸರಿಯಾದ ಸಮಯದಲ್ಲಿ ಹಣ ಪಾವತಿಯಾಗುತ್ತಿತ್ತು. ಇದಕ್ಕೆ ಕಾರಣ ಎಂದರೆ ಇದರಲ್ಲಿ ಅಧಿಕಾರಿಗಳಿಗೂ ಪಾಲಿತ್ತು. ಈಗ ಪೌರ ಕಾರ್ಮಿಕರ ವೇತನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದಾಗ ಏನೇನೋ ಸಬೂಬುಗಳು ಹೊರಬರುತ್ತಿವೆ. ಹೊಲಸನ್ನು ಬಳಿಯುವ, ಮಲ, ಮೂತ್ರ ಬಾಚುವ ಪೌರ ಕಾರ್ಮಿಕರ ಹಣವನ್ನೂ ತಿನ್ನುವ ಈ ಮಹಾಶಯರಿಗೆ ಏನಂತ ಕರೆಯಬೇಕು? ಇದು ...ತಿನ್ನುವ ಕೆಲಸವಲ್ಲದೆ ಇನ್ನೇನು?

ಬರಹ ಇಷ್ಟವಾಯಿತೆ?

 • 52

  Happy
 • 0

  Amused
 • 3

  Sad
 • 1

  Frustrated
 • 0

  Angry

Comments:

0 comments

Write the first review for this !