ಅರ್ಧರಾತ್ರಿಯಲ್ಲಿ ಕೊಡೆ ಹಿಡಿಯುವ ಸಚಿವರು!

7

ಅರ್ಧರಾತ್ರಿಯಲ್ಲಿ ಕೊಡೆ ಹಿಡಿಯುವ ಸಚಿವರು!

Published:
Updated:

‘ಅಲ್ಪಂಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ’ ಎಂಬ ಮಾತಿದೆ. ನಮ್ಮ ರಾಜ್ಯದ ಕೆಲವು ಸಚಿವರನ್ನು ನೋಡಿದರೆ ಈ ಮಾತು ಸತ್ಯ ಎನ್ನಿಸುತ್ತದೆ. ಅಪರೂಪಕ್ಕೆ ಸಿಕ್ಕ ಸಚಿವ ಪದವಿಯನ್ನು ಜನಸೇವೆಗೆ ಬಳಸುವ ಬದಲು ತಮ್ಮ ಅಹಂಕಾರಕ್ಕೆ, ತಮ್ಮ ವೈಭವಕ್ಕೆ ಬಳಸುವವರೇ ಹೆಚ್ಚಾಗಿದ್ದಾರೆ.

ನಮ್ಮ ಅರಣ್ಯ ಸಚಿವರು ಇತ್ತೀಚೆಗೆ ಚಿತ್ರದುರ್ಗ ಬಳಿಯ ಜೋಗಿಮಟ್ಟಿಗೆ ಹೋಗಿದ್ದರು. ಅವರು ಅಲ್ಲಿ ವಾಸ್ತವ್ಯ ಹೂಡಿದ ಸಂದರ್ಭದಲ್ಲಿ ಅಲ್ಲಿಗೆ ಯಾರೂ ಬರದಂತೆ ಮೇನ್ ಗೇಟಿಗೆ ಬೀಗವನ್ನೂ ಹಾಕಿಸಿದ್ದರಂತೆ. ಭಾನುವಾರ ಬೆಳಿಗ್ಗೆ ವಿಹಾಕ್ಕೆ ಬಂದ ಪ್ರವಾಸಿಗರಿಗೆ ಗೇಟಿನ ಬೀಗ ಸ್ವಾಗತಿಸಿತ್ತು. ಇದರಿಂದ ಜನರು ಕೆರಳಿದರು. ಬೀಗ ಮುರಿದು ಒಳಕ್ಕೆ ಪ್ರವೇಶ ಮಾಡಿದರು. ಆದರೆ ‘ಸಚಿವರು ಬಂದಿದ್ದಾರೆ ಎಂದು ಅಧಿಕಾರಿಗಳು ಗೇಟಿಗೆ ಬೀಗ ಹಾಕಿದ್ದು ತಪ್ಪು. ಜನರಿಗಾದ ತೊಂದರೆಗೆ ಕ್ಷಮೆ ಇರಲಿ’ ಎಂದು ಹೇಳುವ ಸೌಜನ್ಯದ ಮಾತು ಸಚಿವರ ಬಾಯಿಯಿಂದ ಬರಲಿಲ್ಲ. ‘ಇನ್ನು ಮುಂದೆ ಯಾರೇ ಗಣ್ಯರು ಬಂದರೂ ಹೀಗೆ ಬೀಗ ಹಾಕದಂತೆ ಸೂಚಿಸಿದ್ದೇನೆ’ ಎಂದು ಹೇಳಿ ಹೋದ ಸಚಿವರ ವೈಖರಿಗೆ ಸಾಕಷ್ಟು ಟೀಕೆ ವ್ಯಕ್ತವಾಯಿತು.

ಈ ಸಚಿವರು ಮಡಿಕೇರಿಯಲ್ಲಿ ತಮ್ಮ ಪತ್ನಿ ಮತ್ತು ಪುತ್ರನನ್ನು ಕುಳ್ಳಿರಿಸಿಕೊಂಡು ಅಧಿಕಾರಿಗಳ ಸಭೆ ನಡೆಸಿದರು. ಇವೆಲ್ಲ ಏನನ್ನು ಸೂಚಿಸುತ್ತದೆ? ಅಪರೂಪಕ್ಕೆ ಬರುವ ಅಧಿಕಾರದಿಂದ ಕೇವಲ ಅವರು ಮಾತ್ರ ಅರ್ಧರಾತ್ರಿಯಲ್ಲಿ ಕೊಡೆ ಹಿಡಿಯು
ತ್ತಿಲ್ಲ. ಜೊತೆಗೆ ಅವರ ಪತ್ನಿ, ಪುತ್ರರೂ ಅರ್ಧರಾತ್ರಿಯಲ್ಲಿ ಕೊಡೆ ಹಿಡಿಯುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.

ಈ ಮಾತು ಕೇವಲ ಅರಣ್ಯ ಸಚಿವರಿಗೆ ಸೀಮಿತವಲ್ಲ. ಹಲವು ಸಚಿವರು ಹೀಗೆಯೇ ನಡೆದುಕೊಳ್ಳುತ್ತಾರೆ. ಸಚಿವ ಸ್ಥಾನ ಎನ್ನುವುದು ಶೋಕಿಗಾಗಿಯೇ ಇದೆ ಎನ್ನುವ ಹಾಗಿರುತ್ತದೆ ಅವರ ನಡವಳಿಕೆ.

ಹಳೆ ಮೈಸೂರು ಭಾಗದ ಸಚಿವರೊಬ್ಬರು ಮಧ್ಯರಾತ್ರಿ ಅಥವಾ ಬೆಳಗಿನಜಾವ ಬರುವುದಾದರೂ ಜೋರಾಗಿ ಸೈರನ್ ಮೊಳಗಿಸುತ್ತಾ ಬರುತ್ತಾರೆ. ಜನರು ಮಲಗಿರುತ್ತಾರೆ, ಶಾಂತಿಭಂಗವಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಇರುವುದಿಲ್ಲ. ಶೋಕಿಗಾ
ಗಿಯೇ ಸಚಿವರಾಗುವ ಹಂಬಲ ಬಹಳ ಜನಕ್ಕೆ ಇರುತ್ತದೆ. ಒಂದು ಕಾಲದಲ್ಲಿ ಕಾನ್‌ಸ್ಟೆಬಲ್ ಆಗಿದ್ದವರೊಬ್ಬರು ಶಾಸಕರಾದರು. ಆಗ ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದರು. ಒಂದು ದಿನ ಈ ಮಾಜಿ ಕಾನ್‌ಸ್ಟೆಬಲ್ ಕಮ್ ಶಾಸಕರು ಮುಖ್ಯಮಂತ್ರಿ ಬಳಿಗೆ ಹೋಗಿ, ‘ದಯಮಾಡಿ ನನ್ನನ್ನು ಸಚಿವರನ್ನಾಗಿ ಮಾಡಿ’ ಎಂದು ಬೇಡಿಕೆ ಇಟ್ಟರು. ಅದಕ್ಕೆ ಪಟೇಲರು ‘ನೀನು ಯಾಕೆ ಸಚಿವನಾಗಬೇಕು’ ಎಂದು ಕೇಳಿದರು. ಆಗ ಈ ಮಹಾಶಯ ‘ಏನಿಲ್ಲ ನಾನು ಎಸ್ಪಿಗಳಿಂದ ಸೆಲ್ಯೂಟ್ ಹೊಡೆಸಿಕೊಳ್ಳಬೇಕು’ ಎಂದು ಹೇಳಿದರಂತೆ. ಆಗ ಪಟೇಲರು ‘ಅಯ್ಯೋ ಅದಕ್ಕೆ ಯಾಕೆ ಸಚಿವರಾಗಬೇಕು’ ಎಂದು ಹೇಳಿ ತಮ್ಮ ಬಳಿಯೇ ಇದ್ದ ಹಿರಿಯ ಪೊಲೀಸ್ ಅಧಿಕಾರಿಗೆ ‘ಇವರಿಗೊಂದು ಸೆಲ್ಯೂಟ್ ಹೊಡೀರಿ’ ಎಂದು ಹೇಳಿ ಮುಂದೆ ಸಾಗಿದರಂತೆ. ಕೆಲ ಕಾಲದ ನಂತರ ಈ ಮಾಜಿ ಕಾನ್‌ಸ್ಟೆಬಲ್ ಅರಣ್ಯ ಸಚಿವರಾದರು ಆ ಮಾತು ಬೇರೆ. ಆಗ ಅವರು ಮಾಡಿದ್ದೂ ಅರ್ಧರಾತ್ರಿಯಲ್ಲಿ ಕೊಡೆ ಹಿಡಿಯುವ ಕೆಲಸವನ್ನೇ.

ಕೆಂಗಲ್ ಹನುಮಂತಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎ.ಎನ್.ಮೂರ್ತಿರಾಯರು ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿದ್ದರು. ಒಂದು ದಿನ ತಮ್ಮನ್ನು ಭೇಟಿ ಮಾಡುವಂತೆ ಹನುಮಂತಯ್ಯ ಅವರು ಮೂರ್ತಿರಾಯರಿಗೆ ಸೂಚಿಸಿದ್ದರು. ಅದರಂತೆ ಮೂರ್ತಿರಾಯರು ಮುಖ್ಯಮಂತ್ರಿಯ ಮನೆಗೆ ಹೋದಾಗ ಅವರು ಎಲ್ಲಿಗೋ ಹೋಗುವ ಆತುರದಲ್ಲಿ ಇದ್ದರು. ‘ಈಗ ಬಹಳ ಜರೂರಾದ ಕೆಲಸವಿದೆ. ನನ್ನೊಡನೆ ಬನ್ನಿ. ನನ್ನ ಕೆಲಸ ಮುಗಿದ ನಂತರ
ಕುಮಾರ ಕೃಪಾಕ್ಕೆ ಹೋಗಿ ಅಲ್ಲಿಯೇ ಮಾತನಾಡೋಣ’ ಎಂದು ಕರೆದುಕೊಂಡು ಹೊರಟರು.

ಮುಖ್ಯಮಂತ್ರಿಗಳ ಕಾರು ಸರ್ ಎಂ.ವಿಶ್ವೇಶ್ವರಯ್ಯ ಅವರ ಮನೆಯ ಮುಂದೆ ನಿಂತಿತು. ಹನುಮಂತಯ್ಯ ಅವರು ಸುಮಾರು 10–15 ನಿಮಿಷ ವಿಶ್ವೇಶ್ವರಯ್ಯ ಅವರೊಂದಿಗೆ ಮಾತನಾಡಿ ಹೊರಬಂದರು. ಇಬ್ಬರೂ ಕಾರಿನಲ್ಲಿ ಕಚೇರಿ ಕಡೆಗೆ ಹೊರಟರು. ಆಗ ತಮ್ಮ ಗಡಿಬಿಡಿಯ ಕಾರಣವನ್ನು ಹನುಮಂತಯ್ಯ ವಿವರಿಸಿದರು. ‘ಒಂದು ವಿಷಯದ ಬಗ್ಗೆ ವಿಶ್ವೇಶ್ವರಯ್ಯ ಅವರ ಸಲಹೆ ಪಡೆಯಬೇಕಿತ್ತು. ಅದಕ್ಕೆ ಅವರಿಗೆ ಫೋನ್ ಮಾಡಿ, ತಮ್ಮನ್ನು ನೋಡಬೇಕಾಗಿದೆ, ಯಾವಾಗ ಬರಲಿ ಎಂದು ಕೇಳಿದೆ. ಅದಕ್ಕೆ ಅವರು, ಈಗ ಸಮಯವೇನೋ ಇದೆ. ಆದರೆ ನೀವು ಇಲ್ಲಿಗೆ ಬರುವುದು ಸರಿಯಲ್ಲ. ನೀವು ಚರ್ಚಿಸಬೇಕು ಎಂದುಕೊಂಡಿರುವುದು ರಾಜ್ಯದ ಯೋಗಕ್ಷೇಮಕ್ಕೆ ಸಂಬಂಧಿಸಿದ ವಿಷಯ. ನೀವು ರಾಜ್ಯದ ಮುಖ್ಯಮಂತ್ರಿಗಳು. ಆದ್ದರಿಂದ ನಾನೇ ನಿಮ್ಮ ಬಳಿಗೆ ಬರುವುದು ಕರ್ತವ್ಯ ಎಂದು ಹೇಳಿದರು. ವಿಶ್ವೇಶ್ವರಯ್ಯ ಅವರು ಇಂತಹ ವಿಷಯಗಳಲ್ಲಿ ಪಟ್ಟು ಹಿಡಿಯುತ್ತಾರೆ. ಬಂದೇಬಿಡುತ್ತಾರೆ. ಆದ್ದರಿಂದ ಅವರು ನನ್ನನ್ನು ಕಾಣಲು ಹೊರಡುವುದರೊಳಗೇ ನಾನೇ ಅವರು ಮನೆಯಲ್ಲಿ ಇರಬೇಕು ಎಂದು ನಿಶ್ಚಯಿಸಿದೆ. ಅಂತಹ ಮಹಾತ್ಮರು ನನ್ನ ಭೇಟಿಗಾಗಿ ಬರುವ ತೊಂದರೆ ಕೊಟ್ಟರೆ ಅದು ನಮಗೆ ಶ್ರೇಯಸ್ಸಲ್ಲ’ ಎಂದು ಹೇಳಿದರಂತೆ.

ಈಗ ವಿಶ್ವೇಶ್ವರಯ್ಯ ಅವರಂತಹ ಮಹಾತ್ಮರೂ ಇಲ್ಲ. ಇದ್ದರೂ ಅವರ ಮನೆಗೇ ಹೋಗಿ ಅವರ ಸಲಹೆ ಪಡೆಯಬೇಕು ಎಂಬ ರಾಜಕಾರಣಿಗಳೂ ಇಲ್ಲ. ಒಂದೊಮ್ಮೆ ರಾಜ್ಯದ ಹಿತದ ದೃಷ್ಟಿಯಿಂದ ಯಾರಾದರೂ ಮಹಾತ್ಮರು ಮುಖ್ಯಮಂತ್ರಿಯನ್ನೋ, ಸಚಿವರನ್ನೋ ಭೇಟಿ ಮಾಡಬೇಕು ಎಂದುಕೊಂಡರೆ ಅದೂ ಕಷ್ಟ. ಕಾದು ಕಾದು ಸುಸ್ತಾಗಿ ರಾಜ್ಯದ ಹಿತವನ್ನು ಮರೆತು ಮನೆಯ ದಾರಿ ಹಿಡಿಯಬೇಕಾದೀತು.

‘ಹಣಕೊಟ್ಟು ಮತ ಗಳಿಸಿದ್ದೇವೆ. ಜಾತಿ ಆಧಾರದಲ್ಲಿ ಆಯ್ಕೆಯಾಗಿದ್ದೇವೆ. ಹಾಗೆಯೇ ಜಾತಿ ಮತ್ತು ಹಣದ ಬಲದಿಂದಲೇ ಸಚಿವರೂ ಆಗಿದ್ದೇವೆ. ಇನ್ನು ನಾವು ಯಾರಿಗೂ ಹೆದರಬೇಕಿಲ್ಲ. ಜನಸೇವೆಯನ್ನೂ ಮಾಡಬೇಕಿಲ್ಲ. ನಮ್ಮ ಸಚಿವ ಸ್ಥಾನ ಶಾಶ್ವತ’ ಎಂಬ ಭ್ರಮೆಯಲ್ಲಿ ಇರುವವರೇ ಬಹಳ ಮಂದಿ.

ಜನಸೇವೆಯೇ ಜನಾರ್ದನನ ಸೇವೆ ಎಂಬ ಮಾತೂ ಇದೆ. ಆದರೆ ನಮ್ಮ ರಾಜಕಾರಣಿಗಳು ಈ ನುಡಿಯನ್ನೇ ಬದಲಾಯಿಸಿಬಿಟ್ಟಿದ್ದಾರೆ. ಜನಾರ್ದನ ಸೇವೆಯೇ ಜನಸೇವೆ ಎಂದುಕೊಂಡಿದ್ದಾರೆ. ಮುಖ್ಯಮಂತ್ರಿಯಿಂದ ಹಿಡಿದು ರಾಜ್ಯ ಸಚಿವರ ತನಕ ಬಹುತೇಕ ಸಚಿವರು ದೇವಾಲಯಕ್ಕೆ ಭೇಟಿ ಕೊಟ್ಟಷ್ಟು, ಜನರ ಮನೆಗಳಿಗೆ ಭೇಟಿ ನೀಡಿಲ್ಲ. ತೀರ್ಥಕ್ಷೇತ್ರಗಳಿಗೆ ಹೋದಷ್ಟು ಭಯ ಭಕ್ತಿಯಿಂದ ತಮ್ಮ ಮತ ಕ್ಷೇತ್ರಗಳಿಗೆ ಹೋಗಿಲ್ಲ. ಕುಮಾರಸ್ವಾಮಿ ಅವರೂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಎರಡು ತಿಂಗಳಿನಲ್ಲಿ 21 ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರಂತೆ. ಮಠಾಧಿಪತಿಗಳ ಭೇಟಿಗೆ ಲೆಕ್ಕ ಇಲ್ಲ ಬಿಡಿ. ಅವರ ಅಣ್ಣ ರೇವಣ್ಣ ಅವರಂತೂ ವಾಸ್ತು ಪ್ರಕಾರವೇ ನಡೆದುಕೊಳ್ಳುವವರು. ರಿಬ್ಬನ್ ಕತ್ತರಿಸುವುದಕ್ಕೂ ದಿಕ್ಕು ಲೆಕ್ಕ ಹಾಕುವವರು. ಐಎಎಸ್ ಅಧಿಕಾರಿಗಳ ಸಲಹೆಗಳಿಗಿಂತ ಅವರಿಗೆ ಜ್ಯೋತಿಷಿಗಳ ಮಾತೇ ಮುತ್ತು. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರೂ ಹೊಸ ಕಚೇರಿ ಪ್ರವೇಶ ಮಾಡಿದ್ದು ಹೋಮ ಹವನದ ನಂತರ. ಸಚಿವ ಸಂಪುಟ ವಿಸ್ತರಣೆಯ ನಂತರ ಇಡೀ ವಿಧಾನಸೌಧ ಪುರೋಹಿತರ ಬೀಡಾಗಿತ್ತು. ವೈಯಕ್ತಿಕ ನಂಬಿಕೆಗಳಿಗೆ ಯಾರದ್ದೂ ವಿರೋಧ ಇಲ್ಲ. ಆದರೆ ಸಾರ್ವಜನಿಕ ಸೇವಕನಾಗಿ ಹೀಗೆಲ್ಲ ನಡೆದುಕೊಂಡರೆ ಅದನ್ನು ದೇವರೂ ಒಪ್ಪಲಾರ.

ಬರಹ ಇಷ್ಟವಾಯಿತೆ?

 • 30

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !