ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನ| ಆಯಿ ಆಗಲಿ ಬೊಮ್ಮಾಯಿ!

ಪ್ರಜೆಗಳ ಪಾಲಿಗೆ ಮುಖ್ಯಮಂತ್ರಿ ತಾಯಿ ಆಗಬೇಕೇ ವಿನಾ ಕೆಲವರ ಪಾಲಿಗೆ ‘ಮಲತಾಯಿ’ ಆಗಬಾರದು
Last Updated 29 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಬೊಮ್ಮಾಯಿ ಹೆಸರಿನಲ್ಲಿಯೇ ಆಯಿ ಇದೆ. ಕೇವಲ ಹೆಸರಿನಲ್ಲಿ ಆಯಿ ಇದ್ದರೆ ಸಾಲದು. ಅವರ ಹೃದಯದಲ್ಲಿಯೂ ಮಾತಿನಲ್ಲಿಯೂ ಕೃತಿಯಲ್ಲಿಯೂ ಆಯಿ ಇರಬೇಕು. ಅದು ರಾಜ್ಯದ ಜನರಿಗೆ ಗೊತ್ತಾಗಬೇಕು. ಆಗ ಮಾತ್ರ ರಾಜ್ಯದ ಜನರು ಸುರಕ್ಷಿತ ಭಾವದಲ್ಲಿ ಇರಲು ಸಾಧ್ಯ. ಆದರೆ ಬಸವರಾಜ ಬೊಮ್ಮಾಯಿ ಅವರ ಆಯಿ ಭಾವ ಈಗ ಹೊರಜಗತ್ತಿಗೆ ಕಾಣುತ್ತಿಲ್ಲ. ಅವರು ಕಳೆದ ಕೆಲವು ತಿಂಗಳುಗಳಿಂದ ನಡೆದುಕೊಂಡ ರೀತಿ ಕೆಲವು ಪ್ರಜೆಗಳಿಗೆ ಮಲತಾಯಿ ಧೋರಣೆಯಂತೆ ಕಂಡರೆ ಅಚ್ಚರಿಯಿಲ್ಲ.

ರವೀಂದ್ರ ಭಟ್ಟ
ರವೀಂದ್ರ ಭಟ್ಟ

ಇತ್ತೀಚೆಗೆ ಶಿವಮೊಗ್ಗದಲ್ಲಿ ಹರ್ಷ ಎಂಬ ಬಜರಂಗದಳದ ಕಾರ್ಯಕರ್ತನ ಹತ್ಯೆ ನಡೆಯಿತು. ಈ ಹತ್ಯೆ ಖಂಡನಾರ್ಹ. ಹತ್ಯೆಗೆ ಕಾರಣರಾದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಹತ್ಯೆಯಾದ ವ್ಯಕ್ತಿಯ ಕುಟುಂಬಕ್ಕೆ ಸಾಂತ್ವನವನ್ನೂ ಹೇಳಬೇಕು. ನಾಗರಿಕ ವ್ಯಕ್ತಿಯ ಕರ್ತವ್ಯ ಅದು. ಆದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹರ್ಷನ ಮನೆಗೆ ತೆರಳಿ, ಸರ್ಕಾರದ ವತಿಯಿಂದ ₹25 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದರು. ಅವರ ಮಾತನ್ನು ಈಗಿನ ಮುಖ್ಯಮಂತ್ರಿ ಚಾಚೂ ತಪ್ಪದೆ ಪಾಲಿಸಿದರು. ಕೋಮು ದ್ವೇಷಕ್ಕೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಹೀಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ನೀಡುತ್ತಿರುವುದು ಇದೇ ಮೊದಲು. ಇದೊಂದು ಹೊಸ ಪದ್ಧತಿಗೆ ಮುಖ್ಯಮಂತ್ರಿ ನಾಂದಿ ಹಾಡಿದರು. ಆದರೆ, ಇದೇ ರೀತಿ ಹತ್ಯೆಗೊಳಗಾದ ಇತರ ಕೆಲವರ ಕುಟುಂಬಗಳಿಗೆ ಈ ಭಾಗ್ಯ ಸಿಗಲಿಲ್ಲ.

ಹರ್ಷ ಹತ್ಯೆಯ ನಂತರ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ರಾಜ್ಯದ ಪ್ರಭಾವಿ ಸಚಿವರಾದ ಕೆ.ಎಸ್.ಈಶ್ವರಪ್ಪ ಮತ್ತು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಹರ್ಷ ಮೃತದೇಹದ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಹಿಂಸಾಚಾರ ಕೂಡ ನಡೆಯಿತು. ಕಲ್ಲು ತೂರಾಟ, ಮನೆಗಳ ಲೂಟಿ, ಬೆಂಕಿ ಹಚ್ಚುವುದು ಮುಂತಾದ ಕಾನೂನುಬಾಹಿರ ಚಟುವಟಿಕೆಗಳು ನಡೆದವು. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ಸೋತುಹೋಯಿತು.

ಹರ್ಷ ಹತ್ಯೆಯ ನಂತರ ಸಚಿವ ಈಶ್ವರಪ್ಪ ಸಹಿತ ಸರ್ಕಾರದ ಭಾಗವಾಗಿದ್ದವರೇ ಕೋಮು ದ್ವೇಷದ ಮಾತನ್ನು ಆಡಿದರು. ಅದನ್ನು ತಡೆಯುವ ಪ್ರಯತ್ನವನ್ನೂ ಮುಖ್ಯಮಂತ್ರಿ ಮಾಡಲಿಲ್ಲ. ಸರ್ಕಾರದಿಂದ ಹೊರಗಿದ್ದವರು ಕಡಿಯುವ, ಕೊಲ್ಲುವ ಮಾತನ್ನು ಆಡಿದರು. ಇದ್ಯಾವುದಕ್ಕೂ ಸೂಕ್ತ ಪ್ರತಿಕ್ರಿಯೆ ಬೊಮ್ಮಾಯಿ ಅವರಿಂದ ಬರಲಿಲ್ಲ. ರಾಜ್ಯದಲ್ಲಿ ಕೋವಿಡ್ ಮೊದಲ ಅಲೆ ಹರಡುತ್ತಿದ್ದ ಕಾಲದಲ್ಲಿ ತಬ್ಲಿಗ್‌ ಸಂಘಟನೆಗೆ ಸೇರಿದವರೇ ಕೋವಿಡ್ ಹರಡಲು ಕಾರಣ ಎಂದು ಹುಯಿಲೆಬ್ಬಿಸಲಾಗಿತ್ತು. ಆ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ, ಆರ್‌ಎಸ್ಎಸ್ ಮೂಲದವರಾದ ಬಿ.ಎಸ್.ಯಡಿಯೂರಪ್ಪ ಅವರು ‘ಕೋವಿಡ್ ಹರಡಲು ತಬ್ಲಿಗ್‌ ಸಂಘಟನೆಯೇ ಕಾರಣ ಎಂದು ಹೇಳಲಾಗದು. ಯಾರೂ ಈ ರೀತಿಯ ವದಂತಿ ಹರಡಬಾರದು’ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿ ತಮ್ಮವರನ್ನು ಸುಮ್ಮನಿರಿಸಿದ್ದರು.
ಸಂಘ ಪರಿವಾರ ಮೂಲದ ಯಡಿಯೂರಪ್ಪ ಅವರು ತೋರಿದ ಧೈರ್ಯವನ್ನು ಸಮಾಜವಾದ ಮೂಲದ ಬೊಮ್ಮಾಯಿ ಈಗ ತೋರಲಿಲ್ಲ. ಬೊಮ್ಮಾಯಿ ಈಗ ಖಡಕ್ ಮಾತುಗಳನ್ನು ಆಡಿದ್ದರೂ ಅವರ ಹುದ್ದೆಗೆ ಕುತ್ತು ಬರುತ್ತಿರಲಿಲ್ಲ. ಯಾಕೆಂದರೆ ಅವರನ್ನು ಇಳಿಸಿ ಹೊಸಬರನ್ನು ತರುವ ಉತ್ಸಾಹವನ್ನು ಬಿಜೆಪಿ ಹೈಕಮಾಂಡ್ ತೋರುತ್ತಿರ ಲಿಲ್ಲ. ಹಿಂದಿನ ಅನುಭವದಿಂದ ಕಲಿತ ಪಾಠ ಬಿಜೆಪಿ ಹೈಕಮಾಂಡ್ ಮುಂದೆ ಇದೆ.

ಈಗ ರಾಜ್ಯದಲ್ಲಿ ಮುಸ್ಲಿಮರ ಬಗ್ಗೆ ದ್ವೇಷ ವ್ಯಾಪಕವಾಗಿದೆ. ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರ ನಡೆಸಲು ಅವಕಾಶ ನೀಡಬಾರದು ಎನ್ನುವ ಒತ್ತಾಯ ದಕ್ಷಿಣ ಕನ್ನಡ, ಉಡುಪಿಯಿಂದ ಆರಂಭವಾಗಿ ಇಡೀ ರಾಜ್ಯವನ್ನು ವ್ಯಾಪಿಸಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯಮಂತ್ರಿ ಅದನ್ನಾದರೂ ತಡೆಯಬಹುದಾಗಿತ್ತು. ಜಾತ್ರೆಗಳಲ್ಲಿ ವ್ಯಾಪಾರ ಮಾಡುವ ಮುಸ್ಲಿಂ ವರ್ತಕರು ಕೋಟ್ಯಧಿಪತಿ
ಗಳೇನಲ್ಲ. ಬಡ ವ್ಯಾಪಾರಿಗಳ ವ್ಯಾಪಾರಕ್ಕೂ ಕುತ್ತು ತರುವ ವಿದ್ಯಮಾನ ನಡೆಯುತ್ತಿದ್ದಾಗ ದೊಡ್ಡ ದನಿಯಲ್ಲಿಯೇ ಅದನ್ನು ಖಂಡಿಸಿ ಸ್ವಪಕ್ಷೀಯರ ಬಾಯಿ ಮುಚ್ಚಿಸಬೇಕಿತ್ತು. ವಿಧಾನಮಂಡಲದಲ್ಲಿ ಇದು ಪ್ರಸ್ತಾಪವಾದಾಗ ಕಾನೂನು ಮಂತ್ರಿಗಳು ‘ಇದು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ನಿಯಮಾವಳಿ’ ಎಂದು ಅರ್ಧ ಸತ್ಯವನ್ನು ಹೇಳಿದಾಗಲಾದರೂ ಮುಖ್ಯಮಂತ್ರಿ ಮಧ್ಯಪ್ರವೇಶಿಸಿ ಪೂರ್ಣ ಸತ್ಯವನ್ನು ಹೇಳಬೇಕಾಗಿತ್ತು. ಅಲ್ಲದೆ ಮುಸ್ಲಿಂ ವ್ಯಾಪಾರಿಗಳಿಗೆ ಅಡ್ಡಿ ಮಾಡುವುದು ತರವಲ್ಲ ಎಂದು ಕಟ್ಟುನಿಟ್ಟಾಗಿ ಸೂಚಿಸಬೇಕಿತ್ತು. ‘ಜಾತ್ರೆ ಸಂದರ್ಭದಲ್ಲಿ ವ್ಯಾಪಾರಕ್ಕೆ ಯಾರಿಗೆ ಅವಕಾಶ ನೀಡಬೇಕು ಎನ್ನುವುದು ಸ್ಥಳೀಯ ಆಡಳಿತ ಮಂಡಳಿಗೆ ಸಂಬಂಧಿಸಿದ್ದು. ಅದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲಾಗದು’ ಎಂದು ಕಾನೂನು ಸಚಿವರು ಹೇಳಿದಾಗಲಾದರೂ ‘ಇಲ್ಲ, ಹೀಗೆ ಸರ್ಕಾರ ಸುಮ್ಮನಿರಲಾಗದು’ ಎಂದು ಹೇಳುವುದಕ್ಕಾದರೂ ಬೊಮ್ಮಾಯಿ ಬಾಯಿ ಬಿಡಬೇಕಿತ್ತು. ಆಗಲೂ ಅವರು ಹಾಗೆ ಮಾಡಲಿಲ್ಲ.

‘ದಿ ಕಾಶ್ಮೀರ್‌ ಫೈಲ್ಸ್’ ಚಲನಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ನೀಡಲಾಯಿತು. ಸರ್ಕಾರವೇ ಮುಂದೆ ನಿಂತು ಜನರಿಗೆ ಈ ಸಿನಿಮಾ ಪ್ರದರ್ಶಿಸಿತು. ಬಿಜೆಪಿ ಕೂಡ ಉಚಿತ ಪ್ರದರ್ಶನವನ್ನು ಏರ್ಪಡಿಸಿತು. ಬಿಜೆಪಿ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ಸಾಹದಿಂದ ಉಚಿತವಾಗಿಯೇ ತಮ್ಮ ಮತದಾರರಿಗೆ ಈ ಚಿತ್ರದ ಪ್ರದರ್ಶನಕ್ಕೆ ಏರ್ಪಾಟು ಮಾಡಿದರು. ಆದರೆ ಇಂತಹ ಭಾಗ್ಯ ‘ಜೈ ಭೀಮ್’ ಚಿತ್ರಕ್ಕೆ ಲಭ್ಯವಾಗಲಿಲ್ಲ.

ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಿತು. ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿಯನ್ನು ತೆಗೆದುಕೊಂಡಿದ್ದರಿಂದ ಅದೊಂದು ಭಾರಿ ಸಂಘರ್ಷಕ್ಕೆ ಕಾರಣವಾಯಿತು. ಇದು ಉಡುಪಿ ಜಿಲ್ಲೆಯಿಂದ ಹೊರಕ್ಕೆ ಹಬ್ಬದಂತೆ ತಡೆಯಲು ಸಾಧ್ಯವಿತ್ತು. ಕೋರ್ಟ್ ಮೆಟ್ಟಿಲು ಏರದಂತೆ ನೋಡಿಕೊಳ್ಳಬಹುದಾಗಿತ್ತು. ತಾಯಿ ಹೃದಯದಿಂದ ಸಮಸ್ಯೆಯನ್ನು ಆಲಿಸಿದ್ದರೆ ಖಂಡಿತ ಪರಿಹಾರ ಸಿಗುತ್ತಿತ್ತು. ಆದರೆ ಅಂತಹ ಪ್ರಯತ್ನವೇ ನಡೆಯಲಿಲ್ಲ. ಈಗಲೂ ಸರ್ಕಾರ ಈ ವಿಷಯದಲ್ಲಿ ದ್ವಂದ್ವ ನಿಲುವನ್ನೇ ಅನುಸರಿಸುತ್ತಿದೆ. ಹಿಜಾಬ್ ಕುರಿತಂತೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ ನಂತರವೂ ಶಿಕ್ಷಣ ಇಲಾಖೆಯ ಎಡವಟ್ಟಿನಿಂದ, ಎಲ್ಲಿ ಅದನ್ನು ಜಾರಿ ಮಾಡಬೇಕು ಎಲ್ಲಿ ಜಾರಿ ಮಾಡಬಾರದು ಎಂಬ ಗೊಂದಲ ಮುಂದುವರಿದಿದೆ. ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಈ ವಿವಾದವನ್ನು ನೋಡದೆ ಕೇವಲ ಹಟಮಾರಿತನದಿಂದ ನೋಡಿದ್ದೇ ಎಲ್ಲ ಸಂಕಟಗಳಿಗೆ ಕಾರಣವಾಯಿತು.

ದಕ್ಷಿಣ ಕನ್ನಡ, ಉಡುಪಿ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಮತೀಯ ಗೂಂಡಾಗಿರಿ ನಡೆದಾಗ ಅದನ್ನು ಹತೋಟಿಗೆ ತರುವುದನ್ನು ಬಿಟ್ಟು ನಮ್ಮ ಮುಖ್ಯಮಂತ್ರಿಗಳು ‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ನಡೆಯುತ್ತಿದೆ’ ಎಂಬ ಆಣಿಮುತ್ತು ಉದುರಿಸಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿ ಹೋಯಿತು. ಸಂವಿಧಾನಬದ್ಧವಾಗಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿಯೊಬ್ಬರಿಗೆ ರಾಜ್ಯದ ಎಲ್ಲ ಪ್ರಜೆಗಳೂ ಒಂದೇ ಆಗಿರಬೇಕು. ಅವರು ಹೆಚ್ಚು ಇವರು ಕಡಿಮೆ ಎಂಬ ತಾರತಮ್ಯ ಇರಬಾರದು. ಈ ರೀತಿಯ ತಾರತಮ್ಯ ಮತವನ್ನು ತರಬಹುದು, ಆದರೆ ರಾಜ್ಯಕ್ಕೆ ಹಿತವನ್ನಂತೂ ಖಂಡಿತವಾಗಿಯೂ ತರಲಾರದು. ಈಗಿರುವ ಮುಖ್ಯಮಂತ್ರಿ ಹಿಂದುತ್ವದ ಪರವಾಗಿರುವ ಹಿಂದೂಗಳಿಗೆ ಮಾತ್ರ ಮುಖ್ಯಮಂತ್ರಿ ಆಗಿರಬಹುದೇ ಎಂಬ ಅನುಮಾನ ಯಾರಿಗಾದರೂ ಬಂದಿದ್ದರೆ ಅದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ.

ಹೆಸರಿನಲ್ಲಿ ಆಯಿಯನ್ನು ಅಡಗಿಸಿಟ್ಟುಕೊಂಡಿರುವಬೊಮ್ ಆಯಿ ಇನ್ನಾದರೂ ತಮ್ಮ ಒಡಲಿನಿಂದ ಆಯಿಯನ್ನು ಹೊರಕ್ಕೆ ತೆಗೆಯಬೇಕು. ಮಾತೃ ಹೃದಯದ ವಾತ್ಸಲ್ಯ ಎಲ್ಲ ಮತದಾರರಿಗೂ ದಕ್ಕುವಂತಾಗಬೇಕು. ಇಲ್ಲವಾದರೆ ಅವರು ಪಕ್ಷದಲ್ಲಿ ಗಟ್ಟಿಯಾಗಬಹುದು, ಅವರ ಕುರ್ಚಿಯೂ ಭದ್ರವಾಗಬಹುದು. ಆದರೆ ರಾಜ್ಯದ ಸೌಹಾರ್ದ ಪರಂಪರೆ ಸಡಿಲವಾಗುತ್ತದೆ. ಪ್ರತಿದಿನ ನಾವು ಹಾಡುವ ನಾಡಗೀತೆಯಲ್ಲಿ ಬರುವ ‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ಸಾಲುಗಳು ನಮ್ಮನ್ನೇ ಅಣಕಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT