ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನ: ಮುಖಂಡರ ಹುಚ್ಚು ಮನಸ್ಸಿನ ಮುಖಗಳು!

ಜನಪರ ನಾಯಕರನ್ನು ಈಗ ದುರ್ಬೀನು ಹಾಕಿ ಹುಡುಕಬೇಕಾಗಿದೆ
Last Updated 28 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಈಗ ಎದುರಿಸುತ್ತಿರುವ ಅತ್ಯಂತ ಪ್ರಮುಖ ಸಮಸ್ಯೆಗಳು ಯಾವುವು? ಹೀಗೊಂದು ಪ್ರಶ್ನೆಯನ್ನು ನಿಮ್ಮಷ್ಟಕ್ಕೆ ನೀವೇ ಒಮ್ಮೆ ಕೇಳಿಕೊಳ್ಳಿ. ಉತ್ತರ ಗೊತ್ತಾಗದಿದ್ದರೆ ಟಿ.ವಿ ನೋಡಿದರೆ, ಇಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಜಾಲಾಡಿದರೆ ನಿಮಗೆ ಉತ್ತರ ಸಿಕ್ಕೇ ಸಿಗುತ್ತದೆ. ರಾಜ್ಯವನ್ನು ಕಾಡುತ್ತಿರುವ ಸಮಸ್ಯೆಗಳು ಒಂದಾ ಎರಡಾ, ನೂರಾರಿವೆ.

ಸಾಮಾಜಿಕ ಮಾಧ್ಯಮಗಳನ್ನು ಗಮನಿಸುತ್ತಿದ್ದರೆ, ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಹೀಗೆ ಪಟ್ಟಿ ಮಾಡಬಹುದು. ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಿಸಬೇಕೋ ಬೇಡವೋ? ಸಾವರ್ಕರ್ ನಿಜವಾಗಿಯೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರೋ ಇಲ್ಲವೋ? ಜಾಹೀರಾತಿನಲ್ಲಿ ನೆಹರೂ ಚಿತ್ರ ಕೈಬಿಟ್ಟಿದ್ದು ತಪ್ಪೋ ಸರಿಯೋ? ನೆಹರೂ ದೇಶಭಕ್ತರು ಹೌದೋ ಅಲ್ಲವೋ? ಮಾಂಸಾಹಾರ ಸೇವಿಸಿ ದೇವಾಲಯ ಪ್ರವೇಶ ಮಾಡುವುದು ಸರಿಯೋ ತಪ್ಪೋ? ಶಾಲೆಗೆ ಬರುವಾಗ ಹಿಜಾಬ್ ಧರಿಸಬೇಕೋ ಬೇಡವೋ? ಸಿದ್ದರಾಮಯ್ಯ ಹಿಂದೂ ವಿರೋಧಿಯೋ ಮುಸ್ಲಿಂ ಪರವೋ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್‌ಎಸ್ಎಸ್ ಕೈಗೊಂಬೆ ಹೌದೋ ಅಲ್ಲವೋ, ಟಿಪ್ಪು ಸುಲ್ತಾನ್ ಮೈಸೂರು ಹುಲಿ ಹೌದೋ ಅಲ್ಲವೋ? ದೇಶ ವಿಭಜನೆಗೆ ಗಾಂಧೀಜಿ ಕಾರಣವೋ ಅಲ್ಲವೋ? ಧರ್ಮರಕ್ಷಣೆಗಾಗಿ ಕೊಲೆ ಮಾಡಬಹುದೋ ಇಲ್ಲವೋ... ಅಬ್ಬಬ್ಬಾ ಎಂತೆಂಥಾ ಸಮಸ್ಯೆಗಳು. ಒಂದಕ್ಕಿಂತ ಒಂದು ಗಂಭೀರ ಸಮಸ್ಯೆಗಳು.

ಈ ಎಲ್ಲ ಸಮಸ್ಯೆಗಳ ಬಗ್ಗೆ ಆಡಳಿತ ಪಕ್ಷದವರೂ ಮಾತನಾಡುತ್ತಾರೆ, ವಿರೋಧ ಪಕ್ಷದ ಮುಖಂಡರೂ ಮಾತನಾಡುತ್ತಾರೆ, ಆ ಭಕ್ತರೂ ಮಾತನಾಡುತ್ತಾರೆ, ಈ ಭಕ್ತರೂ ಚರ್ಚೆ ಮಾಡುತ್ತಾರೆ. ಹೋರಾಟಕ್ಕೂ ಇಳಿದಿದ್ದಾರೆ. ಪಾದಯಾತ್ರೆ, ರಥಯಾತ್ರೆ ಎಲ್ಲವೂ ನಡೆಯುತ್ತಿವೆ. ಆದರೆ ಬಡಪಾಯಿ ಮತದಾರ ಮಾತ್ರ ಬೇರೆಯದ್ದೇ ಸಮಸ್ಯೆಯಲ್ಲಿ ಮುಳುಗಿದ್ದಾನೆ. ಅವನಿಗೆ ಊಟಕ್ಕೆ ಇದೆಯಾ? ತಲೆಮೇಲೊಂದು ಸೂರು ಇದೆಯಾ? ದುಡಿಯುವ ಕೈಗಳಿಗೆ ಕೆಲಸ ಇದೆಯಾ? ದುಡಿತಕ್ಕೆ ಸಮನಾದ ಸಂಬಳ ಸಿಗುತ್ತಿದೆಯಾ ಎಂದು ಕೇಳುವವರು ಗತಿ ಇಲ್ಲದಂತಾಗಿದೆ.

ಕೊರೊನಾ ಆವರಿಸಿದ ನಂತರದಲ್ಲಿ ಬದುಕು ಮೂರಾಬಟ್ಟೆಯಾಗಿದೆ. ಹಣದುಬ್ಬರ ವಿಪರೀತವಾಗಿದೆ. ಆರ್ಥಿಕ ಸಮಸ್ಯೆ ಕಿತ್ತು ತಿನ್ನುತ್ತಿದೆ. ಆದರೆ ಈಗ ಧರ್ಮ ಧರ್ಮಗಳ ನಡುವಿನ ಸಂಘರ್ಷದ ವಿಷಯ ಸಮೂಹ ಸನ್ನಿಯಾಗಿ ಎಷ್ಟು ತೀವ್ರವಾಗಿದೆ ಎಂದರೆ, ರಾಜ್ಯದ ನಿಜವಾದ ಸಮಸ್ಯೆಗಳೆಲ್ಲಾ ಮರೆಯಾಗಿವೆ. ಯಾರಿಗೂ ಅದರ ಬಗ್ಗೆ ಚಿಂತೆ ಇರುವಂತೆ ಕಾಣುತ್ತಿಲ್ಲ. ನಿಜವಾದ ಸಮಸ್ಯೆಗಳು ಆಡಳಿತ ಪಕ್ಷಕ್ಕೂ ಬೇಡ, ವಿರೋಧ ಪಕ್ಷಕ್ಕೂ ಬೇಡ ಎನ್ನುವಂತಾಗಿದೆ. ಹಿಂದೂ ಪರವೋ ವಿರೋಧವೋ ಮುಸ್ಲಿಂ ಪರವೋ ವಿರೋಧವೋ ಎಂಬ ಚರ್ಚೆಯಲ್ಲಿ ಜನಪರ ಎನ್ನುವುದು ಮಾಯವಾಗಿದೆ. ಜನಪರ ನಾಯಕರು ಯಾರು ಎಂದು ದುರ್ಬೀನು ಹಾಕಿ ಹುಡುಕುವಂತಾಗಿದೆ.

ಕೆಲವು ದಶಕಗಳ ಹಿಂದೆ ನಮಗೆ ಜನಪರ ನಾಯಕರು ಎಲ್ಲೆಡೆ ಸಿಗುತ್ತಿದ್ದರು. ಆದರೆ ಈಗ ಸಿಗುವುದು ಬಿಜೆಪಿ ನಾಯಕರು, ಕಾಂಗ್ರೆಸ್ ನಾಯಕರು ಅಥವಾ ಇನ್ಯಾವುದೋ ಪಕ್ಷದ ನಾಯಕರು ಮಾತ್ರ. ಇಂತಿಪ್ಪ ಸನ್ನಿವೇಶದಲ್ಲಿ ನಾವು ದೇಶಭಕ್ತಿಯ ಬಗ್ಗೆ ಆಲೋಚಿಸುತ್ತಿದ್ದೇವೆ. ಬಹುಭಾಷಾ ನಟ ಪ್ರಕಾಶ್ ರಾಜ್ ಇತ್ತೀಚೆಗೆ ‘ನಾವು ಈಗ ದೇಶಭಕ್ತಿಯನ್ನು ತೋರಿಸಬೇಕಾಗಿದ್ದು ಬೆಲೆ ಏರಿಕೆಯನ್ನು ಕಡಿಮೆ ಮಾಡುವುದರಲ್ಲಿ, ಯುವಕರಿಗೆ ಕೆಲಸ ಕೊಡಿಸುವುದರಲ್ಲಿ’ ಎಂದು ಹೇಳಿದ್ದರು. ಅದು ಒಪ್ಪತಕ್ಕ ಮಾತು. ಆದರೆ ಅವರು ಹಿಂದೂ ವಿರೋಧಿ ಪಟ್ಟ ಅಲಂಕರಿಸಿದ್ದಾರೆ. ದೇಶದ್ರೋಹಿ ಎಂಬ ಟೀಕೆಗೂ ಗುರಿಯಾಗಿದ್ದಾರೆ. ನಿಜವಾಗಿಯೂ ಈಗ ರಾಜ್ಯ ಮತ್ತು ದೇಶವನ್ನು ಪ್ರಮುಖವಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ಬೆಲೆ ಏರಿಕೆ, ನಿರುದ್ಯೋಗ. ಇವುಗಳನ್ನು ಪರಿಹರಿಸುವ ಮೂಲಕ ನಮ್ಮ ದೇಶಭಕ್ತಿಯನ್ನು ಸಾಬೀತು ಮಾಡಬೇಕಿದೆ.

ಕರ್ನಾಟಕದಲ್ಲಿ ಈ ಬಾರಿ ವಿಪರೀತ ಮಳೆಯಾಗಿದೆ. ರೈತರ ಬೆಳೆ ನಾಶವಾಗಿದೆ. ಭೂಮಿ ಕುಸಿಯುತ್ತಿದೆ. ಸೇತುವೆಗಳಷ್ಟೇ ಅಲ್ಲ ರಸ್ತೆಗಳೂ ಮುಳುಗಿವೆ. ಕೆಲವು ಕಡೆ ಬದುಕು ನೀರುಪಾಲಾಗಿದೆ. ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಮಳೆಯೇ ಆಗಿಲ್ಲ. ಅಲ್ಲಿ ಬದುಕು ಬರಡಾಗಿದೆ. ಪಿಎಸ್ಐ, ಕೆಪಿಟಿಸಿಎಲ್ ಸಹಿತ ಬಹುತೇಕ ನೇಮಕಾತಿಗಳಲ್ಲಿ ಅಕ್ರಮಗಳು ನಿರಾತಂಕವಾಗಿ ನಡೆಯುತ್ತಿವೆ. ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಪಡೆಯಲು ಶೇ 40ರಷ್ಟು ಕಮಿಷನ್‌ ನೀಡಬೇಕಾಗಿದೆ ಎಂದು ಗುತ್ತಿಗೆದಾರರ ಸಂಘದವರು ಆರೋಪಿಸುತ್ತಿದ್ದಾರೆ. ಭ್ರಷ್ಟಾಚಾರ ಮಿತಿಮೀರಿದೆ ಎನ್ನುವುದು ಎಲ್ಲರ ಕಣ್ಣಿಗೂ ರಾಚುತ್ತಿದೆ. ಬೆಂಗಳೂರಿನಲ್ಲಿ ರಸ್ತೆಗುಂಡಿಗಳಿಂದ ಅಪಘಾತಗಳಾಗಿ ಜನ ಸಾಯುತ್ತಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿಯೂ ಸಮಸ್ಯೆಗಳು ವಿಪರೀತವಾಗಿವೆ. ರೈತರು ತಮ್ಮ ಬೆಳೆಗಳಿಗೆ ಬೆಲೆ ಸಿಗುತ್ತಿಲ್ಲ ಎಂದು ಕೂಗುತ್ತಿದ್ದಾರೆ. ಸಾಲ ನೀಡಬೇಕಾದ ಸಹಕಾರಿ ಸಂಘಗಳಲ್ಲಿಯೂ ಅವ್ಯವಹಾರದ ಘಾಟು ರಾಚುತ್ತಿದೆ. ಈ ಸಮಸ್ಯೆಗಳ ಬಗ್ಗೆ ಮಾತನಾಡಬೇಕಾದ ನಮ್ಮ ನಾಯಕರು ಮಾಂಸಾಹಾರ, ಗಣೇಶೋತ್ಸವ, ಪ್ರತಿಮೆ ಸ್ಥಾಪನೆಯಂತಹ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾ ಕಾಲಕಳೆಯುತ್ತಿದ್ದಾರೆ. ಅಭಿವೃದ್ಧಿಯ ವಿಷಯ ಚರ್ಚೆಗೆ ಬರುತ್ತಿಲ್ಲ.

ಆಡಳಿತ ಪಕ್ಷದವರು ಬುಟ್ಟಿಯಿಂದ ಒಂದೊಂದೇ ವಿಷಯವನ್ನು ಹೊರಕ್ಕೆ ಬಿಡುತ್ತಿದ್ದಾರೆ. ವಿರೋಧ ಪಕ್ಷಗಳು ಅದಕ್ಕೆ ಉತ್ತರ ಕೊಡುತ್ತಾ ಸಾಗುತ್ತಿವೆ. ಎಲ್ಲ ರಾಜಕೀಯ ಪಕ್ಷಗಳೂ ಜನರಿಂದ, ಜನರ ಸಮಸ್ಯೆಗಳಿಂದ ದೂರವಾಗುತ್ತಿವೆ ಎಂದು ಅನ್ನಿಸುತ್ತಿದೆ. ಹಿಜಾಬ್, ಆಜಾನ್, ಮುಸ್ಲಿಂ ವ್ಯಾಪಾರಿಗಳಿಗೆ ವಿರೋಧ ಹೀಗೆ ಹಲವಾರು ವಿಷಯಗಳು ಈಗಾಗಲೇ ಮುನ್ನೆಲೆಗೆ ಬಂದು ಹೋಗಿವೆ. ‘ಇಂತಹ 64 ವಿಷಯಗಳು ನಮ್ಮ ಬುಟ್ಟಿಯಲ್ಲಿವೆ. ಒಂದೊಂದನ್ನೇ ಬಿಡುತ್ತೇವೆ’ ಎಂದು ಬಲಪಂಥೀಯ ನಾಯಕರು ಹೇಳುತ್ತಿದ್ದಾರೆ. ಜನರ ಮನಸ್ಸು ಕೆಡಿಸಲು ಬೇಕಾದ 64 ವಿಷಯಗಳು ಅವರ ಬಳಿ ಇವೆ. ಆದರೆ ಜನರ ನೂರಾರು ಸಮಸ್ಯೆಗಳಿಗೆ ಪರಿಹಾರದ ರಾಮಬಾಣ ಅವರಲ್ಲಿ ಇದ್ದಂತೆ ಕಾಣುತ್ತಿಲ್ಲ. ಜನರ ಸಮಸ್ಯೆ ಕೇಳುವವರೇ ದಿಕ್ಕಿಲ್ಲದಂತಾಗಿದೆ. ಈಗ ರಾಮಬಾಣವೇ ಸಮಸ್ಯೆಯಾಗಿ ಕುಳಿತಿದೆ.

ವಿಧಾನಸಭೆ ಚುನಾವಣೆ ಬಾಗಿಲು ಬಡಿಯುತ್ತಿದೆ. ಈ ಸಂದರ್ಭದಲ್ಲಿ ಜನೋಪಯೋಗಿ ವಿಷಯಗಳ ಬಗ್ಗೆ ಚರ್ಚೆಯಾಗಬೇಕು. ಆದರೆ ಅವು ಚರ್ಚೆಗೆ ಒಳಪಡು ತ್ತಿಲ್ಲ ಎನ್ನುವುದು ವಿಷಾದನೀಯ. ಈ ದೇಶದ ದುರಂತ ಕೂಡ ಹೌದು. ನೀರಾವರಿ ಯೋಜನೆಗಳ ಬಗ್ಗೆಯಾಗಲೀ ಲೋಕೋಪಯೋಗಿ ಇಲಾಖೆ ನಡೆಸುವ ಕಾಮಗಾರಿಗಳ ಬಗ್ಗೆಯಾಗಲೀ ಪಂಚಾಯತ್‌ರಾಜ್ ಇಲಾಖೆಯ ಕಾರ್ಯದಕ್ಷತೆ ಬಗ್ಗೆಯಾಗಲೀ ಲೋಕಸೇವಾ ಆಯೋಗದ ಸುಧಾರಣೆ ಬಗ್ಗೆಯಾಗಲೀ ಶಿಕ್ಷಣದ ಸುಧಾರಣೆ ಕುರಿತಾಗಲೀ ಆರ್ಥಿಕ ಪರಿಸ್ಥಿತಿ ಸುಧಾರಣೆ ಬಗ್ಗೆಯಾಗಲೀ ಯಾವುದೇ ರಾಜಕೀಯ ಪಕ್ಷದ ಮುಖಂಡರೂ ಮಾತನಾಡುತ್ತಿಲ್ಲ. ಆಕಸ್ಮಿಕವಾಗಿ ಯಾರಾದರೂ ಮಾತನಾಡಿದರೂ ಅದನ್ನು ಕೇಳಿಸಿಕೊಳ್ಳುವಷ್ಟು ವ್ಯವಧಾನ ಮತದಾರರಿಗೂ ಇಲ್ಲ.

ವಿರೋಧ ಪಕ್ಷಗಳ ಮುಖಂಡರಾದರೂ ತಮಗೆ ಅಧಿಕಾರವನ್ನು ಕೊಟ್ಟರೆ ಈ ರಾಜ್ಯವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತೇವೆ ಎಂಬುದರ ಬಗ್ಗೆ ನಿಖರವಾಗಿ ಹೇಳಬೇಕು. ಜನರ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತೇವೆ ಎಂಬ ಬಗ್ಗೆ ಮುನ್ನೋಟವನ್ನು ಪ್ರಕಟಿಸಬೇಕು. ಜನರ ಸಮಸ್ಯೆ ಪರಿಹಾರಕ್ಕೆ ಪೂರಕವಾದ ಹೋರಾಟವನ್ನಾದರೂ ರೂಪಿಸಬೇಕು. ಅವರು ಅದನ್ನೂ ಮಾಡುತ್ತಿಲ್ಲ. ಆಡಳಿತ ಪಕ್ಷಕ್ಕೆ ಕೇಸರಿಯ ಮಂಕುಬೂದಿಯೇ ಮತ್ತೆ ತಮ್ಮನ್ನು ಅಧಿಕಾರದ ಗದ್ದುಗೆಗೆ ಏರಿಸಬಹುದು ಎಂಬ ಭ್ರಮೆ ಇದ್ದಂತೆ ಕಾಣುತ್ತಿದೆ.

ಗದ್ದುಗೆ ಏರುವ ಗುದ್ದಾಟದಲ್ಲಿ ಮತದಾರರು ಮಾತ್ರ ಬೀದಿಗೆ ಬಿದ್ದಿದ್ದಾರೆ. ಅವರನ್ನು ಮೇಲೆತ್ತುವ ಕೈಗಳು ಕಾಣುತ್ತಿಲ್ಲ. ರಾಜಕಾರಣಿಗಳಿಗೆ ಅಧಿಕಾರದ ಚಿಂತೆ. ಜನರಿಗೆ ಹೊಟ್ಟೆಪಾಡಿನ ಚಿಂತೆ. ರಾಜಕಾರಣಿಗಳು ತಮ್ಮ ಉದ್ಧಾರಕ್ಕಾಗಿ ದಾಳ ಉರುಳಿಸುತ್ತಿದ್ದಾರೆ. ಮತದಾರರಿಗೂ ಮಾಯೆಯ ಮುಸುಕು ಹಾಕುತ್ತಿದ್ದಾರೆ. ಅವರಿಗೆ ಅವರ ಚಿಂತೆ ಬಿಟ್ಟರೆ ಬೇರೆಯವರ ಚಿಂತೆ ಇಲ್ಲ. ಮತದಾರರು ಇದನ್ನು ಬೇಗ ಅರ್ಥ ಮಾಡಿಕೊಂಡರೆ ರಾಜ್ಯಕ್ಕೂ ಒಳಿತು, ಮತದಾರರಿಗೂ ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT