ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನ ಕಳೆಗುಂದಿದ ಮೇಳ

Last Updated 25 ಮೇ 2018, 19:46 IST
ಅಕ್ಷರ ಗಾತ್ರ

ಬೆಂಗಳೂರು: ನೂರಾರು ಬಗೆಯ ಮಾವು; ಹತ್ತಾರು ಬಗೆಯ ಹಲಸು ಸಸ್ಯ ಕಾಶಿ ಲಾಲ್‌ಬಾಗ್‌ನೊಳಗೆ ನಳನಳಿಸುತ್ತಿದ್ದರೂ ಹಣ್ಣು ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಅತ್ತ ಸುಳಿಯದಿದ್ದರಿಂದ ಮೊದಲ ದಿನದ ಮಾವು– ಹಲಸಿನ ಮೇಳ ಕಳೆಗುಂದಿತ್ತು.

ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವತಿಯಿಂದ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ‘ತರಾವರಿ ಮಾವು, ಹಲಸಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ’ಕ್ಕೆ ಬಿಬಿಎಂಪಿ ಆಯುಕ್ತ ಮಹೇಶ್ವರ ರಾವ್ ಶುಕ್ರವಾರ ಚಾಲನೆ ನೀಡಿದರು. 

ಹಿಂದಿನ ವರ್ಷಗಳಲ್ಲಿ ಮೊದಲ ದಿನವೇ ಜನರಿಂದ ತುಂಬಿರುತ್ತಿದ್ದ ಮೇಳ, ಈ ಬಾರಿ ಬಣಗುಡುತ್ತಿತ್ತು. ಮಳೆ, ನಿಫಾ ಭೀತಿಯಿಂದ ಜನ ಕಡಿಮೆ
ಯಾಗಿರಬಹುದು ಎಂಬ ಅಭಿಪ್ರಾಯ ವನ್ನು ಮಾರಾಟಗಾರರು ವ್ಯಕ್ತಪಡಿಸಿದರು. ವಾರಾಂತ್ಯದಲ್ಲಿ ಹೆಚ್ಚು ಜನ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದರು.

ಮೇಳಕ್ಕೆ ಬಂದ ಬಹುತೇಕರು ಹಣ್ಣು ಖರೀದಿಸಿದ್ದರಿಂದ ಮಾರಾಟಗಾರರು ತುಸು ನೆಮ್ಮದಿಯಾಗಿದ್ದರು. ರಸಪುರಿ, ಕಾಲಾಪಾಡ್, ದಶೇರಿ, ಬಾದಾಮಿ, ಅಮ್ರಪಾಲಿ, ಮಲಗೋವಾ ಸೇರಿದಂತೆ ಅನೇಕ ತಳಿಯ ಹಣ್ಣುಗಳು ಜನರ ಬಾಯಲ್ಲಿ ನೀರೂರಿಸುತ್ತಿದ್ದವು. ಕಣ್ಣೆದುರಿರುವ ರಾಶಿ ರಾಶಿ ಹಣ್ಣುಗಳ ಪೈಕಿ ಯಾವುದನ್ನು ಖರೀದಿಸಬೇಕು, ಯಾವುದನ್ನು ಬಿಡಬೇಕು ಎಂಬ ಗೊಂದಲದಲ್ಲಿ ಗ್ರಾಹಕರು ಮಳಿಗೆಯಿಂದ ಮಳಿಗೆಗೆ ಸುತ್ತಾಡುತ್ತಿದ್ದರು.

‘ಈ ಬಾರಿ ಫಸಲು ಕಡಿಮೆಯಾಗಿದೆ. ಎಕರೆಗೆ 8ರಿಂದ 10 ಟನ್‌ ಸಿಗಬೇಕಿತ್ತು. ಕೇವಲ 3ರಿಂದ 5 ಟನ್‌ ಬಂದಿದೆ. ಹೂ ಬಿಡುವ ಸಮಯದಲ್ಲಿ ಮಳೆಯಾಗಿದ್ದರಿಂದ ಹೊಸ ಚಿಗುರು ಮೂಡಿತು. ಇದರಿಂದ ಫಸಲು ಕಡಿಮೆಯಾಯಿತು’ ಎಂದು ಬಂಡಪಲ್ಲಿ ರೈತ ಬಿ.ಎಸ್‌. ಕೆಂಪಾರೆಡ್ಡಿ ಬೇಸರ ವ್ಯಕ್ತಪಡಿಸಿದರು.

‘ಮಾವು ಮೇಳದಿಂದಾಗಿ ಕೊಂಚ ನೆಮ್ಮದಿಯಾಗಿದೆ. ಪ್ರತಿ ವರ್ಷ ಇಲ್ಲಿ ಬಂದು ಮಾರಾಟ ಮಾಡುತ್ತೇವೆ. ನಾವೇ ನೇರವಾಗಿ ಜನರಿಗೆ ಮಾರುವುದರಿಂದ ಲಾಭ ನಮ್ಮಲ್ಲಿಯೇ ಉಳಿಯುತ್ತದೆ’ ಎಂದು ಅವರು ಹೇಳಿದರು.

ತೋಟಗಾರಿಕಾ ಇಲಾಖೆ ನಿರ್ದೇಶಕ ವೈ.ಎಸ್.ಪಾಟೀಲ, ‘ನಿಫಾ ವೈರಸ್‌ ಭೀತಿ ಮೇಳಕ್ಕೆ ತಟ್ಟುವುದಿಲ್ಲ. ಜಿಲ್ಲಾಧಿಕಾರಿಗಳು ನಗರದಲ್ಲಿ ನಿಫಾ ವೈರಸ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಮಾವು ಇಳುವರಿ ಹೆಚ್ಚಿರುವ ಕೋಲಾರ ಭಾಗಗಳಿಗೆ ಈ ವೈರಾಣು ಹರಡಿಲ್ಲ. ಇದರಿಂದ ಯಾವುದೇ ಆತಂಕವಿಲ್ಲದೇ ಮಾವು ಖರೀದಿಸಬಹುದು’ ಎಂದರು.

‘ಕೊಳೆತ, ಹಾಳಾದ ಹಾಗೂ ಪಕ್ಷಿಗಳು ತಿಂದಿರುವ ಹಣ್ಣುಗಳನ್ನು ಮಾರಾಟ ಮಾಡದಂತೆ ಬೆಳೆಗಾರರು ಹಾಗು ಮಾರಾಟಗಾರಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದೇವೆ. ಈ ಬಾರಿ ಕಬ್ಬನ್‌ ಉದ್ಯಾನ ಹಾಗೂ ಮೆಟ್ರೊ ನಿಲ್ದಾಣಗಳಲ್ಲಿ ಮಾವು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದರು.

‘ಮೇಳಕ್ಕೆ ಪ್ರತಿ ವರ್ಷ ಭೇಟಿ ನೀಡುತ್ತೇನೆ. ಅಗ್ಗದ ದರದಲ್ಲಿ, ಗುಣಮಟ್ಟದ ಹಣ್ಣುಗಳು ದೊರೆಯುತ್ತವೆ’ ಎಂದು ಬನಶಂಕರಿ ಬಡಾವಣೆಯ ಸಹನಾ ಅನುಭವ ಹಂಚಿಕೊಂಡರು.

ಮಾವು–ಹಲಸು ಮೇಳ

ಸ್ಥಳ: ಲಾಲ್‌ಬಾಗ್‌ ಉದ್ಯಾನ

ಮೇಳದ ಅವಧಿ: ಜೂನ್ 15ರವರೆಗೆ

ಯಾವ ಹಣ್ಣು; ಕೆ.ಜಿಗೆ ಎಷ್ಟು ದರ?

ಬಾದಾಮಿ; ₹ 70

ರಸಪುರಿ; ₹ 60

ಮಲ್ಲಿಕಾ; ₹ 80

ಸೇಂದೂರ;   45

ಸಕ್ಕರೆಗುತ್ತಿ; ₹ 90

ಮಲಗೋವಾ; ₹ 110

ಬಂಗಲಪಲ್ಲಿ; ₹ 56

ದಶೇರಿ; ₹ 100

ತೋತಾಪುರಿ; ₹ 27

ಕಾಲಾಪುಟ್; ₹ 85

ಆಮ್ರಪಾಲಿ; ₹ 68

ಕೇಸರ್; ₹ 50

ಇಳುವರಿ ಕಡಿಮೆ, ರಫ್ತು ಕಡಿಮೆ

‘ಈ ಬಾರಿ ಮಾವು ಶೇ 60ರಷ್ಟು ಇಳುವರಿ ಮಾತ್ರ ಬಂದಿದೆ. ರಫ್ತಿನ ಮೇಲೂ ಇದು ಪರಿಣಾಮ ಬೀರಿದೆ. ಕಳೆದ ಬಾರಿ ಸುಮಾರು 1 ಸಾವಿರ ಟನ್‌ ಮಾವು ಮಾರಾಟ ಮಾಡಲಾಗಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಿನ ಪ್ರಮಾಣದ ಮಾವು ಮಾರಾಟ ಮಾಡುವ ಗುರಿ ಹೊಂದಿದ್ದೇವೆ’ ಎಂದು ಆಯುಕ್ತರು ವಿಶ್ವಾಸ ವ್ಯಕ್ತ
ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT