ಬಾಲಸನ್ಯಾಸತ್ವಕ್ಕೆ ತಲಾಖ್ ಹೇಳೋಣವಾಗಲಿ

7

ಬಾಲಸನ್ಯಾಸತ್ವಕ್ಕೆ ತಲಾಖ್ ಹೇಳೋಣವಾಗಲಿ

Published:
Updated:

‘ಕಾಮ’ ಎಂಬುದೊಂದು ಬೆಂಕಿ. ನಿಗಿನಿಗಿ ಕೆಂಡ ಅದು. ಹತ್ತಿಕ್ಕಿದಷ್ಟೂ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚು. ಅದೊಂದು ಅಗ್ನಿ ಪರ್ವತ. ಯಾವಾಗ ಬೇಕಾದರೂ ಧುಮ್ಮಿಕ್ಕಬಹುದು. ಅದನ್ನು ತಡೆಯುವುದು ನಿಸರ್ಗಕ್ಕೆ ವಿರೋಧವಾದುದು.

ಶಿರೂರು ಸ್ವಾಮೀಜಿ ನಿಧನದ ನಂತರ ಸಾಕಷ್ಟು ಪ್ರಶ್ನೆಗಳು ಉದ್ಭವವಾಗಿವೆ. ಅದರಲ್ಲಿ ಮೊದಲನೆಯದು, ‘ಬಾಲ ಸನ್ಯಾಸ ಪದ್ಧತಿಯನ್ನು ಉಳಿಸಿಕೊಳ್ಳಬೇಕಾ’ ಎನ್ನುವುದು. ಶಿರೂರು ಸ್ವಾಮೀಜಿ ಸನ್ಯಾಸ ಸ್ವೀಕರಿಸಿದ್ದು ಅವರ ಎಂಟನೇ ವಯಸ್ಸಿನಲ್ಲಿ. ಈ ವಯಸ್ಸು ಅಧ್ಯಾತ್ಮದ ಚಿಂತನೆ ಮಾಡುವ ವಯಸ್ಸಲ್ಲ. ಗೋಲಿ, ಚಿನ್ನಿದಾಂಡು ಆಡಿಕೊಂಡು, ಅಮ್ಮ ಅಪ್ಪ ಕೊಟ್ಟ ಪೆಪ್ಪರಮೆಂಟ್ ತಿಂದುಕೊಂಡು ಹಾಯಾಗಿರುವ ಕಾಲ. ಸನ್ಯಾಸ, ದೀಕ್ಷೆ, ಮಂತ್ರ, ಸಾಧನೆ ಮುಂತಾದ ಯಾವುದೂ ಅರ್ಥವಾಗದ ಮುಗ್ಧ ವಯಸ್ಸು ಅದು.

ಸಮುದಾಯದ ಹಿತಕ್ಕೆಂದೋ, ಮಠದ ಅನಿವಾರ್ಯಕ್ಕೆಂದೋ, ಅಪ್ಪ ಅಮ್ಮನ ಒತ್ತಡಕ್ಕೆಂದೋ... ಸಣ್ಣ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆಯನ್ನು ಕೊಡಿಸಿಬಿಟ್ಟರೆ ಅದನ್ನು ಕೂಡ ‘ಗುಂಪು ಹಿಂಸೆ’ ಎಂದೇ ಕರೆಯಬಹುದು. ಅದಕ್ಕಿಂತ ಇದು ಭಿನ್ನವೂ ಅಲ್ಲ. ಕಡಿಮೆ ಅಪರಾಧವೂ ಅಲ್ಲ.

ಬಾಲ್ಯದಲ್ಲಿ ಎಲ್ಲವೂ ಚೆಂದ. ಕಾವಿ ವಸ್ತ್ರ ಧರಿಸಿ ಪೂಜೆ ಮಾಡಿ ಗೋಡಂಬಿ, ಸೇಬು ಹಣ್ಣು ತಿಂದು ನಲಿಯಬಹುದು. ಆದರೆ ನಸುಕಿನಲ್ಲಿಯೇ ಎದ್ದು ವಿವಿಧ ಧಾರ್ಮಿಕ ವಿಧಿಗಳಲ್ಲಿ ಬೇಯುವುದು ಕಷ್ಟವಾಗಬಹುದು. ಇದಕ್ಕಿಂತ ಹೆಚ್ಚಿನದು ಎಂದರೆ ಮುಂದೆ ಯೌವನಕ್ಕೆ ಕಾಲಿಟ್ಟ ಮೇಲೆ ಒಂದೊಂದೇ ಅರ್ಥವಾಗುತ್ತದೆ. ಬರೀ ಕಾವಿ ವಸ್ತ್ರ ಆಗ ಸಾಕು ಎನ್ನಿಸುವುದಿಲ್ಲ. ಬೋಳು ತಲೆ ಹಿತ ಎನ್ನಿಸುವುದಿಲ್ಲ. ಬಣ್ಣ ಬಣ್ಣದ ಕಾಮನಬಿಲ್ಲು ಮನದಲ್ಲಿ ಮೂಡುವ ಸಮಯದಲ್ಲಿ ಕೇಸರಿ ಬಣ್ಣದ ಬಟ್ಟೆ ತೊಟ್ಟು ದಿನಕ್ಕೆ 
ಮೂರು ಬಾರಿಯೋ ಆರು ಬಾರಿಯೋ ಸಂಧ್ಯಾವಂದನೆ ಮಾಡುತ್ತಾ ಕಾಲ ಕಳೆಯುವ ವಯಸ್ಸಲ್ಲ ಅದು.

ಯೌವನಕ್ಕೆ ಬಂದಾಗಲೇ ತಾನು ಎಂತಹ ಬಲೆಗೆ ಬಿದ್ದಿದ್ದೇನೆ ಎನ್ನುವುದು ಗೊತ್ತಾಗುವುದು. ಆಗಲೇ ಸನ್ಯಾಸ ಧರ್ಮವನ್ನು ಪಾಲಿಸುವುದು ಕಷ್ಟ. ಧರ್ಮಕ್ಕಾಗಿ, ಸಮುದಾಯಕ್ಕಾಗಿ ತಾನು ಕಷ್ಟ ಅನುಭವಿಸಬೇಕು ಎನ್ನುವ ಮಾತುಗಳು ಆಗ ಕಿವಿಗೆ ಹಿತವಾಗುವುದಿಲ್ಲ. ಮನಸ್ಸಿಗೆ ಒಪ್ಪುವುದೂ ಇಲ್ಲ.

ಬಾಲ ಸನ್ಯಾಸಿಗೆ ಬಾಲ್ಯದಲ್ಲಿ ಹೆತ್ತಮ್ಮನನ್ನೂ ಅಪ್ಪುವ ಸ್ವಾತಂತ್ರ್ಯ ಇಲ್ಲ. ಅಮ್ಮನ ಅಪ್ಪುಗೆಯನ್ನು ಬಲವಂತದಿಂದ ತಡೆ ಹಿಡಿಯಬಹುದು. ಆದರೆ ಕಾಮ ಕೊತ ಕೊತ ಕುದಿಯುವಾಗ ಸಂಗಾತಿಯ ಅಪ್ಪುಗೆಯ ಬಯಕೆಯನ್ನು ಬಲವಂತದಿಂದ ತಡೆದುಕೊಳ್ಳಬೇಕು ಎನ್ನುವುದು ಅಷ್ಟು ಸುಲಭವಲ್ಲ. ಮನಸ್ಸು ಮೆಣಸಿನ ಕಾಯಿ ತಿನ್ನುತ್ತದೆ. ಮಂತ್ರಕ್ಕೆ ಮಾವಿನಕಾಯಿ ಹೇಗೆ ಉದುರುವುದಿಲ್ಲವೋ ಹಾಗೆ ಎಲ್ಲರಿಗೂ ಮಂತ್ರಕ್ಕೆ ಕಾಮವೂ ಅಳಿಯುವುದಿಲ್ಲ.

ಮನುಷ್ಯನೊಬ್ಬ ಮಠದ ಪೀಠದ ಮೇಲೆ ಕುಳಿತಿರಲಿ, ಅರಮನೆಯ ಪೀಠದ ಮೇಲೆ ಕುಳಿತಿರಲಿ ಆತ ಮನುಷ್ಯನೇ ಆಗಿರುತ್ತಾನೆ. ಮನುಷ್ಯ ಸಹಜ ಎಲ್ಲ ಆಸೆ ಆಕಾಂಕ್ಷೆಗಳೂ ಆತನಿಗೆ ಇದ್ದೇ ಇರುತ್ತವೆ. ಕಾಮನೆಗಳು ಮನದಲ್ಲಿಯೇ ಮನೆ ಮಾಡಿರುತ್ತವೆ. ಅದೆಲ್ಲವನ್ನೂ ತೊಡೆದಿದ್ದೇನೆ ಎನ್ನುವುದು ಬಹುತೇಕರ ಬಾಳಿನಲ್ಲಿ ಸೋಗಲಾಡಿತನವೇ ಆಗಿರುತ್ತದೆ.

‘ಈಗ ಬಾಲ ಸನ್ಯಾಸ ಪದ್ಧತಿ ಇಲ್ಲ’ ಎಂದು ಪೇಜಾವರ ಸ್ವಾಮೀಜಿ ಹೇಳಿದ್ದಾರೆ. ಹೌದು, ಅದು ಕಡಿಮೆಯಾಗಿದೆ. ಶಂಕರಾಚಾರ್ಯರೋ, ಮಧ್ವಾಚಾರ್ಯರೋ ಮಠಗಳನ್ನು ಸ್ಥಾಪಿಸುವ ಕಾಲದಲ್ಲಿ ಆಗಿನ ಪರಿಸ್ಥಿತಿ ಬೇರೆಯೇ ಇತ್ತು. ಆಗ ಬಾಲ್ಯ ವಿವಾಹ ಪದ್ಧತಿಯೂ ಜಾರಿಯಲ್ಲಿ ಇತ್ತು. ಈಗ ಬಾಲ್ಯವಿವಾಹ ನಿಷೇಧಿಸಲಾಗಿದೆ. ಬಾಲ ಕಾರ್ಮಿಕ ಪದ್ಧತಿಯೂ ನಿಷೇಧವಾಗಿದೆ. ಬಾಲ ಸನ್ಯಾಸ ಪದ್ಧತಿಯನ್ನೂ ನಿಷೇಧ ಮಾಡುವ ಕಾಲ ಈಗ ಬಂದಿದೆ. ತ್ರಿವಳಿ ತಲಾಖ್ ನಿಷೇಧ ಮಾಡಿದ ಹಾಗೆಯೇ ಬಾಲ ಸನ್ಯಾಸ ಪದ್ಧತಿಯನ್ನೂ ನಿಷೇಧ ಮಾಡುವುದಕ್ಕೆ ಈಗ ಸಕಾಲ.

ಶಿರೂರು ಸ್ವಾಮೀಜಿ ವಿಷಯದಲ್ಲಿಯೂ ಹೀಗೆಯೇ ಆಯಿತು. ಬಾಲ್ಯದಲ್ಲಿಯೇ ಸನ್ಯಾಸ ಸ್ವೀಕರಿಸುವ ಅನಿವಾರ್ಯತೆಯ ಸುಳಿಯಲ್ಲಿ ಸಿಲುಕಿದರೂ ನಂತರದ ದಿನಗಳಲ್ಲಿ ಸನ್ಯಾಸ ಧರ್ಮವನ್ನು ಪಾಲಿಸುವುದು ಅವರಿಂದ ಸಾಧ್ಯವಾಗಲಿಲ್ಲ. ಹೆಣ್ಣು ಮತ್ತು ಮದ್ಯದ ದಾಸರಾದರು ಅವರು ಎಂಬ ಆರೋಪವೂ ಇದೆ. ಪೀಠದಲ್ಲಿ ಕುಳಿತು ಇವನ್ನೆಲ್ಲಾ ಮಾಡಿದ್ದು ತಪ್ಪು. ಅದರಲ್ಲಿ ಸಂಶಯ ಇಲ್ಲ. ಆದರೆ ಅವರನ್ನು ಅಂತಹ ಇಕ್ಕಟ್ಟಿಗೆ ಸಿಲುಕಿಸಿದ ಸಮಾಜ ಕೂಡ ತನ್ನ ತಪ್ಪನ್ನು ಒಪ್ಪಿಕೊಳ್ಳಲೇ ಬೇಕು.

ಪೀಠವನ್ನು ಬಿಡುವುದೂ ಕೂಡ ಅಷ್ಟೊಂದು ಸುಲಭವಲ್ಲ. ವಿದ್ಯಾಭೂಷಣರು ಅಂತಹ ಧೈರ್ಯ ಮಾಡಿದರು. ನಿಜವಾದ ಅರ್ಥದಲ್ಲಿ ಅವರು ವೀರ ಸನ್ಯಾಸಿಯಾದರು. ಅಷ್ಟು ಮನೋಬಲ ಎಲ್ಲ ಸ್ವಾಮೀಜಿಗಳಿಗೂ ಇರುವುದಿಲ್ಲ. ಅದಕ್ಕೆ ಪೀಠದ ಅಡಿಯಲ್ಲಿ ಗುಸುಗುಸು ಪಿಸಪಿಸ ಎಲ್ಲಾ ನಡೆಯುತ್ತದೆ.

ಹಿಂದೂ ಸಂಸ್ಕೃತಿಯಲ್ಲಿ ಮನುಷ್ಯನ ಬದುಕಿಗೆ ನಾಲ್ಕು ಅವಸ್ಥೆಗಳನ್ನು ಗುರುತಿಸಲಾಗಿದೆ. ಬಾಲ್ಯ, ಯೌವನ, ಗೃಹಸ್ಥಾಶ್ರಮ ಮತ್ತು ವಾನಪ್ರಸ್ಥ. ಈ ನಾಲ್ಕೂ ಹಂತಗಳನ್ನು ಯಶಸ್ವಿಯಾಗಿ ಸಾಗಿಸಬೇಕು. ಗೃಹಸ್ಥಾಶ್ರಮದ ನಂತರವೇ ವಾನಪ್ರಸ್ಥ ಬಂದರೆ ಸರಿ. ಆಗ ಅವರಿಗೆ ಪೀಠದ ಮೇಲೆ ಕುಳಿತು ಸಮಾಜದ ಎಲ್ಲ ವರ್ಗದವರಿಗೂ ಆಶೀರ್ವಚನ ನೀಡುವ ಧೈರ್ಯವೂ ಇರುತ್ತದೆ. ಯೋಗ್ಯತೆಯೂ ಇರುತ್ತದೆ. ಸಂಸಾರ ಸಾಗರದ ಅಲೆಗಳನ್ನೇ ಅರಿಯದವನು ಸಂಸಾರಿಗಳಿಗೆ ಹಿತವಚನ ಹೇಳುವುದು ಹೇಗೆ?

ಮಂತ್ರಾಲಯದ ಮಠದಲ್ಲಿ ಇಂತಹದೇ ಪದ್ಧತಿ ಇದೆ. ಅಲ್ಲಿ ಬಾಲ ಸನ್ಯಾಸದ ಪದ್ಧತಿ ಇಲ್ಲ. ಗೃಹಸ್ಥಾಶ್ರಮ ದಾಟಿದವರೇ ಅಲ್ಲಿ ಪೀಠಾಧಿಪತಿಯಾಗುತ್ತಾರೆ. ರಾಮಕೃಷ್ಣಾಶ್ರಮದಲ್ಲಿಯೂ ಎಲ್ಲರಿಗೂ ಸನ್ಯಾಸ ದೀಕ್ಷೆ ನೀಡುವುದಿಲ್ಲ. ಸಂಸಾರದಲ್ಲಿ ಆಸಕ್ತಿ ಇದ್ದರೆ ಅದಕ್ಕೆ ಅಲ್ಲಿ ಅವಕಾಶವಿದೆ. ಇಸ್ಕಾನ್ ನಲ್ಲಿ ಕೂಡ ಇಂತಹ ವ್ಯವಸ್ಥೆ ಇದೆ. ಸಂಸಾರಿಗಳಾಗಿಯೂ ಉತ್ತಮ ಸಾಧನೆ ಮಾಡಬಹುದು. ನಮ್ಮ ಪುರಾಣಗಳಲ್ಲಿ ಬರುವ ಬಹುತೇಕ ಎಲ್ಲ ಮಹರ್ಷಿಗಳೂ ಸಂಸಾರಿಗಳೇ ಆಗಿದ್ದರು. ಅದು ವಾಲ್ಮೀಕಿಯಿಂದ ಹಿಡಿದು ವಿಶ್ವಾಮಿತ್ರನವರೆಗೆ. ಸಪ್ತ ಮಹರ್ಷಿಗಳವರೆಗೆ ಎಲ್ಲರೂ ಸಂಸಾರಿಗಳೇ ಆಗಿದ್ದರು. ದೇವರನ್ನಂತೂ ಕೇಳುವುದೇ ಬೇಡ. ಎಲ್ಲ ದೇವರುಗಳೂ ಸಂಸಾರಿಗಳೇ. ಉಡುಪಿಯಲ್ಲಿ ನಿತ್ಯ ಅರ್ಚನೆಗೆ ಒಳಗಾಗುವ ಶ್ರೀಕೃಷ್ಣನಂತೂ ಹದಿನಾರು ಸಾವಿರಕ್ಕೂ ಹೆಚ್ಚು ಹೆಂಡತಿಯರನ್ನು ಹೊಂದಿದವ. ಅಂತಹ ಶ್ರೀಕೃಷ್ಣನನ್ನು ಆರಾಧನೆ ಮಾಡುವ ವ್ಯಕ್ತಿಗೆ ಒಂದೂ ಮದುವೆ ಇಲ್ಲ ಎಂದರೆ ಹೇಗೆ?

ಕಾಲಕ್ಕೆ ತಕ್ಕಂತೆ ಮಠಗಳೂ ಬದಲಾಗಬೇಕಿದೆ. ಅಧ್ಯಾತ್ಮ ಸಾಧನೆ ಎನ್ನುವುದು ಅವರವರ ವೈಯಕ್ತಿಕ ಆಯ್ಕೆಯಾಗಬೇಕು. ಅಲ್ಲಿ ಬಲವಂತ ಇರಬಾರದು. ವ್ಯವಸ್ಥೆಯಿಂದ ಹೊರಕ್ಕೆ ಬರುವುದಕ್ಕೂ ಅವಕಾಶ ಇರಬೇಕು. ಇಲ್ಲವಾದರೆ ಅನೈತಿಕ ಚಟುವಟಿಕೆಗಳು ಮರೆಯಲ್ಲಿಯೇ ನಡೆಯುತ್ತಿರುತ್ತವೆ. ಸಿಕ್ಕಿಬೀಳಬಾರದು ಎಂದು ಸರ್ಕಸ್ಸುಗಳೂ ನಡೆಯುತ್ತವೆ.

‘ನಾನು ದುಡಿಯುತ್ತೇನೆ. ನಾನು ತಿನ್ನುತ್ತೇನೆ. ನನ್ನ ಕೈಯಲ್ಲಿ ಯಾರಿಗಾದರೂ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದರೆ ಮಾಡುತ್ತೇನೆ. ಇಲ್ಲವಾದರೆ ಅನ್ಯಾಯವಂತೂ ಮಾಡುವುದಿಲ್ಲ’ ಎಂದುಕೊಂಡವನಿಗೆ ಸ್ವಾಮಿಯೂ ಅಗತ್ಯವಿಲ್ಲ, ಮಠವೂ ಅಗತ್ಯವಿಲ್ಲ. ಸಂಕುಚಿತ ಮನೋಭಾವವನ್ನು ಬಿಟ್ಟು ಎಲ್ಲ ವಿಷಯಗಳಲ್ಲಿಯೂ ವಿಶಾಲ ಮನೋಭಾವವನ್ನು ಅಳವಡಿಸಿಕೊಳ್ಳದೇ ಹೋದರೆ ಬಾಲ್ಯ ಸನ್ಯಾಸವನ್ನು ಮಾತ್ರ ಅಲ್ಲ ಮಠಗಳನ್ನೂ ನಿಷೇಧಿಸುವ ಕಾಲ ಬರಬಹುದು.

ಊಟ, ನಿದ್ದೆ, ಮೈಥುನಗಳು ನಿಸರ್ಗ ಸಹಜ ಗುಣಗಳು. ಇದು ಎಲ್ಲ ಪ್ರಾಣಿಗಳಿಗೂ ಅನ್ವಯ. ಇತರ ಎಲ್ಲ ಪ್ರಾಣಿಗಳಿಗೂ ಇವೆಲ್ಲಕ್ಕೂ ಒಂದು ನಿರ್ದಿಷ್ಟ ಸಮಯ ಇದೆ. ಆದರೆ ಮನುಷ್ಯನಿಗೆ ಯಾವುದಕ್ಕೂ ನಿರ್ದಿಷ್ಟ ಸಮಯವೆಂಬುದು ಇಲ್ಲ. ಎಲ್ಲವೂ 24/7 ಮತ್ತು 365 ದಿನ. ಅದು ಊಟವಾದರೂ ಸೈ, ನಿದ್ದೆಯಾದರೂ ಸೈ. ಮೈಥುನವಾದರೂ ಸೈ. ಕರ್ಮ, ಕರ್ಮ.

ಬರಹ ಇಷ್ಟವಾಯಿತೆ?

 • 57

  Happy
 • 4

  Amused
 • 0

  Sad
 • 2

  Frustrated
 • 5

  Angry

Comments:

0 comments

Write the first review for this !