ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನ: ಮಳೆ ಬಂದು ಬಣ್ಣ ಬಯಲಾಯ್ತು!

ತನುವ ಕೊಟ್ಟು ಗುರುವನೊಲಿಸಬೇಕು ಎಂದರು ಅವರು; ಧನ ಕೊಟ್ಟವರಿಗೆ ಮನಸೋತರೇ ಇವರು?
Last Updated 30 ಆಗಸ್ಟ್ 2021, 19:45 IST
ಅಕ್ಷರ ಗಾತ್ರ
ADVERTISEMENT

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರು ಕೆಲವು ಉತ್ತಮ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಹೋದಲ್ಲೆಲ್ಲಾ ಗೌರವ ವಂದನೆ ನೀಡುವ ಪದ್ಧತಿಗೆ ತಿಲಾಂಜಲಿ ನೀಡಿದ್ದಾರೆ. ಮುಖ್ಯಮಂತ್ರಿಗೆ ಇರುವ ಝೀರೊ ಟ್ರಾಫಿಕ್ ಸೌಲಭ್ಯ ಬೇಡ ಎಂದಿದ್ದಾರೆ. ಸಮಾರಂಭಗಳಲ್ಲಿ ಹೂವು ಹಣ್ಣು ಬದಲು ಪುಸ್ತಕಗಳನ್ನು ನೀಡಿ ಎಂಬ ಆದೇಶ ಹೊರಡಿಸಿದ್ದಾರೆ. ಹೈಕಮಾಂಡ್ ಅನುಮತಿ ಬೇಕಾಗದ, ಯಡಿಯೂರಪ್ಪ ಅವರು ಸಮ್ಮತಿ ಸೂಚಿಸುವ ಅಗತ್ಯವಿಲ್ಲದ ಕೆಲವು ಸಣ್ಣಪುಟ್ಟ ಕ್ರಮಗಳನ್ನು ಕೈಗೊಂಡು ತಮ್ಮತನ ಮೆರೆದಿದ್ದಾರೆ.

ಇಂತಹ ಸಣ್ಣ ಸಣ್ಣ ನಿರ್ಧಾರಗಳೇ ಅವರನ್ನು ಮೇಲಕ್ಕೇರಿಸಿವೆ. ಇನ್ನೂ ಕೆಲವು ಇಂತಹ ನಿರ್ಧಾರ ಕೈಗೊಳ್ಳುವ ಹುಮ್ಮಸ್ಸು ತೋರಿದ್ದಾರೆ. ಅದೇ ರೀತಿ ಅವರು ‘ಮುಖ್ಯಮಂತ್ರಿಯಾಗಿ ನಾನು ಯಾವುದೇ ಮಠಾಧೀಶರ ಕಾಲಿಗೆ ಬೀಳುವುದಿಲ್ಲ, ಬಹಿರಂಗವಾಗಿ ಯಾವ ದೇವಾಲಯಕ್ಕೂ ಹೋಗುವುದಿಲ್ಲ. ನನ್ನ ಸಂಪುಟದ ಸದಸ್ಯರೂ ಇದನ್ನು ಪಾಲಿಸಬೇಕು’ ಎಂಬ ಸೂಚನೆಯನ್ನು ನೀಡಿಬಿಟ್ಟರೆ, ಕನಕನ ನಾಡಿನಿಂದ ಬಂದ ಅವರು ನಿಜಾರ್ಥದಲ್ಲಿ ಬಸವಣ್ಣನ ಅನುಯಾಯಿಯಾಗುತ್ತಾರೆ.

ಮುಖ್ಯಮಂತ್ರಿಯಾದವರು ದೇವರ ದರ್ಶನಕ್ಕೆ ಹೋಗುವುದು, ಸ್ವಾಮೀಜಿಗಳಿಗೆ ಶಿರಸಾಷ್ಟಾಂಗ ನಮಸ್ಕರಿ ಸುವುದು ನಮಗೆ ಹೊಸದೇನಲ್ಲ. ಮುಖ್ಯಮಂತ್ರಿ ಮಾತ್ರ ಅಲ್ಲ, ಪ್ರಧಾನಿ, ರಾಷ್ಟ್ರಪತಿ ಹುದ್ದೆಯಲ್ಲಿರುವವರೂ ಮಠಾಧೀಶರ ಕಾಲಿಗೆ ಬೀಳುತ್ತಾರೆ. ಸಾಂವಿಧಾನಿಕ ಹುದ್ದೆಯಲ್ಲಿ ಇರುವ ವ್ಯಕ್ತಿಯೊಬ್ಬ ಹೀಗೆ ಮಾಡುವುದು ಸರಿಯಲ್ಲ ಎಂದು ಅವರಿಗೂ ಅನ್ನಿಸುವುದಿಲ್ಲ, ಇದು ತಪ್ಪು ಎಂದು ಪ್ರಜೆಗಳಿಗೂ ಅನ್ನಿಸುವುದಿಲ್ಲ. ಇದು ನಮ್ಮ ದುರಂತ.

ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರೂ ದೇವಾಲಯಗಳನ್ನು ಸುತ್ತುವ, ವಾರದಲ್ಲಿ ನಾಲ್ಕಾರು ಸ್ವಾಮೀಜಿಗಳಿಗೆ ನಮಿಸುವ ಕೆಲಸ ಮಾಡಿದ್ದರು. ಬಿ.ಎಸ್.ಯಡಿಯೂರಪ್ಪ ಅವರೂ ಈ ಕಾರ್ಯದಲ್ಲಿ ಹಿಂದೆ ಬೀಳಲಿಲ್ಲ. ಮಠಾಧಿಪತಿಗಳಿಗೆ ವಂದಿಸುವ ಕೆಲಸವನ್ನು ಬೊಮ್ಮಾಯಿ ಅವರೂ ಸಂಪ್ರದಾಯದಂತೆ ಮುಂದುವರಿ ಸಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರು, ವಿಧಾನ ಸೌಧದಲ್ಲಿ ಆಡಳಿತ ನಡೆಸುತ್ತಿರುವವರು ಮತಾಧೀಶರ ಕಾಲಿಗೆ ಬೀಳಬೇಕೇ ವಿನಾ ಮಠಾಧೀಶರ ಕಾಲಿಗೆ ಅಲ್ಲ. ಮುಖ್ಯಮಂತ್ರಿ, ಇತರ ಸಚಿವರು ಹೀಗೆ ಮಠಾಧೀಶರ ಕಾಲಿಗೆ ಬೀಳುತ್ತಾ ಸಾಗುತ್ತಿದ್ದರೆ ಮತಾಧೀಶರು ಮರೆತು ಹೋಗುತ್ತಾರೆ. ಮತಾಧೀಶರೂ ರಾಜಕಾರಣಿಗಳನ್ನು ಮರೆತುಬಿಡುವ ಅಪಾಯ ಕೂಡ ಇದೆ.

ಬಸವರಾಜ ಬೊಮ್ಮಾಯಿ ಅವರು ವೈಯಕ್ತಿಕವಾಗಿ ಯಾರ ಕಾಲಿಗೆ ಬಿದ್ದರೂ ತಪ್ಪಲ್ಲ. ಅದು ಅವರ ಆಯ್ಕೆ. ಅದನ್ನು ಯಾರೂ ಪ್ರಶ್ನೆ ಮಾಡಲಾಗದು. ಮಾಡಬಾರದು ಕೂಡ. ಆದರೆ ಮುಖ್ಯಮಂತ್ರಿಯಾಗಿ, ಸಂವಿಧಾನ ಬದ್ಧವಾಗಿ ರಾಜ್ಯದ ನೇತೃತ್ವ ವಹಿಸಿದ ವ್ಯಕ್ತಿ ಬಹಿರಂಗವಾಗಿ ಪದೇ ಪದೇ ಮಠಾಧೀಶರಿಗೆ ಶರಣಾಗುವುದು ತಪ್ಪು ಸಂದೇಶ ನೀಡುವುದಲ್ಲದೆ ಮುಂದಿನ ಪೀಳಿಗೆಗೆ, ಮುಖ್ಯಮಂತ್ರಿಯೊಬ್ಬ ಹೀಗೇ ಇರಬೇಕೇನೋ ಎನ್ನುವ ಭಾವನೆ ಬರುವುದಕ್ಕೂ ಕಾರಣವಾಗಬಹುದು. ಎಲ್ಲ ಮಠಾಧೀಶರಿಗೂ ಮುಖ್ಯಮಂತ್ರಿ ತಮ್ಮ ಬಳಿಗೆ ಬರಲಿ ಎಂಬ ಆಸೆ ಮೂಡಿದರೂ ಅಚ್ಚರಿಯಲ್ಲ.

ರಾಜ್ಯದ ಅಭಿವೃದ್ಧಿಗೆ, ದೀನದಲಿತರ ಕಲ್ಯಾಣಕ್ಕೆ ರಾಜ್ಯದ ಮಠಾಧೀಶರು ಬಹಳಷ್ಟು ಕೊಡುಗೆ ನೀಡಿದ್ದಾರೆ. ತ್ರಿವಿಧ ದಾಸೋಹದ ಮೂಲಕ ಹಲವರ ಬಾಳಲ್ಲಿ ಬೆಳಕು ಮೂಡಿಸಿದ್ದಾರೆ. ಕರ್ನಾಟಕ ಶೈಕ್ಷಣಿಕವಾಗಿ ಮುಂದುವರಿಯಲು ಮಠಾಧೀಶರ ಕೊಡುಗೆ ಇದೆ. ಆರೋಗ್ಯ ಕ್ಷೇತ್ರದಲ್ಲಿಯೂ ಮಠಗಳು ಗಣನೀಯ ಸೇವೆ ಸಲ್ಲಿಸಿವೆ. ಅದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಅಧ್ಯಾತ್ಮ ಜೀವಿಗಳಾಗಿ ಬದುಕುತ್ತಿರುವ, ಸಮಾಜಕ್ಕೆ ಒಳಿತನ್ನೇ ಬಯಸುತ್ತಿರುವ ಬಹಳಷ್ಟು ಸ್ವಾಮೀಜಿಗಳು ಈಗಲೂ ನಮ್ಮೊಡನೆ ಇದ್ದಾರೆ. ರಾಜಕಾರಣಿಗಳನ್ನು ಕಂಡರೆ ದೂರ ಸರಿಯುವ ಮಠಾಧೀಶರೂ ಇದ್ದಾರೆ. ಸರ್ಕಾರವಾಗಲಿ, ರಾಜಕಾರಣಿಗಳಾಗಲಿ ಹಣ ನೀಡಿದರೆ ಅದನ್ನು ತಿರಸ್ಕರಿಸುವ ಮಠಾಧೀಶರು ನಮ್ಮೊಡನೆ ಇದ್ದಾರೆ. ಆದರೆ ಕೆಲವೇ ಕೆಲವು ಸ್ವಾಮೀಜಿಗಳು ಅತಿ ಹೆಚ್ಚು ವಾಚಾಳಿತನ ತೋರುತ್ತಿರುವುದು ರಾಜ್ಯದ ರಾಜಕೀಯ ರಂಗವನ್ನೂ ಬದಲಾಯಿಸಿದೆ, ಅಧ್ಯಾತ್ಮ ವಲಯವನ್ನೂ ಬದಲಾಯಿಸಿದೆ. ಇದು ರಾಜಕೀಯಕ್ಕೂ ಒಳ್ಳೆಯದಲ್ಲ, ಸಮಾಜಕ್ಕೂ ಒಳ್ಳೆಯದಲ್ಲ.

‘ತನುವ ಕೊಟ್ಟು ಗುರುವನೊಲಿಸಬೇಕು, ಮನವ ಕೊಟ್ಟು ಲಿಂಗವನೊಲಿಸಬೇಕು, ಧನವಕೊಟ್ಟು ಜಂಗಮ ವನೊಲಿಸಬೇಕು, ಈ ತ್ರಿವಿಧವ ಹೊರಗು ಮಾಡಿ, ಹರೆಯ ಹೊಯಿಸಿ ಕುರುಹ ಪೂಜಿಸುವ ಗೊರವರ ಮೆಚ್ಚ ಕೂಡಲಸಂಗಮದೇವ’ ಎಂದು ಬಸವಣ್ಣ ಹೇಳಿದ್ದಾರೆ. ತನುವ ಕೊಟ್ಟು ಗುರುವನೊಲಿಸುವ ಪರಿಯನ್ನು ಬಿಟ್ಟು ಧನವ ಕೊಟ್ಟು ಗುರುವನೊಲಿಸುವ ಪದ್ಧತಿ ರಾಜ್ಯದಲ್ಲಿ ಶುರುವಾಗಿ ಬಹಳ ಕಾಲ ಆಯಿತು. ಧನವ ಕೊಡಲು ಅಧಿಕಾರಸ್ಥರಿಗೆ ನಾಚಿಕೆಯಾಗುತ್ತಿಲ್ಲ. ತೆಗೆದುಕೊಳ್ಳುವ ಗುರುಗಳಿಗೂ ಅಂತಹ ಭಾವನೆ ಇದ್ದ ಹಾಗೆ ಕಾಣುತ್ತಿಲ್ಲ.

ಮುಖ್ಯಮಂತ್ರಿಯೊಬ್ಬರು ಯಾವುದೋ ಕಾರಣಕ್ಕೆ ಮಠಗಳಿಗೆ ಹಣ ನೀಡುವ ಪದ್ಧತಿ ಆರಂಭಿಸಿದರು. ನಂತರ ಅದು ಸಂಪ್ರದಾಯವೇ ಆಗಿ ಹೋಯಿತು. ಮುಂದೆ ಬಂದ ಮುಖ್ಯಮಂತ್ರಿಗಳೂ ಅದನ್ನು ಮುಂದುವರಿಸಿದರು. ರಾಜ್ಯದಲ್ಲಿ ಮಠಾಧೀಶರು ನಿಜವಾದ ಅರ್ಥದಲ್ಲಿ ಸೇವೆ ಸಲ್ಲಿಸುವ ಕಾಲಕ್ಕೆ ಯಾವ ಸರ್ಕಾರವೂ ಅವರಿಗೆ ನೆರವು ನೀಡುತ್ತಿರಲಿಲ್ಲ. ಭಕ್ತರು ಕೊಟ್ಟ ಹಣದಲ್ಲಿಯೇ ಅವರು ಸೇವಾ ಕಾರ್ಯ ನಡೆಸಿದ್ದರು ಎನ್ನುವುದನ್ನು ಮರೆಯುವಂತಿಲ್ಲ.

ಇತ್ತೀಚಿನ ದಿನಗಳಲ್ಲಿ ಮಠಾಧೀಶರು ಅಗತ್ಯಕ್ಕಿಂತ ಹೆಚ್ಚಾಗಿ ರಾಜ್ಯದ ಆಡಳಿತದಲ್ಲಿ ಮೂಗು ತೂರಿಸು ವಂತಾಗಿದೆ. ಧನ ಕೊಡಲು ಮುಂದೆ ಬರುವ ರಾಜಕಾರಣಿ ಗಳನ್ನು ನಿಜವಾಗಿಯೂ ಸ್ವಾಮೀಜಿಗಳು ದೂರ ಇಡ ಬೇಕಿತ್ತು. ‘ಹತ್ತಿರ ಬಂದರೆ ನೋಡ್’ ಎಂಬ ಎಚ್ಚರಿಕೆ
ಯನ್ನು ನೀಡಬೇಕಿತ್ತು. ಅದರ ಬದಲಾಗಿ, ಕೊಲೆ ಪ್ರಕರಣ ದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾದ ರಾಜಕಾರಣಿಗಳನ್ನು ಹೂಮಳೆಗೈದು ಸ್ವಾಗತಿಸುವುದು, ಪೇಟ ತೊಡಿಸಿ ಸನ್ಮಾನಿಸುವ ಮಟ್ಟಕ್ಕೆ ಇಳಿದುಬಿಟ್ಟಿದ್ದಾರೆ. ನಾಚಿಕೆ ಎನ್ನುವುದು ಇಷ್ಟು ದುಬಾರಿಯಾದರೆ ಹೇಗೆ ಸ್ವಾಮಿ?

ಜೈಲಿನಿಂದ ಹೊರಬಂದವರು ಪೇಟ ತೊಟ್ಟು ಕುದುರೆ ಏರಬಹುದು. ಆದರೆ ಸಮಾಜದ ನೈತಿಕತೆ ಪಾತಾಳಕ್ಕೆ ಇಳಿಯುತ್ತದೆ. ‘ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ’ ಎಂಬ ಬಸವಣ್ಣ ಅವರ ಮಾತನ್ನು ಮಠಾಧೀಶರೇ ಪಾಲಿಸದಿದ್ದರೆ ಭಕ್ತರ ಪಾಡೇನು?

ಒಬ್ಬ ‘ಪ್ರಗತಿಪರ’ ಸ್ವಾಮೀಜಿ ಪತ್ರಿಕಾಗೋಷ್ಠಿ ಕರೆದು ಬಿಜೆಪಿಯಲ್ಲಿನ ಭಿನ್ನಮತವನ್ನು ಹೋಗಲಾಡಿಸಬೇಕು ಎಂದು ಸಲಹೆ ನೀಡುತ್ತಾರೆ. ಇನ್ನೊಬ್ಬ ಪ್ರಗತಿಪರ ಸ್ವಾಮೀಜಿ ಯಡಿಯೂರಪ್ಪ ಪರ ವಕಾಲತ್ತು ವಹಿಸುತ್ತಾರೆ. ನೂರಾರು ಸ್ವಾಮೀಜಿಗಳು ಸೇರಿ ಸಮಾವೇಶವನ್ನು ನಡೆಸಿ ಒಬ್ಬ ವ್ಯಕ್ತಿಯ, ಒಂದು ಪಕ್ಷದ ಪರ ಘೋಷಣೆ ಕೂಗುತ್ತಾರೆ. ಒಬ್ಬ ಸ್ವಾಮೀಜಿ ಯಾರನ್ನು ಮಂತ್ರಿ ಮಾಡಬೇಕು ಎಂದು ಆದೇಶ ಹೊರಡಿಸಿದರೆ, ಇನ್ನೊಬ್ಬ ಸ್ವಾಮೀಜಿ ಯಾವ ಖಾತೆ ನೀಡಬೇಕು ಎಂದು ಹೇಳುತ್ತಾರೆ.

ಕರ್ನಾಟಕದ ಸದ್ಯದ ರಾಜಕೀಯವನ್ನು ನೋಡಿದರೆ ಜನಪ್ರತಿನಿಧಿಗಳಿಗಿಂತ ಪೀಠಾಧಿಪತಿಗಳೇ ಹೆಚ್ಚು ಸಕ್ರಿಯ ರಾಗಿದ್ದಾರೆ. ನಿರ್ಧಾರವನ್ನು ಕೈಗೊಳ್ಳುತ್ತಾರೆ. ಅದನ್ನು ಪಾಲಿಸಲೇಬೇಕು ಎಂದು ಒತ್ತಡ ಹಾಕುತ್ತಾರೆ. ಒಂದು ಅರ್ಥದಲ್ಲಿ ಬಹಳಷ್ಟು ಸ್ವಾಮೀಜಿಗಳು ಬಸವಣ್ಣ ಹೇಳಿದ ಹಾಗೆ ‘ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ, ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯ’ ಎಂಬ ಮಾತನ್ನು ನಿಜ ಮಾಡಲು ಹೊರಟಹಾಗೆ ಕಾಣುತ್ತಿದೆ. ಈ ವಚನವನ್ನು ಬಸವಣ್ಣನವರು ‘ನುಡಿಗೆ ತಕ್ಕ ನಡೆಯ ಕಂಡಡೆ ಕೂಡಲಸಂಗಮದೇವನೊಳಗಿಪ್ಪನಯ್ಯ’ ಎಂದು ಮುಕ್ತಾಯಗೊಳಿಸಿದ್ದಾರೆ. ಇದರ ಅರ್ಥವನ್ನು ಸ್ವಾಮೀಜಿಗಳಿಗೂ ರಾಜಕಾರಣಿಗಳಿಗೂ ತಿಳಿಹೇಳಬೇಕಾದ ಪರಿಸ್ಥಿತಿ ಬಂದಿರುವುದು ದುರಂತ.

ಕಾಡಿನ ರಾಜನಾಗಬೇಕು ಎಂದು ನರಿಯೊಂದು ಬಣ್ಣ ಬಳಿದುಕೊಂಡು ಪ್ರಾಣಿಗಳನ್ನು ಹೆದರಿಸಿ ಸಿಂಹಾಸನ ಏರಬಹುದು. ಆದರೆ ಜೋರು ಮಳೆ ಬಂದರೆ ಬಣ್ಣ ಬಯಲಾಗುತ್ತದೆ. ರಾಜ್ಯದಲ್ಲಿ ಈಗ ಆಗಿರುವುದೂ ಅದೇ. ಇಲ್ಲೀಗ ಸಾಕಷ್ಟು ಮಳೆಯಾಗಿದೆ. ಬಹಳಷ್ಟು ಜನರ ಮುಖದ ಮೇಲಿರುವ ಬಣ್ಣ ತೊಳೆದು ಹೋಗಿ ನಿಜರೂಪ ಕಾಣುತ್ತಿದೆ. ಆದರೆ ನಾವು ನಿಜರೂಪ ಒಪ್ಪಿಕೊಳ್ಳುತ್ತಿಲ್ಲ. ಮತ್ತೆ ಬಣ್ಣ ಬಳಿದುಕೊಳ್ಳಲು ಅವಕಾಶ ನೀಡುತ್ತಿದ್ದೇವೆ. ಛೆ ಛೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT