ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನ | ಸೈಜುಗಲ್ಲು ಹೊತ್ತೋರ ಮೇಲೆತ್ತೋರ‍್ಯಾರು?

ಬಲಾಢ್ಯ ಜಾತಿಗಳಿಗೆ, ಆಳುವ ಪ್ರಭುಗಳಿಗೆ ಇರಬೇಕು ಅಂತಃಕರಣ
Last Updated 29 ಡಿಸೆಂಬರ್ 2022, 0:00 IST
ಅಕ್ಷರ ಗಾತ್ರ

ಕುರುಕ್ಷೇತ್ರ ಯುದ್ಧ ಮುಗಿದು ಧರ್ಮರಾಜ ಹಸ್ತಿನಾಪುರದ ಚಕ್ರವರ್ತಿಯಾದ. ಆತ ಪ್ರತಿದಿನ ರಾತ್ರಿ ಊಟಕ್ಕೆ ಕುಳಿತುಕೊಂಡು ಅನ್ನದ ಬಟ್ಟಲಿಗೆ ಕೈ ಹಾಕುವ ಮುನ್ನ ‘ಎಲ್ಲ ಸೈನಿಕರದೂ ಊಟವಾಯಿತೇ, ಅರಮನೆಯ ಸೇವಕರೆಲ್ಲ ಉಂಡರೇ, ದಾಸಿಯರಿಗೆ ಹೊಟ್ಟೆ ತುಂಬಿತೇ, ರಾಜ್ಯದ ಎಲ್ಲ ಜನರೂ ನೆಮ್ಮದಿಯಿಂದ ಇದ್ದಾರೆಯೇ’ ಎಂದು ಕೇಳಿ, ಎಲ್ಲರದೂ ಊಟ ಆಗಿದೆ ಎನ್ನುವುದನ್ನು ಖಾತರಿ ಮಾಡಿಕೊಂಡು ತಾನು ಅನ್ನಕ್ಕೆ ಕೈಇಕ್ಕುತ್ತಿದ್ದನಂತೆ. ಇದೊಂದು ರೂಪಕ. ಇದು ನಮ್ಮೊಳಗೂ ಇರಬೇಕು. ನಮ್ಮನ್ನು ಆಳುವ ಪ್ರಭುಗಳಿಗೂ, ಮೀಸಲಾತಿ ಕೊಡಿ ಎಂದು ಕೇಳುತ್ತಿರುವ ಬಲಾಢ್ಯ ಜಾತಿಗಳಿಗೂ ಇಂತಹ ಒಂದು ಅಂತಃಕರಣ ಬೇಕು. ಎಲ್ಲರದೂ ಊಟವಾದ ನಂತರ ನಾವು ಊಟ ಮಾಡಬೇಕು ಎನ್ನುವ ಮನೋಭಾವ ಬೇಕು. ಹಸಿವಿನಿಂದ ಸತ್ತವರು, ಸಾಯುತ್ತಿರುವವರು, ನಾಗರಿಕ ಪ್ರಪಂಚದಲ್ಲಿ ಇನ್ನೂ ಕಣ್ಣು ಬಿಡದೇ ಇದ್ದವರು, ದನಿಯೇ ಇಲ್ಲದೆ ಮೂಕರಾದವರನ್ನು ತಮ್ಮ ತೆಕ್ಕೆಯಲ್ಲಿ ಎತ್ತಿಕೊಂಡು ಹೋಗುವ ಔದಾರ್ಯ ಬೇಕು. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಆಡಳಿತ ನಡೆಸುವ ಪ್ರಜಾಪ್ರಭುತ್ವದಲ್ಲಿ ಅಂತಹದ್ದೊಂದು ಸಣ್ಣ ಆಸೆ ಯಾವಾಗಲೂ ಜೀವಂತವಾಗಿರಬೇಕು.

ನಮ್ಮ ದೇಶದಲ್ಲಿ ಮೀಸಲಾತಿ ಜಾರಿಗೆ ಬಂದು ಏಳು ದಶಕಗಳೇ ಕಳೆದಿವೆ. ಬಹಳಷ್ಟು ಜಾತಿಗಳು ಇದರ ಸೌಲಭ್ಯ ಪಡೆದುಕೊಂಡಿವೆ. ಮೀಸಲಾತಿ ಪಡೆದವರು ಆರ್ಥಿಕವಾಗಿ ಸಬಲರಾಗಿರುವುದೂ ಇದೆ. ಆದರೂ ಮೀಸಲಾತಿಯ ಪಾಲು ಸಿಗದೆ ಇನ್ನೂ ಒದ್ದಾಡುತ್ತಿರುವ ಲಕ್ಷಾಂತರ, ಕೋಟ್ಯಂತರ ಜನರು ನಮ್ಮ ಸಮಾಜದಲ್ಲಿ ಇದ್ದಾರೆ. ಮೀಸಲಾತಿಯ ಸೌಲಭ್ಯ ಪಡೆದು ಮೇಲಕ್ಕೆ ಬಂದವರು ಈಗ ತಮಗಿಂತ ಕೆಳಕ್ಕೆ ಇರುವ ಜನರನ್ನು ಮೇಲಕ್ಕೆತ್ತುವ ಕೆಲಸ ಮಾಡಬೇಕು. ದನಿ ಇಲ್ಲದವರ ಪರವಾಗಿ ಹೋರಾಟ ಮಾಡಬೇಕೆ ವಿನಾ ಇನ್ನಷ್ಟು ಜೇನುತುಪ್ಪ ಸವಿಯಲು ಮುಂದಾಗಬಾರದು.

ಕವಿ ಸಿದ್ಧಲಿಂಗಯ್ಯ ಅವರು ಹೇಳಿದ ಹಾಗೆ, ಹಸಿವಿನಿಂದ ಸತ್ತೋರು, ಸಾಯುತ್ತಿರುವವರು, ವದೆಸಿಕೊಂಡು ವರಗಿದೋರು, ಕಾಲುಕಯ್ಯ ಹಿಡಿಯೋರು, ಕೈಮಡಗಿಸಿಕೊಳ್ಳೋರು, ಹೊಲವನುತ್ತು ಬಿತ್ತೋರು, ಬೆಳೆಯ ಕುಯ್ದು ಬೆವರೋರು ಇನ್ನೂ ಇದ್ದಾರೆ ಎಂಬ ಪ್ರಜ್ಞೆ ನಮ್ಮಲ್ಲಿ ಇರಬೇಕು. ಅದೇ ಮುಂದಾಗಬೇಕು.

ರಾಜ್ಯದಲ್ಲಿ ಈಗ ಮೀಸಲಾತಿ ಹೋರಾಟದ್ದೇ ಆರ್ಭಟ. ಪಂಚಮಸಾಲಿಗಳು ತಮ್ಮನ್ನು ಪ್ರವರ್ಗ 2ಎಗೆ ಸೇರಿಸಬೇಕು ಎಂದು ನಿರಂತರ ಹೋರಾಟ ನಡೆಸಿದ್ದಾರೆ. ಒಕ್ಕಲಿಗರು ತಮಗೆ ಇರುವ ಶೇ 3ರಷ್ಟು ಮೀಸಲಾತಿಯನ್ನು ಶೇ 12ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕುರುಬರು, ಮಡಿವಾಳರು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಹೆಚ್ಚಳ ಮಾಡುವ ನಿರ್ಣಯಕ್ಕೆ ಈಗಾಗಲೇ ವಿಧಾನಮಂಡಲ ಒಪ್ಪಿಗೆ ನೀಡಿದೆ. ಆರ್ಥಿಕವಾಗಿ ಹಿಂದುಳಿದ ಮತ್ತು ಈವರೆಗೆ ಮೀಸಲಾತಿಯ ಸೌಲಭ್ಯ ಪಡೆಯದೇ ಇರುವ ಜಾತಿಗಳಿಗೂ ಕೇಂದ್ರ ಸರ್ಕಾರ ಶೇ 10ರಷ್ಟು ಮೀಸಲಾತಿಯನ್ನು ಕಲ್ಪಿಸಿದೆ. ಇದೆಲ್ಲ ಕಾರಣಗಳಿಂದ ಈಗ ಮೀಸಲಾತಿಯ ಉದ್ದೇಶವೇ ಬದಲಾಗಿದೆ. ಅದೊಂದು ರಾಜಕೀಯ ಲಾಭದ ಸರಕಾಗಿದೆ.

ಅಂಬೇಡ್ಕರ್ ಅವರು ಮಾತೃ ಹೃದಯದಿಂದ, ಸಾಮಾಜಿಕ ಜವಾಬ್ದಾರಿಯಿಂದ, ಆರೋಗ್ಯಪೂರ್ಣ ಸಮಾಜ ಕಟ್ಟುವ ಉದ್ದೇಶದಿಂದ ಜಾರಿಗೆ ತಂದಿದ್ದ ಮೀಸಲಾತಿ ಈಗ ಸಮಾಜದ ಆರೋಗ್ಯವನ್ನು ಹದಗೆಡಿಸುವ ಹಂತಕ್ಕೆ ಬಂದು ನಿಂತಿದೆ. ಇದಕ್ಕೆ ಈಗಲೇ ನಾವು ಔಷಧಿ ಕಂಡುಕೊಳ್ಳದಿದ್ದರೆ, ಅಶಕ್ತರಿಗೆ ಪೌಷ್ಟಿಕಾಂಶದ ಚುಚ್ಚುಮದ್ದು ಕೊಡದೇ ಇದ್ದರೆ ಸಮಾಜವೆಂಬುದು ನರಕವಾಗುತ್ತದೆ. ಮತ್ತೊಂದು ಊಳಿಗಮಾನ್ಯ ಪದ್ಧತಿಗೆ ಸಮಾಜ ಜಾರುತ್ತದೆ.

ಸಾಮಾಜಿಕ ನ್ಯಾಯ ಕಲ್ಪಿಸುವುದೇ ಮೀಸಲಾತಿಯ ಪರಮ ಉದ್ದೇಶ. ಇಲ್ಲಿ ಜನಸಂಖ್ಯೆಯೊಂದೇ ಮುಖ್ಯವಲ್ಲ. ಒಳಮೀಸಲಾತಿಗೆ ಜನಸಂಖ್ಯೆ ಮಾನದಂಡವಾಗಬಹುದೇ ವಿನಾ ಮೀಸಲಾತಿಗೆ ಅದೊಂದೇ ಸಮರ್ಥನೆಯಾಗಬಾರದು. ಆಡಳಿತ, ರಾಜ್ಯಾಧಿಕಾರ, ಭೂಮಿ, ಮಠಮಾನ್ಯಗಳು, ವೈದ್ಯಕೀಯ, ಎಂಜಿನಿಯರಿಂಗ್‌ನಂತಹ ದೊಡ್ಡದೊಡ್ಡ ಶಿಕ್ಷಣ ಸಂಸ್ಥೆಗಳು, ಬಲಿಷ್ಠ ನಾಯಕತ್ವ, ರಾಜಕೀಯ ಪ್ರಭಾವ, ಪ್ರಭಾವಿ ಜಗದ್ಗುರುಗಳನ್ನು ಹೊಂದಿರುವ, ಸಂಖ್ಯಾಬಲದಿಂದಲೂ, ಸಂಘಟನೆಯ ದೃಷ್ಟಿಯಿಂದಲೂ ಪ್ರಭಾವಿಯಾಗಿರುವ ಸಮುದಾಯದವರು ಮೀಸಲಾತಿ ಕೇಳುತ್ತಿರುವುದು ಅತಿ ಹಿಂದುಳಿದ ಜಾತಿಗಳ ಜನರನ್ನು ಆತಂಕಕ್ಕೆ ಈಡುಮಾಡಿದೆ. ಈ ಬಲಾಢ್ಯರ ಒತ್ತಡಕ್ಕೆ ಪ್ರಭುತ್ವವೂ ಮಣಿಯುತ್ತಿರುವುದು ಅವರಲ್ಲಿ ಹತಾಶೆಯನ್ನು ಸೃಷ್ಟಿಸಿದೆ.

ಅನಾದಿ ಕಾಲದಿಂದಲೂ ಸಮಾಜದ ಮೇಲ್ವರ್ಗದಲ್ಲಿಯೇ ಇದ್ದವರು, ಭೂಮಾಲೀಕರಾದವರು, ಸಾಮಾಜಿಕವಾಗಿ ಅತಿ ಎತ್ತರದಲ್ಲಿ ಇರುವ ಜನರು ಸಮಾಜದ ಕಟ್ಟಕಡೆಯ ಜನರಿಗೆ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು ಹಾಗೂ ಅವರ ಕೈ ಹಿಡಿದು ತಮ್ಮ ಜೊತೆಗೆ ನಡೆಸಿಕೊಂಡು ಹೋಗಬೇಕು. ಅದೇ ನಿಜವಾದ ಸಾಮಾಜಿಕ ಪರಿವರ್ತನೆಯ ನಡೆ.

ಪ್ರವರ್ಗ 1ರಲ್ಲಿ 95 ಮತ್ತು 2(ಎ)ದಲ್ಲಿ 102 ಜಾತಿಗಳಿವೆ. ಅದೇ ರೀತಿ ಪರಿಶಿಷ್ಟ ಜಾತಿಯಲ್ಲಿ ನೂರಾರು ಒಳಪಂಗಡಗಳು ಇವೆ. ಪರಿಶಿಷ್ಟ ಪಂಗಡದಲ್ಲಿಯೂ ಇದೇ ರೀತಿ ಒಳಪಂಗಡಗಳಿವೆ. ಪ್ರವರ್ಗ 1, 2(ಎ), 2(ಬಿ), 3(ಎ), 3(ಬಿ) ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಯಲ್ಲಿ ಯಾರ್‍ಯಾರಿಗೆ ಎಷ್ಟು ಸೌಲಭ್ಯ ದೊರಕಿದೆ ಎನ್ನುವುದರ ಬಗ್ಗೆ ವೈಜ್ಞಾನಿಕವಾದ ಅಧ್ಯಯನವೇ ನಡೆದಿಲ್ಲ. ಇಂತಹ ಅಧ್ಯಯನ ನಡೆಯದೆ ಒತ್ತಾಯಕ್ಕೆ ಮಣಿದು ಮೀಸಲಾತಿ ನೀಡುವುದಾಗಲಿ, ಬದಲಾವಣೆ ಮಾಡುವುದಾಗಲಿ ಸರಿಯಲ್ಲ. ಇದು ನಾಗರಿಕ ಸಮಾಜದ ಲಕ್ಷಣವೂ ಅಲ್ಲ. ಮೀಸಲಾತಿ ನೀಡುವುದಕ್ಕೆ, ಬದಲಾಯಿಸುವುದಕ್ಕೆ, ರದ್ದು ಮಾಡುವುದಕ್ಕೆ ನಿರ್ದಿಷ್ಟ ಮತ್ತು ಎಲ್ಲರೂ ಒಪ್ಪಬಹುದಾದ ಸ್ಪಷ್ಟ ಕಾರಣಗಳಿರಬೇಕು. ಅದನ್ನು ಹುಡುಕುವುದು ಮತ್ತು ಎಲ್ಲರನ್ನೂ ಒಪ್ಪಿಸಿ ಅಸಹಾಯಕರಿಗೆ ಸೌಲಭ್ಯ ಸಿಗುವಂತೆ ಮಾಡುವುದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯ.

‘ಬಲಾಢ್ಯನೇ ಜಯಶಾಲಿಯಾಗುತ್ತಾನೆ ಎನ್ನುವುದು ಅರಣ್ಯ ನೀತಿ. ಅದು ನಮ್ಮ ದೇಶದ ಪರಂಪರೆಯೇ ಅಲ್ಲ. ದುರ್ಬಲರನ್ನು ಮೇಲಕ್ಕೆ ಎತ್ತುವುದೇ ನಮ್ಮ ದೇಶದ ಸಂಪ್ರದಾಯ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಷಣದಲ್ಲಿ ಹೇಳುತ್ತಾರೆ. ಆದರೆ ತಮ್ಮ ಮಾತಿನಂತೆ ನಡೆದುಕೊಳ್ಳಲು ಅವರಿಗೆ ಅವಕಾಶವೇ ಇಲ್ಲ. ಬಲಾಢ್ಯರ ಹೊಡೆತಕ್ಕೆ ಅವರು ನಲುಗಿದ್ದಾರೆ. ಕಪಿಮುಷ್ಟಿಗೆ ಸಿಲುಕಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ಅವರು ಒಬ್ಬ ಅಪ್ಪಟ ರಾಜಕಾರಣಿಯಂತೆ ನಡೆದುಕೊಳ್ಳುತ್ತಿದ್ದಾರೆ ಅಷ್ಟೆ. ತತ್ಕಾಲದ ಲಾಭದ ದೃಷ್ಟಿಯನ್ನು ಬಿಟ್ಟು ದೂರಗಾಮಿ ಹೆಜ್ಜೆಗಳನ್ನು ಅವರು ಇಡಬೇಕು. ಇದಕ್ಕಾಗಿ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು.

‘ಶೇ 3ರಷ್ಟು ಮೀಸಲಾತಿ ಪಡೆಯಲು ಒಕ್ಕಲಿಗರೇನು ಭಿಕ್ಷುಕರಲ್ಲ. ಶೇ 12ರಷ್ಟು ಮೀಸಲಾತಿ ಬೇಕೇ ಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಹೌದು, ಒಕ್ಕಲಿಗರು ಭಿಕ್ಷುಕರಲ್ಲ. ಯಾವಾಗಲೂ ಅವರು ಭಿಕ್ಷೆ ನೀಡುವ ಜಾಗದಲ್ಲಿ ಇದ್ದಾರೆಯೇ ವಿನಾ ಭಿಕ್ಷೆ ಬೇಡುವ ಜಾಗದಲ್ಲಿ ಇಲ್ಲ. ಅದನ್ನು ಅರ್ಥ ಮಾಡಿಕೊಂಡು, ಚುನಾವಣೆಯ ಲಾಭವನ್ನು ಮಾತ್ರ ಪರಿಗಣಿಸದೆ ವಿಶಾಲ ಹೃದಯದಿಂದ ಪರಿಸ್ಥಿತಿಯನ್ನು ಅವಲೋಕಿಸಿ ನಡೆದುಕೊಂಡರೆ ಎಲ್ಲರಿಗೂ ಶುಭವಾಗುತ್ತದೆ, ಕಣ್ಣೀರಿನಲ್ಲಿ ಕೈತೊಳೆಯುವವರ ಮುಖದಲ್ಲಿಯೂ ಮಂದಹಾಸ ಮೂಡುತ್ತದೆ.

ಹಂಚಿಕೊಂಡು ತಿನ್ನುವುದರಲ್ಲಿ ಸುಖವಿದೆ ಎನ್ನುವುದನ್ನು ತೋರಿಸಿಕೊಟ್ಟ ನಾಡು ಇದು. ರಾಜರ ಆಡಳಿತದಲ್ಲಿಯೇ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಬಿತ್ತಿದ ರಾಜ್ಯ ಇದು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ಆಯೋಗವನ್ನು ರಚಿಸಿ, ಅಧ್ಯಯನ ನಡೆಸಿ, ಆಯೋಗದ ವರದಿಯನ್ನು ಜಾರಿಗೆ ತಂದ ನೆಲ ಇದು. ಇನ್ನೂ ಒಬ್ಬನೇ ಒಬ್ಬ ಪದವೀಧರನನ್ನೂ ಹೊಂದಿಲ್ಲದ, ಅಕ್ಷರಲೋಕದೊಳಗೆ ಕಾಲನ್ನೇ ಇಡದ, ಸರ್ಕಾರಿ ನೌಕರಿಯನ್ನೇ ಕಾಣದ ನೂರಾರು ಜಾತಿಗಳು ನಮ್ಮಲ್ಲಿ ಇವೆ. ನಾಗರಿಕತೆಯ ಬೆಳಕನ್ನೂ ಕಾಣದವರು ನಮ್ಮ ನಡುವೆ ಇದ್ದಾರೆ. ಅವರನ್ನು ಕೈಹಿಡಿದು ಮೇಲಕ್ಕೆ ಎತ್ತಬೇಕಿದೆ.

ಪರಮಾತ್ಮನ ಹೆಸರು ಹೇಳಿ ಪರಮಾನ್ನ ಉಂಡ ಜನಕೆ ಬೂಟುಮೆಟ್ಟು ಹೊಲೆದೋರ ಕಡೆಗೇ ನಮ್ಮ ದೃಷ್ಟಿ ಇರಬೇಕು. ಇಲ್ಲವಾದರೆ ಮೆಚ್ಚನಾ ಪರಮಾತ್ಮನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT