ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನ: ಮತದಾರನೊಬ್ಬನೇ ವೆಂಕಟರಮಣ!

ಕುರ್ಚಿ ಉಳಿಸಲು, ಕುರ್ಚಿ ಗಳಿಸಲು ನಡೆಸುವ ಕಸರತ್ತೇ ಹೆಚ್ಚು
Last Updated 28 ಜೂನ್ 2021, 19:11 IST
ಅಕ್ಷರ ಗಾತ್ರ

ಗಂಗಾವತಿ ಪ್ರಾಣೇಶ್ ಒಂದು ಕತೆಯನ್ನು ಯಾವಾಗಲೂ ಹೇಳುತ್ತಾರೆ. ಅವರು ಚಿಕ್ಕವರಿದ್ದಾಗ ಶಾಲೆಯಲ್ಲಿ ಮಾಸ್ತರರು ಮಕ್ಕಳಿಗೆ ಒಂದು ಪ್ರಶ್ನೆ ಕೇಳಿದರಂತೆ. ‘ಗ್ರಂಥಾಲಯಕ್ಕೆ ಬೆಂಕಿ ಬಿದ್ದಿದೆ. ನೀವು ಯಾವ ಪುಸ್ತಕ ರಕ್ಷಣೆ ಮಾಡುತ್ತೀರಿ’ ಎಂದು. ಅದಕ್ಕೆ ಒಬ್ಬ ವಿದ್ಯಾರ್ಥಿ ತಾನು ಶಿವರಾಮ ಕಾರಂತರ ಪುಸ್ತಕ ರಕ್ಷಿಸುತ್ತೇನೆ ಎಂದನಂತೆ. ಇನ್ನೊಬ್ಬ ತಾನು ಕುವೆಂಪು ಅವರ ಪುಸ್ತಕ ರಕ್ಷಿಸುತ್ತೇನೆ ಎಂದನಂತೆ. ಮತ್ತೊಬ್ಬ ಕನಕದಾಸರ ಪುಸ್ತಕ, ಇನ್ನೊಬ್ಬ ಬಸವಣ್ಣನ ಪುಸ್ತಕ ರಕ್ಷಿಸುತ್ತೇನೆ ಎಂದು ಹೀಗೆ ಒಬ್ಬೊಬ್ಬರು ಒಬ್ಬೊಬ್ಬ ಮಹಾತ್ಮರ ಪುಸ್ತಕ ರಕ್ಷಿಸುವುದಾಗಿ ಉತ್ತರಿಸಿದರಂತೆ. ನಂತರ ಮಾಸ್ತರರು ಸಿದ್ಧಲಿಂಗನ ಬಳಿ ‘ನೀನು ಯಾವ ಪುಸ್ತಕ ರಕ್ಷಿಸುತ್ತೀಯಾ?’ ಎಂದು ಕೇಳಿದ್ದಕ್ಕೆ ಆತ ‘ನಾನು ಗ್ರಂಥಾಲಯದ ಬಾಗಿಲ ಬಳಿ ಯಾವ ಪುಸ್ತಕ ಇರುತ್ತದೋ ಅದನ್ನು ರಕ್ಷಿಸುತ್ತೇನೆ. ನನ್ನ ಇಷ್ಟದ ಲೇಖಕರ ಪುಸ್ತಕ ಹುಡುಕುತ್ತಾ ಕುಳಿತರೆ ಗ್ರಂಥಾಲಯ ಸುಟ್ಟು ಭಸ್ಮವಾಗುತ್ತದೆ’ ಎಂದು ಉತ್ತರಿಸಿದನಂತೆ. ಸದ್ಯಕ್ಕೆ ನಮ್ಮ ರಾಜ್ಯದ ಪರಿಸ್ಥಿತಿಯೂ ಹೀಗೆಯೇ ಆಗಿದೆ.

ಕೋವಿಡ್ ಎರಡನೇ ಅಲೆ, ಕಪ್ಪು ಶಿಲೀಂಧ್ರ, ಡೆಲ್ಟಾ ಪ್ಲಸ್ ಮುಂತಾದ ಕಾಯಿಲೆಗಳ ಹಾವಳಿಯಿಂದ ನಮ್ಮ ರಾಜ್ಯದ ಜನರ ಬದುಕಿಗೆ ಅಕ್ಷರಶಃ ಬೆಂಕಿ ಬಿದ್ದಿದೆ. ಆದರೆ ನಮ್ಮ ರಾಜಕಾರಣಿಗಳು ಮಾತ್ರ ತಮಗೆ ಬೇಕಾದವರನ್ನು ರಕ್ಷಿಸುವ ಕಾಯಕದಲ್ಲಿ ತೊಡಗಿದ್ದಾರೆ. ಯಾರಿಗೂ ಸಿದ್ಧಲಿಂಗನ ತರಹ ಸಾಮಾನ್ಯ ಜ್ಞಾನ ಇದ್ದಂತೆ ಕಾಣುತ್ತಿಲ್ಲ.

ರಾಜ್ಯ ಸಂಪೂರ್ಣವಾಗಿ ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟಕ್ಕೆ ಸಿಲುಕಿದೆ. ಆದರೆ ನಮ್ಮನ್ನು ಆಳುವ ರಾಜಕಾರಣಿಗಳಿಗೆ ರಾಜಕೀಯ ಸಂಕಷ್ಟ ಬಂದಾಗ ಮಾತ್ರ ಅದು ಸಂಕಷ್ಟ ಅನಿಸುತ್ತದೆ. ಉಳಿದವೆಲ್ಲಾ ಸಂಕಷ್ಟಗಳೇ ಅಲ್ಲ. ಜನ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ನರಳುತ್ತಿದ್ದರೆ, ಔಷಧ ಸಿಗದೆ ಅಳುತ್ತಿದ್ದರೆ, ಆಕ್ಸಿಜನ್ ಇಲ್ಲದೆ ಪರದಾಡು ತ್ತಿದ್ದರೆ ಅದೊಂದು ಕಷ್ಟ ಎಂದು ಗೊತ್ತಾಗುವುದಿಲ್ಲ. ನಾಯಕತ್ವದ ಪ್ರಶ್ನೆ ಬಂದರೆ ಮಾತ್ರ ಎದ್ದು ಕುಳಿತುಬಿಡು ತ್ತಾರೆ. ಆಡಳಿತಾರೂಢ ಬಿಜೆಪಿಯಲ್ಲಿ ಮುಖ್ಯಮಂತ್ರಿಯನ್ನು ಕುರ್ಚಿಯಿಂದ ಇಳಿಸುವ ಕಸರತ್ತು. ವಿರೋಧ ಪಕ್ಷವಾದ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಹೊಯ್‌ಕೈ.

ಒಂದೆಡೆ, ಕುರ್ಚಿ ಉಳಿಸಿಕೊಳ್ಳುವ ಕಸರತ್ತು. ಇನ್ನೊಂದೆಡೆ, ಕುರ್ಚಿ ಗಳಿಸಿಕೊಳ್ಳಲು ಪೈಪೋಟಿ. ಎರಡೂ ಕಡೆ ಭಾವನಾತ್ಮಕ ವಿಷಯಗಳದ್ದೇ ಮೇಲುಗೈ. ‘ಸಂಕಟ ಬಂದಾಗ ವೆಂಕಟರಮಣ’ ಎಂಬ ಮಾತು ನಮ್ಮ ಜನನಾಯಕರಿಗೆ ಸರಿಯಾಗಿಯೇ ಒಪ್ಪುತ್ತದೆ. ಸುಖವಿದ್ದಾಗ ಅವರಿಗೆ ಬಡಜನರೂ ನೆನಪಾಗುವುದಿಲ್ಲ, ಅವರ ಸಂಕಷ್ಟಗಳೂ ಕಾಣುವುದಿಲ್ಲ. ಕೇಳುವುದೂ ಇಲ್ಲ. ಎಲ್ಲಿಯಾದರೂ ಕುರ್ಚಿ ಅಲುಗಾಡುವ ಲಕ್ಷಣ ಕಾಣಿಸಿತೋ ಆಗ ಅವರಿಗೆ ಬಡಜನರ ನೆನಪಾಗಿಬಿಡು ತ್ತದೆ. ಅದರಲ್ಲೂ ಜಾತಿ ನೆನಪಾಗುತ್ತದೆ. ಆಗ ದಲಿತ, ಲಿಂಗಾಯತ ಎನ್ನುವುದೆಲ್ಲಾ ಮುನ್ನೆಲೆಗೆ ಬಂದು ಬಿಡು ತ್ತವೆ. ಅವರಿಗಾಗಿ ಹೃದಯ ಮಿಡಿಯುತ್ತದೆ. ಸಾಮಾಜಿಕ ಸಂಕಷ್ಟ ಬಂದಾಗ, ಆರ್ಥಿಕ ಸಂಕಷ್ಟ ಬಂದಾಗ ಮರುಗದ ಹೃದಯ ಈಗ ಮಾತ್ರ ಮಂಜಿನಂತೆ ಕರಗುತ್ತದೆ. ಆಗ ಅವರ ದೃಷ್ಟಿಯಲ್ಲಿ ಬಡ ಮತದಾರನೇ ವೆಂಕಟರಮಣ. ಕುರ್ಚಿ ಗಳಿಸಲೂ ಅವನೇ ಬೇಕು, ಕುರ್ಚಿ ಉಳಿಸಲೂ ಅವನೇ ಬೇಕು. ಉಳಿದಂತೆ ಲೋಕೋದ್ಧಾರ, ಜನ ಕಲ್ಯಾಣ ಎನ್ನುವುದೆಲ್ಲಾ ಬರೀ ಲೊಳಲೊಟ್ಟೆ.

ಪ್ರಜಾಪ್ರಭುತ್ವದಲ್ಲಿ ಮತದಾರನೇ ವೆಂಕಟರಮಣ ನಾಗಿರಬೇಕು. ಆದರೆ ನಿಜವಾದ ಅರ್ಥದಲ್ಲಿ ಹಾಗೆ ಆಗುವುದಿಲ್ಲ. ಭಾವನಾತ್ಮಕವಾಗಿ ಬಳಸಿಕೊಳ್ಳಲು ಮಾತ್ರ ಅವನು ವೆಂಕಟರಮಣನಾಗಿರುತ್ತಾನೆ. ಈಗ ನೋಡಿ, ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಕೂಗು ಎದ್ದಿದೆ. ತಕ್ಷಣವೇ ನಮ್ಮ ಮುಖ್ಯಮಂತ್ರಿಗಳಿಗೆ ಬಸವಣ್ಣ ನೆನಪಾಗಿದ್ದಾರೆ. ವಿಧಾನಸೌಧದ ಆವರಣದಲ್ಲಿ ಬಸವಣ್ಣನ ಪ್ರತಿಮೆ ಸ್ಥಾಪಿಸುವ ಮಾತು ಹೇಳುತ್ತಿದ್ದಾರೆ. ವಿಧಾನಸೌಧದಿಂದ ಕೂಗಳತೆ ದೂರದಲ್ಲಿಯೇ ಬಸವೇಶ್ವರ ವೃತ್ತದಲ್ಲಿ ಈಗಾಗಲೇ ಒಂದು ಪ್ರತಿಮೆ ಇದೆ. ವಿಧಾನಸೌಧದ ಆವರಣದಲ್ಲಿ ಮತ್ತೊಂದು ಪ್ರತಿಮೆ ಸ್ಥಾಪನೆಗೆ ಜಾಗವೇ ಇಲ್ಲ. ಆದರೂ ಬಸವಣ್ಣ ಈಗ ಬೇಕು. ಇದು ಕೂಡ ಅಭಿವೃದ್ಧಿ ನಿಗಮದಂತೆ ಪೈಪೋಟಿಗೆ ಕಾರಣವಾದರೆ ಅಚ್ಚರಿಯಿಲ್ಲ.

ಬಸವಣ್ಣ ಪ್ರತಿಮೆಯಾಗುವುದಾದರೆ ಕೆಂಪೇಗೌಡರ ಪ್ರತಿಮೆ ಯಾಕೆ ಬೇಡ, ಕನಕದಾಸರ ಪ್ರತಿಮೆ ಯಾಕೆ ಬೇಡ ಎಂಬ ಕೂಗುಗಳೂ ಏಳಬಹುದು. ಬಸವಣ್ಣ ಸಾಮಾಜಿಕ ಪರಿವರ್ತನೆಯ ಹರಿಕಾರ. ದೊಡ್ಡ ಮನುಷ್ಯ. ಕೆಂಪೇಗೌಡ, ಕನಕದಾಸರ ಮಹತ್ವದ ಬಗ್ಗೆ ಯಾರಿಗೂ ಅನುಮಾನವಿಲ್ಲ. ಆದರೆ ರಾಜಕೀಯ ಸಂಕಷ್ಟ ಪರಿಹಾರಕ್ಕೆ ಈ ಮಹಾನುಭಾವರು ಬಳಕೆಯಾಗಬಾರದು ಅಷ್ಟೆ. ಹಾಗೆ ಬಳಕೆಯಾಗುವುದಾದರೂ ಅವರ ವಿಚಾರಧಾರೆಗಳು ಬಳಕೆಯಾಗಬೇಕು.

ಹೀಗೆ ಸಂಕಷ್ಟ ಕಾಲದಲ್ಲಿ ಬಸವಣ್ಣ ನೆನಪಾಗುವುದು ಇದೇ ಮೊದಲೇನೂ ಅಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿದ್ದಾಗ ಅನುಭವ ಮಂಟಪ ನಿರ್ಮಾಣದ ಕನಸೂ ಹುಟ್ಟಿಕೊಂಡಿತ್ತು. 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೇ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಕೂಡ ಎದ್ದಿತ್ತು. ಅವು ಕೂಡ ಸಂಕಷ್ಟ ಕಾಲದ ಕ್ರಮಗಳೇ ಆಗಿದ್ದವು. ಈಗಲೂ ನೋಡಿ. ಕಳೆದ ನವೆಂಬರ್ ತಿಂಗಳಿನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕೂಗು ಜೋರಾಗಿದ್ದಾಗಲೇ ವೀರಶೈವ ಲಿಂಗಾಯತರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಪ್ರಸ್ತಾಪ ಸಚಿವ ಸಂಪುಟದ ಮುಂದೆ ಬಂದಿತ್ತು. ಆದರೆ ಕಾಣದ ಕೈಗಳ ಎಚ್ಚರಿಕೆಯಿಂದ ಆ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳಲಿಲ್ಲ. ಕೊರೊನಾ ಸಂಕಷ್ಟ ಕಾಲದಲ್ಲಿಯೇ ಈಗಿನ ಮುಖ್ಯಮಂತ್ರಿ ಅನುಭವ ಮಂಟಪ ನಿರ್ಮಾಣಕ್ಕೂ ಮುಂದಾಗಿದ್ದಾರೆ.

ರಾಜಕೀಯ ಸಂಕಷ್ಟ ಬಂದಾಗ ಬಡವರನ್ನು ನೆನಪಿಸಿಕೊಳ್ಳುವುದಕ್ಕೆ ಇನ್ನೂ ಉದಾಹರಣೆಗಳು ಇವೆ. ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಜನ ಸಾಯತೊಡಗಿದಾಗ ನಿಜವಾಗಿಯೂ ರಾಜ್ಯವು ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟದಲ್ಲಿ ಇತ್ತು. ಈ ಸಂಕಟಗಳ ನಡುವೆಯೇ ರಾಜ್ಯದಲ್ಲಿ ಯಾವಾಗ ನಾಯಕತ್ವ ಬದಲಾವಣೆಯ ಕೂಗು ಜೋರಾಯಿತೋ ಆಗ ಮುಖ್ಯಮಂತ್ರಿಗಳಿಗೆ ಬಡ ಮತದಾರರು ನೆನಪಾಗಿ ಬಿಟ್ಟರು. ಬಿಜೆಪಿ ರಾಜ್ಯ ಉಸ್ತುವಾರಿ ಬೆಂಗಳೂರಿಗೆ ಬರು ತ್ತಾರೆ ಎಂದು ಗೊತ್ತಾದ ತಕ್ಷಣವೇ ಎಚ್ಚೆತ್ತುಕೊಂಡರು. ಕೊರೊನಾದಿಂದ ನಿಧನರಾದ, ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬದ ಸದಸ್ಯರಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದರು. ರಾಜ್ಯ ಸರ್ಕಾರ ಈ ಘೋಷಣೆ ಮಾಡುವುದಕ್ಕೆ ಮೊದಲೇ ಕೆಲವು ಶಾಸಕರು ಸ್ವಂತ ಖರ್ಚಿನಲ್ಲಿಯೇ ಇಂತಹ ಪರಿಹಾರ ವಿತರಣೆ ಮಾಡಿಬಿಟ್ಟಿದ್ದರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ನೀಡಿ ದರು. ಅದೇ ರೀತಿ ಕೃಷಿ ಸಚಿವ ಬಿ.ಸಿ.ಪಾಟೀಲ್ ತಲಾ ₹ 50,000 ಹಾಗೂ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್‌ ತಲಾ ₹ 25,000 ನೀಡಿದ ಎಷ್ಟೋ ದಿನಗಳ ನಂತರ ರಾಜ್ಯ ಸರ್ಕಾರ ಈ ತೀರ್ಮಾನ ಕೈಗೊಂಡಿತು. ಅತ್ತ ಕೇಂದ್ರ ಸರ್ಕಾರ ಇಂತಹ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟಿಗೆ ಹೇಳಿದೆ. ಆದರೂ ಇಲ್ಲಿ ಘೋಷಣೆ ಹೊರಬಿತ್ತು. ತಮ್ಮ ಸಂಪುಟದ ಸಹೋದ್ಯೋಗಿಗಳು ನಡೆಸುತ್ತಿದ್ದ ಕಾರ್ಯ ಮುಖ್ಯಮಂತ್ರಿ ಯವರ ಗಮನಕ್ಕೆ ಬಂದಿರಲಿಲ್ಲವೋ ಅಥವಾ ಜಾಣ ಕುರುಡಾಗಿತ್ತೋ ಗೊತ್ತಿಲ್ಲ. ಆದರೆ ಕುರ್ಚಿ ಅಲುಗಾಟ ಆರಂಭವಾದ ತಕ್ಷಣ ರಾಜ್ಯ ಸರ್ಕಾರ ಇಂತಹ ನಿರ್ಣಯ ಕೈಗೊಂಡಿತು. ಬಡವರಿಗೆ ನೆರವು ನೀಡಲು ಕುರ್ಚಿ ಅಲುಗಾಡುವವರೆಗೂ ಕಾಯಬಾರದಿತ್ತು.

ಶಿರಾ ಚುನಾವಣೆಯ ಸಂದರ್ಭದಲ್ಲಿ ದಿಢೀರನೆ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಲಾಯಿತು. ಬೆಳಗಾವಿ ಮತ್ತು ಬಸವಕಲ್ಯಾಣ ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆಯಾಯಿತು. ಚುನಾವಣೆ ಮುಗಿದಿದೆ. ಫಲಿತಾಂಶ ಹೊರ ಬಿದ್ದಿದೆ. ಆದರೆ ಈ ನಿಗಮಗಳಿಗೆ ಇನ್ನೂ ಅಧ್ಯಕ್ಷರ ನೇಮಕವಾಗಿಲ್ಲ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮತ್ತು ಒಕ್ಕಲಿಗ ಅಭಿವೃದ್ಧಿ ನಿಗಮಗಳಿಗೆ ತಕ್ಷಣವೇ ಹಣ ಮಂಜೂರು ಆಯಿತು. ಇದೆಲ್ಲಾ ಏನನ್ನು ತೋರಿಸುತ್ತದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT