ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವೀಂದ್ರ ಭಟ್ಟ ಲೇಖನ: ಇವರು ಎಂಥಾ ನಾಯಕರಯ್ಯಾ!

ನಮ್ಮ ನೇತಾರರ ವೈಯಕ್ತಿಕ ಹಿತಾಸಕ್ತಿಯ ಹಳಹಳಿಕೆಗಳಿಂದ ಮತದಾರರಿಗೆ ಆಗಬೇಕಾದುದೇನು?
Last Updated 27 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಅನಂತನಾಗ್ ದ್ವಿಪಾತ್ರದಲ್ಲಿ ಅಭಿನಯಿಸಿದ ‘ನಾರದ ವಿಜಯ’ ಎಂಬ ಸಿನಿಮಾದಲ್ಲಿ ‘ಇದು ಎಂಥಾ ಲೋಕವಯ್ಯಾ, ಹೊಸತನವ ಕೊಡುವ ಹೊಸ ವಿಷಯ ಅರಿವ ಬಯಕೆ ತರುವ ಇದು ಎಂಥಾ ಲೋಕವಯ್ಯಾ’ ಎಂಬ ಹಾಡು ಇದೆ. ಈಗ ಕರ್ನಾಟಕದ ಮತದಾರರು ಇದೇ ಹಾಡನ್ನು ಕೊಂಚ ಬದಲಾಯಿಸಿ, ‘ಇವರು ಎಂಥಾ ನಾಯಕರಯ್ಯಾ, ಹೊಸತನವು ಇರದ, ಹೊಸ ವಿಷಯ ಹೇಳದ ಇವರು ಎಂಥಾ ನಾಯಕರಯ್ಯಾ’ ಎಂದು ಹೇಳುವ ಕಾಲ ಬಂದಿದೆ.

ರಾಜ್ಯದಲ್ಲಿ ಈಗ ಮೂರೂ ಪಕ್ಷಗಳಲ್ಲಿ ಇಂತಹ ನಾಯಕರೇ ತುಂಬಿಕೊಂಡಿದ್ದಾರೆ. ಅವರು ಆಡುವ ಮಾತೋ ಅವರ ರಾಜಕೀಯ ವರಸೆಯೋ ಅವರ ಹೋರಾಟವೋ ಅವರ ಹಳಹಳಿಕೆಯೋ ಎಲ್ಲವೂ ದಿಕ್ಕುತಪ್ಪಿದಂತಾಗಿವೆ. ಅವರು ಏನು ಮಾತನಾಡುತ್ತಿದ್ದಾರೆ ಎಂಬುದು ಅವರಿಗೂ ಗೊತ್ತಿದ್ದಂತಿಲ್ಲ. ಮತದಾರರಿಗಂತೂ ಅರ್ಥವೇ ಆಗುತ್ತಿಲ್ಲ. ಮತದಾರರಿಗೆ ಅದು ಬೇಕಾಗಿಯೂ ಇಲ್ಲ. ಯಾಕೆಂದರೆ ಈ ಮಾತುಗಳು ಯಾವುವೂ ಮತದಾರರಿಗೆ ಸಂಬಂಧಪಟ್ಟ ವಿಷಯಗಳೇ ಅಲ್ಲ. ಬಹುತೇಕ ನಾಯಕರ ಹಳಹಳಿಕೆಗಳು ತೀರಾ ವೈಯಕ್ತಿಕ.

ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ‘ಅಯ್ಯೋ ನನ್ನ ಸರ್ಕಾರವನ್ನು ಸಿದ್ದರಾಮಯ್ಯ ಅನ್ಯಾಯವಾಗಿ ಕೆಡವಿಬಿಟ್ಟರು’ ಎಂದು ಗೋಳಿಡುತ್ತಿದ್ದಾರೆ. ಸಿದ್ದರಾಮಯ್ಯ ‘ಅಯ್ಯೋ ಚಾಮುಂಡೇಶ್ವರಿ ಮತದಾರರು ನನ್ನನ್ನು ಸೋಲಿಸಿಬಿಟ್ಟರು. ಬಾದಾಮಿ ಜನ ನನ್ನ ಗೆಲ್ಲಿಸದೇ ಇದ್ದರೆ ನನ್ನ ರಾಜಕೀಯ ಜೀವನ ಏನಾಗುತ್ತಿತ್ತು’ ಎಂದು ಕಣ್ಣೀರು ಹಾಕುತ್ತಿದ್ದಾರೆ. ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಬಗ್ಗೆ ಚಾಮುಂಡೇಶ್ವರಿ ಮತದಾರರು ಯಾಕೆ ತಲೆ ಕೆಡಿಸಿಕೊಳ್ಳಬೇಕು?

ಈ ನಡುವೆ ಜೆಡಿಎಸ್ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಲಾಗುವುದು ಎಂಬ ಗಾಳಿಸುದ್ದಿ ಹರಡಿ ಬಹಳಷ್ಟು ರಾಡಿಯಾಗಿದೆ. ಆ ಪಕ್ಷದ ಅಸ್ತಿತ್ವದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಸಿ.ಎಂ.ಇಬ್ರಾಹಿಂ ಅವರು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿ, ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗುವ ಉಮೇದಿನಲ್ಲಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೂ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಟವೆಲ್ ಒಗೆದು ಆಗಿದೆ.

ಆಡಳಿತ ಪಕ್ಷವಾಗಿರುವ ಬಿಜೆಪಿಯಲ್ಲಿ ಸಹಜವಾಗಿಯೇ ಬಹಳಷ್ಟು ಗೊಂದಲಗಳು ಇವೆ. ವಿಜಯಪುರದಲ್ಲಿ ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ ‘ನಾನು ಮಂತ್ರಿಯಾಗುವುದಿಲ್ಲ. ಆದರೆ ಸಂಕ್ರಾಂತಿ ವೇಳೆಗೆ ಎಲ್ಲ ಬದಲಾಗುತ್ತದೆ’ ಎನ್ನುತ್ತಾರೆ. ಅದಕ್ಕೆ ಕೇಂದ್ರ ಸಚಿವ ಸದಾನಂದ ಗೌಡ ‘ಯತ್ನಾಳ್ ಒಬ್ಬ ಆರ್ಡಿನರಿ ಶಾಸಕ ಅಷ್ಟೇ’ ಎನ್ನುತ್ತಾರೆ. ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ‘ನಾಯಕತ್ವ ಬದಲಾವಣೆ ಇಲ್ಲ’ ಎನ್ನುತ್ತಾರೆ. ಹೊರಗಡೆಯಿಂದ ಬಂದು ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಗೆ ಕಾರಣರಾದವರಲ್ಲಿ ಮೂವರು ಈಗ ‘ನಮ್ಮನ್ನು ಯಾವಾಗ ಮಂತ್ರಿ ಮಾಡ್ತೀರಿ’ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಮೇಲ್ಮನೆ ಸದಸ್ಯ ಎಚ್.ವಿಶ್ವನಾಥ್ ಸಚಿವ ಸ್ಥಾನದ ಜಪ ನಿಲ್ಲಿಸುತ್ತಿಲ್ಲ. ಹಿರಿಯ ಮುಖಂಡ ಶ್ರೀನಿವಾಸ ಪ್ರಸಾದ್, ಯಡಿಯೂರಪ್ಪ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಮೂಲ ಬಿಜೆಪಿಯ ಒಂದಿಷ್ಟು ನಾಯಕರೂ ತಮ್ಮನ್ನು ಸಚಿವರನ್ನಾಗಿ ಮಾಡಿ ಎಂಬ ಒತ್ತಡವನ್ನು ಮುಂದುವರಿಸಿದ್ದಾರೆ. ಕೆಲವರಂತೂ ಮುಖ್ಯಮಂತ್ರಿಯೇ ಆಗುವ ಉಮೇದಿನಲ್ಲಿದ್ದಾರೆ. ಇನ್ನು ಕೆಲವು ಮಂತ್ರಿಗಳು ತಮ್ಮ ತಮ್ಮ ಜಾತಿಯ ನಿಗಮ ಮಾಡುವುದಕ್ಕೋ ಮೀಸಲಾತಿ ಕಲ್ಪಿಸುವುದಕ್ಕೋ ಹೋರಾಟ ನಡೆಸಿದ್ದಾರೆ. ಒಂದಕ್ಕೂ ತಾಳತಂಟೆ ಇದ್ದಂತೆ ಕಾಣುತ್ತಿಲ್ಲ.

ಬಿಜೆಪಿ ಅತ್ಯಂತ ಶಿಸ್ತಿನ ಪಕ್ಷ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಾಕಿದ ಲಕ್ಷ್ಮಣ ರೇಖೆಯನ್ನು ಯಾರೂ ದಾಟುವುದಿಲ್ಲ ಎಂಬ ಮಾತು ಇತ್ತು. ಈಗ ಅದೆಲ್ಲ ಸುಳ್ಳಾಗಿದೆ. ಬಿಜೆಪಿಯ ರಾಜ್ಯ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ‘ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಈ ಬಗ್ಗೆ ಯಾರೂ ಮಾತನಾಡಬಾರದು’ ಎಂದು ಕಟ್ಟೆಚ್ಚರ ನೀಡಿದ್ದರೂ ಆಡಳಿತ ಪಕ್ಷದಲ್ಲಿ ಹೇಳಿಕೆಗಳ ಭರಾಟೆ ಕಡಿಮೆ ಏನಾಗಿಲ್ಲ. ನಾಯಕತ್ವ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ಮುಂತಾದ ಹೇಳಿಕೆಗಳ ಜೊತೆಗೆ ಬಿಜೆಪಿಯಲ್ಲಿ ಇನ್ನೊಂದು ವರ್ಗವು ದ್ವೇಷ ಭಾಷಣದಲ್ಲಿಯೂ ತೊಡಗಿದೆ. ‘ಬಾಲ ಕಟ್ ಮಾಡ್ತೇವೆ, ತಲೆ ಕಟ್ ಮಾಡುತ್ತೇವೆ’ ಎಂಬಂಥ ಹೇಳಿಕೆಗಳನ್ನೂ ಕೆಲವರು ನೀಡುತ್ತಿದ್ದಾರೆ. ಸಿ.ಟಿ.ರವಿ, ಶೋಭಾ ಕರಂದ್ಲಾಜೆ ಮುಂತಾದವರು ಅತಿಯಾದ ಹೇಳಿಕೆಗಳನ್ನೇ ನೀಡುತ್ತಿದ್ದಾರೆ. ಅದನ್ನು ನಿಯಂತ್ರಿಸುವ ಕೆಲಸವೂ ಆಗುತ್ತಿಲ್ಲ.

ರವೀಂದ್ರ ಭಟ್ಟ

ಕರ್ನಾಟಕದಲ್ಲಿ ನಡೆಯುತ್ತಿರುವ ಈ ಎಲ್ಲ ವಿದ್ಯಮಾನಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಬಿಜೆಪಿ ಹೈಕಮಾಂಡ್‌ಗೆ ಬಿಡುವಿಲ್ಲ. ದೆಹಲಿ ಸುತ್ತ ನಡೆಯುತ್ತಿರುವ ರೈತರ ಪ್ರತಿಭಟನೆ ಸುಧಾರಿಸಿದರೆ ಸಾಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎದುರಾದ ಒಂದೆರಡು ಪ್ರಮುಖ ಪ್ರತಿರೋಧಗಳಲ್ಲಿ ಇದೂ ಒಂದು. ರಾಜಕೀಯ ಪಕ್ಷಗಳ ಪ್ರತಿಭಟನೆಯಾಗಿದ್ದರೆ ಏನಾದರೂ ಮಾಡಬಹುದಿತ್ತು. ಆದರೆ ಇದು ಅನ್ನದಾತರ ಪ್ರತಿಭಟನೆ. ಒಂದು ದೃಷ್ಟಿಯಲ್ಲಿ ಬಿಸಿತುಪ್ಪ. ಉಗುಳಲೂ ಆಗದು, ನುಂಗಲೂ ಆಗದು. ರೈತರನ್ನು ಭಯೋತ್ಪಾದಕರು, ದೇಶದ್ರೋಹಿಗಳು ಎಂದೆಲ್ಲಾ ಕರೆದರೂ ಏನೂ ಪ್ರಯೋಜನವಾಗಲಿಲ್ಲ. ಬಿಜೆಪಿ ಹೈಕಮಾಂಡ್ ಈ ಹಿಂದೆ ಎಲ್ಲರ ಮೇಲೂ ಪ್ರಯೋಗ ಮಾಡುತ್ತಿದ್ದ ಭಾವನಾತ್ಮಕ ಬಾಣ ರೈತರಿಗೆ ನಾಟಲೇ ಇಲ್ಲ. ರೈತರ ಹೋರಾಟದ ಬಿಕ್ಕಟ್ಟು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ತಾನು ಏನು ಮಾಡಿದರೂ ನಡೆಯುತ್ತದೆ ಎಂಬುದು ಸುಳ್ಳು ಎಂಬ ಸತ್ಯ ಕೇಂದ್ರ ಸರ್ಕಾರಕ್ಕೆ ಅರಿವಿಗೆ ಬಂದ ಹಾಗಿದೆ.

ಇದರ ಜೊತೆಗೆ ಪಶ್ಚಿಮಬಂಗಾಳದಲ್ಲಿ ಚುನಾವಣೆ ಹೊಸಿಲಲ್ಲಿದೆ. ನಂತರ ತಮಿಳುನಾಡು, ಕೇರಳ ಚುನಾವಣೆಗಳೂ ಬರಲಿವೆ. ಎಲ್ಲೆಲ್ಲಿ ಸಾಮ್ರಾಜ್ಯ ವಿಸ್ತರಣೆ ಸಾಧ್ಯವೋ ಅಲ್ಲಲ್ಲಿ ವಿಸ್ತರಣೆ ಮಾಡುವತ್ತಲೇ ಅವರ ಕಣ್ಣು ಇರುವುದರಿಂದ, ಕರ್ನಾಟಕದಲ್ಲಿ ಪಕ್ಷದ ಆಂತರಿಕ ಕಚ್ಚಾಟದ ಬಗ್ಗೆ ಹೆಚ್ಚಿನ ಗಮನ ನೀಡಲು ಪುರಸತ್ತು ಇದ್ದ ಹಾಗೆ ಕಾಣುತ್ತಿಲ್ಲ. ಅದಕ್ಕಾಗಿಯೇ ಇಲ್ಲಿ ಪಕ್ಷದೊಳಗಿನ ಕಚ್ಚಾಟ ನಿರಂತರವಾಗಿ ಸಾಗಿದೆ. ಹಾಗೆ ನೋಡಿದರೆ ಸ್ಥಿತಪ್ರಜ್ಞರಂತೆ ಸದ್ಯಕ್ಕೆ ಕಾಣುವುದು ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ. ಯಾಕೆಂದರೆ ಅವರ ಬೇಡಿಕೆ ಹೆಚ್ಚೇನೂ ಇಲ್ಲ. ತಾನಿಲ್ಲವಾದರೆ ಮಗನಿಗೊಂದು ಜಾಗ ಕೊಡಿ ಎನ್ನುವುದಷ್ಟೇ ಆಗಿದೆ.

ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತ ಹೆಚ್ಚಾಗಿ, ಸರ್ಕಾರ ಅದಾಗಿಯೇ ಬಿದ್ದು ಹೋಗಿ ಅಧಿಕಾರ ತನ್ನಿಂದ ತಾನೇ ತನ್ನ ಮನೆಯ ಬಾಗಿಲಿಗೆ ಬರುತ್ತದೆ ಎಂದು ಕಾಂಗ್ರೆಸ್ ಕಾದು ಕುಳಿತ ಹಾಗಿದೆ. ಕಾಂಗ್ರೆಸ್‌ಗೂ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಬಾರದಿರಲಿ, ಬಿಜೆಪಿಗೂ ಪೂರ್ಣ ಪ್ರಮಾಣದ ಅಧಿಕಾರ ಸಿಗದೇ ಇರಲಿ ಎಂದು ‘ಹೊರೆ ಹೊರಲು’ ಸಿದ್ಧವಾಗಿ ಕುಳಿತಿದೆ ಜೆಡಿಎಸ್.

ನಾವು ಈಗ ಎಂತಹ ಸ್ಥಿತಿಯಲ್ಲಿದ್ದೇವೆ ಎಂದು ಒಮ್ಮೆ ಆಲೋಚಿಸಿ. ರಾಜ್ಯ ಎಂದೂ ಕಂಡು ಕೇಳರಿಯದ ಸಂಕಷ್ಟದಲ್ಲಿ ಸಿಲುಕಿದೆ. ಕೊರೊನಾದಿಂದ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಉದ್ಯೋಗಿಗಳಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣ ಇಲ್ಲ. ಖಾಸಗಿ ವಲಯ ಕೂಡಾ ತತ್ತರಿಸಿ ಹೋಗಿದೆ. ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ವ್ಯಾಪಾರ ವಹಿವಾಟು ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ಶಿಕ್ಷಣ ವ್ಯವಸ್ಥೆಯಂತೂ ಸಂಪೂರ್ಣ ನೆಲಕಚ್ಚಿದೆ.

ಇಂತಹ ಪರಿಸ್ಥಿತಿಯಲ್ಲಿ, ಎಲ್ಲ ರಾಜಕೀಯ ಪಕ್ಷಗಳೂ ರಾಜಕೀಯವನ್ನು ಬದಿಗಿಟ್ಟು ರಾಜ್ಯದ ಜನರ ಹಿತ ಕಾಪಾಡಲು ಒಗ್ಗಟ್ಟಿನಿಂದ ಶ್ರಮಿಸಬೇಕಾಗಿತ್ತು. ಆದರೆ ನಮ್ಮ ನಾಯಕರ ಹಳಹಳಿಕೆಗಳೆಲ್ಲಾ ಅವರ ಮನೆಯ ಗಡಿಯನ್ನು ದಾಟಿ ಆಚೆಗೇ ಬಂದಿಲ್ಲ. ಇವರು ಎಂಥಾ ನಾಯಕರಯ್ಯಾ, ಹೊಸತನವು ಇರದ ಹೊಸ ವಿಷಯ ಹೇಳದ ಇವರು ಎಂಥಾ ನಾಯಕರಯ್ಯಾ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT