ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲಾಶಾಸನದ ಸಮಗ್ರ ಮಾಹಿತಿ ಹೊರಬರಲಿ

Last Updated 9 ಫೆಬ್ರುವರಿ 2018, 10:11 IST
ಅಕ್ಷರ ಗಾತ್ರ

ಹಳೇಬೀಡು(ಮಹಾಕವಿ ಜನ್ನ ವೇದಿಕೆ): ‘ಐತಿಹಾಸಿಕ ತಾಣಗಳಲ್ಲಿ ಸಮ್ಮೇಳನ ನಡೆಯುವುದರಿಂದ ಸ್ಥಳದ ಮಹತ್ವ ಹೆಚ್ಚು ಪ್ರಚಾರಗೊಳ್ಳುತ್ತದೆ. ಅಲ್ಲದೇ ಅಲ್ಲಿಯ ಇತಿಹಾಸದೊಂದಿಗೆ ಸಾಹಿತ್ಯ ಕೃಷಿಯೂ ಬೆಳೆಯುತ್ತದೆ’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಚ್‌.ಎಂ.ದಯಾನಂದ್ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಬುಧವಾರ ಸಂಜೆ ನಡೆದ 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬೇಲೂರು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಐತಿಹಾಸಿಕ ಸ್ಮಾರಕಗಳಿವೆ. ಹಲ್ಮಿಡಿಯಲ್ಲಿ ಕನ್ನಡ ಪ್ರಥಮ ಶಿಲಾಶಾಸನ ದೊರೆತಿರುವುದಲ್ಲದೆ, ಹಲವು ಕಡೆಗಳಲ್ಲಿ ಸಾಕಷ್ಟು ಶಿಲಾಶಾಸನಗಳು ದೊರೆತಿವೆ. ಪುರಾತತ್ವ ಹಾಗೂ ಪರಂಪರೆ ಇಲಾಖೆ ಸ್ಮಾರಕ ಶಿಲಾ ಶಾಸನ ಸಂರಕ್ಷಣೆಯೊಂದಿಗೆ ಅವುಗಳ ಮಾಹಿತಿಯನ್ನು ಹೊರಹಾಕುವ ಕೆಲಸ ನಿರ್ವಹಿಸಬೇಕಿದೆ’ ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷ ಟಿ.ಎಚ್.ಅಪ್ಪಾಜಿಗೌಡ ಮಾತನಾಡಿ, ‘ಜನಪದರು ನಿಜವಾದ ಕನ್ನಡದ ಉದ್ಧಾರಕರು. ಇದಕ್ಕೆ ಜನಪದ ಸಾಹಿತ್ಯ ಸಾಕ್ಷಿಯಾಗಿವೆ. ಕನ್ನಡವನ್ನು ಕಟ್ಟಿ ಬೆಳೆಸುವುದು ಕೇವಲ ಸಂಘ–ಸಂಸ್ಥೆಗಳ ಕೆಲಸವಲ್ಲ. ಪ್ರತಿಯೊಬ್ಬ ಕನ್ನಡಿಗನೂ ಕನ್ನಡದ ಉಳಿವಿಗೆ ದುಡಿಯಬೇಕು’ ಎಂದರು.

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಚ್‌.ಎಂ.ಮಜಪ್ಪ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷರಾದ ಸಿದ್ದೇಗೌಡ, ಮ.ಶಿವಮೂರ್ತಿ. ಹಾಲಪ್ಪಶೆಟ್ಟಿ, ಅನಂತರಾಜೇ ಅರಸು, ವೀರಪ್ಪಯ್ಯ ಮುಖಂಡರಾದ ಬಿ.ಶಿವರುದ್ರಪ್ಪ. ಕೆ.ಎಸ್‌.ಲಿಂಗೇಶ್‌, ಹುಲ್ಲಳ್ಳಿ ಸುರೇಶ್‌, ಕೊರಟಗೆರೆ ಪ್ರಕಾಶ್‌, ಗ್ರಾನೈಟ್‌ ರಾಜಶೇಖರ್, ನೌಕರರ ಸಂಘದ ಅಧ್ಯಕ್ಷ ಲೋಕೇಶ್‌, ಪ್ರಾಚಾರ್ಯರಾದ ಡಾ.ಡಿ.ಜಿ.ಕೃಷ್ಣೇಗೌಡ, ಡಾ.ಜಿ.ಡಿ.ನಾರಾಯಣ್‌ ಇದ್ದರು.

‘ಉತ್ತಮವಾಗಿ ಭರತನಾಟ್ಯ ಪ್ರದರ್ಶಿಸಿದ ಬೇಲೂರಿನ ಪೂರ್ಣಪ್ರಜ್ಞ ಶಾಲೆಯ ಅನನ್ಯಾ ಅವರಿಗೆ ಹಾಸನದ ಎಚ್‌ಕೆಎಸ್‌ ಅಂತರರಾಷ್ಟ್ರೀಯ ಶಾಲೆಯಲ್ಲಿ ಉಚಿತವಾಗಿ ಕಾಲೇಜು ಶಿಕ್ಷಣ ನೀಡಲಾಗುವುದು’ ಎಂದು ಶಾಲೆಯ ಕಾರ್ಯದರ್ಶಿ ಎಚ್‌.ಕೆ.ಸುರೇಶ್‌ ಘೋಷಿಸಿದರು. ಬೇಲೂರಿನ ವಿದ್ಯಾ ವಿಕಾಸ ಶಾಲೆಯ ಮಕ್ಕಳು ನೃತ್ಯರೂಪಕ ಪ್ರದರ್ಶಿಸಿದರು.

ಬಾಹುಬಲಿಗೆ ಕಾವ್ಯಾಭಿಷೇಕ

ಹಳೇಬೀಡು: ‘ಏಕಶಿಲೆಯ ಮೂರ್ತಿ ಬಾಹುಬಲಿ...’ ಎಂದು ಒಬ್ಬರು ಕವನ ಓದಿದರೆ, ಮತ್ತೊಬ್ಬರು ‘ಇಂದ್ರಗಿರಿಯ ಮೇಲೆ ನಿಂತ ಬಾಹುಬಲಿ...’ ಎಂದು ಕವನ ಓದಿದರು.

ಪಟ್ಟಣದಲ್ಲಿ ಬುಧವಾರ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಬಾಹುಬಲಿ ಮಸ್ತಕಾಭಿಷೇಕ ನೆನಪಿಸುವ ಕವನಗಳೊಂದಿಗೆ ಕಾವ್ಯಾಭಿಷೇಕ ನಡೆಯಿತು. ಕೆಲ ಕವಿಗಳು ನಾಟಕದ ಸಂಭಾಷಣೆಯಂತೆ ಕವನ ಓದಿದರು. ಒಬ್ಬರು ಹಾಡಿನ ರೂಪದಲ್ಲಿ ಕವನ ಮಂಡಿಸಿದರೆ, ಸಾಕಷ್ಟು ಕವಿಗಳು ಓದಿದ್ದು ಗದ್ಯದಂತೆ ಕೇಳಿ ಬಂದವು.

ಸಾಹಿತಿ ನವಾಬ್‌ ಬೇಲೂರು ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಪ್ರಕಾಶ್‌ ಸೊಂಪುರ, ಬೊಮ್ಮಡಿಹಳ್ಳಿ ಕುಮಾರಸ್ವಾಮಿ, ಧರ್ಮ, ಹಿರಿಕೊಲೆ ನಂಜುಂಡಯ್ಯ, ಗಂಗಾಧರಪ್ಪ. ಎನ್‌.ಜೆ.ಜಯಣ್ಣ, ಶಿವಕುಮಾರ್ ಮಾದಗುಂಡಿ, ಹಯವದನರಾವ್‌, ಯಲ್ಲಪ್ಪ, ಅತುಲ್‌ ಜೈನ್‌, ಸಾಯಿರಾಭಾನು, ಪಲ್ಲವಿ, ಫರ್‌ಜಾನ್‌ ಕವನ ಓದಿದರು. ಬಿ.ಎಂ.ನಾಗರಾಜು, ಚಂದ್ರಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT