Ask ಅಮೆರಿಕ, ಯು.ಎಸ್.ಕಾನ್ಸುಲೇಟ್, ಚೆನ್ನೈ

7

Ask ಅಮೆರಿಕ, ಯು.ಎಸ್.ಕಾನ್ಸುಲೇಟ್, ಚೆನ್ನೈ

ಯು.ಎಸ್.ಕಾನ್ಸುಲೇಟ್, ಚೆನ್ನೈ
Published:
Updated:

1. ಯು. ಎಂ. ಆದರ್ಶ, ಕೊಪ್ಪ

ಕ್ರೀಡಾ ಕ್ಷೇತ್ರದಲ್ಲಿ ಮಕ್ಕಳನ್ನು ಉತ್ತೇಜಿಸಲು ಯಾವ ವಿಶೇಷ ಕಾರ್ಯಕ್ರಮಗಳನ್ನು ಅಮೆರಿಕ ಹಮ್ಮಿಕೊಂಡಿದೆ?

ಕ್ರೀಡೆಗಳಿಗೆ ಅಮೆರಿಕ ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತದೆ.  ಅಲ್ಲದೇ, ಆರೋಗ್ಯ ಹಾಗೂ ದೈಹಿಕ ಸದೃಢತೆ ಕುರಿತೂ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಹೀಗಾಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾತ್ರವಲ್ಲದೇ, ಖಾಸಗಿ ಸಂಸ್ಥೆಗಳೂ ಕ್ರೀಡೆಗಳಿಗೆ ಉತ್ತೇಜನ ನೀಡುತ್ತವೆ.   ಶಾಲೆಗಳಲ್ಲಿಯೇ ಎಲ್ಲ ವಿದ್ಯಾರ್ಥಿಗಳಿಗೂ ದೈಹಿಕ ಶಿಕ್ಷಣ ತರಗತಿಗಳಲ್ಲಿ ವ್ಯಾಯಾಮ ಹಾಗೂ ಕ್ರೀಡೆಗಳ  ಮಹತ್ವವನ್ನು ಪರಿಚಯಿಸಲಾಗುತ್ತದೆ.  ಅಲ್ಲದೇ, ಅಂತರ ಶಾಲಾ ಮಟ್ಟದ ಸ್ಪರ್ಧೆಗಳಲ್ಲಿ ನುರಿತ ಕ್ರೀಡಾಳುಗಳು ತಮ್ಮ ಶಾಲೆಯನ್ನು ಪ್ರತಿನಿಧಿಸುತ್ತಾರೆ.  ಈ ಬಗೆಯ ಕ್ರೀಡಾ ಕಾರ್ಯಕ್ರಮಗಳು ಸ್ಥಳೀಯ ಸಮುದಾಯದಲ್ಲಿ ಸಾಕಷ್ಟು ಜನಪ್ರಿಯ.  ಅಲ್ಲದೇ, ಆರೋಗ್ಯ ಹಾಗೂ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಸರ್ಕಾರವೂ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.  ಈ ನಿಟ್ಟಿನಲ್ಲಿ ಅಧ್ಯಕ್ಷರ ದೈಹಿಕ ಪಟುತ್ವ ಹಾಗೂ ಕ್ರೀಡೆಗಳ ಪರಿಷತ್ತು (The President~s Council on Physical Fitness and Sports) ಮಹತ್ವದ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳ ದೈಹಿಕ ಪಟುತ್ವವನ್ನು ಮೌಲ್ಯಮಾಪನ ಮಾಡಿ, ಹಲವಾರು ಪ್ರಶಸ್ತಿಗಳನ್ನೂ ನೀಡುವುದು ಈ ಪರಿಷತ್ತಿನ ಕಾರ್ಯ.  ಮಕ್ಕಳು ಮತ್ತು ಹದಿ ಹರೆಯದವರು ದಿನಂಪ್ರತಿ ಅರವತ್ತು ನಿಮಿಷ ಅಥವಾ ಅದಕ್ಕೂ ಹೆಚ್ಚು ಕಾಲದ ದೈಹಿಕ ಚಟುವಟಿಕೆಗಳಲ್ಲಿ ತೊಡಗಬೇಕು ಎಂದು ಅಮೇರಿಕದ ಆರೋಗ್ಯ ಹಾಗೂ ಮಾನವ ಸೇವೆಗಳ ಇಲಾಖೆಯು ಶಿಫಾರಸ್ಸು ಮಾಡುತ್ತದೆ.ಮಕ್ಕಳಿಗಾಗಿ ಹಲವಾರು ಕ್ರೀಡಾ ಲೀಗ್‌ಗಳನ್ನು  ಅನೇಕ ನಗರಗಳ ಸಾರ್ವಜನಿಕ ಪಾರ್ಕು ಹಾಗೂ ಜಿಮ್ಮುಗಳಲ್ಲಿ ಸ್ಥಳೀಯ ಸಮುದಾಯಗಳು  ರೂಪಿಸಿವೆ.  ಸಾಕರ್, ಬ್ಯಾಸ್ಕೆಟ್‌ಬಾಲ್, ಅಮೆರಿಕನ್ ಫುಟ್‌ಬಾಲ್ ಮತ್ತು ಬೇಸ್‌ಬಾಲ್ ಅಥವಾ ಸಾಫ್ಟ್‌ಬಾಲ್ ಅಮೆರಿಕದಲ್ಲಿ ಜನಪ್ರಿಯ.  ಪ್ರತಿಯೊಬ್ಬರ ಭಾಗವಹಿಸುವಿಕೆಗೆ ಹೆಚ್ಚಿನ ಒತ್ತನ್ನು ಈ ಲೀಗುಗಳು ನೀಡುತ್ತವೆ.  ಅನೇಕ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಂಡದಲ್ಲಿ ಕಡಿಮೆ ಕೌಶಲ್ಯ ಹೊಂದಿದ್ದರೂ, ಆಡಲೇಬೇಕು ಎಂದು ಕಡ್ಡಾಯ ಮಾಡಲಾಗುತ್ತದೆ.  ಇದರ ಮುಖ್ಯ ಉದ್ದೇಶ ಎಂದರೆ, ಮಕ್ಕಳಿಗೆ ಕ್ರೀಡೆಗಳಲ್ಲಿನ ಖುಷಿಯನ್ನು ಕಲಿಸುವುದು ಮತ್ತು ಅದನ್ನು ಅವರು ಜೀವನದುದ್ದಕ್ಕೂ ಅಳವಡಿಸಿಕೊಳ್ಳಲು ಆಸಕ್ತಿ ಮೂಡಿಸುವುದು.  ಅಧ್ಯಕ್ಷರ ದೈಹಿಕ ಪಟುತ್ವದ ಪರಿಷತ್ತಿನ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಮುಂದಿನ ವೆಬ್ ಸೈಟಿಗೆ ಭೇಟಿ ನೀಡಿ: www.presidentschallenge.org/celebrate/physical-fitness.shtml.
ಪ್ರಿಯ ಓದುಗ,

ದಕ್ಷಿಣ ಭಾರತದಲ್ಲಿ ಮೂರು ತಿಂಗಳು ಕಳೆದೆ ಎಂಬುದನ್ನು ನಂಬಲು ಕಷ್ಟವಾಗುತ್ತಿದೆ.  ಕಳೆದ ತಿಂಗಳಷ್ಟೇ ದೀಪಾವಳಿಯ ಸಶಬ್ದ ಆಚರಣೆಯನ್ನು ಉತ್ಸುಕತೆಯಿಂದ ಸಾಕ್ಷೀಕರಿಸಿದೆ.  ಮೊಟ್ಟಮೊದಲ ಬಾರಿಗೆ ದಕ್ಷಿಣ ಭಾರತದ ಪ್ರಮುಖ ಉದ್ಯಮ ನಗರ ಕೋಯಮತ್ತೂರಿಗೆ ಭೇಟಿ ನೀಡಿ, ಜವಳಿ ಉದ್ಯಮದ ಇತಿಹಾಸದಲ್ಲಿ ಈ ನಗರ ಅಗ್ರಸ್ಥಾನ ಪಡೆದ ಬಗೆಯನ್ನು ಅರಿತೆ. ಅಲ್ಲಿನ ಪಿಎಸ್ ಜಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗಿನ ಸಂವಾದ ನಿಜಕ್ಕೂ ಖುಷಿ ಕೊಟ್ಟಿತು. ಮಾರನೇ ದಿನವನ್ನು ನನ್ನ ಸಹೋದ್ಯೋಗಿಗಳೊಂದಿಗೆ ಊಟಿಯ ಪ್ರಶಾಂತ ಪರಿಸರದಲ್ಲಿ ಕಳೆದೆ. ಅಲ್ಲದೇ, ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಆನೆ ಸವಾರಿಯ ಸಂತೋಷ ನನ್ನದಾಗಿತ್ತು.  ಎರಡೂ ದೇಶಗಳಿಗೆ ಪ್ರಮುಖ ವಿಷಯವಾದ ಶಿಕ್ಷಣದ ಮಹತ್ವ ಸಾರಲು, ನವೆಂಬರ್ 14-18ರ ಅವಧಿಯಲ್ಲಿ ಅಂತರರಾಷ್ಟ್ರೀಯ ಶಿಕ್ಷಣ ಸಪ್ತಾಹ ಆಚರಿಸಿದೆವು. ದಕ್ಷಿಣ ಭಾರತ 20 ವಿಶ್ವವಿದ್ಯಾಲಯಗಳಿಗೆ ನಮ್ಮ 20 ರಾಜತಾಂತ್ರಿಕ ಅಧಿಕಾರಿಗಳು ಭೇಟಿ ನೀಡಿ, ಅಮೆರಿಕಾ-ಭಾರತದ ಬಾಂಧವ್ಯವನ್ನು ಶಿಕ್ಷಣ ಹಾಗೂ ಉದ್ಯಮ ಕ್ಷೇತ್ರಗಳ ಮೂಲಕ ಬಲಪಡಿಸುವ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು. ಅಮೇರಿಕನ್ನರಿಗೆ ನವೆಂಬರ್ ತಿಂಗಳಲ್ಲಿ ಬರುವ ಪ್ರಮುಖ ಆಚರಣೆ ಎಂದರೆ, `ಥ್ಯಾಂಕ್ಸ್ ಗಿವಿಂಗ್~. ಅದು ನಮ್ಮ ರಾಷ್ಟ್ರೀಯ ರಜೆಗಳಲ್ಲೊಂದು.  ಇದು ದಕ್ಷಿಣ ಭಾರತದಲ್ಲಿ ಕುಟುಂಬ ಹಾಗೂ ಸ್ನೇಹಿತರೊಡಗೂಡಿ ಆಚರಿಸಲಾಗುವ ``ಸಂಕ್ರಾಂತಿ~~ ಮಾದರಿಯ ಅಮೇರಿಕನ್ ಸುಗ್ಗಿ ಸಂಭ್ರಮ. ಇನ್ನೇನು ಚೆನ್ನೈನಲ್ಲಿ ಆರಂಭವಾಗಲಿರುವ ಡಿಸೆಂಬರ್ ತಿಂಗಳ ಕರ್ನಾಟಕ ಸಂಗೀತ ಋತುವನ್ನು ತುಂಬ ನಿರೀಕ್ಷೆಯಿಂದ ಇದಿರು ನೋಡುತ್ತಿದ್ದೇನೆ. ತಮ್ಮ ವಿಶ್ವಾಸಿ

ಜೆನಿಫೆರ್ ಮ್ಯಾಕ್‌ಇನ್ಟೈರ್

ಕಾನ್ಸಲ್ ಜನರಲ್, ಅಮೆರಿಕನ್ ದೂತಾವಾಸ, ಚೆನ್ನೈ

2. ಬಸವರಾಜ ಮುಡಶಿ, ಬೆಳಗಾವಿ

ಅಮೆರಿಕದ ಲಿಬರ್ಟಿ ಪ್ರತಿಮೆಯನ್ನು (ಸ್ವಾತಂತ್ರ್ಯದ ಪ್ರತಿಮೆ) 1886ರಲ್ಲಿ ಕೊಡುಗೆಯಾಗಿ ಫ್ರಾನ್ಸ್ ದೇಶ ನೀಡಿದ್ದಂತೆ?  ಈ ಪ್ರತಿಮೆಯ ಇತಿಹಾಸದ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿ.

ಸಮಾನ ಪ್ರಜಾತಂತ್ರಿಕ ಮೌಲ್ಯಗಳನ್ನು ಅಮೆರಿಕ ಹಾಗೂ ಫ್ರಾನ್ಸ್ ದೇಶಗಳು ಪೋಷಿಸುತ್ತಿರುವ ಗೆಳೆತನದ ಕುರುಹೇ ಲಿಬರ್ಟಿ ಪ್ರತಿಮೆ  (ಸ್ವಾತಂತ್ರ್ಯದ ಪ್ರತಿಮೆ).  ಫ್ರಾನ್ಸಿನ ರಾಜಕೀಯ ಚಿಂತಕ ಎಡಾರ್ಡ್ ಡೆ ಲಬೋಲಾಯೆ ಅವರು ಈ ಕುರಿತು ಮೊದಲು ಪ್ರಸ್ತಾಪಿಸಿದರು.  ಫ್ರೆಂಚ್ ಶಿಲ್ಪಿ ಅಗಾಸ್ಟೇ ಬಾರ್ತೋಲ್ಡಿ ಈ ಕಲಾಕೃತಿಯನ್ನು ವಿನ್ಯಾಸ ಮಾಡಿದರು.  ಇವರಿಬ್ಬರೂ ವಿಶ್ವದ ಜ್ಞಾನೋದಯದ ಸ್ವಾತಂತ್ರ್ಯ ಪ್ರತಿಮೆ ಎಂದು ಹೆಸರಿಸಲು ಯೋಚಿಸಿದ್ದರು.ಎರಡೂ ದೇಶಗಳ ನಾಗರಿಕ ಸಮುದಾಯಗಳು ಈ ಪ್ರತಿಮೆಯ ವೆಚ್ಚವನ್ನು ಭರಿಸಿದವು.  ಅಮೆರಿಕದ ನಾಗರಿಕರು ವಿಗ್ರಹದ ಅಳತೆಗನುಗುಣವಾಗಿ ಶಿಲಾ ಆಧಾರಪೀಠವನ್ನು (ವಿಗ್ರಹ ಸ್ಥಾಪಿಸಲು ಅನುವಾಗುವಂತೆ) ನಿರ್ಮಿಸಲು ಹಣ ಹೊಂದಿಸಿದರೆ, ಫ್ರಾನ್ಸ್ ನಾಗರಿಕರು ವಿಗ್ರಹಕ್ಕೆ ಹಣ ಒಟ್ಟು ಮಾಡಿದರು.ವಿಗ್ರಹದ ಹೊರ ಕವಚ ತಾಮ್ರದ ತಗಡುಗಳನ್ನು ಹೊಂದಿದ್ದು, ಒಳಗೆ ಉಕ್ಕು ಕಟ್ಟಿನ ಆಧಾರ ಹೊಂದಿದೆ.  ಈ ಪ್ರತಿಮೆಯನ್ನು 1876ರಿಂದ 1884ರವರೆಗೆ ಫ್ರಾನ್ಸಿನಲ್ಲಿ ತಯಾರಿಸಲಾಯಿತು.  ಆ ಬಳಿಕ ಅದನ್ನು ಕಳಚಿ, ಅಮೆರಿಕಕ್ಕೆ ಸಾಗಿಸಲಾಯಿತು.  ಈ ಪ್ರತಿಮೆಯನ್ನು ಅಕ್ಟೋಬರ್ 28, 1886ರಂದು ಅನಾವರಣಗೊಳಿಸಲಾಯಿತು.  ಈ ಪ್ರತಿಮೆ ಸ್ಥಾಪನೆಯ 125ನೇ ವರ್ಷದ ಆಚರಣೆಯನ್ನು ಇದೇ ವರ್ಷದ ಮುಂದಿನ ಕೆಲ ದಿನಗಳಲ್ಲಿ ಯೋಚಿಸಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಅಮೆರಿಕದ ನ್ಯಾಷನಲ್ ಪಾರ್ಕ್ ಸರ್ವೀಸ್ ವೆಬ್ ಸೈಟಿನ ಕೊಂಡಿಯನ್ನು http://www.nps.gov/stli/index.htm ಬಳಸಿ..3. ಕೆ. ಎಂ. ನಾಗೇಶ್, ಕೆಂಪನಹಳ್ಳಿ, ಚಿಕ್ಕಮಗಳೂರು

ದಯವಿಟ್ಟು ಅಮೆರಿಕದ ದ್ವಿಪೌರತ್ವ ಹಾಗೂ ಗ್ರೀನ್ ಕಾರ್ಡ್ ವ್ಯವಸ್ಥೆಯ ಕುರಿತು ಮಾಹಿತಿ ನೀಡಿ.

ಒಬ್ಬ ವ್ಯಕ್ತಿ ಎಕಕಾಲಕ್ಕೆ ಎರಡು ದೇಶಗಳ ಪೌರತ್ವ ಹೊಂದಿರುವ ಪರಿಕಲ್ಪನೆಯೇ ದ್ವಿ ಪೌರತ್ವ.  ಪ್ರತಿಯೊಂದು ದೇಶವೂ ತನ್ನದೇ ಆದ ಪೌರತ್ವ ಕಾನೂನುಗಳನ್ನು ಹೊಂದಿರುತ್ತದೆ.  ಈ ಬಗೆಯ ದ್ವಿ ಪೌರತ್ವವು ವಿಭಿನ್ನ ಕಾನೂನುಗಳ ಸ್ವಯಂಚಾಲಿತ ಪ್ರಕ್ರಿಯೆಯಿಂದ ಲಭಿಸುತ್ತದೆ. ಇದು ಆಯ್ಕೆಯ ವಿಷಯವಲ್ಲ.  ಉದಾಹರಣೆಗೆ, ಅಮೆರಿಕದ ನಾಗರಿಕರು ವಿದೇಶದಲ್ಲಿ ಜನ್ಮ  ನೀಡಿದ ಮಗು, ಏಕ ಕಾಲಕ್ಕೆ ಎರಡೂ ದೇಶದ ಪೌರತ್ವ ಪಡೆಯುತ್ತದೆ.  ಅದು ಅಮೆರಿಕದ ನಾಗರಿಕನೂ ಹೌದು, ಜನ್ಮ ತಳೆದ ದೇಶದ ಪೌರನೂ ಹೌದು.ಇಂಥವರು ಅಮೆರಿಕ ಹಾಗೂ ಜನ್ಮ ತಳೆದ ವಿದೇಶ ಎರಡಕ್ಕೂ ನಿಷ್ಠರಾಗಿರಬೇಕು.  ಎರಡೂ ದೇಶಗಳ ಕಾನೂನುಗಳನ್ನೂ ಅವರು ಗೌರವಿಸಬೇಕು.  ಈ ಎರಡು ದೇಶಗಳೂ ತನ್ನ ಕಾನೂನುಗಳನ್ನು ವಿಶೇಷವಾಗಿ ಆ ವ್ಯಕ್ತಿ ತನ್ನ ನೆಲದ ಮೇಲಿದ್ದಾಗ, ಜಾರಿ ಮಾಡುವ ಹಕ್ಕನ್ನು ಹೊಂದಿರುತ್ತವೆ.  ಅಮೆರಿಕದ ಪೌರತ್ವ ಹೊಂದಿರುವ ದ್ವಿಪೌರತ್ವ ಹೊಂದಿರುವವರು ಅಮೆರಿಕ ಪ್ರವೇಶಿಸುವಾಗ ಅಥವಾ ವಿದೇಶಕ್ಕೆ ಹೋಗುವಾಗ ಅಮೆರಿಕದ ಪಾಸ್ ಪೋರ್ಟನ್ನೇ ಕಡ್ಡಾಯವಾಗಿ ಬಳಸಬೇಕು.  ಆದರೆ, ವಿದೇಶಿ ಪಾಸ್‌ಪೋರ್ಟಿನ ಬಳಕೆ, ಅಮೆರಿಕದ ಪೌರತ್ವಕ್ಕೆ ಧಕ್ಕೆಯನ್ನೇನೂ ಮಾಡುವುದಿಲ್ಲ.  ಯಾವುದಾದರೂ ಒಂದು ದೇಶದ ಪೌರತ್ವವನ್ನು ತ್ಯಜಿಸುವ ಅವಕಾಶವನ್ನೂ ಅನೇಕ ದೇಶಗಳು ನೀಡುತ್ತವೆ.ಅಮೆರಿಕದ ಶಾಶ್ವತ ನಿವಾಸಿ ಸ್ಥಾನಮಾನವನ್ನು ಸೂಚಿಸಲು ಹಸಿರು ಕಾರ್ಡ್ (ಗ್ರೀನ್ ಕಾರ್ಡ್) ಎಂಬ  ನುಡಿಗಟ್ಟನ್ನು ಬಳಸಲಾಗುತ್ತದೆ.  ವಿದೇಶಿ ನಾಗರಿಕನೊಬ್ಬ ಅಮೆರಿಕದಲ್ಲಿ ಶಾಶ್ವತ ನಿವಾಸಿ ಸ್ಥಾನಮಾನ ಪಡೆಯಬೇಕಾದರೆ, ಮೊದಲು ಆತ ಮಂಜೂರಾದ ವಲಸೆ ವಿಸಾ ಅರ್ಜಿಯ ಫಲಾನುಭವಿಯಾಗಿರಬೇಕು.  ಅಮೆರಿಕ ನಾಗರಿಕ ಅಥವಾ ಶಾಶ್ವತ ನಿವಾಸಿ ಸ್ಥಾನಮಾನ ಹೊಂದಿರುವ ಫಲಾನುಭವಿಯ ಸಂಬಂಧಿಗಳು ಅಥವಾ ಫಲಾನುಭವಿಯ ಭಾವಿ ಉದ್ಯೋಗದಾತರು, ಅರ್ಜಿ ಸಲ್ಲಿಸಬಹುದು.  ಅಮೆರಿಕ ಪೌರತ್ವ ಹಾಗೂ ವಲಸೆ ಸೇವೆ ಇಲಾಖೆಯಲ್ಲಿ ಈ ಅರ್ಜಿಯನ್ನು ಸಲ್ಲಿಸುವುದೇ ಮೊದಲ ಹೆಜ್ಜೆ.    ಈ ಕುರಿತ ಹೆಚ್ಚಿನ ಮಾಹಿತಿಯನ್ನು ಪಡೆಯಲು ದಯವಿಟ್ಟು www.uscis.gov ವೆಬ್ ಸೈಟಿಗೆ ಭೇಟಿ ನೀಡಿ.  ವಲಸೆ ಹೋಗಲು ಹಾಗೂ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಇಚ್ಛಿಸುವ ಎಲ್ಲ ವಿದೇಶಿ ನಾಗರಿಕರು ಅಮೆರಿಕನ್ ವಿಸಾ ವಲಸೆ ಕಾನೂನು ಹಾಗೂ ಹಲವು ವಿಶೇಷ ಪ್ರಕ್ರಿಯೆಗಳನ್ನು ಪೂರೈಸಲೇಬೇಕು.4. ಎಚ್. ಡಿ. ಚಂದ್ರಶೇಖರ, ಹಿರೇಕೇರೂರು ತಾಲೂಕು, ಹಾವೇರಿ ಜಿಲ್ಲೆ.

ಅಮೆರಿಕದಲ್ಲಿ ಅತಿ ಹೆಚ್ಚು ಪ್ರವಾಸಿಗಳನ್ನು ಆಕರ್ಷಿಸುವ ತಾಣ ಯಾವುದು?

ಈಚಿನ ಮಾಹಿತಿಯ ಪ್ರಕಾರ, ನ್ಯೂಯಾರ್ಕ್ ನಗರದ ಟೈಮ್ಸ ಸ್ಕ್ವೇರ್, ಅಮೆರಿಕದ ಅತ್ಯಂತ ಜನಪ್ರಿಯ ಪ್ರವಾಸಿ ತಾಣ.  ದಿನಂಪ್ರತಿ ಒಂದು ಲಕ್ಷ ಜನ ಭೇಟಿ ನೀಡುತ್ತಾರೆ!  ರಂಗಭೂಮಿ, ಸಿನೆಮಾ ಹಾಗೂ  ಭಾರೀ ಪ್ರಮಾಣ  ಜಾಹೀರಾತು ಫಲಕಗಳಿಗೆ ಈ ಚೌಕ ಹೆಸರುವಾಸಿ.  ಅಲ್ಲದೇ, ಹೊಸ ವರ್ಷಾರಂಭದ ಆಚರಣೆ ಇಲ್ಲಿನ ವಿಶೇಷ ಆಕರ್ಷಣೆ. ಸುಮಾರು 500 ಕಿಲೋ ತೂಕದ ಹೆಸರಾಂತ ಟೈಮ್ಸ ಚೆಂಡು 23 ಮೀಟರ್ ಎತ್ತರದಿಂದ ಬೀಳುವ ಮೂಲಕ ಹೊಸ ವರ್ಷದ ಆಗಮನದ ಕ್ಷಣವನ್ನು ಸೂಚಿಸಲಾಗುತ್ತದೆ.  ಈ ವಿದ್ಯಮಾನವನ್ನು ಲಕ್ಷಾಂತರ ಅಮೆರಿಕನ್ನರು ಖುದ್ದಾಗಿ ಸಾಕ್ಷೀಕರಿಸಿದರೆ, ವಿಶ್ವದಾದ್ಯಂತ ಮಿಲಿಯಾಂತರ ಮಂದಿ ಟಿವಿಗಳ ಮೂಲಕ ವೀಕ್ಷಿಸುತ್ತಾರೆ.ನ್ಯೂಯಾರ್ಕ್ ಟೈಮ್ಸ ಪತ್ರಿಕೆಯ ಕೇಂದ್ರ ಕಚೇರಿಯ `ಟೈಮ್ಸ ಬಿಲ್ಡಿಂಗ್~ ಇಲ್ಲಿರುವುದರಿಂದಲೇ, ಇದಕ್ಕೆ ಟೈಮ್ಸ ಸ್ಕ್ವೇರ್ ಎಂಬ ಹೆಸರು ಬಂದಿದೆ.  ಅಮೆರಿಕದ ಇತರ ಪ್ರಮುಖ ಆಕರ್ಷಣೆಗಳೆಂದರೆ --ಲಾಸ್ ವೇಗಾಸ್, ವಾಷಿಂಗ್ಟನ್ ಡಿ.ಸಿ.ಯ ನ್ಯಾಷನಲ್ ಮಾಲ್, ಬೋಸ್ಟನ್ನಿನ ಫೆನೌಲ್ ಹಾಲ್, ಡಿಸ್ನಿವರ್ಲ್ಡ್, ಡಿಸ್ನಿ ಲ್ಯಾಂಡ್,  ಸ್ಯಾನ್ ಫ್ರಾನ್ಸಿಸ್ಕೋದ ಮೀನುಗಾರರ ಜೆಟ್ಟಿ ಹಾಗೂ ನಯಾಗಾರ ಜಲಪಾತ. 2010ರಲ್ಲಿ 6.5 ಲಕ್ಷಕ್ಕೂ ಹೆಚ್ಚು ಭಾರತೀಯರು ಅಮೆರಿಕಕ್ಕೆ ಭೇಟಿ ನೀಡಿದ್ದಾರೆ.  2016ರ ವೇಳೆ ಈ ಸಂಖ್ಯೆ ಶೇ. 50ರಷ್ಟು ಏರಲಿದೆ.  ಅಮೆರಿಕ ಪ್ರವಾಸ ಹಾಗೂ ಆ ಕುರಿತ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು http://travel.state.gov ವೆಬ್ ಸೈಟಿಗೆ ಭೇಟಿ ನೀಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry