Ask ಅಮೆರಿಕ- ಯು.ಎಸ್.ಕಾನ್ಸುಲೇಟ್: ಪ್ರಶ್ನೆ- ಉತ್ತರ

7

Ask ಅಮೆರಿಕ- ಯು.ಎಸ್.ಕಾನ್ಸುಲೇಟ್: ಪ್ರಶ್ನೆ- ಉತ್ತರ

ಯು.ಎಸ್.ಕಾನ್ಸುಲೇಟ್, ಚೆನ್ನೈ
Published:
Updated:

1. ಎಚ್.ಎಸ್.ಶಾಹಿದ್‌ಅಫ್ರೀದಿಹುಳಿಯಾರು ಚಿಕ್ಕನಾಯಕನಹಳ್ಳಿ .ತಾ ತುಮಕೂರು .ಜಿ

ಅಮೆರಿಕಾ ದೇಶದ ಅಧ್ಯಕ್ಷೀಯ ಮಾದರಿಯ ಸರ್ಕಾರದ ಪದ್ಧತಿ ಅಲ್ಲಿನ ಚುನಾವಣೆಗಳು ಮತ್ತು ಅಲ್ಲಿನ ರಾಜಕೀಯ ವ್ಯವಸ್ಥೆ ಹಾಗು ಸ್ಥಳೀಯ ಸಂಸ್ಥೆಗಳ ಆಡಳಿತ ವೈಖರಿಯ ಬಗ್ಗೆ ತಿಳಿಸಿ.ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಅತ್ಯಂತ ಸಕಾಲಿಕ ಪ್ರಶ್ನೆಯಿದು. ಫೆಡರಲ್ ಪದ್ಧತಿ (ಭಾರತದಲ್ಲಿ ಕೇಂದ್ರ ಸರ್ಕಾರವಿದ್ದಂತೆ) ಅನುಸರಿಸುವ ಅಮೆರಿಕದಲ್ಲಿ ರಾಷ್ಟ್ರ, ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿ ಚುನಾಯಿತ ಪ್ರತಿನಿಧಿಗಳು ಆಡಳಿತ ಚುಕ್ಕಾಣಿ ಹಿಡಿಯುತ್ತಾರೆ. ಅಲ್ಲಿನ ಅಧ್ಯಕ್ಷರು ರಾಷ್ಟ್ರದ ಮುಖ್ಯಸ್ಥರು ಮಾತ್ರವಲ್ಲ, ಸರ್ಕಾರದ ಮುಖ್ಯಸ್ಥರೂ ಆಗಿರುತ್ತಾರೆ. ರಕ್ಷಣಾ ಪಡೆಗಳ ಅಧಿನಾಯಕರೂ ಆಗಿರುತ್ತಾರೆ. ಅಧ್ಯಕ್ಷರು ಫೆಡರಲ್ ಸರ್ಕಾರದ ಕಾರ್ಯಾಂಗ ಶಾಖೆಯ ಅಧ್ಯಕ್ಷತೆಯನ್ನೂ ವಹಿಸುತ್ತಾರೆ. ಫೆಡರಲ್ ಸರ್ಕಾರದಲ್ಲಿ ಹತ್ತು ಲಕ್ಷ ಕ್ರಿಯಾಶೀಲ ಸೇನಾ ಸಿಬ್ಬಂದಿಯೂ ಸೇರಿದಂತೆ ಒಟ್ಟು ನಲವತ್ತು ಲಕ್ಷ ಸಿಬ್ಬಂದಿ ಕೆಲಸ ಮಾಡುತ್ತಾರೆ. ಅಧ್ಯಕ್ಷರನ್ನು ನಾಲ್ಕು ವರ್ಷಗಳ ನಿಗದಿತ ಅವಧಿಗೆ ಆಯ್ಕೆ ಮಾಡಲಾಗುತ್ತದೆ. ಅಧ್ಯಕ್ಷರೊಬ್ಬರು ಗರಿಷ್ಠ 10 ವರ್ಷಗಳ ಕಾಲ ಸೇವೆ ಸಲ್ಲಿಸಬಹುದು. ವ್ಯಕ್ತಿಯೊಬ್ಬರು ಗರಿಷ್ಠ ಎರಡು ಅವಧಿಗಳಿಗೆ ಮಾತ್ರ ಅಧ್ಯಕ್ಷರಾಗಬಹುದು. ಅಲ್ಲದೇ, ಎರಡು ವರ್ಷಗಳ ಕಾಲ ಹಂಗಾಮಿಯಾಗಿಯೂ ಸೇವೆ ಸಲ್ಲಿಸಬಹುದು.

 

ಪ್ರಿಯ ಓದುಗರೆ,

ಶುಭಾಶಯಗಳು! ಜುಲೈ ತಿಂಗಳು ಅತ್ಯಂತ ಉಲ್ಲಾಸಮಯವಾಗಿತ್ತು. ಈ ತಿಂಗಳಲ್ಲಿ 236ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದೆವು. ಅಲ್ಲದೇ, ನಮ್ಮ ರಾಯಭಾರಿ ನ್ಯಾನ್ಸಿ ಪೊವೆಲ್ ಅವರನ್ನು ಬೆಂಗಳೂರಿಗೆ ಸ್ವಾಗತಿಸಿದೆವು. ತಮ್ಮ ಮೂರು ದಿನಗಳ ಪ್ರವಾಸದಲ್ಲಿ ರಾಯಭಾರಿ ಪೊವೆಲ್ ಅವರು ಬೆಂಗಳೂರಿನ ಸಂಸ್ಕೃತಿ, ಇತಿಹಾಸ, ಪರಂಪರೆ ಹಾಗೂ ಇಲ್ಲಿನ ಉದ್ದಿಮೆ ಸ್ನೇಹಿ ವಾತಾವರಣವನ್ನು ಅರಿಯಲು ಯತ್ನಿಸಿದರು. ನಾಗರಿಕ ಸಮಾಜ ಹಾಗೂ ಉದ್ದಿಮೆಗಳ ನಾಯಕರುಗಳೊಂದಿಗೆ ಭೇಟಿಗೆ ಮಾತ್ರವಲ್ಲದೇ, ಅಮೆರಿಕ ಅಧ್ಯಕ್ಷರ ಕುರಿತು ಏರ್ಪಡಿಸಲಾಗಿದ್ದ ರಸಪ್ರಶ್ನೆಯಲ್ಲಿ ಭಾಗವಹಿಸಿದ್ದ ಮಕ್ಕಳೊಂದಿಗೆ ಮಾತನಾಡಲೂ ಕಾಲ ಮಾಡಿಕೊಂಡಿದ್ದರು. ಈ ಭಾಗದ ನೃತ್ಯ ಪ್ರದರ್ಶನದ ಸೊಬಗು ಸವಿದರು. ಐತಿಹಾಸಿಕ ಲಾಲ್‌ಬಾಗಿನಲ್ಲಿ ಮುಂಜಾನೆಯ ವಾಯುವಿಹಾರವನ್ನೂ ಆನಂದಿಸಿದರು. ಹಲವಾರು ಸಂದರ್ಭಗಳಲ್ಲಿ ಅವರು ಛಾಯಾಗ್ರಾಹಕಿಯ ಪಾತ್ರವನ್ನೂ ನಿರ್ವಹಿಸಿದರು. ಈಗಾಗಲೇ ಅವರು ತಮ್ಮ ಮೈಸೂರಿನ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದಾರೆ!ಈ ಅಂಕಣ ಮೊದಲ ವರ್ಷವನ್ನು ಪೂರೈಸುತ್ತಿರುವ ಸಂದರ್ಭದಲ್ಲಿ, ಓದುಗರನ್ನು ಹಾಗೂ `ಪ್ರಜಾವಾಣಿ~ ಪತ್ರಿಕೆಯನ್ನು ಹೃತ್ಪೂರ್ವಕವಾಗಿ ಅಭಿನಂದಿಸುವೆ. ಪ್ರಶ್ನೆಗಳು ಆಸಕ್ತಿದಾಯಕವೂ, ಸವಾಲಿನಿಂದ ಕೂಡಿದ್ದವೂ ಆಗಿದ್ದವು. ಇದರಿಂದ ನಾನು ಹಾಗೂ ನನ್ನ ಸಿಬ್ಬಂದಿ ಸಾಕಷ್ಟು ಕಲಿತೆವು. ಈ ವರ್ಷವೂ ಸಾಕಷ್ಟು ಮಹತ್ವದ ಪ್ರಶ್ನೆಗಳನ್ನು ನಿರೀಕ್ಷಿಸುತ್ತಿರುವೆ.ತಮ್ಮ ವಿಶ್ವಾಸಿ

ಜೆನಿಫೆರ್ ಮ್ಯಾಕ್‌ಇನ್ಟೈರ್

ಕಾನ್ಸಲ್ ಜನರಲ್, ಅಮೆರಿಕನ್ ದೂತಾವಾಸ, ಚೆನ್ನೈ
 

ಅಮೆರಿಕಾದಲ್ಲಿ ಅನೇಕ ಪಕ್ಷಗಳಿವೆ. ಆದರೆ, ರಿಪಬ್ಲಿಕನ್ ಹಾಗೂ ಡೆಮೊಕ್ರಾಟ್ ಪಕ್ಷಗಳು ಹೆಚ್ಚು ಜನಪ್ರಿಯ. ಅಲ್ಲಿಯ ಕಾಂಗ್ರೆಸ್ಸಿಗೆ  (ಅದರ ಭಾರತದ ಸಂವಾದಿ ಎಂದರೆ ರಾಜ್ಯಸಭೆ) ನಡೆಯುವ ಚುನಾವಣೆಯೊಟ್ಟಿಗೆ ನಡೆಯಲು ಅನುವಾಗುವಂತೆ ನವೆಂಬರ್ ಮೊದಲ ಸೋಮವಾರದ ನಂತರ ಬರುವ ಮೊದಲನೇ ಮಂಗಳವಾರದಂದು ಅಧ್ಯಕ್ಷೀಯ ಚುನಾವಣೆಯ ಮತದಾನ ನಡೆಯುತ್ತದೆ. ಜನರು ನೇರವಾಗಿ ಅಧ್ಯಕ್ಷರನ್ನು ಆರಿಸುವುದಿಲ್ಲ.ಮತದಾರರು ಅಧ್ಯಕ್ಷರನ್ನು ಆರಿಸುವ ಪ್ರತಿನಿಧಿಯನ್ನು ಚುನಾಯಿಸುತ್ತಾರೆ. ಪ್ರತಿ ರಾಜ್ಯಕ್ಕೂ ಆಯ್ಕೆಯಾಗಬೇಕಾದ ಪ್ರತಿನಿಧಿಗಳ ಸಂಖ್ಯೆ ನಿಗದಿಪಡಿಸಲಾಗಿರುತ್ತದೆ. ಆ ಪ್ರತಿನಿಧಿಗಳ ಸಂಖ್ಯೆಯ ಮೇಲೆ ಅಧ್ಯಕ್ಷರ ಆಯ್ಕೆ ನಡೆಯುತ್ತದೆ. ಅತಿ ಹೆಚ್ಚಿನ ಪ್ರತಿನಿಧಿಗಳನ್ನು ಹೊಂದಿರುವ ರಾಜ್ಯಗಳೆಂದರೆ ಕ್ಯಾಲಿಫೋರ್ನಿಯಾ (55), ಟೆಕ್ಸಾಸ್ (34) ಹಾಗೂ ನ್ಯೂಯಾರ್ಕ್ (31). ಆರು ರಾಜ್ಯಗಳು ಅತ್ಯಂತ ಕಡಿಮೆ ಪ್ರತಿನಿಧಿಗಳನ್ನು ಚುನಾಯಿಸುತ್ತವೆ. ಕೊಲಂಬಿಯಾ ಜಿಲ್ಲೆಯು ಕೇವಲ ಮೂರು ಪ್ರತಿನಿಧಿಗಳನ್ನು ಆಯ್ಕೆಗೆ ಕಳುಹಿಸುತ್ತದೆ. ಹಾಗಾಗಿ, ಅಧ್ಯಕ್ಷೀಯ ಚುನಾವಣೆ ಎಂದರೆ, ಕೇವಲ ಒಂದೇ ಚುನಾವಣೆ ಎಂಬಂತೆ ಭಾಸವಾದರೂ ವಾಸ್ತವವಾಗಿ 51 ಚುನಾವಣೆಗಳು ನಡೆಯುತ್ತವೆ.ಆದರೆ, ಬಹುತೇಕ ಅಮೆರಿಕನ್ನರು ಸಂಪರ್ಕಕ್ಕೆ ಬರುವುದು ಫೆಡರಲ್ ಸರ್ಕಾರಕ್ಕಿಂತ ಹೆಚ್ಚಾಗಿ ರಾಜ್ಯ ಹಾಗೂ ಸ್ಥಳೀಯ ಆಡಳಿತಗಳ ಜೊತೆಗೆ. ಪೊಲೀಸರು, ಗ್ರಂಥಾಲಯ, ಶಾಲೆ ಮುಂತಾದ ಪ್ರಮುಖ ಇಲಾಖೆಗಳು ಸಾಮಾನ್ಯವಾಗಿ ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಬರುತ್ತವೆ. ಪ್ರತಿ ರಾಜ್ಯವೂ ತನ್ನದೇ ಲಿಖಿತ ಸಂವಿಧಾನವನ್ನು ಹೊಂದಿದೆ. ಅಮೆರಿಕ ರಾಷ್ಟ್ರದ ಸಂವಿಧಾನಕ್ಕಿಂತಲೂ, ರಾಜ್ಯಗಳ ಸಂವಿಧಾನಗಳು ಹೆಚ್ಚು ವಿವರವಾಗಿರುತ್ತವೆ. ಉದಾಹರಣೆಗೆ ಅಲಬಾಮಾ ರಾಜ್ಯದ ಸಂವಿಧಾನವು 3,10,296  ಪದಗಳನ್ನು ಹೊಂದಿದೆ. ಇದು ಅಮೆರಿಕಾ ಸಂವಿಧಾನಕ್ಕಿಂತ 40 ಪಟ್ಟು ಹೆಚ್ಚು ದೊಡ್ಡದು.ಸ್ಥಳೀಯ ಸರ್ಕಾರಗಳು ಕೌಂಟಿಗಳು ಹಾಗೂ ಮುನಿಸಿಪಾಲಿಟಿಗಳು ಎಂಬ ಎರಡು ಹಂತದಲ್ಲಿರುತ್ತವೆ. ಉದ್ಯಾನವನಗಳು, ಮನರಂಜನಾ ಸೇವೆ, ಪೊಲೀಸು, ವಸತಿ, ತುರ್ತು ವೈದ್ಯಕೀಯ ಸೇವೆಗಳು, ಸಾರಿಗೆ ವ್ಯವಸ್ಥೆ ಹಾಗೂ ಲೋಕೋಪಯೋಗಿ ಇಲಾಖೆಗಳ ಉಸ್ತುವಾರಿ ಮುನಿಸಿಪಾಲಿಟಿಯದ್ದು.2. ಜಿ. ಕೃಷ್ಣಪ್ಪ, ಬೆಂಗಳೂರು

ಭಾರತೀಯ ಪ್ರಜೆಯೊಬ್ಬರು, ಅಮೆರಿಕ ದೇಶದ ವೀಸಾ ಪಡೆದು, ಆ ದೇಶದಲ್ಲಿ ಪ್ರವಾಸ ಮಾಡುವ ಸಂದರ್ಭದಲ್ಲಿ ಆತನ ವೀಸಾ ಮತ್ತು ಪಾಸ್ ಪೋರ್ಟುಗಳು ಆಕಸ್ಮಿಕವಾಗಿ ಕಳೆದು ಹೋದರೆ ಅಥವಾ ಕಳ್ಳತನವಾದರೆ, ಆತನು ಮುಂದೆ ಅನುಸರಿಸಬೇಕಾದ ಕ್ರಮಗಳೇನು?

ಈಗಾಗಲೇ ವೀಸಾ ಪಡೆದು ಎರಡು ಬಾರಿ ಅಮೆರಿಕಾಗೆ ಹೋಗಿ ಬಂದಿರುವ ನನ್ನ ಮಗಳ ವೀಸಾವು ಈ ವರ್ಷದ ಅಕ್ಟೋಬರ್‌ನಲ್ಲಿ ಅಂತ್ಯವಾಗುವುದರಿಂದ ಅವಳ ವೀಸಾವನ್ನು ನವೀಕರಣಗೊಳಿಸುವ ಬಗೆಯನ್ನು ದಯಮಾಡಿ ತಿಳಿಸಿ.ತಮ್ಮ ಪಾಸ್ ಪೋರ್ಟ್ ಹಾಗೂ ಇತರ ಪ್ರವಾಸಿ ದಾಖಲೆಗಳನ್ನು ಕಳೆದುಕೊಂಡ ಕೂಡಲೇ, ಸ್ಥಳೀಯ ಪೊಲೀಸರಿಗೆ ದೂರು ನೀಡಬೇಕು. ಆ ಬಳಿಕ, ಹೊಸ ಪಾಸ್ ಪೋರ್ಟ್ ಪಡೆಯಲು ಅಮೆರಿಕದಲ್ಲಿರುವ ಹತ್ತಿರದ ಭಾರತದ ದೂತಾವಾಸವನ್ನು ಸಂಪರ್ಕಿಸಬೇಕು. ಭಾರತಕ್ಕೆಹಿಂದಿರುಗಿದ ಬಳಿಕ, ಭಾರತದಲ್ಲಿ ತಮಗೆ ವೀಸಾ ನೀಡಿದ ಅಮೆರಿಕನ್ ದೂತಾವಾಸವನ್ನು ಸಂಪರ್ಕಿಸಿ, ತಮ್ಮ ಪಾಸ್ ಪೋರ್ಟ್ ಕಳೆದು ಹೋಗಿರುವ ಕುರಿತು ಮಾಹಿತಿ ನೀಡಬೇಕು. ಈ ಕುರಿತ ಪ್ರಕ್ರಿಯೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಮುಂದಿನ ವೆಬ್ ಸೈಟುಗಳಿಗೆ ಭೇಟಿ ನೀಡಿ http://chennai.usconsulate.gov ಅಥವಾ https://www.vfs-usa.co.in  ವೀಸಾ ವಿನಾಯಿತಿ ಯೋಜನೆಯ ಅನ್ವಯ ಈ ಹಿಂದೆ ವೀಸಾ ಪಡೆದ ಕೆಲವರಿಗೆ ಮತ್ತೊಮ್ಮೆ ವೀಸಾ ಸಂದರ್ಶನಕ್ಕೆ ಹಾಜರಿಯಿಂದ ವಿನಾಯಿತಿ ನೀಡಲಾಗುತ್ತದೆ.  ಆದರೆ, ತಮ್ಮ ಬಯೋಮೆಟ್ರಿಕ್ ಮಾಹಿತಿ ನೀಡಲು ಅವರು ದೂತಾವಾಸಕ್ಕೆ ಭೇಟಿ ನೀಡಲೇಬೇಕು ಎಂಬುದನ್ನು ದಯವಿಟ್ಟು ಗಮನಿಸಿ.3. ಮಹೇಶ್ ಬಿ. ಕೊದ್ದಡ್ಡಿ, ಶಹಾಪೂರ, ಜಿ. ಯಾದಗಿರಿ

ಅಮೆರಿಕದಲ್ಲಿ ದ್ವಿ ಪೌರತ್ವ ಪದ್ಧತಿ ಅಸ್ತಿತ್ವದಲ್ಲಿರುವುದರಿಂದ, ಸಾಮಾನ್ಯವಾಗಿ ರಾಜ್ಯ ರಾಜ್ಯಗಳ ನಡುವೆ ಗಡಿ ಸಮಸ್ಯೆ, ನದಿ ನೀರಿನ ಸಮಸ್ಯೆ ಅಥವಾ ಇನ್ಯಾವುದೇ ಸಮಸ್ಯೆಗಳು ತಲೆದೋರಿದಾಗ ಯಾರು, ಹೇಗೆ ಪರಿಹರಿಸುತ್ತಾರೆ? ಅದರಲ್ಲೂ ವಿಶ್ವದ ದೊಡ್ಡಣ್ಣ ಎಂಬ ಹಿರಿಮೆಗೆ ಪಾತ್ರವಾದ ಅಮೆರಿಕಕ್ಕೆ ದ್ವಿಪೌರತ್ವವು ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆಯುಂಟಾಗುವುದಿಲ್ಲವೊ ?

ನೂರಾರು ವರ್ಷಗಳಿಂದಲೂ ಅಂತರರಾಜ್ಯ ವಿವಾದಗಳು ಅಮೆರಿಕದಲ್ಲುಂಟು. ಗಡಿ ವಿವಾದಗಳಿಂದ ಹಿಡಿದು ನದಿ ನೀರು ಹಂಚಿಕೆ ವಿವಾದಗಳವರೆಗೂ ಅವುಗಳ ಹರವು. ಈ ಬಗೆಯ ವಿವಾದಗಳನ್ನು ಬಗೆ ಹರಿಸಲು ಕಾಂಪ್ಯಾಕ್ಟ್ ಎಂಬ (ಭಾರತದಲ್ಲಿ ನ್ಯಾಯಾಧಿಕರಣ ಇರುವಂತೆ) ಪದ್ಧತಿಯನ್ನು ಹಿಂದಿನಿಂದ ಪಾಲಿಸಿಕೊಂಡು ಬರಲಾಗುತ್ತಿದೆ. ಈ ಪದ್ಧತಿಯಲ್ಲಿ ವಿವಾದಿತ ಎರಡೂ ರಾಜ್ಯಗಳು ಕೇಂದ್ರದ ಉಸ್ತುವಾರಿಯಲ್ಲಿ ಸಮಸ್ಯೆಯನ್ನು ಚರ್ಚಿಸಿ, ಪರಿಹಾರ ಕಂಡು ಕೊಳ್ಳುತ್ತಿದ್ದವು.ಅಮೆರಿಕಾ ಸಂವಿಧಾನ ಜಾರಿಗೆ ಬಂದ ತರುವಾಯ, ಅಂತರರಾಜ್ಯ ವಿವಾದಗಳ ಪರಿಹಾರವು ಸರ್ವೋಚ್ಚ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುತ್ತದೆ. ಅನೇಕ ವಿವಾದಗಳು ತಲೆದೋರಿದರೂ ಅದು ವ್ಯಕ್ತಿಗತ ಅಭಿಪ್ರಾಯ ಭೇದವೇ ಇರಬಹುದು, ಅಥವಾ ರಾಜ್ಯ ರಾಜ್ಯಗಳ ನಡುವಿನ ಭಿನ್ನಾಭಿಪ್ರಾಯವೇ ಇರಬಹುದು, ಅಮೆರಿಕ ವೈವಿಧ್ಯದಲ್ಲಿ ತನ್ನ ಬಲವನ್ನು ಕಂಡು ಕೊಳ್ಳಲು ಯತ್ನಿಸುತ್ತದೆ. ಅಮೆರಿಕದಲ್ಲಿ ರಾಜ್ಯಗಳ ಹಕ್ಕಿನ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಮುಂದಿನ ವೆಬ್ ಸೈಟನ್ನು www.csg.org ನೋಡಿ.4. ಸಿ ಎ ಜೈನಾಪೂರೆ ಸ.ಶಿ ಸರ್ಕಾರಿ ಪ್ರೌಢ ಶಾಲೆ ಅಮಟೆ ತಾ: ಖಾನಾಪೂರ ಜಿ: ಬೆಳಗಾವಿ

ಅಮೆರಿಕೆಯ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ವ್ಯವಸ್ಥೆ ಹೇಗಿದೆ? (ಶಿಕ್ಷಕ ವಿದ್ಯಾರ್ಥಿ ಅನುಪಾತ, ಸಂಪನ್ಮೂಲ ವ್ಯವಸ್ಥೆ, ವಿದ್ಯಾರ್ಥಿಗಳ ಸಾಮಾಜಿಕ, ಆರ್ಥಿಕ ಹಿನ್ನೆಲೆ ಶಿಕ್ಷಣದಲ್ಲಿ) ಶಿಕ್ಷಣ ಹಕ್ಕು ಕಾಯಿದೆ ಜಾರಿಯಲ್ಲಿದೆಯಾ? ಗ್ರಾಮೀಣ ಪ್ರದೇಶದ ಸಾಕ್ಷರತೆಯ ಪ್ರಮಾಣ ಏಷ್ಟು ?

ಅಮೆರಿಕದ ಹಳ್ಳಿಗಳು, ಶಹರಗಳು ಹಾಗೂ ನಗರಗಳ ಎಲ್ಲ ವಿದ್ಯಾರ್ಥಿಗಳೂ ಸರ್ಕಾರಿ, ಖಾಸಗಿ ಅಥವಾ ಅನುಮೋದಿತ ಗೃಹಪಾಠಶಾಲೆಗಳಲ್ಲಿ ಅಧ್ಯಯನ ಮಾಡುತ್ತಾರೆ. ಎಲ್ಲ ರಾಜ್ಯಗಳಲ್ಲಿಯೂ ಸಾರ್ವತ್ರಿಕ ಶಿಕ್ಷಣ ಕಡ್ಡಾಯ. ಸರ್ಕಾರಿ ಶಾಲೆಗಳ ಬಾಗಿಲು ಎಲ್ಲ ವಿದ್ಯಾರ್ಥಿಗಳಿಗೂ ಮುಕ್ತ. ಸ್ಥಳೀಯ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಒಟ್ಟು ನೆರವಿನಿಂದ ಈ ಶಾಲೆಗಳು ನಡುತ್ತವೆ. ಸರ್ಕಾರಿ ಶಾಲೆಗಳ ನಿರ್ವಹಣೆಗೆ ಬರುವ ಬಹುತೇಕ ಆದಾಯ ಸ್ಥಳೀಯ ಸರ್ಕಾರಗಳು ವಿಧಿಸುವ ತೆರಿಗೆಗಳಿಂದ ಎಂಬುದು ಗಮನಾರ್ಹ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ತರಗತಿಯಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಬದಲಾಗುತ್ತದೆ. 2009ರಲ್ಲಿ ನಡೆದ ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ, ಶೇ 33 ರಷ್ಟು ಪ್ರಾಥಮಿಕ ಹಾಗೂ ಪ್ರೌಢ ಮಟ್ಟದ ಸರ್ಕಾರಿ ಶಾಲೆಗಳು ಗ್ರಾಮೀಣ ಪ್ರದೇಶದಲ್ಲಿವೆ. ದೇಶದಾದ್ಯಂತ ಶಾಲೆಗೆ ಹಾಜರಾದ ಒಟ್ಟಾರೆ ವಿದ್ಯಾರ್ಥಿಗಳ ಪೈಕಿ  ಶೇ. 24 ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯವರು. ದೇಶದ ಅರ್ಧಕ್ಕಿಂತಲೂ ಹೆಚ್ಚು ರಾಜ್ಯಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳಿಗೆ ಹೋಗುವವರೇ ಹೆಚ್ಚು.

ಅಮೆರಿಕಾದಲ್ಲಿ ರಾಷ್ಟ್ರೀಯ ಸಾಕ್ಷರತೆಯ ಮಟ್ಟ ಶೇ. 99. (ಹದಿನೈದು ವರ್ಷ ಅಥವಾ ಅದಕ್ಕಿಂತಲೂ ದೊಡ್ಡವರು ಓದಲು ಹಾಗೂ ಬರೆಯಲು ಬರುವ ಜನಸಂಖ್ಯೆಯನ್ನು ಸಾಕ್ಷರತೆ ಮಟ್ಟ ಎಂದು ಹೇಳಲಾಗುತ್ತದೆ.) ಅಮೆರಿಕಾದಶೇ. 28ರಷ್ಟು ಜನಸಂಖ್ಯೆ ಗ್ರಾಮೀಣ ಪ್ರದೇಶದಲ್ಲಿದೆ. ಈಚಿನ ಸಮೀಕ್ಷೆಯೊಂದರ ಪ್ರಕಾರ, ಅಮೆರಿಕದಲ್ಲಿ ನಗರಗಳ ಮಕ್ಕಳಿಗಿಂತಲೂ ಅಮೆರಿಕಾದ ಗ್ರಾಮೀಣ ಪ್ರದೇಶದಲ್ಲಿರುವ 4 ಹಾಗೂ 8ನೇ ತರಗತಿಯ ಮಕ್ಕಳು ಓದುವಿಕೆ, ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ಹೆಚ್ಚಿನ ಪ್ರಗತಿ ತೋರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry