ASK ಅಮೆರಿಕ

7

ASK ಅಮೆರಿಕ

ಯು.ಎಸ್.ಕಾನ್ಸುಲೇಟ್, ಚೆನ್ನೈ
Published:
Updated:

 

ಪ್ರಿಯ ಓದುಗರೆ,

ಶುಭಾಶಯಗಳು. ದಕ್ಷಿಣ ಭಾರತದಲ್ಲಿ ಕಳೆದ ಮತ್ತೊಂದು ಚೈತನ್ಯದಾಯಿ ತಿಂಗಳಲ್ಲಿ, ನಾನು ಪುದುಚೇರಿ, ತಿರುವನಂತಪುರ ಹಾಗೂ ಕೋಯಿಕ್ಕೋಡ್‌ಗೆ ಭೇಟಿ ನೀಡಿದೆ.  ಸುಂದರ ನಗರ ತಿರುವನಂತಪುರದಲ್ಲಿ ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳನ್ನು ಭೇಟಿ ಮಾಡುವ ಅವಕಾಶ ಮಾತ್ರವಲ್ಲ, ವಿಶ್ವವಿಖ್ಯಾತ ಪದ್ಮನಾಭಸ್ವಾಮಿ ದೇವಸ್ಥಾನದ ಪಕ್ಕದ ಮ್ಯೂಸಿಯಮ್ಮನ್ನೂ ನೋಡುವ ಹಾಗೂ ನಗರದ ಇತಿಹಾಸ ಅರಿಯುವ ಅವಕಾಶ ಲಭಿಸಿತು. ಚೆನ್ನೈ ದೂತಾವಾಸವೂ ಡಿಸೆಂಬರ್ ತಿಂಗಳಲ್ಲಿ ``ಲಿಂಗಾಧಾರಿತ ಹಿಂಸೆಯ ವಿರುದ್ಧ ಹದಿನಾರು ದಿನಗಳ ಕ್ರಿಯಾಶೀಲ ಅಂತರ ರಾಷ್ಟ್ರೀಯ ಅಭಿಯಾನ~~ ನಡೆಸುತ್ತಿರುವ ವಿಶ್ವ ಸಮುದಾಯವನ್ನು ಸೇರಿಕೊಂಡಿತು. ಈ ಕುರಿತು ಮದ್ರಾಸು ವಿಶ್ವವಿದ್ಯಾಲಯ ಏರ್ಪಡಿಸಿದ್ದ ಭಾರತೀಯ ಮಹಿಳಾ ತಜ್ಞರೊಂದಿಗಿನ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡೆ.ವಿಶ್ವವನ್ನು ಕಾಡುತ್ತಿರುವ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಾನೂನು, ಪೊಲೀಸ್ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಆಗಬೇಕಾದ ಪ್ರಯತ್ನಗಳನ್ನು ಚರ್ಚಿಸಿದೆವು.  ವಿಶ್ವದ ಪ್ರತಿ ಮೂರು ಮಹಿಳೆಯರಲ್ಲಿ ಒಬ್ಬ ಮಹಿಳೆ, ತಮ್ಮ ಜೀವನದಲ್ಲಿ ಒಮ್ಮೆಯಾದರೂ ಈ ಬಗೆಯ ``ಲಿಂಗಾಧಾರಿತ ಹಿಂಸೆ~~ಗೆ ಬಲಿಯಾಗಿದ್ದಾರೆ ಎಂಬುದು ಸಮಸ್ಯೆಯ ಗಾಂಭೀರ್ಯಕ್ಕೆ ಕನ್ನಡಿ ಹಿಡಿಯಬಲ್ಲದು. 

ವೈಯಕ್ತಿಕ ಯಾತನೆ ಹಾಗೂ ನರಳಿಕೆಯಾಚೆಗೆ ಹೋದರೆ, ಈ ಬಗೆಯ ಹಿಂಸೆಯಿಂದ ರಾಷ್ಟ್ರ ಮಟ್ಟದಲ್ಲೂ ಋಣಾತ್ಮಕ ಪರಿಣಾಮವಾಗುತ್ತದೆ.  ಮಹಿಳೆಯರ ಮೇಲಿನ ಹಿಂಸೆಯಿಂದ ಅಮೆರಿಕ ದೇಶಕ್ಕೆ ಪ್ರತಿ ವರ್ಷ 5.8 ಶತಕೋಟಿ ಡಾಲರುಗಳಷ್ಟು ನಷ್ಟವುಂಟಾಗುತ್ತಿದೆ.ಔಷಧೋಪಚಾರ ಹಾಗೂ ವೈದ್ಯಕೀಯ ಸೇವೆಗಳಿಗಾಗಿ 4.1 ಶತಕೋಟಿ ಡಾಲರ್ ವೆಚ್ಚವಾದರೆ,  1.8 ಶತಕೋಟಿ ಡಾಲರ್‌ಗಳಷ್ಟು ಉತ್ಪಾದಕತೆಯ ನಷ್ಟವಾಗುತ್ತಿದೆ.  ಈ ಹದಿನಾರು ದಿನಗಳು (ಲಿಂಗಾಧಾರಿತ ಹಿಂಸೆಯ ವಿರುದ್ಧದ ಅಂತರ ರಾಷ್ಟ್ರೀಯ ದಿನದಿಂದ (ನವೆಂಬರ್ 25), ಮಾನವ ಹಕ್ಕುಗಳ ಅಂತರ ರಾಷ್ಟ್ರೀಯ ದಿನ,    ಡಿಸೆಂಬರ್ 10ರ ವರೆಗೆ) ಮಹಿಳೆಯರು ಹಾಗೂ ಬಾಲಕಿಯರನ್ನು ಹಿಂಸೆಯ ದುಃಸ್ವಪ್ನದಿಂದ ಪಾರು ಮಾಡಲು ನಮ್ಮ ಬದ್ಧತೆಯನ್ನು ನವೀಕರಿಸಿಕೊಳ್ಳಲು ದೊರಕುವ ಅವಕಾಶ.  ಪ್ರತಿಯೊಬ್ಬರಿಗೂ ಹೊಸ ವರ್ಷ ಶಾಂತಿ ಹಾಗೂ ಶುಭ ತರಲಿ ಎಂದು ಹಾರೈಸುವೆ.  ಸುಗ್ಗಿಯ ಹಬ್ಬ ಸಂಕ್ರಾಂತಿಯ ಶುಭಾಶಯಗಳು.

 ತಮ್ಮ ವಿಶ್ವಾಸಿ

ಜೆನಿಫೆರ್ ಮ್ಯಾಕ್‌ಇನ್ಟೈರ್

ಕಾನ್ಸಲ್ ಜನರಲ್, ಅಮೆರಿಕನ್ ದೂತಾವಾಸ, ಚೆನ್ನೈ1. ಪಿ. ಬಿ.ಗಂಗಾವತಿ, ಬಾಗಲಕೋಟೆ


ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಎಫ್-1 ವೀಸಾದ ಮೇಲೆ ಅಧ್ಯಯನ ಮಾಡು ತ್ತಿರುವ ವಿದ್ಯಾರ್ಥಿಗಳು, ತಮ್ಮ ರಜೆ ದಿನಗಳಲ್ಲಿ ಭಾರತಕ್ಕೆ ಬರಲು ಅವಕಾಶವಿಲ್ಲ ಎಂದು ಕೇಳಿರುವೆ.  ಅಂಥ ವಿದ್ಯಾರ್ಥಿಗಳು ತಮ್ಮ ವಿಶ್ವವಿದ್ಯಾಲಯದ ಅಧಿಕಾರಿಗಳಿಂದ  ಐ-20 ಅರ್ಜಿಯಡಿಯಲ್ಲಿ ಅನುಮತಿ ಪಡೆಯಬೇಕಂತೆ. ವಿಶ್ವವಿದ್ಯಾಲಯ ಅನುಮತಿಯನ್ನು ಪುರಸ್ಕರಿಸಲೂಬಹುದು ಅಥವಾ ನಿರಾಕರಿಸಲೂಬಹುದಂತೆ, ಇದು ನಿಜವೆ?  ಎಫ್-1 ವೀಸಾ ಪಡೆದ ವಿದ್ಯಾರ್ಥಿಗಳು ರಜೆ ಅವಧಿಯಲ್ಲಿ ತಮ್ಮ ಮಾತೃಭೂಮಿಗೆ ಭೇಟಿ ನೀಡಲು ಇರುವ ನಿಬಂಧನೆಗಳೇನು? ರಜೆ ಅವಧಿಯಲ್ಲೂ ಅವರು ಕ್ಯಾಂಪಸ್ಸುಗಳಲ್ಲೇ ಇರಬೇಕೆ?  ತುರ್ತು ಕಾರಣಗಳಿಗಾಗಿ ಮಾತೃಭೂಮಿಗೆ ಭೇಟಿ ನೀಡಲೇಬೇಕಾದ ಸಂದರ್ಭ ಬಂದರೆ, ಯಾರನ್ನು ಸಂಪರ್ಕಿಸಬೇಕು? ದಯವಿಟ್ಟು ತಿಳಿಸಿ.ಅಮೆರಿಕದಲ್ಲಿ ಎಫ್-1 ಅಥವಾ ಎಂ-1 ವೀಸಾದ ಮೇಲೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು,  ಶಾಲೆ ರಜೆಯಲ್ಲಿದ್ದಾಗ ದೇಶ ಬಿಟ್ಟು ಹೋಗಬಾರದೆಂಬ ನಿಯಮವೇನೂ ಇಲ್ಲ.  ಆದರೆ, ತಾವು ರಜೆಯ ಮೇಲೆ ತೆರಳುತ್ತಿರುವ ಕುರಿತು ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಮಾಹಿತಿ ನೀಡಬೇಕು. ಅಮೆರಿಕದ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಐದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಅಮೆರಿಕದಿಂದ ಹೊರಗಿದ್ದರೆ, ಅವರ ಎಫ್-1 ಅಥವಾ ಎಂ-1 ವೀಸಾ ರದ್ದಾಗುತ್ತದೆ.  ಈ ಅವಧಿಯಲ್ಲಿ ಅವರ ವಿದೇಶ ಪ್ರವಾಸ ಹಾಗೂ  ಚಟುವಟಿಕೆಗಳು, ಅವರು ಅಧ್ಯಯನ ಮಾಡುತ್ತಿರುವ ಕೋರ್ಸಿಗೆ ಸಂಬಂಧಿಸಿದ್ದರೆ ಮಾತ್ರ ಈ ರದ್ದತಿಯಿಂದ ವಿನಾಯಿತಿ ಉಂಟು. ಚಾಲ್ತಿಯಲ್ಲಿರುವ  ಎಫ್-1 ಅಥವಾ ಎಂ-1 ವೀಸಾವನ್ನು ಹೊಂದಿದ್ದರೂ, ವಿದ್ಯಾರ್ಥಿಯೊಬ್ಬ ಐದು ತಿಂಗಳು ಅಥವಾ ಅದಕ್ಕೂ ಹೆಚ್ಚಿನ ಅವಧಿ ವಿದೇಶದಲ್ಲಿದ್ದರೆ,  ಅಮೆರಿಕಕ್ಕೆ ಹಿಂದಿರುಗುವಾಗ, ಪೋರ್ಟ್ ಆಫ್ ಎಂಟ್ರಿ ಬಳಿ, ಇಮ್ಮಿಗ್ರೇಷನ್ ಇನ್ಸ್‌ಪೆಕ್ಟರ್, ಅಮೆರಿಕ ಪುನಃ ಪ್ರವೇಶವನ್ನು ನಿರಾಕರಿಸಬಹುದು.  ಅಲ್ಲದೇ, ವೀಸಾವನ್ನು ರದ್ದುಗೊಳಿಸಿ, ಭಾರತಕ್ಕೆ ಹಿಂದಿರುಗಿ ಹೊಸ ವೀಸಾ ಪಡೆಯುವಂತೆ ಆ ವಿದ್ಯಾರ್ಥಿಗೆ ಸೂಚಿಸಬಹುದು.  ಐದು ತಿಂಗಳು ಅಥವಾ ಅದಕ್ಕೂ ಹೆಚ್ಚಿನ ಅವಧಿಯ ಬಿಡುವು ತೆಗೆದುಕೊಂಡಿದ್ದು ಹಾಗೂ ಅದು ತಮ್ಮ ವ್ಯಾಸಂಗಕ್ಕೆ ನೇರವಾಗಿ ಸಂಬಂಧಿಸಿದ್ದಲ್ಲವಾಗಿದ್ದರೆ,  ಅಂಥ ವಿದ್ಯಾರ್ಥಿಗಳು ಅಮೆರಿಕಗೆ ಹೊರಡುವುದಕ್ಕಿಂತಲೂ ಮುಂಚೆ ವಿದೇಶದಲ್ಲಿರುವ ದೂತಾವಾಸಕ್ಕೆ ಭೇಟಿ ನೀಡಿ, ಹೊಸ ವೀಸಾ ಪಡೆಯುವುದು ವಿವೇಕಯುತ ನಿರ್ಧಾರ.2. ಪಂಚಾಕ್ಷರಿ ಪುರಾಣಿಕಮಠ

ಅಮೆರಿಕದಲ್ಲಿ ಎಂ.ಬಿ.ಎ ಹಾಗೂ ಎಂ.ಎಸ್. ಕೋರ್ಸುಗಳ ಅಧ್ಯಯನ ಮಾಡಲು ಆರ್ಥಿಕ ನೆರವು ಪಡೆಯುವ ಅವಕಾಶಗಳ ಕುರಿತು ತಿಳಿಸಿ.ಅಮೆರಿಕದ ಕ್ಯಾಂಪಸ್ಸುಗಳಲ್ಲಿ ಅಂತರ ರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಹಲವು ಮೂಲಗಳುಂಟು.  ಮೆರಿಟ್ ಆಧರಿಸಿದ ಹಾಗೂ ಆರ್ಥಿಕ ನೆರವಿನ ಅಗತ್ಯವಿರುವವರಿಗೆ ಕೆಲವು ಫೆಲೋಶಿಪ್‌ಗಳನ್ನು ನೀಡಲಾಗುತ್ತದೆ.  ಮಿಕ್ಕವರು ತಮ್ಮ ಬಿಡುವಿನ ವೇಳೆಯಲ್ಲಿ ವಿಶ್ವವಿದ್ಯಾಲಯಗಳಲ್ಲಿಯೇ ಶಿಕ್ಷಕರ ಸಹಾಯಕರಾಗಿ, ಸಂಶೋಧನಾ ಸಹಾಯಕರಾಗಿ ದುಡಿದು ಹಣ ಗಳಿಸಿ, ತಮ್ಮ ಅಧ್ಯಯನ ಮುಂದುವರಿಸಬಹುದು. ಸಂಸ್ಥೆಯಿಂದ ಸಂಸ್ಥೆಗೆ ಬೋಧನಾ ಶುಲ್ಕದ ಪ್ರಮಾಣ ಬದಲಾದೀತು. ಎಂ.ಎಸ್ ಸ್ನಾತಕೋತ್ತರ ಪದವಿಗೆ ಬೋಧನಾ ಶುಲ್ಕ ಸಾಮಾನ್ಯವಾಗಿ 15 ರಿಂದ  30 ಸಾವಿರ ಡಾಲರ್‌ಗಳವರೆಗೂ ಇದ್ದೀತು. ಎಂಬಿಎ ಪದವಿಗೆ ಶುಲ್ಕ ಕೊಂಚ ಹೆಚ್ಚಾಗಬಹುದು.  ಅಮೆರಿಕದ ವಿದ್ಯಾರ್ಥಿಗಳಿಗೆ (ದೇಶೀಯ ವಿದ್ಯಾರ್ಥಿಗಳು) ವಿಧಿಸುವ ಶುಲ್ಕವನ್ನೇ ಅಂತರ ರಾಷ್ಟ್ರೀಯ ವಿದ್ಯಾರ್ಥಿಗಳಿಂದಲೂ ಪಡೆಯಲು ಕೆಲ ಅಮೆರಿಕನ್ ವಿಶ್ವವಿದ್ಯಾಲಯಗಳು ಈಚೆಗೆ ಮುಂದೆ ಬರುತ್ತಿವೆ.  ಇತರರಿಂದ ಪಡೆಯುವ ಶುಲ್ಕಕ್ಕಿಂತ ದೇಶೀಯ ವಿದ್ಯಾರ್ಥಿಗಳಿಗೆ ವಿಧಿಸುವ ಬೋಧನಾ ಶುಲ್ಕ ಸಾಕಷ್ಟು ಕಡಿಮೆ ಎಂಬುದು ಗಮನಾರ್ಹ.ಅಮೆರಿಕದಲ್ಲಿ ಉನ್ನತ ವಿದ್ಯಾಭ್ಯಾಸ ಹಾಗೂ ಅದಕ್ಕೆ ಅಗತ್ಯವಾದ ಹಣಕಾಸು ನೆರವಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಅಮೆರಿಕ- ಭಾರತ ಶಿಕ್ಷಣ ಪ್ರತಿಷ್ಠಾನದ ವೆಬ್‌ಸೈಟ್‌ಗೆ www.usief.org.in  ಭೇಟಿ ನೀಡಿ.3. ಶಾಂತ ಕುಮಾರ್, ಬೆಂಗಳೂರು

ಉತ್ತರ ಮತ್ತು ದಕ್ಷಿಣ ಅಮೆರಿಕ ದೇಶಗಳ ವ್ಯತ್ಯಾಸ, ಅದರ ಇತಿಹಾಸ ಮತ್ತು ಸ್ಥಾಪನೆಯ ಅವಧಿ ತಿಳಿಸಿ.  ಅಲ್ಲದೆ, ಉತ್ತರ ಅಮೆರಿಕದಲ್ಲಿ ಎಷ್ಟು ರಾಜ್ಯಗಳಿವೆ.  ಅದರ ವಿವರವನ್ನೂ ಪ್ರಕಟಿಸಬೇಕಾಗಿ ಪ್ರಾರ್ಥನೆ.ಉತ್ತರ ಅಮೆರಿಕ ಖಂಡದಲ್ಲಿರುವ ಅಮೆರಿಕ ಸಂಯುಕ್ತ ಸಂಸ್ಥಾನ 50 ರಾಜ್ಯಗಳನ್ನು ಹೊಂದಿದೆ. ಅಮೆರಿಕ ಸಂಯುಕ್ತ ಸಂಸ್ಥಾನವನ್ನು  (United States of America) ಸಾಮಾನ್ಯವಾಗಿ ಅಮೆರಿಕ ಎಂದು ಕರೆಯಲಾಗುತ್ತದೆ.  ಈಗಿನ ಫ್ಲಾರಿಡಾ (1565), ವರ್ಜೀನಿಯಾ (1607), ನ್ಯೂಯಾರ್ಕ್ (1614) ಹಾಗೂ ಮೆಸಾಚುಸೆಟ್ಸ್ (1620) ಗಳಲ್ಲಿ ಮೊದಲ ಯೂರೋಪಿಯನ್ ವಸಾಹಾತುಗಳು ಕಂಡು ಬಂದವು.  ಅಮೆರಿಕದ ಸಂವಿಧಾನವನ್ನು ಅನುಮೋದಿಸಿದ ಮೊದಲ ರಾಜ್ಯವೆಂದರೆ ಡೆಲವೆರ್ (1787).  ಅಮೆರಿಕ ಸಂಯುಕ್ತ ಸಂಸ್ಥಾನವನ್ನು (ಯುಎಸ್‌ಎ) ಸೇರಿದ ಕಟ್ಟ ಕಡೆಯ ರಾಜ್ಯಗಳೆಂದರೆ ಅಲಾಸ್ಕಾ ಮತ್ತು ಹವಾಯ್ (1959).ಅಮೆರಿಕದ ಪ್ರಾಂತ್ಯಗಳನ್ನು ಔಪಚಾರಿಕವಾಗಿ ಗುರುತಿಸಿಲ್ಲವಾದರೂ, ದೇಶದ ವಿವಿಧ ಭಾಗಗಳು ಹಲವು ವಿಧಗಳಲ್ಲಿ ಭಿನ್ನವಾಗಿವೆ.  ಅಮೆರಿಕದ ಉತ್ತರ ಭಾಗ ಉದ್ಯಮದ ಕೇಂದ್ರವಾಗಿದ್ದರೆ,  ದಕ್ಷಿಣ ಭಾಗ ಕೃಷಿಗೆ ಹೆಸರುವಾಸಿ.  ದೇಶದಾದ್ಯಂತ ಇಂಗ್ಲಿಷ್ ಆಡುಮಾತಾದರೂ, ಉಚ್ಛಾರಣೆಯಲ್ಲಿ ವ್ಯತ್ಯಾಸ ಸಾಕಷ್ಟು ಉಂಟು.  ಇಂಟರ್‌ನೆಟ್ ಹಾಗೂ ರಾಷ್ಟ್ರೀಯ ಮಾಧ್ಯಮಗಳಿಂದ ಪ್ರಾಂತೀಯ ವ್ಯತ್ಯಾಸಗಳು ಸಾಕಷ್ಟು ಕಡಿಮೆಯಾಗುತ್ತಿವೆ.4. ಬದರಿ ಪುರೋಹಿತ, ಕೊಪ್ಪಳ


ಅಮೆರಿಕದಲ್ಲಿರುವ ಚಿತ್ರಕಲಾ ವಿದ್ಯಾಲಯಗಳು, ಅಲ್ಲಿನ ಕಲಿಸುವ ವಿಷಯಗಳ ಕುರಿತು ಮಾಹಿತಿ ನೀಡಿ. ಅಲ್ಲದೆ, ಅಲ್ಲಿನ ಖ್ಯಾತ ಗ್ಯಾಲರಿಗಳ ಕುರಿತ ಮಾಹಿತಿಯನ್ನೂ ನೀಡಿ.

ಅಮೆರಿಕದ ಅನೇಕ ಶಾಲೆಗಳು ಚಿತ್ರಕಲೆ ಹಾಗೂ ಅದಕ್ಕೆ ಪೂರಕವಾದ ವಿಶೇಷ ಕಲೆಗಳಿಗೆ ಸಂಬಂಧಿಸಿದ ಕೋರ್ಸುಗಳನ್ನು ಹೊಂದಿವೆ. ರೋಡ್ ಐಲ್ಯಾಂಡ್ ಸ್ಕೂಲ್ ಆಫ್ ಡಿಸೈನಿನಿಂದ ಹಿಡಿದು ಕೂಪರ್ ಯೂನಿಯನ್ ಹಾಗೂ ಪ್ರಾಟ್  ಇನ್ಸ್‌ಟಿಟ್ಯೂಟ್‌ವರೆಗೆ (ಎರಡೂ ನ್ಯೂಯಾರ್ಕ್ ನಗರದಲ್ಲಿವೆ) ಜಾರ್ಜಿಯಾದ ಸವನ್ನಾ ಸ್ಕೂಲ್ ಆಫ್ ಆರ್ಟ್ ಅಂಡ್ ಡಿಸೈನ್ ವರೆಗೆ ಅನೇಕ ಶಾಲೆಗಳಿವೆ.  ಅಮೆರಿಕದಲ್ಲಿ ಅಧ್ಯಯನ ಮಾಡಲು ಆಸಕ್ತಿಯಿದ್ದಲ್ಲಿ ಅಮೆರಿಕ- ಭಾರತ ಶಿಕ್ಷಣ ಪ್ರತಿಷ್ಠಾನಕ್ಕೆ ಭೇಟಿ ನೀಡಿ. ಈ ಕುರಿತ ಮಾಹಿತಿಯ ಭಂಡಾರವೇ ನಿಮಗೆ ದೊರಕುತ್ತದೆ.  ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು http://usief.org.in ಗೆ ಭೇಟಿ ನೀಡಿ. ಅಮೆರಿಕದ ಪ್ರತಿ ನಗರದಲ್ಲೂ ಮ್ಯೂಸಿಯಮ್ಮುಗಳು, ಕಲಾ ಶಾಲೆಗಳಿವೆ.  ನ್ಯೂಯಾರ್ಕ್ ನಗರದ ಮೆಟ್ರೊಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ (Metropolitan Museum of Art; www.metmuseum.org),ವಾಷಿಂಗ್ಟನ್ ಡಿ.ಸಿಯಲ್ಲಿನ ನ್ಯಾಷನಲ್ ಗ್ಯಾಲರಿ ಆಫ್ ಆರ್ಟ್  National Gallery of Art;  www.nga.gov) ಮತ್ತು  ಆರ್ಟ್ ಇನ್ಸ್‌ಟಿಟ್ಯೂಟ್ ಆಫ್ ಷಿಕಾಗೊ  (Art Institute of Chicago;  www.artic.edu - ಇಲ್ಲಿ ಕಲಾ ಶಾಲೆಯೂ ಉಂಟು)  ಇವು ಅಮೆರಿಕದ ಬಹಳ ಪ್ರಖ್ಯಾತ ಮ್ಯೂಸಿಯಮ್ಮುಗಳು.  ಈ ಮೂರು ಮ್ಯೂಸಿಯಮ್ಮುಗಳ ಸಂಗ್ರಹ ತುಂಬ ವೈಶಿಷ್ಟ್ಯಪೂರ್ಣ. ಪುರಾತನ ಕಲಾಕೃತಿಗಳಿಂದ ಆಧುನಿಕ ಕಲೆಯವರೆಗೆ ಎಲ್ಲವೂ ಇಲ್ಲುಂಟು.  ಅಲ್ಲದೆ, ಕೆಲವು ಬಾರಿ ಕಲಾಕೃತಿಗಳ ತಾತ್ಕಾಲಿಕ ಪ್ರದರ್ಶನವನ್ನೂ ಏರ್ಪಡಿಸಲಾಗುತ್ತದೆ.5. ಸುನಿಲ್ ರಾಥೋಡ್, ಬಿಜಾಪುರ


ನನ್ನ 12ನೇ ತರಗತಿಯ ಬಳಿಕ ಹಾಲಿವುಡ್ ಸ್ಟುಡಿಯೋನಲ್ಲಿ (ನ್ಯೂಯಾರ್ಕ್ ಫಿಲಂ ಅಕಾಡೆಮಿ) ಪದವಿ ಅಧ್ಯಯನ ಮಾಡಲು ಆಶಿಸಿದ್ದೇನೆ.  ಈ ಕುರಿತು ಹಾಗೂ ವಿದ್ಯಾರ್ಥಿ ವೀಸಾ ಕುರಿತು ಹೆಚ್ಚಿನ ಮಾಹಿತಿ ನೀಡಿ.ಅಮೆರಿಕದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿರುವ ಭಾರತೀಯ ವಿದ್ಯಾರ್ಥಿ ಸಮುದಾಯವನ್ನು ಸೇರಲು ತಮಗೆ ಸ್ವಾಗತ.   ಅಮೆರಿಕ- ಭಾರತ ಶಿಕ್ಷಣ ಪ್ರತಿಷ್ಠಾನದಲ್ಲಿ, ಈ ಕುರಿತ ಮಾಹಿತಿಯ ನಿಧಿಯೇ ಇದೆ.  ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು http://usief.org.in  ಗೆ ಭೇಟಿ ನೀಡಿ. ಅಮೆರಿಕದಲ್ಲಿ ಅಧ್ಯಯನ ಮಾಡಬೇಕಾದರೆ, ಮೊದಲು ತಾವು ವಿದ್ಯಾರ್ಥಿ ವೀಸಾ ಪ್ರಕ್ರಿಯೆಯನ್ನು ಪೂರೈಸಬೇಕು.  ಈ ವೀಸಾ ಪಡೆಯಲು, ತಮ್ಮ ಅಕಾಡೆಮಿಕ್ ಆಸಕ್ತಿ ಹಾಗೂ ಅಮೆರಿಕದ ವಿದ್ಯಾಭ್ಯಾಸಕ್ಕೆ ಆಗುವ ಖರ್ಚನ್ನು ಭರಿಸಲು ಶಕ್ತರಿದ್ದೀರಿ ಎಂಬುದನ್ನು  ಸಾಬೀತು ಪಡಿಸಬೇಕು.  ಮೊದಲ ವರ್ಷದ ಬೋಧನಾ ಶುಲ್ಕ ಹಾಗೂ ಅಮೆರಿಕದಲ್ಲಿ ಜೀವನ ಸಾಗಿಸುವ ವೆಚ್ಚ ಸರಿದೂಗುವಷ್ಟು ಹಣ ನಿಮ್ಮಲ್ಲಿರುವುದನ್ನು ಹಾಗೂ ಮುಂದಿನ ವರ್ಷಗಳ ನಿಮ್ಮ ಶಿಕ್ಷಣಕ್ಕೆ ಹಣ ಹೊಂದಿಸುವ ಕುರಿತ ಯೋಜನೆಯನ್ನು ವೀಸಾ ಸಂದರ್ಶನದ ಸಮಯದಲ್ಲಿ ಮನವರಿಕೆ ಮಾಡಿಕೊಡಬೇಕು.  ವಿದ್ಯಾರ್ಥಿ ವೀಸಾಗಳ ಕುರಿತು ಹೆಚ್ಚಿನ ಮಾಹಿತಿಗಾಗಿ http://chennai.usconsulate.gov/temporary-visitors.html  ಹಾಗೂ www.travel.state.gov ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry