ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ask ಅಮೆರಿಕ

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪ್ರಿಯ ಓದುಗ,
ಶುಭಾಶಯಗಳು!  ಬೆರಗು ತರುವ ತಮ್ಮ ಪ್ರಶ್ನೆಗಳಿಗೆ ಧನ್ಯವಾದಗಳು.  ಈ ಬಾರಿಯ ಹಲವು ಉತ್ತಮ ಪ್ರಶ್ನೆಗಳ ಮುಖ್ಯ ಆಶಯ, ಎರಡೂ ದೇಶಗಳು ಜತೆಗೂಡಿ ಕೆಲಸ

ಮಾಡುತ್ತಿರುವ ಕ್ಷೇತ್ರಗಳ ಕುರಿತೇ ಆಗಿತ್ತು. ಈ ಕೆಳಕಂಡ ಪ್ರಶ್ನೊತ್ತರಗಳ ಜೊತೆಗೆ, ಅಕ್ಟೋಬರ್ ತಿಂಗಳ 13ರಂದು ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆಯಲಿರುವ ಅಮೆರಿಕ-ಭಾರತ ಶಿಕ್ಷಣ ಶೃಂಗದ ಮಹತ್ವದ ಕುರಿತು ಗಮನ ಸೆಳೆಯ ಬಯಸುವೆ.  ಇದು ಎರಡೂ ದೇಶಗಳ ನಡುವಿನ ವ್ಯೆಹ್ಮಾತ್ಮಕ ಚರ್ಚೆಯ ವಿಸ್ತತ ಭಾಗ.  ಎರಡೂ ದೇಶಗಳ ಹಿರಿಯ ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು ಹಾಗೂ ಶಿಕ್ಷಣತಜ್ಞರು ಈ ಶೃಂಗದಲ್ಲಿ ಭಾಗವಹಿಸಿ,  ಈ ಕ್ಷೇತ್ರದಲ್ಲಿ ಜತೆಗೂಡಿ ಕೆಲಸ ಮಾಡುವ ಕುರಿತು ಹಾಗೂ ಯುವ ಜನತೆಗೆ ಶಿಕ್ಷಣ ನೀಡುವ ನೈಪುಣ್ಯವನ್ನು ಹಂಚಿಕೊಳ್ಳುವ ಕುರಿತು ಚರ್ಚಿಸುವರು. 

ಅಮೆರಿಕಾ ವಾಣಿಜ್ಯ ಸೇವೆಯ ಮಹಾನಿರ್ದೇಶಕ ಸುರೇಶ್ ಕುಮಾರ್ ನೇತೃತ್ವದ ನಿಯೋಗವೊಂದು ಅಕ್ಟೋಬರ್ 11-12ರಂದು ಚೆನ್ನೈಗೆ ಬರಲಿದೆ.  ಅಮೆರಿಕಾದ 21 ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳನ್ನು ಒಳಗೊಂಡಿರುವ  ಈ ನಿಯೋಗವು, ಅಮೆರಿಕೆಯಲ್ಲಿ ಅಧ್ಯಯನ ಮಾಡಬಯಸುವ ವಿದ್ಯಾರ್ಥಿಗಳು, ಭಾರತೀಯ ವಿಶ್ವವಿದ್ಯಾಲಯಗಳ ಜೊತೆಗೆ ಪಾಲುದಾರಿಕೆ, ಹಾಗೂ ಎರಡೂ ದೇಶಗಳ ನಡುವಿನ ಶೈಕ್ಷಣಿಕ ವಿನಿಮಯ ಕಾರ್ಯಕ್ರಮಗಳಂಥ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಹುಡುಕಲಿದೆ.  21ನೇ ಶತಮಾನದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಎರಡೂ ದೇಶಗಳು ಒಟ್ಟಾಗಿ ಶ್ರಮಿಸಲಿವೆ ಎಂಬುದಕ್ಕೆ ಈ ಎರಡೂ ಕಾರ್ಯಕ್ರಮಗಳು ಉತ್ತಮ ಉದಾಹರಣೆಗಳು.

ಮಾಹಿತಿ ಪೂರ್ಣವಾದ ಪ್ರಶ್ನೆಗಳನ್ನು ಕೇಳಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.
ಎಲ್ಲ ಓದುಗರಿಗೂ, ನಾಡಹಬ್ಬ ದಸರೆಯ ಶುಭಾಶಯಗಳು.

ತಮ್ಮ ವಿಶ್ವಾಸಿ
ಜೆನಿಫೆರ್ ಮ್ಯಾಕ್‌ಇನ್ಟೈರ್
ಕಾನ್ಸಲ್ ಜನರಲ್, ಅಮೆರಿಕನ್ ದೂತಾವಾಸ, ಚೆನ್ನೈ

1. ಪಿ. ಆರ್. ಮಜ್ಜಗಿ, ಎಂ.ಕೆ. ಹುಬ್ಬಳ್ಳಿ
ಅಮೆರಿಕಾದಲ್ಲಿ ಜನರ ಜೀವನ ಹಾಗೂ ಆರ್ಥಿಕತೆ ಮುಖ್ಯವಾಗಿ ಉದ್ದಿಮೆ, ತಂತ್ರಜ್ಞಾನದ ಮೇಲೆ ಅವಲಂಬಿಸಿದ್ದರೂ, ಅಲ್ಲಿನ ಒಕ್ಕಲುತನ ಹಾಗೂ ಅದರ ಮೇಲೆ ಅವಲಂಬಿಸಿರುವ ಜನರ ಜೀವನದ ಬಗ್ಗೆ ಮಾಹಿತಿ ಕೊಡುತ್ತೀರಾ? ಹಾಗೂ ಆ ದೇಶದ ಮುಖ್ಯ ಬೆಳೆಗಳಾವುವು?  ತಿಳಿಸಿ. 
ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಉದ್ದಿಮೆಗಳಿಗಾಗಿ ಅಮೆರಿಕ ಹೆಸರಾಗಿದ್ದರೂ, ಶೇ. 9ಕ್ಕಿಂತಲೂ ಹೆಚ್ಚು ಕೃಷಿ ಉತ್ಪನ್ನಗಳನ್ನು ಅದು ರಫ್ತು ಮಾಡುತ್ತದೆ.  ಭಾರತ ಹಾಗೂ ಅಮೆರಿಕದ ಕೃಷಿ ಪದ್ಧತಿಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ.  ಅಮೆರಿಕಾದಲ್ಲಿ ಕೃಷಿ ಹೆಚ್ಚು ಉದ್ಯಮದ ಸ್ವರೂಪ ತಾಳಿದೆ.  ಬಹುತೇಕ ಇಲ್ಲಿನ ಕೃಷಿ ಕ್ಷೇತ್ರಗಳು ವಿಸ್ತಾರವಾಗಿದ್ದು, ಕಂಪ್ಯೂಟರ್ ಆಧಾರಿತ ಕಾರ್ಯಕ್ರಮಗಳನ್ನು ಕೃಷಿಗಾಗಿ ಬಳಸಲಾಗುತ್ತದೆ.  ಅನೇಕ ವಿಶ್ವವಿದ್ಯಾಲಯಗಲ್ಲಿ ಕೃಷಿ ವಿಜ್ಞಾನವನ್ನು ಬೋಧಿಸಲಾಗುತ್ತಿದ್ದು,  ಅಲ್ಲಿನ ಅಧ್ಯಯನದ ಮುಖ್ಯ ಆದ್ಯತೆ ಇಳುವರಿ.  ಸೊಯಾಬೀನ್, ಹಣ್ಣುಗಳು, ಮೆಕ್ಕೆ ಜೋಳ, ಗೋಧಿ ಹಾಗೂ ಹತ್ತಿಯನ್ನು ಅಮೆರಿಕಾದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.  ಪಶುಸಂಗೋಪನೆ ಕೂಡಾ ಅಮೆರಿಕಾದಲ್ಲಿ  ಒಂದು ಜನಪ್ರಿಯ ಉದ್ದಿಮೆ.  ಹಂದಿ ಮಾಂಸ, ದನದ ಮಾಂಸ, ಕೋಳಿ ಹಾಗೂ ಮೀನುಗಾರಿಕೆ ಹಲವು ಸ್ಥಳೀಯ ಆರ್ಥಿಕತೆಗಳಿಗೆ ಬೆಂಬಲ ನೀಡುತ್ತವೆ. ಅಲ್ಲದೇ, ಅಮೆರಿಕ ಭಾರಿ ಅರಣ್ಯ ಪ್ರದೇಶವನ್ನು ಹೊಂದಿದ್ದು, ಅದರಿಂದ ನಾಟಾ ಮತ್ತಿತ್ತರೆ ಉತ್ಪನ್ನಗಳನ್ನು ಪಡೆಯಲಾಗುತ್ತದೆ.  ಇದೇ ವೇಳೆಯಲ್ಲಿ ಉಲ್ಲೇಖಿಸಬೇಕಾದ ಅಂಶ ಎಂದರೆ, ಅಮೆರಿಕಾದ ಎಲ್ಲ ಕೃಷಿ ಕ್ಷೇತ್ರಗಳೂ ಉದ್ಯಮದ ಸ್ವರೂಪ ಪಡೆದಿಲ್ಲ. ಸಣ್ಣ ಹಿಡುವಳಿಯಲ್ಲೆೀ ಸಾಕಷ್ಟು ಸಾಧನೆ ಮಾಡಿದ ಅನೇಕ ``ಕೌಟುಂಬಿಕ ಕೃಷಿ ಕ್ಷೇತ್ರಗಳ~~ ಉದಾಹರಣೆಗಳೂ ಅಮೆರಿಕದ ಗ್ರಾಮೀಣ ಪ್ರದೇಶಗಳಲ್ಲಿ ಉಂಟು. ಒಟ್ಟಾರೆಯಾಗಿ, ಅಮೆರಿಕಾ ದೇಶದ ಸಮಾಜ ಹಾಗೂ ಆರ್ಥಿಕತೆಯ ಮಹತ್ವದ ಅಂಗ ಕೃಷಿ.

2. ಎಂ. ಆರ್. ಶರತ್, ಮಳವಳ್ಳಿ
ಅಮೆರಿಕಾ ಸಂಸ್ಕೃತಿಗೂ ಹಾಗೂ ಭಾರತಿಯ ಸಂಸ್ಕೃತಿಗೂ ಇರುವ ವ್ಯತ್ಯಾಸಗಳನ್ನು ತಿಳಿಸಿ.  ಅಮೆರಿಕಾದಿಂದ ಹೊರಬರುತ್ತಿರುವ ಭಾರತೀಯ ಪತ್ರಿಕೆಗಳಾವುವು?  ಅವುಗಳ ವೈಶಿಷ್ಟ್ಯಗಳೇನು? 
ಭಾರತ ಹಾಗೂ ಅಮೆರಿಕಾಗಳು ಅನೇಕ ಸಾಂಸ್ಕೃತಿಕ ಸಾಮ್ಯ ಹಾಗೂ ಭೇದಗಳನ್ನು ಹೊಂದಿವೆ.  ಸಮಾನ ಆಸಕ್ತಿಗಳು ಹಾಗೂ ಮೌಲ್ಯಗಳನ್ನು ಹಂಚಿಕೊಳ್ಳುವ ಈ ಎರಡೂ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವಗಳು ಹಾಗೂ ವೈವಿಧ್ಯದಲ್ಲಿ ಶ್ರೀಮಂತ.  ಹೀಗಾಗಿ ನಮ್ಮ ನಾಗರಿಕರ ನಡುವೆ ಆಳವಾದ ಹಾಗೂ ಆತ್ಮೀಯ ಸಂಬಂಧ ಏರ್ಪಟ್ಟಿದೆ.

ಬಹು ಬಗೆಯ ಜನತೆ ಹಾಗೂ ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ  ಭಾರತವನ್ನು  ಸಾಮಾನ್ಯವಾಗಿ ``ಹಣ್ಣುಗಳ ಅಥವಾ ತರಕಾರಿಗಳ ರಸಾಯನದ ಬೋಗುಣಿ~~  (Salad bowl)  ಎಂದು ವರ್ಣಿಸಲಾಗುತ್ತದೆ.  ಇಲ್ಲಿ ಬಹುಮುಖಿ ಸಂಸ್ಕತಿಗಳು ಒಟ್ಟಿಗೆ ಇದ್ದರೂ ಅದು ಏಕಮುಖಿ ಸಂಸ್ಕೃತಿಯಾಗಿ ರೂಪುಗೊಂಡಿಲ್ಲ.

(ಹಣ್ಣಿನ ರಸಾಯನವೊಂದರಲ್ಲಿ ಬೇರೆ ಬೇರೆ ಪದಾರ್ಥಗಳು ಸೇರಿಕೊಂಡಂತೆ ತೋರುತ್ತಲೇ, ಬೇರೆಯಾಗಿಯೂ ಇದ್ದು, ರುಚಿಯನ್ನು ಹೆಚ್ಚಿಸುವಂತೆ...) ಪ್ರತಿಯೊಂದು ಸಂಸ್ಕೃತಿಯೂ ತನ್ನ ಅನನ್ಯತೆ ಹಾಗೂ ವೈಶಿಷ್ಟ್ಯಗಳನ್ನು ಉಳಿಸಿಕೊಂಡಿದೆ.

ಅಮೆರಿಕಾವನ್ನು ಸಾಂಪ್ರದಾಯಿಕವಾಗಿ ``ಸಂಸ್ಕೃತಿಗಳನ್ನು ಕುದಿಸುವ ಮಡಕೆ~~ಗೆ ಹೋಲಿಸಲಾಗುತ್ತದೆ.  ವೈವಿಧ್ಯಮಯ ಸಂಸ್ಕೃತಿಗಳು ಸೇರಿ, ಒಂದಾಗಿ ಹೊಂದಿಕೊಂಡು, ಹೊಸತು ಸೃಷ್ಟಿಯಾಗುತ್ತದೆ.  ಅಮೆರಿಕಾ ಮೂಲತಃ ವಲಸಿಗರ ದೇಶ.  ವಿವಿಧ ವಲಸಿಗರ ತಂಡಗಳು ತಮ್ಮವೇ ಆದ ಸಂಸ್ಕೃತಿ, ಸಂಪ್ರದಾಯ, ಧರ್ಮ, ಆಚರಣೆ, ಹಬ್ಬ, ಭಾಷೆ, ಸಾಹಿತ್ಯ ಹಾಗೂ ಕಲೆಗಳನ್ನು ಅಮೆರಿಕೆಗೆ ತೆಗೆದುಕೊಂಡು ಬಂದವು.

ಅಮೆರಿಕೆಯಿಂದ ಭಾರತದ ಪ್ರಮುಖ ದೈನಿಕಗಳಾವುವೂ ಪ್ರಕಟವಾಗದಿದ್ದರೂ, ಅಮೆರಿಕೆಯಲ್ಲಿರುವ ಭಾರತೀಯ ಸಂಜಾತರನ್ನೇ ಗುರಿಯಾಗಿಸಿಕೊಂಡಿರುವ ಹಲವಾರು ಪ್ರಕಟಣೆಗಳಿವೆ. ಇವುಗಳಲ್ಲಿ ಅತಿ ಹಳೆಯ ಹಾಗೂ ಬಹು ಪ್ರಖ್ಯಾತವಾದುದು ಎಂದರೆ 1970ರಲ್ಲಿ ಸ್ಥಾಪಿತವಾದ “India Abroad””. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ವೆಬ್ ಸೈಟಿಗೆ ಭೇಟಿ ನೀಡಿ: http://www.indiaabroad.com/.

3. ನಾಗರಾಜ ಬೈಲವಾಡ, ಧಾರವಾಡ
ಅಮೆರಿಕೆಯ ಜನಸಂಖ್ಯೆಯೆಷ್ಟು?  ಅಮೆರಿಕಾ ದೇಶದ ವಿದ್ಯಮಾನಗಳಲ್ಲಿ ಭಾರತೀಯರ ಪಾತ್ರವೇನು? 

ಅಮೆರಿಕಾದ ಜನಸಂಖ್ಯೆ 30 ಕೋಟಿ. ಹಾಗೂ 30 ಲಕ್ಷಕ್ಕೂ ಅಧಿಕ ಭಾರತೀಯ ಮೂಲದ ನಾಗರಿಕರು ಅಲ್ಲಿ ಇದ್ದಾರೆ. ಭಾರತೀಯ ಸಂಜಾತರು ಅಮೆರಿಕೆಯ ವಿದ್ಯಮಾನಗಳಲ್ಲಿ ಬಹುಮುಖ್ಯವಾದ ಪಾತ್ರ ವಹಿಸುತ್ತಿದ್ದಾರೆ.  ಅವರಲ್ಲಿ ಅನೇಕರು ಸಂಸತ್ ಸದಸ್ಯರು, ರಾಜ್ಯಪಾಲರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ವೈದ್ಯರು, ವಕೀಲರಂಥ ಪ್ರಮುಖ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ.  ಅಲ್ಲದೇ, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು, ಅಮೆರಿಕಾದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತ, ಭಾರತ-ಅಮೆರಿಕಾ ಸಂಬಂಧಗಳನ್ನು ಬಲಪಡಿಸುತ್ತಿದ್ದಾರೆ.  ಅಪ್ರತಿಮ ಸಾಧನೆ ಮಾಡಿದ ಕೆಲಸ ಪ್ರಮುಖ ಹೆಸರುಗಳೆಂದರೆ, ಅಮರ್ತ್ಯ ಸೇನ್ (ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ), ಇಂದ್ರಾ ನೂಯಿ (ಪೆಪ್ಸಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ), ಝುಂಪಾ ಲಾಹಿರಿ (ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಲೇಖಕಿ), ಕಲ್ಪನಾ ಚಾವ್ಲಾ (ನಾಸಾ ಗಗನಯಾತ್ರಿ) ಹಾಗೂ ಮೀರಾ ನಾಯರ್ (ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕಿ ಹಾಗೂ ನಿರ್ಮಾಪಕಿ)

4. ಜೆ. ಕೆ. ವೀರೇಶ ಕುಂಬಾರ, ಬೆಂಗಳೂರು
ನಾನು ಬೆಂಗಳೂರಿನ  PESIT ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡುತ್ತಿದ್ದೇನೆ.  ನಾನು ನಮ್ಮ ಕಾಲೇಜಿನ ಏರೋ ಮಾಡಲಿಂಗ್ ತಂಡದ ಸದಸ್ಯನಾಗಿದ್ದು, ನಮ್ಮ ತಂಡ ಅಮೆರಿಕೆಯಲ್ಲಿ ನಡೆಯುವ ಏರೋಮಾಡಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರತಿ ವರ್ಷ ಅಮೆರಿಕೆಗೆ ಹೋಗುತ್ತದೆ.  ಪ್ರತಿ ಬಾರಿಯೂ ನಮಗೆ ಮೂರು ತಿಂಗಳ ವಿಸಾ ನೀಡಲಾಗುತ್ತದೆ.  ಇದರ ಬದಲಿಗೆ, ದೀರ್ಘಾವಧಿ ವಿಸಾ ಪಡೆಯಲು ಅವಕಾಶವಿಲ್ಲವೇ? ನನ್ನ ಮತ್ತೊಂದು ಪ್ರಶ್ನೆಯೆಂದರೆ, ಭಾರತೀಯರು ಅಮೆರಿಕಾದ ಹುಡುಗಿಯನ್ನು ಮದುವೆಯಾಗುವುದು ಕಾನೂನು ಬದ್ಧವೆ?

ಖಂಡಿತವಾಗಿಯೂ!  ಅಮೆರಿಕಾದ ಹುಡುಗಿಯರನ್ನು ಭಾರತೀಯರು ಮದುವೆಯಾಗುವುದು ಕಾನೂನುಬದ್ಧ.  ಅಮೆರಿಕಾದ ನಾಗರಿಕರನ್ನು ವಿವಾಹವಾಗಿರುವ ಅನೇಕ ಭಾರತೀಯರು, ಎಲ್ಲೆಡೆ ಅಮೆರಿಕಾ, ಭಾರತ ಹಾಗೂ ವಿಶ್ವದಾದ್ಯಂತ ಇದ್ದಾರೆ.

ಸಾಮಾನ್ಯವಾಗಿ ದೀರ್ಘಾವಧಿ ವಿಸಾಗಳನ್ನು ಅಮೆರಿಕಾ ನೀಡುತ್ತದೆ.  ಪ್ರವಾಸಿ ಹಾಗೂ ವ್ಯವಹಾರದ ವಿಸಾಗಳಿಗೆ ಸಾಮಾನ್ಯವಾಗಿ 10 ವರ್ಷಗಳ ಅವಧಿಯ ಬಹು-ಪ್ರವೇಶದ ಅವಕಾಶ ನೀಡಲಾಗುತ್ತದೆ.  ಇಷ್ಟು ದೀರ್ಘಾವಧಿ ಊರ್ಜಿತವಾಗುವ ವಿಸಾವನ್ನು ಭಾರತದಲ್ಲಿ ವಿಶೇಷವಾಗಿ ನೀಡಲಾಗುತ್ತಿದೆ ಎಂಬುದು ಗಮನಾರ್ಹ. 

ನಾವು ಶೇ. 97ರಷ್ಟು ವಿಸಾ ಅರ್ಜಿಗಳನ್ನು, ಅವುಗಳನ್ನು ಪಡೆದ ಮಾರನೇ ಕೆಲಸದ ದಿನವೇ ಪರಿಶೀಲಿಸುತ್ತೇವೆ.  ಕೇವಲ ಶೇ. 0.1ರಷ್ಟು ಅರ್ಜಿಗಳಿಗೆ ಒಂದು ತಿಂಗಳಿಗೂ ಹೆಚ್ಚು ಕಾಲ ಬೇಕಾಗುತ್ತದೆ.  ಪ್ರವಾಸದ ಕಾರಣಗಳಿಗೆ ಅನುಗುಣವಾಗಿ, ವಿವಿಧ ವಿಸಾಗಳ ಅವಧಿಯನ್ನು ನಿರ್ಧರಿಸಲಾಗುತ್ತದೆ.  ವಿವಿಧ ಬಗೆಯ ವಿಸಾಗಳು ಹಾಗೂ ಅರ್ಹತೆ, ಅಗತ್ಯ ಇತ್ಯಾದಿ ಮಾಹಿತಿಗಾಗಿ ನಮ್ಮ ವೆಬ್ ಸೈಟಿಗೆ ಭೇಟಿ ನೀಡಿ. http://chennai.usconsulate.gov/temporary-visitors.html. ಇನ್ನೂ ವ್ಯಾಸಂಗ ಮಾಡುತ್ತಿರುವ ನಿಮಗೆ ಶುಭ ಹಾರೈಕೆಗಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT