ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ask ಅಮೆರಿಕ: ಪ್ರಶ್ನೆ - ಉತ್ತರ

Last Updated 3 ಮಾರ್ಚ್ 2012, 19:30 IST
ಅಕ್ಷರ ಗಾತ್ರ

1. ಸುಮಾ ಜಿ.ಎಂ. ಬಿಎಸ್‌ಎಸ್ ಕೆ ಎನ್. ದೊಡ್ಡ ಬಾಲೆ, ದಾವಣಗೆರೆ
ಅಮೆರಿಕದಲ್ಲಿ ಹವಾಮಾನ ಹೇಗಿರುತ್ತದೆ? ಯಾವ ತಿಂಗಳಿನಲ್ಲಿ ಹವಾಮಾನ ಹೇಗೆ ಬದಲಾಗುತ್ತದೆ?

ಅಮೆರಿಕ ಭೌಗೋಳಿಕವಾಗಿ ಅತಿ ವಿಶಾಲವಾದ ದೇಶವಾದ್ದರಿಂದ ಅತ್ಯಂತ ವೈವಿಧ್ಯಮಯ ವಾತಾವರಣದ ಪ್ರದೇಶಗಳನ್ನು ಒಳಗೊಂಡಿದೆ. ಉಷ್ಣವಲಯದ ಕಾಡುಗಳು, ಬಂಜರು ಶುಷ್ಕ ಪ್ರದೇಶ, ಮೆಡಿಟರೇನಿಯನ್ ಹಾಗೂ ಪರ್ವತ ಪ್ರದೇಶಗಳಲ್ಲಿ ಕಂಡು ಬರುವ ತೀವ್ರ, ಉಷ್ಣ, ಸಮಶೀತೋಷ್ಣ, ಅತಿ ಶೀತಗಳಂತಹ ಎಲ್ಲ ಬಗೆಯ ಹವಾಮಾನ ವೈವಿಧ್ಯಗಳೂ ಇಲ್ಲಿವೆ. ಉದಾಹರಣೆಗಾಗಿ, ಉತ್ತರ ಅಲಾಕ್ಸಾದಲ್ಲಿ ಉಷ್ಣತೆ -62 ಡಿಗ್ರಿ ಸೆಲ್ಸಿಯಸ್ ತಲುಪಿದರೆ, ಕ್ಯಾಲಿಫೋರ್ನಿಯಾದ ಡೆಟ್ ವ್ಯಾಲಿಯಲ್ಲಿ ಒಂದು ಬಾರಿ ಉಷ್ಣತೆ 56.7 ಡಿಗ್ರಿ ಸೆಲ್ಸಿಯಸ್ ತಲುಪಿತ್ತು.

ಅಮೆರಿಕದ ಯಾವ ಭಾಗದಲ್ಲಿದ್ದೀರಿ ಎಂಬುದರ ಮೇಲೆ ಋತು ಬದಲಾವಣೆ ನಿರ್ಧಾರವಾಗುತ್ತದೆ. ಉದಾಹರಣೆಗೆ ನ್ಯೂಯಾರ್ಕಿನ ಬಫೆಲೋದಲ್ಲಿ ನಾಲ್ಕು ಋತುಗಳಿರುತ್ತವೆ. ಅವುಗಳೆಂದರೆ, ಸ್ಪ್ರಿಂಗ್, ಸಮ್ಮರ್, ಫಾಲ್ ಹಾಗೂ ವಿಂಟರ್. ಭಾರತದಲ್ಲಿನ ವಸಂತ, ಗ್ರೀಷ್ಮ, ಹೇಮಂತ ಹಾಗೂ ಶಿಶಿರ ಋತುಗಳಿಗೆ ಅವು ಸಮಾನ. ನೀವು ಲಾಸ್ ಏಂಜಲ್ಸ್ ಕರಾವಳಿ ತೀರದಲ್ಲಿದ್ದರೆ, ಹಿಮ ಕಾಣುವುದು ತೀರಾ ಅಪರೂಪದ ಸಂಗತಿ. ಅಲ್ಲಿಯ ಉಷ್ಣತೆ 4.4 ಡಿಗ್ರಿ ಸೆಲ್ಸಿಯಸ್ ನಿಂದ 21.1 ಡಿಗ್ರಿ ಸೆಲ್ಸಿಯಸ್ ಮಟ್ಟದಲ್ಲಿರುತ್ತದೆ.

2. ಎಚ್. ಜಿ. ವಿಜಯಲಕ್ಷ್ಮಿ, ತಿಪಟೂರು
ಅಮೆರಿಕದಲ್ಲಿ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಣ ಮಕ್ಕಳ ಎಷ್ಟನೇ ವರ್ಷಕ್ಕೆ ಪ್ರಾರಂಭವಾಗುತ್ತದೆ? ಪ್ರಾಥಮಿಕ ಶಾಲಾ ಶಿಕ್ಷಕರ ವಿದ್ಯಾರ್ಹತೆಗಳೇನು? ಶಾಲೆಗಳಲ್ಲಿ ಶಿಕ್ಷಕರ ಮತ್ತು ಮಕ್ಕಳ ಅನುಪಾತ ಎಷ್ಟಿದೆ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವೇತನದಲ್ಲಿ ತಾರತಮ್ಯ ಇದೆಯಾ?

ಅಮೆರಿಕಾದಲ್ಲಿ ಪ್ರಾಥಮಿಕ ಪೂರ್ವ ಶಿಕ್ಷಣ ಮಗುವಿನ ಮೂರನೇ ವರ್ಷದಿಂದ ಆರಂಭವಾಗುತ್ತದೆ.

ಪ್ರಾಥಮಿಕ ಶಾಲಾ ಉಪಾಧ್ಯಾಯರು ಪ್ರಾಥಮಿಕ ಶಿಕ್ಷಣದಲ್ಲಿ  ಪದವಿ ಹೊಂದಿರಬೇಕು. ಇಲ್ಲವೇ, ಪ್ರಾಥಮಿಕ ಶಿಕ್ಷಣದ ಪ್ರಮಾಣೀಕೃತ ಕೋರ್ಸನ್ನಾದರೂ ಮಾಡಿರಬೇಕು.
ಕೊಲಂಬಿಯಾ ಜಿಲ್ಲೆಯೂ (ಅಮೆರಿಕ ರಾಜಧಾನಿ ವಾಷಿಂಗ್ಟನ್ ನಗರ ಯಾವ ರಾಜ್ಯಕ್ಕೂ ಸೇರಿದ್ದಲ್ಲ. ಆ ನಗರ ಪ್ರದೇಶವನ್ನು ಜಿಲ್ಲೆ ಎಂದು ಕರೆಯಲಾಗುತ್ತದೆ.) ಸೇರಿದಂತೆ ಎಲ್ಲ 50 ರಾಜ್ಯಗಳ ಪಬ್ಲಿಕ್ ಶಾಲೆಗಳ ಶಿಕ್ಷಕರೂ ಪರವಾನಗಿಯನ್ನು ಹೊಂದಿರಬೇಕು.

ರಾಜ್ಯಗಳ ಶಿಕ್ಷಣ ಮಂಡಲಿಗಳು ಅಥವಾ ಪರವಾನಗಿ ಸಲಹಾ ಸಮಿತಿಗಳು, ಶಿಕ್ಷಕ ಪರವಾನಗಿಯನ್ನು ನೀಡುತ್ತವೆ. ಈ ಪರವಾನಗಿ (ಕಿಂಡರ್ ಗಾರ್ಟನ್‌ನಿಂದ 12ನೇ ತರಗತಿ ವರೆಗಿನ ಶಿಕ್ಷಕರಿಗೆ) ಪಡೆಯಲು ಅರ್ಹತೆಗಳು ಪ್ರತಿ ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಬಹುದು. ಪದವಿ ಹಾಗೂ ಸೂಕ್ತ ಸಂಖ್ಯೆಯ ವಿಷಯಗಳಲ್ಲಿ ಅಗತ್ಯ ಶ್ರೇಣಿಯೊಂದಿಗೆ ಶಿಕ್ಷಕರ ತರಬೇತಿ ಕೋರ್ಸನ್ನು ಪೂರ್ಣಗೊಳಿಸಿರುವುದು ಎಲ್ಲ ರಾಜ್ಯಗಳಲ್ಲೂ ಕಡ್ಡಾಯ.

ಶಿಕ್ಷಕ-ವಿದ್ಯಾರ್ಥಿಗಳ ಅನುಪಾತ ಶಾಲೆಯಿಂದ ಶಾಲೆಗೆ ಹಾಗೂ ಒಂದು ಶಾಲಾ ಜಿಲ್ಲೆಯಿಂದ ಮತ್ತೊಂದಕ್ಕೆ ಬದಲಾಗುತ್ತದೆ. ಈಚಿನ ಅಂಕಿ ಅಂಶಗಳ ಪ್ರಕಾರ ಪಬ್ಲಿಕ್ ಶಾಲಾ ವ್ಯವಸ್ಥೆಯು 2011ರಲ್ಲಿ 32 ಲಕ್ಷ ಶಿಕ್ಷಕರಿಗೆ ಉದ್ಯೋಗ ನೀಡಿದ್ದು, ಕಳೆದ ಋತುವಿನಲ್ಲಿ  ವಿದ್ಯಾರ್ಥಿ-ಶಿಕ್ಷಕರ ನಡುವಿನ ಅನುಪಾತ 15.5 ಆಗಿತ್ತು.  (ಅಂದರೆ, ಪ್ರತಿ 15.5 ವಿದ್ಯಾರ್ಥಿಗೆ ಒಬ್ಬ ಶಿಕ್ಷಕ). ಹತ್ತು ವರ್ಷಗಳ ಹಿಂದೆ ಅಂದರೆ 2000ದಲ್ಲಿ ಈ ಅನುಪಾತ 16 ಆಗಿತ್ತು.

ಅಮೆರಿಕ ಶಿಕ್ಷಕರ ಒಕ್ಕೂಟ 2007ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಅಮೆರಿಕ ಶಿಕ್ಷಕರ ಸರಾಸರಿ ವಾರ್ಷಿಕ ವೇತನ 51,009 ಅಮೆರಿಕನ್ ಡಾಲರುಗಳು. ಶಿಕ್ಷಕರ ಸರಾಸರಿ ವೇತನ 50,000 ಡಾಲರುಗಳನ್ನು ಮೀರಿರುವುದು ಅಮೆರಿಕ ಇತಿಹಾಸದಲ್ಲಿ ಇದೇ ಮೊದಲ ಬಾರಿ.

3. ಎಂ.ವಿ.ವೆಂಕಟೇಶ್, ಮೈಸೂರು
ನಿಮ್ಮ ದೇಶಲ್ಲಿ ವೃತ್ತಿಯಿಂದ ನಿವೃತ್ತಿ ಹೊಂದಿದ ಪ್ರಜೆಗಳಿಗೆ ದೇಶದ ಕೊಡುಗೆ ಏನು? ವೃದ್ಧಾಪ್ಯದಲ್ಲಿ ಸಿಗುವ ಅಥವಾ ಕೊಡುವ ಸೌಲಭ್ಯಗಳೇನು? ವಯೋವೃದ್ಧರಿಗೆ ತಮ್ಮ ಕುಟುಂಬದಿಂದ ಸಿಗುವ ಗೌರವ, ಸಾರ್ವಜನಿಕರ, ಸರ್ಕಾದಿಂದ ಸಿಗುವ ಆತ್ಮೀಯತೆಯ ಬಗ್ಗೆ ತಿಳಿಸಿ.

ನಿವೃತ್ತರಿಗಾಗಿ ಸಾಮಾಜಿಕ ಸುರಕ್ಷತೆ ಎಂಬ ಹೆಸರಿನ ಬೃಹತ್ ಯೋಜನೆಯೊಂದನ್ನು ಫೆಡರಲ್ ಸರ್ಕಾರ ನಡೆಸುತ್ತಿದೆ. ಮಜೂರಿಯ ಮೇಲೆ ವಿಧಿಸಲಾಗುವ ತೆರಿಗೆಯಿಂದ ಈ ಯೋಜನೆಗೆ ಹಣ ಸಂಗ್ರಹಿಸಲಾಗುತ್ತದೆ. ಅರವತ್ತೈದು ವರ್ಷಕ್ಕೂ ಮೇಲ್ಪಟ್ಟ ಹತ್ತರಲ್ಲಿ ಒಂಬತ್ತು ಜನ ಈ ಯೋಜನೆಯ ಫಲಾನುಭವಿಗಳು. ಮೆಡಿಕೇರ್ ಯೋಜನೆಯಡಿಯಲ್ಲಿ ಅರವತ್ತೈದು ವರ್ಷಕ್ಕೂ ಮೇಲ್ಪಟ್ಟ ಅಮೆರಿಕನ್ನರ ವೈದ್ಯಕೀಯ ವೆಚ್ಚದ ಕೆಲ ಭಾಗವನ್ನು ಭರಿಸಲಾಗುತ್ತದೆ.

ಸರ್ಕಾರದ ನೆರವಿನ ಮೇಲೆ ಯಾವ ಪ್ರಮಾಣದಲ್ಲಿ ಅವಲಂಬಿಸಬೇಕು ಎಂಬುದು ಆಯಾ ವ್ಯಕ್ತಿಗಳಿಗೆ ಬಿಟ್ಟ ವಿಚಾರ. ನಿವೃತ್ತಿಯ ನಂತರದ ಬದುಕಿಗಾಗಿ ಹೆಚ್ಚು ಹಣವನ್ನು ಉಳಿಸಲು ಅಮೆರಿಕ ಸರ್ಕಾರ ಪ್ರೋತ್ಸಾಹಿಸುತ್ತದೆ. ನಿವೃತ್ತ ಜೀವನಕ್ಕೆ ಅಗತ್ಯವಾದ ಸಾಕಷ್ಟು ಹಣವನ್ನು ಉಳಿತಾಯ ಮಾಡುವ ಹಲವಾರು ಆಯ್ಕೆಗಳೂ ಅಮೆರಿಕನ್ನರ ಮುಂದಿವೆ.
ಅಮೆರಿಕದ ಸಾಮಾಜಿಕ ಸುರಕ್ಷೆಯ ಕುರಿತು ಹೆಚ್ಚಿನ

ಮಾಹಿತಿಗಾಗಿ http://www.ssa.gov/pressoffice/basicfact.htm ಹಾಗೂ ಮೆಡಿಕೇರ್ ಕುರಿತು ಹೆಚ್ಚಿನ ಮಾಹಿತಿಗಾಗಿ http://questions.medicare.gov/app/home
ವೆಬ್‌ಸೈಟುಗಳಿಗೆ ಭೇಟಿ ನೀಡಿ.

4. ವೇದವತಿ ಯಾನೇ ಸರೋಜಮ್ಮ, ಸಿರಿಗೆರೆ-ಆಯನೂರು
ವಿಶ್ವದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ನೀಡಲು ತಮ್ಮ ದೇಶದ ಅಭಿಮತ ತಿಳಿಸಿ.
ಭಾರತಕ್ಕೆ ನವೆಂಬರ್ 2010ರಲ್ಲಿ ಭೇಟಿ ನೀಡಿದಾಗ ಅಧ್ಯಕ್ಷ ಒಬಾಮ ``ಭಾರತವೂ ಶಾಶ್ವತ ಸದಸ್ಯತ್ವ ಸ್ಥಾನ ಪಡೆದಿರುವ ಸುಧಾರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ನಾನು ಎದಿರು ನೋಡುತ್ತಿದ್ದೇನೆ~~ ಎಂದು ಹೇಳಿದ್ದರು. ಅಧ್ಯಕ್ಷರ ಈ ನಿಲುವನ್ನು ಹಲವಾರು ಸಂದರ್ಭದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಾಗೂ ಇತರ ಹಿರಿಯ ಅಧಿಕಾರಿಗಳು ವಿವಿಧ ಅಂತರ ರಾಷ್ಟ್ರೀಯ ವೇದಿಕೆಗಳಲ್ಲಿ ಪ್ರತಿಪಾದಿಸಿರುವುದು, ಭಾರತದೊಂದಿಗಿನ ಸದೃಢ ಸಂಬಂಧ ಹೊಸ ಎತ್ತರಕ್ಕೇರಿಸುವ ಕುರಿತ ಬದ್ಧತೆಯನ್ನು ತೋರಿಸುತ್ತದೆ.

ಪ್ರಜಾಪ್ರಭುತ್ವ, ಬಹುಮುಖಿ ಸಮಾಜ, ಸರ್ವರಿಗೂ ಮುಕ್ತ ಅವಕಾಶ ಹಾಗೂ ಹೊಸ ಶೋಧಗಳಂತಹ ಹಲವು ಮಹತ್ವದ ಮೌಲ್ಯಗಳನ್ನು ಭಾರತ ಹಾಗೂ ಅಮೆರಿಕ ಹಂಚಿಕೊಂಡಿರುವುದರಿಂದಲೇ, ಈ ಎರಡೂ ರಾಷ್ಟ್ರಗಳು ಜೊತೆಗೂಡಿ  ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಈ ಪ್ರಯತ್ನಗಳಿಗೆ ಇಂಬು ನೀಡಲು ಎರಡೂ ಸರ್ಕಾರಗಳು ಅಮೆರಿಕ-ಭಾರತ ವ್ಯೆಹಾತ್ಮಕ ಸಂವಾದ (U.S.-India Strategic Dialogue)ವನ್ನು 2009ರಲ್ಲಿ ಹುಟ್ಟು ಹಾಕಿದವು.
 
ಎರಡೂ ದೇಶಗಳ ನಡುವಿನ ಸಹಕಾರ ವೃದ್ಧಿಸಲು ಹೊಸ ಕ್ಷೇತ್ರಗಳ ಅನ್ವೇಷಣೆ, ಸಂಬಂಧ ವೃದ್ಧಿಯ ದಿಶೆಯಲ್ಲಿ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುವುದು ಈ ಸಂವಾದದ ಆಶಯ. ಎರಡೂ ದೇಶಗಳ ಸಮಾನ ಆಸಕ್ತಿ, ಭಯೋತ್ಪಾದನೆಯ ವಿರುದ್ಧ ಎರಡೂ ದೇಶಗಳ ಜಂಟಿ ಹೋರಾಟ,ಆರ್ಥಿಕ ಸಂಬಂಧದ ವೃದ್ಧಿ, ಶಿಕ್ಷಣ, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಹಲವು ವಿಷಯಗಳ ಕುರಿತು ಎರಡೂ ದೇಶಗಳ ನಾಯಕರು ಚರ್ಚಿಸಿದರು.

5. ಲೀಲಾ ಎಸ್. ಕುಮಾರ್, ಬೆಂಗಳೂರು

ಅಮೆರಿಕಕ್ಕೆ ಹೊರಗಿನಿಂದ ಬರುವ ವಿದ್ಯಾರ್ಥಿಗಳಿಗಾಗಲಿ, ಕೆಲಸ ಮೇಲೆ ಬರುವವರಿಗಾಗಲಿ, ಎಷ್ಟು ರೀತಿಯ ವೀಸಾಗಳಿವೆ. ಪ್ರತಿಯೊಂದು ವೀಸಾವನ್ನು ವಿವರಿಸಿ ಪ್ರಕಟಿಸಿ.
ವೀಸಾಗಳಲ್ಲಿ ಎರಡು ಮುಖ್ಯ ವಿಧಗಳು:
ಅಮೆರಿಕಕ್ಕೆ ವಲಸೆ ಹೋಗುವವರಿಗಾಗಿ ಇಮಿಗ್ರೆಂಟ್ ವೀಸಾ ಹಾಗೂ ನಿರ್ದಿಷ್ಟ ಕಾಲ ಅಮೆರಿಕಕ್ಕೆ ಭೇಟಿ ನೀಡಿ, ಮತ್ತೆ ಸ್ವದೇಶಕ್ಕೆ ಮರಳುವವರಿಗಾಗಿ ನಾನ್ ಇಮಿಗ್ರೆಂಟ್ ವೀಸಾ. ನಾನ್ ಇಮಿಗ್ರೆಂಟ್ ವೀಸಾದಲ್ಲಿ ಅನೇಕ ಬಗೆಗಳಿವೆ. ಪ್ರವಾಸಿಗರಿಗೆ, ಅಲ್ಪ ಕಾಲದ ವ್ಯಾಪಾರಕ್ಕಾಗಿ ಹೋಗುವವರಿಗೆ, ವಿದ್ಯಾರ್ಥಿಗಳಿಗೆ, ವಿಶೇಷ ಕೌಶಲ್ಯ ಹೊಂದಿರುವ ಕೆಲಸಗಾರರಿಗೆ, ಪ್ರದರ್ಶನ ಕಲೆಗಳ ಕಲಾವಿದರಿಗೆ ಬೇರೆ ಬೇರೆಯದೇ ಆದ ವೀಸಾಗಳುಂಟು. ಹೆಚ್ಚಿನ ಮಾಹಿತಿಗಾಗಿ http://travel.state.gov    ಸೈಟಿಗೆ ಭೇಟಿ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT