ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ask ಅಮೆರಿಕ: ಪ್ರಶ್ನೆ - ಉತ್ತರ

Last Updated 31 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ಪ್ರಿಯ ಓದುಗರೇ,

ಮಹಿಳಾ ಇತಿಹಾಸ ಮಾಸದ ಶುಭಾಶಯಗಳು!  ನಮ್ಮ ಎರಡೂ ದೇಶಗಳಲ್ಲಿ ಹಾಗೂ ಸಮಾಜಗಳಲ್ಲಿ ಮಹತ್ವದ ಸಾಧನೆಗೈದ ಮಹಿಳೆಯರನ್ನು ಗುರುತಿಸಿ, ಗೌರವಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಾನು ಹಾಗೂ ನನ್ನ ಸಿಬ್ಬಂದಿ ``ಮಹಿಳಾ ಇತಿಹಾಸ ಮಾಸ~~ವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ.  ಭಾರತೀಯ ಮೂಲದ ಅಮೆರಿಕನ್  ಗಗನಯಾತ್ರಿ ಸುನಿತಾ ವಿಲಿಯಮ್ಸ ಅವರು  ಕೊಯಮತ್ತೂರಿನಲ್ಲಿದ್ದ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ವಿಡಿಯೋ ಸಂವಾದದಲ್ಲಿ ಭಾಗವಹಿಸುವ ಮೂಲಕ ಈ ಮಾಸಾಚರಣೆಗೆ ಫೆಬ್ರುವರಿ 29ರಂದು ಚಾಲನೆ ನೀಡಿದರು.  

ರಷ್ಯಾದಿಂದ ನಮ್ಮಂದಿಗೆ ಸಂವಾದ ನಡೆಸಿದ ಸುನಿತಾ, ತಮ್ಮ ಆರು ತಿಂಗಳ ಮತ್ತೊಂದು ಬಾಹ್ಯಾಕಾಶ ಯಾತ್ರೆಗೆ ಸಿದ್ಧರಾಗುತ್ತಿದ್ದರು.  ನಿಮಗೆಲ್ಲಾ ತಿಳಿದಂತೆ, ಬಾಹ್ಯಾಕಾಶ ಕ್ಷೇತ್ರದ ಹಲವಾರು ದಾಖಲೆಗಳು ಸುನಿತಾ ಹೆಸರಿನಲ್ಲಿವೆ.  ಬರೀ ಭಾರತ, ಅಮೆರಿಕಾ ಮಾತ್ರವಲ್ಲ, ವಿಶ್ವದ ಎಲ್ಲರಿಗೂ ಆಕೆ ಸ್ಫೂರ್ತಿ. ಆಕೆ ಮಾತ್ರವಲ್ಲ, ಆಕೆಯ ಮುದ್ದಿನ ನಾಯಿ ಮರಿ ಕೂಡಾ ನಮ್ಮಂದಿಗೆ ವಿಡಿಯೊ ಸಂವಾದದಲ್ಲಿ ಭಾಗಿಯಾಗಿದ್ದು ವಿಶೇಷ!  ಕಳೆದ ಹಲವು ವಾರಗಳಿಂದ ಆರೋಗ್ಯ, ಉದ್ಯಮಶೀಲತೆ, ಮಾಧ್ಯಮ ಹಾಗೂ ರಾಜಕಾರಣ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ದುಂಡುಮೇಜಿನ ವಿಶೇಷ ಸಭೆಗಳನ್ನು, ಹಲವು ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಅಮೆರಿಕನ್ ದೂತಾವಾಸ ಆಯೋಜಿಸಿದೆ. ಕಳೆದ ಮಾರ್ಚ್ 21ರಂದು ಏರ್ಪಡಿಸಲಾಗಿದ್ದ ವಿಶೇಷ ದುಂಡುಮೇಜಿನ ಸಭೆಯಲ್ಲಿ ಶೋಭಾ ಗಸ್ತಿ ಅವರನ್ನು ಸನ್ಮಾನಿಸಲಾಯಿತು.  ಅಮೆರಿಕದ ವಿದೇಶಾಂಗ ಸಚಿವರ ಹೆಸರಿನಲ್ಲಿ ನೀಡಲಾಗುವ ``ಧೈರ್ಯವಂತ ಮಹಿಳೆ~~  (the U.S. Secretary of State’s Woman of Courage Award) ಪ್ರಶಸ್ತಿಗೆ ಭಾರತದಲ್ಲಿರುವ ಅಮೆರಿಕನ್ ರಾಯಭಾರ ಮಂಡಳಿಯು  ಶೋಭಾ ಗಸ್ತಿ ಅವರನ್ನು ಈ ಬಾರಿ ನಾಮಕರಣ ಮಾಡಿದೆ.

ಉತ್ತರ ಕರ್ನಾಟಕದ ಗ್ರಾಮೀಣ ಹಿನ್ನೆಲೆಯ ಶೋಭಾ ಗಸ್ತಿ ಅವರನ್ನು ತೀರಾ ಎಳೆಯ ವಯಸ್ಸಿನಲ್ಲಿಯೇ ದೇವದಾಸಿಯನ್ನಾಗಿ ಬಿಡಲಾಯಿತು. ಈ ಕಾನೂನು ಬಾಹಿರ ಪದ್ಧತಿಯ ಪ್ರಕಾರ ಯುವತಿಯರು ಸಮಾಜದ ಸ್ವತ್ತಾಗುತ್ತಾರೆ. ಅಪಾರ ಪರಾಕ್ರಮದಿಂದ ಶ್ರಿಮತಿ ಗಸ್ತಿ ಅವರು ಈ ಶೋಷಣೆಯಿಂದ ಸ್ವತಃ ತಪ್ಪಿಸಿಕೊಂಡಿದ್ದಲ್ಲದೇ, ಈ ದಾರುಣ ಪದ್ಧತಿಯ ನಿರ್ಮೂಲನೆಗಾಗಿ ಪಣತೊಟ್ಟು, ಈ ಕುರಿತ ಸಾಮಾಜಿಕ ಅಭಿಯಾನದಲ್ಲಿ ಭಾಗಿಯಾದರು. ಅದಕ್ಕಾಗಿ ಸರ್ಕಾರ ಹಾಗೂ ಇತರ ಸರ್ಕಾರೇತರ ಸಂಸ್ಥೆಗಳ ಜೊತೆಗೂಡಿದರು.  ಶ್ರಿಮತಿ ಗಸ್ತಿ ಹಾಗೂ ಅವರ ಪರಾಕ್ರಮಗಳನ್ನು ಬಿಂಬಿಸುವ “ಉಛಿ ಜಿಛಿ ಛ್ಞಿ” ಎಂಬ ಯುನೆಸ್ಕೊ ಸಾಕ್ಷ್ಯ ಚಿತ್ರವನ್ನು ಮಾರ್ಚ್ 21ರ ದುಂಡು ಮೇಜಿನ ಸಭೆಯಲ್ಲಿ ಪ್ರದರ್ಶಿಸಲಾಯಿತು ಎಂಬುದೂ ವಿಶೇಷ.

ನಮ್ಮ  ಚಟುವಟಿಕೆಗಳ ಕುರಿತು ತಿಳಿಯಲು ಹಾಗೂ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು, ನಮ್ಮ ಫೇಸ್ ಬುಕ್, ಟ್ವಿಟ್ಟರ್ ಹಾಗೂ ಫ್ಲಿಕರ್ ಪುಟಗಳಿಗೆ ಭೇಟಿ ನೀಡಿ.
ತಮ್ಮ ವಿಶ್ವಾಸಿ

ಜೆನಿಫೆರ್ ಮ್ಯಾಕ್‌ಇನ್ಟೈರ್
ಕಾನ್ಸುಲ್ ಜನರಲ್, ಅಮೆರಿಕನ್ ದೂತಾವಾಸ, ಚೆನ್ನೈ

1. ಕೋಮಲಮ್ಮ ಸಿ. ಚಂದ್ರಶೇಖರಯ್ಯ ಬಿ. ಆರ್., ಎಲ್. ಬಿ. ಎಸ್. ನಗರ, ಶಿವಮೊಗ್ಗ ಜಿಲ್ಲೆ

ಅಮೆರಿಕದಲ್ಲಿ ವಾಹನ ಓಡಿಸುವವರಿಗೆ ಹೆಲ್ಮೆಟ್ ಕಡ್ಡಾಯವೇ?
ಅಮೆರಿಕದಲ್ಲಿ ಹೆಲ್ಮೆಟ್ ಬಳಕೆಯ ಕಾನೂನುಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಿವೆ. ಬಹುತೇಕ ಎಲ್ಲ 50 ರಾಜ್ಯಗಳಲ್ಲಿಯೂ ಮೋಟಾರ್ ಸೈಕಲ್ ಓಡಿಸುವಾಗ ಹೆಲ್ಮೆಟ್ ಬಳಸುವ ಕುರಿತ ನಿಯಮಗಳಿವೆ. ಹೆಚ್ಚಿನ ಮಾಹಿತಿಗಾಗಿ http://www.nhtsa.gov/ ವೆಬ್ ಸೈಟಿಗೆ ಭೇಟಿ ನೀಡಿ.

2. ಋತ್ವಿಕ್ ಭಾರ್ಗವ, ನಾಗಮಂಗಲ
ಅಮೆರಿಕ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆಯನ್ನು ದಯವಿಟ್ಟು ತಿಳಿಸಿ.
ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಅಮೆರಿಕ ಅಧ್ಯಕ್ಷರ ಆಯ್ಕೆ ನಡೆಯುತ್ತದೆ. ಅಮೆರಿಕ ಸಂವಿಧಾನದಲ್ಲಿ ನಿಗದಿ ಪಡಿಸಲಾಗಿರುವ ಪ್ರಕ್ರಿಯೆಗಳಿಗೆ ಅನುಸಾರವೇ ಅಧ್ಯಕ್ಷರ ಆಯ್ಕೆ ನಡೆಸಲಾಗುತ್ತದೆ. ಅಧ್ಯಕ್ಷರಾಗ ಬಯಸುವ ಅಭ್ಯರ್ಥಿಗಳು ಹಲವು ಅರ್ಹತೆಗಳನ್ನು ಹೊಂದಿರಬೇಕು. ಅವರು ಬಹುತೇಕ ಯಾವುದಾದರೂ ಒಂದು ರಾಜಕೀಯ ಪಕ್ಷದ ಪ್ರತಿನಿಧಿಯಾಗಿರುತ್ತಾರೆ. ಅಮೆರಿಕದಲ್ಲಿ ಡೆಮಾಕ್ರಟಿಕ್ ಪಾರ್ಟಿ ಹಾಗೂ ರಿಪಬ್ಲಿಕನ್ ಪಾರ್ಟಿ ಎಂಬೆರಡು ಪ್ರಮುಖ ರಾಜಕೀಯ ಪಕ್ಷಗಳಿವೆ. ಅಧ್ಯಕ್ಷೀಯ ಅಭ್ಯರ್ಥಿಗಳೇ ಖುದ್ದಾಗಿ ಉಪಾಧ್ಯಕ್ಷ ಅಭ್ಯರ್ಥಿಯನ್ನು ನಿರ್ಧರಿಸುತ್ತಾರೆ.

ಚುನಾವಣಾ ವರ್ಷದ ಜನವರಿಯ ಆರಂಭದಿಂದಲೇ, ವಿವಿಧ ರಾಜ್ಯಗಳಲ್ಲಿ ಅಮೆರಿಕನ್ ಮತದಾರರು ಸಂಭವನೀಯ ಅಭ್ಯರ್ಥಿಗಳ ಬಗ್ಗೆ ಚರ್ಚಿಸಿ, ತಮ್ಮ ಬೆಂಬಲವನ್ನು ಘೋಷಿಸಲಾರಂಭಿಸುತ್ತಾರೆ. ಇವುಗಳನ್ನು ಪ್ರಾಥಮಿಕ ಚುನಾವಣೆ ಅಥವಾ ಕಾಕಸ್ ಎಂದು ಕರೆಯುತ್ತಾರೆ. ಈ ಅವಧಿಯ ಕೊನೆಯಲ್ಲಿ ರಾಜಕೀಯ ಪಕ್ಷಗಳು ರಾಷ್ಟ್ರ ಮಟ್ಟದಲ್ಲಿ ಸಮಾವೇಶಗಳನ್ನು ಆಯೋಜಿಸುತ್ತವೆ. ಈ ಸಮಾವೇಶದಲ್ಲಿ ಭಾಗವಹಿಸುವ ರಾಜ್ಯಗಳ ಪ್ರತಿನಿಧಿಗಳು ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ರಾಜ್ಯಗಳ ಪ್ರತಿನಿಧಿಗಳ ಅತಿ ಹೆಚ್ಚು ಮತ ಪಡೆದ ಅಭ್ಯರ್ಥಿಯೇ ಪಕ್ಷದಿಂದ ನಾಮನಿರ್ದೇಶಿತರಾಗುತ್ತಾರೆ.

ಈ ಸಮಾವೇಶಗಳು ಮುಗಿದು, ಅಧ್ಯಕ್ಷೀಯ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳುತ್ತಿದ್ದಂತೆ, ಪ್ರಮುಖ ಚುನಾವಣಾ ಭಾಷಣಗಳು, ನಿಧಿ ಸಂಗ್ರಹಣೆ,  ಚರ್ಚೆ ಹಾಗೂ ಸಂವಾದಗಳಂತಹ ಚುನಾವಣೆಯ ಅಂತಿಮ ಹಂತದ ಚಟುವಟಿಕೆಗಳು ಅನಾವರಣಗೊಳ್ಳುತ್ತವೆ. ಆ ಬಳಿಕ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯ ಸೇರಿದಂತೆ 50 ರಾಜ್ಯಗಳಲ್ಲಿ ಮತದಾನ ನಡೆಯುತ್ತದೆ. ಇದು ಅಪ್ರತ್ಯಕ್ಷ ಚುನಾವಣೆಯಾದ್ದರಿಂದ, ಮತದಾರರು ತಮ್ಮ ಆಯ್ಕೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅಭ್ಯರ್ಥಿಗಳನ್ನು ಬೆಂಬಲಿಸುವ ``ಆಯ್ಕೆದಾರ~~ರಿಗೆ ಮತ ನೀಡಬೇಕು.  ಹೀಗೆ ಚುನಾಯಿತರಾದ ಆಯ್ಕೆದಾರರೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣಾ ಸಮುದಾಯವಾಗಿ (ಉ್ಝಛ್ಚಿಠಿಟ್ಟಚ್ಝ ್ಚಟ್ಝ್ಝಛಿಜಛಿ) ರೂಪುಗೊಳ್ಳುತ್ತಾರೆ. ಈ ಚುನಾವಣಾ ಸಮುದಾಯದಲ್ಲಿ ಒಟ್ಟು 538 ಆಯ್ಕೆದಾರರಿರುತ್ತಾರೆ. ಪ್ರತಿ ಆಯ್ಕೆದಾರನ ಮತದ ಮೌಲ್ಯ ಒಂದೇ ಆಗಿರುತ್ತದೆ. ಅತಿ ಹೆಚ್ಚು ಆಯ್ಕೆದಾರರ ಮತಗಳನ್ನು ಗಳಿಸುವ ಅಭ್ಯರ್ಥಿಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಚುನಾಯಿತರಾಗುತ್ತಾರೆ. ಅಂದರೆ, 270ಕ್ಕೂ ಅಥವಾ ಅದಕ್ಕೂ ಹೆಚ್ಚು ಆಯ್ಕೆದಾರರ ಬೆಂಬಲವನ್ನು ಪಡೆಯುವವರೇ ಮುಂದಿನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು. ಹೀಗಾಗಿ, ಕೆಲವೊಮ್ಮೆ ಅತಿ ಹೆಚ್ಚು ಶೇಕಡಾವಾರು ಜನಮತಗಳನ್ನು ಪಡೆದಿದ್ದರೂ, ಆಯ್ಕೆದಾರರಿಂದ ಬಹುಮತ ಗಿಟ್ಟಿಸದಿದ್ದರೆ ಅಧಿಕಾರದ ಗದ್ದುಗೆಯೇರುವುದು ದೂರದ ಮಾತೇ ಸರಿ.

ಈ ಬಾರಿಯ ಅಧ್ಯಕ್ಷೀಯ ಚುನಾವಣೆಯ ಮತದಾನ ನವೆಂಬರ್ 6, 2012 ನಡೆಯುತ್ತದೆ. ಆಯ್ಕೆದಾರರ ಚುನಾವಣಾ ಸಮುದಾಯವು ಇದೇ ಡಿಸೆಂಬರ್ 17ರಂದು ಸಭೆ ಸೇರಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಔಪಚಾರಿಕವಾಗಿ ಆರಿಸಲಿದೆ. ಆಯ್ಕೆಯಾಗುವ ಅಧ್ಯಕ್ಷರು ಜನವರಿ ತಿಂಗಳಲ್ಲಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗಳ ಕುರಿತು ಹೆಚ್ಚಿನ ಸುದ್ದಿ ಹಾಗೂ ಕುತೂಹಲಕಾರಿ ಮಾಹಿತಿಯನ್ನು ಪಡೆಯಲು ತಯಾರಾಗಿರಿ.

3. ಜಯಶ್ರೀ ಕೊಳಗಿ, , ಸಿಅಂಚೆ ಶಿರಳಗಿದ್ದಾಪುರ ತಾಲೂಕು, ಉತ್ತರಕನ್ನಡ ಜಿಲ್ಲೆ.
ಮಹಿಳಾ ಸ್ವಾತಂತ್ರ್ಯ, ಮಹಿಳಾ ಸಬಲೀಕರಣಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡುವ ಅಮೆರಿಕದಲ್ಲಿ ಈ ವರೆಗೂ ಒಬ್ಬ ಮಹಿಳೆಯೂ ರಾಷ್ಟ್ರಪತಿಯಾಗಿ ಏಕೆ ಆಯ್ಕೆಯಾಗಿಲ್ಲ?
ಈವರೆಗೆ ಮಹಿಳೆಯೊಬ್ಬರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗದಿದ್ದರೂ, ಹಲವಾರು ಮಹಿಳಾ ಅಭ್ಯರ್ಥಿಗಳು ಚುನಾವಣಾ ಕಣಕ್ಕಿಳಿದದ್ದುಂಟು. ಸದ್ಯ ವಿದೇಶಾಂಗ ಸಚಿವೆ (ಸೆಕ್ರೆಟರಿ ಆಫ್ ಸ್ಟೇಟ್) ಯಾಗಿರುವ ಹಿಲರಿ ಕ್ಲಿಂಟನ್ ಅವರೂ 2008ರ ಅಧ್ಯಕ್ಷೀಯ ಚುನಾವಣೆಯ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದರು. ಅನೇಕ ಮಹಿಳೆಯರು ಸರ್ಕಾರ ಹಾಗೂ ಖಾಸಗಿ ರಂಗದಲ್ಲಿ ಅತ್ಯಂತ ಪ್ರತಿಷ್ಠಿತ ಸ್ಥಾನಗಳನ್ನು ಪಡೆದಿದ್ದಾರೆ. ಅಮೆರಿಕದ ಹಿಂದಿನ ನಾಲ್ವರು ವಿದೇಶಾಂಗ ಸಚಿವರಲ್ಲಿ ಮೂವರು ಮಹಿಳೆಯರೇ. ಈಗ ಅತ್ಯಂತ ಪ್ರಮುಖ ಖಾತೆಯಾದ ಹೊಂ ಲ್ಯಾಂಡ್ ಸೆಕ್ಯೂರಿಟಿ ಸಚಿವೆ ಜಾನೆಟ್ ನೆಪಾಲಿಟಾನೋ ಅವರು ಈ ಹಿಂದೆ ಆರಿಝೋನಾ ರಾಜ್ಯಪಾಲರಾಗಿದ್ದರು. ಅಮೆರಿಕದ ಫೆಡರಲ್ ಸರ್ಕಾರದಲ್ಲಿ ಪ್ರಮುಖ ಸ್ಥಾನ ಹೊಂದಿದ ಇತರರರೆಂದರೆ, ಕಾರ್ಮಿಕ ಸಚಿವೆ ಹಿಲ್ಡಾ ಸೋಲಿಸ್, ಆರೋಗ್ಯ ಹಾಗೂ ಮಾನವ ಸೇವೆಗಳ ಸಚಿವೆ ಕ್ಯಾಥ್ಲೀನ್ ಸೆಬಿಲಿಸ್ ಹಾಗೂ ವಿದೇಶಾಂಗ ಸಚಿವಾಲಯದಲ್ಲಿ ಕಾನ್ಸುಲರ್ ವಿಭಾಗದ ಸಹಾಯಕ ಸಚಿವರಾಗಿರುವ ಜಾನಿಸ್ ಜಾಕೋಬ್ಸ್.

ಮಾರ್ಚ್ ತಿಂಗಳನ್ನು ಮಹಿಳಾ ಇತಿಹಾಸ ಮಾಸ ಎಂದು ಆಚರಿಸಲಾಗುತ್ತದೆ. ಭಾರತ ಹಾಗೂ ಅಮೇರಿಕಾ ದೇಶಗಳ ಮಹಿಳೆಯರ ಸಾಧನೆಗಳನ್ನು ಸ್ಮರಿಸಿ, ಸಾಗುವ ದಾರಿಯನ್ನು ಗುರುತಿಸಲು ಚೆನ್ನೈನಲ್ಲಿರುವ ಅಮೇರಿಕನ್ ದೂತಾವಾಸ ಹಲವಾರು ದುಂಡು ಮೇಜಿನ ಸಭೆಗಳನ್ನು ಆಯೋಚಿಸಿತ್ತು. ಈ ಕುರಿತ ಹೆಚ್ಚಿನ ಮಾಹಿತಿಯನ್ನು ನಮ್ಮ ವೆಬ್ ಸೈಟಿನಲ್ಲಿ ಪಡೆಯಬಹುದು: http://chennai.usconsulate.gov.

4. ದಿವ್ಯಶ್ರೀ 
ನನ್ನ ಸಹೋದರಿ ಇದೇ ಜನವರಿ ತಿಂಗಳಲ್ಲಿ ಅಮೆರಿಕದಲ್ಲಿರುವ ಭಾರತೀಯನೊಬ್ಬನನ್ನು ಭಾರತದಲ್ಲಿ ವಿವಾಹವಾದಳು. ಆತ ಗ್ರೀನ್ ಕಾರ್ಡ್ ಹೊಂದಿದ್ದಾನೆ. ಆತ ಗ್ರೀನ್ ಕಾರ್ಡನ್ನು ಕಳೆದ ಡಿಸೆಂಬರಿನಲ್ಲಿ ಪಡೆದಿದ್ದಾನೆ. ವಿವಾಹವಾದ ಬಳಿಕ, ನನ್ನ ಸಹೋದರಿಯ ಗ್ರೀನ್ ಕಾರ್ಡಿಗೂ ಅರ್ಜಿ ಸಲ್ಲಿಸಿದ್ದಾನೆ. ನನ್ನ ಸಹೋದರಿಯೂ ವಿಶೇಷ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತಿರುವುದರಿಂದ, ಆಕೆಯೂ ತನ್ನ L-1 ವೀಸಾದ ಮೇಲೆ ಅಮೆರಿಕಕ್ಕೆ ತೆರಳಲಿದ್ದಾಳೆ. ಅಮೆರಿಕಕ್ಕೆ ಹೋದ ಮೇಲೆ ನನ್ನ ಸಹೋದರಿ ತನ್ನ H1B ಅರ್ಜಿ ಸಲ್ಲಿಸಬಹುದೇ? ಈ ಅವಧಿಯಲ್ಲಿ H1B ವೀಸಾದ ಮೇಲೆ ಕೆಲಸ ಮಾಡುವುದನ್ನು ಮುಂದುವರಿಸಬಹುದೇ? ಗ್ರೀನ್ ಕಾರ್ಡ್ ಪಡೆಯಲು ಎಷ್ಟು ಕಾಲವಾಗಬಹುದು?

ನಿಮ್ಮ ಪ್ರಶ್ನೆಯಿಂದ ನಾವು ತಿಳಿದುಕೊಂಡಿರುವುದರೆಂದರೆ, ನಿಮ್ಮ ಸಹೋದರಿಯು ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಹೊಂದಿದವರನ್ನು ಮದುವೆಯಾಗಿದ್ದಾರೆ ಹಾಗೂ ಈಗ L-1 ವೀಸಾದ ಮೇಲೆ ಕೆಲಸ ಮಾಡಲು ಅಲ್ಲಿಗೆ ಹೋಗುತ್ತಿದ್ದಾರೆ. ಶಾಶ್ವತ ನಿವಾಸಿ ಸ್ಥಾನ ಪಡೆಯುವವರೆಗೂ ತಮ್ಮ ಸಹೋದರಿ L-1 ವೀಸಾದ ಮೇಲೆ ಕೆಲಸ ಮಾಡಬಹುದು. ನಿಮ್ಮ ಸಹೋದರಿ ತಮ್ಮ ವೀಸಾ ಸ್ಥಾನಮಾನವನ್ನು L-1 ನಿಂದ H1B ಬದಲಿಸಬೇಕೆಂದರೆ, ಅವರು ಅಮೆರಿಕದ ಪೌರತ್ವ ಹಾಗೂ ವಲಸೆ ಸೇವೆಗಳ (USCIS) ಇಲಾಖೆಯನ್ನು ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗಾಗಿ ಈ ವೆಬ್ ಸೈಟಿಗೆ ಭೇಟಿ ಮಾಡಿ  — www.uscis.gov.  ಗ್ರೀನ್ ಕಾರ್ಡ್ ಪಡೆಯುವ ಕಾಲಾವಧಿ ಪ್ರಕರಣದಿಂದ ಪ್ರಕರಣಕ್ಕೆ ಬದಲಾಗುತ್ತದೆ. ತಮ್ಮ ಗ್ರೀನ್ ಕಾರ್ಡ್ ಅರ್ಜಿಯ ಸ್ಥಿತಿಯನ್ನು ನಿಮ್ಮ ಸಹೋದರಿ (USCIS) ವೆಬ್ ಸೈಟಿನಲ್ಲಿ ಪರಿಶೀಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT