ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ದಯೆಯಿದ್ದರೆ ಮತ್ತೆ ಭೇಟಿಯಾಗೋಣ

ಸೇನಾನಿಯ ಸ್ವಗತ
Last Updated 16 ಅಕ್ಟೋಬರ್ 2018, 19:46 IST
ಅಕ್ಷರ ಗಾತ್ರ

ತಮ್ಮ ಗೆಲುವಿನ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನಿಗಳಿಗೆ ಸಿಖ್ ಟ್ರೂಪ್‌ನ ಯುದ್ಧ ಘೋಷ ಶಾಕ್ ನೀಡಿತು. ಕೂಡಲೇ ಎಚ್ಚೆತ್ತುಕೊಂಡರು. ಯಾವುದೇ ಯೋಧನ ಬದುಕಿನಲ್ಲಿ ಹಗಲು ಹೊತ್ತಿನಲ್ಲಿ ಶತ್ರು ಸೈನಿಕರೆದುರು ಹೋರಾಡುವುದು ಅತ್ಯಂತ ಅಪರೂಪದ ಕ್ಷಣ. ಇಲ್ಲಿ ಹಾಗೇ ಆಯ್ತು. ಪಾಕ್ ಮತ್ತು ನಮ್ಮ ಯೋಧರು ಕಣ್ಣಿಗೆ ಕಾಣುವಂತೇ ಒಬ್ಬರ ವಿರುದ್ಧ ಒಬ್ಬರು ಮುಗಿ ಬಿದ್ದರು. ನಮ್ಮ ಕಣ್ಣೆದುರೇ ಶತ್ರುವನ್ನು ಕೊಲ್ಲುವುದು ನಮ್ಮ ಗುರಿಯಾಗಿರುತ್ತದೆ. ಹಾಗೇ ಆಯ್ತು. ಭೀಕರ ಯುದ್ಧ ಸನ್ನಿವೇಶ ಅಲ್ಲಿ ಸೃಷ್ಟಿಯಾಗಿತ್ತು. ಪಾಕ್‍ನ ಅನೇಕ ಯೋಧರು ಹತರಾದರು. ನಮ್ಮಲ್ಲೂ ಕೆಲ ಯೋಧರು ಹುತಾತ್ಮರಾದರು. ಹಲವರಿಗೆ ಗಾಯವೂ ಆಯ್ತು. ಪಾಕ್ ಶರಣಾಗತಿಗೆ ಹತ್ತಿರವಾಗಿತ್ತು. ಆಗ ಶತ್ರು ಸೈನಿಕರು, ಎಲ್ಲವನ್ನೂ ಬಿಟ್ಟು ಮತ್ತೆ ಫತೇಪುರ್‍ನ ಸುರಕ್ಷಿತ ಪ್ರದೇಶಕ್ಕೆ ಓಡಿ ಹೋದರು.

ನಾವು ವೇರಾ ಹಳ್ಳಿಯ ಸಮೀಪ ತಲುಪಿದೆವು. ಇದು ನನ್ನ ಬದುಕಿನಲ್ಲಿ ಯುದ್ಧದ ಮೊದಲ ಅನುಭವ. ನನ್ನ ಹಳೆಯ ಕಮಾಂಡೋ ಸುರ್ಜಿತ್ ಸಿಂಘ್‍ನ್ನು ನೋಡಿದೆ. ಆತ ನಮ್ಮ ಹುತಾತ್ಮ ಯೋಧರನ್ನು ಗುರುತಿಸುತ್ತ, ಗಾಯಾಳುಗಳಿಗೆ ಸಹಾಯ ಮಾಡುತ್ತಿದ್ದರು. ಅವರಲ್ಲಿ ‘ಏನೋ ಸರಿ ಇಲ್ಲ’ ಎಂದು ನನಗೆ ಅನಿಸುತ್ತಿತ್ತು. ಹೌದು.ಅವರ ಒಂದು ಕೈಯಲ್ಲಿ ಮೂರು ಬೆರಳುಗಳು ತುಂಡಾಗಿದ್ದವು. ಒಂದು ಬೆರಳು ನೇತಾಡುತ್ತಿತ್ತು. ಇದೇನಾಗಿದೆ ನಿಮಗೆ ಸರ್‌ ಎಂದಾಗ ಅವರು ನೀಡಿದ ಉತ್ತರ,‘ಏನೂ ಇಲ್ಲ ರೈ, ಒಂದು ಸಣ್ಣ ಗಾಯ ಅಷ್ಟೇ.’ ಇದಲ್ಲವೇ ತ್ಯಾಗವೆಂದರೆ.

ಈ ಗಾಯ ಹೇಗಾಯ್ತು ಎಂದು ಕೇಳಿದರೂ ಅಚ್ಚರಿ ಆದೀತು. ಎದರು ಬದುರು ಯುದ್ಧ ಮಾಡುತ್ತಿದ್ದ ಪಾಕ್ ಸೈನ್ಯದ ಬೆಂಕಿಯುಗುಳುತ್ತಿದ್ದ ಒಂದು ಮೆಷಿನ್ ಗನ್‍ಗೆ ನಳಿಕೆಗೆ ಸುರ್ಜಿತ್ ಸಿಂಗ್ ತಮ್ಮ ಬಲ ಕೈ ಅಡ್ಡ ಹಿಡಿದಿದ್ದರು. ಅಷ್ಟೇ ಅಲ್ಲ ಶತ್ರು ಸೈನಿಕನನ್ನು ತಮ್ಮ ಒದ್ದು, ಹೊಡೆದುರುಳಿಸಿದ್ದರು. ಇತ್ತ ಕೈ ಸುಟ್ಟು, ರಕ್ತದ ಹರಿವೂ ನಿಂತಿತ್ತು. ಮೂರು ಬೆರಳು ಹೋಗಿ, ಒಂದು ಬೆರಳು ನೇತಾಡುತ್ತಿದ್ದರೂ ಅವರಿಗೆ ವೈದ್ಯಕೀಯ ಶುಶ್ರೂಷೆಯ ಚಿಂತೆ ಇರಲಿಲ್ಲ.ಇದನ್ನೆಲ್ಲ ನೆನೆಸಿಕೊಳ್ಳುವಾಗ ಈಗಲೂ ನನ್ನ ಕಣ್ಣುಗಳು ಹನಿಗೂಡುತ್ತಿವೆ-ಅಬ್ಬಾ. ಅದೆಂತ ಶೌರ್ಯ. ‌ಲೆಫ್ಟಿನೆಂಟ್‌ ಜೆ. ಜೆ. ಸಿಂಗ್ ಕೂಡಾ ಗಾಯಗೊಂಡಿದ್ದರು. ಅವರ ಒಂದು ಕೈ ತುಂಡಾಗಿ ನೇತಾಡುತ್ತಿತ್ತು. ನನ್ನೊಂದಿಗೇ ಇದ್ದ ಕಮಾಂಡೋ ಆಗಿದ್ದ ಫ್ಲಟೂನ್ ಹವಾಲ್ದಾರ್ ಗುರುದೇವ್ ಸಿಂಗ್ ಹುತಾತ್ಮನಾಗಿದ್ದ.

ಮತ್ತೊಂದು ನೆನಪು ನುಗ್ಗಿ ಬರುತ್ತಿದೆ. ಒಬ್ಬ ಸೈನಿಕನ ದೇಹ ಅಲ್ಲಿ ಬಿದ್ದಿತ್ತು. ಸ್ವಯಂ ಚಾಲಿತ ಮೆಶಿನ್ ಗನ್ ಒಂದು ಸ್ಪೋಟಿಸಿ, ಅವನ ಹೊಟ್ಟೆಯ ಒಳಭಾಗ ಮತ್ತು ಕರುಳು ಹೊಟ್ಟೆಯಿಂದ ಹೊರ ಬಂದಿತ್ತು. ನಾನೇ ನನ್ನ ಕೈಯಾರೆ ಬೇರೆ ಕೆಲವರ ಜೊತೆಗೆ ಆ ಕರುಳುಗಳನ್ನು ಹೊಟ್ಟೆಯೊಳಗೆ ತುರುಕಿದೆ.ಮಧ್ಯಾಹ್ನ ಹನ್ನೆರಡು ಘಂಟೆ. ಅವನು ಸತ್ತಿದ್ದ ಎಂದೇ ನಾನು ಅಂದುಕೊಂಡಿದ್ದೆ. ಒಳ ತುರುಕಿದ ಕರುಳಿನಲ್ಲಿ ಮಣ್ಣು, ಕಲ್ಲುಗಳೂ ಮೆತ್ತಿಕೊಂಡಿದ್ದುವು. ಅವನ ತಲೆಗೆ ಕಟ್ಟಿದ್ದ ಸಿಖ್ ಟರ್ಬನ್‍ನ್ನು ಅವ ನ ಹೊಟ್ಟೆಗೆ ಬಿಗಿಯಾಗಿ ಕಟ್ಟಿದೆವು. ಈ ಸಿಖ್ ಟರ್ಬನ್ ಬಹು ಮುಖ್ಯ.ಏಕೆಂದರೆ ಇದೇ ಸಿಖ್ ಟರ್ಬನ್ ಮುಂದೆ ಹದಿನಾರು ವರ್ಷಗಳ ನಂತರ ನನ್ನನ್ನೂ ಶ್ರೀಲಂಕಾ ಯುದ್ಧದಲ್ಲಿ ಉಳಿಸಿದ ಕತೆ ನಿಮಗೆ ಹೇಳಬೇಕು. ಅದಿರಲಿ, ನಾನು ಸತ್ತಿದ್ದ ಎಂದು ಕೊಂಡಿದ್ದ ಈ ಯೋಧ ಬದುಕಿದ್ದ. ಪವಾಡ ಸದೃಶವಾಗಿ. ಕದನ ವಿರಾಮವಾದ ಕೆಲವು ದಿನಗಳಲ್ಲಿಆತ ಹುಷಾರಾಗಿ ಮತ್ತೆ ಸೈನ್ಯಕ್ಕೆ ಮರಳಿದ್ದ.

ಕೇವಲ 21ತಿಂಗಳ ಯುವ ಆಫೀಸರ್ ಆಗಿದ್ದ ನಾನು ಇದೆಲ್ಲವನ್ನೂ ಕಣ್ಣೆದುರೇ ನೋಡುತ್ತ ಎಲ್ಲವನ್ನೂ ಅರಗಿಸಿಕೊಳ್ಳಲು ಹೆಣಗಾಡುತ್ತಿದ್ದೆ. ಇಷ್ಟು ಸಮೀಪದ ಯುದ್ಧ ನೋಡುವ ಅವಕಾಶ ಎಲ್ಲರಿಗೂ ಸಿಕ್ಕುವುದಿಲ್ಲ. ಕೇವಲ ಹತ್ತು ತಿಂಗಳ ಹಿಂದೆ ನಾನೇ ತರಬೇತಿ ಮಾಡಿದ ಯುವ ಆಫೀಸರ್ ಗಳು, ಈ ಕದನಕ್ಕೆ ಸಾಕ್ಷಿಯಾಗಿದ್ದರು. ಸರದಾರರ ಸಿಂಹ ಸ್ವರೂಪದ ದರ್ಶನ ಇಲ್ಲಿ ಸಾಬೀತಾಗಿತ್ತು. ದೇಹದ ತುಂಬಾ ತುಂಬಿದ್ದ ಗಾಯ, ಧೂಳು, ಬೆವರು ಎಲ್ಲವನ್ನೂ ಮೀರಿದ ಯುದ್ಧ ಗೆದ್ದ ಉತ್ಸಾಹ, ಎಂತ ಹೆದರಿಕೆ ಪುಕ್ಕಲನಿಗೂ ಒಳಗಿನಿಂದ ಶೌರ್ಯ ಪುಟಿದೇಳುವಂತೆ ಮಾಡುವ ಸನ್ನಿವೇಶ ಅಲ್ಲಿತ್ತು.

ಈ ಹಂತದಲ್ಲಿ ನನಗನಿಸಿದ್ದು, ಇಂತಹ ಒಂದು ಭೀಕರ ಯುದ್ಧವನ್ನು ನಾನೇ ಮುಂದೆ ನಿಂತು ಹೋರಾಡಲಾಗದ ಖೇದ ನನ್ನನ್ನಾವರಿಸಿತು. ಹಾಗಿದ್ದರೆ ಬಹುಶ ನನ್ನಲ್ಲೇ ತರಬೇತಿ ಪಡೆದಿದ್ದ ಕಮಾಂಡರ್ ಉಳಿಯುತ್ತಿದ್ದನೇನೋ ಅನಿಸಿತು. ಆದರೆ ಮುಂದಿನ ಕೇವಲ 54ಘಂಟೆಗಳಲ್ಲಿ ನನಗೂ ಈ ಮುಂಚೂಣಿಯಲ್ಲಿ ಹೋರಾಡುವ ಅವಕಾಶ ಒದಗಿತ್ತು-ಇದು ನನ್ನ ಸೈನಿಕ ಜೀವನದ ಹೆಮ್ಮೆ.

ಹೀಗೆ ಸಾಹಸದ ದಿನವೊಂದು ಮುಗಿದಿತ್ತು. ಆದರೆ ಈ ಸಂದರ್ಭವನ್ನು ನಮ್ಮ ಉಳಿದ ಕಮಾಂಡೋಗಳಿಗೆ ತೋರಿಸುವ ಅವಕಾಶ ಇರಲಿಲ್ಲ. ಅಷ್ಟರಲ್ಲೇ ಅತ್ಯಂತ ತೀಕ್ಷ್ಣವಾದ ಶೆಲ್ಲಿಂಗ್ ದಾಳಿ ಮತ್ತೆ ಆರಂಭವಾಗಿತ್ತು.

ನಮಗೆ ಸರಿಯಾದ ಮಾಹಿತಿ ಇಲ್ಲದ ಒಂದು ಕಾರಣಕ್ಕೆ ನಾವೂ ಬಹಳ ಬೆಲೆ ತೆರಬೇಕಾಗಿ ಬಂತು. ನಮ್ಮ ಈ ಎಲ್ಲಾ ಸಾಹಸಗಳ ನಡುವೆಯೂ ಶತ್ರು ಸೈನ್ಯ ತಮ್ಮ ಮಾಹಿತಿಯನ್ನು ನಮಗೆ ಸಿಗದ ಹಾಗೆ ಮಾಡುವಲ್ಲಿ ಸಫಲರಾಗಿದ್ದಂತೂ ಸತ್ಯ. ಅಂತೂ ನಮ್ಮದು ಒಂದು ರೀತಿಯ ಆತ್ಮಹತ್ಯಾ ದಾಳಿಯಾಗಿ ದಾಖಲಾಯ್ತು.

ಫತೇಪುರ್ ನ್ನು ಮರಳಿ ವಶ ಪಡಿಸಿಕೊಳ್ಳುವ ನಮ್ಮ ಯೋಜನೆ ಸಿದ್ಧವಾಗಿತ್ತು. ಮೂರು ಹಂತದಲ್ಲಿ ನಮ್ಮ ದಾಳಿಯ ಯೋಜನೆ ತಯಾರಾಯ್ತು. ನಮ್ಮ ಡಿ ಡೇ(ಸೈನ್ಯದ ಭಾಷೆಯಲ್ಲಿ ಇದು ಯೋಜನೆ ಅನುಷ್ಠಾನಗೊಳಿಸಿ, ಮುಗಿಸಲು ಇರುವ ಕೊನೆಯ ದಿನ) ಸಿದ್ಧವಾಗಿತ್ತು-ಅದು ಡಿಸೆಂಬರ್ 11, 1971. ಇನ್ನೊಂದು ಹೆಚ್ ಅವರ್(ಇಷ್ಟು ಘಂಟೆಗೆ ಇಂತಹ ಗಡಿಯನ್ನು ದಾಟಬೇಕು) ಆ ದಿನ ರಾತ್ರಿ 11.00ಗಂಟೆ. ಮರುದಿನ ಬೆಳಿಗ್ಗೆ ಸೂರ್ಯೋದಯಕ್ಕೆ ಮುನ್ನ ಫತೇಪುರ್ ನಮ್ಮದಾಗಲೇ ಬೇಕು-ಇದು ನಮ್ಮ ಉದ್ದೇಶ.

ಮೊದಲ ಹಂತದಲ್ಲಿ ಬ್ರೇವೋ ಮತ್ತು ಚಾರ್ಲಿ ಕಂಪೆನಿಗಳು ಹೊರಡಬೇಕು. ಅವರು ಒಂದು ಹಂತದ ತನಕ ಎರಡು ದಿಕ್ಕುಗಳಲ್ಲಿ ಮುಂದುವರಿಯುತ್ತಾರೆ. ಒಬ್ಬರ ಹಿಂದೆ ಒಬ್ಬರಂತೆ ಸಾಗುತ್ತಾ, ‘ಧೂಸ್ಸೀ ಬಂದ್’ ಕಡೆಗೆ ಸಾಗ ಬೇಕು. ಇದು ಒಬ್ಬೊಬ್ಬ ಯೋಧನೂ ತನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಅವಶ್ಯಕತೆ ಇರುವ ಮಾರ್ಗ!

ಚಾರ್ಲಿ ಕಂಪೆನಿ, ಪಾಕ್ ಫತೇಪುರ್ ಕಡೆ ಎಡಗಡೆಗೆ ಸಾಗುತ್ತಾ ಪಾಕ್ ಆಕ್ರಮಿತ ಪ್ರದೇಶ ವಶ ಪಡಿಸಿಕೊಳ್ಳ ಬೇಕಾಗಿದ್ದರೆ, ಬ್ರೇವೋ ಕಂಪೆನಿ ಬಲಬದಿಯಿಂದ ಸಾಗುತ್ತಾ ಪಾಕ್ ಫತೇಪುರ್ ವಶ ಪಡಿಸಿಕೊಳ್ಳಬೇಕಾಗಿತ್ತು. ಇದು ಕಠಿಣ ಸವಾಲು.

ಈ ಎರಡೂ ದಾಳಿ ಸಫಲವಾದ ನಂತರ, ಆಲ್ಫಾ ಮತ್ತು ಡೆಲ್ಟಾ ಕಂಪೆನಿಗಳ ಕಾರ್ಯಾಚರಣೆ ಆರಂಭವಾಗಬೇಕು. ಅವುಗಳು ಬ್ರೇವೋ ಮತ್ತು ಚಾರ್ಲಿ ಕಂಪೆನಿಗಳು ವಶ ಪಡಿಸಿಕೊಂಡ ಪ್ರದೇಶದಿಂದ ಮುಂದುವರಿದು, ಒಟ್ಟೂ ಇಡೀ ಪ್ರದೇಶವನ್ನು ವಶ ಪಡಿಸಿಕೊಳ್ಳಬೇಕು. ಇದನ್ನು ಆಲ್ಫಾ ಮತ್ತು ಡೆಲ್ಟಾ ಕಂಪೆನಿಗಳು ಮಾಡುವ ಮೂಲಕ ಒಟ್ಟೂ ನಾಲ್ಕು ಹಂತದ ದಾಳಿ ಸಂಘಟಿತವಾಗಬೇಕು.

ಈ ಹಂತದಲ್ಲಿ ನಮ್ಮ ಆರಂಭದ ಸ್ಥಳವಾದ ವೇರಾವನ್ನೂ ಕಾಯ್ದುಕೊಳ್ಳುವುದು ಮತ್ತೊಂದು ಸವಾಲು. ಅಂತೂ ಯೋಜನೆ ತಯಾರಾಯ್ತು. ಎಲ್ಲರಿಗೂ ಎಲ್ಲಾ ವಿಷಯಗಳನ್ನೂ ವಿವರಿಸಲಾಯ್ತು. ಜವಾಬ್ದಾರಿ ಹಂಚಲಾಯ್ತು. 11ನೇ ತಾರೀಕಿಗೆ ಸೂರ್ಯ ಮುಳುಗುವ ಹೊತ್ತಿನಲ್ಲಿ ಎಲ್ಲಾ ಬೆಟಾಲಿಯನ್ ಗಳೂ ಅಸೆಂಬ್ಲಿ ಏರಿಯಾದಲ್ಲಿ ಸೇರಿದೆವು. ಈ ಸ್ಥಳ ಸುಮಾರು 4-5 ಕಿಲೋಮೀಟರ್ ದೂರದಲ್ಲಿರುತ್ತದೆ. ಎಲ್ಲರೂ ಅಲ್ಲಿ ಜಮೆಯಾಗಿ, ಯಾವುದೇ ಶಬ್ದವೂ ಇಲ್ಲದೇ, ಕತ್ತಲೆಯಲ್ಲಿ, ಮೌನವಾಗಿ ಸೇರಲಾಯ್ತು. ಸಹಾಯ ಮಾಡಲಿರುವ ಕಂಪೆನಿಯ ಎಲ್ಲರೂ ಅಲ್ಲಿ ಸೇರಿ, ಅಂತಿಮ ವಿವರಣೆ ನೀಡಲಾಯ್ತು. ಸಂದೇಶ ವಾಹಕಗಳನ್ನೂ ಪರೀಕ್ಷಿಸಲಾಯ್ತು. ಯಾವುದೇ ಮಾತಿಲ್ಲದೇ, ಕೇವಲ ಸಂಕೇತಗಳೇ ಇಲ್ಲಿ ಸಂವಾಹಕವಾಗಿದ್ದುವು. ಶಸ್ತ್ರಾಸ್ತ್ರಗಳನ್ನೂ ಪರೀಕ್ಷಿಸಲಾಯಿತು. ಗ್ರೆನೇಡ್ಸ್ ಗಳನ್ನು ಅಣಿಗೊಳಿಸಲಾಯ್ತು. ಪ್ರತಿಯೊಬ್ಬರ ವಾಚ್ ಗಳನ್ನೂ ಒಂದೇ ಸಮಯಕ್ಕೆ ಬರುವಂತೆ ಸೆಟ್ ಮಾಡಲಾಯ್ತು. 11ಗಂಟೆಗೆ ನಮ್ಮ ಪಯಣ ಆರಂಭವಾಗಬೇಕು. ಒಂದು ನಿಮಿಷವೂ ಹಿಂದೆ ಮುಂದಾಗದಂತೆ ನೋಡಿಕೊಳ್ಳಬೇಕು. ಅಂತೂ ಈ ಸ್ಥಳ ಬಿಡುವ ಮೊದಲು ಎಲ್ಲರಿಗೂ ಸರಳ ಊಟ ನೀಡಲಾಗುತ್ತದೆ.

ಇದು ಕೆಲವರಿಗೆ ಕೊನೆಯ ಊಟವೂ ಆಗಿರುತ್ತದೆ. ಅಂದಿನ ನಮ್ಮ ಊಟ ಹೆಸರು ಬೇಳೆಯ ದಾಲ್ ಮತ್ತು ಚಪಾತಿ! ಅಲ್ಲಿ ನಾವು ಮೂವರು ಅತ್ಯಂತ ಆಪ್ತ ಸ್ನೇಹಿತರಿದ್ದೆವು. ಒಬ್ಬ ನನಗಿಂತ ಆರು ತಿಂಗಳೂ ಚಿಕ್ಕವನಾಗಿದ್ದರೆ ಮತ್ತೊಬ್ಬ ಆರು ತಿಂಗಳು ದೊಡ್ಡವ. ಲೆಫ್ಟಿನೆಂಟ್‌ ಕರಮ್ ಸಿಂಗ್, ಹಿಮಾಚಲ ಪ್ರದೇಶದವರು ನನಗಿಂತ ಆರು ತಿಂಗಳು ದೊಡ್ಡವರು. ಇನ್ನೊಬ್ಬರು ಪಂಜಾಬ್‍ನ ಲೆಫ್ಟಿನೆಂಟ್‌ ಎಚ್ ಪಿ ನಯ್ಯರ್, ನನಗಿಂತ ಆರು ತಿಂಗಳು ಚಿಕ್ಕವರು- ಹೋಶಿಯಾರ್ ಪುರದವರು. ನಾವು ಮೂವರೂ ಜಲಂಧರ್ ನಲ್ಲಿ ಒಂದೇ ರೂಂನಲ್ಲಿದ್ದೆವು. ಮೂವರೂ ಕತ್ತಲಲ್ಲಿ ಒಂದು ಮರದಡಿ ಕುಳಿತೆವು. ಒಂದೇ ತಟ್ಟೆಯಲ್ಲಿ ದಾಲ್, ಚಪಾತಿ ಹಾಕಿಕೊಂಡೆವು. ಮುಂಬರುವ ಯುದ್ಧದ ಬಗ್ಗೆ ಯೋಚಿಸದೇ, ಮನಸಾರೆ ತಮಾಶೆ ಮಾಡಿಕೊಂಡೆವು, ಜೋಕ್ ಹೇಳಿಕೊಂಡೆವು. ಗಹ ಗಹಿಸಿ ನಕ್ಕೆವು. ಕಣ್ಣೀರು ಬರುವಷ್ಟೂ ನಗು-ನಗು-ನಗು. ಮೇಲೆ ಆಕಾಶ.

ದೇವರ ದಯೆಯಿದ್ದರೆ ಮರುದಿನ...

ಯಾರೂ ಸಾವು ಬದುಕಿನ ಬಗ್ಗೆ , ಕುಟಂಬದ ಬಗ್ಗೆ ಮಾತಾಡಲಿಲ್ಲ. ನಾಲ್ಕೇ ಕಿಲೋಮೀಟರ್ ದೂರದಲ್ಲಿ ನಾವು ನಡೆಯುತ್ತಿದ್ದರೆ, ಯಾರ ಬದುಕೂ ಅಲ್ಲಿ ಖಚಿತವಿರಲಿಲ್ಲ. ಅದು ನಮಗೆ ವಿಷಯವೇ ಅಲ್ಲವೆಂಬಷ್ಟೂ ನಕ್ಕು ನಕ್ಕು ಹಗುರಾದೆವು. ಕೊನೆಯಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಂಡೆವು. ದೇವರ ದಯೆಯಿದ್ದರೆ ಮರುದಿನ ಬೆಳಿಗ್ಗೆ ಒಬ್ಬರನ್ನೊಬ್ಬರು ನೋಡೋಣ ಎಂದು ಸುಮಾರು ಎಂಟು ಗಂಟೆಯ ಹೊತ್ತಿಗೆ, ಪರಸ್ಪರ ಬೀಳ್ಕೊಟ್ಟು ನಮ್ಮ ಭಾರತಮಾತೆಯ ರಕ್ಷಣೆಯ ಹಾದಿ ಹಿಡಿದೆವು. ಸುಮಾರು ಮೂರು ನಾಲ್ಕು ಕಿಲೋಮೀಟರ್ ಸಾಗುವಾಗ ನಮ್ಮ ದಾಳಿಯ ಆರಂಭ ತಾಣವನ್ನು ಸರಿಯಾಗಿ 11 ಗಂಟೆಗೆ ತಲುಪಬೇಕು. ಎಲ್ಲವೂ ಇದೇ ಲೆಕ್ಕಾಚಾರದಲ್ಲಿ ಸೆಕೆಂಡುಗಳ ಲೆಕ್ಕದಲ್ಲಿ ಯೋಜನೆ ಸಾಗಿತ್ತು.

ಮುಂದಿನ ವಾರ: ಒಟ್ಟಿಗೇ ಉಂಡವರ ಸಾವು ಕಣ್ಣಮುಂದೆ

ನಿರೂಪಣೆ: ಅರೆಹೊಳೆ ಸದಾಶಿವರಾವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT