‘ಎಲ್ಲವೂ ಸರಿಯಾಗಿದೆ’ ಎಂಬ ಭ್ರಮೆ

7

‘ಎಲ್ಲವೂ ಸರಿಯಾಗಿದೆ’ ಎಂಬ ಭ್ರಮೆ

ಪ್ರಕಾಶ್ ರೈ
Published:
Updated:
Deccan Herald

ಕೇರಳದಲ್ಲಿ ಕಾರ್ಮೋಡ ಕಳಚಿ ಬಿತ್ತು. ಧಾರಾಕಾರ ಮಳೆಯಾಯಿತು. ಪಂಪಾನದಿ ತುಂಬಿ ಹರಿಯಿತು. ನಾವು ಪ್ರಕೃತಿಯನ್ನು ನಾಶ ಮಾಡಿಲ್ಲ. ಮತ್ತೆ ಮಳೆಯಾಗುತ್ತಿದೆ; ಎಲ್ಲವೂ ಸರಿಯಾಗಿದೆ ಎಂದು ನಾವು ಅಂದುಕೊಂಡೆವು. ಅದಾಗಿ ಕೆಲವೇ ದಿನಗಳ ನಂತರ ನೋಡಿದರೆ ಗಾಬರಿ ಬೀಳುವಂತಹ ಸಂಗತಿಗಳು ನಡೆಯುತ್ತಿವೆ. ನೀರಿನ ಮಟ್ಟ ಇದ್ದಕ್ಕಿದ್ದಂತೆ ಕಡಿಮೆಯಾಗುತ್ತಿದೆ. ಬಾವಿಗಳು ಒಣಗುತ್ತಿವೆ. ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಇನ್ನೊಂದೆರಡೊ ಮೂರೊ ತಿಂಗಳಿಗೆ ಭೀಕರ ಬರ ಬರಬಹುದೆಂಬ ಭೀತಿ ಕಾಡುವುದಕ್ಕೆ ಶುರುವಾಗಿದೆ.

ಅತಿವೃಷ್ಟಿಯ ಬೆನ್ನಿಗೆ ಅನಾವೃಷ್ಟಿಯೂ ಬಂದೀತು ಎಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಇದು ಬರೀ ಊಹೆಯಲ್ಲ. ಬಿಸಿಲು ಏರುತ್ತಿದೆ. ಮರ್ಕ್ಯುರಿ ಮಟ್ಟ ಹೆಚ್ಚುತ್ತಿದೆ. ತುಂಬು ಪ್ರವಾಹದ ದಿನಗಳಲ್ಲಿ ಊರನ್ನೇ ಕೊಚ್ಚಿದ್ದ ಪೆರಿಯಾರ್‌ ನದಿ, ಇದ್ದಕ್ಕಿದ್ದಂತೆ ತನ್ನ ಎಂದಿನ ಮಟ್ಟಕ್ಕಿಂತ ಕೆಳಗೆ ಇಳಿದಿದೆ. ಇಡುಕ್ಕಿಯಿಂದ ಎರ್ಲಾಕುಲಂ ತನಕ ಲಕ್ಷಾಂತರ ಮಂದಿಯ ಪಾಲಿಗೆ ಜೀವನದಿಯಾಗಿದ್ದ ಪೆರಿಯಾರ್‌ ಬಸವಳಿದಿದೆ. ಚಾಲಕ್ಕುಡಿ ನದಿಯ ಪರಿಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ. ನಾವು ‘ಎಲ್ಲವೂ ಸರಿಯಾಗಿದೆ’ ಎಂಬ ಭ್ರಮೆಯಲ್ಲಿದ್ದೇವೆ.

ಕೊಡಗಿನಲ್ಲಿ ಮಳೆ ಬಿತ್ತು. ಬೆಟ್ಟಗಳು ತನ್ನಿಂದ ತಾನೆ ಸರಿದು ಮನೆಗಳ ಮೇಲೆ ಬಂದು ಕೂತವು. ಎಲ್ಲೆಲ್ಲಿ ಮನುಷ್ಯ ಕೈ ಹಾಕಿದ್ದನೋ ಅಲ್ಲೆಲ್ಲಾ ಅನಾಹುತವಾಯಿತು. ಕಣಿವೆಗಳ ಗೆರೆಗಳನ್ನು ತಿದ್ದಿ ತೀಡಿ ಬದಲಾಯಿಸಿದವರು, ಬೆಟ್ಟಗಳ ತಪ್ಪಲನ್ನು ಕೆತ್ತಿದವರು, ದಟ್ಟ ಕಾಡುಗಳ ಕಿಡ್ಡಿಗಳನ್ನು ಮುಟ್ಟಿದವರು ಮುಟ್ಟಿನೋಡಿಕೊಳ್ಳುವಂತಹ ಪೆಟ್ಟನ್ನೇ ಪ್ರಕೃತಿ ಕೊಟ್ಟಿತು. ಕೊಡಗು, ಮಣ್ಣಲ್ಲೂ– ಮಳೆಯಲ್ಲೂ ಮುಳುಗಿತು. ಕುಸಿದು ಬಿದ್ದ ಮನೆಗಳಲ್ಲೋ, ಕೊಚ್ಚಿಹೋದ ಹೊಲ– ಗದ್ದೆಗಳಲ್ಲೋ, ಮುರಿದುಬಿದ್ದ ತೋಟಗಳಲ್ಲೋ ನಾವು ನೋಡಿದೆವು. ಕೊಡಗನ್ನು ಮತ್ತೆ ಕಟ್ಟಬಹುದು ಅಂದುಕೊಂಡೆವು. ಪರಿಹಾರ ಹಣ ಧಾರಾಳವಾಗಿ ಹರಿದುಬಂತು.

ಮನುಷ್ಯನು ಮನುಷ್ಯತ್ವ ಮರೆತಿಲ್ಲ. ಎಲ್ಲವೂ ಸರಿಯಾಗಿದೆ ಎಂದು ನಾವು ಅಂದುಕೊಂಡೆವು. ಆದರೆ, ಕೊಡಗಿಗೆ ನಾವು ಅಂದುಕೊಂಡಿದ್ದಕ್ಕಿಂತ ಘಾಸವಾದದ್ದು, ತೀವ್ರವಾದದ್ದು ಏನೋ ಆಗಿರುವಂತಿದೆ. ಅಲ್ಲಿಯ ನೆಲ ಮತ್ತು ಜಲ ತನ್ನನ್ನು ತಾನು ರೂಪಿಸಿಕೊಳ್ಳಲು ಅದೆಷ್ಟು ಕಾಲ ಬೇಕೋ ಗೊತ್ತಾಗುತ್ತಿಲ್ಲ. ಕಾಫಿ ತೋಟಗಳ ಸ್ಥಿತಿಯ ಬಗ್ಗೆ ಹೇಳುವುದೇ ಬೇಕಿಲ್ಲ. ಅಡಿಕೆ ಮರಕ್ಕೆ ಕೊಳೆರೋಗ ತಗುಲಿದೆ. ಅಡಿಕೆಯ ಗೊನೆ ನಿರೀಕ್ಷಿಸುವುದು ಹಾಗಿರಲಿ, ಆ ಮರಗಳನ್ನು ಉಳಿಸಿಕೊಂಡರೆ ಸಾಕಾಗಿದೆ. ಕೊಡಗಿನಲ್ಲಿ ಇನ್ನೇನು ಬೆಳೆಯಬಹುದು ಎನ್ನುವುದು ಯಾರಿಗೂ ಹೊಳೆಯುತ್ತಿಲ್ಲ. ಎಲ್ಲವೂ ಸರಿಯಾಗಿದೆ ಎಂದು ನಾವು ಅಂದುಕೊಂಡಿದ್ದೇವೆ.

ಬದಲಾಗಿರುವುದು ಪ್ರಕೃತಿಯ ರೂಪುರೇಷೆ. ಮಳೆಯೊಂದು ನೆಪ ಮಾತ್ರ. ಪ್ರಕೃತಿಯಲ್ಲೂ ಅಷ್ಟೇ, ಬದುಕಿನಲ್ಲೂ ಅಷ್ಟೇ ಎಲ್ಲವೂ ನೆಪ ಮಾತ್ರ. ಮಹಾಭಾರತದಲ್ಲಿ ಒಂದು ಕಥೆ ಇದೆ. ಯುದ್ಧ ನಡೆದು ಹೋಗಿದೆ. ಪಾಂಡವರು ಗೆದ್ದಿದ್ದಾರೆ. ಕೌರವರೆಲ್ಲಾ ಸತ್ತು ಬಿದ್ದಿದ್ದಾರೆ. ಪಾಂಡವರ ಐವರು ಮಕ್ಕಳು, ಉಪ ಪಾಂಡವರನ್ನು ಕೂಡ ಅಶ್ವತ್ಥಾಮ ಕೊಂದು ಕೆಡವಿದ್ದಾನೆ. ಆಗ ಸಹದೇವ ಹೇಳುತ್ತಾನೆ. ‘ಅಂತೂ ಧರ್ಮ ಸಂಸ್ಥಾಪನೆಯಾಯಿತು ಕೃಷ್ಣ. ಒಳ್ಳೆಯವರೆಲ್ಲಾ ಗೆದ್ದರು. ಕೆಟ್ಟವರೆಲ್ಲಾ ಸತ್ತರು. ಅಂತೂ ಪರವಾಗಿಲ್ಲ. ಎಲ್ಲವೂ ಸರಿ ಹೋಗುತ್ತದೆ’. ಆ ಮಾತಿನ ವ್ಯಂಗ್ಯ ಕೃಷ್ಣನಿಗೆ ಮಾತ್ರ ಅರ್ಥವಾಗುತ್ತದೆ.

ಯುದ್ಧದಲ್ಲಿ ಭರತ ಖಂಡದ ಗಂಡಸರೆಲ್ಲಾ ಮಡಿದಿದ್ದಾರೆ. ಉಳಿದುಕೊಂಡವವರು ಹೆಂಗಸರು ಮತ್ತು ಹಸುಗೂಸುಗಳು ಮಾತ್ರ. ಒಂದು ತಲೆಮಾರು ನಾಶಗೊಂಡಿದೆ. ಆ ಮಕ್ಕಳು ಯುದ್ಧದ ಪರಿಸ್ಥಿತಿಯಲ್ಲಿಯೇ ತಮ್ಮನ್ನು ರೂಪಿಸಿಕೊಳ್ಳಲಿವೆ. ತಮ್ಮ ತಂದೆಯನ್ನು ಕೊಂದದ್ದು ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಿವೆ. ಅವು ಬೆಳೆದ ನಂತರ ಸೇಡು ತೀರಿಸಿಕೊಳ್ಳಲು ಹವಣಿಸುತ್ತವೆಯೇ ಹೊರತು ಅವುಗಳ ಮನಸ್ಸಿನಲ್ಲಿ ಸುಂದರವಾದ ಕಲ್ಪನೆಗಳು ಮೂಡುವುದಕ್ಕೆ ಸಾಧ್ಯವಿಲ್ಲ.

ಧರ್ಮ ಸಂಸ್ಥಾ‍ಪನೆಗೆಂದು ಕೌರವರು ಮತ್ತು ಪಾಂಡವರು ಹೋರಾಡಿದರು. ನಂತರದ ತಲೆಮಾರು ಸೇಡು ತೀರಿಸಿಕೊಳ್ಳಲು ಹೋರಾಡುತ್ತದೆ. ಸೇಡು ಅವರ ಜೀವನ ಧರ್ಮ ಆಗಲಿದೆ. ನಾವು ಎಲ್ಲವೂ ಸರಿಯಾಗಿದೆ ಎನ್ನುವ ಭ್ರಮೆಯಲ್ಲಿರುತ್ತೇವೆ. ಪ್ರಕೃತಿ ಕೂಡ ಹಾಗೆಯೇ ಸೇಡು ತೀರಿಸಿಕೊಳ್ಳಲು ಕಾಯುತ್ತಿರುವಂತೆ ನನಗೆ ಅನಿಸುತ್ತಿದೆ.

ಈ ವಿಕೋಪಕ್ಕೆ ಕಾರಣ ನಾವೇ ಕಟ್ಟಿರುವ ಅಣೆಕಟ್ಟುಗಳು ಎನ್ನುತ್ತಿದ್ದಾರೆ ವಿಜ್ಞಾನಿಗಳು. ನಾವು ಕಟ್ಟಿಕೊಂಡ ನೀರನ್ನು ಬಿಟ್ಟಾಗ ಅದನ್ನು ಹಿಡಿದುಕೊಳ್ಳಲು ನದಿಯ ಪಾತ್ರಕ್ಕೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಆ ನದಿಯ ಪಾತ್ರಕ್ಕೆ ತಾನು ನದಿ ಎನ್ನುವುದೇ ಮರೆತುಹೋಗಿದೆ. ಅದಕ್ಕೆ ಹರಿದು ಬರುತ್ತಿದ್ದ ಉಪ ನದಿಗಳನ್ನೆಲ್ಲಾ ನಾವು ದಾರಿ ತಪ್ಪಿಸಿದ್ದೇವೆ. ಈಗ ನದಿ ನದಿಯೇ ಅಲ್ಲ. ಎಂತಹ ದೊಡ್ಡ ಪಾಠವನ್ನು ನಮಗೆ ಪ್ರಕೃತಿ ಕಲಿಸಿಕೊಟ್ಟಿದೆ ನೋಡಿ. ಆದರೂ, ಎಲ್ಲವೂ ಸರಿಯಾಗಿದೆ ಎಂದು ನಾವು ಅಂದುಕೊಂಡಿರುತ್ತೇವೆ.

ಮೊನ್ನೆ ಮೆಣಸುಗೆರೆ ಹಾಗೂ ಹೊಯ್ಸಳಕಟ್ಟೆ ಶಾಲೆಗಳಿಗೆ ಹೋಗಿದ್ದೆ. ಕನ್ನಡ ಶಾಲೆಗಳನ್ನು ಪುನರುಜ್ಜೀವನಗೊಳಿಸುವ ಯೋಜನೆ ಹಾಕಿಕೊಂಡಿದ್ದೆ. ಅಲ್ಲಿನ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸರಿಯಾದ ಅನುಕೂಲ ಮಾಡಿಕೊಡಲೆಂದು ಹೋದವನು ಅಲ್ಲಿನ ಜನರೊಂದಿಗೆ ಮಾತನಾಡಿದೆ. ಅಲ್ಲಿ ನನಗೆ ಮೂರು ಮನಸ್ಥಿತಿಗಳ ದರ್ಶನವಾಯಿತು.

ಅಧ್ಯಾಪಕರ ಜೊತೆಗೆ ಮಾತನಾಡಿದಾಗ ಅವರು ಹೇಳಿದರು. ಈ ಹಳ್ಳಿಯ ಜನಕ್ಕೆ ವಿದ್ಯೆಯ ಮಹತ್ವ ಗೊತ್ತಿಲ್ಲ. ಹಬ್ಬ ಬಂದರೆ ಸಾಕು ರಜೆ ಹಾಕಿಸುತ್ತಾರೆ. ಮನೆಯಲ್ಲಿ ಸಂಭ್ರಮ ನಡೆದರೆ ರಜೆ, ತೋಟ– ಗದ್ದೆಯ ಕೆಲಸ ಬಂದರೆ ರಜೆ, ನಾವು ಹೇಳಿದ ಹೋಮ್‌ವರ್ಕ್‌ ಮಾಡಿಕೊಂಡು ಬರುವುದೇ ಇಲ್ಲ ಮಕ್ಕಳು.

ಅಲ್ಲಿಯ ತಾಯಿಯೊಬ್ಬರು ರೇಗಿದರು... ‘ನನ್ನ ಮಗಳಿಗೆ ಕಷ್ಟಪಟ್ಟು ಹೋಮ್‌ವರ್ಕ್‌ ಮಾಡಿಸಿ ಕಳುಹಿಸಿಕೊಟ್ಟೆ. ಮಗಳು ಮನೆಗೆ ಬಂದಾಗ ಹೋಮ್‌ವರ್ಕ್‌ ಸರಿಯಾಗಿತ್ತೇ ಎಂದು ಕೇಳಿದೆ. ಅಯ್ಯೋ ಬೀಡಮ್ಮ, ಅವರು ಸರಿಯಾಗಿ ನೋಡಲೂ ಇಲ್ಲ; ಕೇಳಲೂ ಇಲ್ಲ. ಮಾಡಿದ್ದೆಲ್ಲಾ ದಂಡ’ ಅಂದುಬಿಟ್ಟಳು.

ಅದೇ ಊರಿನ ವೃದ್ಧರೊಬ್ಬರು ಬೇರೆಯ ಒಂದು ಪ್ರಶ್ನೆಯನ್ನು ಮುಂದಿಟ್ಟರು. ‘ನೀವೇನೋ ವಿದ್ಯಾಭ್ಯಾಸ ಮುಖ್ಯ ಅಂತೀರಿ. ಅದು ಮುಖ್ಯ ಅನ್ನೋದು ನಮಗೇ ಹೇಗೆ ಗೊತ್ತಾಗಬೇಕು. ನಮಗೆ ಕಷ್ಟಪಟ್ಟು ದುಡಿದು ಮಕ್ಕಳನ್ನು ಬೆಳೆಸೋದು ಮಾತ್ರ ಗೊತ್ತಿರೋದು. ಇದೆಲ್ಲಾ ನೀವೇ ತಾನೆ ಹೇಳಿಕೊಡಬೇಕು’. ಎಂತಹ ಪ್ರಶ್ನೆ ಅದು. ಅದರಲ್ಲಿ ಭಾರತದ ಹಳ್ಳಿಗಳ ಪ್ರಶ್ನೆ ಇದೆ ಅನಿಸಿತು ನನಗೆ.

ಇತ್ತ ಚಿಕ್ಕಬಳ್ಳಾ‍ಪುರದ ಶಾಲೆಗಳಿಗೆ ಬಂದರೆ ಅಲ್ಲಿನ ಏಳನೇ, ಎಂಟನೇ ತರಗತಿಯ ಮಕ್ಕಳಿಗೆ ಕನ್ನಡ ಓದುವುದೂ ಗೊತ್ತಿಲ್ಲ; ಬರೆಯುವುದೂ ಗೊತ್ತಿಲ್ಲ. ಯಾಕ್ರೀ... ಅಂತಾ ಕೇಳಿದರೆ ಕನ್ನಡದ ಮೇಷ್ಟ್ರುಗಳಿಗೆ ಕಾರಣಗಳೂ ಗೊತ್ತಿಲ್ಲ. ಈ ಪರಿಸ್ಥಿತಿ ನೋಡಿದರೆ ನನಗೆ ಇದ್ದಕ್ಕಿದ್ದಂತೆ ಅರಿವಾಯಿತು. ಈ ಮಕ್ಕಳು ಈ ಮೇಷ್ಟ್ರುಗಳ ಬಲಿಪಶುಗಳು. ಈ ಮೇಷ್ಟ್ರುಗಳು ಈ ವ್ಯವಸ್ಥೆಯ ಬಲಿಪಶುಗಳು. ಅಂದರೆ ಬಲಿಪಶುಗಳ ಕೈಯಲ್ಲಿ ಬಲಿಪಶುಗಳಿದ್ದಾರೆ. ನಾವು ಅವರಿಗೆ ಅನುದಾನವೆಂಬ ಭಿಕ್ಷೆ ಕೊಟ್ಟು ಸರಿಯಾದ ಸಂಬಳ ಕೊಡದೆ, ಮೂಲ ಸೌಕರ್ಯ ಕೊಡದೆ ಪಾಠ ಹೇಳು
ಎನ್ನುತ್ತಿದ್ದೇವೆ.

ಶಾಲೆಯಿದೆ, ಮೇಷ್ಟ್ರುಗಳಿದ್ದಾರೆ, ಪಾಠ ಹೇಳುತ್ತಾರೆ, ಕ್ಲಾಸ್‌ ನಡೆಯುತ್ತದೆ. ಎಲ್ಲವೂ ಸರಿಯಾಗಿದೆ ಎಂಬ ಭ್ರಮೆಯಲ್ಲಿ ನಾವಿದ್ದೇವೆ. ಈ ದೇಶದ ರಾಜಕೀಯ ನೋಡಿ. ಇಲ್ಲಿಯೂ ಯಾರೋ ಗೆಲ್ಲುತ್ತಾರೆ. ಯಾರೋ ಪ್ರಧಾನಿಯಾಗುತ್ತಾರೆ. ಮತ್ಯಾರೋ ಮುಖ್ಯಮಂತ್ರಿಯಾಗುತ್ತಾರೆ. ಸಮ್ಮಿಶ್ರ ಸರ್ಕಾರಗಳು ಬರುತ್ತವೆ. ಐದು ವರ್ಷ ಆಳಿದರೆ ಸಾಕು ಎಂದು ಮತ್ಯಾರೋ ಅಂದುಕೊಳ್ಳುತ್ತಾರೆ. ಬಲವಾದ ಸರ್ಕಾರವನ್ನು ಆರಿಸಿದ್ದೇವೆ ಎಂದು ನಾವು ಅಂದುಕೊಳ್ಳುತ್ತೇವೆ. ಈ ‘ದೇಶ’ ಎಂಬ ಬಸ್ಸನ್ನು ಡ್ರೈವಿಂಗ್ ಗೊತ್ತೋ ಇಲ್ಲವೋ, ತಿಳಿಯದ ಒಬ್ಬ ಚಾಲಕನ ಕೈಗೆ ಒಪ್ಪಿಸಿ ನಾವು ಆರಾಮವಾಗಿ ಕುಳಿತಿರುತ್ತೇವೆ.

ನಮಗೆ ರಸ್ತೆ ಹೇಗಿದೆ ಎನ್ನುವುದು ಗೊತ್ತಿಲ್ಲ. ಆತ ಬಸ್ಸು ಓಡಿಸಬಲ್ಲನೇ ಎನ್ನುವುದು ಗೊತ್ತಿಲ್ಲ. ಬಸ್‌ ಓಡಿಸುವುದರೊಳಗೆ ಮುಂದೆ ಅಪಘಾತವಾಗುತ್ತದೆ ಎನ್ನುವುದು ಅವನಿಗೆ ಗೊತ್ತಿಲ್ಲ. ಆದರೆ, ಅವನಿಗೆ ಹೇಗೆ ಯಾವಾಗ ಜಿಗಿದು ಪಾರಾಗಬೇಕು ಎನ್ನುವುದು ಗೊತ್ತಿದೆ. ನಾವು ಇದಾವುದರ ಕಲ್ಪನೆಯೂ ಇಲ್ಲದೆ ಅಂತ್ಯಾಕ್ಷರಿ ಹಾಡುತ್ತಾ ನೆಮ್ಮದಿಯಾಗಿರುತ್ತೇವೆ. ಎಲ್ಲವೂ ಸರಿಯಾಗಿದೆ ಎನ್ನುವ ಭ್ರಮೆಯಲ್ಲಿ ಬದುಕುತ್ತೇವೆ. ಆದರೆ, ಅದೆಷ್ಟು ದಿನ ಹೀಗೆ ಬದುಕಲು ಸಾಧ್ಯ? ಅದು ಕೂಡ ಒಂದು ಭ್ರಮೆ. ಎಲ್ಲವೂ ಸರಿಯಾಗಿರಬೇಕಿಲ್ಲ. ಆದರೆ, ಎಲ್ಲವೂ ಸರಿಯಾಗಿಲ್ಲ ಎನ್ನುವ ಅರಿವಾದರೂ ನಮಗೆ ಇರಬೇಕಲ್ಲ!

ಪಡೆಯುವವನ ಮತ್ತು ಕೊಳ್ಳುವವನ ಸೂಕ್ಷ್ಮತೆ ಹೇಗಿರಬೇಕು ಎನ್ನುವುದಕ್ಕೆ ಸಾಕ್ಷಿಯಾಗಿ ನಾನು ಓದಿದ ಬೇಂದ್ರೆ ಅವರ ಪ್ರಸಂಗ ನೆನಪಾಗುತ್ತದೆ. ಒಂದು ಸಲ ಬೇಂದ್ರೆ ದತ್ತಾತ್ರೇಯ ಗುಡಿಗೆ ಹೋಗಿ ವಾಪಸ್‌ ಬರುವಾಗ ಅವರ ಚಪ್ಪಲಿಯ ಉಂಗುಷ್ಟ ಕಿತ್ತುಹೋಗುತ್ತದೆ. ದಾರಿಯಲ್ಲಿ ಅವರ ಚಪ್ಪಲಿ ನೋಡಿದ ಚಮ್ಮಾರನೊಬ್ಬ ‘ಅಜ್ಜಾರ... ಕೊಡ್ರೀ ಉಂಗುಷ್ಟ ಹಚ್ಚಿ ಕೊಡ್ತೀನಿ’ ಎಂದು ಚಪ್ಪಲಿ ತೆಗೆದುಕೊಂಡು ಹೊಲಿಯಲು ಶುರು ಮಾಡುತ್ತಾನೆ. ಚಪ್ಪಲಿಯನ್ನು ಅವನ ಕೈಗೆ ಕೊಟ್ಟ ಅವರು ಬರಿಗಾಲಲ್ಲಿ ನಿಲ್ಲುತ್ತಾರೆ.

ಅವರ ಕಾಲು ಸುಡುತ್ತದೆ ಅಂದುಕೊಂಡು ಅಲ್ಲಿಯೇ ಇರುವ ಮತ್ತೊಂದು ಚಪ್ಪಲಿಯನ್ನು ಅವರ ಮುಂದಕ್ಕೆ ತಳ್ಳುತ್ತಾನೆ ಆ ಚಮ್ಮಾರ. ‘ಅಜ್ಜಾರ ಬಿಸ್ಲು ಜೋರಾಗೈತಿ. ಕಾಲು ಸುಡ್ತಾವ. ಅದ್ರ ಮ್ಯಾಲ ಕಾಲಿಡ್ರಿ’ ಅಂತಾನೆ. ಅವನ ಸೂಕ್ಷ್ಮತೆ ಕಂಡು ಮನದುಂಬಿದ ಬೇಂದ್ರೆ, ‘ಅಲ್ಲೋ ನನ್‌ ಕಾಲ್ ಸುಡ್ತದ ಅಂತ ಕಾಳ್ಜಿ ಮಾಡ್ತಿ. ನೀನ್‌ ಸುಡೊ ಬಿಸ್ಲಾಗ ಕುಂತಿದ್ದಿಯಲ್ಲೊ ನೆತ್ತಿ ಸುಡೊದಿಲ್ಲೇನು’ ಎಂದು ತಮ್ಮ ಛತ್ರಿಯನ್ನು ಬಿಡಿಸಿ ಅವನ ತಲೆಯ ಮೇಲೆ ಹಿಡಿಯುತ್ತಾರೆ.

‘ನಾವು ಮತ್ತು ಪರಿಸರ’, ‘ನಾವು ಮತ್ತು ರಾಜಕಾರಣ’, ‘ನಾವು ಮತ್ತು ಪ್ರಕೃತಿ’ ಇಂತಹ ಸೂಕ್ಷ್ಮವನ್ನು ಪಡೆದುಕೊಳ್ಳದೆ ಹೋದರೆ ನಮ್ಮ ನೆತ್ತಿ ಸುಡುತ್ತಲೇ ಇರುತ್ತದೆ. ಪ್ರಕೃತಿಯ ಪಾದವೂ ಸುಡುತ್ತಿರುತ್ತದೆ. ನಾವು ‘ಎಲ್ಲವೂ ಸರಿಯಾಗಿದೆ’ ಎಂಬ ಭ್ರಮೆಯಲ್ಲಿಯೇ ಇರುತ್ತೇವೆ.

ಬರಹ ಇಷ್ಟವಾಯಿತೆ?

 • 41

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !