ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಭೂತವಾದಿಗಳ ವಿರುದ್ಧ ಕ್ರಮ

Last Updated 4 ಜೂನ್ 2018, 19:30 IST
ಅಕ್ಷರ ಗಾತ್ರ

ಜೊಹಾನ್ಸ್‌ಬರ್ಗ್: ಅಕ್ರಮ ಹಣಕಾಸು ವರ್ಗಾವಣೆ, ಭಯೋತ್ಪಾದಕರಿಗೆ ಆರ್ಥಿಕ ನೆರವು ಹಾಗೂ ಮೂಲಭೂತವಾದಿಗಳ ವಿರುದ್ಧ ಬ್ರಿಕ್ಸ್ ರಾಷ್ಟ್ರಗಳು ಜಂಟಿಯಾಗಿ ಕ್ರಮ ಕೈಗೊಳ್ಳಬೇಕೆಂದು ವಿದೇಶಾಂಗ ವ್ಯವ‌ಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಕರೆ ನೀಡಿದ್ದಾರೆ.

ಬ್ರಿಕ್ಸ್‌ ರಾಷ್ಟ್ರಗಳ ವಿದೇಶಾಂಗ ವ್ಯವಹಾರ ಸಚಿವರ ಸಭೆಯಲ್ಲಿ ಮಾತನಾಡಿದ ಸುಷ್ಮಾ, ‘ಬಹುಪಕ್ಷೀಯತೆ, ಅಂತರರಾಷ್ಟ್ರೀಯ ವ್ಯಾಪಾರ ಹಾಗೂ ನಿಯಮ ಆಧರಿತ ಜಗತ್ತು ಭಾರಿ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಈ ಸಭೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

‘ಬ್ರಿಕ್ಸ್ ಆಂತರಿಕ ಸಹಕಾರವನ್ನು ಮತ್ತಷ್ಟು ವೃದ್ಧಿಸಲು ಭಾರತ ಸಿದ್ಧವಿದೆ. ಸುದೀರ್ಘವಾಗಿ ಚರ್ಚೆಯಾದ ಅಂಶಗಳು ಆಂತರಿಕ ಸಹಕಾರ ಬಲಪಡಿಸಲು ಕೊಡುಗೆ ನೀಡಲಿವೆ’ ಎಂದು ಅವರು ತಿಳಿಸಿದ್ದಾರೆ.

ಭಯೋತ್ಪಾದನೆ ನಿಗ್ರಹಕ್ಕೆ ಕ್ರಮ ಕೈಗೊಳ್ಳುವ ಭಾರತದ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ ಎಂದು ಸುಷ್ಮಾ ಹೇಳಿದ್ದಾರೆ.

ಮುಂದಿನ ತಿಂಗಳು ಇಲ್ಲಿ ನಡೆಯುವ ವಾರ್ಷಿಕ ಶೃಂಗಸಭೆಗೆ ಈ ಸಭೆ ಪೂರ್ವಭಾವಿ ಸಿದ್ಧತೆ ಎಂದು ಪರಿಗಣಿಸಲಾಗಿದೆ.

‘ಸವಾಲುಗಳಿವೆ: ‘ಜಾಗತಿಕ ಬೆಳವಣಿಗೆಯಲ್ಲಿ ಸುಧಾರಣೆಯ ಲಕ್ಷಣಗಳು ಗೋಚರಿಸಿದರೂ ದೀರ್ಘಾವಧಿ ಬೆಳವಣಿಗೆಗೆ ಸವಾಲುಗಳಿವೆ. ಜಾಗತೀಕರಣದ ಲಾಭಗಳು ಎಲ್ಲ ರಾಷ್ಟ್ರಗಳಿಗೂ ದೊರಕುವಂತೆ ಆಗುವುದು ಇನ್ನೂ ಸವಾಲಾಗಿಯೇ ಉಳಿದಿದೆ’ ಎಂದು ಸುಷ್ಮಾ ಹೇಳಿದ್ದಾರೆ.

ಮೋದಿ ಹೇಳಿಕೆ ಚೀನಾ ಸ್ವಾಗತ

ಬೀಜಿಂಗ್/ ವಾಷಿಂಗ್ಟನ್: ಚೀನಾ– ಭಾರತ ಬಾಂಧವ್ಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು, ಸಿಂಗಪುರದಲ್ಲಿ ನಡೆದ ಶಾಂಗ್ರಿಲಾ ಶೃಂಗಸಭೆಯಲ್ಲಿ ಗುಣಾತ್ಮಕವಾಗಿ ಮಾತನಾಡಿದ್ದನ್ನು ಚೀನಾ ಸ್ವಾಗತಿಸಿದೆ.

‘ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಉಭಯ ನಾಯಕತ್ವದಲ್ಲಿ ಒಮ್ಮತ ಮೂಡಿಸುವ ಸಲುವಾಗಿ ಭಾರತದ ಜತೆ ಮಾತುಕತೆಗೆ ಸಿದ್ಧ’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್ ಹೇಳಿದ್ದಾರೆ. ಗಡಿಯಲ್ಲಿ ಶಾಂತಿ ಕಾಪಾಡಲು ಭಾರತ ಹಾಗೂ ಚೀನಾ ‘ಪ್ರಬುದ್ಧತೆ ಹಾಗೂ ಬುದ್ಧಿವಂತಿಕೆ’ ತೋರಿಸಿವೆ ಎಂದು ಮೋದಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT