ಕಾಣ್ಕೆಯ ಉತ್ಕಟತೆ

7

ಕಾಣ್ಕೆಯ ಉತ್ಕಟತೆ

ಗುರುರಾಜ ಕರಜಗಿ
Published:
Updated:
Deccan Herald

ನಿಶಿಯೊಳೇಂ ಕಾಣಬಾರನು ಹಗಲನೊಲ್ಲದೊಡೆ ? !

ಶಶಿರವಿಗಳವನ ಮನೆಕಿಟಕಿಯಾಗಿದರೇಂ ? ||

ಮಸಕು ಬೆಳಕೊಂದಾದ ಸಂಜೆಮಂಜೇನವನು |

ಮಿಸುಕಿ ಸುಳಿಯುವ ಸಮಯ? – ಮಂಕುತಿಮ್ಮ || 40 ||

ಪದ-ಅರ್ಥ: ನಿಶೆಯೊಳು=ರಾತ್ರಿಯಲಿ, ಹಗಲನೊಲ್ಲದೊಡೆ=ಹಗಲನ್ನು+ಬಲ್ಲದೊಡೆ, ಮಸಕುಬೆಳಕೊಂದಾದ=ಮಸಕು+ಬೆಳಕು+ಒಂದಾದ, ಸಂಜೆಮಂಜೇನವನು=ಸಂಜೆಯ+ಮಂಜೇನು+ಅವನು, ಮಿಸುಕಿ=ಮಿಂಚಿ

ವಾಚ್ಯಾರ್ಥ: ಭಗವಂತ ಹಗಲಿನಲ್ಲಿ ಕಾಣಬಾರದು ಎಂದುಕೊಂಡಿದ್ದರೆ ರಾತ್ರಿಯಲ್ಲೇಕೆ ಕಾಣಬಾರದು? ಸೂರ್ಯಚಂದ್ರರು ಅವನ ಮನೆಯ ಕಿಟಕಿಗಳಲ್ಲವೇ? ಹಗಲು ರಾತ್ರಿಗಳು ಸಂಧಿಸುವ ಸಂಜೆಯ ಮಂಜೇ ಅವನು ಮಿಂಚಿ ಸುಳಿಯುವ ಸಮಯ?

ವಿವರಣೆ: ಭಗವಂತನನ್ನು ಕಾಣಬಯಸುವ ಸಾಧಕನ ಉತ್ಕಟತೆಯ ಅಭಿವ್ಯಕ್ತಿ ಇದು. ಆತ ಅವನನ್ನು ಕಂಡೇ ತೀರಬೇಕು, ಹೇಗಾದರೂ, ಎಲ್ಲಿಯಾದರೂ. ಯಾಕೆ ಅವನು ನನಗೆ ಕಾಣಲಾರ? ಅವನು ಹಗಲಿನಲ್ಲಿ ನನಗೆ ಕಾಣುವುದು ಇಷ್ಟವಿಲ್ಲದಿದ್ದರೆ ರಾತ್ರಿಯಾದರೂ ತೋರನೇಕೆ? ಹೇಗಿದ್ದರೂ ಸೂರ್ಯ ಚಂದ್ರರಿಬ್ಬರೂ ಅವನ ಕಿಟಕಿಗಳಲ್ಲವೇ? ಅವುಗಳಲ್ಲಾದರೂ ಇಣುಕಿ ತನ್ನ ಮೊಗವನ್ನು ತೋರಬಹುದಿತ್ತು. ಹಾಗಾದರೆ ಗೋಧೂಳಿಯ ಸಮಯಕ್ಕೆ, ಹಗಲು ಕರಗಿ ರಾತ್ರಿಯ ಕತ್ತಲು ಇಳಿದು ಮಸಕುಮಸಕಾಗಿರುವ ಹೊತ್ತಿನಲ್ಲಿ, ನನ್ನ ಕಣ್ಣು ಸ್ಪಷ್ಟವಾಗಿ ಕಾಣದೇ ಮಂಜು ಮಂಜಾಗಿರುವ ಸಮಯದಲ್ಲೇ, ಆತ ಮಿಂಚಿನಂತೆ ಹೊಳೆದು ಮಾಯವಾಗಿ ಬಿಡುತ್ತಾನೆಯೇ? ಈ ಮಾತುಗಳೆಲ್ಲ ಭಗವಂತನ ಇರುವಿಕೆಯ ಬಗ್ಗೆ ಸಂದೇಹದ, ಕೊಂಕುಮಾತುಗಳಲ್ಲ. ಪಂಚೇಂದ್ರಿಯಗಳು ಸತತವಾಗಿ ತಂದು ಸುರಿಯುವ ಲೋಕದ ವಾರ್ತೆಯಿಂದ ನಮ್ಮ ಮನಸ್ಸು ಮಂಜಾಗಿದೆ, ನಮ್ಮ ದೃಷ್ಟಿ ಸ್ಪಷ್ಟತೆಯ£ೂÀ್ನ ಕಳೆದುಕೊಂಡಿದೆ. ಹೀಗೆ ಮಂಜಾದ ದೃಷ್ಟಿಗೆ ಅವನು ಮಿಂಚಿ ಮರೆಯಾದದ್ದು ಕಾಣದೇ ಹೋಗಿದೆ. ಅವನು ಇಲ್ಲ ಎನ್ನುವ ಮಾತಿಲ್ಲ. ಆತ ನನಗೆ ತೋರಲಿಲ್ಲ ಎಂಬುದು ಆಕ್ಷೇಪದ, ಉತ್ಕಟತೆಯ ಮಾತು. ಅವನು ಮರೆಯಲ್ಲಿ ಇದ್ದಾನೆ ನಮ್ಮ ಮಿತಿಗಳಿಂದಾಗಿ ತೋರುತ್ತಿಲ್ಲ ಎನ್ನುವುದನ್ನು ಅಲ್ಲಮ ಎಷ್ಟು ಚೆನ್ನಾಗಿ ಹೇಳುತ್ತಾನೆ !

ನೆಲದ ಮರೆಯ ನಿಧಾನದಂತೆ,

ಮುಗಿಲ ಮರೆಯ ಮಿಂಚಿನಂತೆ,

ಬಯಲ ಮರೆಯಲಡಗಿರ್ದ ಮರೀಚಿಯಂತೆ,

ಕಂಗಳ ಮರೆಯಲಡಗಿರ್ದ ಬೆಳಗಿನಂತೆ

ಗುಹೇಶ್ವರಾ ನಿಮ್ಮ ನಿಲುವು

ಕಣ್ಣಿಗೆ ಕಾಣದ ಆದರೆ ಇರುವಿಕೆಯನ್ನು ಸಹಸ್ರ ಸಹಸ್ರ ಅನುಭವಗಳಿಂದ ತೋರುವ ಆ ಭಗವಂತನನ್ನು ಕಾಣುವ ತಹತಹಿಕೆ ಭಕ್ತನದು. ಇದು ಮೀರಾಳಿಗೆ ಆದದ್ದು, ಚೈತನ್ಯ ಮಹಾಪ್ರಭುಗಳಿಗೆ, ರಾಮಕೃಷ್ಣರಿಗೆ, ಆಂಡಾಳ್‍ಗೆ, ಕೋಳೂರು ಕೊಡಗೂಸಿಗೆ, ಕನಕ ಪುರಂದರರಿಗೆ, ಬಸವಣ್ಣನವರಿಗೆ, ಮಹಾದೇವಿ ಅಕ್ಕನಿಗೆ ಆದದ್ದು, ಅಕ್ಕನ ಮಾತು ಕೇಳಿ,

ತೆರಣಿಯ ಹುಳು ತನ್ನ ಸ್ನೇಹದಲ್ಲಿ ಮನೆಯ ಮಾಡಿ,

ತನ್ನ ನೂಲು ತನ್ನ ಸುತ್ತಿ ಸಾವ ತೆರನಂತೆ;

ಮನ ಬಂದುದ ಬಯಸಿ ಬೇವುತ್ತಿದ್ದೇನೆ.

ಅಯ್ಯಾ ಎನ್ನ ಮನದ ದುರಾಸೆಯ ಮಾಣಿಸಿ

ನಿಮ್ಮತ್ತ ತೋರಾ ಚೆನ್ನಮಲ್ಲಿಕಾರ್ಜುನಾ

ಇದು ಸಾಧನೆಯ ಮಾರ್ಗದಲ್ಲಿ, ಸಾಧಕರನ್ನು ಬಂಧಿಸಿರುವ ಮಾಯೆಯ ಶಕ್ತಿಯ ಬಗೆಗಿನ ಹೆದರಿಕೆ ಮತ್ತು ಅದನ್ನು ದಾಟಿ ಹೋಗಲು ಹಂಬಲಿಸುವ ಹೃದಯದ ತಳಮಳ ಇವುಗಳನ್ನು ಸುಂದgವಾÀದ ರೂಪಕದಲ್ಲಿ ಬಂಧಿಸಿರುವುದು ಈ ಕಗ್ಗ.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !