ಗುರುವಾರ , ಡಿಸೆಂಬರ್ 5, 2019
19 °C

ಕಾಣದ ಕಡಲಿನ ಮೊರೆತದ ಸಾಂತ್ವನ...

Published:
Updated:

‘ಗೌ ರಿ ಹಂತಕರ ಲಿಸ್ಟ್‌ನಲ್ಲಿ ನಿನ್ನ ಹೆಸರಿದೆಯಂತೆ. ಟೀವಿಯಲ್ಲಿ ಬ್ರೇಕಿಂಗ್ ನ್ಯೂಸ್ ಬರ್ತಾ ಇದೆ’ ಗೆಳತಿಯೊಬ್ಬಳು ಆತಂಕದಿಂದ ಫೋನ್ ಮಾಡಿದಳು. ಮುಂದಿನ ಹಲವು ಗಂಟೆಗಳಲ್ಲಿ ಇಂಟಲಿಜೆನ್ಸ್‌
ನಿಂದ ಫೋನ್‌. ‘ನಿಮ್ಮ ಸುರಕ್ಷತೆಗೆ ಗನ್‌ಮ್ಯಾನ್ ನೇಮಿಸಿದ್ದೇವೆ’ ಎಂದು. ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಈ ಬಗ್ಗೆ ಮಾತುಕತೆಗಳು. ಆತ್ಮೀಯರ ಕಳವಳದ– ಸಾಂತ್ವನದ ಫೋನ್ ಕರೆಗಳು. ನನಗೆ ತಕ್ಕ ಶಾಸ್ತಿ ಆಯಿತೆಂದು ಜಾಲತಾಣಗಳಲ್ಲಿ ದ್ವೇಷ ಬಿತ್ತಲ್ಪಟ್ಟ ಮನಸ್ಸುಗಳ ಟ್ವೀಟ್‌ಗಳು, ಪೋಸ್ಟ್‌ಗಳು...

ಕಡಲತೀರದ ನನ್ನ ಮನೆಯಲ್ಲಿ ಸಮುದ್ರವನ್ನು ದಿಟ್ಟಿಸಿ ನೋಡುತ್ತ ಯೋಚಿಸತೊಡಗಿದೆ. 

‘ನನ್ನತ್ತ ಕಲ್ಲುಗಳನ್ನು ತೂರಬೇಡಿ‌

ಹಿಡಿದು ಮನೆ ಕಟ್ಟಿಕೊಳ್ಳುತ್ತೇನೆ

ಬೆಂಕಿಯಿಂದ ಸುಡಲೆತ್ನಿಸಬೇಡಿ

ಮನೆಗೆ ದೀಪವಾಗಿಸುತ್ತೇನೆ

ಇಲ್ಲಿಂದ ಓಡಿಸಲೆತ್ನಿಸಬೇಡಿ

ಸೇರಬೇಕಾದ ಗುರಿಯನ್ನು ಬೇಗ ತಲುಪುತ್ತೇನೆ

ವಿಷವಿಟ್ಟು ಕೊಲ್ಲಲೆತ್ನಿಸಬೇಡಿ

ನುಂಗಿ ವಿಷಕಂಠನಾಗುತ್ತೇನೆ’ 

ಹಲವರಿಗೆ ಇದು ಕವಿತೆ. ನನ್ನ ಪಾಲಿಗೆ ಇದುವೇ ಬದುಕು. ನನ್ನ ಬೇರುಗಳು ಇಳಿದಿರುವ ಆಳಕ್ಕೂ ನನ್ನ ಕೊಂಬೆಗಳು ವಿಶಾಲವಾಗಿ ಚಾಚಿ ಹರಡಿ ನಿಂತಿರುವ ವಿಸ್ತಾರದಂಚಿಗೂ ನಾನೇ ಆಶ್ಚರ್ಯಪಡುವಷ್ಟು ದೂರವಿದೆ. ಎಲ್ಲವನ್ನೂ ಬಹಿರಂಗವಾಗಿ ಹೇಳಿಬಿಡಬಹುದೇನೋ, ಗೊತ್ತಿಲ್ಲ. ಹೇಳುವುದಕ್ಕೆ ನನಗೆ ಯಾವ ಸಂಕೋಚವೂ ಇಲ್ಲ. ನನ್ನ ಸಮಕಾಲೀನ ಬದುಕಿನಲ್ಲಿ, ಈ ಕ್ಷಣದ ಗ್ರಹಿಕೆ ಇದು.

ಸತ್ಯವನ್ನು ಹೇಳಲು ಬೇಕಾದ ಧೈರ್ಯಕ್ಕಿಂತ, ಸತ್ಯವನ್ನು ಕೇಳಿಸಿಕೊಳ್ಳುವುದಕ್ಕೆ ಹೆಚ್ಚು ಧೈರ್ಯ ಬೇಕಾಗುತ್ತದೆ. ಅಸ್ತಮಿಸದ ಸೂರ್ಯನ ಸಾಮ್ರಾಜ್ಯವೆಂದು ಬೀಗುತ್ತಿದ್ದ ಬ್ರಿಟಿಶರ ಎದುರಿಸಲು ಮಹಾತ್ಮ ಗಾಂಧಿಗೆ ಆಯುಧಗಳ ಅವಶ್ಯಕತೆ ಬೀಳಲಿಲ್ಲ. ತುಂಬ ಸಾಧಾರಣ ಮನುಷ್ಯನಂತೆ ಅವರು ಹೇಳಿದ ಸತ್ಯಗಳನ್ನು ಎದುರಿಸಲು ಅಂದಿನ ಬ್ರಿಟಿಶ್ ಪ್ರಭುತ್ವಕ್ಕೆ ಹಲವಾರು ಆಯುಧಗಳು ಇದ್ದವು. ವಿಧವಿಧವಾದ ರಣತಂತ್ರಗಳನ್ನು ಬಳಸಿ ಬಹಳ ಶ್ರಮಪಟ್ಟರು. ಸತ್ಯ ಸರಳವಾಗಿರುತ್ತದೆ; ಸತ್ಯವನ್ನು ಹೇಳುವವರೂ ತುಂಬ ಸರಳವಾಗಿರುತ್ತಾರೆ. ಆದರೆ ಆ ಸತ್ಯಕ್ಕೆ ಮುಖಾಮುಖಿಯಾಗಲು ತುಂಬಾ ಸಿದ್ಧತೆಗಳು ಬೇಕಾಗುತ್ತವೆ. ಅದಕ್ಕೆ ನನ್ನ ಬೀಚ್‌ಹೌಸೇ ಸಾಕ್ಷಿ. 

ಚೆನ್ನೈನಿಂದ ಕೋವಲಂ ದಾಟಿ ಈಸ್ಟ್‌ಕೋಸ್ಟ್‌ ರೋಡ್‌ನಲ್ಲಿದೆ ನನ್ನ ಕಡಲತೀರದ ಮನೆ. ಚೆನ್ನೈನಿಂದ ಮೂವತ್ತೈದು ಕಿಲೋಮೀಟರ್ ದೂರ. ಶೂಟಿಂಗ್, ಮೀಟಿಂಗ್ ಯಾವುದೇ ಇದ್ದರೂ ಅಲ್ಲಿಂದ ಪಟ್ಟಣಕ್ಕೆ ಬರುತ್ತೇನೆ. ‘ಅಷ್ಟುದೂರದಿಂದ ಬರುತ್ತೀಯಾ?’ ಎಂದು ಎಲ್ಲರೂ ಅಚ್ಚರಿಯಿಂದ ಕೇಳುತ್ತಿರುತ್ತಾರೆ. ಚೆನ್ನೈ ನಗರದ ಟ್ರಾಫಿಕ್‌ನಲ್ಲಿ ಒಂದೆಡೆ ಹೋಗಿ ಸೇರಲು ಒಂದು ಗಂಟೆಯಾದರೂ ಬೇಕಾಗುತ್ತದೆ. ಇನ್ನೊಂದರ್ಧ ಗಂಟೆ ಡ್ರೈವ್‌ ಮಾಡಿದರೆ ನನ್ನನ್ನು ದಿನದಿನ ಹೊಸದಾಗಿಸುವ ನನ್ನ ಕಡಲತೀರದ ಮನೆ ಸೇರುತ್ತೇನೆ. 

ದೇವರ ಶಕ್ತಿಯನ್ನು ಹೇಳಲಾಗದು; ಆದರೆ ಮನದಟ್ಟು ಮಾಡಬಹುದೆನ್ನುತ್ತಾರೆ. ದೇವರ ಬಗ್ಗೆ ವಾದಿಸಲು ನನಗೆ ಅಷ್ಟೊಂದು ಜ್ಞಾನವೂ ಇಲ್ಲ; ಆ ಬಗ್ಗೆ ಮಾತಿಗಿಳಿಯಲು ಮನಸ್ಸೂ ಇಲ್ಲ. ಆದರೆ ಕಡಲಿಗಿರುವ ಶಕ್ತಿ ತುಂಬ ದೊಡ್ಡದೆಂದು ಮಾತ್ರ ಅನುಭವದಿಂದ ನಿಖರವಾಗಿ ಹೇಳಬಲ್ಲೆ. ಕಣ್ಣಿಂದ ಅಳೆಯಲಾಗದ ಆಳವೂ ದೂರವೂ ಇರುವ ಕಡಲು ಒಮ್ಮೆ ಚಲಿಸಿದರೆ ಸಾಕು, ಹೇಗಿರುತ್ತದೆಂದು ಕಣ್ಣಾರೆ ಕಂಡಿದ್ದೇನೆ.

ಸುನಾಮಿ ಬಂದ ದಿನ ನಾನು ಚಿತ್ರೀಕರಣವಿಲ್ಲದೆ ಬಿಡುವಾಗಿದ್ದೆ. ನಿದ್ದೆಯಿಂದೆದ್ದು ಕಡಲ ನೋಡುತ್ತಿದ್ದಾಗ ಒಂದು ಅಲೆ ಬೆಟ್ಟದಂತೆ ಎದ್ದು ನಾನು ನಿಂತಿದ್ದ ಮೊದಲನೇ ಮಹಡಿಯ ಎತ್ತರಕ್ಕೆ ಬಂದಿದ್ದು ಕಂಡು ದಿಗ್ಭ್ರಮೆಗೊಂಡೆ. ಭದ್ರತೆಗೆಂದು ಕಟ್ಟಿದ್ದ ಕಲ್ಲಿನ ಕಾಂಪೌಂಡ್‌ಗೆ ಅಪ್ಪಳಿಸಿ ಚೂರು ಚೂರಾಗಿಸುವ ವೇಗ, ಪ್ರತಿದಿನ ನನ್ನ ಕಾಲನ್ನು ಸವರುವ, ಮುತ್ತಿಡುವ ಅಲೆಗೆ ಇದೆಯೆಂದು ಮೊಟ್ಟಮೊದಲ ಬಾರಿಗೆ ಕಂಡೆ. ಆ ದಿನದಿಂದ ಪ್ರಪಂಚಕ್ಕೆ ಆಡುಮಾತೊಂದು ದಕ್ಕಿತು. ಯಾವುದೇ ದೊಡ್ಡ ವಿಷಯವಾದರೂ ‘ಸುನಾವಿಯಂತೆ’ ಎಂಬ ಉಪಮೆಯನ್ನು ಬಳಸತೊಡಗಿತು ಜಗತ್ತು. ಮುಂದಿನ ಒಂದು ವಾರದಲ್ಲಿಯೇ ಮತ್ತೆ ಕಡಲನ್ನು ಸವಿಯಲಾರಂಭಿಸಿದೆವು. ಅದು ಕಡಲಿನ ಶಕ್ತಿ.

ಮನೆಕಟ್ಟಲು ಹಣವಿಲ್ಲದೆ ಹಾಗೆ ತೆಂಗಿನ ಓಲೆಗಳಿಂದ ಪುಟ್ಟ ಗುಡಿಸಲನ್ನು ಕಟ್ಟಿಕೊಂಡು, ಸಮುದ್ರವನ್ನು ನೋಡುತ್ತಾ ಕಳೆದ ಮಧುರ ಕ್ಷಣಗಳನ್ನೂ ದಿನಗಳನ್ನೂ ಮರೆಯಲಾಗುವುದಿಲ್ಲ.
ಕಡಲ ತೀರದಲ್ಲಿ ನನಗೊಂದು ಸ್ವಂತವಾದ ಸ್ಥಳ ಬೇಕೆಂದು ತೀವ್ರವಾಗಿ ಹುಡುಕಿ ಹುಡುಕಿ ಆತುರಾತುರವಾಗಿ ಕೊಂಡುಕೊಂಡೆ. ಅಂದಿನ ನನ್ನ ಆತುರಕ್ಕೆ, ತೀವ್ರತೆಗೆ ಕಡಲನ್ನು ರಸಿಕನಂತೆ ನೋಡುವ ಮನಸ್ಥಿತಿ ಮಾತ್ರವೇ ಕಾರಣವಲ್ಲ. ಕಾರಣ ಬೇರೊಂದಿದೆ.

ನಟನಾಗಬೇಕೆಂಬ ಲಕ್ಷ್ಯದಿಂದ ಚೆನ್ನೈಗೆ ಬಂದ ಆರಂಭದ ದಿನಗಳಲ್ಲಿ ಖರ್ಚಿಲ್ಲದೆ ಸಮಯ ಕಳೆಯಲು ನನಗೆ ಸಿಕ್ಕ ಸೂಕ್ತ ಸ್ಥಳವೆಂದರೆ ಮರೀನಾ ಬೀಚ್‌. ಈಗಲೂ ಶನಿವಾರ, ಭಾನುವಾರಗಳಂದು ಗುಂಪು ಗುಂಪಾಗಿ ಬರುವ ಜನರನ್ನು ಬಡವ– ಶ್ರೀಮಂತನೆಂಬ ವ್ಯತ್ಯಾಸ ಮಾಡದೆ ಸಂತೋಷಪಡಿಸುವುದು ಈ ಸಮುದ್ರ ತೀರವೇ. ಬೆಲೆಯೇರಿಕೆಗೆ ತತ್ತರಿಸಿ, ಶಾಪಿಂಗ್, ಸಿನಿಮಾ ಎಂದು ಹೋದರೆ ತಿಂಗಳ ಸಂಬಳ ಖಾಲಿಯಾಗುವ ಭಯದಿಂದ ನಡುಗಿ, ಕುಟುಂಬ ಸಮೇತರಾಗಿ ದಾಳಿಯಿಡುವ ಹಲವರನ್ನು ಇಲ್ಲಿ ಕಾಣಬಹುದು. 

ಚೆನ್ನೈಗೆ ಬಂದ ಹೊಸತರಲ್ಲಿ ನೆಮ್ಮದಿ ಹುಡುಕುವಾಗ ಕಾಸು ಇಲ್ಲದೆ ಕಾಲ ಕಳೆಯಲು ಅನುಮತಿಸಿದ್ದು ಈ ಸಮುದ್ರವೇ. ಹೀಗೊಂದು ಸಂಜೆ ದಿನವೆಲ್ಲ ಕೆಲಸಕ್ಕಾಗಿ ಅಲೆದು ಸುಸ್ತಾಗಿ ಮನಸ್ಸು ಸರಿ ಇಲ್ಲದೆ ಕಡಲನ್ನು ನೋಡುತ್ತ ಕುಳಿತಿದ್ದೆ. ರಾತ್ರಿ, ಕಡಲು, ವೇದನೆ, ಮುಂದೇನು ಎಂಬ ಕಳವಳದಲ್ಲಿ ರಾತ್ರಿ ಹನ್ನೊಂದು ದಾಟಿದ್ದನ್ನೂ ಅರಿಯದೆ ಅಲೆಗಳನ್ನೇ ದಿಟ್ಟಿಸುತ್ತಿದ್ದ ನನ್ನ ಬೆನ್ನಿಗೆ ಸಿಡಿಲಿನಂತೆ ಬಿತ್ತು ಒಂದು ಏಟು. ತಿರುಗಿ ನೋಡಿದರೆ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬ ಲಾಠಿ ಹಿಡಿದು ನಿಂತಿದ್ದ. ‘ಇಷ್ಟು ಹೊತ್ತಿನಲ್ಲಿ ಇಲ್ಲೇನು ಮಾಡ್ತಿದ್ದೀಯಾ?’ ಎನ್ನುತ್ತ ಸ್ವಲ್ಪ ಕೂಡ ಕನಿಕರವೇ ಇಲ್ಲದೆ ಇನ್ನೊಂದೆರಡು ಏಟು ಬಾರಿಸಿದ. ಹೊಡೆಯುವ ಹಕ್ಕೂ, ದಂಡಿಸುವ ಅಧಿಕಾರವೂ ಇಲ್ಲದ ಒಬ್ಬನು ನನಗೆ ಹೊಡೆದ ಏಟು ದೇಹಕ್ಕಿಂತ ಮನಸ್ಸಿಗೆ ಹೆಚ್ಚು ನೋವುಂಟು ಮಾಡಿತು. ಪ್ರಕೃತಿಯನ್ನು ಅನುಭವಿಸುವುದಕ್ಕೂ ಟೈಮ್‌ ಕೇಳುವುದಕ್ಕೆ ಇವನ್ಯಾರು ಎಂದು ನೋವು ಕೋಪವಾಗುತ್ತಿದ್ದಂತೆ, ಅಪರಿಚಿತ ಊರಿನಲ್ಲಿ ಅವನನ್ನು ಎದುರಿಸಲಾಗದ ಅಸಹಾಯಕತೆ ಕಣ್ಣೀರಾಗಿತ್ತು. 

‘ಇದೇ ಕಡಲ ತೀರದಲ್ಲಿ ಸ್ವಂತದ್ದೊಂದು ಸ್ಥಳ ಕೊಂಡು ರಾತ್ರಿಯೆಲ್ಲ ಕೂತಿರುತ್ತೇನೆ. ಧೈರ್ಯವಿದ್ದರೆ ಆಗ ಬಂದು ಪ್ರಶ್ನಿಸು’ ಎಂದು ನನ್ನ ಮನಸ್ಸಿನೊಳಗೇ ಬಿಟ್ಟ ಸವಾಲನ್ನು ಎರಡೇ ವರ್ಷಗಳಲ್ಲಿ ನೆರವೇರಿಸಿದೆ. ಆಮೇಲೆ ಸಮಯ ಸಿಕ್ಕಾಗಲೆಲ್ಲ ನನಗೆ ಸ್ವಂತವಾದ ಕಡಲ ತೀರದಲ್ಲಿ ಕುಳಿತು ಸವಿಯಲಾರಂಭಿಸಿದೆ. ಕೆಲವೊಮ್ಮೆ ಬೀಸುವ ಬಿರುಗಾಳಿಗೆ ಕಡಿಮೆ ಕರ್ಚಿನಲ್ಲಿ ಕಟ್ಟಿದ ಗುಡಿಸಲು ಹರಿದು ಹಾರಿ ಹೋಗುತ್ತಿತ್ತು. ದಿಢೀರೆಂದು ಬರುವ ಮಳೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅವಮಾನವನ್ನು ಒರೆಸಿ ಸಾಧಿಸಿದ ಒಂದು ಸಂತೋಷವಿರುತ್ತಿತ್ತು.

ಕಡಲ ತೀರದಲ್ಲಿ ಭವ್ಯ ಬಂಗಲೆಯೊಂದನ್ನು ಕಟ್ಟಿ ಬಾಳಬೇಕು ಎಂಬ ಆಸೆಯಿರಲಿಲ್ಲ ನನಗೆ. ಯಾರೂ ತಲೆಯಿಡದ ಸ್ವಾತಂತ್ರ್ಯದಿಂದ ಧೈರ್ಯವಾಗಿ ಕಡಲತೀರದಲ್ಲಿ ಕುಳಿತಿರಬೇಕೆಂಬುದಷ್ಟೇ ನನ್ನ ಲಕ್ಷ್ಯವಾಗಿತ್ತು. ಏಟು ತಿಂದ ಆ ದಿನ ಮುಂದಿನ ಬದುಕೇನೆಂಬ ಗೊಂದಲದಲ್ಲಿದ್ದೆ. ಅಂದು, ಸಮುದ್ರ ತೀರದಲ್ಲೊಂದು ಸ್ಥಳ ಕೊಂಡುಕೊಳ್ಳಬೇಕು ಎಂದು ಕನಸು ಕಾಣುವ ಸಾಧ್ಯತೆಯೂ ನನ್ನಲ್ಲಿರಲಿಲ್ಲ. ಆದರೆ ಸಂಬಂಧವೇ ಇಲ್ಲದೆ ಖಾಕಿ ಬಟ್ಟೆ ಹಾಕಿರುವುದೇ ತನ್ನ ಅರ್ಹತೆಯೆಂದು ವಿನಾಕಾರಣ ನನ್ನ ಅವಮಾನಗೊಳಿಸಿದ್ದನ್ನು ಭರಿಸಲಾಗಲಿಲ್ಲ.

ಈಗ ಕುಳಿತು ಯೋಚಿಸಿದರೆ ಆ ಖಾಕಿಧಾರಿಯ ಮೇಲೆ ನನಗೆ ಕೋಪವಿಲ್ಲ. ನನ್ನನ್ನು ಸೇರಬೇಕಾದ ಸ್ಥಳಕ್ಕೆ ಬೇಗ ಹೋಗು ಎಂದು ಅವನು ತಿರುಗಿಸಿ ಬಿಟ್ಟಿದ್ದಾನಷ್ಟೆ. ಸೋತು ಬಳಲಿದ್ದ ಕಳವಳಕ್ಕಿಂತ ಆದ ಅವಮಾನ ಮೇಲೇರಿ ಕುಳಿತಿತ್ತು. ಹತ್ತು ವರ್ಷದ ನಂತರ ಕಡಲತೀರದಲ್ಲಿ ಮನೆಕಟ್ಟುವ ಯೋಚನೆ ಮಾಡುವವನಿದ್ದ ನನ್ನನ್ನು ಎರಡೇ ವರ್ಷಗಳಲ್ಲಿ ಅದನ್ನು ಸಾಧಿಸುವಂತೆ ಹುರಿದುಂಬಿಸಿದ್ದು ಅವನೇ. 

ಹೊಡೆದನೇ? ನನ್ನೊಳಗೆ ಸಾಧಿಸಬೇಕಾದ ಲಕ್ಷ್ಯವೊಂದನ್ನು ಬಿತ್ತಿದನೇ ಎಂದು ಯೋಚಿಸುತ್ತಿದ್ದೇನೆ. ಹಲವು ವರ್ಷಗಳ ಹಿಂದೆ ನನಗೆ ಬಂದಿದ್ದ ಕೋಪ ತಾನಾಗಿ ರಸಿಕತೆಯಾಗಿದೆ. ಈಗ ನಾನು– ನಕ್ಷತ್ರಗಳು. ನಾವಿಬ್ಬರೇ ಹಲವು ರಾತ್ರಿಗಳು ಜತೆಗಿರುತ್ತೇವೆ. ನಾನು ಕೇಳಿಸಿಕೊಳ್ಳುತ್ತಿದ್ದೇನೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ಅಲೆಗಳು ನನ್ನೊಡನೆ ಮಾತನಾಡುತ್ತಲೇ ಇರುತ್ತವೆ. ನಾನು ಒಂದು ಹನಿ ಕೂಡ ಬೆವರಬಾರದು ಎಂದು ಬೀಸುವ ತಂಗಾಳಿಯಲ್ಲಿ ತಣ್ಣನೆಯ ಸ್ಪರ್ಶವಿದೆ. ನನಗೆ ನಾನೇ ಕಟ್ಟಿಕೊಂಡ ಕೋಟೆಯಂತಿದೆ ನನ್ನ ಕಡಲತೀರದ ಮನೆ. ಪಟ್ಟಣದ ತರಾತುರಿಯಲ್ಲಿ ಸಿಲುಕದಂತೆ ನನ್ನ ಏಕಾಂತವನ್ನು ಮತ್ತೆ ತರುವ ಸ್ವರ್ಗ ಅದು. 

ವಯಸ್ಸು ಐವತ್ಮೂರು ಆಯಿತು. ಪ್ರೀತಿಸುವ ಮಡದಿ. ಮುದ್ದಾದ ಮೂರು ಮಕ್ಕಳು, ಗೆಳೆಯರು, ಗೆಳತಿಯರು, ತಿಂಗಳ ಮೂವತ್ತು ದಿನಗಳೂ ಕೈತುಂಬ ಕೆಲಸ. ನಾಟಕ, ಸಿನಿಮಾ, ಓದು, ಬರಹ, ಸಾಮಾಜಿಕ– ರಾಜಕೀಯ ಚಟುವಟಿಕೆಗಳು, ತೋಟ, ವ್ಯವಸಾಯ, ಪ್ರಯಾಣ ಹೀಗೆ ಬದುಕು ಎಷ್ಟೋ ಚಟುವಟಿಕೆಗಳಲ್ಲಿ ಸಾಗುತ್ತಿದ್ದರೂ ಆಗಾಗ ನಾನೇ ಅಡುಗೆ ಮಾಡಿಕೊಂಡು ತಿನ್ನುವ ಏಕಾಂತದ ಬದುಕನ್ನು ಬದುಕುತ್ತಿದ್ದೇನೆ.

ಕಡಲ ತೀರದ ಮನೆಯೆಂದರೆ ನನಗೆ ವಿಶೇಷ ಪ್ರೀತಿ. ಹರಡಿರುವ ನಕ್ಷತ್ರಗಳು, ನಿಲ್ಲದ ಅಲೆಗಳು, ಬೀಸುವ ತಂಗಾಳಿ, ಸುಂದರವಾದ ಏಕಾಂತ... ಇಂಥ ಕವಿತೆಯಂಥ ಸಂಗತಿಗಳು ಮಾತ್ರ ಈ ಪ್ರೇಮಕ್ಕೆ ಕಾರಣವಲ್ಲ. ಅಸ್ಪಷ್ಟ ಕಗ್ಗತ್ತಲ ರಾತ್ರಿಯೊಂದರಲ್ಲಿ ನನ್ನ ಬದುಕಿಗೆ ಸಂಬಂಧವೇ ಇಲ್ಲದ ಒಬ್ಬ ಪೊಲೀಸ್‌ ಪೇದೆ ಹೊಡೆದ ಏಟು, ಅನುಭವಿಸಿದ ನೋವು ಮೂಲ ಕಾರಣ. ನನ್ನನ್ನು ಹೊಡೆದ ಅವರು ಈಗ ನಿವೃತ್ತರಾಗಿರಬಹುದು. ಏಟು ತಿಂದ ನಾನು ಈಗ ಆಕಾಶದ ನಕ್ಷತ್ರಗಳನ್ನು ಎಣಿಸುತ್ತ ಕುಳಿತಿದ್ದೇನೆ.

ನೋವಿಗೆ ಅಡೆತಡೆಗಳಿಗೆ ಹೇಗೆ ಮುಖಾಮುಖಿಯಾಗುತ್ತೇವೆ ಎನ್ನುವುದೇ ನಮ್ಮೆಲ್ಲರ ನಿಜವಾದ ವ್ಯಕ್ತಿತ್ವವಲ್ಲವೇ? 

ಪ್ರತಿಕ್ರಿಯಿಸಿ (+)