ಎಲ್ಲರೂ ಸೇರಿ ಕಲೆಯ ತೇರೆಳೆಯೋಣವೇ?

7

ಎಲ್ಲರೂ ಸೇರಿ ಕಲೆಯ ತೇರೆಳೆಯೋಣವೇ?

ಪ್ರಕಾಶ್ ರೈ
Published:
Updated:
Deccan Herald

ಬೆರಗಾಗಿಸುವ ಗಗನಚುಂಬಿ ಕಟ್ಟಡಗಳು, ವಿಧವಿಧವಾದ ವಾಹನಗಳು, ದೇದೀಪ್ಯಮಾನವಾಗಿ ಜ್ವಲಿಸುತ್ತಿರುವ ಶಾಪಿಂಗ್‌ ಮಾಲ್‌ಗಳಿಂದ ಪ್ರಜ್ವಲಿಸುತ್ತಿರುವ ನಗರ. ಅಲ್ಲಿ ಮುಖದ ಮೇಲೆ ಬೇಡದ ಒಂದು ಕಪ್ಪು ಮಚ್ಚೆಯಂತೆ ಗುಡಿಸಲುಗಳಿರುವ ಬಡಜನರ ಬಡಾವಣೆಯೊಂದಿತ್ತು. ಆ ನಗರವನ್ನು ಸುಂದರ ನಗರವನ್ನಾಗಿಸಲು ನಿರ್ಧರಿಸಿದ್ದ ಸರ್ಕಾರಕ್ಕೆ ಆ ಮಚ್ಚೆ ಕಿರಿಕಿರಿಯನ್ನುಂಟುಮಾಡುತ್ತಿತ್ತು. 

ಅಸಹ್ಯವೆನಿಸುತ್ತಿದ್ದ ಆ ಗುಡಿಸಲ ಬಡಾವಣೆಯ ನಿವಾಸಿಗಳನ್ನು ಬೇರೆಡೆ ಕಳುಹಿಸಿ ಆ ಜಾಗದಲ್ಲಿ ಬ್ರಹ್ಮಾಂಡವಾದ ಶಾಪಿಂಗ್‌ ಕಾಂಪ್ಲೆಕ್ಸ್‌ ಒಂದನ್ನು ಕಟ್ಟುವ ಯೋಜನೆ ಸಿದ್ಧವಾಗಿತ್ತು.

ನಗರದಿಂದ ಬಹಳ ದೂರದಲ್ಲಿದ್ದ ಸರ್ಕಾರದ ನೆಲಕ್ಕೆ ಜನರನ್ನು ರವಾನಿಸಿ, ಒಂದೇ ದಿನದಲ್ಲಿ ಎಲ್ಲ ಗುಡಿಸಲುಗಳನ್ನು ನೆಲಸಮ ಮಾಡಿ ಮುಗಿಸುತ್ತಾರೆ. ಇಡೀ ಬಡಾವಣೆಯ ಚಹರೆಯೇ ಬದಲಾಗಿ ಹೋಗಿದ್ದನ್ನು ಕಂಡು ಸ್ತಂಭಿಸಿ ನಿಲ್ಲುತ್ತವೆ ಅಲ್ಲಿಯ ಏಳೆಂಟು ಬೀದಿನಾಯಿಗಳು. ಆ ಬಡಾವಣೆಯ ಜನ ಬಡವರಾಗಿದ್ದರೂ ಆ ನಾಯಿಗಳು ಹಸಿವಿನಿಂದ ಇದ್ದಿದ್ದೇ ಇಲ್ಲ. ದಿಢೀರ್‌ ಎಂದು ಬಡಾವಣೆಯೇ ಕಾಣೆಯಾದೊಡನೆ ದಿಕ್ಕೆಟ್ಟು ನಿಂತಿವೆ ಆ ಬೀದಿನಾಯಿಗಳು. ಪಕ್ಕದಲ್ಲಿರುವ ದೊಡ್ಡ ಹೆದ್ದಾರಿಯನ್ನು ದಾಟಿ ಅತ್ತಕಡೆ ಹೋದರೇನೇ ಆ ನಾಯಿಗಳಿಗೆ ಮರುಜೀವನ. ಕಾರ್ಪೊರೇಷನ್ ಗಾಡಿ ಬಂದು ಹಿಡಿದುಕೊಂಡು ಹೋಗುವುದರ ಒಳಗೆ ಹೇಗಾದರೂ ಮಾಡಿ ಆ ಹೆದ್ದಾರಿಯನ್ನು ದಾಟಲೇ ಬೇಕು. ಆ ಹತ್ತು ಸಾಲಿನ ಹೆದ್ದಾರಿಯನ್ನು ದಾಟಲು ದಾರಿಕಾಣದೆ ಅವು ಹೆದ್ದಾರಿಯನ್ನೇ ದೀನವಾಗಿ ನೋಡುತ್ತ ನಿಲ್ಲುವ ಕ್ಷಣ ನಿಮ್ಮನ್ನು ಆವರಿಸಿಕೊಂಡುಬಿಡುತ್ತದೆ. 

ದಿನದ 24 ಗಂಟೆಯೂ ಎಡಬಿಡದೆ ವಾಹನಗಳು ಚಲಿಸುತ್ತಿರುವ ಹೆದ್ದಾರಿಯೊಂದು ಹೇಗೆ ಸಾಧಾರಣ ಜೀವಗಳ ಪಯಣವನ್ನು– ಬದುಕನ್ನು ನಿಲ್ಲಿಸಿಬಿಡುತ್ತದೆ ಎಂಬ ಬಹಳ ಸೂಕ್ಷ್ಮವಾದ ಸತ್ಯವೊಂದನ್ನು ಥಾಯ್ಲೆಂಡ್‌ ದೇಶದ ಸಿನಿಮಾವೊಂದು ನಿಮ್ಮ ಮುಂದೆ ಇಡುತ್ತದೆ. 

ಹಚ್ಚ ಹಸುರಾಗಿದ್ದ ಪರಿಸರ ಹೇಗೆ ಬದಲಾಗಿಬಿಟ್ಟಿದೆ ಎಂದು ಹೇಳುವ ಸಿನಿಮಾ ಇನ್ನೊಂದು. ಗಿಡಮರಗಳಲ್ಲಿದ್ದ ಹಸಿರು ನಗರದಲ್ಲಿ ಈಗ ಎಲ್ಲೆಲ್ಲಿ ಮನೆಮಾಡಿದೆ ಎಂದು ಹುಡುಕುತ್ತ ಚಲಿಸುವ ಕ್ಯಾಮೆರಾ. ಹೆಣ್ಣುಮಕ್ಕಳ ಚೂಡಿದಾರಗಳಲ್ಲಿ, ಮನೆಯ ಗೋಡೆಯ ಮೇಲೆ ಬಳಿದ ಬಣ್ಣಗಳಲ್ಲಿ, ಮಕ್ಕಳಾಡುವ ಗೊಂಬೆಗಳಲ್ಲಿ... ಹೀಗೆ ಹಸಿರು ಇರುವ ಸ್ಥಳಗಳನ್ನು ದಾಹದಿಂದ ಹುಡುಕುವ ಸಿನಿಮಾ ನೋಡಿ ಹೊರಬಂದರೆ, ಮನೆಗೆ ಹೋಗಿ ಒಂದು ಗಿಡ ನೆಟ್ಟು ನೀರು ಹಾಕಬೇಕು ಅನಿಸುತ್ತದೆ. ಅಂಥ ತೀಕ್ಷ್ಣ ಪರಿಣಾಮವನ್ನು ಬೀರುವ ಸಿನಿಮಾ ಅದು. 

***

‘ಸದಭಿರುಚಿಯ, ಗುಣಮಟ್ಟದ ಸಿನಿಮಾಗಳನ್ನು ಮಾಡಿದರೆ ಯಾರ್ರೀ ನೋಡ್ತಾರೆ?’ ಎನ್ನುವ ಗೊಣಗಾಟವನ್ನು ಹಲವು ವರ್ಷಗಳಿಂದ ಕೇಳಿಸಿಕೊಳ್ಳುತ್ತಲೇ ಇದ್ದೇವೆ. ‘ಸಿನಿಮಾ ಮನರಂಜನೆಗಷ್ಟೇ ಅಲ್ಲ, ಸಮಾಜದ ಒಳಿತಿಗಾಗಿ ಇರುವ ಆಯುಧವೂ ಹೌದು’ ಎಂದು ಕಾನ್ಸ್‌ ಚಿತ್ರೋತ್ಸವಕ್ಕೆ ಬಂದ ಪ್ರತಿಯೊಬ್ಬ ಕಲಾವಿದರೂ ತಮ್ಮ ಚಿತ್ರಗಳ ಮೂಲಕ ಮನದಟ್ಟು ಮಾಡುತ್ತಲೇ ಇದ್ದಾರೆ. ಕ್ಯೂಬಾ, ಥಾಯ್ಲೆಂಡ್‌, ಇರಾನ್‌, ನೈಜೀರಿಯಾಗಳಂಥ ಸಣ್ಣ ಸಣ್ಣ ನಾಡುಗಳ ಕಲಾವಿದರು ತಮ್ಮ ನಾಡಿನ ಸಂಸ್ಕೃತಿಯನ್ನೂ, ಸೌಂದರ್ಯವನ್ನೂ, ಹೆಮ್ಮೆಯನ್ನೂ, ಸಂಕಷ್ಟಗಳನ್ನೂ ಸಿನಿಮಾ ಆಗಿಸಿ ಇದು ನನ್ನ ನಾಡು ಎಂದು ತೋರಿಸುತ್ತಾರೆ. ಪ್ರಪಂಚದ ಭೂಪಟದಲ್ಲಿ ಬೆಳ್ಳುಳ್ಳಿಯ ಹೋಳಿನಷ್ಟು ಇರುವ ನಾಡುಗಳ ಮುಂದೆ ದೊಡ್ಡ ಈರುಳ್ಳಿಯಂತಿರುವ ನಾವು ಎಷ್ಟು ಬಾರಿ ಸಿಪ್ಪೆ ಸುಲಿದರೂ ಏನೂ ಇಲ್ಲದೆ ಇದ್ದೇವೆ.

ಸಿನಿಮಾ ಆ ನಾಡುಗಳಲ್ಲಿ ಕಲೆಯಾಗಿಯೂ ಆಯುಧವಾಗಿಯೂ ಇರುವಾಗ ನಮಗೆ ಏಕೆ ಕೇವಲ ವ್ಯಾಪಾರವಾಗಿ ಉಳಿದುಬಿಟ್ಟಿದೆ ಎಂದು ಆತಂಕವಾಗುತ್ತಿದೆ. ಕರ್ನಾಟಕದಿಂದ ಕಾನ್ಸ್‌ ಚಿತ್ರೋತ್ಸವಕ್ಕೆ ಹೋಗುವವರ ಸಂಖ್ಯೆ ಬೆರಳೆಣಿಕೆಯಷ್ಟೆ. ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೂ, ಅಲ್ಲಿ ಅಂಗೀಕಾರ ಪಡೆಯುವುದಕ್ಕೂ ನಾವು ನಮ್ಮ ದೊಡ್ಡ ದೊಡ್ಡ ಜಾಂಬವಂತರನ್ನೇ ನಂಬಿಕೊಂಡಿದ್ದೇವೆ. ಆದರೆ ಇರಾನ್‌ ದೇಶದಿಂದ ಇಪ್ಪತ್ತು ಇಪ್ಪತ್ತೆರಡರ ಹರೆಯದ ಯುವಕರು ಡಾಕ್ಯೂಮೆಂಟರಿ ಸಿನಿಮಾಗಳ ನಿರ್ದೇಶಕರಾಗಿ ಬಂದು ಇಳಿಯುತ್ತಾರೆ. ಬಹಳಷ್ಟು ಸಿನಿಮಾಗಳ ಅವಧಿ ಒಂದು ಗಂಟೆಯೂ ಇರುವುದಿಲ್ಲ. ಇಪ್ಪತ್ತು ನಿಮಿಷಗಳಲ್ಲಿಯೇ ಮುಗಿದುಹೋಗುವ ಅದ್ಭುತ ಸಿನಿಮಾಗಳು ಬಹಳ. ಕೆಲವೇ ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಸಿನಿಮಾ ಮಾಡಿ ಗಂಭೀರವಾಗಿ ಕಾನ್ಸ್‌ನಲ್ಲಿ ಬಂದು ನಿಲ್ಲುತ್ತಾರೆ. 

ಇಲ್ಲಿ ನಾವು ಬಜೆಟ್‌ ಸಿನಿಮಾ ತೆಗೆಯಲು ಕೋಟಿಗಳಲ್ಲಿ ಲೆಕ್ಕಿಸುತ್ತೇವೆ. ಕಥೆಯನ್ನು ನಂಬಿ ಸಿನಿಮಾ ತೆಗೆಯದೆ, ತೊಗಲನ್ನು ನಂಬಿ, ಹಿಂಸೆಯನ್ನು ನಂಬಿ ಸಿನಿಮಾ ತೆಗೆದು ಇದುವೇ ಬ್ಯುಸಿನೆಸ್‌ ಫಾರ್ಮುಲಾ ಎನ್ನುತ್ತ ನಮ್ಮನ್ನು ನಾವೇ ಮೋಸಗೊಳಿಸಿಕೊಳ್ಳುತ್ತ ಬಂದಿದ್ದೇವೆ. ನಮಗಿಂತ ಮೋಸದ ಸಿನಿಮಾ ತಯಾರಿಸುವ ಹಿಂದಿ ಚಿತ್ರರಂಗಕ್ಕೆ ಚಿತ್ರಗಳಿಗೆ ಅಂತರರಾಷ್ಟ್ರೀಯ ಅಂಗೀಕಾರ ಸಿಕ್ಕಾಗಿದೆ. ಭಾರತೀಯ ಸಿನಿಮಾ ಎಂದರೆ ಹಿಂದಿ ಸಿನಿಮಾ ಎಂಬ ದೃಷ್ಟಿಕೋನವನ್ನು ಬದಲಾಯಿಸಬೇಕೆಂದಿದ್ದರೆ ಪ್ರತಿಯೊಂದು ಭಾಷೆಗೂ ತನ್ನದೇ ಆದ ವೇದಿಕೆ ಸಜ್ಜಾಗಬೇಕು. ದೆಹಲಿಯ ಚಳಿಯಷ್ಟೇ ಭಾರತವಲ್ಲ; ನಮ್ಮ ಊರಿನ ಬಿಸಿಲೂ ಭಾರತವೇ. ನಮ್ಮ ಜನಪದ ಹಾಡುಗಳನ್ನು, ಕಥೆಗಳನ್ನು, ನಮ್ಮ ಗ್ರಾಮೀಣ ಬದುಕನ್ನೂ, ನಮ್ಮ ಇಂದಿನ ಪಟ್ಟಣದ ಗ್ರಹಿಕೆಯನ್ನೂ, ನಮ್ಮ ಕಲೆಗಳನ್ನು ಸಿನಿಮಾಗಳ ಮೂಲಕ ತಲುಪಿಸಿದಾಗಲೇ ನಾವು ನಮ್ಮದೇ ಆದ ಛಾಪನ್ನು ಮೂಡಿಸಲು ಸಾಧ್ಯ. 

ಗೋದಿ ಬಣ್ಣ ಸಾಧಾರಣ ಮೈಕಟ್ಟು, ಲೂಸಿಯಾ, ರಾಮಾ ರಾಮಾ ರೇ, ಹೀಗೆ ಕಥೆಯನ್ನು ನಂಬಿ ಸಿನಿಮಾ ತೆಗೆದರೆ ಯಶಸ್ಸು ಕಾಣಬಹುದು ಎಂದು ನಿರೂಪಿಸಿದ ಕಲಾವಿದರನ್ನು ಕಾನ್ಸ್‌ನಂಥ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಕರೆದುಕೊಂಡು ಹೋಗಿ ‘ಪ್ರಪಂಚದಾದ್ಯಂತ ಇರುವ ನಿಮ್ಮ ಸಮಕಾಲೀನ ಕಲಾವಿದರು ಹೇಗೆಲ್ಲ ಚಿಂತಿಸುತ್ತಿದ್ದಾರೆ ಎಂಬುದನ್ನು ನೋಡಿ’ ಎಂದು ಹೇಳಬೇಕು. ಅಲ್ಲಿ ಹೋಗಿ ಬಂದಾಗಲೇ ‘ಛೇ, ನಮ್ಮಲ್ಲಿಯೇ ಎಷ್ಟೆಲ್ಲ ಒಳ್ಳೆಯ ಕಥೆಗಳಿವೆಯಲ್ಲಾ’ ಎಂದು ಅರಿವಾಗುತ್ತದೆ. 

ಆಯಾ ವರ್ಷ ಬಿಡುಗಡೆಯಾದ ಒಳ್ಳೆಯ ಚಿತ್ರಗಳನ್ನೂ, ಚಿತ್ರಿಸಿದ ಕಲಾವಿದರನ್ನೂ, ಈ ರೀತಿಯ ಚಿತ್ರೋತ್ಸವಕ್ಕೆ ಕರೆದುಕೊಂಡು ಹೋಗಲು ನಮ್ಮ ಕನ್ನಡದ ಪ್ರಬಲ ನಿರ್ಮಾಪಕರು, ನಿರ್ದೇಶಕರು, ನಟರು ಮುಂದೆ ಬರಬೇಕು. ಹಾಗೆ ಕನ್ನಡ ಸಿನಿಮಾದ ಕುಟುಂಬವೊಂದು ಇಂಥ ಚಿತ್ರೋತ್ಸವಕ್ಕೆ ಹೊರಟು, ಜತೆಗೆ ಒಂದು ಟಿ.ವಿ. ಯೂನಿಟ್‌ ಅನ್ನು, ಕೆಲವು ಪತ್ರಕರ್ತರನ್ನೂ ಕಳುಹಿಸಿದರೆ ಹಲವು ಎಪಿಸೋಡ್‌ಗಳ ಸೂಪರ್‌ ಟಿ.ವಿ. ಕಾರ್ಯಕ್ರಮ ತಯಾರ್‌. ಸ್ಟಾರ್‌ ಮೀಟ್‌ಗಳಿಗೆಲ್ಲ ಪ್ರಾಯೋಜಕರು ಸಿಗುವಾಗ ಇಂಥ ಕಾರ್ಯಗಳಿಗೂ ಖಂಡಿತ ಪ್ರಾಯೋಜಕರು ಸಿಗುತ್ತಾರೆ.

ಗುಣಮಟ್ಟದ ಸಿನಿಮಾಗಳನ್ನು ಮಾಡಬೇಕು ಎಂದು ಯೋಚಿಸುವ ಒಳ್ಳೆಯ ಕಲಾವಿದರಿಗೆ ಸಿಗುವ ಮನ್ನಣೆಯಾಗಿ, ಹುರಿದುಂಬಿಸುವ ಕಾರ್ಯಕ್ರಮವಾಗಿ ಇದನ್ನು ನಾವು ಬದಲಾಯಿಸಿಕೊಳ್ಳಬಹುದು. ಡಾಕ್ಯೂಮೆಂಟರಿ ಸಿನಿಮಾಗಳಿಗೆ ಒಂದು ಸ್ಪರ್ಧೆಯನ್ನಿಟ್ಟು, ಅವಕಾಶ ದೊರೆತರೆ ಪರಿಚಯವೇ ಆಗದ ಎಷ್ಟೋ ಯುವ ಪ್ರತಿಭೆಗಳನ್ನು ಹೊರತೆಗೆಯುವ ಯತ್ನವನ್ನೂ ಮಾಡಬೇಕು. 

ಕನ್ನಡ ಚಿತ್ರರಂಗದ ಹತ್ತು ಗೌರವಾನ್ವಿತ ಪ್ರಮುಖರು ಉತ್ತಮ ಅಭಿರುಚಿಯ ಮುಂದಿನ ತಲೆಮಾರನ್ನು ರೂಪಿಸಬಹುದು.ಇಂಥ ಒಳ್ಳೆಯ ಪ್ರಯತ್ನಕ್ಕೆ ಸರ್ಕಾರದ ಸಹಾಯವನ್ನೂ ಪಡೆದುಕೊಳ್ಳಬಹುದು. ನಾಲ್ಕು ಕೈಗಳು ಒಂದಾಗಿ ಸೇರಬೇಕು ಅಷ್ಟೆ. ಇದು ಸಾಧ್ಯವಾದರೆ ಎಲ್ಲ ಕನಸುಗಳನ್ನೂ ನನಸಾಗಿಸಬಹುದು. ಕೆಲವೇ ತಾಸಿನ ಮನರಂಜನೆಗೆ ಸ್ಟಾರ್‌ನೈಟ್‌ ನಡೆಸಿ ಐವತ್ತು ಲಕ್ಷದಿಂದ ಕೋಟಿ ರೂಪಾಯಿಗಳನ್ನು ಸುಲಭವಾಗಿ ಸಂಪಾದಿಸಬಹುದಾದ ಚಿತ್ರರಂಗ, ಇಪ್ಪತ್ತೈದು ಲಕ್ಷಗಳನ್ನು ಖರ್ಚು ಮಾಡಿದರೆ ಇಪ್ಪತ್ತೈದು ಪ್ರತಿಭೆಗಳನ್ನು ಆಯ್ಕೆ ಮಾಡಿ ಅಂತರರಾಷ್ಟ್ರೀಯ ಚಿತ್ರಸಂತೆಗಳಿಗೆ ಕಳುಹಿಸಬಹುದು. 

ಎಲ್ಲವೂ ಸರಿ, ಆದರೆ ಇದನ್ನೆಲ್ಲ ಮಾಡುವವರು ಯಾರು? ಊರು ಸೇರಿ ತೇರೆಳೆಯಬೇಕು. ನಾನು ತಯಾರ್‌!

ಬರಹ ಇಷ್ಟವಾಯಿತೆ?

 • 31

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !