ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಿಂಸೆಯೇ ಧರ್ಮಮಾರ್ಗ

Beragina belaku
Last Updated 21 ಅಕ್ಟೋಬರ್ 2018, 20:17 IST
ಅಕ್ಷರ ಗಾತ್ರ

ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯವಾಳುತ್ತಿದ್ದಾಗ ಬೋಧಿಸತ್ವ ಬ್ರಾಹ್ಮಣನಾಗಿ ಹುಟ್ಟಿ, ಧರ್ಮಮಾರ್ಗದಲ್ಲಿ ನಡೆದು ಪಬ್ಬಜಿತನಾದ. ಹಿಮಾಲಯಲದಲ್ಲಿ ಧ್ಯಾನಮಗ್ನನಾಗಿ ಕುಳಿತು ಬಿಟ್ಟಿದ್ದ. ಒಂದು ದಿನ ರಾಜ ಬ್ರಹ್ಮದತ್ತನಿಗೆ ಬೆಳಗಿನ ಜಾವದಲ್ಲಿ ಹದಿನಾರು ಕನಸುಗಳು ಬಿದ್ದುವಂತೆ. ಆತ ತುಂಬ ವ್ಯಾಕುಲನಾಗಿ ಪುರೋಹಿತರ ಮುಂದೆ ಕನಸುಗಳನ್ನು ಹೇಳಿಕೊಂಡು ಅವುಗಳ ಫಲವೇನು ಎಂದು ಕೇಳಿದ. ಹಿರಿಯ ಪುರೋಹಿತರು ಮನಸ್ಸಿಗೆ ತುಂಬ ನೋವಾದವರಂತೆ ನಟಿಸಿ, ‘ಮಹಾಪ್ರಭು, ಈ ಕನಸುಗಳು ಒಳ್ಳೆಯವಲ್ಲ. ಇವುಗಳಿಂದ ರಾಜ್ಯಕ್ಕೆ ಅಪಾಯವಿದೆ, ತಮ್ಮ ಜೀವಕ್ಕೆ ಅಪಾಯವಿದೆ, ಭೋಗ ಸಂಪತ್ತಿಗೆ ಅಪಾಯವಿದೆ’ ಎಂದರು.

ರಾಜ ಗಾಬರಿಯಾಗಿ, ‘ಇದಕ್ಕೆ ಏನಾದರೂ ಪರಿಹಾರವಿದೆಯೇ?’ ಎಂದು ಕೇಳಿದ. ‘ಅವಶ್ಯ ಇದೆ ಮಹಾರಾಜಾ, ಹಲವಾರು ಯಜ್ಞಗಳನ್ನು ಮಾಡುತ್ತೇವೆ. ಅದರಿಂದ ತಮಗೆ ಅಪಾಯವಾಗದಂತೆ ನೋಡಿಕೊಳ್ಳುತ್ತೇವೆ’ ಎಂದರವರು. ಅವರ ಯಜ್ಞಗಳಿಗೆ ಯಾವುದೂ ಕಡಿಮೆಯಾಗಲಾರದಂತೆ ನೋಡಿಕೊಳ್ಳಬೇಕೆಂದು ರಾಜ ಆಜ್ಞೆ ಮಾಡಿದ.

ಈಗ ಈ ವ್ಯವಸ್ಥೆಯಿಂದ ಬೇಕಾದಷ್ಟು ಹಣ, ವಸ್ತುಗಳು ದೊರೆಯುತ್ತವೆಂದು ಪುರೋಹಿತರು ತಮ್ಮ ಬೇಡಿಕೆಗಳ ಪಟ್ಟಿಯನ್ನು ಹಿಗ್ಗಿಸುತ್ತಲೇ ಹೋದರು. ಯಜ್ಞಕ್ಕೆಂದು ಅಸಂಖ್ಯ ಪಶುಗಳನ್ನು, ಪಕ್ಷಿಗಳನ್ನು ತರಿಸಿ ಕಟ್ಟಿಸಿದರು. ಪುರೋಹಿತರ ಗುಂಪಿನಲ್ಲಿದ್ದ ಒಬ್ಬ ತರುಣ, ಆತ ನೇರವಾದಿ ಮತ್ತು ಬುದ್ಧಿವಂತ, ಬಂದು ಅವರನ್ನೆಲ್ಲ ಕೇಳಿದ, ‘ನಾನೂ ತಮ್ಮಿಂದ ವೇದಗಳನ್ನು ಕಲಿತಿದ್ದೇನೆ. ಅವುಗಳಲ್ಲಿ ಎಲ್ಲಿಯೂ ಒಬ್ಬರನ್ನು ಸುಖಿಯಾಗಿಸಲು ಮತ್ತೊಬ್ಬರನ್ನು ಕೊಲ್ಲಲು ಹೇಳಿಲ್ಲವಲ್ಲ? ನೀವು ಯಾಕೆ ಇಷ್ಟೊಂದು ಪ್ರಾಣಿಹಿಂಸೆ ಮಾಡುತ್ತಿದ್ದೀರಿ?’. ಪುರೋಹಿತರು, ‘ನಿನಗೆ ಇದು ಅರ್ಥವಾಗುವುದಿಲ್ಲ. ನಮಗೆ ಅನಾಯಾಸವಾಗಿ ಹಣ ಮಾಡಲು ಇದೇ ಸರಿಯಾದ ಉಪಾಯ’ ಎಂದರು.

ಒಂದು ದಿನ ರಾಣಿ ಮಲ್ಲಿಕಾದೇವಿ ಈ ಯಜ್ಞದ ಗಡಿಬಿಡಿ, ಜನರ ಓಡಾಟ. ವಿಪರೀತವಾದ ಖರ್ಚು ಇವುಗಳನ್ನು ಗಮನಿಸಿ ರಾಜನಿಗೆ ಕೇಳಿದಳು, ‘ರಾಜಾ, ಈ ಯಜ್ಞ ಅವಶ್ಯಕವೇ? ನೀವು ಕೇಳಿದ್ದು ಕೇವಲ ಪುರೋಹಿತರನ್ನು ಮಾತ್ರವಲ್ಲವೇ? ದಯವಿಟ್ಟು ಬೋಧಿಸತ್ವರನ್ನೂ ಕೇಳಿನೋಡಿ’. ರಾಜ ಅಪೇಕ್ಷೆಪಟ್ಟಂತೆ ಬೋಧಿಸತ್ವ ರಾಜನ ತೋಟಕ್ಕೆ ಇಳಿದುಬಂದ. ರಾಜ ಅವನಿಗೆ ತನ್ನ ಕನಸುಗಳನ್ನು ವಿಸ್ತಾರವಾಗಿ ಹೇಳಿ, ತನ್ನ ಚಿಂತೆಗೆ ಪರಿಹಾರವಾಗಿ ಪುರೋಹಿತರು ಮಾಡುತ್ತಿರುವ ಯಜ್ಞದ ಬಗ್ಗೆ ವರ್ಣನೆ ಮಾಡಿದ. ತಾನು ಮಾಡುತ್ತಿರುವುದು ಸರಿಯೇ? ಎಂದು ಪ್ರಶ್ನಿಸಿದ. ಆಗ ಬೋಧಿಸತ್ವ ಕನಸಿನ ಫಲಗಳನ್ನು ವಿವರಿಸಿ ಅವುಗಳಿಂದ ಯಾವ ಅಪಾಯವೂ ಇಲ್ಲವೆಂದು ತಿಳಿಸಿದ. ಕನಸಿನಲ್ಲಿ ಬಂದದ್ದಕ್ಕೆ ಹಿಂಸೆ ಉಪಾಯವಲ್ಲ. ಎಲ್ಲ ಪ್ರಾಣಿಗಳಿಗೂ ಬಿಡುಗಡೆ ಮಾಡಿಸಿ ಬಿಡು. ಧರ್ಮಕಾರ್ಯದಲ್ಲಿ ಹಿಂಸೆಗೆ ಸ್ಥಾನವಿಲ್ಲ ಎಂದು ಬೋಧನೆ ಮಾಡಿ ಮರಳಿ ಹೋಗಿಬಿಟ್ಟ. ರಾಜ ಬೋಧಿಸತ್ವನ ಉಪದೇಶದಂತೆಯೇ ನಡೆದು ದಾನಧರ್ಮಗಳನ್ನು ಮಾಡಿ ಮನಃಶ್ಯಾಂತಿಯನ್ನು ಪಡೆದ.

ಬುದ್ಧ ಹೇಳಿದ, ‘ಧರ್ಮಮಾರ್ಗದಲ್ಲಿ ಆಸಕ್ತರಾದ ಯಾರೂ ಹಿಂಸೆಯನ್ನು ಮಾಡಬಾರದು. ಹಿಂಸೆ ಧರ್ಮಕ್ಕೆ ವಿರೋಧವಾದದ್ದು. ಧರ್ಮಕಾರ್ಯವನ್ನು ಹಣಗಳಿಕೆಯ ಉದ್ಯೋಗವನ್ನಾಗಿ ಮಾಡಿಕೊಳ್ಳುವುದು ಆತ್ಮಘಾತಕವಾದ ಕೆಲಸ’, ಈ ಮಾತು ಇಂದಿಗೂ ನಮ್ಮ ಹೃದಯದಲ್ಲಿ ಸ್ಥಾಯಿಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT