ಶತಮಾನದ ನಾಯಕನಿಗೊಂದು ನಮನ

7

ಶತಮಾನದ ನಾಯಕನಿಗೊಂದು ನಮನ

ಪ್ರಕಾಶ್ ರೈ
Published:
Updated:
Deccan Herald

ಚೆನ್ನೈ. ದಕ್ಷಿಣ ಭಾರತದ ಸಿನಿಮಾ ರಾಜಧಾನಿ. ದಶಕಗಳ ಹಿಂದೆ ನಟನಾಗಿ ನಾನು ಅಲ್ಲಿ ಕಾಲಿಟ್ಟಮೇಲೆ, ದಕ್ಷಿಣಭಾರತದ ನಟನಾಗಿದ್ದ ನಾನು ‘ಇರುವರ್‌’ ಚಿತ್ರದಿಂದಾಗಿ ರಾಷ್ಟ್ರಮಟ್ಟದಲ್ಲಿ ಗುರ್ತಿಸಲ್ಪಟ್ಟದ್ದು ಮಾತ್ರವಲ್ಲ, ಇಂದಿನವರೆಗೂ ಅದುವೇ ನನ್ನ ಪರಿಚಯವಾಗಿ ಉಳಿದಿದೆ.

ತಮಿಳು ಚಿತ್ರರಂಗಕ್ಕೆ ಬಂದು ಕೆಲವೇ ಚಿತ್ರಗಳಲ್ಲಿ ನಟಿಸುತ್ತಿದ್ದ ಕಾಲಘಟ್ಟವದು. ತಮಿಳುನಾಡಾಗಲಿ, ತಮಿಳುಭಾಷೆಯಾಗಲಿ ಇನ್ನೂ ಅಷ್ಟಾಗಿ ಪರಿಚಯವಾಗಿರಲಿಲ್ಲ. ಭಾರತದ ಚಿತ್ರರಂಗವನ್ನೇ ತನ್ನತ್ತ ಸೆಳೆದಿದ್ದ ಮಣಿರತ್ನಂ ಅವರು ‘ಇರುವರ್‌’ ಚಿತ್ರದ
ಪಾತ್ರವೊಂದಕ್ಕೆ ಆಡಿಷನ್‌ಗೆ ಕರೆದಿದ್ದರು. ಕಲೈಂಜರ್‌ ಕರುಣಾನಿಧಿ ಅವರನ್ನು ಪ್ರತಿಫಲಿಸುವ ಪಾತ್ರವೊಂದಕ್ಕೆ ನಟನಾಗಿ ನನ್ನನ್ನು ಕಂಡುಕೊಂಡಿದ್ದಾರೆಂದು ಅಂದು ನನಗೆ ಗೊತ್ತಿರಲಿಲ್ಲ.

ಇನ್ನೂ ಹೇಳುವುದಾದರೆ ಕಲೈಂಜರ್‌ ಒಬ್ಬ ರಾಜಕೀಯ ನಾಯಕ ಎನ್ನುವುದನ್ನು ಬಿಟ್ಟರೆ ಅವರ ಬಗ್ಗೆ ಇನ್ನೂ ಹೆಚ್ಚು ತಿಳಿದಿರಲಿಲ್ಲ. ನನ್ನ ಮಾತೃಭಾಷೆ ಕನ್ನಡದಲ್ಲಿ ತಮಿಳಿನ ಸಂಭಾಷಣೆಗಳನ್ನು ಬರೆದುಕೊಂಡು ಬಾಯಿಪಾಠ ಮಾಡಿ ನಟಿಸುತ್ತಿದ್ದ ನನಗೆ ಕಲೈಂಜರ್‌ ಅವರ ತಮಿಳನ್ನು ಮಾತನಾಡಿ ನಟಿಸಬೇಕಾದ ಇಕ್ಕಟ್ಟಿನ ಪರಿಸ್ಥಿತಿ.

ನನ್ನ ತಮಿಳುಜ್ಞಾನವನ್ನು ಕಂಡ ಮಣಿರತ್ನಂ ಬೇರೆ ನಟರನ್ನು ಆ ಪಾತ್ರಕ್ಕೆ ಹುಡುಕುತ್ತಿದ್ದರು. ತಮಿಳು ಭಾಷೆಯು ಉಚ್ಚರಣೆಯೂ ತಮಿಳುತನವೂ ಹೊರಹೊಮ್ಮದೇ ಅಂಥ ಪಾತ್ರವನ್ನು ನಟಿಸಲು ಸಾಧ್ಯವೇ ಇಲ್ಲ. ತಮಿಳುನಾಡಿನ ಮೂರು ದಶಕಗಳ ಇತಿಹಾಸವನ್ನು ಪ್ರತಿಫಲಿಸುವ ಎರಡು ಪಾತ್ರಗಳಲ್ಲಿ ಒಂದು ಪಾತ್ರವಾಗಿ ನಟಿಸುವ ಅಂಥ ಅದ್ಭುತ ಅವಕಾಶವನ್ನು ಕಳೆದುಕೊಳ್ಳಲೇಬಾರದು ಎಂದು ಮನಸ್ಸು ಹೇಳುತ್ತಿದೆ. ಆದರೆ ಅದು ತಮಿಳುನಾಡಿನಲ್ಲಿಯೇ ಹುಟ್ಟಿ ಬೆಳೆದ ನಟರಿಗೂ ಸವಾಲು ಹುಟ್ಟಿಸುವಂಥ ಕಥಾಪಾತ್ರ.

ಇದಕ್ಕೆ ಮುಂಚೆ ಕಲೈಂಜರ್‌ ಅವರು ಬರೆದಿದ್ದ ತಮಿಳನ್ನು ಯಾರೆಲ್ಲ ಸಂಭಾಷಿಸಿ ನಟಿಸಿ ಸೈ ಎನಿಸಿಕೊಂಡಿದ್ದಾರೆಂದು ಹುಡುಕಿದರೆ ನಡಿಗರ್ ತಿಲಕನ್, ಶಿವಾಜಿ ಗಣೇಶನ್ ಅವರ ಹೆಸರು ಕೇಳಿಬರುತ್ತದೆ. ಅವರ ಮೊದಲ ಚಿತ್ರ ‘ಪರಾಶಕ್ತಿ’ಗೆ ಕಲೈಂಜರ್‌ ಸಂಭಾಷಣೆ ಬರೆದಿದ್ದರು. ಆ ಚಿತ್ರವನ್ನು ನೋಡಿದಾಗ ಕಲೈಂಜರ್‌ ತಮಿಳು ನನ್ನಲ್ಲಿ ಅಂಜಿಕೆಯನ್ನು ಉಂಟುಮಾಡಲಿಲ್ಲ.

ಅದಕ್ಕೆ ಬದಲಾಗಿ ನಂಬಿಕೆಯನ್ನು ಹುಟ್ಟಿಸಿತು. ಕಲೈಂಜರ್‌ ಅವರ ‘ಸಂಗ ತಮಿಳ್’ ಎನ್ನುವ ಪುಸ್ತಕದಿಂದ ‘ಪುರ ನಾನುಟ್ರು’ ಕವಿತೆಯೊಂದನ್ನು ತೆಗೆದು ಉಚ್ಚರಿಸುತ್ತ ತಾಲೀಮು ಮಾಡಿದೆ. ನಾನು ತಮಿಳು ಕಲಿತುಕೊಳ್ಳಲು ಆರಂಭಿಸಿದ್ದೇ ಅಲ್ಲಿಂದ. ತಮಿಳು ಕಲಿತುಕೊಳ್ಳುವುದು ಎಂದರೆ ಕೇವಲ ವಾಕ್ಯಗಳ ಮೂಲಕ ಅಲ್ಲ. ಕಲೈಂಜರ್‌ ಅವರ ತಮಿಳಿನಲ್ಲಿ ಇತಿಹಾಸವಿತ್ತು, ವಿಚಾರಗಳಿದ್ದವು, ಸಂಸ್ಕೃತಿ ಇತ್ತು, ಸ್ವಾಭಿಮಾನ ಇತ್ತು. ಇವೆಲ್ಲವನ್ನೂ ಕಲಿತರೆ ಮಾತ್ರ ಆ ಭಾಷೆಯನ್ನು ಕಲಿತಂತೆ ಎನ್ನುವಂತಿತ್ತು. ಕಲೈಂಜರ್‌ ಅವರ ತಮಿಳನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಅದರ ಆಳವನ್ನು ಮನದಟ್ಟು ಮಾಡಿಕೊಂಡಾಗ ಮಾತ್ರ ಸರಿಯಾಗಿ ಮಾತನಾಡಲು ಸಾಧ್ಯವಿತ್ತು.

ಕೊನೆಗೂ ಮಣಿರತ್ನಂ ಅವರ ‘ಇರುವರ್‌’ನಲ್ಲಿ ನಾನು ನಟಿಸುವುದು ಖಾತ್ರಿಯಾಯಿತು. ನನ್ನ ಕಲೈಂಜರ್‌ ಕರುಣಾನಿಧಿ ಅವರ ನಡುವಿನ ಮಾನಸಿಕ ಪರಿಚಯ ಶುರುವಾಗಿದ್ದು ಹೀಗೆ. ಒಬ್ಬ ನಾಯಕನ ಕಾಯಕವೂ ಯೋಚನೆಯೂ ಹೇಗಿರಬೇಕು ಎಂದು ಮನಗಾಣತೊಡಗಿದೆ. ಅವರ ಸಾಹಿತ್ಯದ ತಮಿಳಿನಲ್ಲಿ ತಂಗಾಳಿಯಿತ್ತು. ರಾಜಕೀಯ ತಮಿಳಿನಲ್ಲಿ ಚಂಡಮಾರುತವಿತ್ತು. ತಂಗಾಳಿಯಲ್ಲಿ ಮೈಮರೆಯುತ್ತ, ಚಂಡಮಾರುತವನ್ನು ಎದುರಿಸುತ್ತ ಇರುವರ್ ಚಿತ್ರದ ಕಥಾಪಾತ್ರವನ್ನು ನಟಿಸುತ್ತಿದ್ದೆ. ‘ಆನಂದನ್’ ಎಂದು ಮೊದಲು ಹೆಸರಿಟ್ಟಿದ್ದ ಆ ಚಿತ್ರ ಇರುವರ್ (ಇಬ್ಬರು) ಎಂದು ಹೆಸರು ಬದಲಾಯಿಸಿಕೊಂಡಿದ್ದ ಸಮಯವದು.

ಎಂಜಿಆರ್‌, ಕಲೈಂಜರ್‌ ಕರುಣಾನಿಧಿ ಅವರ ಬದುಕಿನ ಬಗೆಗಿನ ಚಿತ್ರವಿದು ಎಂದು ಎಲ್ಲರಲ್ಲಿ ಕುತೂಹಲ, ಕಾತರವನ್ನು ಹುಟ್ಟಿಸಿತ್ತು.

ಆ ಸಮಯದಲ್ಲಿಯೇ ಕೆ. ಬಾಲಚಂದರ್ ಅವರ ‘ಕಲ್ಕಿ’ ಚಿತ್ರಕ್ಕೆ, ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ಅವರ ಕೈಯಿಂದ ರಾಜ್ಯಪ್ರಶಸ್ತಿ ಪಡೆದುಕೊಳ್ಳುವ ಅವಕಾಶ ಒದಗಿಬಂತು. ‘ಇರುವರ್’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದರೂ ಆ ಕ್ಷಣದವರೆಗೆ ಕಲೈಂಜರ್‌ ಕರುಣಾನಿಧಿ ಅವರನ್ನು ನಾನು ನೇರವಾಗಿ ಭೇಟಿಯಾಗಿರಲಿಲ್ಲ. ಮೊದಲ ಭೇಟಿ ಆ ವೇದಿಕೆಯಲ್ಲಿ. ಆಗ ಅವರ ವಯಸ್ಸು 74. ನನಗೆ 31. ನಾನು ಪ್ರಶಸ್ತಿಯನ್ನು ಸ್ವೀಕರಿಸಲು ವೇದಿಕೆಯೇರುತ್ತಿದ್ದಂತೆಯೇ ನೆರೆದಿದ್ದ ಸಭಿಕರಲ್ಲಿ ಒಂದು ರೀತಿಯ ಉತ್ಸಾಹ.

ಪ್ರಶಸ್ತಿ ಪ್ರದಾನ ಸಮಾರಂಭದ ಮುಕ್ತಾಯದಲ್ಲಿ ಕರುಣಾನಿಧಿ ಅವರ ಭಾಷಣ. ಅಂದು ಅವರು ಮಾತನಾಡುತ್ತ ‘ಪ್ರಕಾಶ್ ರಾಜ್ ಅವರಿಗೆ ಪ್ರಶಸ್ತಿ ಕೊಡುವಾಗ ಸಭಾಂಗಣದಲ್ಲಿ ಒಂದು ರೀತಿಯ ಉತ್ಸಾಹವನ್ನೂ ಆನಂದವನ್ನೂ ಗಮನಿಸಿದೆ. ಅದಕ್ಕೆ ಕಾರಣ ಏನೆಂದು ನನಗೂ ಗೊತ್ತು ಅವರಿಗೂ ಗೊತ್ತು. ನಮ್ಮಿಬ್ಬರಿಗೂ (ಇರುವರ್‌) ಗೊತ್ತು’ ಎಂದಾಗ ಇಡೀ ಸಭಾಂಗಣವೇ ನಗೆಗಡಲಲ್ಲಿ ಮುಳುಗಿತ್ತು.

ಹೀಗೆ ನಮ್ಮಿಬ್ಬರ ಮೊದಲ ಭೇಟಿ ಆಪ್ಯಾಯವಾಗಿ ಆರಂಭವಾಯಿತು. ಆದರೆ ‘ಇರುವರ್’ ಸಿನಿಮಾ ಬಿಡುಗಡೆಯಾಗಿ ಆ ಪಾತ್ರದ ನಟನಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಮೇಲೆ ಅವರು ಮತ್ತೆ ನನ್ನನ್ನು ಕರೆದು ಮಾತನಾಡಿಸುವರೆಂದು ಕಾತರದಿಂದ ಕಾದಿದ್ದೆ. ಅವರ ಕರೆ ಬರಲಿಲ್ಲ. ಕಲೈಂಜರ್‌ ಕರುಣಾನಿಧಿ ಅವರ ತಮಿಳು ಮಾತನಾಡಿದ್ದರಿಂದ ನನಗೆ ರಾಷ್ಟ್ರಪ್ರಶಸ್ತಿ ದಕ್ಕಿದ್ದು. ಒಬ್ಬ ನಟನಾಗಿ ಇಡೀ ಭಾರತಕ್ಕೆ ಪರಿಚಯವಾದೆ. ಆದರೆ ತಮಿಳು ನಾಡಿನ ರಾಜ್ಯ ಪ್ರಶಸ್ತಿ ಸಿಗಲಿಲ್ಲ. ಯಾರ ತಮಿಳನ್ನು ಮಾತನಾಡಿದ್ದೆನೋ, ಯಾರ ಪಾತ್ರವನ್ನು ಮಾಡಿದ್ದೆನೋ ಅವರ ಕೈಗಳಿಂದಲೇ ಪ್ರಶಸ್ತಿಯನ್ನು ಎದುರು ನೋಡುತ್ತಿದ್ದ ನನಗೆ ನಿರಾಸೆಯೇ ಬಹುಮಾನವಾಗಿ ಸಿಕ್ಕಿತ್ತು.

ಆ ಹತಾಶೆಯಲ್ಲಿ ‘ರಾಜ್ಯಸರ್ಕಾರದ ಪ್ರಶಸ್ತಿಗಳು ರಾಜಕೀಯ ಪ್ರಶಸ್ತಿಗಳಾಗಿ ಹೋದವು’ ಎಂದು ಪತ್ರಿಕೆಯೊಂದರಲ್ಲಿ ಸಂದರ್ಶನ ನೀಡಿದ್ದೆ. ಆ ಮಾತುಗಳು ಅವರ ಮನಸ್ಸಿಗೆ ನೋವನ್ನುಂಟು ಮಾಡಿದವು. ಕೆಲವು ಆಪ್ತರು, ‘ಹೋಗಿ ಅವರನ್ನೊಮ್ಮೆ ಭೇಟಿಯಾಗು’ ಎಂದು ಒತ್ತಾಯಿಸಿದಾಗ ‘ನನ್ನ ನೋವಿನ ಮಾತುಗಳಲ್ಲಿನ ನ್ಯಾಯ ಅವರಿಗೆ ಗೊತ್ತಾಗಲಿ ಬಿಡಿ’ ಎಂದು ಭೇಟಿಯಾಗಲು ನಿರಾಕರಿಸಿದೆ.

ಮುಂದೆ ಪತ್ರಿಕೆಯೊಂದರ ಸಂದರ್ಶನದಲ್ಲಿ ತಮ್ಮದೇ ಧಾಟಿಯಲ್ಲಿ ಅವರು ಪ್ರತಿಕ್ರಿಯಿಸಿದಾಗ ನಾನು, ‘ಕಲಾವಿದನ ಕೋಪ ಮಕ್ಕಳ ಕೋಪ ಇದ್ದಂತೆ. ನಮ್ಮೆಲ್ಲರ ಹಿರಿಯ ಕಲಾವಿದ ಕಲೈಂಜರ್‌ಗೆ ಅದು ಅರ್ಥವಾಗುತ್ತದೆ’ ಎಂದು ಪ್ರತಿಕ್ರಿಯಿಸಿದೆ.

ನನ್ನ ಮಗ ಸಿದ್ಧಾರ್ಥ ತೀರಿ ಹೋದ ಸುದ್ದಿ ಕೇಳಿ ಸಾಂತ್ವನದ ಪತ್ರವನ್ನು ಬರೆದು ಕಳುಹಿಸಿದ್ದರು. ಆಗಲೂ ಆಪ್ತರು ಮತ್ತೊಮ್ಮೆ ನಾನು ಅವರನ್ನು ಸಂಧಿಸಬೇಕು ಎಂದು ಒತ್ತಾಯಿಸಿದರು. ಮಗನನ್ನು ಕಳೆದುಕೊಂಡ ಮನಸ್ಥಿತಿಯಲ್ಲಿ ಯಾಕೋ ಹೋಗಿ ನೋಡಬೇಕು ಅನಿಸಿರಲಿಲ್ಲ.

ಹೀಗೆ ಮುಂದುವರಿದಿತ್ತು ನಮ್ಮಿಬ್ಬರ ನಡುವಿನ ಮೌನ ಸಂಬಂಧ. ಒಮ್ಮೆ ಅವರ ಮಗಳಾದ ಕನಿಮೋಳಿ ಅವರು ತಮಿಳುನಾಡಿನ ಎಲ್ಲ ಕಲಾಪ್ರಕಾರಗಳ, ಕಲಾವಿದರನ್ನು ಒಂದೆಡೆ ಸೇರಿಸಿ ‘ಚೆನ್ನೈ ಸಂಗಮಂ’ ಎನ್ನುವ ಎರಡು ವಾರದ ಸಾಂಸ್ಕೃತಿಕ ಉತ್ಸವವನ್ನು ಏರ್ಪಡಿಸಿದ್ದರು. ಅದರ ಮುಕ್ತಾಯ ಸಮಾರಂಭದಲ್ಲಿ ಕಲೈಂಜರ್‌ ಕರುಣಾನಿಧಿ ಅವರ ‘ಪುರ ನಾನುಟ್ರು’ ಕೃತಿಯಿಂದ ಒಂದು ನೀಳ್ಗವಿತೆಯನ್ನು ನಾನು ವಾಚಿಸಿದರೆ ಚೆನ್ನಾಗಿರುತ್ತದೆಂದು ಕೇಳಿಕೊಂಡರು. ಅಂದಿನ ಮುಖ್ಯ ಅತಿಥಿ ಸ್ವತಃ ಮುಖ್ಯಮಂತ್ರಿ ಕಲೈಂಜರ್‌ ಕರುಣಾನಿಧಿ ಅವರೇ.

ಯಾರ ತಮಿಳನ್ನು ಮಾತನಾಡಲು ಕಲಿತು ‘ಇರುವರ್’ ಚಿತ್ರದ ಪಾತ್ರದಲ್ಲಿ ಸೈ ಎನಿಸಿಕೊಂಡಿದ್ದೆನೋ ಯಾರ ಕೈಯಿಂದ ನನಗೆ ಪ್ರಶಸ್ತಿ ಸಿಕ್ಕಲಿಲ್ಲವೆಂದು ಮುನಿಸಿಕೊಂಡೆನೋ ಅವರ ಮುಂದೆಯೇ ಮತ್ತೊಮ್ಮೆ ಅವರೇ ‘ಪುರ ನಾನುಟ್ರು’ವಿನ ಕವಿತೆಯೊಂದನ್ನು ವಾಚಿಸಬೇಕು. ಆ ದಿನವೂ ಬಂತು.

ಅಂದು ಕಾರ್ಯಕ್ರಮದ ಮುಕ್ತಾಯದಲ್ಲಿ ಕಲೈಂಜರ್‌ ಮಾತನಾಡುತ್ತ, ನಾನು ಇದನ್ನು ಬರೆದು ಶಿವಾಜಿ ಗಣೇಶನ್ ಅವರ ಧ್ವನಿಯಲ್ಲಿ ಕೇಳಬಯಸಿದ್ದೆ. ಇಂದು ಅವರಿಲ್ಲ. ಆದರೆ ಆ ಕೊರತೆಯನ್ನು ಪ್ರಕಾಶ್‌ ನೀಗಿಸಿದ್ದಾರೆ ಎಂದು ವೇದಿಕೆಯ ಮೇಲೆ ಬರಮಾಡಿಕೊಂಡು ‘ಹೇಗೆ ನಿಮಗೆ ಇಷ್ಟೊಂದು ಸುಂದರವಾಗಿ ತಮಿಳು ಮಾತನಾಡಲು ಸಾಧ್ಯವಾಯಿತು’ ಎಂದು ಕೇಳಿದರು. ನಾನು ‘ಧ್ವನಿ ಮಾತ್ರವೇ ನನ್ನದು; ಭಾವ ನಿಮ್ಮದು’ ಎಂದೆ. ಅಂದು ನಮ್ಮಿಬ್ಬರ ನಡುವಿನ ಮೌನ ಮುರಿಯಿತು. ಆ ನಂತರ ಹಲವು ಭೇಟಿಗಳು, ವಿಚಾರ ವಿನಿಮಯಗಳು... ಹೀಗೆ ಹತ್ತು ಹಲವು ನೆನಪುಗಳು, ಹಂಚಿಕೊಳ್ಳಲು ಇನ್ನೂ ಬಹಳಷ್ಟಿವೆ.

ಮೊನ್ನೆ ಆಸ್ಟ್ರೇಲಿಯಾದಲ್ಲಿದ್ದಾಗ ಅವರಿನ್ನಿಲ್ಲ ಎನ್ನುವ ಸುದ್ದಿ ತಲುಪಿತು. ಭಿನ್ನಾಭಿಪ್ರಾಯಗಳಿದ್ದರೂ ಪ್ರೀತಿಯನ್ನು ತೋರುವ ದೊಡ್ಡ ಮನಸ್ಸಿನವರ ಚಲನೆಯಿಲ್ಲದ ಮುಖವನ್ನು ಟೀವಿಯಲ್ಲಿ ನೋಡುತ್ತ ಮೌನವಾಗಿ ಕಣ್ಣೀರಿಟ್ಟೆ. ಗಾಂಧಿ ಎಂದರೆ ಅಹಿಂಸೆ ನೆನಪಾಗುವಂತೆ ಕಲೈಂಜರ್ ಎಂದರೆ ಸಾಮಾಜಿಕ ನ್ಯಾಯ ನೆನಪಿಗೆ ಬರುತ್ತದೆ. ಸ್ವಾಭಿಮಾನವುಳ್ಳ, ಸಮಾನ ಹಕ್ಕುಗಳು ಎಲ್ಲರಿಗೂ ಸಿಗಬೇಕು ಎಂಬ ಅವರ ಬದುಕಿನ ಹೋರಾಟ ಕಣ್ಣಮುಂದೆ ನಿಲ್ಲುತ್ತದೆ.

ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ‘ಕಾರ್ಪೊರೇಟ್ ಸಂಸ್ಥೆಗಳಲ್ಲಿ ಬಹಳಷ್ಟು ಉನ್ನತ ಸ್ಥಾನದಲ್ಲಿರುವವರು ಉತ್ತರ ಭಾರತದ ಅಥವಾ ನಗರಗಳಲ್ಲಿನ ವಿದ್ಯಾವಂತ ತಲೆಮಾರಿನವರಾಗಿರುತ್ತಾರೆ. ಆದರೆ ತಮಿಳುನಾಡಿನ ಗ್ರಾಮಗಳಿಂದ ಹೊರಟುಬಂದ ಬಹಳಷ್ಟು ಜನರು ಮೊದಲ ತಲೆಮಾರಿನ ಪದವೀದರರಾಗಿ ಉನ್ನತ ಸ್ಥಾನದಲ್ಲಿದ್ದಾರೆ’ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.

ಪೆರಿಯಾರ್, ಅಣ್ಣಾ ಅವರ ದಾರಿಯಲ್ಲಿ ನಡೆದುಬಂದ ಕಲೈಂಜರ್ ಅವರ ಎಂಬತ್ತು ವರ್ಷದ ಬದುಕಿನ ಸಾಧನೆ ಇದು. ಭಾರತದಲ್ಲಿಯೇ ಮೊದಲಬಾರಿಗೆ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ಎನ್ನುವುದನ್ನು ಸಾಧ್ಯವಾಗಿಸಿದವರು. ಭಾರತದಲ್ಲಿಯೇ ಮೊದಲ ಬಾರಿಗೆ ಎಲ್ಲ ಜಾತಿಗೆ ಸೇರಿದವರು ಅರ್ಚಕರಾಗಬಹುದು ಎಂಬ ಕಾನೂನನ್ನು ಜಾರಿಗೆ ತಂದವರು. ಭಾರತದಲ್ಲಿಯೇ ಮೊದಲ ಬಾರಿಗೆ ಶೇ 69 ಮೀಸಲಾತಿ ಜಾರಿಗೆ ತಂದವರು. ಹೀಗೆ ಹಲವು ಮೊದಲುಗಳನ್ನು ಹೇಳುತ್ತ ಹೋಗಬಹುದು.

ರಾಜಕೀಯ ವಿಮರ್ಶೆಗಳನ್ನು ದಾಟಿ ನಮ್ಮ ನಾಡಿನ ಬಹುಮುಖಿ ವೈಶಿಷ್ಟ್ಯಗಳನ್ನು ಆಯಾ ಭಾಷೆಯನ್ನು, ಮಣ್ಣನ್ನು, ಸಂಸ್ಕೃತಿಯ ವೈಶಿಷ್ಟ್ಯವನ್ನು ಸಂಭ್ರಮಿಸುತ್ತ ಎಲ್ಲರನ್ನು ಒಳಗೊಂಡ ನಾಡು ನಮ್ಮದಾಗಬೇಕು ಎಂದು ದುಡಿದವರು. ‘ನಿಮ್ಮ ಮುಗುಳ್ನಗೆ ಎಷ್ಟೇ ಸುಂದರವಾಗಿದ್ದರೂ ನಮ್ಮ ತುಟಿಗಳಿಗೆ ಅದನ್ನು ಅಂಟಿಸಬೇಡಿ; ನನ್ನ ನಗುವೇ ನನಗೆ ಚಂದ’ ಎನ್ನುತ್ತ ಪ್ರತಿ ರಾಜ್ಯದ, ಭಾಷೆಯ ವೈಶಿಷ್ಟ್ಯಕ್ಕೆ ಪ್ರಾಮುಖ್ಯ ಕೊಡುತ್ತ ಪ್ರಾದೇಶಿಕ ಸ್ವಾಭಿಮಾನ ಮತ್ತು ಅಸ್ಮಿತೆಯನ್ನು ಮೆರೆದವರು. ಈ ಎಲ್ಲವನ್ನೂ ಅವರ ಸಾಧನೆಗಳು ಎನ್ನುವುದಕ್ಕಿಂತ ಜನಸಾಮಾನ್ಯರ ಬದುಕನ್ನು ಹಸನಾಗಿಸುವ, ಮಾನವೀಯ ದೃಷ್ಟಿಯುಳ್ಳ, ಸಾಮಾಜಿಕ ನ್ಯಾಯದ ತತ್ವಗಳೆನ್ನಬಹುದು.

ಕಲೈಂಜರ್ ಅವರ ದೇಹ ಮಣ್ಣಿನಲ್ಲೂ, ಅವರ ಚಿಂತನೆಗಳು ಕೋಟ್ಯಂತರ ಜನರ ಬದುಕಿನಲ್ಲಿಯೂ ಒಂದಾಗಿಹೋಗಿವೆ. ಬೇರ್ಪಡಿಕೆ ನೋವು ತಂದರೂ ಅವರ ಬದುಕು, ಹೋರಾಡಲು ಆತ್ಮಸ್ಥೈರ್ಯವನ್ನೂ ಹುಮ್ಮಸ್ಸನ್ನೂ ತುಂಬಿದೆ.

ಶತಮಾನದ ನಾಯಕನಿಗೆ ನಮನ.

ಬರಹ ಇಷ್ಟವಾಯಿತೆ?

 • 33

  Happy
 • 1

  Amused
 • 2

  Sad
 • 0

  Frustrated
 • 5

  Angry

Comments:

0 comments

Write the first review for this !