ಬುಧವಾರ, ಡಿಸೆಂಬರ್ 11, 2019
20 °C

ಗೌರಿಯನ್ನು ಬಿತ್ತಿದೆ, ಅಂದೇ ಈ ನಾನು ಹುಟ್ಟಿದೆ....

ಪ್ರಕಾಶ್‌ ರೈ
Published:
Updated:

ನಾಡಿದ್ದು ಸೆಪ್ಟೆಂಬರ್‌ 5

ನನ್ನ ಮೊದಲ ಹುಟ್ಟುಹಬ್ಬ....

ನಾ ನೀಗ ವರುಷದ ಕಂದ. ಆಕೆ ಸತ್ತಳು, ನಾನು ಹೊಸದಾಗಿ ಹುಟ್ಟಿದೆ. ಮತ್ತೊಮ್ಮೆ ಹುಟ್ಟಿ ಬಾ ಅಂತ ಕೊಂದವರು ಹೇಳದೇ ಇದ್ದಾಗ, ಸಾವಿರಾರು ಜೀವಗಳು ಹುಟ್ಟುತ್ತವೆ ಅನ್ನುವುದಕ್ಕೆ ಆಕೆ ಸಾಕ್ಷಿಯಾದಳು. ಬರೀ ಜೀವಗಳಷ್ಟೇ ಹುಟ್ಟಲಿಲ್ಲ, ಪ್ರಶ್ನೆಗಳೂ ಜೊತೆಗೇ ಹುಟ್ಟಿದವು.

ಮನುಷ್ಯರಿಗಿಂತ ಅಪಾಯಕಾರಿಯಾದದ್ದು ಪ್ರಶ್ನೆ. ಅದು ಇರಿಯುತ್ತದೆ, ಅಲ್ಲಾಡಿಸಿಬಿಡುತ್ತದೆ. ಆತಂಕ ಹುಟ್ಟಿಸುತ್ತದೆ. ನನ್ನನ್ನು ಪ್ರಶ್ನಿಸುವವರೇ ಇಲ್ಲ ಎಂಬ ಹುಂಬ ಅಹಂಕಾರದಲ್ಲಿ ಬದುಕುವ ಮನುಷ್ಯನನ್ನು ಕೊಲ್ಲುವುದಕ್ಕೆ ಗುಂಡುಮದ್ದುಗಳು ಬೇಕಾಗಿಲ್ಲ. ಒಂದು ಪ್ರಶ್ನೆ ಸಾಕು.

ಹಾಗೆ ಪ್ರಶ್ನಿಸುವುದನ್ನು ಕಲಿಸಿದ್ದು ಕೂಡ ಸಾವೇ? ಉಹೂಂ... ಅದು ಸಾವಲ್ಲ, ಹತ್ಯೆ. ಸಾವು ಸಹಜವಾದದ್ದು. ಸಾವಿನ ಹೊಸ್ತಿಲಲ್ಲಿ ನಾವೆಲ್ಲ ಕೂತಿರುತ್ತೇವೆ. ಅದನ್ನು ದಾಟಿ ಆಚೆಗೆ ಹೋಗುತ್ತೇವೆ ಅನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ನನ್ನ ಪ್ರೀತಿಯ ಮೇಷ್ಟ್ರು ಲಂಕೇಶರು ತೀರಿಕೊಂಡಾಗ ನಮಗೆ ನೋವಾಗಿತ್ತು, ವಿಷಾದದಿಂದ ನಾವೆಲ್ಲ ತಲ್ಲಣಿಸಿಹೋಗಿದ್ದೆವು. ಮೇಷ್ಟರಿಲ್ಲ ಅನ್ನುವ ನೋವಿಗೆ ಭಯದ ಪಕಳೆಗಳು ಇರಲಿಲ್ಲ. ಹುಟ್ಟಿದವನಿಗೆ ಸಾವು ಸಹಜ ಅಂತ ಎಲ್ಲರಿಗೂ ಗೊತ್ತಿರುವುದರಿಂದ ಯಾರೂ ಸಾವಿಗೆ ಅಂಜುವುದಿಲ್ಲ. ಸಾವು ನಾವು ಬದುಕಿಗೆ ಹೇಳುವ ವಿದಾಯ ಅಷ್ಟೇ. ಸತ್ತವನು ಬದುಕನ್ನು ಧಿಕ್ಕರಿಸಿ ಹೋಗಿರುವುದಿಲ್ಲ, ಬದುಕಿ ಹೋಗಿರುತ್ತಾನೆ.

ಆದರೆ ಹತ್ಯೆ ಭಯ ಹುಟ್ಟಿಸುತ್ತದೆ. ಸಿಟ್ಟಿಗೆ ಕಾರಣವಾಗುತ್ತದೆ. ಅದು ವಿದಾಯ ಅಲ್ಲ, ಒಂದು ಅಧ್ಯಾಯವನ್ನು ಒತ್ತಾಯಪೂರ್ವಕವಾಗಿ ಮುಗಿಸುವ ಹುನ್ನಾರ. ‘ಇವತ್ತು ಅವಳು, ನಾಳೆ ನೀನು’ ಅಂತ ಯಾರಾದರೂ ಹೇಳಿದಾಗ ಆತಂಕವಾಗುತ್ತದೆ. ಅದು ಸಾಯುತ್ತೇನೆ ಅನ್ನುವ ಭಯವಲ್ಲ. ನಾವು ಒಬ್ಬರನ್ನೊಬ್ಬರು ಕೊಂದುಕೊಳ್ಳುವಷ್ಟು ಸಣ್ಣವರಾಗಿದ್ದೇವಾ ಎಂಬ ಪ್ರಶ್ನೆ ಮೂಡುತ್ತದೆ. ಕೊಲೆಗಾರರ ನೆರಳಲ್ಲಿ ಕೂತು ಗುಲಾಬಿ ಹೂವಿನ ಚೆಂದವನ್ನು ವರ್ಣಿಸುವುದಕ್ಕೆ ಸಾಧ್ಯವಿಲ್ಲ. ಬ್ರೆಕ್ಟ್ ಹೇಳಿದ ಮಾತು ನೆನಪಾಗುತ್ತಿದೆ.

In the dark times

Will there also be singing?

Yes, there will also be singing.

About the dark times.

(ಕವಿದ ಕತ್ತಲೆಯಲ್ಲೂ

ಹಾಡು ಇರಲಿಕ್ಕೆ ಸಾಧ್ಯವಾ?

ಖಂಡಿತಾ ಸಾಧ್ಯ

ಕತ್ತಲೆಯ ಬಗ್ಗೆ ಹಾಡಿರುತ್ತದೆ).

ಹೌದು, ನ್ಯಾಯಯುತ ಪ್ರಶ್ನೆಗಳು ಯಾವಾಗಲೂ ಮನಃಸಾಕ್ಷಿಯನ್ನು ಹಿಡಿದು ಅಲ್ಲಾಡಿಸಿಬಿಡುತ್ತವೆ. ಗೌರಿಯ ಕೊಲೆ ಎಬ್ಬಿಸಿದ ಪ್ರಶ್ನೆ ಇದೆಯಲ್ಲಾ, ಅದು ನನ್ನ ಮನಃಸಾಕ್ಷಿಯನ್ನು ಅಲ್ಲಾಡಿಸಿಬಿಟ್ಟಿತ್ತು. ಹಾಗಾಗಿ ನಾನು ಪ್ರಶ್ನೆಗಳಿಂದ ಎಲ್ಲರ ಮನಃಸಾಕ್ಷಿಯನ್ನು ಅಲ್ಲಾಡಿಸೋಣ ಅಂತ ನಿರ್ಧರಿಸಿಬಿಟ್ಟೆ. ಮನಸ್ಸನ್ನು ಬಿಚ್ಚಿ ಪ್ರಶ್ನೆಗಳನ್ನು ಹಕ್ಕಿಗಳಾಗಿ ಹಾರಲು ಬಿಟ್ಟಷ್ಟೂ ಹೊಸದು ಹುಟ್ಟುತ್ತಲೇ ಇವೆ. ನೂರಾರು ಪ್ರಶ್ನೆಗಳನ್ನು ಕೇಳುತ್ತಾ ಹೋದೆ.

ಇನ್ನು ಮೇಲೆ ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು ಹುಲಿಯಾ ಹಸುವಾ? ಒಂದೇ ನಾಡು ಒಂದೇ ತೆರಿಗೆ ಓಕೆ, ಆದರೆ ಒಂದು ದೇಶ ಒಂದೇ ಭಾಷೆ ಒಂದೇ ಸಂಸ್ಕೃತಿ ಅಂದ್ರೆ ಹೇಗೆ ಸರಿಯಾಗುತ್ತೆ? ಕೆಲವು ಸಾವಿರ ರೂಪಾಯಿಗಳ ಸಾಲವನ್ನು ವಾಪಸ್ ಕಟ್ಟೋಕಾಗದೆ ಇರುವ ರೈತನ ಟ್ರಾಕ್ಟರ್ ಅನ್ನು ಕಿತ್ತುಕೊಂಡು ಅವಮಾನಿಸುವಂಥ ವ್ಯವಸ್ಥೆ ಹಲವಾರು ಕೋಟಿಗಳನ್ನು ಸಾಲ ಪಡೆದು ಕಟ್ಟದೆ ವಿದೇಶಕ್ಕೆ ಹಾರಿ ಹೋದವರಿಗೆ ಯಾಕೆ ಅನ್ವಯಿಸುವುದಿಲ್ಲ? ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಸತ್ತ ಸರಿಯಾದ ದಿನಾಂಕ ಯಾವುದು? ಸಾಕಷ್ಟು ದುಡ್ಡು ಸೇರಿಸಿದರು, ದ್ರೋಹ ಮಾಡಿದ್ರು ಅನ್ನುವಂಥ ಅಷ್ಟು ದೊಡ್ಡ ಕೇಸು ಸುಪ್ರೀಂ ಕೋರ್ಟಿನಲ್ಲಿ ಡಿಸೈಡ್ ಆದಮೇಲೆ ಶಶಿಕಲಾ ಚೀಫ್ ಮಿನಿಸ್ಟರ್ ಆಗಬೇಕಾದರೆ ಯಾಕೆ ಹೊರಗಡೆ ಬಂತು? ಡೀಮಾನಿಟೈಸೇಷನ್ ಸಂದರ್ಭದಲ್ಲಿ ಕೆಲವರನ್ನು ಹಿಡ್ಕೊಂಡ್ರಲ್ಲಾ, ಆ ದುಡ್ಡೆಲ್ಲಾ ಎಲ್ಲಿ ಹೋಯ್ತು ಅವರೆಲ್ಲಾ ಏನಾಗಿದ್ದಾರೆ ಈಗ?

ಹೀಗೆ ಪ್ರಶ್ನೆಗಳಿವೆ. ನಾನು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದೇನೆ. ಮುಕ್ತವಾಗಿ ಕೇಳ್ತಾ ಇದ್ದೇನೆ. ಯಾಕೆ ನಟರಾದ ರಜನಿಕಾಂತ್, ಕಮಲ್ ಹಾಸನ್ ರಾಜಕೀಯಕ್ಕೆ ಬಂದಿದ್ದಾರೆ? ನಟರು ರಾಜಕೀಯಕ್ಕೆ ಬರೋದು ಓಕೆ, ಆದರೆ ನೀವು ಕುರ್ಚಿ ಖಾಲಿ ಇದೆ ಅಂತ ರಾಜಕೀಯಕ್ಕೆ ಬರ್ತಾ ಇದ್ದೀರಾ? ಅಥವಾ ವ್ಯವಸ್ಥೆ ಸರಿ ಇಲ್ಲ ಅಂತ ರಾಜಕೀಯಕ್ಕೆ ಬರ್ತಾ ಇದ್ದೀರಾ? ತಮಿಳುನಾಡಿನ ವ್ಯವಸ್ಥೆ ಸರಿ ಇಲ್ಲದೇ ಇರುವುದಕ್ಕೆ ಕೇಂದ್ರ ಸರ್ಕಾರ ಕಾರಣ ಅನ್ನುವುದನ್ನು ನೀವು ಯಾಕೆ ಪ್ರಶ್ನೆ ಮಾಡ್ತಾ ಇಲ್ಲ? ಹೀಗೆ ಸಾವಿರ ಪ್ರಶ್ನೆಗಳು.

ಹೀಗೆ ಪ್ರಶ್ನೆಗಳನ್ನು ಕೇಳುವುದರಿಂದ ಏನಾಗುತ್ತೆ ಪ್ರಕಾಶ್ ಅಂತ ಗೆಳೆಯರೊಬ್ಬರು ಕೇಳುತ್ತಾರೆ. ‘ಕರ್ಮಣ್ಯೇವಾಧಿಕಾರಸ್ತೆ ಮಾಫಲೇಷು ಕದಾಚನ’ ಅಂತ ಭಗವದ್ಗೀತೆ ಹೇಳುತ್ತದೆ. ‘ಬಾಗಿಲು ತಟ್ಟಿದರೆ ತೆರೆದುಕೊಳ್ಳುತ್ತದೆ, ಕೇಳಿದರೆ ಮಾತ್ರ ಬೇಕಾದದ್ದು ಸಿಗುತ್ತದೆ’ ಎಂದು ಯೇಸು ಹೇಳುತ್ತಾರೆ. ‘ನೀನು ಕೇಳಬೇಕು; ಅವನು ಕೊಡಬೇಕು’ ಎಂಬ ಮಾತು ಕುರಾನ್‌ನಲ್ಲೂ ಬರುತ್ತದೆ. ನಾನು ಈ ಥರ ಉತ್ತರ ಕೊಟ್ಟ ತಕ್ಷಣ ಪ್ರಶ್ನೆ ಕೇಳಿದವನು ಆಶ್ಚರ್ಯದಿಂದ ನೋಡುತ್ತಾನೆ. ಅವನು ಕೇಳಿದ ಪ್ರಶ್ನೆಗೂ ನಾನು ಕೊಟ್ಟ ಉತ್ತರಕ್ಕೂ ಏನು ಸಂಬಂಧ ಅನ್ನುವುದು ಅವನ ಯೋಚನೆ. ಆದರೆ ಅವನ ಪ್ರಶ್ನೆಗೆ ಉತ್ತರ ಕೊಡುವುದಕ್ಕಿಂತ ಎಲ್ಲಾ ಮತಗಳ ಉದಾಹರಣೆಗಳನ್ನು ಇಟ್ಟುಕೊಂಡು ನಾನು ಯಾವುದೇ ಜಾತಿ ಮತಕ್ಕೆ ವಿರೋಧಿಯೂ ಅಲ್ಲ ಎಂದು ನಿರೂಪಿಸುವುದು ಮುಖ್ಯವಾಗಿದೆ ನನಗೆ.

ಒಂದು ಸಿನಿಮಾದಲ್ಲಿ ನಾನು ಆಡುವ ಮಾತಿಗೆ, ನಾನು ಕೊಡುವ ಉತ್ತರಕ್ಕೆ, ನನ್ನ ವರ್ತನೆಗೆ ಸಮರ್ಥನೆ ಕೊಡುವುದು ಸುಲಭ. ಸಿನಿಮಾದ ಆರಂಭದಲ್ಲೇ ಒಂದು ಡಿಸ್‌ಕ್ಲೇಮರ್ ಹಾಕಿದರಾಯಿತು. ‘ಈ ಚಿತ್ರದಲ್ಲಿ ಬರುವ ಎಲ್ಲ ಪಾತ್ರಗಳು, ಮಾತುಗಳು, ಪ್ರಶ್ನೆಗಳು, ನೋವುಗಳು, ಆತಂಕಗಳು- ಕೇವಲ ಕಾಲ್ಪನಿಕ.’

ಆದರೆ ಜೀವನದಲ್ಲಿ ಏನು ಮಾಡೋಣ? ಬದುಕಿಗೆ ಯಾವ ಡಿಸ್‌ಕ್ಲೇಮರೂ ಇಲ್ಲವಲ್ಲ.

ಹೀಗೆ ಪ್ರಶ್ನೆಗಳನ್ನು ಕೇಳಲು ಶುರು ಮಾಡಿದ ತಕ್ಷಣ ನನ್ನನ್ನು ದರದರ ಅಂತ ಎಳೆದುಕೊಂಡು ಬಂದು ರಾಜಕೀಯ ವ್ಯವಸ್ಥೆಯ ಮುಂದೆ ನಿಲ್ಲಿಸಿಬಿಡುತ್ತದೆ. ಒಂದು ವ್ಯವಸ್ಥೆ ಮುಂದೆ ನಿಲ್ಲಿಸಿಬಿಟ್ಟಿದೆ. ಪ್ರಶ್ನೆ ಕೇಳಿದಾಗ ಉತ್ತರ ನೀಡಬೇಕಾದ ಜವಾಬ್ದಾರಿಯಲ್ಲಿ ಇರುವವರು ‘ನೀನು ಇದನ್ನೆಲ್ಲಾ ಯಾಕೆ ಕೇಳ್ತಾ ಇದ್ದೀಯಾ’ ಅಂತ ನನ್ನ ಬಾಯಿ ಮುಚ್ಚಿಸೋಕೆ ಪ್ರಯತ್ನ ಮಾಡುತ್ತಾರೆ. ಒಬ್ಬ ಪ್ರಧಾನಮಂತ್ರಿಯನ್ನು ನೀವು ಅನ್ಯಾಯವನ್ನು ಖಂಡಿಸದೆ ಯಾಕೆ ಮೌನವಾಗಿದ್ದೀರಿ ಅಂತ ಒಂದು ಪ್ರಶ್ನೆ ಕೇಳಿದರೆ ‘ನೀನು ಕ್ರಿಶ್ಚಿಯನ್ನಾ, ನೀನು ಹಿಂದೂಯಿಸಂಗೆ ವಿರುದ್ಧವಾಗಿದ್ದೀಯಾ, ಹಿಂದೂ ಧರ್ಮದ ವಿರುದ್ಧ ಯಾಕೆ ಪ್ರಶ್ನೆ ಕೇಳ್ತಿದ್ದೀಯಾ’ ಅಂತ ಹೊರಟುಬಿಟ್ಟಿದ್ದಾರೆ. ಅದೂ ಪರವಾಗಿಲ್ಲ, ಇವನೊಬ್ಬ ಹಿಂದೂ ವಿರೋಧಿ, ದೇಶ ವಿರೋಧಿ, ನಿನ್ನ ತಾಯಿ ತಪ್ಪು ಮಾಡಿದ್ದಾರೆ, ನಿನ್ನ ಪರ್ಸನಲ್ ಜೀವನ ಏನು ಅಂತ ಹೇಳ್ಕೊಂಡು ಬರುತ್ತಿದ್ದಾರೆ.

ತಮಿಳುನಾಡಿನಲ್ಲಿ ಸ್ಟಾಲಿನ್ ಇದ್ದಾರೆ. ಒಂದು ಸಲ ವಿರೋಧ ಪಕ್ಷದ ಹೆಣ್ಣು ಮಗಳು ಪ್ರಶ್ನೆ ಮಾಡಿದ್ದಕ್ಕೆ ತಮ್ಮ ಪಕ್ಷದವರು ಅಸಹ್ಯ ಅಸಹ್ಯವಾಗಿ ಲೇವಡಿ ಮಾಡಿದಾಗ ಅವರು ‘ನೋಡಿ, ಒಬ್ಬ ಹೆಣ್ಣಿನ ಬಗ್ಗೆ ಅಸಹ್ಯವಾಗಿ ಮಾತನಾಡೋದು ತಪ್ಪು, ಅವರ ಪ್ರಶ್ನೆ ತಪ್ಪಾಗಿದ್ದರೆ ಹಾಗಲ್ಲ ನೀನು ಮಾತನಾಡಬೇಕಾದ್ದು ಅಂತ ಹೇಳಬೇಕು’ ಎಂದಿದ್ದರು. ಹಾಗೆಯೇ ಒಬ್ಬ ಹೆಣ್ಣು ಮಗಳ ಹತ್ಯೆಯನ್ನು ಆ ಪಕ್ಷದ ಹಿರಿಯರು ಖಂಡಿಸಿದ್ದರೆ, ನೀವು ಮಾಡ್ತಿರೋದು ತಪ್ಪು ಅಂತ ಹೇಳಿದ್ದರೆ ನಾನು ಇಷ್ಟೊಂದು ಪ್ರಶ್ನೆಗಳನ್ನು ಕೇಳುತ್ತಲೇ ಇರಲಿಲ್ಲವಲ್ಲ.

ನಾನು ಎಲ್ಲೋ ಒಂದು ಕಡೆ ಯಾವುದೋ ಒಂದು ವಿಷಯದ ಬಗ್ಗೆ ಮಾತನಾಡಿದರೆ ಅನ್ಯಾಯ ಆಯಿತು ಅಂತ ಸಗಣಿ ನೀರು ಹಾಕುತ್ತಾರೆ. ‘ಇದು ತುಂಬಾ ಸ್ವಚ್ಛವಾದ ಭಾರತವೇ’ ಅಂತ ನಾನು ಕೇಳಿದೆ. ಅವರಿಗೆ ಗಾಬರಿಯಾಯಿತು. ಗೌರಿ ಲಂಕೇಶ್ ಗೆ ಆದಂತೆ ನಿಂಗೂ ಆಗತ್ತೆ ನೋಡು ಅಂತ ಹೆದರಿಸುತ್ತಾರೆ. ‘ಇದೇ ತುಂಬಾ ಸುಭದ್ರವಾದ ಭಾರತಾನಾ’ ಅಂತ ಮತ್ತೆ ಪ್ರಶ್ನೆ ಕೇಳುತ್ತೇನೆ. ಅದಕ್ಕೆ ಮತ್ತೆ ಟ್ಯಾಕ್ಸ್ ಸರಿಯಾಗಿ ಕಟ್ಟಿದ್ದಾನಾ ನೋಡಿ ಎಂದು ಹೇಳುತ್ತಾರೆ.

ಅದಕ್ಕೆ ಬದಲಾಗಿ ನಾನು ಕೇಳಿದ ಪ್ರಶ್ನೆಗೆ ಉತ್ತರ ಕೊಡಬಹುದಲ್ಲ. ನಾನು ಕೇಳಿದ ಒಂದು ಪ್ರಶ್ನೆಗೆ ಸಾವಿರ ಪ್ರಶ್ನೆಗಳನ್ನು ನನಗೇ ಕೇಳಿದರೆ ಹೇಗಾಗುತ್ತದೆ. ಯಾಕಪ್ಪಾ ನಿಂಗೆ ಈ ಕೆಲಸ ಅಂತ ಕೇಳುತ್ತಾರೆ.

ತಿರುಮುರುಗನ್ ಅಂತ ಒಬ್ಬ ಬರಹಗಾರ ಇದ್ದ. ಅವರನ್ನು ನೀನು ಯಾಕೆ ಪ್ರಶ್ನೆ ಮಾಡುತ್ತಿದ್ದೀಯಾ ಅಂತ ಕೇಳಿದರಂತೆ. ಅದಕ್ಕೆ ಅವರು ಹೇಳುತ್ತಾರೆ. ‘ಅದರಲ್ಲಿ ನನ್ನ ಸ್ವಾರ್ಥ ಇದೆ. ನಾನು ಸುಂದರವಾದ ಚಿಟ್ಟೆಗಳಿರುವ ಒಂದು ತೋಟದಲ್ಲಿ, ಸ್ವತಂತ್ರವಾದ ಗಾಳಿಯಲ್ಲಿ ಸಂತೋಷವಾಗಿ ಬದುಕುತ್ತಿದ್ದೆ. ನನ್ನ ಜೀವನ ಚೆನ್ನಾಗಿತ್ತು. ಈಗ ನಾನು ನನ್ನ ಮಕ್ಕಳಿಗೆ ಹಣ, ಸ್ವತ್ತುಗಳನ್ನಲ್ಲ ಕೊಟ್ಟು ಹೋಗಬೇಕಾಗಿರುವುದು. ಅವರ ಸ್ವಾಸ್ಥ್ಯಕ್ಕೆ ಧಕ್ಕೆ ಆಗುತ್ತಿರುವಂತಹ ಮೀನುಗಳಿಲ್ಲದ ಸಮುದ್ರವನ್ನು, ಚಿಟ್ಟೆಗಳಿಲ್ಲದ ತೋಟವನ್ನು, ಪ್ರಶ್ನೆಗಳನ್ನು ಮಾಡಲಾಗದ ವಾತಾವರಣವನ್ನು ಮುಂದಿನ ತಲೆಮಾರಿಗೆ ಕೊಟ್ಟು ಹೋಗಲು ಆಗುವುದಿಲ್ಲ. ಹಾಗಾಗಬಾರದು ಎನ್ನುವ ಸ್ವಾರ್ಥ ಇದೆ ನನಗೆ’ ಎಂದರಂತೆ ಅವರು.

ಈಗ ಪ್ರಶ್ನೆಗಳನ್ನು ಕೇಳುತ್ತಾ ಇರುವುದರಿಂದ ನಾನು ನಟಿಸುತ್ತಿರುವ ಜಾಹೀರಾತುಗಳನ್ನು ನಿಲ್ಲಿಸಿಬಿಡುತ್ತಾರೆ. ದಿಢೀರ್ ಅಂತ ಕರ್ನಾಟಕ, ತೆಲಂಗಾಣ, ತಮಿಳುನಾಡಿನ ಪೊಲೀಸರು ‘ನೀವು ಸ್ವಲ್ಪ ಜಾಗ್ರತೆಯಾಗಿರಬೇಕು ಸಾರ್’ ಅಂತ ಭದ್ರತೆಗಳನ್ನು ಕೊಡುತ್ತಿದ್ದಾರೆ. ಇವೆಲ್ಲಾ ಪ್ರಶ್ನೆ ಕೇಳಿದ್ದಕ್ಕೇನೇ...

ಯಾವತ್ತೋ ಮಾಡಿದ ಸಣ್ಣ ಸಣ್ಣ ತಪ್ಪುಗಳನ್ನು ಭೂತಗನ್ನಡಿ ಹಿಡಿದುಕೊಂಡು ನೋಡಿ ದೊಡ್ಡದು ಮಾಡಿ ಕೆಟ್ಟ ಹೆಸರು ತರಿಸಲು ಪ್ರಯತ್ನ ಮಾಡುತ್ತಾರೆ. ಯಾವತ್ತೋ ಮಾಡಿದ ಚಿಕ್ಕ ಚಿಕ್ಕ ತಪ್ಪುಗಳಿಗೂ ನಾನು ಉತ್ತರ ಕೊಡಬೇಕಾಗುತ್ತದೆ.

ನಾನು ಈಗ ಸುಮ್ಮನಿದ್ದು ನನ್ನ ದೇಶದ ಭವಿಷ್ಯ ಅಸಹನೀಯ ಆಗಿದ್ದನ್ನು ನೋಡುತ್ತಾ, ಆಮೇಲೆ ಸಂಕಟಪಡುವುದಕ್ಕಿಂತ ಈಗ ಪ್ರಶ್ನೆ ಕೇಳಿ ಇವೆಲ್ಲವನ್ನೂ ಸಹಿಸಿಕೊಳ್ಳುವುದು ಒಳ್ಳೆಯದು.

ಈಗ ಈ ವರುಷದ ಮಗುವಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು