ಅಗಣಿತವಾದ, ಅಳತೆಗೆ ದೊರೆಯದ ಮೂಲಸತ್ವ

ಶುಕ್ರವಾರ, ಏಪ್ರಿಲ್ 19, 2019
27 °C

ಅಗಣಿತವಾದ, ಅಳತೆಗೆ ದೊರೆಯದ ಮೂಲಸತ್ವ

ಗುರುರಾಜ ಕರಜಗಿ
Published:
Updated:

ಅಣುಸಂಖ್ಯೆಯೆಣಿಸುವನು ವಿಶ್ವದಲಿ ವಿಜ್ಞಾನಿ |
ಗುಣಿಸುವನು ಭೂತಶಕ್ತಿಗಳನದರಿಂದೇಂ? ||
ಗಣಿತಸಾಧ್ಯದ ಹಿಂದಗಣ್ಯದ ಮಹತ್ತತ್ತ್ವ |
ವಣಗಿಹುದು ಮೂಲವದು – ಮಂಕುತಿಮ್ಮ || 113 ||

ಪದ-ಅರ್ಥ: ಅಣುಸಂಖ್ಯೆಯೆಣಿಸುವನು=ಅಣುಸಂಖ್ಯೆ(ಅಣುಗಳ ಸಂಖ್ಯೆಯನ್ನು)+ಎಣಿಸುವನು, ಗಣಿತಸಾಧ್ಯದ=ಎಣಿಕೆಗೆ ಸಾಧ್ಯವಿರುವ, ಹಿಂದಗಣ್ಯದ=ಹಿಂದೆ+ಅಗಣ್ಯದ(ಎಣಿಸಲಾಗದ), ಮಹತ್ತತ್ತ್ವ=ಮಹತ್ತಾದ+ತತ್ವ.

ವಾಚ್ಯಾರ್ಥ: ವಿಶ್ವದಲ್ಲಿ ವಿಜ್ಞಾನಿ ಎಲ್ಲ ವಸ್ತುಗಳಲ್ಲಿ ಅಡಗಿರುವ ಅಣುಗಳನ್ನು ಎಣಿಸುತ್ತಾನೆ. ಆದರೆ ಇರುವೆಲ್ಲ ವಸ್ತುಗಳ ಶಕ್ತಿಯನ್ನು ಅದರಿಂದ ಅಳೆಯಬಹುದೇ? ಎಣಿಕೆ ಸಾಧ್ಯವಾದ ವಸ್ತುಗಳ ಹಿಂದೆ ಎಣಿಸಲಾಗದ, ಮಹತ್ತಾದ ಸತ್ವವೊಂದು ಅಡಗಿದೆ. ಅದೇ ಎಲ್ಲಕ್ಕೂ ಮೂಲವಾದದ್ದು.

ವಿವರಣೆ: ಇಂದು ವಿಜ್ಞಾನ ಏನೆಲ್ಲವನ್ನು ಸಾಧಿಸಿದೆ. ಸಾಗರದ ಆಳವನ್ನು ಅಳೆದಿದೆ, ನಕ್ಷತ್ರಗಳ ನಡುವಿನ ಅಂತರವನ್ನು ಕಂಡುಹಿಡಿದಿದೆ. ಅತ್ಯಂತ ಚಿಕ್ಕದಾದ ಅಥವಾ ಬೃಹತ್ತಾದ ವಸ್ತುವಿನಲ್ಲಿರುವ ಅಣುಗಳನ್ನು ಎಣಿಸಬಲ್ಲದ್ದಾಗಿದೆ. ಸ್ಥೂಲದಲ್ಲಿ ನೋಡಿದರೆ ವಿಜ್ಞಾನಕ್ಕೆ ನಿಲುಕಲಾರದ್ದು ಯಾವುದೂ ಇಲ್ಲ ಎನ್ನುವಂತಿದೆ. ಅದನ್ನೇ ಕಗ್ಗ ಹೊಗಳುತ್ತದೆ. ವಿಶ್ವದಲ್ಲಿ ವಿಜ್ಞಾನಿ ಎಲ್ಲ ಅಣುಸಂಖ್ಯೆಗಳನ್ನು ಎಣಿಸಬಲ್ಲವನಾಗಿದ್ದಾನೆ. ಆದರೆ ಯಾವ ಶಕ್ತಿಗಳಿಂದ ಅದೆಲ್ಲ ಸಾಧ್ಯವಾಯಿತೋ ಎನ್ನುವುದನ್ನು ಆತ ವಿಜ್ಞಾನದಿಂದ ತೀರ್ಮಾನಿಸಬಲ್ಲನೇ? ಯಾಕೆಂದರೆ ವಿಜ್ಞಾನದ ಹಿಡಿತಕ್ಕೆ ಸಿಕ್ಕದ, ಅಳೆಯಬಹುದಾದ ವಸ್ತುಗಳ ಹಿಂದೆ ಅಳೆಯಲಾಗದ, ಎಣಿಸಲಾಗದ ಮಹಾತತ್ವವೊಂದು ಅಡಗಿದೆ. ಅದೇ ಎಲ್ಲದರಲ್ಲಿ ಅಡಗಿರುವ ಮೂಲವಸ್ತು. ಅದನ್ನೇ ನಾವು ಪರಸತ್ವ, ಸತ್ಪ, ದೇವರು, ಭಗವಂತ ಎಂದು ಕರೆಯುತ್ತೇವೆ.

ಮಹಾದೇವಿಯಕ್ಕನ ವಚನವೊಂದು ಈ ಚಿಂತನೆಯನ್ನು ಎಷ್ಟು ಕಾವ್ಯಾತ್ಮಕವಾಗಿ ವರ್ಣಿಸುತ್ತದೆ.
ನೆಲದ ಮರೆಯ ನಿಧಾನದಂತೆ
ಫಲದ ಮರೆಯ ರುಚಿಯಂತೆ
ಶಿಲೆಯ ಮರೆಯ ಹೇಮದಂತೆ
ತಿಲದ ಮರೆಯ ತೈಲದಂತೆ
ಮರದ ಮರೆಯ ತೇಜದಂತೆ
ಭಾವದ ಮರೆಯ ಬ್ರಹ್ಮವಾಗಿಪ್ಪ
ಚೆನ್ನಮಲ್ಲಿಕಾರ್ಜುನನ ನಿಲವನರಿಯಬಾರದು

ನೆಲವನ್ನಳೆಯಬಹುದು ಆದರೆ ಅದರ ಗರ್ಭದಲ್ಲಿ ಹೂತಿಟ್ಟ ನಿಧಿಯನ್ನು ಅಳೆಯಲಾದೀತೇ? ಫಲದ ತೂಕ ಗಳಿಸಬಹುದು, ಅದರ ರುಚಿಯನ್ನು ಅಳೆಯಬಹುದೇ? ಕಲ್ಲಿನಲ್ಲಿ ಅಡಗಿದ್ದ ಚಿನ್ನದಂತೆ, ಬೀಜದಲ್ಲಿ ಅಡಗಿದ್ದ ಎಣ್ಣೆಯಂತೆ, ಮರದಲ್ಲಿ ಅಡಗಿದ ಬೆಂಕಿಯಂತೆ ಭಾವದ ಮರೆಯಲ್ಲಿರುವ ಬ್ರಹ್ಮನಂತೆ ಚೆನ್ನಮಲ್ಲಿಕಾರ್ಜುನನ ನಿಜವಾದ ನಿಲುವನ್ನು, ನೆಲೆಯನ್ನು ಅರಿಯುವುದು ಅಸಾಧ್ಯ.

ಹಾಗೆಯೇ ವಿಜ್ಞಾನದ ತೆಕ್ಕೆಗೆ ಸಿಕ್ಕುವ, ಅಳೆಯಬಹುದಾದ ವಸ್ತುಗಳ ಹಿಂದೆ ಅಗೋಚರವಾದ, ಅಗಣಿತವಾದ ಪರಾತ್ಪರ ವಸ್ತುವಿನ ಶಕ್ತಿ ಇದೆ. ಅದು ನಮ್ಮ ವಿಜ್ಞಾನದ ಕಣ್ಣಿಗೆ ಸಿಕ್ಕದ್ದು. ಆದರೆ ಈ ಅಪರಂಪಾರ ವಿಶ್ವದ ಮೂಲವೇ ಅದು. ಮೂಲಸತ್ವ ಮರೆಯಾಗಿ, ಕಣ್ಣಿಗೆ ಕಾಣುವ, ಅಳೆಯಬಹುದಾದ ಪ್ರಪಂಚ ಕಣ್ಣಮುಂದಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !