ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಂಸೆಯ ಅಪೇಕ್ಷೆ

Last Updated 18 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಣಾಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಅವನ ಪಟ್ಟದ ರಾಣಿಯ ಮಗನಾಗಿ ಹುಟ್ಟಿದ. ದೊಡ್ಡವನಾದ ಮೇಲೆ ಹಿರಿಯ ರಾಜನ ಅವಸಾನದ ನಂತರ ತಾನೇ ರಾಜನಾಗಿ ಧರ್ಮದಿಂದ ರಾಜ್ಯ ನಡೆಸುತ್ತಿದ್ದ. ಅವರ ರಾಜ್ಯದಲ್ಲಿ ರುಹಕನೆಂಬ ಪುರೋಹಿತನಿದ್ದ. ಅವನ ಹೆಂಡತಿಯ ಹೆಸರು ಪುರಾಣಿ.

ಒಂದು ಯಾವುದೋ ಉತ್ಸವದಲ್ಲಿ ರಾಜ ಒಂದು ಸುಂದರವಾದ ಕುದುರೆಯನ್ನು ಸಂಪೂರ್ಣವಾಗಿ ಅಲಂಕರಿಸಿ ಅದನ್ನು ಪುರೋಹಿತನಿಗೆ ದಾನವಾಗಿ ಕೊಟ್ಟ. ಅಂದಿನಿಂದ ಪುರೋಹಿತ ಅಲಂಕೃತವಾದ ಕುದುರೆಯ ಮೇಲೆ ಕುಳಿತೇ ಅರಮನೆಗೆ ಹೋಗುತ್ತಿದ್ದ. ಅವನು ಹಾಗೆ ಹೋಗಿ ಬರುತ್ತಿದ್ದಾಗ ದಾರಿಯಲ್ಲಿ ನಿಂತ ಜನರು, “ಅಬ್ಬಾ ಕುದುರೆ ಎಷ್ಟು ಚೆನ್ನಾಗಿದೆ, ಅದರ ನಡೆ ಎಷ್ಟು ಸುಂದರ” ಎಂದು ಹೊಗಳುತ್ತಿದ್ದರು. ಅದನ್ನು ಕೇಳಿ ಪುರೋಹಿತನಿಗೆ ತುಂಬ ಸಂತೋಷ. ಒಂದು ದಿನ ಮನೆಗೆ ಬಂದು ಹೆಂಡತಿಗೆ ಹೇಳಿದ, “ಪುರಾಣಿ, ಈಗ ನಗರದ ತುಂಬೆಲ್ಲ ನಮ್ಮ ಕುದುರೆಯದೇ ಪ್ರಶಂಸೆ. ನಾನು ಅರಮನೆ ಮುಟ್ಟುವವರೆಗೆ ಹಾಗೂ ಮರಳಿ ಮನೆ ತಲುಪುವವರೆಗೆ ಜನರ ಹೊಗಳಿಕೆ ನಡೆದೇ ಇರುತ್ತದೆ”. ಅವನ ಹೆಂಡತಿ ಪುರಾಣಿ ದೂರ್ತಳು. ಆಕೆಗೆ ಗಂಡನ ಮೇಲೆ ಪ್ರೀತಿ ಇಲ್ಲ, ಕೇವಲ ಅವನು ತರುವ ಧನಸಂಪತ್ತಿನ ಮೇಲೆಯೇ ಆಕೆಯ ಕಣ್ಣು. ಆಕೆ ಹೇಳಿದಳು, “ಸ್ವಾಮೀ, ಕುದುರೆಯದೇನೂ ವಿಶೇಷವಿಲ್ಲ. ಎಲ್ಲ ಕುದುರೆಗಳಿಗೆ ಇರುವ ಹಾಗೆ ನಾಲ್ಕು ಕಾಲು, ಬಾಲ ಇದೆ. ಸೌಂದರ್ಯದ ಗುಟ್ಟು ಇರುವುದೇ ಅಲಂಕಾರದಲ್ಲಿ. ಆದ್ದರಿಂದ ನಿನಗೆ ಪ್ರಶಂಸೆ ಬರಬೇಕೆಂದರೆ ಆ ಅಲಂಕಾರಗಳನ್ನೆಲ್ಲ ನೀನೇ ಧರಿಸು, ಕುದುರೆಯ ಖುರಪುಟದಂತೆ ಬಾಯಿಯಿಂದ ಸಪ್ಪಳ ಮಾಡುತ್ತ ಅರಮನೆಯ ಕಡೆಗೆ ಓಡು. ಆಗ ಜನ ನಿನ್ನನ್ನು ಹೊಗಳುತ್ತಾರೆ”.

ಹುಚ್ಚ ಬ್ರಾಹ್ಮಣ ಆಕೆಯ ಮಾತನ್ನು ನಂಬಿದ. ಕುದುರೆಯ ಕೊರಳಿನ ಅಲಂಕಾರಗಳನ್ನು ತನ್ನ ಕೊರಳಿಗೆ ಹಾಕಿಕೊಂಡ, ಬೆನ್ನಮೇಲಿನ ಥಡಿಯನ್ನು ತನ್ನ ಬೆನ್ನಿಗೆ ಕಟ್ಟಿಕೊಂಡ, ಕುದುರೆಯ ಕಾಲಿನ ಅಲಂಕಾರಗಳನ್ನು ತನ್ನ ಕಾಲಿಗೆ ಬಿಗಿದುಕೊಂಡು ಠಕ್, ಠಕ್ ಎಂದು ಸದ್ದು ಮಾಡುತ್ತ ರಸ್ತೆಯಲ್ಲಿ ಓಡಿದ. ಜನ ಇವನನ್ನು ಕಂಡು ಹುಚ್ಚೆದ್ದು ನಕ್ಕರು. ಈತ ಅದನ್ನು ಪ್ರಶಂಸೆ ಎಂದು ಭಾವಿಸಿದ.

ಅರಮನೆಯನ್ನು ಪ್ರವೇಶಿಸುವಾಗ ರಾಜ ನೋಡಿ, “ಆಚಾರ್ಯರೇ, ಏನು ಹುಚ್ಚು ಹಿಡಿಯಿತೇ ನಿಮಗೆ? ಪಿತ್ತ ನೆತ್ತಿಗೇರಿದೆಯೇ?” ಎಂದು ಚೆನ್ನಾಗಿ ಛೀಮಾರಿ ಹಾಕಿ ಲಜ್ಜಿತನನ್ನಾಗಿ ಮಾಡಿದ. ಪುರೋಹಿತ ಅಲಂಕಾರಗಳನ್ನೆಲ್ಲ ತೆಗೆದು ತನಗೆ ಮೋಸ ಮಾಡಿದ ಹೆಂಡತಿಗೆ ಶಿಕ್ಷೆ ಕೊಡಬೇಕೆಂದು ಕೋಪದಿಂದ ಬುಸುಗಡುತ್ತ ಮನೆಗೆ ಬಂದ. ಈತ ಮನೆಗೆ ಬರುತ್ತಿರುವುದನ್ನು ಕೇಳಿ ಪುರಾಣಿ ಹಿಂದಿನ ಬಾಗಿಲಿನಿಂದ ಓಡಿ ಬಂದು ಅರಮನೆಯನ್ನು ಸೇರಿದಳು. ರಾಜ ಪುರೋಹಿತನಿಗೆ ತಿಳಿಹೇಳಿದ. “ನಿನ್ನ ಹೆಂಡತಿ ಧೂರ್ತತೆಯಿಂದಲೋ, ನಿನಗೆ ಕೀಟಲೆ ಮಾಡಲೆಂದೋ ಈ ಮಾತು ಹೇಳಿದಳು. ಆದರೆ ಅದು ಸರಿಯೇ, ತಪ್ಪೇ ಎಂದು ಯೋಚಿಸುವಷ್ಟು ಬುದ್ಧಿ ನಿನಗೆ ಬೇಡವೇ? ನಿನಗೆ ಜನರ ಪ್ರಶಂಸೆ ಬರಬೇಕಾದದ್ದು ಕುದುರೆಯ ಅಲಂಕಾರದಿಂದಲ್ಲ, ನಿನ್ನ ಜ್ಞಾನದಿಂದ, ವಿವೇಕದಿಂದ ಹಾಗೂ ಶೀಲದಿಂದ”.

ಪ್ರಶಂಸೆಯ ಅಪೇಕ್ಷೆ ಎಂಥೆಂಥ ಕೆಲಸಗಳನ್ನು ಜನರಿಂದ ಮಾಡಿಸುತ್ತದೆ! ನಮ್ಮಲ್ಲಿರುವ ಗುಣಗಳಿಗಾಗಿ ಪ್ರಶಂಸೆ ಬರಬೇಕೇ ವಿನ: ಮೂರ್ಖತನದ ಪ್ರದರ್ಶನದಿಂದ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT