ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಋಣದ ಭಾರ, ಕರ್ಮದ ಕುಣಿಕೆ

Last Updated 8 ಆಗಸ್ಟ್ 2019, 19:46 IST
ಅಕ್ಷರ ಗಾತ್ರ

ಋಣದ ಮೂಟೆಯ ಹೊರಿಸಿ, ಪೂರ್ವಾರ್ಜಿತದ ಹುರಿಯ |
ಕುಣಿಕೆಯಲಿ ನಿನ್ನ ಕೊರಳನು ಬಿಗಿದು ವಿಧಿಯು ||
ತೃಣದ ಕಡ್ಡಿಯ ಮುಂದೆ ಹಿಡಿದಾಸೆ ತೋರುತಿರೆ |
ಕುಣಿವ ಗರ್ಧಭ ನೀನು –ಮಂಕುತಿಮ್ಮ || 169 ||

ಪದ-ಅರ್ಥ: ಕುಣಿಕೆ=ಹಗ್ಗದ ಗಂಟು, ತೃಣ=ಹುಲ್ಲು, ಗರ್ಧಭ=ಕತ್ತೆ
ವಾಚ್ಯಾರ್ಥ: ವಿಧಿ ನಿನ್ನ ಋಣದ ಮೂಟೆಯನ್ನು ತಲೆಯ ಮೇಲೆ ಹೊರಿಸಿ, ಪೂರ್ವಾರ್ಜಿತವೆಂಬ ಹಗ್ಗದ ಕುಣಿಕೆಯಲ್ಲಿ ಕೊರಳನ್ನು ಬಿಗಿದು ಮುಂದೆ ಹುಲ್ಲುಕಡ್ಡಿಯನ್ನು ಹಿಡಿದು ಆಸೆ ತೋರಿಸುತ್ತಿದ್ದರೆ, ಕುಣಿಯುವ ಕತ್ತೆ ನೀನು.

ವಿವರಣೆ: ಭಾರತೀಯ ಚಿಂತನೆಯಲ್ಲಿ ವಿಧಿ ಎಂಬ ಕಲ್ಪನೆ ತುಂಬ ವಿಶೇಷದ್ದು. ಕರ್ಮದಲ್ಲಿ ತೊಡಗಿಕೊಂಡವರು ಪೂರ್ವಾರ್ಜಿತದಂತೆ ಪಡೆಯಬೇಕಾಗುವ ಸತ್ಫಲ ದುಷ್ಫಲಗಳನ್ನು ವಿಧಾಯಕ ಮಾಡುವ ಶಕ್ತಿಯನ್ನು ಯಾವುದು ಹೊಂದಿದೆಯೋ ಅದು ವಿಧಿ. ಕೃಷ್ಣ ಭಗವದ್ಗೀತೆಯ ಹನ್ನೊಂದನೆ ಅಧ್ಯಾಯದಲ್ಲಿ ಹೇಳುವ ಮಾತು,‘ಮಯ್ಯೆವೈತೇ ನಿಹತಾ: ಪೂರ್ವಮೇವ’

ಹೀಗೆಂದರೆ, ‘ನೀನು ಯುದ್ಧ ಮಾಡದೇ ಹೋದರೆ ಯುದ್ಧ ನಿಲ್ಲುವುದಿಲ್ಲ. ಯಾರು ಸಾಯಬೇಕೋ ಅವರು ಸತ್ತೇ ತೀರುತ್ತಾರೆ, ಬದುಕುವವರು ಹೇಗಿದ್ದರೂ ಬದುಕುತ್ತಾರೆ. ಅದೆಲ್ಲ ಪೂರ್ವ ನಿಶ್ಚಿತ’ ಎಂದರ್ಥ. ಮುಂದಾಗುವ ಯುದ್ಧದ ಪರಿಣಾಮವನ್ನು ಯಾವ ಶಕ್ತಿ ಮೊದಲೇ ತೀರ್ಮಾನ ಮಾಡಿತ್ತೋ ಅದೇ ವಿಧಿ, ಅದೇ ದೈವ. ವೇದ ಯಾವುದನ್ನು ‘ಧಾತಾಯಥಾಪೂರ್ವಮಕಲ್ಪಯತ್’ ಎಂದು ಸ್ಮರಿಸುತ್ತದೋ ಅದನ್ನೇ ದೈವ, ವಿಧಿ, ನಿಯತಿ, ಯೋಗ, ಹಣೆಬರಹ, ಪೂರ್ವಾರ್ಜಿತ ಎಂಬ ಹೆಸರುಗಳಿಂದ ಕರೆಯುತ್ತೇವೆ. ಯಾವುದನ್ನು ಪಾಶ್ಚಿಮಾತ್ಯರು ಇಂಗ್ಲೀಷಿನಲ್ಲಿ Destiny ಅಥವಾ providence ಎಂದು ಕರೆಯುತ್ತಾರೋ ಅದು ನಮಗೆ ವಿಧಿ ಅಥವಾ ದೈವ.

ಈ ದೈವ ಏನು ಮಾಡುತ್ತದೆ? ಅದು ಏನೂ ಮಾಡುವುದಿಲ್ಲ. ಒಬ್ಬ ನ್ಯಾಯಾಧೀಶನಂತೆ ನಮ್ಮ ಕರ್ಮ, ಅಕರ್ಮಗಳನ್ನು ಅಳೆದು ತೂಗಿ ನೋಡಿ ಅದಕ್ಕೆ ಸರಿಯಾದ ನ್ಯಾಯವನ್ನು ನೀಡುತ್ತದೆ. ಮನುಷ್ಯನ ಇಂದಿನ ಸ್ಥಿತಿ ಹೇಗೆ ಬಂತು? ಅದು ಅವನು ಹಿಂದೆ ಮಾಡಿದ್ದರ ಮೇಲೆ ನಿಂತಿದೆ. ತನ್ನ ಪ್ರಾಚೀನ ಕರ್ಮಗಳಿಂದ ಇಂದಿನ ಸ್ಥಿತಿ, ಇಂದು ಮಾಡುವ ಕಾರ್ಯಗಳಿಂದ ನಾಳೆಯ ಅವಸ್ಥೆ. ಅಂದರೆ ನಿನ್ನೆ ನಾನು ಮಾಡಿದ್ದು ನನ್ನನ್ನು ಈ ಸ್ಥಿತಿಗೆ ತಂದಿದೆ; ಇಂದು ನಾನು ಮಾಡುವ ಕಾರ್ಯ, ಅಕಾರ್ಯಗಳಿಗೆ ಫಲವನ್ನು ನಾಳೆ ಉಣ್ಣಬೇಕು. ಹೀಗೆ ಭೂತಕಾಲ, ವರ್ತಮಾನಕಾಲ ಹಾಗೂ ಭವಿಷ್ಯತ್ಕಾಲಗಳು ಅನುಸ್ಯೂತವಾಗಿ ಅಖಂಡವಾಗಿವೆ.

ಇದನ್ನು ಕಗ್ಗ ಸರಳವಾಗಿ ವಿವರಿಸುತ್ತದೆ. ವಿಧಿ ತಾನಾಗಿಯೇ ಏನನ್ನೂ ಮಾಡುವುದಿಲ್ಲ. ನಮ್ಮ ಹಿಂದಿನ ಋಣಶೇಷವಿದೆಯಲ್ಲ ಅದನ್ನು ಗಂಟು ಕಟ್ಟಿ ನಮ್ಮ ತಲೆಯ ಮೇಲೆ ಹೊರಿಸುತ್ತದೆ. ನನ್ನ ಋಣವನ್ನು ನಾನೇ ತೀರಿಸಬೇಕಲ್ಲವೇ? ನಂತರ ನಾವು ಮಾಡಿದ ಕರ್ಮಫಲ-ಅದು ಒಳ್ಳೆಯದೂ ಇರಬಹುದು, ಕೆಟ್ಟದ್ದೂ ಇರಬಹುದು- ಅದು ಪೂರ್ವಾರ್ಜಿತ, ಹಿಂದಿನ ಗಳಿಕೆ. ಅದನ್ನು ಹುರಿಯನ್ನಾಗಿ ಮಾಡಿಕೊಂಡು ನಮ್ಮ ಕೊರಳಿಗೆ ಕುಣಿಕೆಯನ್ನಾಗಿ ಬಿಗಿದು ಕಟ್ಟುತ್ತದೆ. ನಾವು ಹಿಂದೆ ಮಾಡಿದ್ದು ಇಂದು ನಮ್ಮ ಕೊರಳಿಗೆ ಕುಣಿಕೆಯೇ! ಇದಲ್ಲದೇ ಮುಂದೆ ಚೆನ್ನಾಗಿ ಬದುಕುವ ಆಸೆಯೆಂಬ ಹಸಿರು ಹುಲ್ಲನ್ನು ತೋರಿದಾಗ ಅದು ದೊರೆಯಿತೆಂಬ ಉತ್ಸಾಹದಲ್ಲಿ ಕುಣಿಯುವ ಕತ್ತೆಗಳು ನಾವು. ಕುಣಿಯೋಣ, ಆದರೆ ಮೌಲ್ಯಯುತವಾದದ್ದನ್ನು, ನ್ಯಾಯವಾದದ್ದನ್ನು ಇಂದು ಮಾಡಿದಾಗ ನಾಳೆ ನಮ್ಮ ಋಣದ ಭಾರ ಕಡಿಮೆಯಾಗಿ ಕುಣಿಕೆ ಸಡಿಲಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT