ಬುಧವಾರ, ನವೆಂಬರ್ 20, 2019
27 °C

ವಿಶ್ವದ ತಂತ್ರ

Published:
Updated:

ಋಣದ ಜಾಲವನಂತ, ಕರುಮಚಕ್ರವನಂತ |
ಜನುಮಜನುಮದ ಕಥೆಯ ತಂತುಗಳನಂತ ||
ಅನವರತ ನೂತನವಿದೆನಿಪ ವಿಶ್ವದ ತಂತ್ರ |
ಬಿನದ ಪರಬೊಮ್ಮಂಗೆ – ಮಂಕುತಿಮ್ಮ || 182 ||

ಪದ-ಅರ್ಥ: ಜಾಲವನಂತ=ಜಾಲ(ಹೆಣಿಕೆ)+ಅನಂತ, ಕರುಮಚಕ್ರವ
ನಂತ=ಕರುಮ=(ಕರ್ಮ)+ಚಕ್ರ+ಅನಂತ,
ಅನವರತ=ಎಂದೆಂದಿಗೂ, ನೂತನವಿದೆನಿಪ=ನೂತನ+ಇದು+ಎನಿಪ
(ಎನ್ನಿಸುವ), ಬಿನದ=ವಿನೋದ

ವಾಚ್ಯಾರ್ಥ: ಋಣದ ಬಲೆ ಅನಂತವಾದದ್ದು, ಕರ್ಮದ ಚಕ್ರವೂ ಅನಂತವೇ. ಇವು ಜನ್ಮಜನ್ಮಾಂತರದ ಕಥೆಗಳು. ಇವು ನಡೆದುಕೊಂಡೇ ಹೋಗುತ್ತವೆ. ಜಾಲ ಹಳೆಯದಾದರೂ ವಿಶ್ವ ಪ್ರತಿ ಕಾಲಘಟ್ಟದಲ್ಲಿ ಹೊಸದೆಂದೇ ತೋರುವುದು ವಿಶ್ವದ ತಂತ್ರ. ಆದರೆ ಇದೆಲ್ಲ ಬ್ರಹ್ಮನಿಗೆ ವಿನೋದದ ಸಂಗತಿ.

ವಿವರಣೆ: ನಮಗಿರುವುದು ಒಂದು ಋಣವಲ್ಲ. ಅದೊಂದು ಋಣದ ಪರಂಪರೆ. ನಮ್ಮನ್ನು ಹುಟ್ಟಿಸಿದ ತಂದೆ-ತಾಯಿಯರ ಋಣ ತೀರಿಸುವುದು ಸಾಧ್ಯವೇ? ನಮ್ಮನ್ನು ಬೆಳೆಸಿದವರ, ವಿದ್ಯೆ ಕಲಿಸಿದವರ, ಜೊತೆಗೆ ಬದುಕಿದವರ, ಅನ್ನ ಕೊಟ್ಟವರ, ಅಭಯ ನೀಡಿದವರ, ಆರೋಗ್ಯ ಕಾಪಾಡಿದವರ, ಧರ್ಮಮಾರ್ಗ ತೋರಿದವರ, ಮೋಹ ಸಾಕೆಂದು ವೈರಾಗ್ಯವನ್ನು ತಿಳಿಸಿದವರ ಕೊನೆಗೆ ಇವೆಲ್ಲವನ್ನೂ ಆಗ ಮಾಡಿದ ಭಗವಂತನ, ಇವೆಲ್ಲ ಋಣಗಳ ಜಾಲದಲ್ಲಿ ನಾವು ಬದುಕಿದ್ದೇವೆ. ಇದರಿಂದ ಪಾರಾಗುವುದು ಸಾಧ್ಯವಿಲ್ಲ. ಅದಕ್ಕಾಗಿಯೇ ಕಗ್ಗ ಇದನ್ನು ಅನಂತವಾದದ್ದು ಎನ್ನುತ್ತದೆ. ಋಣ ಬೆಳೆಯುವುದು ಕರ್ಮದಿಂದ. ಒಂದು ಕರ್ಮ ಮತ್ತೊಂದಕ್ಕೆ ದಾರಿಯಾಗುತ್ತದೆ. ಆ ಕವರ್iದಿಂದ ಮತ್ತೊಂದು ಋಣ. ಋಣ ತೀರಿಕೆಗಾಗಿ ಕರ್ಮ. ಹೀಗೆ ಒಂದರಿಂದ ಮತ್ತೊಂದು ಬೆಳೆದು ನಮ್ಮನ್ನೂ ಬಂಧಿಸುತ್ತವೆ.

ಕಗ್ಗ ಹೇಳುವಂತೆ ಈ ಋಣದ ಜಾಲ ಒಂದೇ ಜನ್ಮಕ್ಕೆ ಸೀಮಿತವಾದದ್ದಲ್ಲ. ಹಿಂದೂ ಪರಂಪರೆಯಲ್ಲಿ ಪುನರ್ಜನ್ಮಕ್ಕೆ ಮಹತ್ವದ ಸ್ಥಾನವಿದೆ. ನಾನು ಮಾಡಿದ ಕರ್ಮಕ್ಕೆ ಸುಖವನ್ನೋ, ದು:ಖವನ್ನೋ ಈ ಜನ್ಮದಲ್ಲೇ ತೀರಿಸಬೇಕು. ಅದು ಆಗದಿದ್ದರೆ ಅಕೌಂಟ್ ಮುಗಿಯುವುದಿಲ್ಲ, ಮುಂದಿನ ಜನ್ಮಕ್ಕೆ ಮುಂದುವರೆಯುತ್ತದೆ. ಅಲ್ಲಿ ಮಾಡಿದ ಉತ್ತಮ ಹಾಗೂ ನೀಚ ಕರ್ಮಗಳ ತೀರಿಕೆಗೆ ಮತ್ತೊಂದು ಜನ್ಮ. ನಮ್ಮ ಪುರಾಣ ಕಥೆಗಳಲ್ಲಿ ಇಂಥ ಜನ್ಮ ಜನ್ಮಾಂತರದ ಕಥೆಗಳು ಎಷ್ಟೋ ಇವೆ. ವಿಷ್ಣುವಿನ ದ್ವಾರಪಾಲಕರಾಗಿದ್ದ ಜಯ-ವಿಜಯರು ಉನ್ಮತ್ತತೆಯಿಂದ ಅಶ್ವಿನೀದೇವತೆಗಳಿಗೆ ಅಪಮಾನ ಮಾಡಿದ ತಪ್ಪಿಗಾಗಿ ಮೂರು ಮೂರು ಜನ್ಮಗಳಲ್ಲಿ ಹುಟ್ಟಿ ಬರಬೇಕಾಯಿತು. ಬುದ್ಧನಂತೂ ನೂರಾರು ಜನ್ಮಗಳನ್ನೆತ್ತಿ ಬಂದು, ಅವನ್ನೆಲ್ಲ ತನ್ನ ಭಿಕ್ಷುಗಳಿಗೆ ಹೇಳಿದಾಗ ಜಾತಕಕಥೆಗಳ ಸೃಷ್ಟಿಯಾಯಿತು. ಭಗವಾನ ಮಹಾವೀರರು ತಮ್ಮ ಅವತಾರಕ್ಕಿಂತ ಮೊದಲು ಅದೆಷ್ಟು ಜನ್ಮಗಳನ್ನೆತ್ತಿ ಬಂದರೋ? ಒಬ್ಬ ಬೇಡನಾಗಿದ್ದವ ತನ್ನ ಕರ್ಮಫಲಗಳಿಗೆ ತಕ್ಕಂತೆ ಉನ್ನತ, ನಿಮ್ನ ಜನ್ಮಗಳನ್ನೆತ್ತಿ ಕೊನೆಗೆ ಮಹಾವೀರರಾದದ್ದು ಸುರಮ್ಯ ಕಥೆಗಳ ಸರಪಳಿ. ಇದನ್ನು ಕಗ್ಗ ಜನ್ಮಜನ್ಮಗಳ ಕಥೆಗಳ ತಂತುಗಳು ಎನ್ನುತ್ತದೆ. ಅವೂ ಅನಂತವಾದವುಗಳೇ.

ವಿಚಿತ್ರವೆಂದರೆ ಮನುಷ್ಯ ನಶ್ವರನಾದರೂ ಸೃಷ್ಟಿಯಲ್ಲಿ ಮಾನವ ಜೀವಗಳ ಪ್ರವಾಹ ಅನಂತವಾದದ್ದು. ಅದು ಪ್ರತಿಕ್ಷಣದಲ್ಲೂ ಹೊಸದಂತೆಯೇ ಇರುವಂತಹದ್ದು. ಇದೇ ವಿಶ್ವದ ತಂತ್ರ. ಸರಪಳಿಯಲ್ಲಿ ಪ್ರತಿಯೊಂದು ಕೊಂಡಿಗೂ ಅದರದೇ ಆದ ಅಸ್ತಿತ್ವವಿಲ್ಲವೇ? ಅದು ವಿಶೇಷವೇ ಅಲ್ಲವೇ? ಒಂದು ಕೊಂಡಿ ಇರದೇ ಹೋದರೆ ಅದು ಸರಪಳಿ ಹೇಗಾದೀತು? ಅಂತೆಯೇ ಜನ್ಮಜನ್ಮಾಂತರದ ಸರಪಳಿಯಲ್ಲಿ ಪ್ರತಿಯೊಂದು ಜನ್ಮವೂ ವಿಶೇಷವೇ, ಹೊಸತೇ. ಆದರೆ ಈ ಎಲ್ಲವೂ ಇರುವುದು ಆ ಸೃಷ್ಟಿಕರ್ತನ ವಿನೋದಕ್ಕಾಗಿ.

 

ಪ್ರತಿಕ್ರಿಯಿಸಿ (+)